ಪಡುವಲೆಡೆಗೆ ಹೊರಳಿ ಹೊತ್ತು
ಕತ್ತಿ ಹೋಗಿದೆ;
ಸಂಜೆ ಮುಗಿಲ್ಗೆ ರಂಗನಿತ್ತು
ಮೂಕವಾಗಿದೆ;
ಮೊದಲಿನಿರುಳ ಕರಿಯ ಛಾಯೆ
ತಿರೆಗೆ ಬಿದ್ದಿದೆ;
ಭುವನ ಮನವ ಮೌನಮಾಯೆ
ಧ್ಯಾನಕದ್ದಿದೆ!
ಕುಕ್ಕನಳ್ಳಿ ಕೆರೆಯ ಮೇಲೆ
ಬೈಗುಗಪ್ಪು ಬಿಳ್ದ ವೇಳೆ
ಒಂಟಿಯಾಳು ಕುಳಿತಿಹೆನು
ಮಂದಿ ಬಿಟ್ಟ ದಡದಲಿ;
ಕಾಣುತಿರುವೆನೆಲ್ಲವನು,
ಹೊದರುಗಿಡದ ಬುಡದಲಿ.

ನೆತ್ತಿಮೇಲೆ ನೂರು ತಾರೆ
ತಾಣ ತಾಣದಿ
ಕೆತ್ತಿಮೆತ್ತಿದಂತೆ ತೋರೆ
ನಭ ವಿತಾನದಿ,
ಷಷ್ಠಿಶಶಿ ಮರೀಚಿಧಾರೆ
ಹರಿದಹುಟ್ಟಿಯಿಂ
ಜೇನು ಸೋರುವಂತೆ ಸೋರೆ
ಜೋತ್ಸ್ನೆವೃಷ್ಟಿಯಂ,
ಕಿರಿಯ ತೆರೆಯ ನಿರಿಯ ಸೀರೆ
ಧರಿಸಿ ಮೆರೆಯೆ ಕೊಳದ ನೀರೆ
ಚುಕ್ಕಿಯೊಡವೆಗಳನು ತೊಟ್ಟು
ಜೊನ್ನ ಹೊನ್ನ ಪೆಂಪಲಿ,
ಸಗ್ಗವೇತಕಾಚೆಯಟ್ಟು
ಚೆನ್ನ ತಿಂಗಳಿಂಪಲಿ!

ಅಲ್ಲಿ ಬಳಿಯ ದಡದಮೇಲೆ
ರಂಜಿಸುತ್ತಿದೆ
ಬೀದಿಸಾಲು ದೀಪಮಾಲೆ;
ಮಿಂಚು ಹೆತ್ತಿದೆ!
ಇಲ್ಲಿ ಕೊಳದ ಹೃದಯದಲ್ಲಿ
ದಿವ್ಯಲೀಲೆ:
ಕಡೆದ ಉರಿಯ ಕೋಲುಗೊಳ್ಳಿ!
ಜ್ಯೋತಿಶಾಲೆ!
ಒಂದು ನಿಮಿಷಕೊಂದು ಪ್ರತಿ,
ನಿಮಿಷಕೊಂದು ಕಲೆಯ ಕೃತಿ;
ನೋಡೆ ನೋಡೆ ಬುಗ್ಗೆಯಂತೆ
ದೀಪ್ತಿ ಚಿಮ್ಮಿಬಿಟ್ಟಿದೆ!
ಕಾಣೆ ಕಾಣೆ ಕೋಲಿನಂತೆ
ಬೆಂಕಿ ಹೆಪ್ಪುಗಟ್ಟಿದೆ!

ನನಸಿಗಿಂತ ಕನಸೆ ಸವಿ!
ನೆರಳೆ ತಿರುಳನು
ಮೀರಿ ಮೆರೆಯುವಿದನು ಕವಿ
ಕಂಡು ಮರುಳನು!
ದೃಶ್ಯದಿ ತಲ್ಲೀನವಾಯ್ತು,
ದಿಟ್ಟಿಮರಳೆನು.
ಕತ್ತಲಾಯ್ತು; ಹೊತ್ತು ಹೋಯ್ತು;

ಮನೆಗೆ ತೆರಳೆನು.
ಗುಡಿಗೆ ಬರುವ ಭಕ್ತರಂತೆ
ಮನದಿ ಸುಳಿದು ನೂರು ಚಿಂತೆ
ಮಂಗಳಾರತಿಯನು ಬೆಳಗಿ
ಮಸುಳಿ ಮಾಯವಾದುವು.
ಮೇಲೆ ದಿಟವದಿತ್ತು ತೊಳಗಿ,
ಕೆಳಗೆ ಸಟೆಯ ಮೋದವು!

ಎನಿತು ಸಾರಿ ಕುಳಿತು ಇಲ್ಲಿ
ಇದನು ನೋಡಿಹೆ?
ಎನಿತು ಸಾರಿ ಸೊಬಗನಿಲ್ಲಿ
ಪೂಜೆಮಾಡಿಹೆ?
ದಿನಕೆ ದಿನಕೆ ಬೆಳೆದು ಭಕ್ತಿ
ಮೋಹವಾಗಿದೆ;
ದೃಶ್ಯವಲ್ಲವಿದೂ ವ್ಯಕ್ತಿ
ಭಾವವಾಗಿದೆ!
ಸರೋವರದ ವೀಚಿಮಾಲೆ,
ಚಂದ್ರಸುಧಾರೋಚಿ ಲೀಲೆ,
ಪ್ರತಿಕೃತಿಗಳ ಕಲಾಶಾಲೆ,
ಕೆರೆಯ ಕಾವ್ಯಮನದಲಿ
ಬಹವು ಲಲಿತ ಭಾವದೋಲೆ
ಣಕ್ಷಣಕ್ಷಣದಲಿ!

ಭುವನ ಕವಿಯ ಭವ್ಯಮನದಿ
ಮೂಡೆ ಮಂತ್ರವು
ತೋರ್ಪುದೆಮಗೆ ನಿಯಮ ಗುಣದಿ
ಪ್ರಕೃತಿ ಯಂತ್ರವು.
ನನ್ನ ಕಣ್ಣೊಳಿರುವವೋಲೆ
ಕೆರೆಯ ಕಣ್ಣಲಿ
ತಾರೆ ಶಶಿಯು ಮೇಘಮಾಲೆ!
ಜಡವಿದೆನ್ನಲಿ?
ಸರೋವರಕೆ ಜೀವವಿದೆ!
ರಸಾವೇಶ ಭಾವವಿದೆ!
ಪಡಿನೆಳಲ್ಗಳದರ ಚಿಂತೆ!
ಕೆರೆಯ ಹೃದಯಕುಸಿರಿದೆ!
ನನ್ನ ಬಾಳೊಳೆಂತುಟಂತೆ
ಹಳದಿ ಕೆಂಪು ಹಸುರಿದೆ!

೧೬-೧೨-೧೯೩೧