ವ್ಯೋಮ ಮಂಡಿತ ಸಹ್ಯಶೈಲಾಗ್ರದಡವಿಯಲಿ
ಸಂಚರಿಸುತಿರೆ, ಸಂಜೆ ಪಶ್ಚಿಮ ದಿಗಂತದಲಿ
ಕೆನ್ನಗೆಯ ಬೀರಿತ್ತು. ರವಿ ಮುಳುಗುತಿರ್ದಂ;
ಅಸ್ತಗಿರಿ ಚೂಡಸ್ಥ ತಪ್ತ ಬಿಂಬಾರ್ಧಂ
ರಕ್ತಸಿಕ್ತಾಂಬರದ ಹೇಮ ಜೀಮೂತದಲಿ
ಮಿಂಚಿನಂಚನು ನೆಯ್ದು, ರಕ್ತಕಾಂತಿಯ ಹೊಯ್ದು,
ಶೋಭಿಸಿತು. ಸಂಧ್ಯೆಯಾ ಶೋಣಿತ ಸ್ರೋತದಲಿ
ಮಿಂದ ಮುಗಿಲೆಸೆದತ್ತು. ಪೂರ್ವಯುಗದಲಿ ಪಿಂತೆ
ರಕ್ಕಸನ ಹೀರ್ದ ನರಹರಿಯ ನಾಲಗೆಯಂತೆ!
ಬೈಗುಗೆಂಪನು ಹೊದೆದ ಬಿತ್ತರದರಣ್ಯಂ
ಪರ್ವತಧ್ಯಾನದಲಿ ಮುಳುಗಿತ್ತು. ಧನ್ಯಂ
ನಾನೆಂದು ತೇಲುತಿರೆ ಸೌಂದರ್ಯಪೂರದಲಿ,
ಯಾವುದೋ ಭವ್ಯತರ ಸಾನ್ನಿಧ್ಯಭಾರದಲಿ,
ಕೇಳಿಸಿತು ದನಿಯೊಂದು; ಕಾಣಿಸಿತು ದೂರದಲಿ
ಶಿಲೆಯೊಂದು ಮೊರಡಾದ ಮನುಜನಾಕಾರದಲಿ.
ಆ ಶಿಲಾ ಶೈಲತಪಸಿಯು ಕರೆಯುತೆನ್ನಂ
ನುಡಿದುದಿಂತೆಂದು: ಓ ಕಬ್ಬಿಗನೆ, ತನ್ನಂ
ಕಲ್ಲು ಕರೆಯಿತು ಎಂದು ಬೆಚ್ಚದಿರು. ಮುನ್ನಂ,
ಶತಶತ ಸಹಸ್ರ ಶತಮಾನಗಳ ಮುನ್ನಂ
ನಾವಿರ್ವರೊಂದೆ ಬಸಿರಿಂ ಬಂದು ಲೀಲೆಯಲಿ
ಮುಳುಗಿದೆವು ಸಂಸಾರ ಮಾಯಾಗ್ನಿ ಜ್ವಾಲೆಯಲಿ.
ನೀನು ಮರೆತಿರಬಹುದು, ಚೇತನದ ಸುಖದೊಳಿಹೆ;
ನಾನು ಮರೆತಿಲ್ಲದನು, ಜಡತನದ ಸೆರೆಯೊಳಿಹೆ!

ಆ ಕಲ್ಲುಕಿತ್ತಡಿಯ ಹೊರೆಗಾಗಿ ನಡೆಯುತ್ತೆ
ನಿಂತೆನಾಶ್ಚರ್ಯದಲಿ. ಮೂರುತಿಯು ನುಡಿಯುತ್ತೆ
ನುಡಿಯುತ್ತೆ ಕಣ್ಣೀರು ಕರೆವುದನು ಕಂಡೆ:
ಹರಳುಗಂಬನಿಯುರುಳಿಸಳುತಿತ್ತು ಬಂಡೆ!
ನೋವೆಲ್ಲ ಹೊನಲು ಹರಿವಂದದಲಿ ವಾಣಿ
ತುಂಬಿತಾಕಾಶವನು; ಗಿರಿವನಶ್ರೇಣಿ
ಮರುಗಿದುದು ಮೌನದಲಿ ಅನುಕಂಪವನು ತೋರಿ.
ಅಸ್ತಮಿಪ ಬೆಳಕಿನಲಿ ದೀರ್ಘಛಾಯೆಯ ಬೀರಿ
ಬಳಿಯ ಮರಗಳು ನಿಂತುವಾಲೈಸಿ. ನಿಂತು
ಕೇಳುತಿರಲಾ ಕಲ್ಲು ಮುಂಬರಿಯಿತಿಂತು:
ಕಾಲವಲ್ಲಿರಲಿಲ್ಲಿ; ದೇಶವಲ್ಲಿರಲಿಲ್ಲಿ;
ಗ್ರಹಕೋಟಿ ಶಶಿಸೂರ್ಯ ತಾರಕೆಗಳಿರಲಿಲ್ಲ;
ಬೆಳಕು ಕತ್ತಲೆ ಎಂಬ ಭೇದವಿನಿತಿರಲಿಲ್ಲ.
ಮಮಕಾರ ಶೂನ್ಯದಲಿ ಮುಳುಗಿದ್ದುವೆಲ್ಲ!
ಮೂಡಿದುದು ಮೊದಲು ಮಮಕಾರವೆಂಬುವ ಮಾಯೆ;
ಬೆಂಕೊಂಡು ತೋರಿದುದು ಸೃಷ್ಟಿ ಎಂಬುವ ಛಾಯೆ.
ಕಾಲದೇಶದ ಕಡಲ ಕಡೆಹದಲಿ ಸಿಕ್ಕಿ
ಆದಿಮ ಲಯಾಗ್ನಿ ಹೊರಹೊಮ್ಮಿದುದು. ಉಕ್ಕಿ
ಸುತ್ತಿದುದು; ಚಿಮ್ಮಿದುದು ದೆಸೆದೆಸೆದೆಸೆಗೆ ಹಬ್ಬಿ
ಘೂರ್ಣಿಸುತೆ ವಿಶ್ವದ ಅನಂತತೆಯನೇ ತಬ್ಬಿ.
ಓ ಕವಿಯೆ, ಆ ಭೀಷ್ಮ ಲಯಶಿಖಿ ಪ್ರವಾಹದಲಿ,
ನಿದ್ದೆಯಿಂದೆದ್ದಾ ಪರಬ್ರಹ್ಮದೇಹದಲಿ,
ಆ ಮಹಾ ಉಜ್ವಲ ಪ್ರೇಮ ಘನವಹ್ನಿಯಲಿ,
ಸದ್ಯಃಪ್ರಫುಲ್ಲ ಕಲ್ಪಾದಿ ಪ್ರತಿಭೆಯಲ್ಲಿ
ಕನಸಿನಲಿ ಸಂಚರಿಪ ಚಿತ್ರಸಂಕುಲದಂತೆ,
ಮಂಥನದಿ ಮೂಡಿಬಹ ಜಲಬುದ್ಬುದಗಳಂತೆ,
ಕವಿಮನದಿ ಮಿಂಚಿಬಹ ಭಾವಮಂಜರಿಯಂತೆ,
ಮರುಮರೀಚಿಕೆಯಲ್ಲಿ ನರ್ತಿಸುವಲೆಗಳಂತೆ,
ವೈಣಿಕನ ಸ್ವರ ಸ್ವರ್ಗ ಸೋಪಾನ ಶ್ರೀಯಂತೆ
ಆ ವಿಶ್ವಕಾವ್ಯದಸ್ಪಷ್ಟ ಪೂರ್ಣತೆಯಲ್ಲಿ,
ಸ್ಪಷ್ಟವ್ಯಕ್ತಿತ್ವದಾಕಾಂಕ್ಷೆಯಿಂ, ನಿಂದಲ್ಲಿ
ನಿಲದೆ ಸಂಚರಿಸಿದೆವು ಆ ಅಗ್ನಿಜಲದಲ್ಲಿ:
ನೋಡಿನ್ನುಮಿರ್ಪುದಾ ಕಲೆ ನನ್ನ ಎದೆಯಲ್ಲಿ!

ಮೌನದಲಿ ನಿಂತಾ ಮಹಾಚಲಶ್ರೇಣಿ
ಆಲಿಸಿತು ತನಗದು ಪ್ರತಿನಿಧಿಯ ವಾಣಿ
ಎಂಬಂತೆ. ಭೀಮಗಿರಿ ಶಿಖರಗಳ ಕರಿನೆರಳು
ಹೊನಲಾಗಿ ಹರಿದುದು ಕಣಿವೆಯೊಳಗೆ. ಮುನ್ನಿರುಳು
ಮೆಲುಮೆಲನೆ ನಾಡನಾಲಿಂಗಿಸಿತು. ಸದ್ದು
ಕರಗುತಿದ್ದುದು ನಿದ್ದೆಗಡಲಿನಲಿ ಬಿದ್ದು.
ಭೂಗೋಲ ಭೀಮ ಛಾಯಾ ಸ್ತೂಪ ಚೂಡಂ
ಆಕಾಶದೇಶದಲಿ ಕರಿದೆರೆಯ ಬೀಡಂ
ತಿಮಿರರಾಣಿಗೆ ರಚಿಸಿದತ್ತು; ಪಟಶಾಲೆಯಲಿ
ತಾರೆಗಳ ಕೆತ್ತತೊಡಗಿತು ಮಾಲೆಮಾಲೆಯಲಿ!
ನೋಡೆಂದು ಶಿಲೆಯು ಬೆಸಗೊಳೆ ನೋಡಿ ಬೆಚ್ಚಿದನು;
ಕಲ್ಪಾದಿಯಗ್ನಿಯನು ಕಂಡು ಕಣ್ ಮುಚ್ಚಿದೆನು!
ಆ ಸನಾತನ ಶೈಲತಪಸಿಯೆದೆಯಾಳದಲಿ
ಯುಗಯುಗಗಳಿನ್ನುಮವಿತಿಹವಲ್ಲಿ. ನಾಳದಲಿ
ನಾಳದಲಿ ಕಲ್ಪಗಳು ಆತ್ಮಕಥೆ ಹೇಳುತಿವೆ;
ಹಿಂದುಮುಂದೊಂದರಿಯದಿಂದಿನೊಳೆ ಬಾಳುತಿವೆ
ಕಾಲದೇಶಾದಿ ಪರಿಣಾಮ ಕೋಟಿಗಳಲ್ಲಿ.
ಮರಳಿ ನುಡಿ ತೊಡಗಿತಿಂತಾ ಶಿಲೆಯ ಸೆರೆಯಲ್ಲಿ:

ಇಂತಿರಲು, ನೀರಿನಲಿ ತೇದ ಮಿಂಚಿನ ತೆರದಿ,
ಬಂಧನವ ಹರಿಯಲೆಳಸುವ ಕೇಸರಿಯ ತೆರದಿ,
ಹರಿದು ಭೋರಿಡುವ ಆ ಅಗ್ನಿಪ್ರವಾಹಂ
ದಿಕ್ಕುದಿಕ್ಕಿಗೆ ಸಿಡಿದೊಡೆದು, ದೇಶದೇಹಂ
ಗಹಭೂಮಿ ಶಶಿಸೂರ್ಯ ತಾರಾಖಚಿತಮಾಯ್ತು.
ನನಗೆ ಈ ಭೂಗರ್ಭವೇ ಸೆರೆಯ ಮನೆಯಾಯ್ತು!
ಕಲ್ಪಕಲ್ಪಗಳಿಂದ ನಾನಲ್ಲಿ ಸೆರೆಯಾಗಿ
ನರಳಿದೆನು ಕತ್ತಲಲಿ. ಜ್ಯೋತಿದರ್ಶನಕಾಗಿ
ಮೊರೆಯಿಟ್ಟು ಕೂಗುತಿರೆ, ಕಲ್ಲೆನಗೆ ಮೈಯಾಗಿ
ಕಡೆಗಿಲ್ಲಿ ನೆಲೆಸಿದೆನು. ಇರೆಯಿರೆ ಕ್ರಮವಾಗಿ
ನನ್ನ ಸೋದರರೆಲ್ಲ ಮರಗಿಡಗಳಂದದಲಿ
ಮೂಡಿದರು; ಉಸಿರೆಳೆದು ಬೆಳೆಬೆಳೆದು ಚಂದದಲಿ
ನಲಿದಾಡಿದರು; ಕೆಲರು ಸ್ವಪ್ನವನು ಸೀಳಿ
ತಿರುಗಾಡಿದರು ಪ್ರಾಣಿರೂಪವನು ತಾಳಿ;
ಮೆಲಮೆಲ್ಲನೆ ಕೆಲರು ನರರಾಕೃತಿಯ ತಳೆದು
ತಪ್ಪು ಹಾದಿಯೊಳೆನಿತೊ ಶತಮಾನಗಳ ಕಳೆದು
ನಾಗರಿಕರಾದರೈ ಬುದ್ಧಿಶಕ್ತಿಯ ತೋರಿ!
(ಹಾ! ದೂರವಿಹುದಿನ್ನುಮೆನಗೆ ನಡೆಯುವ ದಾರಿ!)
ಗಗನದಲಿ ಕಾಣುವಾ ತಾರೆಗಳಲೆಲ್ಲಿಯೂ
ತಿರುಗಿಹೆನು; ಆದರೇನವುಗಳಲಿ ಎಲ್ಲಿಯೂ
ಕ್ರಿಮಿಯೊಂದರಲ್ಲಿರುವ ಚೇತನದ ಕಣವಿಲ್ಲ;
ಸ್ವೇಚ್ಛೆಯೆಂಬುವುದಿಲ್ಲ; ಕಡೆಗೊಂದು ತೃಣವಿಲ್ಲ!
ಈ ಭೂಮಿಯೊಂದು ಕ್ರಿಮಿ ಕ್ಷಣಜೀವಿಯಾದರೂ
ತಾರೆಗಳ ಮೀರಿಹುದು: ಯುಗಜೀವಿಯಾದರೂ
ತನ್ನಿಚ್ಛೆ ಏನೆಂಬುದರಿಯದಿಹ ದಾಸ್ಯಂ
ಸಾವಿಗೆಣೆ. ನೇಸರ್ಗೆ ಕ್ರಿಮಿಗಿರಿದ ದಾಸ್ಯಂ!
ಎಲ್ಲ ಜಡತೆಯ ಬಯಕೆ ಚೈತನ್ಯಸಿದ್ಧಿಯೈ.
ಈ ರಹಸ್ಯವನರಿತ ಮಾನವನೆ ಬುದ್ಧನೈ! –

ಆ ಶಿಲಾತಪಸಿಯುಪದೇಶವನು ಕೇಳುತ್ತೆ
ನಿಷ್ಟಂದನಾದೆನಾವೇಶವನು ತಾಳುತ್ತೆ.
ಶಿಲೆಯೆ ಕವಿ; ಕವಿಯೆ ಶಿಲೆ; ಅದೆ ತತ್ವಬೋಧೆ!
ಕಲ್ಲೆನಗೆ ಗುರುವಾಯ್ತು; ನಾ ಶಿಷ್ಯನಾದೆ.
ಮೇಲೆ ನಭದಲಿ ತಾರೆ ಸಾಕ್ಷಿಕಾಂತಿಯ ಬೀರಿ
ಮಿಣುಕಿದುವು. ಕೆಳಗೆ ಕತ್ತಲು ಸಂಶಯವ ತೋರಿ
ಮುಸುಗಿತ್ತು. –

ಓ ಕಬ್ಬಿಗನೆ, ಸೋದರನೆ ಕೇಳು:
ನಾನು ಈ ಕಲ್ಲಿನಲ್ಲಿ ಸೆರೆಸಿಕ್ಕಿರಲು, ಹಾಳು
ಜಡತನಕೆ ಬೇಸತ್ತು ಜೀವವನು ಬಯಸುತ್ತೆ
ಮರುಗುತಿರೆ, ಶಿಲ್ಪಿಯೊರ್ವನು ಇಲ್ಲಿ ತಿರುಗುತ್ತೆ
ಬಂದು, ಮರುಗುತೆ ನನಗೆ, ಬಂಡೆಯನು ಕಡೆದು
ಬಿಡಿಸಿದನು. ನಾನು ಈ ರೂಪವನು ಪಡೆದು
ಕಲೆಯ ಸಾನ್ನಿಧ್ಯದಲಿ ಒಂದಿನಿತು ಕಣ್ದೆರೆದು,
ಪೂರ್ವಬಂಧದ ಶಿಲಾಕ್ಲೇಶವನು ನಸುತೊರೆದು
ಚೇತನದ ಛಾಯೆಯನು ಸವಿಯುತೊಡಗಿದೆನಂದು.
(ಕಲ್ಗೆ ಕಣ್ಣಿತ್ತ ಆ ಕಲೆಯೆನಗತುಲ ಬಂಧು!)
ಕಲೆಯ ಕಣ್ಣಿರದ ನರರಿಗೆ ನಾನು ಬರಿ ಕಲ್ಲು;
ಕವಿಯನುಳಿದಾರಿಗೂ ಕೇಳದೆನ್ನೀ ಸೊಲ್ಲು!
ನಾನು ರವಿಯುದಯವನು ನೋಡಿ ನಲಿಯಲು ಬಲ್ಲೆ:
ಬನದ ಬೆಟ್ಟದ ನೆತ್ತಿಯಲಿ ತಿಂಗಳು ನಿಲ್ಲೆ,
ಹುಣ್ಣಿಮೆಯ ತಿಳಿಬಾನು ಬೆಳ್ದಿಂಗಳನು ಚೆಲ್ಲೆ,
ಭಾವದಲೆಗಳು ನನ್ನ ರಕ್ತನಾಳಗಳಲ್ಲಿ
ಮೊರೆಯುವುವು ಸೌಂದರ್ಯದಾನಂದಭರದಲ್ಲಿ!
ನಿನ್ನಂತೆಯೇ ನಾನು ಕೋಗಿಲೆಯ ದನಿಗೇಳಿ
ಮುದವ ತಾಳಲು ಬಲ್ಲೆ; ಬೀಸಿಬರೆ ತೆಂಗಾಳಿ
ಮೈಯೊಡ್ಡಿ ಬೇಗೆಯನು ಪರಿಹರಿಸಿಕೊಳಬಲ್ಲೆ!
ಈ ವಿಶ್ವವೆಲ್ಲವನು ನಿನ್ನಂತೆ ನಿಂತಲ್ಲೆ
ಕಲ್ಪನೆಯ ತಕ್ಕೆಯಲೆ ತಬ್ಬಿ ಸಾಯಲು ಬಲ್ಲೆ!
ಆದರೂ ನನಗಿನ್ನೂ ನಿನ್ನರವು ಬಂದಿಲ್ಲ;
ಅದಕಾಗಿ ತಪವಗೈಯುತ್ತಿಹೆನು. ಒಂದಿಲ್ಲ
ಒಂದು ದಿನ ಮುಂದೆ ನಿನ್ನಂತೆ ತಿರುಗಾಡುವೆನು;
ಕವಿಯಾಗಿ ಕನ್ನಡದ ಕವನಗಳ ಮಾಡುವೆನು;
ಮಾಡಿ, ನಿನ್ನಂತೆಯೇ ಜನಗಳಿಗೆ ಹಾಡುವೆನು!
ಅದಕಾಗಿ, ಓ ಕವಿಯೆ, ನಿನ್ನ ನೆರವನು ಬೇಡಿ
ಕರೆದೆನಿಂದೀಯೆಡೆಗೆ; ನೀನಿಲ್ಲಿಗೈತಂದು
ನಿತ್ಯವೂ ನನಗಾಗಿ ನಿನ್ನ ರಚನೆಯ ಹಾಡಿ
ಕಲೆಯ ಸಾನ್ನಿಧ್ಯದಿಂದೆನಗೆ ನರತನ ಬಂದು,
ನಿನ್ನಂತೆಯೇ ನಾನು ಚೇತನದ ಮುಕ್ತಿಯಂ!
ಪಡೆದು ನಲಿವಂದದಲಿ ನೀಡೆನಗೆ ಶಕ್ತಿಯಂ!
ಓ ಕಬ್ಬಿಗನೆ, ನಿನ್ನೊಳಿಹ ಕಲೆಗೆ ಶಕ್ತಿಯಿದೆ.
ಜಡವ ಚೇತನಗೊಳಿಪ ದಿವ್ಯತರ ಮುಕ್ತಿಯಿದೆ.
ಮನುಜರಿಗೆ ಸೊಗಮೀವ ಕರ್ತವ್ಯವೊಂದೆ
ನಿನ್ನೆದೆಂದರಿಯದಿರು; ನಿನ್ನ ಕಲೆಯಿಂದೆ
ನೂರಾರು ಆತ್ಮಗಳು ಜಡತನದ ಬಲೆಯಿಂದೆ
ಬಿಡುಗಡೆಯ ಹೊಂದುವುವು; ಏಕೆನೆ ಕವನದಿಂದೆ
ಕಲ್ಗಳೂ ವಾಲ್ಮೀಕಿಯಾಗಿಹವು ಹಿಂದೆ!

ದನಿಯು ನಿಂತಿತು. ನಾನು ಕಲ್ಲುತವಸಿಯ ಮುಟ್ಟಿ
ಮುದ್ದಿಟ್ಟು ಮರಳಿದೆನು. ಕಾಲಡಿಯೊಳಿಹ ಮಟ್ಟಿ
ನೋಯುವುದೊ ಎಂದಳುಕಿ ಮಲ್ಲಮೆಲ್ಲನೆ ನಡೆದೆ.
ನಾಳೆ ಸಂಜೆಯೊಳಾನು ಕಲ್ಲುಗೆಳೆಯನ ಬಿಡದೆ
ಕಂಡು ಮಾತಾಡುವೆನು; ಕವನಗಳ ಹಾಡುವೆನು:
ಕಲ್ಲು ಕವಿಯಪ್ಪನ್ನೆವರಮಾನು ಹಾಡುವೆನು!
ಶಿಲೆಯು ಕಲೆಯಪ್ಪನ್ನೆವರಮಾನು ಹಾಡುವೆನು!

೦೩-೦೩-೧೯೩೧