ವಾಮನ ಸ್ವರೂಪದಲಿ ಬಂದೆ ನನ್ನೆದೆಗಂದು,
ನನ್ನ ಬಾಳಿನಲಿ ಮೂರಡಿಯ ಬೇಡಿ;
ಭೀಮನಂದದಿ ಬಳೆದು ನಿಂತಿರುವೆ ನೀನಿಂದು
ನನ್ನ ಸರ್ವಸ್ವವನು ಸೂರೆಮಾಡಿ.

ಸೌಂದರ್ಯದಂದದಲಿ ಮೊದಲು ಮೈದೋರಿದೈ;
ಮೋಹದಲಿ ಬಳಿಗೆ ಬರೆ ಸತ್ಯವನು ಬೀರಿದೈ;
ಸಾಮರವದಿಂಪಿನಲಿ ಧರ್ಮವನು ಸಾರಿದೈ:
ಬರುವ ಬಳೆಯುವ ಬಗೆಯ ಬಲ್ಲವರಾರು?
ಬದ್ದಿನವನಂದದಲಿ ಮೊದಲು ಬಹೆ ಚಂದದಲಿ;
ಕಡೆಗೆ ನಿನ್ನದೆ ಎಲ್ಲ! ನಾನು ಯಾರು?

೦೨-೧೧-೧೯೨೯