ಹುಟ್ಟಿದೆನೇತಕೊ ನಾನರಿಯೆ;
ಬಾಳುವೆನೇತಕೊ ನಾನರಿಯೆ;
ಸಾಯುವೆನೇತಕೊ ನಾನರಿಯೆ;
ಏನನು ನಾನರಿಯೆ!
ಹುಟ್ಟಿದೆನೆಂಬುದ ನಾ ಬಲ್ಲೆ;
ಬಾಳುವೆನೆಂಬುದ ನಾ ಬಲ್ಲೆ;
ಸಾಯುವೆನದನೂ ನಾ ಬಲ್ಲೆ;
ಇನಿತನು ನಾ ಬಲ್ಲೆ!
ಪ್ರಶ್ನೆಯ ಕೇಳಲು ನಾನೊಲ್ಲೆ;
ಉತ್ತರ ಹೇಳಲು ನಾನೊಲ್ಲೆ;
ಪ್ರಶ್ನೆಗುತ್ತರವ ನಾ ಬಲ್ಲೆ;
ಹೇಳಲರಿಯೆನೊಲ್ಲೆ!
ಅಂತವನಂತವ ಸೇರ್ವಲ್ಲಿ,
ದಾರಿಗಳೆಲ್ಲವು ಸೇರ್ವಲ್ಲಿ,
ದಾರಿಗರೆಲ್ಲರು ಸೇರ್ವಲ್ಲಿ
ನಿಂತಿಹೆ ನಾನಲ್ಲಿ!
ನಾ ನಿಂತಿಹೆನಾನಂದದಲಿ;
ನಾ ನಿಂತಿರುವೆನು ಶಾಂತಿಯಲಿ;
ನಿಂತಿಹೆ ನಚ್ಚಿನ ನೆಚ್ಚಿನಲ್ಲಿ,
ಮೌನದ ಕೆಚ್ಚಿನಲಿ!
ಬಾ, ಬೇಕಾದರೆ ಬಾ ನೋಡು!
ಬಾ, ನೀನೂ ನನ್ನನು ಕೂಡು!
ಬಾ, ವಾದವನಾಚೆಗೆ ದೂಡು!
ಅದು ಮೌನದ ಬೀಡು!
೩೦-೦೫-೧೯೨೯
Leave A Comment