ಪರಮ ಪುರುಷನದಾವ ಮಹಿಮೆಯ
ಸಾರುತಲೆಯುವೆ, ಮೇಘವೆ?
ಆವ ಪರಮಾನಂದ ನಿಧಿಯಿಂ
ದೇಳುತೆಲ್ಲಿಗೆ ಪೋಗುವೆ?
ಭಾವ ತೋಟದ ಭಕುತಿ ಬೀಜಕೆ
ಹರುಷ ವರುಷವ ಸುರಿಸುತ
ದೇವದೇವನ ದಿವ್ಯಕಾಂತಿಯ
ಹೃದಯದೆಡೆಯೊಳು ಸೂಸುವೆ.

ಗಿರಿಶಿಖರಗಳ ಮೇಲೆ ತೇಲುತ,
ಸಂದಿಸುತ ವರಪುರಗಳ,
ಬಳಲಿ ಬಾಯಾರಿರುವ ಸುಮಗಳಿ
ಗೀಯುತತುಳಾನಂದವ;
ಪಸಲೆ ವನಗಳಿಗೊಲಿದು ನೂತನ
ಜೀವಕಳೆಯನು ತುಂಬುತ,
ವರ ಸರೋವರಗಳಿಗೆ ಧೈರ್ಯವ
ನೀಯುತಲೆಯುವೆ, ಜಲಧರ.

ರವಿಯೆ ಜನಕನು, ಜನನಿ ಶರಧಿಯು,
ಗಗನ ನಿನ್ನಯ ದಾದಿಯು;
ಧರಣಿಯೇ ಸಖಿ, ಕಾನನಂಗಳು
ಹರುಷವೀಯುವ ಗೆಳೆಯರು;
ಮೊಳಗೆ ಕಿಂಕರ, ಚಪಲೆ ಸೇವಕಿ,
ಬರಿಸವೇ ತನುಜಾತನು!
ಇಂದ್ರಚಾಪವೆ ತಂದೆಯೀಯುವ
ಸಪ್ತರಾಗದ ಹಾರವು.

ಉದಯಕಾಲದೊಳರುಣ ಕಾಂತಿಯ
ಬೆಡಗ ಪಡೆಯುತ ಶೋಭಿಪೆ;
ಬೈಗು ಗಗನದಿ ಶೋಣಿತಾಂಬರ
ಧಾರಿಯಾಗುತ ರಂಜಿಪೆ.
ನಲಿವ ಯೌಮುದಿ ನಿನ್ನ ಶೋಭಿಸೆ
ಕವಿಗೆ ಸಂತಸವೀಯುತ
ಪರಮಪುರುಷನ ದಿವ್ಯ ಸೊಬಗಾ-
ನಂದವೆಂಬುದ ತೋರುವೆ.

ಎಳೆಯ ಬಾಲರಿಗೊಲಿದು ಚಿತ್ರಿಪೆ
ನಭದಿ ಅಮರಾವತಿಯನು;
ಬಾಲರೂಹನೆಗಳನು ವಂಚಿಸ
ದಂತೆ ಪಟಗಳ ರಚಿಸುವೆ.
ಒಮ್ಮೆ ಗಜವಾಗೊಮ್ಮೆ ಹರಿಯಾ
ಗೊಮ್ಮೆ ರಕ್ಕಸನಾಗುವೆ;
ಒಮ್ಮೆ ವನವಾಗೊಮ್ಮೆ ಗಿರಿಯಾ
ಗೊಮ್ಮೆ ವಾಹಿನಿಯಾಗುವೆ!

ಬೊಮ್ಮನಿಂದೈತಂದು ಬೊಮ್ಮನೊ
ಳೈಕ್ಯಮಾಗಲು ತೆರಳುವ
ಜೀವನಂದದಿ ಕಡಲಿನಿಂದೈ
ತಂದು ಕಡಲನು ಸೇರುವೆ;
ಒಂಟಿಯಲೆಯುವ ಕವಿಯ ಚೈತ್ಯದ
ತೆರದಿ ಅಮ್ರುತವನೀಂಟುತ
ಧರಣಿಗಿಳಿಯುತ ಕಡಲ ಪಡೆಯುವೆ
ದೇಶ ದೇಶವ ದಾಂಟುತ.

ಪವನ ಮಾರ್ಗದ ಪುಣ್ಯ ಯಾತ್ರಿಕ
ನಿನ್ನ ಕಾಶಿ ಅದಾವುದು?
ಆವ ಪರ್ವತಕೂಟವಭ್ಯಾ-
ಗತನು, ಜಲಧರ, ಪೇಳೆಲೈ?
ಚೈತ್ರಪಲ್ಲವ ಶೋಭಿತಾಶ್ರಮ
ವಾವುದೈ, ಸಂಚಾರಿಯೆ?
ನಿರ್ಮಲಾತ್ಮದ ದಿವ್ಯಯಾತ್ರಿಕ,
ಪುಣ್ಯ್ ಜಲಧರ, ಮಂಗಳಂ

೧೯೨೬