ನೀರದೇಕೆ ಹರಿವುದು?
ಹರಿವುದು!
ಕಡಲ ಸೇರಲಲ್ಲವೆ?
ಸೇರ್ವುದು!
ಆದರೇನು?
ಕಡಲ ಸೇರಲೆಂದು ನೀರು
ಹರಿವುದಿಲ್ಲ;
ಹರಿಯೆ ಕಡಲ ಸೇರ್ವುದಷ್ಟೆ,
ಬೇರೆಯಲ್ಲ!

ಬೆಂಕಿಯೇಕೆ ಉರಿವುದು?
ಉರಿವುದು!
ಕೂಳು ಬೇಯಲಲ್ಲವೆ?
ಬೇಯ್ವುದು!
ಆದರೇನು?
ಕೂಳು ಬೇಯಲೆಂದು ಬೆಂಕಿ
ಉರಿವುದಿಲ್ಲ;
ಉರಿಯೆ ಕೂಳು ಬೆಯ್ಯುದಷ್ಟೆ,
ಬೇರೆಯಲ್ಲ!

ನೇಸರೇಕೆ ಹೊಳೆವುದು?
ಹೊಳೆವುದು!
ತಿರೆಯ ಬೆಲಗಲಲ್ಲವೆ?
ಹೌದದು!
ಆದರೇನು?
ತಿರೆಯ ಬೆಳಗಲೆಂದು ರವಿಯು
ಹೊಳೆವುದಿಲ್ಲ;
ಹೊಳೆಯೆ, ತಿರೆಯು ಹೊಳೆವುದಷ್ಟೆ,
ಬೇರೆಯಲ್ಲ!

ಸೃಷ್ಟಿಯೇಕೆ ಜನಿಸಿತು?
ಜನಿಸಿತು!
ಕರ್ಮ ಸಮೆಯಲಲ್ಲವೆ?
ಸಮೆವುದು!
ಆದರೇನು?
ಕರ್ಮ ಸಮೆಯಲೆಂದು ಸೃಷ್ಟಿ
ಜನಿಸಲಿಲ್ಲ;
ಜನಿಸೆ, ಕರ್ಮ ಸಮೆವುದಷ್ಟೆ,
ಬೇರೆಯಲ್ಲ!

೧೨-೦೨-೧೯೩೧