ನೀನಂದು ಹಾಡೆಂದು ಕಲಿಸಿ ಕಳುಹಿದ ಗೀತೆ
ಬಾರದಿದೆ ನನಗಿನ್ನುಮಿಂದುವರೆಗೆ.
ಹಾಡಲದನೆಳಸಿದರೆ ಬೇರೆ ಬೇರೆನಿತೆನಿತೊ
ಗೀತೆ ಚಿಮ್ಮುತಿವೆ; ಬಯಸಿದುದೆ ಹೊರಗೆ!

ಹಸುರಿನಲಿ ಹೊಳೆವ ಹನಿ ರಾಶಿ ರಾಶಿಯ ಸೂಸಿ
ಹೊನ್ನ ಸಿಂಗಾರದಲಿ ಬಹುದು ಸುಸಿಲು;
ಬನದ ತಳಿರಿಗೆ ಬಳಿದು ಕುಂಕುಮದ ಬಣ್ಣವನೆ
ಮೋಹವನೆ ಚಿಮ್ಮುವುದು ಬೈಗು ಬಿಸಿಲು.

ಪಕ್ಷಿಗಳ ಕೂಜನದಿ ಪುಷ್ಪನೀರಾಜನದಿ
ಸಾಗುತಿದೆ ಮಧು ಚೈತ್ರ ಮಧುರ ಯಾತ್ರೆ.
ಸುಖಮಯದ ಗಾನದಲಿ ದುಃಖದುಮ್ಮಾನದಲಿ
ಜಾರುತಿದೆ ಜಗದ ಜೀವನದ ಜಾತ್ರೆ.

ಕವಿಯ ಗಾನದೊಳೆಲ್ಲ ವಾಣಿಗಳು ಹೊಮ್ಮುತಿವೆ;
ಹೊಮ್ಮದಿದೆ ನೀ ಕಲಿಸಿದೊಂದು ವಾಣಿ!
ಉಲಿವೆನೆಂದರೆ ಇತರ ನೂರಾರು ವಾಣಿಗಳು
ನುಗ್ಗುತಿವೆ; ಬಾರದಿದೆ ನಿನ್ನ ವಾಣಿ!

೧೦-೧೧-೧೯೩೧