ಅಗಣಿತ ತಾರಾಗಣಗಳ ನಡುವೆ
ನಿನ್ನನೆ ನೆಚ್ಚಿಹೆ ನಾನು;
ನನ್ನೀ ಜೀವನ ಸಮುದ್ರಯಾನಕೆ
ಚಿರ ಧ್ರುವತಾರೆಯು ನೀನು.

ಇಲ್ಲದ ಸಲ್ಲದ ತೀರಗಳೆಡೆ ನಾ
ತೊಳಲುತ ಬಳಲಿದರೇನು?
ದಿಟ್ಟಿಯು ನಿನ್ನೊಳೆ ನೆಟ್ಟಿರೆ, ಕಡೆಗೆ
ಗುರಿಯನು ಸೇರೆನೆ ನಾನು?

ಚಂಚಲವಾಗಿಹ ತಾರಕೆಗಳಲಿ
ನಿಶ್ಚಲನೆಂದರೆ ನೀನೆ!
ಮಿಂಚಿ ಮುಳುಗುತಿಹ ನಶ್ವರದೆದೆಯಲಿ
ಶಾಶ್ವತನೆಂದರೆ ನೀನೆ!

೦೭-೧೧-೧೯೨೯