ಕಲಾಸುಂದರಿ ಸರಸಿಯಾದರೂ ಮಹಾತಪಸ್ವಿನಿ. ಆಕೆಯ ಬಹಿರಂಗದಲ್ಲಿ ತೇಜಸ್ಸಿರುವಂತೆಯೆ ಅಂತರಂಗದಲ್ಲಿ ತಪಸ್ಸಿದೆ: ಹಸುರು ಗಿಡ ಮರಗಳಿಂದಲೂ ನಗರ ಗ್ರಾಮಗಳಿಂದಲೂ ವನಪರ್ವತಗಳಿಂದಲೂ ಹೊಳೆಕೆರೆಗಳಿಂದಲೂ ನಲಿದು ನಗೆ ಸೂಸುತ್ತಿರುವ ಉರ್ವರೆಯ ಅಂತರಾಳದಲ್ಲಿ ಅನೇಕ ಶತಮಾನಗಳಿಂದಲೂ ಉನ್ಮತ್ತ ರಭಸದಿಂದ ಘೂರ್ಣಿಸುತ್ತಿರುವ ಜಲರೂಪದ ಅಗ್ನಿರಾಶಿ ತಪಸ್ಸು ಮಾಡುತ್ತಿರುವಂತೆ ಆಕೆಯ ಅಂತರಂಗದಲ್ಲಿ ತಪಸ್ಸಿದೆ. ಅಕೆ ಎಷ್ಟರಮಟ್ಟಿಗೆ ಭೋಗಿನಿಯೋ ಅದಕ್ಕಿಂತಲೂ ಹೆಚ್ಚಾಗಿ ಯೋಗಿನಿ. ಮೇಲೆ ಮೇಲೆ ನೋಡುವ ತೇಲುನೋಟದ ಮಂದಿಗೆ ಆಕೆಯ ಸೌಂದರ್ಯ ಮಾತ್ರ ಕಾಣುತ್ತದೆ; ಆಕೆಯಲ್ಲಿ ಆಗಾಧಪರಿಚಯವಿರುವ ರಸಋಷಿಗಳಿಗೆ ಸೌಂದರ್ಯದ ಜೊತೆಗೆ ಅದಕ್ಕಿಂತಲೂ ಶಾಶ್ವತವಾದ ಮತ್ತು ಅದನ್ನೇ ಶಾಶ್ವತಗೊಳಿಸುವ ಭವ್ಯವಾದ ಓಜಸ್ಸೂ ತೋರುತ್ತದೆ. ಆಕೆ ಲಘುಮಾನಸರ ಅಲಸ ಸಮಯದ ನರ್ಮಮೂರ್ತಿಯಲ್ಲ; ಕಲೋಪಾಸಕರ ಹೃದಯ ಕುಟೀರದ ತಪೋಮೂರ್ತಿ. ಆಕೆಯಲ್ಲಿ ಕಾವ್ಯದ ರಮಣೀಯತೆಯೂ ತತ್ತ್ವದ ಸೂಕ್ಷ್ಮತೆಯೂ ಒಂದಾಗಿವೆ. ಹಸುಳೆಯ ಕ್ರೀಡಾಶೀಲವೂ ವೃದ್ಧನ ಧ್ಯಾನಶೀಲವೂ ಎರಡೂ ಆಕೆಯಲ್ಲಿ ಅಡಕವಾಗಿವೆ. ಆಕೆ ಬುದ್ಧಿ ಭಾವಗಳ ವಿದ್ಯುದಾಲಿಂಗನದಿಂದ ಆವಿರ್ಭವಿಸಿರುವ ಪ್ರತಿಭಾರೂಪಸಿ.

ಕಲಾಸುಂದರಿಯ ಅವತಾರಗಳಲ್ಲಿ ಸರ್ವಶ್ರೇಷ್ಠವಾದುದೆಂದರೆ ಕವಿತೆ. ಕವಿತೆ ಇತರ ಕಲೆಗಳಿಗಿಂತಲೂ ಅತಿಶಯವಾದ ಗೌರವಕ್ಕೆ ಪಾತ್ರವಾಗಿದೆ. ಅದು ವಾಜ್ಮಯ ಶರೀರಯಾಗಿರುವುದರಿಂದ ರಾಗ ರಸ ಭಾವಗಳನ್ನು ಉದ್ದೀಪನಮಾಡಿ ಪವಿತ್ರಗೈಯುವಂತೆಯೆ ಮನಸ್ಸಿಗೆ ಜ್ಞಾನಜ್ಯೋತಿಯನ್ನು ದಾನ ಮಾಡಿ ಆತ್ಮವನ್ನು ಅತ್ಯುನ್ನತ ಸ್ಥಿತಿಗೆ ಕೊಂಡೊಯ್ಯುತ್ತದೆ. ನಮ್ಮನ್ನು ವ್ಯಕ್ತದ ಅಂಚಿಗೆ ಎಳೆದೊಯ್ದು ಅವ್ಯಕ್ತದ ಗಂಭೀರತೆಯನ್ನು ವೀಕ್ಷಿಸುವಂತೆ ಮಾಡುತ್ತದೆ. ಕವಿತೆಯಲ್ಲಿ ವೇದ ಶಾಸ್ತ್ರ ಕಾವ್ಯಗಳ ಪ್ರಭಾವಗಳೆಲ್ಲ ಐಕ್ಯವಾಗಿವೆ. ಕಲ್ಪನೆ, ಭಾವ, ಆಲೋಚನೆ ಎಲ್ಲವೂ ಅದರಲ್ಲಿ ಸಮರಸವಾಗಿರಬೇಕು. ಕಲ್ಪನೆ ಮಾತ್ರವಿದ್ದರೆ ಲಘುವಾಗುತ್ತದೆ; ಭಾವ ಮಾತ್ರವಿದ್ದರೆ ಬರುಗನಸಾಗುತ್ತದೆ; ಆಲೋಚನೆ ಮಾತ್ರವಿದ್ದರೆ ಶುಷ್ಕವಾಗುತ್ತದೆ. ಕಲ್ಪನೆ ಮತ್ತು ಭಾವ ಇವೆರಡೂ ಕವಿತೆಗೆ ಬಹುಮುಖ್ಯವಾದ ಅಂಗಗಳೆಂದು ಹೇಳುವವರು ಅವುಗಳೇ ಅದರ ಸರ್ವಸ್ವವೆಂದು ಹೇಳುವಷ್ಟರಮಟ್ಟಿಗೆ ಸಾಹಸ ಮಾಡುತ್ತಾರೆ. ಆಲೋಚನೆ ತತ್ತ್ವಶಾಸ್ತ್ರದ ಕಾರ್ಯ, ಆನಂದವೇ ಕವಿತೆಯ ಉದ್ದೇಶ; ಆದ್ದರಿಂದ ಹೃದಯವನ್ನು ಆನಂದಪಡಿಸುವ ಕರ್ತವ್ಯವನ್ನು ಬಿಟ್ಟು ಕವಿತೆ ಬುದ್ಧಿಗೆ ಶ್ರಮಕೊಡುವ ಕಾರ್ಯವನ್ನು ವಹಿಸಲಾಗದು ಎಂದು ಅಂಥವರ ಅಭಿಪ್ರಾಯ. ಆದರೆ ಪ್ರಪಂಚದ ಮಹಾಕವಿಗಳನ್ನು ತೆಗೆದುಕೊಂಡರೆ ಅವರೆಲ್ಲರೂ ಉತ್ತಮ ಆಲೋಚಕರೂ ಆಗಿದ್ದಾರೆ. ಅವರ ಮಹಾಕೃತಿಗಳು ಬೂರುಗದ ಅರಳೆಯಂತೆ ಹಗುರವಾಗಿಲ್ಲ. ವಜ್ರದಂತೆ ಘನವಾಗಿವೆ. ಅರಳೆ ಮಲಗುವುದಕ್ಕೆ ಮೃದುವಾಗಿದ್ದರೂ ಅದಕ್ಕೆಂದಿಗೂ ವಜ್ರದ ಬೆಲೆಯಿಲ್ಲ. ಇದನ್ನು ಚೆನ್ನಾಗಿ ವಿಚಾರಮಾಡಿ ನೋಡಿದರೆ ಧ್ಯಾನಮಯವೂ ತತ್ತ್ವಶೀಲವೂ ಅಲ್ಲದ ಕವಿತೆ ಎಷ್ಟೇ ಭಾವರಾಗ ಪೂರ್ಣವಾಗಿದ್ದರೂ ಅದರಲ್ಲಿ ಎಷ್ಟೇ ಮಧುರ ಪದಶೈಲಿಯಿದ್ದರೂ ಅದು ಸಮುದ್ರದ ತೆರೆಗಳ ಮೇಲೆ ನಲಿದಾಡಿ ಮನಮೋಹಿಸುವ ಕ್ಷಣಿಕ ನಶ್ವರವಾದ ನೊರೆಯಂತೆಯೇ ಹೊರತು ಕಡಲಿನ ಆಳದಲ್ಲಿ ಗಂಭೀರ ಗೌರವದಿಂದ ಮೌನವಾಗಿರುವ ಮುತ್ತುಗಳಂತೆ ಮಾನ್ಯವಾಗಲಾರದು; ಘನವಾಗಲಾರದು; ಶಾಶ್ವತವಾಗಲಾರದು. ಎಂದರೆ ಉತ್ತಮ ಕವಿತೆಗೆ ತೇಜಸ್ಸಿನಂತೆ ತಪಸ್ಸೂ ಅತ್ಯಾವಶ್ಯಕ. ತಪಸ್ಸಿಲ್ಲದ ತೇಜಸ್ಸು ಪ್ರೇಮವಿಲ್ಲದ ಕಾಮದಂತೆ ತುಚ್ಛವಾದುದು. ಅದರಿಂದ ಇಂದ್ರಿಯಗಳಿಗೆ ತಾತ್ಕಾಲಿಕ ತೃಪ್ತಿ ಲಭಿಸಿದರೂ ಆತ್ಮಕ್ಕೆ ಚಿರಹಾನಿ ತಪ್ಪದು.

ಉತ್ತಮವಾದ ಕವಿತೆ ಕವಿಯ ಧ್ಯಾನದಿಂದಲೂ ತಪಸ್ಸಿನಿಂದಲೂ ಅನುಭವದ ಆಳದಿಂದಲೂ ಆವೇಶಪೂರ್ವಕವಾಗಿ ಬಳ್ಳಿಯಿಂದ ತಳಿರು ಹೂವು ಹೊಮ್ಮುವಂತೆ ಹೊರಗೆ ಬರಬೇಕು. ರೂಪ ಅಲಂಕಾರಗಳು ಅದಕ್ಕೆ ಎಷ್ಟೇ ಆವಶ್ಯಕವಾದರೂ – ಅವುಗಳಿಲ್ಲದ ಕವಿತೆಯೇ ಇಲ್ಲ, ಅವುಗಳಿರದಿದ್ದರೆ ಕವಿತೆಯೇ ಅಲ್ಲ ಎಂದು ಹೇಳುವಷ್ಟು ಆವಶ್ಯಕವಾದರೂ – ಆತ್ಮದ ಮುಂದೆ ಅವುಗಳನ್ನೆಲ್ಲ ಗೌಣವೆಂದೇ ಹೇಳಬೇಕು. ಒಳಗಡೆ ಕಾಣಿಸದೆ ಅಡಗಿಕೊಂಡು ದೇಹ ಸಮಸ್ತಕ್ಕೂ ಅವಲಂಬನ ರೂಪವಾಗಿರುವ ಎಲುಬುಗೂಡಿನ ಮೇಲೆ ದೇಹ ಸೌಂದರ್ಯವು ಹೇಗೆ ನಿಂತಿದೆಯೋ ಹಾಗೆಯೆ ಕವನಸುಂದರಿ ತತ್ತ್ವ, ಆಲೋಚನೆ, ಧ್ಯಾನಗಳೆಂಬ ಅಡರ್ಪುಗಳಿಂದಲೇ ನಾಲ್ಕುಕಾಲ ಬಾಳಲು ಸಮರ್ಥೆಯಾಗುವಳು. ಎಂದರೆ ಕವಿತೆ – ನಿಜವಾದ ಕವಿತೆ – ಬೇಸರವಾದಾಗ ಆಡಿ, ಆಮೇಲೆ ಬಿಸಾಡಬಹುದಾದ ಆಟದ ಗೊಂಬೆಯಂತಲ್ಲದೆ ದೇವಾಲಯದ ಗರ್ಭಗುಡಿಯಲ್ಲಿ ರತ್ನವೇದಿಕೆಯ ಮೇಲೆ ಇಟ್ಟು ಸರ್ವದಾ ಭಕ್ತಿಯಿಂದ ಪೂಜಿಸಲ್ಪಡುವ ದೇವಿವಿಗ್ರಹದಂತೆ ಅನವರತ ಆರಾಧನೆಗೆ ಅರ್ಹವಾದುದು. ಉತ್ತಮ ಕವಿತೆಯಲ್ಲಿ ಆಳವಾದ ಆಲೋಚನೆ ಇರಲೇಬೇಕು. ಅದರಲ್ಲಿಯೂ ಕಾವ್ಯವು ವ್ಯಂಜಕವಾದರಂತೂ ಹಾಗಿರುವುದು ಅತ್ಯಾವಶ್ಯಕ. ಶ್ರೇಷ್ಠ ಪ್ರತಿಭಾ ಸಂಪನ್ನನಾದ ಕವಿ ಸೃಷ್ಟಿಸಮುದ್ರದ ತಳದವರೆಗೂ ನುಗ್ಗಿ ಅತ್ಯುತ್ತಮವಾದ ಭಾವ ಚಿಂತಾರತ್ನಗಳನ್ನು ತನ್ನ ಕಲ್ಪನೆಯ ತಟ್ಟೆಯಲ್ಲಿಟ್ಟು ತಂದು ಬದುಕಿಗೆ ನಿವೇದಿಸಬೇಕು; ಮೇಲೆ ತೇಲುವ ಬರಿಯ ಬೆಳ್ನೊರೆಯನ್ನು ಮಾತ್ರ ಸಂಗ್ರಹಿಸಿದರೆ ಸಾಲದು.

ಮನುಷ್ಯಜಾತಿಯ ಗೌರವ ಅದರ ಬುದ್ಧಿಶಕ್ತಿಯಲ್ಲಿದೆ. ರಾಗ ಪ್ರೇಮ ಕ್ರೋಧ ದ್ವೇಷಗಳು ಸರ್ವ ಪ್ರಾಣಿಗಳಲ್ಲಿಯೂ ಸಮಾನವಾಗಿವೆ. ಅವುಗಳೆಲ್ಲವೂ ನಮಗಿರುವ ಶಕ್ತಿಗಳೇ ಆದರೂ ಅವುಗಳನ್ನೆಲ್ಲ ಆಳುವ ಶಕ್ತಿ, ಎಂದರೆ ಬುದ್ಧಿ, ಇಲ್ಲದೆ ಹೋದರೆ ಯಾವ ಪುರಷ್ಯಾರ್ಥವೂ ಕೈಗೂಡದು. ಅದಕ್ಕೆ ಬದಲಾಗಿ ಅನರ್ಥಕರವಾದರೂ ಆಗಬಹುದು. ಬುದ್ಧಿಯ ಈ ಉಪಯೋಗವು ವ್ಯಾವಹಾರಿಕ ಜಗತ್ತಿಗೆ ಸೇರಿದ್ದು. ವಾಸ್ತವ ಜಗತ್ತು ಮತ್ತು ವಾಸ್ತವ ಜೀವನಗಳನ್ನು ಬಿಟ್ಟು ಭಾವಜಗತ್ತು ಭಾವಜೀವನಗಳನ್ನೆ ತೆಗೆದುಕೊಂಡರೂ ಅಲ್ಲಿಯೂ ಬುದ್ಧಿಶಕ್ತಿಯ ಮಹಿಮೆ ಅಪ್ರತಿಹತವಾಗಿ ನಿಲ್ಲುತ್ತದೆ. ಏಕೆಂದರೆ, ಮಹದಾಲೋಚನೆ ಉತ್ತಮ ಕಲ್ಪನೆಗೆ ಸಹಕಾರಿಯಾಗುವಂತೆ, ಉಜ್ವಲ ಭಾವಕ್ಕೂ ಪ್ರೇರಕವಾಗುತ್ತದೆ. ಬುದ್ಧಿ ಹೆಚ್ಚಾದರೆ ಕಲ್ಪನೆ ಪೆಚ್ಚಾಗುತ್ತದೆ ಎಂದು ಕೆಲವರ ಮತ. ಆದರೆ ಅದೇನೂ ಸರ್ವವ್ಯಾಪಿಯಾದ ಸೂತ್ರವಲ್ಲ. ವಿಜ್ಞಾನ – ನಿಜವಾದ ವಿಜ್ಞಾನ – ನಿಜವಾದ ಕಾವ್ಯಕ್ಕೆ ವಿರೋಧಿಯಲ್ಲ. ವಿಜ್ಞಾನಶಾಸ್ತ್ರ ತತ್ತ್ವಶಾಸ್ತ್ರಗಳೆರಡೂ ಬುದ್ಧಿಸೂಕ್ಷ್ಮತೆಯ ಮೇಲೆ ನಿಂತಿವೆ; ಕಾವ್ಯಕಲೆಗಳು ಹೃದಯತೀಕ್ಷಣತೆಯ ಮೇಲೆ ನಿಂತಿವೆ. ಇದು ಸ್ವಲ್ಪಮಟ್ಟಿಗೆ ನಿಜವಾದರೂ ಬುದ್ಧಿಸೂಕ್ಷ್ಮತೆಯಿಂದ ಸಿದ್ಧಿಸಿದ ತಿಳಿವಳಿಕೆ ಹೃದಯದ ಕಲ್ಪನೆಯನ್ನೂ ಭಾವಗಳನ್ನೂ ಕೆರಳಿಸ ಬಲ್ಲುದು ಎಂಬುದಕ್ಕೆ ಬೇಕಾದಷ್ಟು ಉದಾಹರಣೆಗಳನ್ನು ಕೊಡಬಹುದು. ಹಾಗೆಯೆ ವಿಜ್ಞಾನ ಮತ್ತು ತತ್ತ್ವಶಾಸ್ತ್ರಗಳು ನಮಗೆ ತೋರುವ ಭವ್ಯ ದರ್ಶನಗಳಿಗೆ ಕಲ್ಪನಾಶಕ್ತಿ ಮತ್ತು ಭಾವಗಳು ಎಷ್ಟರ ಮಟ್ಟಿಗೆ ಕಾರಣವಾಗಿವೆ? ಆ ದರ್ಶನಗಳಲ್ಲಿ ಅತ್ಯುತ್ತಮ ಕಾವ್ಯಕಲೆಯಲ್ಲಿ ಮಾತ್ರವೆ ಗೋಚರವಾಗುವ ಕಲ್ಪನೆಯೂ ಭಾವವೂ ಎಷ್ಟಿವೆ ಎಂಬುದನ್ನು ಗಣನೆಗೆ ತೆಗೆದುಕೊಂಡರೆ ವಿಜ್ಞಾನ ತತ್ತ್ವಶಾಸ್ತ್ರಗಳಿಗೂ ಕಾವ್ಯಕಲೆಗಳಿಗೂ ಬುದ್ಧಿ ಆಲೋಚನೆಗಳಿಗೂ ಕಲ್ಪನೆ ಭಾವಗಳಿಗೂ ನಾವು ಮಾಡುವ ವಿಭಜನಾವ್ಯತ್ಯಾಸ ಎಷ್ಟು ಕೃತಕವಾದುದೆಂದು ಚೆನ್ನಾಗಿ ತೋರುತ್ತದೆ. ನಿಜವಾಗಿ ನೋಡಿದರೆ ಮನುಷ್ಯನ ವ್ಯಕ್ತಿತ್ವ ಏಕಾಖಂಡವಾದುದು – ಸಮಸ್ತ ಜಗತ್ತಿರುವಂತೆಯೆ. ನಾವು ನಮ್ಮಲ್ಲಿರುವ ಬೇರೆ ಬೇರೆ ಶಕ್ತಿಗಳನ್ನು ಸೂಚಿಸಲು ಬೇರೆ ಬೇರೆ ಪದಗಳನ್ನು ನಮ್ಮ ಸೌಕರ್ಯಕ್ಕಾಗಿ ಉಪಯೋಗಿಸುತ್ತೇವೆ. ಪದಗಳಿರುವ ಪೃಥಗ್ಭಾವವನ್ನು ಅದ್ವೈತವಾಗಿರುವ ಮೂಲವಸ್ತುವಿಗೂ ಆರೋಪಿಸುವುದು ಜ್ಞಾನದ ಅಜ್ಞಾನವೆಂದೆ ಹೇಳಬೇಕಾಗುತ್ತದೆ. ಆದ್ದರಿಂದ ಪ್ರತಿಭೆಯಲ್ಲಿ ಆಲೋಚನೆ, ಕಲ್ಪನೆ, ಭಾವಗಳು ಐಕ್ಯವಾಗಿವೆ, ಅಖಂಡವಾಗಿವೆ. ಬುದ್ಧಿಭಾವಗಳ ವಿದ್ಯುದಾಲಿಂಗನವೆ ಪ್ರತಿಭೆ. ಆದ್ದರಿಂದ ಪ್ರತಿಭೆಯುಳ್ಳ ಕವಿಯ ಬುದ್ಧಿ ಆತನಲ್ಲಿಯ ಕಲ್ಪನೆ ಭಾವಗಳಂತೆಯೆ ಮಹೋನ್ನತವಾಗಿರಬೇಕು. ಎಂದರೆ ಆತನ ದರ್ಶನದ ಹೃದಯದಲ್ಲಿ ತತ್ತ್ವದ ಅಮೃತಕಲಶವಿರಬೇಕು. ತತ್ತ್ವಗರ್ಭಿತವಲ್ಲದ ದರ್ಶನ ಎಷ್ಟೇ ಮನರಂಜಕವಾಗಿರಲಿ ಲಘುವಾದುದು. ಅದು ನೊರೆಯೆ ಹೊರತು ಮುತ್ತಲ್ಲ.

ಬುದ್ಧಿಸೂಕ್ಷ್ಮತೆ ಕಲ್ಪನೆಯ ವಿಸ್ತಾರವನ್ನೂ ಭಾವದ ತೀವ್ರತೆಯನ್ನೂ ಕಡಿಮೆ ಮಾಡುವ ಬದಲು ಉನ್ನತೆಗೈಯುತ್ತದೆ ಎಂಬ ವಿಷಯ ಒಂದು ಉದಾಹರಣೆ ತೆಗೆದುಕೊಂಡರೆ ಗೊತ್ತಾಗುತ್ತದೆ. ವೇದದ ಕವಿಗಳ ಕಾಲದಿಂದಲೂ ಆಕಾಶ, ಭೂಮಿ, ಸಮುದ್ರ, ತಾರೆ, ಅಗ್ನಿಪರ್ವತ, ಗಾಳಿ, ಬೆಂಕಿ, ಮೋಡ, ಮಳೆ, ಮಿಂಚು, ಗುಡುಗು, ಹೂವು, ಹಣ್ಣು, ಮಣ್ಣು ಎಲ್ಲವೂ ಇವೆ. ಆದರೆ ಅವರ ದೃಷ್ಟಿಗೂ ನಮ್ಮ ದೃಷ್ಟಿಗೂ ಎಷ್ಟು ವ್ಯತ್ಯಾಸವಾಗಿದೆ! ಇತ್ತೀಚಿನ ರಸಾಯನಶಾಸ್ತ್ರ, ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರ, ಭೂಗೋಲಶಾಸ್ತ್ರ, ಖಗೋಲಶಾಸ್ತ್ರ ಇವುಗಳನ್ನೆಲ್ಲ ಅಧ್ಯಯನ ಮಾಡಿದವರಿಗೆ ಜಗತ್ತಿನ ಸ್ವರೂಪವೆ ಬದಲಾಯಿಸಿದಂತೆ ತೋರುವುದಿಲ್ಲವೆ? ವಿಶ್ವವೂ ಅದರ ಜೀವನವೂ ಹಿಂದಿನವರ ಕಲ್ಪನೆ ಕನಸಿನಲ್ಲಿಯೂ ಕಾಣದನಿತು ವಿಸ್ತಾರವಾಗಿಯೂ ಭವ್ಯವಾಗಿಯೂ ರಹಸ್ಯಪೂರ್ಣವಾಗಿಯೂ ಭಯಾನಕವಾಗಿಯೂ ಪೂಜ್ಯವಾಗಿಯೂ ಅನಿರ್ವಚನೀಯವಾಗಿಯೂ ಕಾಣುವುದಿಲ್ಲವೆ? ಆ ವಿಶ್ವರೂಪದ ದರ್ಶನದ ಮಹತ್ತು ಬೃಹತ್ತುಗಳ ಸಮ್ಮುಖದಲ್ಲಿ ನಮ್ಮಾತ್ಮ ವಿಕಂಪಿಸುವುದಿಲ್ಲವೆ? ಮೂಕವಾಗುವುದಿಲ್ಲವೆ? ಭಾವಲಯವಾಗುವುದಿಲ್ಲವೆ? ಕಲ್ಪನೆ ವಿಸ್ತಾರವನ್ನಾಗಲಿ ಎಲ್ಲೆಯನ್ನಾಗಲಿ ಅರಿಯದೆ ನಿರ್ವಾಣವಾಗುವುದಿಲ್ಲವೆ? ಜ್ಞಾನವು ಭಕ್ತಿಭಾವದಿಂದ ಜ್ವಾಲಾಮಯವಾಗುವುದಿಲ್ಲವೆ? ಆತ್ಮ ಪುನೀತವಾಗುವುದಿಲ್ಲವೆ? ಆ ಅನುಭವದಲ್ಲಿ ಕಾವ್ಯವಿಲ್ಲವೆ? ಆ ಅನುಭವದಿಂದ ಕಾವ್ಯಕ್ಕೆ ಕುಂದಾಗುತ್ತದೆ ಎನ್ನುವುದು ವ್ಯರ್ಥ ಶಿಶುಪ್ರಲಾಪ. ಅಂತಹ ಅನುಭವದ ಆವೇಶದಿಂದ ಹೊರಹೊಮ್ಮುವ ಕಾವ್ಯ ಚಿರಸ್ಥಾಯಿಯಾಗಿ ಲೋಕಪೂಜ್ಯವಾಗುವುದರಲ್ಲಿ ಸಂದೇಹವಿಲ್ಲ.

ಲೋಕಪೂಜ್ಯವಾಗುವುದರಲ್ಲಿ ಸಂದೇಹವಿಲ್ಲ; ಆದರೆ ಸರ್ವಜನಪ್ರಿಯವಾಗುತ್ತದೆಯೆ? ಈ ‘ಜನಪ್ರಿಯತೆ’ ಎಂಬ ಪದ ಈಚೀಚೆಗೆ ಬಹಳ ಅನರ್ಥಕಾರಿಯಾಗುವಂತೆ ತೋರುತ್ತದೆ ‘ಜನಪ್ರಿಯತೆ’ ಎಂದರೇನು? ಆ ಜನರಾದರೂ ಯಾರು? ಜನರೆಲ್ಲರೂ ಮೆಚ್ಚಿದ ಹೊರತು ಆ ಕಾವ್ಯ ಉತ್ತಮ ಕಾವ್ಯವಲ್ಲ ಎಂದು ಹೇಳುವುದಾದರೆ ಉತ್ತಮ ಕಾವ್ಯಗಳೇ ಅಸಾಧ್ಯ ಎಂದು ಹೇಳಬೇಕಾಗುತ್ತದೆ. ಉತ್ತಮ ಕಲಾಕಾರ್ಯದ ಸವಿಯನ್ನು ಆಸ್ವಾದಿಸುವ ಪುಣ್ಯವೂ ಸಾಮರ್ಥ್ಯವೂ ಪುಕ್ಕಟೆಯಾಗಿ ಬರುವುದಿಲ್ಲ. ಅದಕ್ಕೆ ಸಂಸ್ಕಾರವೂ ಅಭ್ಯಾಸವೂ ಎರಡೂ ಆವಶ್ಯಕ. ಪ್ರಕೃತಿ ಸೌಂದರ್ಯ – ಸೂರ್ಯ ಚಂದ್ರರ ಉದಯಾಸ್ತಗಳು, ವಸಂತಮಾಸದ ವನಶ್ರೀ, ಬತ್ತದ ಗದ್ದೆಗಳ ಪೈರುಪಚ್ಚೆ, ಮುಂಗಾರಿನ ಕರ್ಮುಗಿಲು, ಕಣಿವೆಗಳಲ್ಲಿ ಸಮುದ್ರ ಸರೋವರಗಳನ್ನು ವಿರಚಿಸುವ ಮಾಗಿಯ ಮಂಜಿನ ಮಾಯಾ ಮೋಹ, ಇತ್ಯಾದಿ ಸಹಸ್ರಾರು ದೃಶ್ಯಗಳು ದಿನ ದಿನವೂ ಜನಗಳ ಕಣ್ಣೆದರು ಸುಳಿಯುತ್ತಿವೆ. ಆದರೆ ಎಷ್ಟು ಮಂದಿ ಅವುಗಳನ್ನು ವರ್ಡ್ಸ್‌ವರ್ತ್ ಕವಿಯಂತಾಗಲಿ, ವರ್ಣಶಿಲ್ಪಿ ವೆಂಕಟಪ್ಪನವರಂತಾಗಲಿ ಕಂಡುಣಲು ಸಮರ್ಥರಾಗಿದ್ದಾರೆ? ಕಲೆಯನ್ನು ಸವಿಯಲು ಕಲಾ ದೃಷ್ಟಿ ಬೇಕು. ಕವಿ ತನ್ನ ಪ್ರತಿಭೆಗೆ, ತನ್ನ ಕಲ್ಪನೆಗೆ, ತನ್ನ ಭಾವಕ್ಕೆ ಗೋಚರವಾಗುವ ಸೃಷ್ಟಿಯ ರಹಸ್ಯ ಆನಂದ ಸೌಂದರ್ಯಗಳನ್ನು ಕೈಲಾದಮಟ್ಟಿಗೂ ತನ್ನ ಕೃತಿಯಲ್ಲಿ ಪ್ರತಿಬಿಂಬಿಸಲು, ನಿಹಿತಗೈಯಲು ಸಾಹಸಮಾಡುತ್ತಾನೆ. ಅಂತಹ ಕೃತಿ ಹೊಸದಾಗಿರುವಾಗ ಜನರಿಗೆ ಅದು ರುಚಿಸದೆ ಹೋಗಬಹುದು; ಅರ್ಥವಾಗದಿರಬಹುದು. ಆ ಕೃತಿಯ ಆಳಕ್ಕೆ ಮುಳಗಲು, ಎತ್ತರಕ್ಕೆ ಏರಲು ಅವರಿಗೆ ಅಸಾಧ್ಯವಾಗಬಹುದು. ಆಗ ಅವರು ಅದನ್ನು ತಿರಸ್ಕರಿಸುವುದೂ ಹೀಯಾಳಿಸುವುದೂ ಸ್ವಾಭಾವಿಕ. ಹಾಗೆಂದು ಆ ಕಲಾಕೃತಿಯನ್ನೆ ಅಲ್ಪವೆಂದು ಅಲ್ಲಗಳೆಯುವುದಕ್ಕೆ ಆಗುತ್ತದೆಯೆ? ನೂತನವಾದುದರಲ್ಲಿ ಜನರಿಗೆ ಸಂಶಯ ಹೆಚ್ಚು. ಆ ಸಂಶಯ ಮೊದಮೊದಲು ಔದಾಸೀನ್ಯ, ತಿರಸ್ಕಾರಗಳ ರೂಪದಲ್ಲಿ ತೋರುತ್ತದೆ. ಎಲ್ಲಿಯೋ ಹಲಕೆಲವು ಕಲಾವಿದರಿಗೆ ಮಾತ್ರ ಅದರ ಮಹತ್ತು ತಿಳಿಯುತ್ತದೆ. ಅಂತಹರೇ ಅದನ್ನು ಪ್ರಶಂಸಿಸಿ ಪ್ರಚಾರಕಾರ್ಯಕ್ಕೆ ತೊಡಗುತ್ತಾರೆ; ಅದರ ಸೊಗಸು ಸೊಬಗುಗಳನ್ನು ಕುರಿತು ವಿಮರ್ಶೆಗಳನ್ನು ಬರೆಯುತ್ತಾರೆ. ಜನರು ಕಣ್ಣು ತೆರೆಯುತ್ತಾರೆ. ಆಮೇಲೆ ಕ್ರಮಕ್ರಮೇಣ ಜನರ ದೃಷ್ಟಿಯೂ ರುಚಿಯೂ ತಿದ್ದುಪಡೆದು ತಿರಸ್ಕಾರ ಔದಾಸೀನ್ಯಕ್ಕೆ ತಿರುಗಿ, ಔದಾಸೀನ್ಯ ಉಪಚಾರಕ್ಕೆ ತಿರುಗಿ, ಉಪಚಾರ ಪ್ರಶಂಸೆಗೂ ಆರಾಧನೆಗೂ ತಿರುಗುತ್ತದೆ. ಅದ್ದರಿಂದಲೆ ಪ್ರತಿಯೊಬ್ಬ ಪ್ರತಿಭಾಶಾಲಿಯಾದ ಮಹಾಕವಿಯೂ ಯಾವ ರುಚಿಯಿಂದ, ಯಾವ ದೃಷ್ಟಿಯಿಂದ ಜನರು ತನ್ನ ಕೃತಿಗಳ ಸೌಂದರ್ಯ ಮಹತ್ತುಗಳನ್ನು ಗ್ರಹಿಸಿ ಆಸ್ವಾದಿಸಲು ಸಮರ್ಥರಾಗುವರೋ ಆ ರುಚಿಯನ್ನೂ ದೃಷ್ಟಿಯನ್ನೂ ತಾನೇ ಪ್ರಯತ್ನದಿಂದಲೂ ಸಾಹಸದಿಂದಲೂ ಸಾವಧಾನವಾಗಿ ಜನರಲ್ಲಿ ಉತ್ಪತ್ತಿಮಾಡಿ ಕೊಳ್ಳಬೇಕಾಗುತ್ತದೆ ಎಂಬ ವಿಷಯ ಇತರ ಸಾಹಿತ್ಯ ಚರಿತ್ರೆಗಳು ತೋರುವ ನಿದರ್ಶನಗಳಿಂದ ನಮಗೆ ವಿಶದವಾಗುತ್ತದೆ. ಷೇಕ್ಸ್ಪಿಯರ್ ಮಹಾಕವಿಯ ನಾಟಕಗಳು ಅವನ ಕಾಲದಲ್ಲಿ ಮಹಾಕೃತಿಗಳೆಂದು ಪರಿಗಣಿತವಾಗಿರಲಿಲ್ಲ. ಅಲ್ಲದೆ ಆತನ ಜೊತೆಯಲ್ಲಿದ್ದ ಇತರ ನಾಟಕ ಕರ್ತೃಗಳ ಕೃತಿಗಳೇ ಹೆಚ್ಚು ಶ್ರೇಷ್ಠವಾದುವೆಂದು ಕೀರ್ತಿಪಡೆದ್ದಿದ್ದುವು. ರಂಗಭೂಮಿಯಲ್ಲಿಯೂ ಷೇಕ್ಸ್ಪಿಯರಿನ ನಾಟಕಗಳಿಗಿಂತಲೂ ಇತರ ನಾಟಕಗಳೇ ಹೆಚ್ಚಾಗಿ ಪ್ರಸರ್ಶಿತವಾಗುತ್ತಿದ್ದವಂತೆ. ಮಿಲ್ಪನ್ ಕವಿಯ ‘ಪ್ಯಾರದೈಸ್ ಲಾಸ್ಟ್’ ಪುರಾಣಕಾವ್ಯ ಪ್ರಕಟವಾದಾಗ ಅದಕ್ಕಿಂತಲೂ ಅತ್ಯಲ್ಪವಾಗಿದ್ದ (ಅವುಗಳ ಹೆಸರು ಕೂಡ ಈಗ ಮರೆತುಹೋಗಿರಬಹುದು!) ಎಷ್ಟೋ ಸಾಧಾರಣ ಕೃತಿಗಳಿಗೆ ಲಭಿಸಿದ್ದ ಕೀರ್ತಿಯಾಗಲಿ, ‘ಜನಪ್ರಿಯತೆ’ ಯಾಗಲಿ ಅದಕ್ಕೆ ದೊರೆಯಲಿಲ್ಲ. ಹಾಗೆಯೇ ವರ್ಡ್ಸ್ ವರ್ತ್ ಕಾವ್ಯರ್ಷಿ ತನ್ನ ದಿವ್ಯವಾದ ಕವನಗಳನ್ನು ಅಚ್ಚುಹಾಕಿಸಿದಾಗ ಜನರ ಅಪಹಾಸ್ಯಕ್ಕೂ ತಿರಸ್ಕಾರಕ್ಕೂ ಹೀಯಾಳಿಕೆಗೂ ಹೇಗೆ ಪಕ್ಕಾದನೆಂಬ ವಿಚಾರವನ್ನು ಇಂಗ್ಲಿಷ್ ಸಾಹಿತ್ಯ ಚರಿತ್ರೆಯನ್ನು ಓದಿದವರೆಲ್ಲ ಬಲ್ಲರು. ಕೀಟ್ಸ್ ಕವಿ ಮಹಾಕವನಗಳನ್ನು ರಚಿಸಿ ಅದೂರ ದೃಷ್ಟಿಯ ಅರಸ ಹೃದಯದ ವಿಮರ್ಶಕರ ಕ್ರೂರ ಖಂಡನೆಗೆ ಸಿಕ್ಕಿ ಎದೆನೊಂದು ಮೃತ್ಯುವಿಗೆ ತುತ್ತಾದನೆಂಬ ಪ್ರತೀತಿಯಿತ್ತು. ಅವರೆಲ್ಲರೂ ಈಗ ಮಹಾಕವಿಗಳಾಗಿದ್ದಾರೆ. ಈ ದೃಷ್ಟಾಂತಗಳನ್ನು ಪರಿಶೀಲಿಸಿ ನೋಡಿದರೆ ‘ಜನಪ್ರಿಯತೆ’ ಎಂತಹ ಬಿಸಿಲ್ಗುದುರೆ ಎಂಬುದು ಮನದಟ್ಟಾಗದೆ ಇರುವುದಿಲ್ಲ. ನಿಜವಾದ ಕವಿ ‘ಜನಪ್ರಿಯತೆ’ ಎಂಬ ಭೂತಕ್ಕೆ ಬೆದರದೆ, ಅದನ್ನು ತೃಪ್ತಿಪಡಿಸುವ ಚಪಲತೆಗೆ ಬೀಳದೆ, ತನ್ನ ಉದಾತ್ತ ದರ್ಶನಕ್ಕೆ ಮಾತ್ರ ವಿಧೇಯನಾಗಿ ಕಾವ್ಯರಚನೆ ಮಾಡುವುದು ಆತನ ಕರ್ತವ್ಯ ಮತ್ತು ಆತನ ತಾಯ್ನುಡಿ ತಾಯ್ನಾಡುಗಳ ಶ್ರೇಯಸ್ಸು.

ಜೀವನದ ಮೇಲೆ ಮೇಲೆಯೆ ತೇಲಿಹೋಗುವ ಅನೇಕರಿಗೆ ಗಹನ ವಿಷಯಗಳು ಹಿಡಿಸುವುದಿಲ್ಲ. ಆದ್ದರಿಂದ ರುಚಿಸುವುದೂ ಇಲ್ಲ. ಅಂತಹರನ್ನೂ ಕೂಡ ಅಂತರ್ಮುಖಿಗಳನ್ನಾಗಿ ಮಾಡಿ, ಬಾಳಿನ ತಿರುಳನ್ನವರು ಸವಿಯುವಂತೆ ಎಸಗುವುದು ಕವಿತೆ ತೊಟ್ಟಿರುವ ದೀಕ್ಷೆ. ವಿಜ್ಞಾನ ಶಾಸ್ತ್ರಜ್ಞನು ಹುಡಿಯೊಂದರ ಹೃದಯದಲ್ಲಿ ಸುಪ್ತವಾಗಿರುವ ಮಹಾ ಭಯಂಕರ ಶಕ್ತಿಯ ಅರಿವನ್ನು ಜನರಿಗೆ ಉಂಟುಮಾಡಿಕೊಡುವಂತೆ ಕವಿಯಾದವನು ಸಮಸ್ತ ಸೃಷ್ಟಿಯ ಅಂತರಾಳದಲ್ಲಿರುವ ಆತ್ಮದ ಆನಂದವನ್ನು ಜನರಿಗೆ ಪರಿಚಯಮಾಡಿಕೊಡಬೇಕು. ಎಂದರೆ ಹೃದಯದ ಜಡತನವನ್ನು ನೀಗುವಂತೆಯೆ ಮನಸ್ಸಿನ ಸೋಮಾರಿತನವನ್ನೂ ಪರಿಹರಿಸಬೇಕು. ಜನರೂ ಕೂಡ ಈ ವಿಷಯವನ್ನು ಮನಸ್ಸಿಗೆ ತಂದುಕೊಂಡು ಯಾವುದಾದರೊಂದು ಕವನ ಮೊದಮೊದಲು ಅರ್ಥವಾಗದಿದ್ದರೂ ಭಾವವಾಗದಿದ್ದರೂ ಅದನ್ನು ತಿರಸ್ಕರಿಸದೆ ಸ್ಪಲ್ಪ ಪ್ರಯತ್ನಪಡುವುದು ಲೇಸು. ಕವನಗಳ ರಸಾಸ್ವಾದನೆಗೆ ಕೆಲವು ಅಡಚಣೆಗಳಿವೆ. ಒಂದನೆಯದು ಭಾಷೆ; ಎರಡನೆಯದು ನೂತನ ಭಾವಗಳ ಅಪರಿಚಯತೆ; ಮೂರನೆಯದು ಬರವಣಿಗೆಯ ರಿತಿಯ ನವೀನತೆ; ನಾಲ್ಕನೆಯದು ಆಲೋಚನೆಗಳ ಗಹನತೆ; ಐದನೆಯದು ಹೊಸದರಲ್ಲಿ ಏನಿದೆ ಎಂಬೊಂದು ಕುರುಡು ಹೆಮ್ಮೆ!

ಒಂದು ಭಾಷೆ ಮಾತೃಭಾಷೆಯಾದ ಮಾತ್ರಕ್ಕೆ ಅದರಲ್ಲಿರುವ ಉತ್ತಮ ಸಾಹಿತ್ಯವೆಲ್ಲವೂ ಶ್ರಮ ಪ್ರಯತ್ನಗಳಿಲ್ಲದೆ ತಮಗೆ ಗೊತ್ತಾಗುವುದು ಎಂದು ಕೆಲವರು ತಿಳಿದುಕೊಂಡಂತೆ ತೋರುತ್ತದೆ. ಅದರಲ್ಲಿಯೂ ಇಂಗ್ಲಿಷ್ ಭಾಷೆಯನ್ನು ಓದಿಕೊಂಡಿರುವ ಕೆಲವರು ಕನ್ನಡದಲ್ಲಿಯೂ ತಾವು ಪಂಡಿತರೆಂದು ಭ್ರಮಿಸಿ ತಮಗೆ ಅರ್ಥವಾಗದ ಕನ್ನಡವೆಲ್ಲ ಪಠನಾನರ್ಹವೆಂದು ಸಾರುವನಿತು ಸಾಹಸಮಾಡುತ್ತಾರೆ. ಅಂತಹ ಚಿತ್ತವೃತ್ತಿ ಅಂಧಾಭಿಮಾನಕ್ಕಲ್ಲದೆ ವಿವೇಕಕ್ಕೆ ಚಿಹ್ನೆಯಲ್ಲ. ತಮ್ಮ ಭಾಷೆಯಲ್ಲಿ ಮಾತಾಡುವ , ಕಾಗದ ಬರೆಯುವ, ಪತ್ರಿಕೆಗಳನ್ನು ಓದುವ ಶಕ್ತಿಯನ್ನು ಮಾತ್ರ ಪಡೆದಿರುವ ಆಂಗ್ಲೇಯರೆಲ್ಲರೂ ಷೇಕ್ಸ್ಪಿಯರನ ನಾಟಕಗಳನ್ನಾಗಲಿ ಮಿಲ್ಟನ್ನಿನ ಪುರಾಣ ಕಾವ್ಯವನ್ನಾಗಲಿ ವರ್ಡ್ಸ್ ವರ್ತ್, ಷೆಲ್ಲಿ ಮತ್ತು ಕೀಟ್ಸ್ ಕವಿಗಳ ಕೆಲವು ಪ್ರಸಿದ್ಧ ಕವನಗಳನ್ನಾಗಲಿ ಪ್ರಯತ್ನ ಪೂರ್ವಕವಾದ ಅಧ್ಯಯನವಿಲ್ಲದೆ ಅವುಗಳ ಮಹತ್ತನ್ನು ಅರಿಯಬಲ್ಲರೆ? ಎಂದಿಗೂ ಸಾಧ್ಯವಲ್ಲ. ವಿಜಯಶ್ರೀ ವೀರರನ್ನು ಮಾತ್ರವೆ ಒಲಿಯುವಂತೆ ಕಲಾಸುಂದರಿ ಮನಪೂರ್ವಕವಾದ ಸಾಧಕರಿಗೆ ಮಾತ್ರವೆ ಸಾಧ್ಯಳು.

ಪದ ಪರಿಚಯವೊಂದರಿಂದಲೆ ಕಾವ್ಯಖನಿಯ ವಿಪುಲೈಶ್ವರ್ಯ ಹಸ್ತಗತವಾಗದು. ಪದವು ಭಾವವು ಧರಿಸುವ ಸಂಕೇತ ರೂಪ. ಆದ್ದರಿಂದ ಭಾವಗ್ರಹಣ ಶಕ್ತಿ ಕಾವ್ಯರಸಾಸ್ವಾದನೆಗೆ ಅತ್ಯಾವಶ್ಯಕ. ‘ಸಚಲನಿಘಂಟು’ ಗಳಾಗಿಬಿಟ್ಟ ಮಾತ್ರಕ್ಕೆ ಕವಿಯೊಡನೆ ಅಂತರಿಕ್ಷದಲ್ಲಿ ಹಾರಾಡುವ ಸಾಮರ್ಥ್ಯ ಲಭಿಸುವುದಿಲ್ಲ. ಆದ್ದರಿಂದ ಕವಿಯ ಭಾವಗಳನ್ನು ಅನುಭವಿಸುವುದು ವಾಚಕನ ಕರ್ತವ್ಯ. ಭಾವಗಳು ಹಳೆಯವಾದರೂ ಹೊಸ ರೂಪದಿಂದ ಅವತರಿಸಿದಾಗ ಅನೇಕರಿಗೆ ಅವುಗಳ ಪರಿಚಯವಾಗುವುದಿಲ್ಲ. ಆ ‘ಅಪರಿಚಯತಾಭಾಸ’ ವನ್ನು ಮೊದಮೊದಲು ಸ್ವಲ್ಪ ಪ್ರಯತ್ನದಿಂದ ಪರಿಹರಿಸಿಕೊಳ್ಳಬೇಕು; – ಕೆರೆಯಲ್ಲಿಯೇ ಈಜಿದವನು ಹೊಳೆಗೆ ಈಜಲು ಹೋದಾಗ ಹೊಸ ಸನ್ನಿವೇಶಕ್ಕೆ ತಕ್ಕಂತೆ ತನ್ನ ಈಜುವಿಕೆಯನ್ನು ಹೊಂದಿಸಿಕೊಳ್ಳುವಂತೆ. ಅಲ್ಲದೆ ಎಂತಹ ವಿದ್ವಾಂಸನಾಗಲಿ, ಎಷ್ಟೇ ಪುರಾತನ ಸಾಹಿತ್ಯವನ್ನೂ ಪರಸಾಹಿತ್ಯಗಳನ್ನೂ ಅಧ್ಯಯನ ಮಾಡಿದವನಾಗಲಿ, ಭಾವಗಳೆಲ್ಲ ತನಗೆ ಹೃದ್ಗತವಾಗಿವೆ ಎಂದು ತಿಳಿಯವಷ್ಟು ಗರ್ವಿಯಾಗಬಾರದು. ಏಕೆಂದರೆ ಭಾವಗಳು ಕಾಲದಂತೆಯೆ ಅನಂತವಾಗಿವೆ; ಸೃಷ್ಟಿಯ ವಸ್ತುಗಳಂತೆ ಅಸಂಖ್ಯವಾಗಿವೆ. ಕಾವ್ಯಾಧ್ಯಾಯಿಗೆ ಭಾಷಾಜ್ಞಾನದೊಂದಿಗೆ ಸರಸಹೃದಯ, ಸಮಾನಾನುಭವ, ಸಹಾನುಭೂತಿ ಇವು ಮೂರೂ ಇರಲೇಬೇಕು.

ಕವಿ ತನ್ನೊಂದು ಹೊಸ ಅನುಭವವನ್ನು ಕವನವೊಂದರಲ್ಲಿ ಹೇಳಿದರೆ, ಆ ಅನುಭವವಿಲ್ಲದವನಿಗೆ ಅದು ವಿಚಿತ್ರವಾಗಿ ತೋರಬಹುದು; ಅಸಾಧ್ಯವಾಗಿ ತೋರಬಹುದು. ಅಂತಹ ಸಮಯದಲ್ಲಿ ತಿರಸ್ಕಾರಕಿಂತಲೂ ಸಹಾನುಭೂತಿಯೆ ಶ್ರೇಯಸ್ಕರವಾಗುತ್ತದೆ. ಭಾವವು ಸಾಧಾರಣನಿಗೆ ಅನುಭವಾತೀತವಾಗಿರುವಂತೆಯೆ ಕವನದಲ್ಲಿರುವ ಅಲೋಚನೆಯೂ ಗಹನವಾಗಬಹದು. ಆಗ ವಾಚಕನು ಕವಿಗೆ ವಿಮರ್ಶಕನಾಗಿರುವುದಕ್ಕಿಂತಲೂ ಶಿಷ್ಯನಾಗಿ ಮುಂದುವರಿಯುವದೆ ಲೇಸು. ಏಕೆಂದರೆ, ಕವಿಯ ರಸ ತಪಸ್ಸಿಗೆ ಜಗತ್ತಿನ ನಾಡಿಗಳಲ್ಲಿ ಪ್ರವಹಿಸುವ ರಹಸ್ಯಗಳೆಲ್ಲವೂ ಅನುಭವ ವೇದ್ಯವಾಗುತ್ತವೆ. ಆ ಅತೀಂದ್ರಿಯ ಪ್ರಪಂಚದ ಅಸ್ಪಷ್ಟ ಸೂಚನೆಗಳು ಕವಿಯ ಹೃದಯದಲ್ಲಿ ಸಾಕಾರವಾಗಿ ಸಾಹಿತ್ಯರೂಪಗೊಂಡು ಸಾರ್ಥಕವಾಗುತ್ತವೆ. ಅವುಗಳನ್ನು ತಿಳಿಯುವುದೂ ಅನುಭವಿಸುವುದೂ ವಾಚಕನ ಭಾಗಕ್ಕೆ ಪುನರ್ಪರಿಚಯವಾದಂತಾಗುವುದಿಲ್ಲ; ನವ ಪರಿಚಯವಾದಂತಾಗುತ್ತದೆ. ಆದ್ದರಿಂದ ಕಾವ್ಯವಾಚಕನಿಗೆ ಸರಸ ಹೃದಯ, ಸಮಾನಾನುಭವ, ಸಹಾನುಭೂತಿ ಇವುಗಳ ಜೊತೆಗೆ ನವಾನುಭವ ಸಾಧನ ಶಕ್ತಿಯೂ, ಎಂದರೆ, ಹಳೆಯ ಅನುಭವಗಳನ್ನು ಮೆಲುಕು ಹಾಕುವ ಶಕ್ತಿಯೊಂದೇ ಅಲ್ಲದೆ ಹೊಸ ಹೊಸ ಅನುಭವಗಳನ್ನೂ ಹೊಸ ಹೊಸ ಅಲೋಚನೆಗಳನ್ನೂ ಬರಮಾಡಿಕೊಳ್ಳುವ ಶಕ್ತಿಯೂ ಇರಬೇಕು. ಇದು ಸಾಧ್ಯವಾಗಬೇಕಾದರೆ ಪುರಾತನದಲ್ಲಿರುವ ಅಂಧ ಪುರಸ್ಕಾರವು ನೂತನದಲ್ಲಿರುವ ಮಂದ ತಿರಸ್ಕಾರವು ಮನಸ್ಸಿನಿಂದ ತೊಲಗಬೇಕು.

ಕಲಾಸುಂದರಿ ಆತ್ಮಾಹ್ಲಾದಕಾರಿಣಿಯೂ ಹೌದು, ಆತ್ಮೋದ್ಧಾರಕಾರಿಣಿಯೂ ಹೌದು: ಎಂಬ ತತ್ತ್ವ ಈ ಕವನಗಳನ್ನೋದುವುದರಿಂದ ಸಹೃದಯಾನುಭವ ಗೊಚರವಾದರೆ ಕವಿಯ ತಪಸ್ಸು ಸಿದ್ಧಿಸಿತೆಂದು ಭಾವಿಸಿ ಸಂತೃಪ್ತನಾಗುತ್ತೇನೆ.

ಕುವೆಂಪು
ಮೈಸೂರು,
೦೯-೦೨-೧೯೩೩.