ಬುವಿಯು ಸೆರೆಮನೆಯೆಂದು
ನಾನು ಸೆರೆಯಾಳೆಂದು
ಬರಿದೆ ಭಾವಿಸಿ ಮರುಗಿ
ಕೊರಗುತಿದ್ದೆ!
ಸೆರೆಮನೆಯ ಬಿತ್ತರವ
ಚರಿಸಲಾರೆನು ನಾನು!
ಬಿಡುಗಡೆಯ ಬಿತ್ತರವ
ಮಾಳ್ಪುದೇನು?

ಕಾಲದೇಶಗಳೆಂಬ
ಕಣ್ಣಿಯಲಿ ನೆಯ್ದಿರುವ
ಮಾಯಜಾಲದ ಕಣ್ಗ-
ಳಗಲವೆನಿತು?
ಜೀವವೆಂಬುವ ಕಿರಿಯ
ಮೀನು ಆ ಬಲೆಯಲ್ಲಿ
ಸಿಲುಕದೆಯ ನುಸುಳಿ ನಲಿ-
ದಾಡಬಹುದು!

ಪಂಜರದ ಮೇರೆಯನೆ
ಸಂಚರಿಸಲಾರದಿಹ
ಗಿಳಿಗೆ ಬನಗಳ ಬಯಲ
ಬಯಕೆಯೇಕೆ?
ಸೆರೆಮನೆಯ ಕಿರಿತನವ
ಬಳಸಲಾರದ ನನಗೆ
ಬಿಡುಗಡೆಯ ಬಿತ್ತರವೆ
ಹಿರಿಯ ಸೆರೆಯು!

೨೨-೦೪-೧೯೨೯