ಕಠಿನ ಕಟು ಭುವನ ಮಂಡಲವೆಲ್ಲ ಕಂಪಿಸುತೆ
ಕನಸಾಗುವುದು ನಿನ್ನ ವಿದ್ಯುದ್ವಿಲಾಸದಲಿ;
ನೀರಸ ಜಗಜ್ಜೀವನದಿ ಸವಿಯ ಸಿಂಪಿಸುತೆ
ಬಂಧಿಸುವೆ ಜೀವಗಳನಿಂದ್ರಧನು ಪಾಶದಲಿ;
ನಿನ್ನ ಕೋಮಲ ಬಾಹುಲತೆಗಳಾಲಿಂಗನದಿ,
ನಿನ್ನ ಕೆಂದುಟಿಯ ಚುಂಬನದಿ, ನಿನ್ನಿನಿದೆದೆಯ
ತಾಪಹಾರಕ ದಿವ್ಯ ಸುರಸುಧಾ ಸ್ಪರ್ಶದಲಿ,
ನಿನ್ನ ನಯನ ಸರೋಜ ಮಧುರ ಉನ್ಮೀಲನದಿ,
ಓ ಕಲ್ಪನಾಸುಂದರಿಯೆ, ಹೀರಿ ಮಧುಸುಧೆಯ
ಸೃಷ್ಟಿ ನರ್ತನಗೈಯುತಿದೆ ಮತ್ತ ಹರ್ಷದಲಿ!

ಮನುಜ ಮಾನಸ ನಾಕದಪ್ಸರಸಿ ಉರ್ವಶಿಯೆ,
ಹೃದಯದಮರಾವತಿಯ ಚಿರಯೌವನೆಯು ನೀನು.
ನಿನ್ನ ಕಾಲ್ಗೆಜ್ಜೆಗಳ ಕಿಂಕಿಣಿಗೆ, ರೂಪಸಿಯೆ,
ವಿಶ್ವದಾಸ್ಥಾನದಲಿ ತಾರಾಳಿ ಶಶಿ ಭಾನು
ನೀಹಾರಿಕೆಗಳೆಲ್ಲ ಹಿಮ್ಮೇಳಗೈಯುತಿವೆ
ಕರತಾಳವಿಕ್ಕಿ, ಹಗಲಿರುಳುಗಳು ಬಲವಂದು
ಸುತ್ತುತಿವೆ ಭೂವಲಯವನು ರಾಸಕ್ರೀಡೆಯಲಿ.
ಭೂತಭವಿಷದ್ವರ್ತಮಾನಗಳು ನೆಯ್ಯುತಿವೆ
ಸ್ವರ್ಗಿಯ ನವ್ಯವನು! ಭವ್ಯ ಜೀವನ ಬಂಧು,
ನಗಿಸುತಿಹೆ ಸಂಸಾರವನು ಮಿಳ್ತು ದಾಡೆಯಲಿ!

ಓ ಚಿರಂತನ ಸಖಿಯೆ, ಯುಗಯುಗಗಳಾಚೆಯಲಿ
ಪೊಡವಿತಾಯಿಯ ಬಸಿರ ಬೆಂಕೆತೊಟ್ಟಿಲೊಳುದಿಸಿ
ಶಿಶು ನರನು ಕಣ್ದೆರೆದು ನಿನ್ನ ಕೈಚಾಚಿನಲಿ
ಹಜ್ಜೆಯಿಡೆ ಕಲಿತಂದಿನಿಂದೆನ್ನೆಗಂ, ಕುದಿಸಿ
ಕನಸುಗಳನವನಾತ್ಮದಲಿ, ಮುಂದು ಮುಂದಕ್ಕೆ
ಸೆಳೆದು ಸಂಮೋಹಿಸಿಹೆ ರಮ್ಯದರ್ಶನವಿತ್ತು,
ಭುವನ ಯಾತ್ರಿಕರ ಹೇ ಸರ್ವದಾ ಸಂಗಿನಿಯೆ!
ಪುಷ್ಪಕ ವಿಮಾನವಲೆ ನಿನ್ನ ಮಿಂಚಿನ ರೆಕ್ಕೆ?
ನರಗೆ ನಿನ್ನಿಂದೈಸೆ ತವಿಯದಿಹ ಸಂಪತ್ತು,
ಚಿತ್ತ ಸಾಗರ ಮಥನ ಜಾತ ರಸಯೋಗಿನಿಯೆ!

ಉದಯ ಅಸ್ತಾದ್ರಿಗಳ ಉದಯಾಸ್ತದೈಸಿರಿಗೆ
ನೀನೆ ಚೇತನದುಸಿರು, ಹೇ ಧ್ಯಾನಮಾಧುರಿಯೆ!
ಚೈತ್ರಕಾನನ ಕುಸುಮ ಮಂಜರಿಯ ಕೇಸುರಿಗೆ
ನೀನೆ ಮಿಂಚಿನ ಕಿಡಿಯು, ಕಾವ್ಯ ಶ್ರೀ ಸೋದರಿಯೆ!
ನಿನ್ನಿಂದೆ ಚಿರನವೀನೆಯು ಪ್ರಕೃತಿ; ನಿನ್ನಿಂದೆ
ಕೈಗೂಡುತಿದೆ ಭುವನ ಜೀವನಕೆ ಸಾರ್ಥಕತೆ;
ನೀನಿಲ್ಲದಿರೆ ಬಾಳ್ಗೆ ಕಗ್ಗತ್ತಲೆಯೆ ಕಣ್ಣು!
ವಿಧುರ ವಿರಹದಲಿ ನೀನಾಸೆ ತೋರುವೆ ಮುಂದೆ
ಸುರಚಾಪ ಸ್ವರ್ಗವನತೀತದಲಿ ನಿರ್ಮಿಸುತೆ;
ಮಧುರ ಮಿಲನದಿ ನೀನೆ ಹೆಣ್ದುಟಿಯ ಸವಿಹಣ್ಣು!

ವಾಲ್ಮೀಕಿಯನ್ನೊಲಿದು ರಾಮಾಯಣವ ಮಾಡಿ
ವ್ಯಾಸಋಷಿಯಿಂ ಮಹಾಭಾರತವನಾಗಿಸಿದೆ;
ಶಿಲ್ಪಕವಿಗಳನಪ್ಪಿ ಶಿಲೆಯ ಗಾನನ ಹಾಡಿ
ತತ್ತ್ವಜ್ಞರಿಂ ದರ್ಶನಂಗಳನು ವಿರಚಿಸಿದೆ.
ವಿಜ್ಞಾನಿ ಸೀಮಾವಿಹೀನಾಂತರಿಕ್ಷದಲಿ
ನಕ್ಷತ್ರ ನೀಹಾರಿಕಾ ಮರ್ಮಗಳೆನೆಲ್ಲ
ನಿನ್ನಿಂದೆ ಕಂಡಿಹನೆಲೌ ಮತಿಯ ರತಿರಾಣಿ!
ಸತ್ಯ ಸೌಂದರ್ಯವಹುದೌ ನಿನ್ನ ವಕ್ಷದಲಿ,
ಮೃತ್ತು ಚಿತ್ತಾಗುವುದು! ನೀನಿಲ್ಲ ಸುಖವಿಲ್ಲ;
ಬ್ರಹ್ಮ ಮಾಯಾ ಪ್ರೇಯಸಿಯೆ, ಪರಮ ಕಲ್ಯಾಣಿ!

ಇಂದ್ರಿಯಗಳಿಂದ್ರಧನುರ್ಧಾರಿಣಿಯೆ ಇಂದ್ರಾಣಿ,
ನನ್ನನೆದೆಗಪ್ಪು ಬಾ! ಸ್ವಪ್ನದೋಲದಿ ತೂಗಿ
ವಿಸ್ಮೃತಿ ಗಾನಗೈ! ಜನ್ಮಮೃತ್ಯು ಗ್ಲಾನಿ
ಮಾಯವಾಗಲಿ “ನಾನು” ಆನಂದಲಯವಾಗಿ!
ಮಥಿಸು ನನ್ನನು ಮಸಗಿದಂಬುಧಿಯ ತೆರೆಗಳಲಿ;
ನುಂಗಲೆನ್ನನು ಭವ್ಯ ಭೂಮಕಾನನ ಸುಪ್ತಿ;
ನೊಣೆಯಲೆನ್ನನು ಶೂನ್ಯ ಸ್ನಿಗ್ಧ ಮಧುರ ಸಮಾಧಿ!
ಓ ಪ್ರಾಣ ಪ್ರಣಯಿನಿಯೆ, ಬಳಿಗೆ ಬಂದೆನು ಬಳಲಿ –
ಬರಲೆನಗೆ ನಿನ್ನೆದೆಯ ಸೋಮಪಾನದ ತೃಪ್ತಿ:
ಮಾಧುರ್ಯ ನಿರ್ವಾಣ ಸಿದ್ಧಿಯ ಮಹಾಭೋಧೀ!

೦೪-೧೦-೧೯೩೨