ನಿನ್ನೆಳೆಯ ಮೊಗದಲ್ಲಿ ನಸುಮುಗುಳು ನಗೆಬಳ್ಳಿ
ತಳಿರಿಡಿದು ನಳನಳಿಸಿ ಮೆರೆವವೋಲೆ,
ಹಸುರು ಬನಗಳ ಮೇಲೆ ಹಸುಳೆ ಬಿಸಿಲಿನ ಲೀಲೆ
ಹಸನಾಗಿ ಹಸರಿಸಿದೆ ನೋಡು, ಬಾಲೆ!
ತಿಳಿಬಾನಿನಲಿ ನೀಲಿ, ಕೆನೆಮುಗಿಲ ರಂಗೋಲಿ,
ಬನದ ಹಸುರಿನಲಿ ಕುಸುಮಗಳ ಕೇಳಿ;
ನಿನ್ನ ಕೊರಲಿನ ಇನಿಯ ಬಗೆಯ ಕಡೆಯುವ ದನಿಯ
ಕನ್ನಡಿಸಿ ಕರೆಯುತಿವೆ ಪಕ್ಷಿಯಾಳಿ.
ಬನಗಾಳಿ ಐತಂದು ನಿನ್ನ ಕುರುಳಲಿ ನಿಂದು
ಎದೆಯ ಕದಿಯುವ ತೆರದಿ ಬೀಸುತಿಹುದು;
ಪೃಥುಲ ಪಲ್ಲವ ಸಿಂಧು ಪ್ರಥಮ ವರ್ಷದಿ ಮಿಂದು
ಜಲಬಿಂದು ಮಣಿಗಳನು ಸೂಸುತಿಹುದು.

*  *  *

ನೀನು ಸುಂದರಿ ಎಂಬುದನು ನಾನು ಬಲ್ಲೆ,
ಆದರೂ ನಿನ್ನಿಚ್ಛೆಯನು ಸಲಿಸಲೊಲ್ಲೆ.
ಸೌಂದರ್ಯಕಿಂತಲೂ ಸೌಶೀಲ್ಯ ಹೆಚ್ಚು!
ತಿಳಿದು ತಿಳಿಯಾದುದೌ ನನ್ನೊಲ್ಮೆ ಹುಚ್ಚು!

೨೬-೦೫-೧೯೩೨