ನನ್ನ ಕವಿತೆಯು ‘ನನ್ನ ಕವಿತೆ’
ನನ್ನವಳೆ ಎಂದೆಂದಿಗೂ!
ನನ್ನ ಕವಿತೆಯು ನೀನು ಕಾಣೆ;
ದೇವರಾಣೆಗು ನೀನು ಕಾಣೆ:
ನನ್ನವಳೆ ಅವಳೆಂದಿಗೂ!

ರನ್ನ ಪಂಪರು ಕಾಣಲಿಲ್ಲ
ನನ್ನ ಕವಿತೆಯ ಕಣ್ಣನು.
ಬೇರೆ ಯಾರೂ ಕಂಡುದಿಲ್ಲ;
ನಾನು ಬಲ್ಲೆನು ಕಂಡುದಿಲ್ಲ
ನನ್ನ ಕಬ್ಬದ ಹೆಣ್ಣನು!

ಅವರಿಗಿದ್ದಳು ‘ಅವರ ಕವಿತೆ’
ನನ್ನ ಕವಿತೆಯ ನಂಟರು.
ಅತ್ತೆಮಾವದಿರಿದ್ದರವರು,
ಭಾವಮೈದುನರಿದ್ದರವರು,
ನನ್ನ ಕವಿತೆಯ ನಂಟರು!

ನನ್ನ ಕವಿತೆಯು ಚೆಲುವೆ ನನಗೆ,
ಚೆಲುವೆಯರು ಇನ್ನಿದ್ದರೂ!
ನಿನ್ನ ಕವಿತೆಯ ನಾನು ಕಾಣೆ,
ನನ್ನ ಕವಿತೆಯ ನೀನು ಕಾಣೆ,
ನನ್ನವಳೆ ಎಂದಿದ್ದರೂ!

ನನ್ನ ಕವಿತೆಗೆ ಎರಡು ಕಣ್ಣು,
ನನ್ನ ಕವಿತೆಗೆ ಮೈಯಿದೆ!
ನನ್ನ ಕವಿತೆಯ ಕೆನ್ನೆ ನುಣ್ಪು!
ನನ್ನ ಕವಿತೆಯ ಮುತ್ತು ತಣ್ಪು!
ನನ್ನ ಕವಿತೆಗೆ ಕೈಯಿದೆ!

ನನ್ನ ಕವಿತೆಯ ನಾನು ದಿನವೂ
ಮುಗಿಲಿನಲಿ ಮೈ ತಬ್ಬುವೆ!
ಮಿಂಚುವೊಳೆಯಲಿ ಮುಳುಗಿ ಮಿಂದು,
ಸಿಡಿಲಿನೂಟವನುಂಡು ಬಂದು
ನನ್ನವಳ ನಾ ತಬ್ಬುವೆ!

ನವಿಲುಗರಿಗಳ ಬಣ್ಣಗಣ್ಣು
ಅವಳ ಬಿಂಕದ ಸೀರೆಯು!
ಕಂಡು ಹೇಳುವೆ, ಕೊಂಚ ನಿಲ್ಲು –
ಏಳುಬಣ್ಣದ ಮಳೆಯ ಬಿಲ್ಲು
ಅವಳ ಕೊರಲಿನ ಹಾರವು!

ಎನಿತು ಚೆಲುವಿರಲೇನು ನಿನಗೆ
ನೀನು ಕಾಣದ ಹೆಣ್ಣಲಿ?
ನಾನು ಬಣ್ಣಿಸುತಿದ್ದರಿಂತು
ಚಿಮ್ಮಿ ದೂರಕೆ ಬಳುಕಿ ನಿಂತು
ನಾಚಿ ಮುನಿವಳು ಕಣ್ಣಲಿ!

ನನ್ನ ಕವಿತೆಯು ‘ನನ್ನ ಕವಿತೆ’
ನನ್ನವಳೆ ಎಂದೆಂದಿಗೂ!
ನನ್ನ ಕವಿತೆಯ ನೀನು ಕಾಣೆ;
ದೇವರಾಣೆಗು ನೀನು ಕಾಣೆ;
ನನ್ನವಳೆ ಅವಳೆಂದಿಗೂ!

೨೧-೦೫-೧೯೩೦