ಸೀಮೆಯಿಲ್ಲದ ಗಗನ ಗಂಭೀರ ನೀಲಿಮೆಯು
ಸ್ತಬ್ಧ ನಿದ್ರೆಯ ಮಹಾಸ್ವಪ್ನದಂದದಿ ಮೇಲೆ
ನಿಷ್ಟಂದ ಮೂಕವಾಗಿದೆ. ಕೆಳಗೆ ಭೂಮಿಯನು
ವಿಕ್ಷುಬ್ಧ ವಾರಿಧಿಯ ವಿಪುಲ ನೀಲಿಮೆ ಸುತ್ತಿ,
ನೊರೆಯ ಮುತ್ತಿನ ತೆರೆಗಳಾಟದಲಿ ಘೋಷಿಸಿದೆ
ಅರ್ಥಮಯ ಅಸ್ಪಷ್ಟ ಸಂದೇಶವನು ಸಾರಿ.
ಧ್ಯಾನಯೋಗಿಗಳಂತೆ ಮುಗಿಲೆಡೆಗೆ ತಲೆಯೆತ್ತಿ
ನಿಂತಿಹವು ಪರ್ವತಶ್ರೇಣಿಗಳು, ನಿಬಿಡ ತರು
ಪರ್ಣಮಯ ವನವಸನ ವಲ್ಕಲಂಗಳನುಟ್ಟು.
ನದಿನದಗಳುದಿಸಿ ಹರಿದಿವೆ ನಿರಂತರ ಗಮನ
ಕರ್ಮದಲಿ ಮುನ್ನೀರಿನೆದೆಗೆ. ರಾಜ್ಯಗಳೆದ್ದು
ಪ್ರಲಯ ಜಿಹ್ವಾಗ್ರದಲಿ ಸಂಸ್ಕ್ರತಿಗಳನ್ನು ಕಟ್ಟಿ
ಬಣ್ಣಗುಳ್ಳೆಗಳಂತೆ ಬರಿದಾಗುತಿವೆ. ನರನು
ತಾನರಿಯದಿಹ ತನ್ನ ತುದಿಯಿಲ್ಲದ ಅನಂತ
ಯಾತ್ರೆಯಲಿ ಅಧಿಕಾರ ಸಂಪತ್ತು ವಿದ್ವತ್ತು
ಕೀರ್ತಿ ಕಾತರನಾಗಿ ನುಗ್ಗುತಿರುವನು ಮುಂದೆ
ಕಾಲವರ್ತಿಯ ಪೋಷಿಸುವ ತೈಲ ತಾನಾಗಿ!
ಇದನೆಲ್ಲವನು ಹೊತ್ತು ಇನಿತನೊ ಲೆಕ್ಕಿಸದೆ
ಭೂಗೋಲವಾಕಾಶ ದೇಶದಲಿ ತಿರುಗುತಿದೆ,
ನಿಷ್ಕರುಣ ನಿಯಮದಲಿ ನವಕೋಟಿ ಮೈಲಿಗಳ
ದೂರದಲಿ ಶತಪಾಲು ಹಿರಿದಾಗಿ ಉರಿಯುತಿಹ
ಇನಮಂಡಲವ ಸುತ್ತಿ! ಗಾತ್ರದಲಿ ಸೂರ್ಯನನು
ಶತಕೋಟಿ ಮೀರಿರುವ ನಕ್ಷತ್ರ ಕೋಟಿಗಳು
ಜ್ಯೋತಿವತ್ಸರಗಳತಿದೂರದವಕಾಶದಲಿ
ಖಚಿತವಾಗಿವೆ, ಚಿಂತೆ ಬಳಲುವಾಕಾಶದಲಿ!
ಈ ಮಹಾಬ್ರಹ್ಮಾಂಡ ಭಿತ್ತಿಯಲಿ ನಾನಿಹೆನು
ಕ್ಷುದ್ರದಲಿ ಕ್ಷುದ್ರತಮ ನರನಾಗಿ, ಎಲ್ಲವನು
ನನ್ನ ಮನಸಿನ ಭಾವಜಾಲದಲಿ ಸೆರೆಗೈದು!
ಅಣೋರಣೀಯನು ನಾನು ಮಹತೋ ಮಹೀಯವನು
ನುಂಗಿಹೆನು: ನನ್ನ ಚೇತನ ಜಲಧಿಯಲಿ ತೇಲಿ
ಬಾಳುತಿಹುದೀ ವಿಶ್ವ, ಸ್ವಪ್ನಮಾಯೆಯ ಹೋಲಿ!
ಕನಸಿನಾಕಾಶವದು ಎನಿತು ಹಿರಿದಾದರೇನು?
ಹಿರಿಯನಲ್ಲವೆ ಅದಕೆ ಕನಸು ಕಾಣುವ ನಾನು?

೩೦-೧೦-೧೯೩೯