ನೀನೆಂತು ಪೊರೆವೆಯೋ ಅದನು ನಾನರಿಯೆ;
ನೀ ಪೊರೆವೆ ಎಂಬುದನು ಮಾತ್ರ ನಂಬಿರುವೆ.

ಗಜಪತಿಯ ಮೊಸಳೆಯಿಂ ನೀನಂದು ಪೊರೆದಂತೆ
ತೆಕ್ಕನೆಯ ಮೈದೋರಿ ಪೊರೆಯದಿರಬಹುದು;
ಮುಂಡಿಗೆಯನೊಡೆದು ಬಂದಂದು ಪ್ರಹ್ಲಾದನನು
ಸಲಹಿದಂದದೊಳೆನ್ನ ಸಲಹದಿರಬಹುದು.

ಬಿಸಿಲ ಬೇಗೆಗೆ ಬೆಂದು ಬಸವಳಿದ ಬನದೆಡೆಗೆ
ಹೊಸ ಮುಗಿಲ ಮಳೆಯಂತೆ ನೀ ಬರಲುಬಹುದು;
ರವಿಯ ಹೊಂಬೆಳಕಂತೆ, ಶಶಿಯ ಕೌಮುದಿಯಂತೆ
ಸೌಂದರ್ಯರೂಪದಲಿ ಬಳಿಗೆ ಬರಬಹುದು.

ಮುದ್ದು ಗೆಳೆಯರ ಮೊಗದ ಮುದ್ದಿನ ಮುಗುಳ್ನಗೆಯ
ಮಾಧುರ್ಯದಂದದಲಿ ನೀ ಬರಲುಬಹುದು;
ಕಬ್ಬವೆಣ್ಣಿನ ಕಣ್ಣ ಮಿಂಚಿನೊಲ್ಮೆಯ ತೆರದಿ
ಪ್ರತಿಭೆಯಂದದಿ ಸೊಗವ ಬಳಿಗೆ ತರಬಹುದು.

೧೯-೧೨-೧೯೨೯