ಹಗಲೆಲ್ಲ ದೂಳಿನಲಿ ಗೊಂಬೆಯಾಟವನಾಡಿ
ಇರುಳು ಬರೆ ಮಲಗುವೆನು ನಿನ್ನ ಮಡಿಲಿನಲಿ.
ನಿನ್ನ ಬೆಚ್ಚನೆ ಎದೆಯ ಸಜ್ಜೆಯಲಿ ಸೊದೆಯುಂಡು
ನಿನ್ನ ಜೋಗುಳದುಲಿಗೆ ಕಣ್ಣು ಮುಚ್ಚುವೆನು.

ದಿನದ ಲೀಲೆಯ ಮರೆವೆ; ಬಿಸಿಲು ದಣಿವನು ಮರೆವೆ;
ಭೂಮಿ ಆಕಾಶಗಳನೆಲ್ಲ ಮರೆಯುವೆನು.
ಕೆಳೆ ಹಗೆಗಳೆಂಬುವನು, ಸೋಲು ಗೆಲುವುಗಳನ್ನು
ನಿನ್ನ ಮಡಿಲಿನ ನಿದ್ದೆ ನುಂಗಿ ನೊಣೆಯುವುದು.

೧೮-೧೧-೧೯೩೧