ಅರಿಯದೂರ ಗಿರಿಗಳಲ್ಲಿ
ತಿರುಗಿಯಲೆದು ಬರುತಲಿದ್ದೆ;
ಇದ್ದಕಿದ್ದಹಾಗೆಯೊಂದು
ನೋಟವೆನ್ನ ಕಣ್ಗೆಬಿತ್ತು;
ಬೆಚ್ಚಿಬಿದ್ದು ನಿಂತೆನು!
ಸೂರ್ಯಚಂದ್ರರಿಬ್ಬರಲ್ಲಿ
ಉದಯವಾಗುತಿದ್ದರು!
ಹಗಲು ರಾತ್ರಿಯೆರಡು ಅಲ್ಲಿ
ಕಲೆತು ರಮಿಸುತಿದ್ದುವು!
ಕಾಲ, ದೇಶ, ನಾಕ, ನರಕ,
ದುಃಖಸುಖಗಳೆಲ್ಲ ಸೇರಿ
ಚನ್ನೆಯಾಡುತಿದ್ದುವು;
ಋತುಗಳೆಲ್ಲ ನಿಯಮವಗಲಿ
ಕೂಡಿಯಾಳುತಿದ್ದುವು!
ಗಿರಿಯ ಹಸುರಿನೋರೆಯಲ್ಲಿ
ಮರಿಗೆ ಮೊಲೆಯನೂಡುತಿದ್ದ
ಕುರಿಯನೊಂದ ಕಂಡೆನು!
ಅನತಿ ದೂರದಲ್ಲಿಯೊಂದು
ಅರೆಯ ಮೇಲೆ ಕುಳಿತು, ಮರಿಗೆ
ಮೊಲೆಯ ಕೊಡುತಲ್ಲಿದ್ದ ಕುರಿಯ
ನಟ್ಟದಿಟ್ಟಯಿಂದ ನೋಡು-
ತಿದ್ದ ನರನ ಕಂಡೆನು!
ಮತ್ತೆ ನೋಡಲಲ್ಲಿ ಕುಳಿತ
ವ್ಯಕ್ತಿಯಲ್ಲಿ ಶಂಕರಾರ್ಯ
ಯೋಗಿವರನ ಕಂಡೆನು!
ತತ್ತ್ವವೇತ್ತನೊಬ್ಬನಲ್ಲ-
ದಲ್ಲಿ ಯಾರು ಇರಲೆ ಇಲ್ಲ;
ನಿಬಿಡವನಗಳಿಂದ ಮೆರೆವ
ದಟ್ಟವಾದ ಬೆಟ್ಟಗುಡ್ಡ-
ದೋಳಿ ಅಲ್ಲಿ ರಂಜಿಸಿತ್ತು;
ಪ್ರಕೃತಿ ರಮೆಯ ನಗ್ನ ವಿಭವ
ಮನಮೋಹಿಸಿದ್ದಿತು!
ಶಂಕರಾರ್ಯನನ್ನು ನೋಡಿ
ಉಬ್ಬಿ ನಲಿಯಿತೆನ್ನ ಹೃದಯ;
ಆದರಲ್ಲಿ ಮರಿಗೆ ಮೊಲೆಯ
ಕೊಡುತಲಿದ್ದ ಕುರಿಯ ಕಂಡು
ಇನ್ನೂ ಹೆಚ್ಚು ನಲಿಯಿತು!

ಬ್ರಹ್ಮ ನಾನು, ಶಿವನು ನಾನು,
ಲೋಕವೆಲ್ಲ ಬರಿಯ ಮಾಯೆ,
ಎಂದು ಜಗಕೆ ಬೋಧಿಸಿದ್ದ
ಪರಮ ತತ್ತ್ವವೇತ್ತನಲ್ಲಿ
ಮೊಲೆಯನುಣ್ಣುತಿದ್ದ ಕುರಿಯ
ಮುದ್ದುಮರಿಯನೊಲುಮೆಯಿಂದ
ನೋಡುತಿದ್ದುದನ್ನು ಕಂಡು
ಎದೆಯು ನಲಿದು, ಏಕೊ? ಏನೊ?
ಕಣ್ಣಗಂಗೆ ಕೆನ್ನೆಯನ್ನು
ತೊಯ್ದು ಹರಿದು ಹೋಯಿತು!
ಮೋಹವೆಂಬ ತೃಣದ ಕಣವ
ಜ್ಞಾನದಗ್ನಿಯಲ್ಲಿ ದಹಿಸಿ
ಯೋಗಿಯಾದ ಪರಮಗುರುವು
ಕುರಿಯ ಮರಿಯ ಮೋಹದಿಂದ
ನೋಡುತಿದ್ದುದನ್ನು ಕಂಡು
ನಯನದೊರತೆಯೊಡೆದು, ನೀರು
ಸುರಿದು ಹರಿದು ಹೋಯಿತು!

ಪೂತ ಪೊದೆಯೊಳಡಗಿ ನಾನು
ಮಹಿಮೆ ಮಯದ ನೋಟವನ್ನು
ನೋಡಿ ನಲಿದೆನು!
ಕಲ್ಪವೆನಿತು ಜಾರಿಹೋದು
ವೆಂಬುದನ್ನು ಅರಿಯೆ ನಾನು;
ನೋಡಿ ನಲಿದೆನು.
ಸೃಷ್ಟಿ ಮೊಳೆತು ವಿಲಯದಲ್ಲಿ
ಲಯದೊಳಳಿದುದು;
ಮತ್ತೆ ಚಿಗುರಿ ಪೂತು ಕಾತು
ಫಲಿಸಿ ಮೆರೆದುದು!
ಬ್ರಹ್ಮರೆನಿತು ಪೀಠದಿಂದ
ಇಳಿದು ಹೋದರರಿಯೆ ನಾನು:
ನೋಡಿ ನಲಿದೆನು – ನೆರೆ
ಪಾಡಿಯೊಲಿದೆನು;
ಕುರಿಯು ಅಲ್ಲಿ ನಿಂತೆ ಇತ್ತು,
ಮರಿಯು ಹಾಲನುಣ್ಣುತ್ತಿತ್ತು;
ಕಲ್ಲಮೇಲೆ ಶಂಕರಾರ್ಯ
ಕುಳಿತು ನೋಡುತಿದ್ದನು,
ತಲೆದೂಗುತಿದ್ದನು!
ಕವಿಯು ನಾನು ಪೂದೆಯೊಳಡಗಿ
ನಿಂತು ನೋಡುತಿದ್ದೆನು; – ಮೈ
ಮರೆತು ನೋಡುತಿದ್ದೆನು.
ಏತಕಂತು ನೋಡುತಿದ್ದೆ
ಎಂಬುದನ್ನು ಅರಿಯೆನು;
ಅಂತು ನೋಡುತಿದ್ದುದನ್ನು
ಮಾತ್ರ ಎಂದು ಮರೆಯೆನು.
ನಾನೆಂದು ಮರೆಯೆನು!

ಇದ್ದಕಿದ್ದ ಹಾಗೆಯೊಂದು
ವೇದಘೋಷ ಕೇಳಿಬಂತು;
ಬೆರಗಿನಿಂದ ಮೈಯ ಮರೆತೆ
ಮಧುರನಾದವನ್ನು ಕೇಳಿ;
ಮೊಲೆಯ ಕೊಡುತಲಿದ್ದ ಕುರಿಗೆ
ಹಾಲನುಣ್ಣುತಿದ್ದ ಮರಿಗೆ
ಗುರುವು ಶಂಕರಾರ್ಯನಿಂತು
ಮುದ್ದಿನಿಂದ ನುಡಿದನು – ನೆರೆ
ಯಿಂಪುದೋರಿ ನುಡಿದನು!
ಹೃದಯ ತಲ್ಲಣಿಸಿತು ಗುರುವಿ
ನಮರದನಿಯನಾಲಿಸಿ! – ವರ
ವೇದವಾಣಿಯಾಲಿಸಿ!
ತತ್ತ್ವವೇತ್ತ ನುಡಿದುದೇನು?
ಆರ್ಯವರ್ಯನೆಂದುದೇನು?
ಬ್ರಹ್ಮ ನಾನು ಎನ್ನಲಿಲ್ಲ,
ಲೋಕ ಮಾಯೆ ಎನ್ನಲಿಲ್ಲ;
ಪ್ರೇಮ ಮೋಹವಿವುಗಳೆಲ್ಲ
ದುಷ್ಟವೆನ್ನಲಿಲ್ಲವು – ಸಲೆ
ಕಷ್ಟವೆನ್ನಲಿಲ್ಲವು!
ವೇದಮಂತ್ರ ಹೇಳಲಿಲ್ಲ;
ಉಪನಿಷತ್ತನುಸುರಲಿಲ್ಲ!
ಪ್ರೇಮದಿಂದ ಕುರಿಯ ಮರಿಯ
ಕಂಡು, ಮನವ ಮೋಹಿಪಂಥ
ಹಳ್ಳಿ ಜನರ ಮುದ್ದು ಹಾಡ-
ನೊಂದ ಹಾಡಿದ – ನಲಿ
ದಾಡಿ ಹಾಡಿದ!
ಶಿಷ್ಯರೊಬ್ಬರಲ್ಲಿ ಇಲ್ಲ;
ಗುರುವು ಎಂಬ ಹೆಮ್ಮೆ ಇಲ್ಲ;
ಹಾಡಿ ಹಾಡಿ ಹಿಗ್ಗಿದ – ನಲಿ
ದಾಡಿಯಾಡಿ ಹಿಗ್ಗಿದ!
ಅಂದು ತಾನು ಕಠಿನ ತಪದ
ಕಟ್ಟೆ ಕಟ್ಟಿ ಬಂಧಿಸಿದ್ದ
ಮೋಹ ಭಾವರಸಗಳೊರತೆ
ಏರಿಯೊಡೆದು ರಭಸದಿಂದ
ಹರಿ ಹರಿದು ಹೋಯಿತು – ಸುರಿ
ಸುರಿದು ಹೋಯಿತು:
“ಮೊಲೆಯನೂಡು, ಊಡು ಕುರಿಯೆ!
ಹಾಲನುಣ್ಣು, ಉಣ್ಣು ಮರಿಯೆ!
ನೋಡಿ ನಲಿವೆನು – ನಾ
ನೋಡಿ ನಲಿವೆನು!
ಬ್ರಹ್ಮತನವ ಪಡೆಯಲೆಂದು
ಬ್ರಹ್ಮಹರ್ಷಕೆಳಸಿ ನಾನು
ಮುಗುದ ಹರುಷವರಿಯೆನು – ಸಂ
ತಸದ ಉರಿಯನರಿಯೆನು!
ನಿಮ್ಮ ನೋಡಿ ನಲಿವೆನೈ – ಕೂ
ಡಾಡಿ ನಲಿವೆನೈ!
ಹಾಡಿಹಾಡಿ ನಲಿವೆನೈ – ನಲಿ
ದಾಡಿಯೊಲಿವೆನೈ!
ಮೊಲೆಯನೂಡು, ಊಡು ಕುರಿಯೆ,
ಹಾಲನುಣ್ಣು, ಉಣ್ಣು ಮರಿಯೆ;
ನೋಡಿ ಹಾಡಿ ನಲಿವೆನು!
ನೀನು ಮೊಲೆಯನೂಡಲೆಂದು,
ಮರಿಯು ಹಾಲನುಣ್ಣುಲೆಂದು,
ನಾನು ನಿಮ್ಮ ನೋಡಲೆಂದು
ಬೊಮ್ಮ ಜಗವ ರಚಿಸಿದ!
ಇದಕೆ ರಾಮ ಜಗದಿ ಜನಿಸಿ
ರಕ್ಕಸರನು ಕೊಂದು ಹೋದ;
ಇದಕೆ ಹುತ್ತವೊಡೆದು ಬಂದ
ವ್ಯಾಧಋಷಿಯು ಬರೆದನು – ವರ
ವೇದವ್ಯಾಸನೊರೆದನು!
ಇದಕೆ ಕೃಷ್ಣನುದಯವಾಗಿ
ಕುರುಕ್ಷೇತ್ರ ಕದನದಲ್ಲಿ
ಗೀತೆಯನು ಹಾಡಿದ – ಗೋ
ಪಾಲನಾಗಿಯಾಡಿದ!
ನೀನು ಮೊಲೆಯನೂಡಲೆಂದು,
ಮರಿಯು ಹಾಲನುಣ್ಣಲೆಂದು,
ನಾನು ನೋಡಿ ನಲಿಯಲೆಂದು,
ಬುದ್ಧದೇವ ಜನಿಸಿದ!
ಇದಕೆ ಚಾಗ, ಇದಕೆ ಯೋಗ,
ಇದಕೆ ಉಪನಿಷತ್ತು, ವೇದ;
ಇದಕೆ ಸೂರ್ಯ, ಇದಕೆ ಚಂದ್ರ,
ಇದಕೆ ತಾರೆಯಾವಳಿ!
ಇದನೆ ಮಾಯೆ ಎಂದು ಕರೆದೆ,
ಇದನೆ ಮಾಯೆ ಎಂದು ಬರೆದೆ;
ಇದಕೆ ಬರೆದೆ, ಇದಕೆ ಬರೆದೆ,
ಬ್ರಹ್ಮಸೂತ್ರ ಭಾಷ್ಯವ!
ನೀನು ಮೊಲೆಯನೂಡಲೆಂದು,
ಮರಿಯು ಹಾಲ ಕುಡಿಯಲೆಂದು,
ನಾನು ನೋಡಿಯುಲಿಯಲೆಂದು,
ಶಂಕರಾರ್ಯನಾದೆನು!
ಮೊಲೆಯನೂಡು, ಊಡು ಕುರಿಯೆ,
ಹಾಲನುಣ್ಣು, ಉಣ್ಣು ಮರಿಯೆ,
ನೋಡಿ ನಲಿಯೊ, ಶಂಕರ!
ನಿಮ್ಮನೆಲ್ಲ ನೋಡಿ ನಲಿವೆ
ಮಾಯೆಯೊಡನೆ ಆಡುತ!”

ಪರಮ ಗುರುವ ದಿವ್ಯವಾಣಿ
ವಿಶ್ವಗರ್ಭದಲ್ಲಿ ಮೊರೆದು
ಅಡಗಿ ಮೌನವಾಯಿತು!
ಅರಿಯದೂರ ಗಿರಿಯ ಶಿಖರ
ರವ ವಿಹೀನವಾಯಿತು!
ಎನ್ನ ಎದೆಯು ಕಂಪಿಸಿತ್ತು;
ಕಣ್ಣ ನೀರು ಸುರಿಯುತಿತ್ತು;
ಕುರಿಯು ಮೊಲೆಯ ಕೊಡುತಲಿತ್ತು;
ಮರಿಯು ಹಾಲ ಕುಡಿಯುತಿತ್ತು;
ಶಂಕರಾರ್ಯನವುಗಳನ್ನು
ನೋಡುತಿದ್ದನು!
ಕಣ್ಣು ತೆರೆದೆ! ಬರಿಯ ಕನಸು!
ಅರಿಯದೂರ ಗಿರಿಯು ಇಲ್ಲ!
ಕುರಿಯು ಇಲ್ಲ; ಮರಿಯು ಇಲ್ಲ!
ಗುರುವು ಶಂಕರಾರ್ಯನಿಲ್ಲ!
ನಾನು ಅಡಗಿದಂಥ ಪೊದೆಯು
ಮಾಯವಾಗಿ, ಶಯನವಾಗಿ
ಅಲ್ಲಿ ಹೊರಳುತಿದ್ದೆನು!
ಹೊತ್ತು ಮೂಡಿ ಕಿಟಕಿಯಿಂದ
ಕಿರಣದೂತರೋಡಿ ಬಂದು
ಕರೆಯುತಿದ್ದರೆನ್ನನು!
ದೂರದಲ್ಲಿ ಹಕ್ಕಿಯೊಂದು
ಉದಯರಾಗದಿಂಪ ಬೀರಿ
ಕರೆಯುತಿದ್ದಿತೆನ್ನನು!

೨೩-೦೭-೧೯೨೭