ಪೂವಿಂ ಪೂವಿಗೆ ಚಿಮ್ಮುತ ಹಾರಿ
ಸುಮಹೃದಯದ ನವಮಧುವನು ಹೀರಿ
ಬನಗಳ ಬಣ್ನದ ಕವಿತೆಯದೊಂದು
ಮುದ್ದನು ಸೂಸಿತು ನನ್ನಡೆ ಬಂದು!
ಸುಗ್ಗಿಯ ತಿಂಗಳ ಹೂವುಗಳೆಲ್ಲ,
ಇಂದಿರವಿಲ್ಲಿನ ರಾಗಗಳೆಲ್ಲ
ಬಣ್ಣದ ಚಿಟ್ಟೆಯ ರೆಕ್ಕೆಯ ಮೇಲೆ
ಕುಣಿದವು, ಕಬ್ಬಿಗ ಮುದದಲಿ ತೇಲೆ!
ನೇಸರು ಮೆರೆದನು ಬಾಂದಳದಲ್ಲಿ;
ಹಕ್ಕಿಗಳುಲಿದುವು ಬನ ಬನದಲ್ಲಿ;
ಸಾವಿರ ಸುಮಗಳು ತರುಲತೆಗಳಲಿ
ತಲೆದೂಗಿದ್ದುವು ತಂಗಾಳಿಯಲಿ:
ಬಾನೂ ಬನವೂ ತಿರೆಯೂ ಗಿರಿಯೂ
ಎಲ್ಲವೂ ಚಿಟ್ಟೆಯ ಸಲುವಾಗಿ
ಯಾರೋ ರಚಿಸಿದ ರಂಗದ ತೆರದಲಿ
ಮೆರೆದುವು ಕಣ್ಣಿಗೆ ಚೆಲುವಾಗಿ!

೦೮-೦೫-೧೯೨೯