ಕರೆಯುತಿದೆ ಓ ದೂರದಾಹ್ವಾನವಾಣಿ!
ಅಸೀಮ ಆಕಾಶದ ಸುನೀಲವಾಣಿ!

ಹೃದಯ ವೀಣೆಯ ಮೃದುಲ ತಂತಿಯನು ಮಿಡಿಯುತಿದೆ;
ಯುಗಯುಗಾಂತರದ ಮೌನವನು ಕಡೆಯುತಿದೆ.
ಮನದ ಏಕಾಂತದಲಿ ಮಲಗಿರುವ ಹೊಂಗನಸು
ಮೊದಲು ತೊದಲುವ ಹಸುಳೆಯಂತೆ ನುಡಿಯುತಿದೆ!

ಮಧುರ ಸುಖವೊಂದು ಹಾ ಮಧುರತರ ದುಃಖದಲಿ
ವಿರಹವನು ಕೆರಳಿಸುತೆ ಸಂಯೋಗಕೆಳಸುತಿದೆ!
ಮಾತುಗಳನಾಪೋಶಿಸುವ ಭವ್ಯಮೌನದಲಿ
ಸಿದ್ಧಾಂತ ಸಂದೇಹಗಳು ಮೂಕವಾಗುತಿವೆ!

ನಭದ ಸಿಡಿಲೆರಗಿ ಮೈಮರೆವಂತೆ ತಿರೆಯ ಪಶು
ಮೌನ ಪೀಡಿತ ಚಿಂತೆ ಮೂರ್ಛೆ ಹೋಗುತಿದೆ.
ಹೇ ಮೌನ, ಹೇ ಶಾಂತಿ, ಹೇ ಶೂನ್ಯ ನೀಲಿಮೆಯೆ,
ಕನಸೊಡೆದು ನನಸು ಬರಿ ನೀಲವಾಗುತಿದೆ!

ಕರೆಯುತಿದೆ ಓ ದೂರದಾಹ್ವಾನ ವಾಣಿ!
ಅಸೀಮ ಆಕಾಶದ ಸುನೀಲ ವಾಣಿ!

೨೦-೧೧-೧೯೩೧