ನನ್ನ ಕೈಯಲ್ಲಿರುವ ಕಲ್ಲಿಗೆ
ಬಗೆಗೆ ಸಿಲುಕಿದ ಮನಸಿದೆ;
ನಿದ್ದೆಗೈವಿದರಂತರಂಗದಿ
ಹಾವಿನಂತಹ ಕನಸಿದೆ.

ನೋಡಲರಿಯದು, ಹಾಡಲರಿಯದು,
ನಿದ್ದೆಮಾಡುತ ಬಿದ್ದಿದೆ;
ಮೇಲುನೋಟಕೆ ಸಾಧುಶಿಲೆಯಿದು,
ಕಲ್ಕಿ ಹೃದಯದೊಳೆದ್ದಿದೆ!

ಎದೆಯೊಳಣುಗಳು ಹಾಸು ಹೊಕ್ಕಿವೆ,
ಚಿಮ್ಮಿ ಮುಳುಗಿವೆ ಸುತ್ತಿವೆ.
ತಿಮಿರ ಗರ್ಭದಿ ಹೊಮ್ಮಿ ಘೂರ್ಣಿಸಿ
ಮುದ್ದು ಮುತ್ತಿಗೆ ಮುತ್ತಿವೆ.

ನಲಿದು ನರ್ತಿಸಿ, ತಪದಿ ವರ್ತಿಸಿ,
ಮುಕ್ತಿಯೆಳೆತಕೆ ಸಿಕ್ಕಿವೆ.
ರೇಣು ರೇಣಿನ ಹದುಳ ತಕ್ಕೆಗೆ
ಲೋಕಗಳೆ ಮರೆಹೊಕ್ಕಿವೆ!

ವಿದ್ಯುದಣುಗಳು ನರಳಿ, ಕಂಪಿಸಿ,
ತೊಳತೊಳಲಿ ಮೊಳಗುತ್ತಿವೆ!
ಸತ್ತ ಕಲ್ಲಿದನೆತ್ತಿದಾನು ಸ
ಜೀವ ಸಮರವನೆತ್ತಿಹೆ!

ನಡುಗಲರಿಯದು, ಸಿಡಿಯಲರಿಯದು,
ಸೇರಲರಿಯದು ಪುಡಿಯಲಿ:
ಕುಣಿವಣುಗಳಿವೆ ರೂಪ ವೇಷದ
ದಿವ್ಯ ಹಸ್ತದ ಹಿಡಿಯಲಿ!

ಚಲಿಸದಾ ಕೈ! ಸುಮ್ಮನಿರುವುದು;
ಹಿಡಿದ ಮುಷ್ಟಿಯ ತೆರೆಯದು.
ಎದೆಯೊಳಣುಗಳ ಕದನ ನಿಂತಿದೆ!
ಜಡವು ಚೇತನದಂಗಿಯುಂತಿದೆ!
ಮಾಯೆಯೊಡ್ದಿದ ಸೆರೆಯಿದು!

ನಮ್ಮ ಲೋಕದ ತಿರುಳು ತಿಳಿಯದು:
ಮಾಯೆವೆಣ್ಗೆದು ತೊಟ್ಟಿಲು!
ಹಿಂದೆ ಕಲ್ಗಳೆ ಮೆಟ್ಟಲಾದೆನ
ಗಿಂದು ಸೊನ್ನೆಯೆ ಮೆಟ್ಟಲು!
ಚೇತನವೆ ಕಲ್ಮೆಟ್ಟಲು!*

೦೨-೦೯-೧೯೩೦


* Anna Hempstead Branc ದ ಎಂಬಾಕೆಯ ಇಂಗ್ಲಿಷ್ ಕವನದ ಅನುವಾದ.