ಬಾ ಬಾ ದೊರೆ, ಬಾಗಿಲ ತೆರೆ;
ಸುಮ್ಮನಿರುವರೆ?
ಎದೆಯ ಮೊರೆ ಕರೆಯುತಿರೆ
ಮರೆವರೇ ತೊರೆವರೇ?

ತಿರುಕಿ ನಾನು ಒಲ್ಮೆಯಲಿ
ನಿನ್ನ ಗುಡಿಯ ಬಾಗಿಲ ಬಳಿ
ಬಂದು ಕರೆಯೆ ರಾಗದಲಿ; ಬಾ ಬಾ….

ವಜ್ರ ವೈಡೂರ್ಯದಲಿ
ಮೆರೆವ ಬೈಗುಗೆಂಪಿನಲಿ
ತೇಲಿಯೆಲರ ತಂಪಿನಲಿ; ಬಾ ಬಾ….

ಹರಿವ ಹೊನಲ ತಿಂಗಳಲಿ
ಮಲಗೆ ತಿರೆಯು ಮೌನದಲಿ
ಸವಿಯ ಸೊಗದ ಕನಸಿನಲಿ; ಬಾ ಬಾ….

ಮೂಡುದೆಸೆಯ ಮುಗುಳುನಗೆ
ಬಿರಿಯೆ ಮೆಲ್ಲಮೆಲ್ಲಗೆ,
ಅರುಣ ಕಿರಣ ಸರಣಿಯಲಿ; ಬಾ ಬಾ….

ಮೊರೆವ ಸಲಿಲ ರಂಗದಲಿ
ಜಲತರಂಗ ಭಂಗದಲಿ
ಮೋಹವೆರಚುತಂಗದಲಿ; ಬಾ ಬಾ….

ಜನನ ಜೀವ ಮರಣದಲಿ,
ಎನ್ನ ಅಂತಃಕರಣದಲಿ
ನೀನೆ ನೆಲಸಿ ಕರುಣದಲಿ; ಬಾ, ಬಾ….

೦೪-೧೦-೧೯೨೯