ಬನದಲಿ ದಿನ ದಿನ ಬಣ್ಣದ ಹೂಗಳು
ನಿನ್ನಯ ಚೆಲುವನು ಸಾರುತಿವೆ;
ಕೋಗಿಲೆ ಗಿಳಿಗಳು ನಿನ್ನಿನಿಗೊರಲಿನ
ಇಂಪಿನ ದನಿಯನು ಬೀರುತಿವೆ;
ತೀಡುವ ಕಂಪಿನ ತಣ್ಣನೆ ಗಾಳಿಯು
ನಿನ್ನುಸಿರೊಲ್ಮೆಯ ತೋರುತಿದೆ.
ನಳನಳಿಸೆಸೆಯುವ ಮಿಳಿರ್ವಿಳೆದಳಿರು
ನಿನ್ನೊಡಲಂದವ ಮೆರೆಯುವುದೆ?
ಗಾಳಿಗೆ ಬಳಕುವ ತೆಳ್ಳನೆ ಬಳ್ಳಿಯು
ನಿನ್ನಸಿಯೊಡಲನು ಜರೆಯುವುದೆ?
ಬನದಲಿ ತುಳುಕುವ ತಿಳಿಗೊಳವಾದರೊ
ಕಣ್ಣನು ಸರಸಕೆ ಕರೆಯುವುದೆ?
ಬನದೊಳು ನೀನೋ? ನಿನ್ನೊಳು ನಾನೋ?
ನಾನೂ ನೀನೂ ಬನದೊಳಗೊ?
ಬನವೂ ನೀನೂ ಕನವರಿಪಾನೂ
ಎಲ್ಲವು ಎನ್ನಯ ಮನದೊಳಗೊ?

೦೭-೧೧-೧೯೨೯