ನೂರಾರು ಹೀನದಲಿ ನೀನೆನ್ನ ನೂಕುತಿಹೆ;
ಮುಳುಗುತಿರೆ ಮತ್ತೆ ನೀನೆತ್ತುತಿರುವೆ.
ನೂರಾರು ದೈನ್ಯದಲಿ ನೀನೆನ್ನನೆಸೆಯುತಿಹೆ;
ಕನಿಕರಿಸಿ ಮರಳಿ ಮೇಲೆತ್ತುತಿರುವೆ.

ಒಮ್ಮೆ ಅವುಗಳನರಿವೆ;  ಒಮ್ಮೆ ನಾನರಿಯದೆಯೆ
ಮೊರೆಯಿಡುವೆ ಸಲಹೆಂದು, ಪರಮಗುರುವೆ.
ಸಂಸಾರಸಾಗರದೊಳೆನಗೀಜು ಕಲಿಸಲೇಂ
ಇಂತೆನ್ನನಾಡಿಪೆಯ, ನನ್ನ ದೊರೆಯೆ?

ರೆಕ್ಕೆ ಬಲಿತಿಹ ಮರಿಯ ತಾಯ್ವಕ್ಕಿ ಹಕ್ಕೆಯಿಂ
ಕೆಳಗೆಸೆದು ಹಾರುವುದು ಕಲಿಸುವಂತೆ.
ಕೆಳಗೆಸದು ಮೇಲೆತ್ತಿ ಕೆಚ್ಚೆದೆಯ ಕಲಿಸುತಿಹೆ;
ಬಲಿತ ರೆಕ್ಕೆಗೆ ಬಲವ ಕಲಿಸುತಿರುವೆ!

೦೬-೦೫-೧೯೩೦