ಗುಟ್ಟನರಿತು ಸುಮ್ಮನಿರು;
ಮನವೆ, ಸುಮ್ಮನಿರು!

ನಿದ್ದೆ ಸೊಗಸು, ಸಾವು ಲೇಸು,
ಹುಟ್ಟದಿರುವುದುತ್ತಮ!
ಹುಟ್ಟಿಬಂದಮೇಲೆ, ಲೀಲೆ
ತೋರಲದುವೆ ಉತ್ತಮ!

“ಇದುವೆ ಲೇಸು” ಎಂಬರೊಡನೆ,
“ಲೇಸು, ಲೇಸು” ಎಂದಿರು.
“ಅದುವೆ ಮೇಲು” ಎಂಬರೊಡನೆ
“ಮೇಲು, ಮೇಲು” ಎಂದಿರು!

ಇದೂ ಲೇಸು ಅದೂ ಲೇಸು.
ಇದೂ ಅದೂ ಯಾವುದು?
ಇದನು ಅದನು ಮೀರುವ ಹದನು
ಪರಮ ಲೇಸು: ತಿಳಿವುದು!

೧೦-೦೧-೧೯೩೦