ಬಿದಿ ಕಮ್ಮಾರನು; ಲೋಕವೆ ಕುಲುಮೆ.
ದುಃಖದ ಬೆಂಕಿಯ ಹೊತ್ತಿಸಿ ಊದಿ
ಕಾಯಿಸಿ ಬಡಿಯಲು ಪಾಪದ ಚಿಲುಮೆ
ಕಿಡಿ ಕಿಡಿ ಚಿಮ್ಮುತ ಕಡೆಯಲಿ ಬೂದಿ!
ಆಗಿದೆ ಎರಕದ ಕಬ್ಬಿಣ ಉಕ್ಕು;
ಹೋಗಿದೆ ಜೀವದ ಕತ್ತಿಯ ತುಕ್ಕು;
ಕಾವಿರುವಾಗಲೆ ಡೊಂಕನು ತಿದ್ದಿ,
ಶಾಂತಿಯ ಶೀತಲ ಜಲದಲ್ಲಿ ಅದ್ದಿ
ಹದಕೊಡುತಿರೆ ಮಾಡುವುದದು ಸದ್ದ!
ಕಡೆಯಲಿ ಸದ್ದಿಲ್ಲದೆ ಅದು ಸಿದ್ಧ!

೦೫-೧೦-೧೯೩೧