ನುಡಿದು ನುಡಿದು ಮೂಕನಾದೆ;
ನೋಡಿ ನೋಡಿ ಕುರುಡನಾದೆ.
ನುಡಿಯುತಿರಲು ನುಡಿದುದೆಲ್ಲ
ನುಡಿಯ ಮೀರಿದೆ.
ನೋಡೆ ನೋಡೆ ಕಂಡುದೆಲ್ಲ
ಕರಗಿ ಹಾರಿದೆ!

ನಡೆಯಲಿಳಿಯೆ ಕರಗಿಹೋಯ್ತು,
ತಿಳಿಯಲರಿವೆ ಬಂಜೆಯಾಯ್ತು.
ಕಲ್ಲು ಮಣ್ಣು ಜಡವದೆಲ್ಲ
ಜೀವವಾಗಿದೆ.
ಮನದ ವರ ವಿಮರ್ಶೆಯೆಲ್ಲ
ಭಾವವಾಗಿದೆ.

ಬೆಟ್ಟಗಿಟ್ಟ ಬಂಡೆಗಿಂಡೆ
ಕುಟ್ಟಲೆಲ್ಲ ಹಿಟ್ಟನುಂಡೆ!
ಮುಟ್ಟಲೊಡೆನೆ ಗುಳ್ಳೆಯಂತೆ
ಪೊಳ್ಳು ಹೋಗಿದೆ!
ಗಟ್ಟಿ ನನ್ನಿ ಕನಸಿನಂತೆ
ತೆಳ್ಳಗಾಗಿದೆ!

ಕನಸುಗಳನು ಕಡಿಯಲೆಂದು
ಹಿಡಿದ ಕೊಡಲಿಯೆ ಕನಸಿಂದು;
ಶಕ್ತಿ ಜಲಧಿಯೊಳು ತರಂಗ –
ಭಂಗವಾಗಿದೆ!
ವಿದ್ಯುದಣುಗಳೆದ್ದು ಕುಣಿವ
ರಂಗವಾಗಿದೆ!

ಬೆಳಕು ಬರಲು ಕತ್ತಲಾಯ್ತು,
ತಿಳಿಯಲರಿವುಗೆಟ್ಟುಹೋಯ್ತು.
ಜಾನಗೇಡೆ ಜಾನಕೆಲ್ಲ
ಪರಮಸಿದ್ಧಿಯು!
ಬುದ್ಧಿಯಳಿವೆ ತಿಳಿದು ನೋಡೆ
ಬುದ್ಧ ಬುದ್ಧಿಯು!

ಸಾಯದೆಂದು ಕಲ್ಲನೊಡೆಯೆ,
ನೋಯದೆಂದು ಮರವ ಕಡೆಯೆ,
ಕಲ್ಲು “ನಿದ್ದೆಗೆಡೆಸಬೇಡ!”
ಎಂದು ರೇಗಿತು!
ಮರವು “ಕನಸನೊಡೆಯಬೇಡ!”
ಎಂದು ಕೂಗಿತು!

ವಿದ್ಯುದಣುಗಳೆದೆಯ ಮಧ್ಯೆ
ವಿಲಯ ಮಾಡುತಿಹುದು ನಿದ್ದೆ.
ಕಡಲ ಕುಡಿವಗಸ್ತ್ಯಶಕ್ತಿ
ಹನಿಯೊಳಡಗಿದೆ!
ಪೊಡವಿಯೊಡೆವ ಸಿಡಿಲ ಶಕ್ತಿ
ಹುಡಿಯ ಹೊಡೆಗಿದೆ!

ನನ್ನ ಈ ಪರೀಕ್ಷೆಮನೆಗೆ
ಗುಡಿಯ ಪಟ್ಟವಾಯ್ತು ಕೊನೆಗೆ:
ಮೂಲಬೀಜಸೂತ್ರವೆಲ್ಲ
ಮಂತ್ರವಾಗಿವೆ!
ಕಂಡು ಹಿಡಿದ ಯಂತ್ರವೆಲ್ಲ
ತಂತ್ರವಾಗಿವೆ!

ನನ್ನ ಕರಣ ಕುಸುಮವಾಯ್ತು;
ನನ್ನ ಕಾರ್ಯ ಪೂಜೆಯಾಯ್ತು!
ಬಿಟ್ಟ ಗುಡಿಗೆ ಕಟ್ಟಕಡೆಗೆ
ಮರಳಿ ಬಂದಿಹೆ!
ಅಂದು ತೊರೆದ ದೇವರೆದುರೆ
ಇಂದು ನಿಂದಿಹೆ!

೧೧-೦೯-೧೯೩೧