ತಿಮಿರ ವಸನ ಧಾರಿಣಿ ನಿಶೆ
ಮೆಲ್ಲಮೆಲ್ಲನಸ್ತಮಿಸೆ,
ತರುಣ ಅರುಣ ರಾಗಿನಿ ಉಷೆ
ಪೂರ್ವವನು ವಿರಾಜಿಸೆ;
ವೇಣು ವನದ ಶಿಖರದಲಿ
ಹಸುರ ಕಡಲ ತೆರೆಗಳಲಿ
ಮಿಸುನಿ ನಗೆಯ ಹೊನಲ ಚೆಲ್ಲಿ
ಹಸುಳೆ ಬಿಸಿಲು ಹಸರಿಸೆ;
ಕಲೆಯ ಜಲದಿ ಮೀಯುವೊಡೆ
ಮಲೆಯ ತುದಿಗೆ, ಮನವೆ, ನಡೆ;
ಮೈಯ ಮರೆವ ಮುದವ ಪಡೆ –
ಉಷೆಯು ನಿಶೆಯ ಚುಂಬಿಸೆ!

ಕುಟ್ಮಲಮಯ ಕುಟಜದಲ್ಲಿ
ನಟ ಸಮೀರನೈತರೆ,
ಎಲೆಯ ಹಸುರು ತೊಟ್ಟಿಲಲ್ಲಿ
ಹನಿಯ ಹಸುಳೆ ನಗುತಿರೆ;
ಪ್ರಭು ವಸಂತನೋಲಗದಲಿ
ಮಧುರ ಜಟಿಲ ಕೂಜನದಲಿ
ಚೋರೆ ತೇನೆ ಲಾವುಗೆ ಗಿಳಿ
ಗಾನಗೈಯೆ ಮೇಲದಿ;
ನಾದಶೀಲ ಲೋಲ ಅಳಿ
ಗಾನವಾಗೆ ಜೋಗುಳದುಲಿ,
ಮನವೆ, ತೂಗಿಯಾಡಿ ನಲಿ
ಬಕುಲ ಕುಸುಮ ದೋಲದಿ!

ರಮಣಿ ಕದಳಿ ಅವನತ ಮುಖಿ
ಮಣಿಯೆ ಪತಿಚರಣದಲಿ,
ಕೌಂಗು ರಮಣನುನ್ನತ ಶಿಖಿ
ಕುಣಿಯೆ ನಭೋಂಗಣದಲಿ,
ಶುಭ್ರಮೇಘ ಸ್ವಪ್ನರಾಶಿ
ಅಭ್ರ ಮನದಿ ಬರಲು ಬೀಸಿ,
ಧೂಮ್ರದೇಹಿ ಕಪಿಶ ಕೇಶಿ
ಪುಷ್ಪ ವಿಟಪಿ ವೃಂದದಿ
ನರ್ಮಶೀಲೆ ಬನದ ಬಾಲೆ
ಕಾಂಚನಾಂಗಿ ಮಿಂಚಿ ತೇಲೆ,
ಹೊಳೆವುದಂತೆ ಪ್ರತಿಭೆ ಜ್ವಾಲೆ
ನೂತ್ನ ಕಾವ್ಯ ಛಂದದಿ!

ಉದಯಿಸಿ ಬರೆ ಬಾಲರವಿ
ಉದಯಗಿರಿ ಲಲಾಟದಿ,
ಧ್ಯಾನಲೀನನಾಗೆ ಕವಿ
ಶೈಲ ಶಿಲಾ ಪೀಠದಿ,
ರುಕ್ಮರುಚಿರ ಕಿರಣದ್ಯುತಿ,
ಸದ್ಯ ಬುದ್ಧ ಪಕ್ಷಿ ರುತಿ,
ಕಾನನ ಗಿರಿ ಭುವನ ಕೃತಿ
ಐದಲೆಲ್ಲ ವಿಸ್ಕೃತಿ;
ರೂಪರಹಿತ ಭಾವಬಿಂದು
ವಿಶ್ವರೂಪಿಯಾಗಿ ಬಂದು
ಓಂಕರಿಪುದು ಸ್ಫೂರ್ತಿಸಿಂಧು
ಕಂಪಿಸೆ ಕವಿ ರಸಮತಿ!

೦೨-೦೭-೧೯೩೨