ಯಾವ ಮಹಾಗತಿಗೆನ್ನನು ಕೈಹಿಡಿದನುದಿನ ನಡೆಸುತಿಹೆ?
ಯಾವಾನಂದವನೆನಗಾಗಡಗಿಸಿ ಕರೆಕರೆದೆಳೆಯುತಿಹೆ?
ಭಾವನೆಗಸದಳವಾದ ವಿಮೋಚನವಾವುದನನುಗ್ರಹಿಪೆ?
ಯಾವ ರಹಸ್ಯವನಾವ ರಹಸ್ಯದಿ ಮೋಹಿಸಲೆಳಸುತಿಹೆ?

“ಕೈಬಿಡು ತಾಯೇ” ಎನ್ನುತಲಡಿಗಡಿಗೊರಲುವೆ, ಜಗದಂಬೆ;
ಚುಂಬಿಸುತಡಿಗಡಿಗೆನ್ನನು ಮುಂದಕೆ ಸಾಗಿಪೆ ಸಂತಯಿಸಿ.
ಚುಂಬನದಾ ಮಳೆ ತೋಯಿಸುತೆನ್ನನು ಹರಿಹರಿದೋಡುತಿದೆ,
ಯಾತ್ರಿಕರೆಲ್ಲರು ಬಂದಾ ತೀ‌ರ್ಥದಿ ಮುಳುಮುಳುಗೇಳುವರು.

“ಪೋಗುವುದೆಲ್ಲಿಗೆ ತಾಯೇ” ಎನ್ನಲು “ತವರೂರಿಗೆ” ಎಂದೆ.
ತವರೂರೆಂಬುದದಾವುದು? ನೀನಿರುವೆಡೆಯೇ ತವರೂರು!
ಸುತ್ತಲು ತಿಮಿರವು ಕವಿದಿದೆ; ಬೋರೆಂದನಿಲನು ಘರ್ಜಿಪನು;
ಧಾರಿಣಿಗಗನಳೆರಡನು ಮಾಯೆಯು ಬಂಧಿಸಿದಂತಿಹುದು.

ಭೀಕರಮಾದೀ ನಿರ್ಜನ ದೇಶದೊಳಲ್ಲಿಗೆ ಜನನೀ ಪೋಗುತಿಹೆ?
ಕಂಟಕಶಿಲೆಗಳ ತುಳಿಯುತಲೆಣಿಕೆಗೆ ತಾರದೆ ರೋದನವ
ಯಜ್ಞವದಾವುದನೆನ್ನಿಂದೆಸುಗುವೆ ಪೇಳೌ, ಜಗದಂಬೆ?
ಪರಮರಹಸ್ಯವನುಸುರದೆ ಪರಗತಿಗೆನ್ನನು ನೂಂಕುತಿಹೆ.

ದಾರಿಯ ನಡೆನಡೆದಾಯಾಸದಿ ನಾನೊರಗಲು ಭೂತಳಕೆ
ವಾತ್ಸಲ್ಯದಿ ನೀ ಕರಗಳಲೆತ್ತುವೆಯೆನ್ನನು ಉರದೆಡೆಗೆ!
ಅಹಹಾ! ಲೀಲೆಯದೇನಿದು ತವರೂರತಿದೂರಿದೆಯೆಂಬ,
ತವರೂರನುದಿನ ನಿನ್ನುರವಾಗಿರೆ, ದೇವೀ ಜಗದಂಬೆ?

೧೯೨೬