ಓ ನನ್ನ ತುಂಗೆ,
ಸಹ್ಯಪರ್ವತ ತೀರ್ಥ ಪೋಷಿತ ತರಂಗೆ,
ನಿಬಿಡ ವನಮಾಲಿನಿಯೆ, ಪುಣ್ಯಶಾಲಿನಿಯೆ,
ನೋಡಿದನಿತೂ ನಿನ್ನ ನೋಡಿ ನಾ ತಣಿಯೆ.
ನಿನ್ನ ಜನಶೂನ್ಯ ಸೈಕತರಂಗದಲಿ ಅಂದು
ಗೋಧೂಳಿ ಸಮಯದಲಿ, ಸಂಜೆಗೆಂಪೊಳು ಮಿಂದು
ರವಹೀನವಾಗಿರಲು ಶ್ಯಾಮಲ ಸುಷುಪ್ತಿಯಲಿ
ದಡದ ಬನಗಳ ಮಾಲೆ, ನಿಬಿಡ ಕಿಸಲಯ ಶಾಲೆ
ನಗುತಲಿರೆ ಸಂಧ್ಯೆಯಾ ಸ್ವರ್ಣಪ್ರದೀಪ್ತಿಯಲಿ;
ಜಲಶರೀರದಿ ನರ್ತಿಸೆ ತರಂಗಮಯ ಲೀಲೆ,
ನಿನ್ನ ಮಂಜುಲ ವಾಣಿಗೆನ್ನ ಕೊರಲನು ಕೂಡಿ
ಮೈಮರೆತೆ ಮಳಲಾಟ ನೀರಾಟಗಳನಾಡಿ –
ಅಂತು ಆ ಬಾಲ್ಯದಲಿ, ಓ ನನ್ನ ತುಂಗೆ,
ಸಹ್ಯಪರ್ವತ ತೀರ್ಥ ಪೋಷಿತ ತರಂಗೆ!

ಇನ್ನೊಮೆ ಇಂದು
ಮರಳಿಹನು ಹೊಳೆಕರೆಗೆ ಯುವಕನೈತಂದು –
ಯುವಕನೆಂಬೆನೆ? ಹಸುಳೆ! ನಿನ್ನೆದೆಯ ತೊಟ್ಟಿಲಲಿ
ನಾನು ಬರಿ ಹಸುಳೆ! ನುಣ್ಣಣೆಯ ಮಳಲೊಟ್ಟಿಲಲಿ
ಕುಳಿತ ನಾನಂದಿನಂತೆಯೆ ಬರಿಯ ಕನಸುಗುಳಿ,
ನವಿರು ನರತೊಡಮಾನು ಹೀಗೆಯೇ ಎಂದು ತಿಳಿ!
ಈ ಬಿಳಿಮಳಲ ರಾಶಿ, ವನಪರ್ಣ ವಾರಾಶಿ,
ನರ್ತಿಸುತ ಪ್ರವಹಿಸುವ ನೀಲಾಭ ಜಲರಾಶಿ,
ನೀಲ ನೀರವ ಶಕುನದಂತಿರುವ ಆಕಾಶ,
ಎಲ್ಲವೂ ನನ್ನ ದೃಷ್ಟಿಗೆ ಆತ್ಮದಾವೇಶ
ಭಾವಗಳು! ಜಡವಲ್ಲ; ಸ್ಥೂಲವಸ್ತುಗಳಲ್ಲ!
ಮೃತ ನಿಸರ್ಗದ ಚೇತನ ವಿಹೀನ ಶವವಲ್ಲ!
ಈಶ್ವರ ಶರೀರದಲಿ ಚಿನ್ಮಯ ಮಹಾಂಗಗಳು;
ಬ್ರಹ್ಮದ ಮಹಾ ಚಿತ್ತಶರಧಿಯ ತರಂಗಗಳು;
ಚಿಂತೆಗಳು ನನ್ನ ಮನದಲಿ; ನನ್ನ ನಾಡಿಯಲಿ
ರಕ್ತಬಿಂದುಗಳು! ನಾನುಸಿರೆಳೆಯೆ ಮೋಡದಲಿ
ಶ್ವಾಸವಾಡುವುದು ! ಅದು ಕಾರಣದಿ ಬಾಲ್ಯದಲಿ
ಮೊದಲ್ಗೊಂಡು ನಾನಿಂದುವರೆಗೂ ನಿತ್ಯದಲಿ –
ಪ್ರಕೃತಿಯಾರಾಧನೆಯೆ ಪರಮನಾರಾಧನೆ;
ಪ್ರಕೃತಿಯೊಲ್ಮೆಯೆ ಮುಕ್ತಿಯಾನಂದಸಾಧನೆ,
ಎಂದರಿತು ಉದಯಾಸ್ತಗಳಲಿ, ವನಗಿರಿಗಳಲಿ,
ತೆಂಗಾಳಿಯಲಿ, ರುದ್ರವರ್ಷದಲಿ, ತಿಂಗಳಲಿ,
ಎಳೆಹಸುರ ಮೇಲೆ ಮಿರುಗುವ ಹಿಮದ ಮಣಿಗಳಲಿ,
ಕಾಜಾಣ, ಕಾಮಳ್ಳಿ, ಕೋಗಿಲೆಯ ಗಿಳಿಗಳಲಿ,
ಮಾನವರ ಸೌಂದರ್ಯ ಒಲುಮೆ ನೇಹಂಗಳಲಿ
ನನ್ನಿಷ್ಟದೇವತೆಯ ಗುರ್ಭಗುಡಿಯನು ಕಟ್ಟಿ
ತಲ್ಲೀನನಾಗಿಹೆನು ಪೂಜೆಯಲಿ! ಎದೆಮುಟ್ಟಿ
ಪ್ರಕೃತಿಯನು ಬ್ರಹ್ಮಮಯಿ ಎಂದರಿತು ಒಲಿದವಗೆ,
ಮೇಣು ಆನಂದಮಯಿ ಎಂದೊಲಿದು ಅರಿತವಗೆ
ದುಗುಡವೆತ್ತಣದು? ಶರದಾಗಸದ ನೀಲಿ ನಗೆ
ನಮ್ಮೆದೆಯ ನೂರು ತಾಪವನಳಿಸಿ ಚಿರಶಾಂತಿ
ಔದಾರ್ಯಗಳ ನೀಡುವುದು; ಮಾನಸಿಕ ಕ್ರಾಂತಿ
ತೊಲಗುವುದು; ಕಂಪಿಸುತ ಕರಗುವ ಜಗತ್ತಿನಲಿ
ಧುಮುಕಿ ನಾನೊಂದು ಕಂಪನವಹೆನು ಸತ್ತಿನಲಿ!
ಅದರಿಂದ ಓ ಮಾತೆ, ತುಂಗಾ ತಪಸ್ವಿನಿಯೆ,
ನೋಡಿದನಿತೂ ನಿನ್ನ ನೋಡಿ ನಾ ತಣಿಯೆ!

೧೯-೦೭-೧೯೩೨