ಸೊನ್ನೆ, ನಿನಗೆ ಬೆಲೆಯೆ ಇಲ್ಲ
ಎಂದು ಬರಿದೆ ಬೈವರೆಲ್ಲ!
ನಿನ್ನ ಹಿಂದೆ ‘ಒಂದು’ ನಿಲಲು
ನಿನಗೆ ಬೆಲೆಯು ಬರುವುದು,
‘ಒಂದು’ ಬೆಂಬಲವಿರೆ ಸೊನ್ನೆ
ಕೋಟಿಗಳನು ತರುವುದು!

ಸೃಷ್ಟಿ ಶಿವನ ಶೂನ್ಯ ಲೀಲೆ,
ಮಾಯೆ, ಬರಿಯ ಸೊನ್ನೆ ಮಾಲೆ:
ಎಂದು ನುಡಿವರರಿತರೆಲ್ಲ!
ಆದರೇನು ಸತ್ಯವೆ?
ಹಿಂದೆ ‘ಒಂದು’ ನಿಲಲು ಬಂದು
ಸೊನ್ನೆಮಾಲೆ ಮಿಥ್ಯವೆ?

ಸೃಷ್ಟಿಯೇನೊ ಸೊನ್ನೆ ಮಾಲೆ?
ಶಿವನು ‘ಒಂದು’ ಬೆನ್ನುಮೂಳೆ!
ಹಿಂದೆ ‘ಒಂದು’ ನಿಲಲು ಬಂದು
ಸೊನ್ನೆ ಸಿರಿಗೆ ನೆಲೆಮನೆ!
ಹಿಂದೆ ಶಿವನ ಪಡೆದ ಭುವನ –
ಮಾಯೆ ನನ್ನಿಗೆಲೆವನೆ!

೦೪-೦೪-೧೯೩೦