ಕಡಲ ತಡಿಯ ಮಳಲ ಗುಡಿಯ
ಹೊಸಲೊಳಾನು ಮೂಡಿದೆ;
ಸುತ್ತಮುತ್ತ ಬಾನಿನತ್ತ
ಕಣ್ಣನಟ್ಟಿ ನೋಡಿದೆ.
ಗುರುವಿನೆಡೆಯೆ ಶಿಷ್ಯನಂತೆ,
ಹರಿಯ ಬಳಿಯ ಭಕ್ತನಂತೆ,
ಸೊಬಗನೊಲಿದ ನಾನು ನಿಂತೆ
ಕಡಲ ತಡಿಯ ಗುಡಿಯಲಿ:
ತೀರವೀವಪಾರಭಾವ
ಹೊಮ್ಮಲಹುದೆ ನುಡಿಯಲಿ?

ಕಡಲು ಮುಂದೆ, ಪೊಡವಿ ಹಿಂದೆ,
ಮೇಲೆ ಬಾನು ಮೆರೆದುದು;
ರನ್ನದೊಡಲ ಹಿರಿಯ ಕಡಲ
ಚಿರನಿನಾದ ಮೊರೆದುದು.
ಕಡಲು, ಪೊಡವಿ, ಹಿರಿಯ ಬಾನು
ಗಳಿಗೆ ನಾನು ಕಿರಿಯನೇನು?
ಸೊಗವ ಸವಿವ ಕವಿಯು ನಾನು
ನಿಂತು ನೋಡೆ ಸುತ್ತಲು
ಆ ದಿಗಂತದೊಳು ಅನಂತ
ಮಹಿಮೆ ತೋರ್ದುದೆತ್ತಲು!

೦೨-೧೧-೧೯೨೯