ಮೇಲೆ ಗಗನ ನೀಲತಲ,
ಕೆಳಗೆ ತಿರೆಯ ಹಸುರು ನೆಲ,
ಸುಂದರ ಸುರತರುಣಿಯೆ,
ನಡುವೆ ನೀನು ಮಲೆಯಲಿ
ತುಂಗ ಶಿಖರ ಶಿಲೆಯಲಿ,
ಹೇ ಅರಣ್ಯ ರಮಣಿಯೆ!
ಮಂದ ಪವನ ಬರಲು ಬೀಸಿ
ಅಂಧ ತಿಮಿರ ಕೇಶರಾಶಿ
ನಲಿನಲಿವುದು ಮನಮೋಹಿಸಿ,
ಹೇ ಮತ್ತಕಾಶಿನಿ!
ಸುನೀಲ ನಯನಾಳದಲ್ಲಿ
ರಹಸ್ಯ ವಿಶ್ವ ಸ್ವಪ್ನವಲ್ಲಿ
ನಳನಳಿಸಿದೆ ಚೆಲುವ ಚೆಲ್ಲಿ,
ಓ ಚಿರವನವಾಸಿನಿ!

ನಿನ್ನ ಮುಡಿಯ ಮೇಲುಗಡೆ
ಇನಶಶಿಗಳ ನಿಚ್ಚನಡೆ,
ಓ ಸುಮನಸ ಸಂಗಿನಿ!
ಕಡಲಲೆಗಳ ಗಡಿಬಿಡಿ
ನೀನಿಡುತಿಹ ಮೆಲ್ಲಡಿ,
ದುಃಖ ಸುಖ ತರಂಗಿನಿ!
ಮೊದಲ ಬಯಕೆ ಸಿಡಿದ ಕಿಡಿ,
ಮೊದಲ ಗಾನವೊಗೆದ ನುಡಿ,
ನೀನೆ ಕಡಲು, ನೀನೆ ತಡಿ,
ಹೇ ವಿಶ್ವದೇಹಿನಿ!
ನರ್ತಿಪ ತವ ಚರಣನ್ಯಾಸ
ಜನನ ಮರಣ ಕಾಲಾದೇಶ!
ನೃತ್ಯದೊಳವು ಲಯವಿಶೇಷ,
ಹೇ ತ್ರಿಭುವನ ಮೋಹಿನಿ!

ಸೂರ್ಯ ಚಂದ್ರರುದಯದಲಿ
ಪೂರ್ವದಿಶಾ ಹೃದಯದಲಿ,
ಸ್ವರ್ಣಸ್ವಪ್ನ ರಂಗಿನಿ,
ವರ್ಣ ಜಲಧಿ ಮಥನದಿ
ಬಣ್ಣ ಬಳಿವೆ ಜತನದಿ,
ಓ ಭಾವನಾಂಗಿನಿ!
ಲಲಿತ ಚರಣ ಭಂಗಿಯಿಂದೆ
ನಡೆಯೆ ನೀನು ಮುಂದೆ ಮುಂದೆ
ಬಹುವು ಋತುಗಳೆಲ್ಲ ಹಿಂದೆ,
ಸ್ಥಿರ-ಅಸ್ಥಿರ-ಗಾಮಿನಿ!
ಸ್ವರ್ಗದುದಯ ಗಿರಿಯ ಮೇಲೆ
ಕನಕ ತಪನ ಕಿರಣಮಾಲೆ
ನಿನ್ನ ಕುಶಲ ಕಲೆಯ ಲೀಲೆ,
ಹೇ ಕಾವ್ಯ ಕಾಮಿನಿ!

ನಭದಲಿ ನೀ ನೀಲಿಮಾ,
ನಿಶೆಯಲಿ ನೀ ಕಾಲಿಮಾ,
ಹೇ ಅಂತರ್ಯಾಮಿನಿ!
ದಿವಾ ನೀನೆವೆ ಬಿಚ್ಚಲು,
ನಿಶಾ ನೀನೆವೆ ಮುಚ್ಚಲು,
ಚಿರ ಚಂಚಲ ಭಾಮಿನಿ!
ರವಿಯ ಮುಂದೆ ನೀ ಬರೆ ಉಷೆ,
ಸಂಜೆಯ ಹಿಂದೈತರೆ ನಿಶೆ,
ಹೇ ಅಮರ ಮಧುರ ಅನಿಮಿಷೆ,
ಅಮಿತ ವೇಷಧಾರಿಣಿ!
ಕಲೆಗೆ ತವರು, ಸಿರಿಗೆ ಬಿತ್ತು,
ಸೊಬಗಿಗೆ ನೆಲೆ ನಿನ್ನ ಮುತ್ತು,
ಸೊನ್ನಿಯಿಂದೆ ಜಗವ ತಂದೆ,
ಓ ಋತ ಅಧಿಕಾರಣಿ!

ಚರ ಅಚರಗಲಂತರದಿ
ಉರಿಯುತಿಹೆ ನಿರಂತರದಿ,
ಹೇ ಪ್ರೇಮೋನ್ಮಾದಿನಿ!
ನಿನ್ನ ಮೋಹ ಶಕ್ತಿಯಿಂ
ಬದುಕಿದೆ ಸೆರೆ ಮುಕ್ತಿಯಿಂ,
ಓ ಬಂಧನ ಮೋದಿನಿ!
ಶತ ಸಹಸ್ರ ನಿಯತಿ ಲೋಲೆ
ನೀನಕೂಲ ಮುಕ್ತಿಶೀಲೆ;
ನಿಯಮಗಳೆ ನಿನಗೆ ಬಳೆ,
ಅನವರತ ಅಶೃಂಖಲೆ!
ನೀನು ಕಾಣುತಿರುವ ಕನಸು
ಹೊರಗೆ ಹೊಳೆಯುತಿರುವ ನನಸು.
ವಿಧಿಗೆ ನಿಧಿಯ ನಿನ್ನ ಮನಸು,
ಹೇ ಕಠೋರ ಕೋಮಲೆ!

ಜಗದನಂತ ಯಾತ್ರೆಯಲಿ
ಅಕ್ಷಯ ರಸ ಪಾತ್ರೆಯಲಿ,
ಓ ಮೃತ್ಯು ಮಾಧುರಿ,
ತುಂಬಿ ಹರ್ಷ ಶೋಕಮಂ
ಸೃಜಿಪೆ ನರಕ ನಾಕಮಂ,
ಹೇ ಅರೂಪ ಸುಂದರಿ!
ವ್ಯಕ್ತ ಜಗದಿನತ್ತ ಕಡೆ
ಮಹಾ ಅತೀತದಂಚಿನೆಡೆ
ಅದು ಇದನಾಲಿಂಗಿಪೆಡೆ,
ನೀಲಿಮಾ ದಿಗಂಬರೆ,
ತಾರೆಗಳನು ಕಡೆದು ಮಾಡಿ
ತಪನ ಶಶಿಗಳೊಡನೆ ಕೂಡಿ
ನಲಿವೆ ನಭವ ಮಾಲೆ ಸೂಡಿ,
ಹೇ ಸಾಗರಾಂಬರೆ!

ಮೊದಲು ಸುಳಿವೆ ಕನಸಿನೊಲು,
ನಡುವೆ ಮೆರೆವೆ ನನಸಿನೊಲು,
ರಸಿಕ ಮನೋರಾಗಿನಿ!
ನಿಲುವೆ ಕಡೆಗೆ ನೆನಸಿನೊಲು
ವಿಶ್ವ ಮಹಾ ಮನಸಿನೊಳು,
ಶಾಶ್ವತ ರಸಯೋಗಿನಿ!
ರಕ್ತಿಮ ತಟಿಲ್ಲತೆಯ ತೋರಿ,
ಗರ್ಜಿಪ ಸಿಡಿಲ್ದನಿಯ ಬೀರಿ
ಬರುವೆ ಮಾರಿ ಮಳೆಯ ಕಾರಿ,
ವರ್ಷಮೇಘ ಕೇಶಿನಿ!
ಕೆಂಡದುರಿಯ ಬೇಸಗೆಯಲಿ
ತಪ್ತಶಿಲೆಯ ಹಾಸಗೆಯಲಿ
ತಪವ ನೋನುತಿರುವೆ ನೀನು,
ಭೀಷಣ ಸಂನ್ಯಾಸಿನಿ!

ಚೆಲುವೆ ನಿನ್ನ ಸನ್ನಿಧಿ
ಚೈತನ್ಯದ ಚಿರನಿಧಿ,
ನೂತನ ಪ್ರಚಾರಿಣಿ!
ಶಿಥಿಲ ಜಡ ಸನಾತನಂ
ನಿನ್ನಿಂದಹುದು ನೂತನಂ,
ಹೇ ಜಗಚ್ಚಕ್ರಧಾರಿಣಿ!
ಗಿರಿಯ ಶಿರದರಣ್ಯತಲದಿ
ಹೊಮ್ಮಿ ಹರಿವ ತೊರೆಯ ಕೆಲದಿ
ಹಸುರು ಹುಚ್ಚು ಹಿಡಿದ ನೆಲದಿ,
ಓ ಸಸ್ಯ ಶ್ಯಾಮಲೆ,
ನಿಬಿಡ ಕುಸುಮಖಚಿತ ವಲ್ಲಿ
ರಚಿತ ಕುಂಜ ಛಾಯೆಯಲ್ಲಿ
ನಾಟ್ಯವಾಡಿ ನಲಿವೆ ಹಾಡಿ,
ಹೇ ಕಾನನ ಕೋಮಲೆ!

ಪ್ರಣಯದರುಣರಂಗದಲಿ
ಶೋಣಿಮಾ ತರಂಗದಲಿ,
ಓ ವಿಶ್ವ ಸಂಸಾರಿಣಿ,
ಲಲಿತ ಚರಣ ಭಂಗದಿಂ
ಕುಣಿವೆ ವೀತಸಂಗದಿಂ,
ಹೇ ಬ್ರಹ್ಮಚಾರಿಣಿ!
ನೂರುಕೋಟಿ ತುಟಿಗಳಿಂಪು
ಕಡುಗಿ ನಿನ್ನ ಕೆನ್ನೆಗೆಂಪು;
ನೀನೆ ಜೌವನದ ಅಲಂಪು,
ಓ ಚೆಲುವಿನ ಚಿಲುಮೆಯೆ!
ಹೂವುಗಳಿಗೆ ಬಣ್ಣ ಬಳಿದು
ದುಂಬಿಗಳನು ಬಳಿಗೆ ಸೆಳೆದು,
ಅವರನೊಲಿಪೆ, ಒಲುಮೆಗಲಿಪೆ,
ಓ ನಣ್ಪಿನ ನಲುಮೆಯೆ!

ನೀನೆ ಸುಖಂ ಧರ್ಮಕೆ, ನೀನೆ ಬಲಂ ಕರ್ಮಕೆ,
ಅಸಂಖ್ಯ ಭಾವಶಾಲಿನಿ!
ನಿಯಮ ನೀನೆ ಬುದ್ಧಿಗುಂ ಸಮಯರಹಿತ ಸಿದ್ಧಿಗುಂ,
ಓ ದ್ವಂದ್ವ ಮಾಲಿನಿ!
ತತ್ತ್ವಗಳಲಿ ನೇತಿ ನೇತಿ,
ಕಾವ್ಯಗಳಲಿ ಮಧುರ ಪ್ರೀತಿ,
ಬುಧರ ಮನದಿ ನೀನೆ ನೀತಿ,
ವಿಶ್ವ ಹೇ ವಿಧಾಯಕಿ!
ಕಡಲ ತೆರೆಯ ತರಲ ತಾನ,
ವನ ವಿಹಂಗ ಲಲಿತ ಗಾನ,
ನೀನೆ ಕವನ ಘನವಿಮಾನ,
ಸರ್ವ ರಸಪ್ರದಾಯಕಿ!

ನನ್ನನಂದು ಮಲೆಯಲಿ
ನಿನ್ನ ಕಲೆಯ ಬಲೆಯಲಿ,
ಓ ಇಂದ್ರಜಾಲಕಾರಿಣಿ,
ಮೋಹದಿಂದೆ ಮುತ್ತಿದೆ;
ಮುತ್ತುಗಳಲಿ ಸುತ್ತಿದೆ;
ಹೇ ಇಂದ್ರ ಧನುರ್ಧಾರಿಣಿ!
ಅಂದಿನಿಂದ ಇಂದುವರೆಗೆ
ಸಿಲುಕಿ ನಿನ್ನ ಹೊನ್ನ ಸೆರೆಗೆ
ಚೆನ್ನನಾದೆ ನಾನು ತಿರೆಗೆ,
ಆದಿಮ ರಸಮೂರ್ತಿಯೆ!
ಹಣತೆ ಸೊಡರು ಹಿಡಿದು ಮುಂದೆ
ನಡೆಯೆ ನೀನು ಬಹೆನು ಹಿಂದೆ.
ಕವಿಯ ಕಣ್ಗೆ ಬೆಳಕು ತಂದೆ,
ಹೇ ಅಸೀಮ ಸ್ಪೂರ್ತಿಯೆ!

ನಿನ್ನ ತೊಳು ಮರೆಯಲಿ
ನನ್ನ ಬಾಳು ಹೊರೆಯಲಿ,
ಓ ಜೀವನ ಪ್ರೇಯಸಿ!
ನಿನ್ನ ಎದೆಯ ಸೆರೆಯಲಿ
ನನಗೆ ಮುಕುತಿ ದೊರೆಯಲಿ,
ನಿತ್ಯ ಹೇ ನಃಶ್ರೇಯಸಿ!
ನಿಖಿಲ ಹೃದಯಪದ್ಮ ಪಾಣಿ,
ಮರಣ ಹರಣ ಅಮೃತವಾಣಿ,
ವಿಶ್ವದೇಕಮಾತ್ರ ರಾಣಿ,
ಹೇ ಮಾನಸ ಮಂದಿರೆ!
ಪ್ರಥಮ ಪೃಥಲ ತಿಮಿರ ಜಾತೆ,
ನಿತ್ಯ ನೂತನ ಪ್ರಸೂತೆ,
ನಮೋ ನಮೋ ಸೃಷ್ಟಿ ಮಾತೆ,
ಹೇ ಚಿರಂತನೇದಿರೆ!

೨೯-೦೯-೧೯೩೧