ಕೇಳುವುದೆಲ್ಲೆಡೆ ಪಲ್ಲವಿಯೊಂದು:
ನೀ ನಾ, ನಾ ನೀ, ಜೋ ಜೋ ಎಂದು!

ಎಲ್ಲಾ ಕವಿಗಳ ಕವನಗಳೆದೆಯಲಿ,
ಸೂರ್ಯ ಚಂದ್ರರ ಅಸ್ತ ಉದಯದಲಿ,
ಎಲ್ಲಾ ಸುಖದುಃಖಗಳಾಳದಲಿ,
ಸರುವ ಧರುಮಗಳ ಸರಮೇಳದಲಿ;

ಹಾಡುವ ಹಕ್ಕಿಗಳಿನಿದನಿಯಲ್ಲಿ,
ತೀಡುವ ಗಾಳಿಯ ಸುಯ್ಯುಸಿರಲ್ಲಿ,
ಉರಿಯುವ ಕಡುಬೇಸಗೆ ಬನದಲ್ಲಿ
ತರಗಲೆಗಳ ಚಿರ ಮರ್ಮರದಲ್ಲಿ;

ತಿಳಿಗೊಳದಲಿ ತೆರೆ ‘ನೀ ನಾ’ ಎಂದು
ಕರೆ ಕರೆಯುವುದು ದಡದೆಡಗೈತಂದು;
ಹರಿ ಹೊಳೆಯಲಿ ಮೊರೆ ‘ನಾ ನೀ’ ಎಂದು
ಸರಿ ಸರಿವುದು ನೊರೆಗರೆಯುತೆ ಮುಂದು.

ಇನ ಶಶಿ ತಾರಾ ಗ್ರಹಗತಿಯೆಲ್ಲ
ಆಡುತಲಿಹವಾ ಪಲ್ಲವಿ ಸೊಲ್ಲ;
ಸಚರಾಚರದಣುರೇಣಿನ ವಾಣಿ
ಆಲಾಪಿಸುತಿದೆ ‘ನೀ ನಾ, ನಾ ನೀ!’

೨೩-೦೮-೧೯೩೧