ಉದಯ ಗಗನದಲಿ ಅರುಣನ ಛಾಯೆ
ಜಗದ ಜೀವನಕೆ ಚೇತನವೀಯೆ
ನಿನ್ನಯ ಗಾನದ ಸುಮಧುರ ಮಾಯೆ
ಬನದಿಂದಂಬರಕೇರುವುದು:
ಕೋರಿಕೆಗಳ ಬಾಯಾರುವುದು.
ಪ್ರಭಾತಮೌನವನೆಚ್ಚರ ಮಾಡಿ
ಕಾಡು ನಾಡುಗಳ ತುಂಬಿ ತುಳುಕಾಡಿ
ಜಗನ್ನಿದ್ರೆಗೆ ಜೋಗುಳ ಹಾಡಿ
ಬ್ರಹ್ಮವನೇ ತೂಗಾಡುವುದು;
ಕ್ರಾಂತಿಗೆ ಶಾಂತಿಯನೂಡುವುದು.

ಓ ವನಗಾಯಕ ವರವಾಗೀಶ,
ನಿನ್ನಾ ಕಾನನ ಕೂಜನ ಪಾಶ
ಕಬ್ಬಿಗನಿಗೆ ಮುಕ್ತಿಯ ಆವೇಶ:
ಸ್ಮರ ಚಾಪಕೆ ನೀ ಸ್ವರಬಾಣ!
ಕೇಳಿದರಲ್ಲದೆ ತಿಳಿಯದು ನಿನ್ನ
ಕಂಠದ ವೈಖರಿ. ತುದಿಯಲಿ ನನ್ನ
ಸಾವಿನ ಬಯಕೆಯು ನಿನ್ನಾ ಗಾನ:
ನಿನಗೆ ನಮೋ ಓ ಕಾಜಾಣ!

೦೩-೦೫-೧೯೩೧