ಉಚ್ಚಾರಣೆ ಕಲಿಕೆ

ಮಕ್ಕಳಿಗೆ ಒಂದು ವರ್ಷ ತುಂಬುವುದರೊಳಗೆ, ದೊಡ್ಡವರು ಹೇಗೆ, ಬೇರೆ ಬೇರೆ ಅರ್ಥಗಳನ್ನು ಧ್ವನಿಸಲು ಶಬ್ದಗಳನ್ನು ಬಳಸುತ್ತಾರೆ ಎಂಬುದರ ಬಗ್ಗೆ ಸಾಕಷ್ಟು ತಿಳುವಳಿಕೆಯಿರುತ್ತದೆ. ಆದರೆ ತಾವೇ ಸ್ವತಃ ಆ ಶಬ್ದಗಳನ್ನು ಉತ್ಪಾದಿಸುವಲ್ಲಿ ಹಿಂದೆ ಬೀಳುತ್ತವೆ.

ಒಂದು ವರ್ಷ ತುಂಬಿದ ಕೆಲವು ಮಕ್ಕಳು, ವ್ಯಾಪಕವಾಗಿ ಸ್ವರ ಮತ್ತು ವ್ಯಂಜನಗಳನ್ನು ಒಳಗೊಂಡಿರುವ ಪದಗಳನ್ನು ಗುರುತಿಸುತ್ತವೆ. ತಾವೇ ಪದಗಳನ್ನು ಉಚ್ಚರಿಸುವಾಗ, ಅವುಗಳ ಸಾಮರ್ಥ್ಯ, ಕೇವಲ ಒಂದು ಅಥವಾ ಎರಡು ವ್ಯಂಜನಗಳು ಮತ್ತು ಒಂದು ಸ್ವರವನ್ನು ಒಳಗೊಂಡಿರುವ ಪದಗಳಿಗೆ ಸೀಮಿತವಾಗಿರುತ್ತದೆ. ಸಾಮಾನ್ಯವಾಗಿ ಹದಿಮೂರು ತಿಂಗಳ ಮಗುವಿಗೆ [b] [d] ಮತ್ತು [n] ಧ್ವನಿಗಳನ್ನು ಮಾತ್ರ ಉಚ್ಚರಿಸಲು ಸಾಧ್ಯವಾಗುತ್ತದೆ. ಈ ಧ್ವನಿಗಳನ್ನೇ ಅನೇಕ ವಿಧದ ಪದಗಳನ್ನು ಉಚ್ಚರಿಸಲು ಉಪಯೋಗಿಸುತ್ತದೆ. ಉದಾಹರಣೆಗೆ, (ಬಾ) ಎನ್ನುವ ಶಬ್ದವನ್ನು ‘ಬಾ’ ಎಂದು ಕರೆಯಲು, ನನಗೆ ಬೇಡ ಎನ್ನಲು, ಹೊರಗೆ ಹೋಗೋಣ ಬಾ ಎನ್ನಲು ಉಪಯೋಗಿಸಬಹುದು.

ಹದಿನೈದು ತಿಂಗಳು ತುಂಬುವ ಹೊತ್ತಿಗೆ, [m] [p] ಮತ್ತು [v] ಧ್ವನಿಗಳು ಮಗುವಿನ ಶಬ್ದ ಭಂಡಾರದೊಳಗೆ ಸೇರಿಕೊಳ್ಳುತ್ತವೆ. ಅದರೊಂದಿಗೆ ಮಗುವಿಗೆ, ಹೆಚ್ಚು ಹೆಚ್ಚು ಪದಗಳನ್ನು ಗುರುತಿಸಲು, ಉಚ್ಚರಿಸಲು ಸಾಧ್ಯವಾಗುತ್ತದೆ. ಹೊಸದಾಗಿ ಕಲಿತ ವ್ಯಂಜನಗಳನ್ನು, ಮಗು, ಪದದ ಆದಿಯಲ್ಲಿ ಅಥವಾ ಅಂತ್ಯದಲ್ಲಿ ಉಪಯೋಗಿಸಲು ಶುರುಮಾಡುತ್ತದೆ. ಉದಾಹರಣೆಗೆ, ಉಗಿಯಲು ಪೂ [pu] ಎನ್ನುತ್ತದೆ. ‘ಅಪ್ಪ’ ಎನ್ನಲು ಪ [pa] ಎಂದು ಕರೆಯುತ್ತದೆ.

ಎರಡು ವರ್ಷ ತುಂಬುವ ಹೊತ್ತಿಗೆ ಮಗು ಸಾಕಷ್ಟು ಸ್ವರ ಮತ್ತು ವ್ಯಂಜನಗಳನ್ನು ಉಪಯೋಗಿಸಲು ಕಲಿತಿರುತ್ತದೆ. ಸುಮಾರು ಇನ್ನೂರು ಪದಗಳನ್ನು ಅರ್ಥವಾಗುವ ರೀತಿಯಲ್ಲಿ, ಉಚ್ಚರಿಸುವ ಸಾಮರ್ಥ್ಯ ಹೊಂದಿರುತ್ತದೆ.

ಯಾಕೊಬ್ಸಿನ್ (1968)ರವರ ಪ್ರಕಾರ, ಧ್ವನಿಗಳ ಬೆಳವಣಿಗೆ, ಎಲ್ಲಾ ಭಾಷಾ ಪರಿಸರಗಳಲ್ಲೂ ಹೆಚ್ಚು ಕಡಿಮೆ ಒಂದೇ ರೀತಿಯಲ್ಲಿರುತ್ತದೆ. ಮಕ್ಕಳು ಸಾಮಾನ್ಯವಾಗಿ, ಎಲ್ಲಾ ಭಾಷೆಗಳಲ್ಲೂ ಕಂಡುಬರುವ ಧ್ವನಿಗಳನ್ನು ಮೊದಲು ಉಚ್ಚರಿಸುತ್ತವೆ. ಒಂದು ಭಾಷೆಯಲ್ಲಿ ಮಾತ್ರ ಕಾಣುವ ವಿಶಿಷ್ಟ ಧ್ವನಿಗಳನ್ನು ತಡವಾಗಿ ಉಚ್ಚರಿಸುತ್ತವೆ.

ಮಕ್ಕಳ ಉಚ್ಚಾರಣೆಯಲ್ಲಿ ಸಾರ್ವತ್ರಿಕವಾಗಿ ಕಂಡುಬಂದಿರುವ ಒಂದು ಅಂಶವೇನೆಂದರೆ, ಮಕ್ಕಳು ಮೊದಲು ಸ್ವರಗಳನ್ನು ಉಚ್ಚರಿಸುತ್ತವೆ. ಅನಂತರ ವ್ಯಂಜನಗಳು ([m] [p] ಮತ್ತು [b]) ಕಾಣಿಸಿಕೊಳ್ಳುತ್ತವೆ.

ಮಕ್ಕಳಲ್ಲಿ ಧ್ವನಿ ಬೆಳವಣಿಗೆಯ ಬಗ್ಗೆ, ಅನೇಕ ಸಂಶೋಧನೆಗಳು ನಡೆದಿವೆ. ಎಲ್ಲ ಸಂಶೋಧನೆಗಳಲ್ಲೂ ಕಂಡುಬಂದಿರುವ ಸಾಮಾನ್ಯ ಅಂಶಗಳನ್ನು ಈ ಕೆಳಗಿನಂತೆ ಪಟ್ಟಿಮಾಡಬಹುದು.

1. ಮೊದಲ ಮೂವತ್ತು ತಿಂಗಳುಗಳವರೆಗೆ, ವ್ಯಂಜನಗಳಿಗಿಂತ ಸ್ವರ ಗಳು ಹೆಚ್ಚು ಹೆಚ್ಚು ಪುನರಾವರ್ತನೆಯಾಗುತ್ತವೆ.

2. ಎರಡು ವರ್ಷಗಳವರೆಗೆ ಸ್ವರಗಳು ಏಕಪ್ರಕಾರವಾಗಿ ಹೆಚ್ಚಾಗುತ್ತಾ ಹೋಗುತ್ತವೆ.

3. ಶೈಶಾವಾವಸ್ಥೆಯಲ್ಲಿ, ಸ್ವರಗಳ ಉಚ್ಚಾರಣೆ ವ್ಯಂಜನಗಳಿಗಿಂತ ಐದು ಪಟ್ಟು ಹೆಚ್ಚಾಗಿರುತ್ತದೆ.

4. ಎರಡೂವರೆಗೆ ವರ್ಷದ ಹೊತ್ತಿಗೆ, ಮಗು, ತತ್ವಶಃ ದೊಡ್ಡವರು ಉಚ್ಚರಿಸುವ ಎಲ್ಲ ಸ್ವರ ಧ್ವನಿಗಳನ್ನು ಉಚ್ಚರಿಸುತ್ತದೆ. ಆದರೆ ದೊಡ್ಡವರು ಉಚ್ಚರಿಸುವ ವ್ಯಂಜನ ಧ್ವನಿಗಳಲ್ಲಿ ಶೇ. ಎಪ್ಪತ್ತರಷ್ಟನ್ನು ಮಾತ್ರ ಉಚ್ಚರಿಸುವ ಸಾಮರ್ಥ್ಯ ಹೊಂದಿರುತ್ತದೆ.

ಪುನರುಕ್ತಿ : ಎರಡನೇ ವರ್ಷದ ಅವಧಿಯಲ್ಲಿ, ಒಂದು ಪದದ ಬೇರೆ ಬೇರೆ ಅಕ್ಷರಗಳನ್ನು ಒಂದೇ ರೀತಿಯಲ್ಲಿ ಉಚ್ಚರಿಸುವುದು ಮಕ್ಕಳ ಧ್ವನಿ ಬೆಳವಣಿಗೆಯ ಒಂದು ಪ್ರಮುಖ ಲಕ್ಷಣ. ಉದಾಹರಣೆಗೆ, ಅಪ್ಪ ಎನ್ನಲು ‘ಪಪ’ ಎನ್ನುವುದು. ‘ಬಾಬಾ’ ‘ಮಮ’ ಎಂದು ಒಂದೇ ದನಿಗಳನ್ನು ಅನೇಕ ಬಾರಿ ಪುನರುಚ್ಚರಿಸುವುದು.

ಈ ಕ್ರಿಯೆ ಅನೇಕ ತಿಂಗಳವರೆಗೆ ಮುಂದುವರೆಯುವುದು. ಪುನರುಕ್ತಿಯ ಉದ್ದೇಶದ ಬಗ್ಗೆ ಸಾಕಷ್ಟು ಚರ್ಚೆಗಳಾಗಿವೆ. ಬಹುಶಃ ಮಕ್ಕಳಿಗೆ ಶಬ್ದಗಳೊಂದಿಗೆ ಆಟವಾಡಲು ಅಥವಾ ಅವುಗಳನ್ನು ಉಚ್ಚರಿಸುವುದನ್ನು ಅಭ್ಯಾಸಮಾಡಲು ಪುನರುಕ್ತಿ ಪ್ರೇರಕವಾಗಿರಬಹುದು. ಈ ಕ್ರಿಯೆಯು ಮುಂದೆ ಮಕ್ಕಳಿಗೆ ಹೆಚ್ಚು ಸಂಕೀರ್ಣವಾದ ಪದಗಳನ್ನು ಉಚ್ಚರಿಸಲು ಸಹಾಯಕವಾಗುತ್ತದೆ.

ಧ್ವನಿ ಏರಿಳಿತ : ಅನೇಕ ಮಕ್ಕಳು, ಒಂದು ವರ್ಷ ತುಂಬುವುದರೊಳಗೆ ತಮ್ಮ ಭಾಷೆಯಲ್ಲಿನ, ಸ್ವರಗಳ ಏರಿಳಿತದ ಮಾದರಿಯನ್ನು ಉಪಯೋಗಿಸುವು ದನ್ನು ಕಲಿತಿರುತ್ತವೆ. ಪ್ರಶ್ನಿಸಲು, ಕೇಳಲು, ಕರೆಯಲು, ಗುರುತಿಸಲು, ಅಚ್ಚರಿ ವ್ಯಕ್ತಪಡಿಸಲು, ಅನೇಕ ವಿಧದ ದನಿಯನ್ನು ಉಪಯೋಗಿಸುವುದನ್ನು ಕಲಿತಿರುತ್ತವೆ. ಎರಡನೆಯ ವರ್ಷದ ಅವಧಿಯಲ್ಲಿ ಬೇರೆ ಬೇರೆ ಭಾವಗಳನ್ನು ವ್ಯಕ್ತಪಡಿಸುವುದನ್ನು ಕಲಿಯುತ್ತವೆ. ಈ ಹಂತದಲ್ಲಿ ಮಗು ಉಚ್ಚರಿಸುವ ಪದಗಳ ಮತ್ತು ಸಣ್ಣ ಸಣ್ಣ ವಾಕ್ಯಗಳ ವಿವಿಧ ಅರ್ಥಗಳನ್ನು ಗುರುತಿಸಬಹುದು. ಉದಾಹರಣೆಗೆ. ‘ನಾಯಿ’ ಎಂಬುದನ್ನು ನಾಯಿಯನ್ನು ಕರೆಯಲು ಉಪಯೋಗಿಸ ಬಹುದು, ನಾಯಿಯನ್ನು ಬೇರೆಯವರಿಗೆ ತೋರಿಸಲು ಬಳಸಬಹುದು. ಮಗುವಿನ, ವ್ಯಾಕರಣ ಮತ್ತು ಸಾಮಾಜಿಕ ಸಾಮರ್ಥ್ಯ ಬೆಳೆದಂತೆಲ್ಲ, ವಿವಿಧ ರೀತಿಯ ದನಿಯ ಏರಿಳಿತವನ್ನು ಬಳಸುವುದನ್ನು ಕಲಿಯುತ್ತದೆ.

ರಚನೆಗಳ ಕಲಿಕೆ

ವ್ಯಾಕರಣದ ಬೆಳವಣಿಗೆಯ ಮೊದಲ ಹಂತ ವ್ಯಾಕರಣದಂತೆ ಕಾಣುವುದೇ ಇಲ್ಲ. ಆ ಸಮಯದಲ್ಲಿ ಮಗುವಿನ ಭಾಷೆ ಕೇವಲ ಒಂದು ಪದದ ವಾಕ್ಯ ಗಳಿಗೆ ಸೀಮಿತವಾಗಿರುತ್ತದೆ. ಸಾಮಾನ್ಯವಾಗಿ ಅರ್ಥಗಳಿಂದ ಕೂಡಿದ ಶಬ್ದಗಳ ಮೊದಲ ಉಚ್ಚಾರಣೆಯನ್ನು, ಮಗು ಉಚ್ಚರಿಸಿದ ಮೊದಲ ಪದ ಎಂದು ಗುರುತಿಸಬಹುದು.

ಈ ಹಂತದಲ್ಲಿ, ಮಗು ಉಚ್ಚರಿಸುವ ಸಾಕಷ್ಟು ಪದಗಳು (ಸುಮಾರು ಶೇ. 60) ಹೆಸರನ್ನು ಸೂಚಿಸುವ ಪದಗಳಾಗಿರುತ್ತವೆ. ಮುಂದೆ ಅವು ನಾಮಪದಗಳಾಗಿ ವಿಕಾಸವಾಗುತ್ತವೆ. ಶೇ. ಇಪ್ಪತ್ತರಷ್ಟು ಪದಗಳು ಕ್ರಿಯೆಯನ್ನು ಸೂಚಿಸುತ್ತವೆ. ಅವುಗಳಲ್ಲಿ ಹಲವು ಪದಗಳು ಮುಂದೆ ಕ್ರಿಯಾಪದಗಳಾಗಿ ವಿಕಾಸ ಹೊಂದುತ್ತವೆ. ಇವುಗಳ ಜೊತೆಗೆ ಬೇರೆ ಬೇರೆ ವರ್ಗಗಳಿಗೆ ಸೇರಿದ ಕೆಲವು ಪದಗಳು ಮತ್ತು ಯಾವುದೇ ವರ್ಗಕ್ಕೂ ಸೇರಿಸಲಾಗದ ಕೆಲವು ಪದಗಳನ್ನು ಮಗು ಉಚ್ಚರಿಸುತ್ತದೆ.

‘ಒಂದು ಪದದ’ ಹಂತವನ್ನು ಹನ್ನೆರಡು ಮತ್ತು ಹದಿನೆಂಟನೇ ತಿಂಗಳ ಮಧ್ಯಭಾಗದಲ್ಲಿ ಗುರುತಿಸಬಹುದು. ಈ ಪದಗಳನ್ನು ಕೇವಲ ಪದಗಳನ್ನಾಗಿ ನೋಡುವುದು ತಪ್ಪಾಗುತ್ತದೆ. ಈ ಪದಗಳು, ಬಹುಪಾಲು ವಾಕ್ಯಗಳಂತೆ ಬಳಕೆಯಾಗುತ್ತಿರುತ್ತವೆ. ಉದಾಹರಣೆಗೆ ಒಂದು ಮಗು ‘ಅಪ್ಪ’ ಎನ್ನುವ ಪದವನ್ನು ಮೂರು ರೀತಿಯಲ್ಲಿ ಬಳಸಬಹುದು. ಯಾರಾದರೂ ಹತ್ತಿರ ಬರುತ್ತಿರುವ ಶಬ್ದವನ್ನು ಕೇಳಿದಾಗ ಅಪ್ಪ ಎನ್ನಬಹುದು. ಬರುತ್ತಿರುವವರು ತನ್ನ ಅಪ್ಪನೇ ಎಂಬುದು ಮನವರಿಕೆಯಾದಾಗ, ಏರಿದ ದನಿಯಲ್ಲಿ ಉತ್ಸಾಹದಿಂದ ‘ಅಪ್ಪ’ ಎನ್ನಬಹುದು. ಮತ್ತೊಮ್ಮೆ, ಆಗ್ರಹಪೂರ್ವಕವಾಗಿ, ತನ್ನನ್ನು ಎತ್ತಿಕೋ ಎಂದು ಕೈಗಳನ್ನು ಅಗಲಮಾಡಿಕೊಂಡು ‘ಅಪ್ಪ’ ಎನ್ನಬಹುದು. ಈ ಮೂರೂ ರೀತಿಯ ‘ಅಪ್ಪ’ ಎನ್ನುವ ಪದವನ್ನು, ಮೊದಲನೆಯ ಸಂದರ್ಭದಲ್ಲಿ ಪ್ರಶ್ನಿಸುತ್ತಿರುವಂತೆ, ಎರಡನೆಯದರಲ್ಲಿ ಹೇಳಿಕೆಯಾಗಿ, ಮೂರನೆಯದರಲ್ಲಿ ಆಜ್ಞೆಯ ರೂಪದಲ್ಲಿ ಗುರುತಿಸಬಹುದು. ಆದರೆ ‘ಅಪ್ಪ’ ಎನ್ನುವ ಪದದ ಉಚ್ಚಾರಣೆಯೊಂದರಿಂದಲೇ ಇದನ್ನು ಪ್ರಶ್ನೆ, ಹೇಳಿಕೆ, ಮತ್ತು ಆಜ್ಞೆಯಾಗಿ ಗುರುತಿಸಲು ಸಾಧ್ಯವಿಲ್ಲ. ಉಚ್ಚಾರಣೆಯ ಸಂದರ್ಭದಲ್ಲಿನ ಮಗುವಿನ ದನಿಯ ಏರಿಳಿತ, ಹಾವಭಾವ ಈ ಪದಕ್ಕೆ ವಿವಿಧ ಅರ್ಥಗಳನ್ನು ಕಲ್ಪಿಸುತ್ತದೆ. ಇಂತವುಗಳನ್ನು ‘ಏಕ ಪದ ವಾಕ್ಯ’ ಎಂದು ಕರೆಯಬಹುದು.

ಲೆವಿಸ್ (1951) ರವರ ಪ್ರಕಾರ, ಮಗು ಮೊದಲು ಹಾವಭಾವಗಳಿಗೆ ಪ್ರತಿಕ್ರಿಯಿಸುತ್ತದೆ, ನಂತರ ಹಾವಭಾವಗಳ ಜೊತೆಯಲ್ಲಿ ಬರುವ ಪದಗಳಿಗೆ ಪ್ರತಿಕ್ರಿಯಿಸುತ್ತದೆ. ಕೊನೆಯದಾಗಿ ಆ ಪದಗಳಿಗೇ ಪ್ರತಿಕ್ರಿಯಿಸುತ್ತದೆ

ಎರಡು ಪದ ವಾಕ್ಯಗಳು : ಸುಮಾರು 18 ನೆಯ ತಿಂಗಳ ಅವಧಿಯಲ್ಲಿ, ಮಗು ಎರಡು ಅಥವಾ ಅದಕ್ಕಿಂತ ಹೆಚ್ಚಿನ ಪದಗಳನ್ನು ಜೋಡಿಸಿಕೊಂಡು ಮಾತನಾಡುವುದಕ್ಕೆ ಪ್ರಾರಂಭಿಸುತ್ತದೆ. ಈ ಬೆಳವಣಿಗೆಯನ್ನು ಅನೇಕ ವಿದ್ವಾಂಸರು ನಿಜವಾದ ವ್ಯಾಕರಣದ ಬೆಳವಣಿಗೆಯ ಆರಂಭ ಎಂದು ಗುರುತಿಸಿದ್ದಾರೆ. ಈ ಹಂತದಲ್ಲಿ ವ್ಯಾಕರಣದ ಬೆಳವಣಿಗೆಯು ಸಂಕ್ರಮಣಾವಸ್ಥೆ ಯಲ್ಲಿರುತ್ತದೆ. ಸಾಮಾನ್ಯವಾಗಿ ಈ ಹಂತದಲ್ಲಿ ಮಗು ಪದಗಳನ್ನು ಹತ್ತಿರ ತರುತ್ತದೆ. ಆದರೆ ಅವುಗಳನ್ನು ತಾಲಬದ್ಧವಾಗಿ ಒಂದು ಕ್ರಮದಲ್ಲಿ ಉಚ್ಚರಿಸುವುದಿಲ್ಲ. ಉದಾಹರಣೆಗೆ, ಅಂಬಾ, ಹೋಮ, ಕೊಡು, ನಂಗೆ, ಅಪ್ಪ, ಎಂಬ ಅನೇಕ ಪದಗಳನ್ನು ಜೋಡಿಸಿ ಮಾತನಾಡುತ್ತದೆ. ಕ್ರಮೇಣ ಮಗುವಿಗೆ ಅಭ್ಯಾಸವಾದಂತೆಲ್ಲ, ಎರಡು ಪದದ ವಾಕ್ಯಗಳನ್ನು ದಿಟ್ಟತನದಿಂದ ಹೆಚ್ಚು ಹೆಚ್ಚಾಗಿ ಪ್ರಯೋಗಿಸುತ್ತದೆ.

ಈ ಹಂತದಲ್ಲಿ ಮಗು ಪ್ರಯೋಗಿಸುವ ಎಲ್ಲ ವಾಕ್ಯಗಳ ಅರ್ಥ ಮತ್ತು ವ್ಯಾಕರಣವನ್ನು ವಿಶ್ಲೇಷಿಸುವುದು ಕಷ್ಟ.

ಇಂಗ್ಲಿಶ್ ಭಾಷೆಯಲ್ಲಿ, ಎರಡು ಪದದ ವಾಕ್ಯಗಳ ಕೆಲವು ಅಧ್ಯಯನಗಳು ನಡೆದಿವೆ. ಉದಾಹರಣೆಗೆ, ಕೆಲವು ವಾಕ್ಯಗಳನ್ನು ಕೆಳಗಿನಂತೆ ವಿಶ್ಲೇಷಿಸಲಾಗಿದೆ.

Daddy Kick :  ಒಂದು ಕ್ರಿಯೆಯ ಸೂಚನೆ

shut door :       ಒಂದು ಕ್ರಿಯೆ ನಡೆಸಲು ಸೂಚನೆ

There Teddy :  ಸ್ಥಳದ ಸೂಚನೆ

She cold :        ವಿವರಣೆ

‘Daddy Kick’ ಎಂಬುದನ್ನು ವ್ಯಾಕರಣಾತ್ಮವಾಗಿ ವಿಷಯ+ಕ್ರಿಯೆ ಎಂದೂ ‘She cold’ ಎಂಬುದನ್ನು ಸರ್ವನಾಮ+ವಿಶೇಷಣ ಎಂದೂ ವಿಶ್ಲೇಷಿಸಬಹುದು. ಆದರೆ ಈ ರೀತಿಯ ಎಲ್ಲ ವಾಕ್ಯಗಳ ಅರ್ಥ ಮತ್ತು ರಚನೆಯನ್ನು ವಿಶ್ಲೇಷಿಸಲು ಆಗುವುದಿಲ್ಲ.

ವಾಕ್ಯ ರಚನೆ : ಎರಡನೇ ವರ್ಷದ ಆಸುಪಾಸಿನಲ್ಲಿ ಹೆಚ್ಚಿನ ಮಕ್ಕಳು ಮೂರು ಅಥವಾ ನಾಲ್ಕು ಪದಗಳಿಂದ ಕೂಡಿದ ವಾಕ್ಯಗಳನ್ನು ಪ್ರಯೋಗಿಸುತ್ತವೆ. ಈ ವಾಕ್ಯಗಳ ರಚನೆ ನಿರ್ದಿಷ್ಟವಾಗಿರುವುದಿಲ್ಲ. ಹೆಚ್ಚಿನವು ಪ್ರಶ್ನೆ, ಆಜ್ಞೆ ಮತ್ತು ಹೇಳಿಕೆಯ ರೂಪದಲ್ಲಿರುತ್ತವೆ.

ಮಕ್ಕಳು ಉದ್ದವಾದ ಮತ್ತು ಸಂಕೀರ್ಣವಾದ ವಾಕ್ಯಗಳನ್ನು ರಚಿಸುವಾಗ ಅನೇಕ ತಪ್ಪುಗಳನ್ನು ಮಾಡುವುದು ಸಹಜ. ಮೂರನೆಯ ವರ್ಷದ ಹೊತ್ತಿಗೆ ಮಕ್ಕಳ ವಾಕ್ಯಗಳ ಪ್ರಯೋಗ ವ್ಯಾಕರಣದ ದೃಷ್ಟಿಯಿಂದ ಸಾಕಷ್ಟು ಸುಧಾರಿಸಿ ರುತ್ತದೆ. ನಾಲ್ಕನೆಯ ವರ್ಷದ ಹೊತ್ತಿಗೆ ತಾವು ಮಾಡುತ್ತಿರುವ ತಪ್ಪು ಪ್ರಯೋಗಗಳನ್ನು ತಿದ್ದಿಕೊಳ್ಳಲು ಪ್ರಯತ್ನಿಸುತ್ತದೆ.

ಇದುವರೆವಿಗೂ, ಐದನೆಯ ವರ್ಷದ ಹೊತ್ತಿಗೆ ಮಕ್ಕಳು ವ್ಯಾಕರಣವನ್ನು ಕರಗತಮಾಡಿಕೊಳ್ಳುತ್ತವೆ ಎಂಬ ಅಭಿಪ್ರಾಯವಿತ್ತು. ಆದರೆ ಇತ್ತೀಚಿನ ಸಂಶೋಧನೆಗಳಲ್ಲಿ, ಮಕ್ಕಳು ಕೆಲವು ವ್ಯಾಕರಣದ ಅಂಶಗಳನ್ನು ಹತ್ತು ಅಥವಾ ಹನ್ನೊಂದನೆಯ ವರ್ಷದವರೆವಿಗೂ ಕಲಿಯುತ್ತಿರುತ್ತವೆ ಎಂದು ತಿಳಿದುಬಂದಿದೆ. ಮಕ್ಕಳಲ್ಲಿ ಭಾಷಾ ಬೆಳವಣಿಗೆಯ ಬಗ್ಗೆ ಅಷ್ಟಾಗಿ ಸಂಶೋಧನೆಗಳು ನಡೆಯದೆ ಇರುವುದರಿಂದ ಆ ಬಗ್ಗೆ ಖಚಿತವಾದ ವಿಷಯ ಗಳನ್ನು ನಿರೂಪಿಸುವುದು ಕಷ್ಟವಾಗುತ್ತದೆ.

ಉಮಾಪತಿ

ಅರ್ಥ ಸಂಯೋಜನೆ

ಮಕ್ಕಳು ಭಾಷಾ ಸಾಮಥರ್ಯ್ವನ್ನು ಪಡೆಯುತ್ತಾ ಹೋದಂತೆ ಭಾಷೆಯ ವಿವಿಧ ಸ್ಥರಗಳ ಮೇಲೆ ತಮ್ಮ ಪ್ರಭುತ್ವವನ್ನು ಸಾಧಿಸಿಕೊಳ್ಳುತ್ತಾ ಹೋಗುತ್ತಾರೆ. ಈ ಕ್ರಿಯಾವರ್ತದಲ್ಲಿ ಪದಕೋಶದ ಬೆಳವಣಿಗೆಯೂ ಸೇರಿದೆ. ಮಕ್ಕಳು ಹೊಸಪದವನ್ನು ಕಲಿಯುವುದು, ಕಲಿತ ಪದವನ್ನು ಬಳಸುವುದು, ಹೊಸಪದ ಗಳನ್ನು ಕೇಳಿದಾಗ ಗ್ರಹಿಸಲು ಶಕ್ತವಾಗುವುದು – ಇವೆಲ್ಲವೂ  ಕುತೂಹಲದ ಸಂಗತಿಗಳು ಈ ಪದಕೋಶವನ್ನು ಮಕ್ಕಳು ಪಡೆಯುವ ಕ್ರಮ ಮತ್ತು ವೇಗ ಇತ್ಯಾದಿಗಳನ್ನು ಭಾಷಾಶಾಸ್ತ್ರಜ್ಞರು ಅಷ್ಟಿಷ್ಟು ಅರಿಯಲು ಯತ್ನಿಸಿದ್ದಾರೆ. ಆದರೂ ಈ ಕ್ಷೇತ್ರದಲ್ಲಿ ಲಭ್ಯವಿರುವ ಮಾಹಿತಿ ಅಲ್ಪಪ್ರಮಾಣದ್ದು ಮತ್ತು ಕೆಲವೇ ಭಾಷೆಗಳಿಗೆ ಸೀಮಿತವಾಗಿದೆ.

ಲಭ್ಯವಿರುವ ಮಾಹಿತಿಯನ್ನೇ ಅವಲಂಬಿಸಿ ಹೇಳುವುದಾದರೆ ಮಕ್ಕಳ ಪದಕೋಶಕ್ಕೆ ಸೇರುವ ಪದಗಳಲ್ಲಿ ಕೆಲವನ್ನು ಮಾತ್ರ ಅವರು ಬಳಸುತ್ತಾರೆ. ಉಳಿದ ಪದಗಳನ್ನು ಅವರು ಬಳಸದಿದ್ದರೂ ಅವುಗಳನ್ನು ಗ್ರಹಿಸಲು ಶಕ್ತರಾಗಿ ರುತ್ತಾರೆ. ಪದಕೋಶದಲ್ಲಿರುವ ಈ ಎರಡು ಸ್ತರಗಳು ಮುಂದೆಯೂ ಹಾಗೇ ಉಳಿದುಕೊಳ್ಳುತ್ತವೆ. ಮೊದಮೊದಲು ಈ ಸ್ತರಗಳ ನಡುವೆ ಅಂತರ ಕಡಿಮೆ ಇರುತ್ತದೆ. ಅಂದರೆ ಬಳಸುವ ಪದಗಳಿಗಿಂತ ಕೇವಲ ಗ್ರಹಿಸುವ ಪದಗಳ ಸಂಖ್ಯೆ ಅತ್ಯಧಿಕವಾಗಿರುವುದಿಲ್ಲ. ಆದರೆ ಬೆಳೆಯುತ್ತ ಹೋದಂತೆ ಈ ಸ್ತರಗಳ ನಡುವೆ ಅಂತರ ಬೆಳೆಯುತ್ತದೆ.

ಮೊದಮೊದಲು ಪದಕೋಶದಲ್ಲಿ ಸೇರುವ ಪದಗಳು ಕೆಲವು ನಿರ್ದಿಷ್ಟ ವರ್ಗಗಳಿಗೆ ಸೇರುತ್ತವೆ. ಆಪ್ತರು ಮತ್ತು ಪರಿಚಿತರು, ಚಲನೆಯುಳ್ಳ ಕ್ರಿಯೆಗಳು, ಊಟತಿಂಡಿಗಳು, ಅಂಗಾಂಗಗಳು, ಪ್ರಾಣಿಗಳು, ಬೊಂಬೆಗಳು, ಮನೆ ಬಳಕೆಯ ವಸ್ತುಗಳು, ಕೆಲವು ಸರ್ವನಾಮಗಳು ಹೀಗೆ ಈ ವಲಯಗಳಿಗೆ ಸೇರಿದ ಪದಗಳು ಮಗುವಿಗೆ ಪರಿಚಿತವಾಗುತ್ತವೆ. ಆ ವರ್ಗದ ಹೆಚ್ಚು ಪದಗಳು ಲಭಿಸಲು ಹಲವಾರು ವರ್ಷಗಳೇ ಕಳೆಯಬೇಕು.

ಮೇಲೆ ಹೇಳಿದಂತೆ ವಿವಿಧ ವಲಯಗಳಿಗೆ ಸೇರಿದ ಪದಗಳನ್ನು ಮಕ್ಕಳು ಕಲಿತರೂ ಆ ಪದಗಳ ಖಚಿತ ಅರ್ಥವನ್ನು ಪಡೆದುಕೊಳ್ಳುವುದು ಅಷ್ಟು ಸುಲಭವಲ್ಲ. ಪದದ ಧ್ವನಿರೂಪವನ್ನು ಕೇಳಿ ಗುರುತಿಸುವ ಮತ್ತು ಉಚ್ಚರಿಸುವ ಸಾಮರ್ಥ್ಯವಿದ್ದರೂ ಅರ್ಥವನ್ನು ಅರಿಯುವುದು ಕೊಂಚ ತಡವಾಗಿ ಆಗಬಹುದು. ನಡುವೆ ಕೆಲವು ಇಕ್ಕಟ್ಟುಗಳನ್ನು ಅವರು ಹಾಯ್ದು ಬರಬೇಕು. ಅಂಥ ಮೂರು ಇಕ್ಕಟ್ಟುಗಳನ್ನು ಗುರುತಿಸಲಾಗಿದೆ. ಅತಿವ್ಯಾಪ್ತಿ, ಅವ್ಯಾಪ್ತಿ ಮತ್ತು ತಪ್ಪು ಹೊಂದಾಣಿಕೆ ಇವೇ ಆ ಮೂರು ಇಕ್ಕಟ್ಟುಗಳು. ಅತಿವ್ಯಾಪ್ತಿಯಿದ್ದಾಗ ಮಗು ತನಗೆ ಪರಿಚಿತವಿರುವ ಪದವೊಂದರ ಅರ್ಥವನ್ನು ಹೆಚ್ಚು ವ್ಯಾಪಕವಾಗಿ ಅನ್ವಯಿಸುತ್ತಿರುತ್ತದೆ. ‘ಹಸು’ ಎಂಬ ಪದವನ್ನು ಕಲಿತ ಮೇಲೆ ‘ಎಮ್ಮೆ’ಯನ್ನು ಹಸುವೆಂದು ಕರೆಯಬಹುದು. ‘ಹಸು’ವನ್ನು ನಾಲ್ಕು ಕಾಲುಳ್ಳ ಪ್ರಾಣಿ ಎಂದು ತಿಳಿದು, ನಾಲ್ಕು ಕಾಲುಳ್ಳ ಎಮ್ಮೆಯನ್ನೂ ‘ಹಸು’ ಎಂದು ತಿಳಿಯುವುದೇ ಇಲ್ಲಿ ಅತಿವ್ಯಾಪ್ತಿ.

ಅವ್ಯಾಪ್ತಿಯ ಇಕ್ಕಟ್ಟು ಇದಕ್ಕೆ ವಿರುದ್ಧವಾದುದು. ಪದದ ಅರ್ಥವನ್ನು ಮಗು ಸೀಮಿತಗೊಳಿಸಿಕೊಳ್ಳುತ್ತದೆ. ಉದಾ.ಗೆ ‘ಬೊಂಬೆ’ ಎಂಬ ಪದಕ್ಕೆ ತನ್ನ ಬಳಿಯಿರುವ ಆಟದ ಬೊಂಬೆ ಎಂದು ಮಾತ್ರ ತಿಳಿದು, ಇತರ ಬೊಂಬೆಗಳನ್ನು ಬೇರೆ ಎಂದು ಪರಿಗಣಿಸುವುದು. ಪದದ ಅರ್ಥವನ್ನು ಸಾಮಾನ್ಯೀಕರಿಸುವಲ್ಲಿ, ವ್ಯಾಪಕಗೊಳಿಸುವಲ್ಲಿ ಮಗು ಇಕ್ಕಟ್ಟನ್ನು ಅನುಭವಿಸುತ್ತದೆ.

ತಪ್ಪು ಹೊಂದಾಣಿಕೆಯ ಇಕ್ಕಟ್ಟು ಬೇರೆ ರೀತಿಯದ್ದು. ಎರಡು ಬೇರೆ ಬೇರೆ ಪದಗಳ ಅರ್ಥಗಳ್ನು ವಿನಾಕಾರಣ ಹೊಂದಾಣಿಕೆ ಮಾಡುವುದೇ ಈ ಇಕ್ಕಟ್ಟು ‘ನಾಯಿ’ ಎಂದಾಗ ಬೆಕ್ಕನ್ನು ಅಥವಾ ‘ಬೆಕ್ಕು’ ಎಂದಾಗ ನಾಯಿಯನ್ನು ಮಗು ತೋರಿಸಿದರೆ ಆಗ ತಪ್ಪು ಹೊಂದಾಣಿಕೆ ಸಂಭವಿಸಿದೆ ಎನ್ನುತ್ತೇವೆ.

ಈ ಇಕ್ಕಟ್ಟುಗಳಿಂದ ಬಿಡುಗಡೆ ಪಡೆದು ಮಗುವಿನ ಪದಕೋಶದ ಶಬ್ದಾರ್ಥ ಸಾಹಚರ್ಯ ನಿಧಾನವಾಗಿ ಖಚಿತಗೊಳ್ಳುತ್ತ ಹೋಗುತ್ತದೆ. ಆದರೂ ಎಷ್ಟೋ ಸಂದರ್ಭಗಳಲ್ಲಿ, ಅರ್ಥವ್ಯತ್ಯಾಸ ಅಸ್ಪಷ್ಟವಾಗಿಯೇ ಉಳಿಯುವುದುಂಟು. ಇದು ಮಗು ಬೆಳೆದ ಮೇಲೂ ಮುಂದುವರೆಯುತ್ತದೆ. ಉದಾ.ಗೆ ‘ಬಟ್ಟಲು’ ಮತ್ತು ‘ಕಪ್ಪು’ ಪದಗಳ ಅರ್ಥವ್ಯತ್ಯಾಸ ಖಚಿತವಾಗುವುದು ಕಷ್ಟ. ಇದು ಮಗುವಿನ ಸಮಸ್ಯೆಯಲ್ಲ. ನಮ್ಮ ವ್ಯವಹಾರ ಲೋಕದ ಸಮಸ್ಯೆ. ಅದರ ಪರಿಣಾಮ ಮಾತ್ರ ಮಗುವಿನ ಭಾಷಾ ಕಲಿಕೆಯಲ್ಲಿ ಕಂಡುಬರುತ್ತದೆ.

ಬಳಕೆಯ ಕಲಿಕೆ

ಮಗು ಭಾಷೆಯನ್ನು ಕಲಿಯುವುದೋ ಅಥವಾ ಪಡೆದುಕೊಳ್ಳುವುದೋ ಎಂಬ ಪ್ರಶ್ನೆ ಒತ್ತಟ್ಟಿಗಿರಲಿ. ಭಾಷೆಯೊಂದನ್ನು ಮಗು ಹೇಗೆ ಬಳಸಲು ತೊಡಗುತ್ತದೆಂಬ ಪ್ರಶ್ನೆಯಂತೂ ಕುತೂಹಲಕಾರಿ. ಉಚ್ಚಾರಣೆ, ಪದಕೋಶ, ಅರ್ಥವ್ಯವಸ್ಥೆ, ವ್ಯಾಕರಣ ಇತ್ಯಾದಿಗಳನ್ನು ಕಲಿತರಷ್ಟೇ ಸಾಲದು. ದಿನದಿನದ ಬಳಕೆಗೆ ಅನುಕೂಲವಾಗುವ ಇನ್ನಿತರ ಹತ್ತಾರು ಸಂಗತಿಗಳನ್ನು ತಿಳಿದುಕೊಳ್ಳ ಬೇಕು. ಬೇರೆ ಬೇರೆ ಸಂದರ್ಭಗಳಲ್ಲಿ ಭಾಷೆಯನ್ನು ಯೋಗ್ಯವಾಗಿ ಬಳಸುವ ವಿಧಾನಗಳನ್ನು ಗ್ರಹಿಸಬೇಕು ಹಾಗೂ ಅದಕ್ಕನುಗುಣವಾಗಿ ತನ್ನ ಬಳಕೆಯನ್ನು ರೂಢಿಸಿಕೊಳ್ಳಬೇಕು.

ಮೊದಮೊದಲ ಹಂತಗಳಲ್ಲಿ ಮಗು ತನ್ನ ಪಾಡಿಗೆ ತಾನು ಮಾತಾಡು ತ್ತಿರುತ್ತದೆ. ಯಾರನ್ನು ಉದ್ದೇಶಿಸಿಯಾಗಲೀ ಅಥವಾ ಯಾವುದೇ ಗುರಿಸಾಧನೆ ಗಾಗಲೀ ಮಾತಾಡುವುದು ಮೊದಲ ಹಂತದಲ್ಲಿ ಇರುವುದಿಲ್ಲ. ಮಗುವಿನೊಡನೆ ಮಾತಾಡುವಾಗ ಅಥವಾ ಮಾತಾಡುತ್ತಾ ಯಾವುದಾದರೊಂದು ಚಟುವಟಿಕೆಯಲ್ಲಿ ತೊಡಗಿದಾಗ ವಯಸ್ಕರೇ ಬಹುಪಾಲು ಮಾತಾಡುತ್ತಿರು ತ್ತಾರೆ. ಮಗುವಿನ ಭಾಷಿಕ ಪ್ರತಿಕ್ರಿಯೆಗಳನ್ನು ತಾವೇ ಉಚ್ಚರಿಸುತ್ತಿರುತ್ತಾರೆ. ಒಂದು ವೇಳೆ ಮಗು ಮಾತಾಡಿದರೂ ಅದು ನಿರ್ದಿಷ್ಟವಾಗಿರುವುದಿಲ್ಲ. ಉಚ್ಚಾರಣೆ ಅಸ್ಪಷ್ಟ ಇಲ್ಲವೇ ಅನಿಯಮಿತವಾಗಿರುವುದಷ್ಟೇ ಈ ಹಂತದ ಸಮಸ್ಯೆಯಲ್ಲ. ಮಾತುಕತೆಗೆ ಸಂಬಂಧಿಸಿದ ಸಾಮಾನ್ಯ ನಿಯಮಗಳನ್ನು ಮಗು ಪಾಲಿಸುತ್ತಿರುವುದಿಲ್ಲ. ಈ ಅಂಶ ತಿಳಿಯದೆ ತಂದೆತಾಯಂದಿರು ನೆಂಟರೆದುರು ಮಗುವಿನ ಭಾಷಿಕ ಜಾಣ್ಮೆಗಳನ್ನು ತೋರಿಸಲು ಹೋಗಿ ಪೆಚ್ಚಾಗುವುದಂಟು. ಏಕೆಂದರೆ ಮಗು ನಿರ್ದಿಷ್ಟ ನಿಯಮಗಳನ್ನು ಪಾಲಿಸಲು ತೊಡಗಿರುವುದಿಲ್ಲ.

ಮೂರು ವರ್ಷ ತುಂಬಿದ ಹೊತ್ತಿಗೆ ಮಕ್ಕಳು ಮಾತುಕತೆಯ ನಿಯಮಗಳನ್ನು ಸಾಕಷ್ಟು ಪ್ರಮಾಣದಲ್ಲಿ ಅರಿತಿರುತ್ತಾರೆ. ಕೆಲವು ನಿಯಮಗಳು ಇನ್ನೂ ಅವರಿಗೆ ಮನನವಾಗಿರುವುದಿಲ್ಲ. ಉದಾ.ಗೆ ಮಾತುಕತೆಯಲ್ಲಿ ಭಾಗೀದಾರರು ಯಾವಾಗ ಪ್ರವೇಶಿಸಬಹುದು ಮತ್ತು ಹೇಗೆ ಪ್ರವೇಶಿಸಬೇಕು ಎಂಬುದನ್ನು ತಿಳಿಯದೆ ಮಗು ಆಗಾಗ ‘ತಪ್ಪು’ ಮಾಡುವುದುಂಟು. ‘ಮಧ್ಯೆ ತಲೆಹಾಕಬೇಡ’ ಎಂದು ಹಿರಿಯರು ಗದರುವುದು ಈ ನಿಯಮದ ಉಲ್ಲಂಘನೆಯಾದಾಗ ತಾನೆ.

ಮಾತುಕತೆ ಮೊದಲು ಮಾಡುವುದು, ಕೇಳುತ್ತಿರುವವರ ಗಮನವನ್ನು ಸೆಳೆಯುವುದು, ತನ್ನ ಮಾತುಗಳನ್ನು ಕೇಳುವಂತೆ ಮಾಡುವುದು, ಮಾತುಕತೆ ಯನ್ನು ಮುಂದುವರೆಸುವುದು ಇವೇ ಮೊದಲಾದ ತಂತ್ರಗಳನ್ನು ಮಗು ಈ ವಯೋಮಾನದಲ್ಲಿ ಪಡೆದುಕೊಳ್ಳುತ್ತದೆ. ಮಾತುಕತೆಯ ಸ್ವರೂಪವನ್ನು ನಿರ್ಧರಿಸುವ ಇನ್ನಿತರ ಸಾಮಾಜಿಕ ಅಂಶಗಳನ್ನು ಮುಂದಿನ ಹಂತದಲ್ಲಿ ಮಗು ಕಲಿಯುವುದು. ಯಾರೊಡನೆ ಯಾವ ರೀತಿ ಮಾತಾಡಬೇಕು, ವ್ಯಕ್ತಿಗಳನ್ನು ಸಂಬೆೋಧಿಸುವ ಕ್ರಮ, ಮಾತುಕತೆಯ ನಡುವೆ ಬಳಸಬಹುದಾದ ಉದ್ಗಾರಗಳು, ಇವೇ ಮೊದಲಾದ ಸಂಗತಿಗಳನ್ನು ಮಗು ಈ ಅವಧಿಯಲ್ಲಿ ಕಲಿಯುತ್ತದೆ.

ಮುಂದುವರೆದ ಹಂತದಲ್ಲಿ ಮಗು ಮಾತುಕತೆಯು ಸಫಲವಾಗಲು ಅನುಕೂಲವಾಗುವ ಮತ್ತಷ್ಟು ಸಂಗತಿಗಳನ್ನು ಕಲಿಯುವುದು. ತನ್ನ ಮಾತು ಸ್ಪಷ್ಟವಾಗುವಂತೆ ಹೇಳಿದ್ದನ್ನು ಮತ್ತೊಮ್ಮೆ ಹೇಳುವುದು, ಧ್ವನಿಯಲ್ಲಿ ಸೂಕ್ತ ಏರಿಳಿತಗಳನ್ನು ತಂದುಕೊಳ್ಳುವುದು, ಮಾತುಕತೆಗೆ ಅಡ್ಡಿಯಾಗ ಬಹುದಾದ ಸಂದರ್ಭಗಳನ್ನು ನಿವಾರಿಸುವುದು ಇವೆಲ್ಲವನ್ನೂ ಮಗು ಅರಿತುಕೊಳ್ಳುತ್ತದೆ. ತನ್ನಿಂದ ಯಾವುದಾದರೂ ಕೆಲಸ ಮಾಡಿಸಲು ದೊಡ್ಡವರು ಅನುಸರಿಸುವ ಅನುನಯದ, ಒಲಿಸುವ ತಂತ್ರದ ಮಾದರಿಗಳನ್ನು ತನ್ನ ಮಾತುಕತೆಯಲ್ಲೂ ಸಂದರ್ಭೋಚಿತವಾಗಿ ಮಗು ಬಳಸಲು ತೊಡಗುತ್ತದೆ.

ಶಾಲೆಗೆ ಹೋಗಿ ತನ್ನ ಸಮವಯಸ್ಸಿನವರೊಡನೆ ಹೆಚ್ಚಾಗಿ ಬೆರೆತು, ಹೆಚ್ಚು ಹೆಚ್ಚು ಸಾಮಾಜಿಕ ಸಂದರ್ಭಗಳಲ್ಲಿ ಭಾಗಿಯಾಗಲು ತೊಡಗಿದಾಗ ಮಗು ಮಾತುಕತೆಯ ಇನ್ನುಳಿದ ನಿಯಮಗಳನ್ನು ಅರಿಯಲು ಸಾಧ್ಯ.

ಭಾಷೆಯನ್ನು ಸಂವಹನದ ಉದ್ದೇಶಕ್ಕಾಗಿ ಬಳಸುವ ಮಗು, ಮಾತುಕತೆಯ ನಿಯಮಗಳನ್ನು ಅರಿಯುತ್ತಲೇ ಮತ್ತಿತರ ನೆಲೆಗಳಲ್ಲೂ ಭಾಷೆಯ ಬಳಕೆಯ ಸಾಧ್ಯತೆಗಳನ್ನು ಕಂಡುಕೊಳ್ಳುತ್ತದೆ. ಚಿಕ್ಕವಯಸ್ಸಿನ ಮಕ್ಕಳು ಹಲವು ಬಗೆಯ ಭಾಷಾ ಕ್ರೀಡೆಗಳಲ್ಲಿ ತೊಡಗುತ್ತಾರೆ. ಅವುಗಳಲ್ಲಿ ಒಂದೆರೆಡು ವಾಕ್ಯಗಳಲ್ಲಿ ಬರುವ ಪದಗಳನ್ನು ಹಿಂದುಮುಂದು ಮಾಡಿ ಉಚ್ಚರಿಸುವುದು ಒಂದು ಬಗೆ. ಪ್ರತಿ ಪದದ ಧ್ವನಿ ಘಟಕಗಳ ನಡುವೆ ಒಂದು ನಿರ್ದಿಷ್ಟ ಧ್ವನಿಯನ್ನು ಸೇರಿಸಿ ಉಚ್ಚರಿಸುವುದು ಇನ್ನೊಂದು ಬಗೆ. ಮೊದಲನೆಯ ಬಗೆಯಲ್ಲಿ ಪದಗಳ ಧ್ವನಿಗಳನ್ನು ಹಿಂದೆ ಮುಂದೆ ಮಾಡುವ ವಿಧಾನದಲ್ಲೂ ಬೇರೆ ಬೇರೆ ವಿಧಾನಗಳಿವೆ. ‘ತಲೆ’ ಪದವನ್ನು ‘ಲೆತ’ಎನ್ನುವುದು ಒಂದು ವಿಧಾನವಾದರೆ ಲತೆ ಎನ್ನುವುದು ಇನ್ನೊಂದು ವಿಧಾನ. ‘ಲೆತ’ ಎನ್ನುವಾಗ ಅಕ್ಷರಗಳನ್ನು ಇಡಿಯಾಗಿ ಹಿಂದೆ ಮುಂದೆ ಮಾಡಲಾಗಿದೆ. ‘ಲತೆ’ ಎನ್ನುವಾಗ ಮೂಲಪದದ ಸ್ವರಗಳ ಅನುಕ್ರಮಣಿಕೆಯನ್ನು ಬದಲಾಯಿಸದೇ ಉಳಿಸಿಕೊಂಡು ವ್ಯಂಜನಗಳನ್ನು ಮಾತ್ರ ಸ್ಥಾನಪಲ್ಲಟ ಮಾಡಲಾಗಿದೆ. ಎರಡು ಪದಗಳನ್ನು ಒಂದಾದ ಮೇಲೆ ಒಂದರಂತೆ ಉಚ್ಚರಿಸುವಾಗ ಎರಡೂ ಪದಗಳ ಮೊದಲ ಧ್ವನಿ ಅಥವಾ ಅಕ್ಷರಗಳನ್ನು ಅದಲು ಬದಲು ಮಾಡುವುದು ಇನ್ನೊಂದು ಬಗೆ. ಪದಗಳ ಸ್ವರಸ್ಥಾನಗಳನ್ನು ಬದಲಾಯಿಸದೇ ಹಾಗೆ ಉಳಿಸಿಕೊಳ್ಳುವುದು ಹೆಚ್ಚು ಪ್ರಚಲಿತವಿರುವ ವಿಧಾನವಾಗಿದೆ. ಹೀಗೆ ಮಾಡಿದಾಗ ‘ನಾಯಿ ಬಾಲ’, ‘ಮನೆ ಬಾಗಿಲು’, ‘ಸೌತೆ ಕಾಯಿ’ ಎಂಬ ರೂಪಗಳು ಕ್ರಮವಾಗಿ ‘ಬಾಯಿ ನಾಲ’, ‘ಬನೆ ಮಾಗಿಲು’, ‘ಕೌತೇಸಾಯಿ’ ಎಂದಾಗುತ್ತದೆ.

ಪದಗಳ ನಡುವೆ ಅನ್ಯ ಧ್ವನಿಗಳನ್ನು ಸೇರಿಸುವ ವಿಧಾನಕ್ಕೆ ಕೆಲವು ನಿದರ್ಶನಗಲು ಹೀಗಿವೆ. ‘ಊಟ ಆಯಿತಾ?’ ಎನ್ನುವುದನ್ನು ‘ಕಊಕಟ ಕಆಕಯಿತಾ?’ ಎನ್ನುತ್ತಾರೆ. ‘ಕ’ ಬದಲು ಕೆಲವರು ‘ಪ’ ಬಳಸುವುದುಂಟು. ಹೀಗೆ ಅನ್ಯ ಧ್ವನಿಯನ್ನು ಸೇರಿಸುವುದು, ಧ್ವನಿಸ್ಥಾನಗಳನ್ನು ಅದಲುಬದಲು ಮಾಡುವುದು ಇವೇ ಮುಂತಾದ ಭಾಷಾ ಬಳಕೆಗಳು ಮಕ್ಕಳಿಗೆ ಆಟದಂತೆ. ತಮ್ಮ ಸಮವಯಸ್ಸಿನವರೊಡನೆ ಇಂಥ ಆಟಗಳನ್ನು ಆಡುತ್ತಾರೆ. ಇಲ್ಲಿ ಮಾತುಕತೆಯನ್ನು ನೇರ್ಪುಗೊಳಿಸುವ, ಸರಾಗಗೊಳಿಸುವ ಬಗೆ ಮುಖ್ಯ ವೆಂಬುದು ಹೊರಗೆ ನಿಂತ ನಮಗೆ ಗೊತ್ತಾಗುವುದಿಲ್ಲ. ಜಟಿಲಗೊಳಿಸಲೆಂದೇ ಈ ವಿಧಾನಗಳನ್ನು ಮಕ್ಕಳು ಬಳಸುವಂತೆ ತೋರುತ್ತದೆ. ಅದೇನೇ ಇರಲಿ. ಭಾಷೆಯ ಬಳಕೆಗೆ ಸಂವಹನಕ್ಕೂ ಮೀರಿದ ಉದ್ದೇಶವೊಂದು ಇದೆಯೆಂಬ ಅರಿವು ಅವರಲ್ಲಿ ಮೂಡಿರುವುದಂತೂ ನಿಜ.

ಹೀಗೆ ಭಾಷಾ ಕ್ರೀಡೆಗಳಲ್ಲಿ ತೊಡಗುವ ಮಕ್ಕಳು ಮಾತನಾಡುವ ವೇಗದಲ್ಲಿ ವ್ಯತ್ಯಾಸ ಉಂಟಾಗುವುದಿಲ್ಲ. ಅಂದರೆ ಸಹಜವಾಗಿ ಮಾತಾಡುವಾಗ ಎಷ್ಟು ವೇಗದಲ್ಲಿ ಮಾತನಾಡುತ್ತಾರೋ ಅಷ್ಟೇ ವೇಗದಲ್ಲಿಯೇ ಈ ವ್ಯತ್ಯಸ್ತ ರೂಪದ ಭಾಷೆಯಲ್ಲೂ ಮಾತಾಡುತ್ತಾರೆ. ಇದು ಗಮನಿಸಬೇಕಾದ ಸಂಗತಿ. ಭಾಷೆಯ ರಚನೆ  ಮತ್ತು ಆಟಕ್ಕಾಗಿ ರೂಪಿಸಿಕೊಂಡ ಹೊಸ ನಿಯಮಗಳ ಮೇಲಿನ ಹಿಡಿತ ಇವೆರಡನ್ನು ಮಕ್ಕಳು ಯೋಗ್ಯರೀತಿಯಲ್ಲಿ ಬೆಸೆದು ಭಾಷಾ ಬಳಕೆಗೆ ತೊಡಗುತ್ತಾರೆ. ಕೌಮಾರ್ಯದಿಂದ ವಯಸ್ಕರಾಗುವ ವಯೋಮಾನದ ಅವಧಿಯಲ್ಲಿ ಈ ಬಗೆಯ ಭಾಷಾ ಕ್ರೀಡೆಗಳು ಹೆಚ್ಚು. ಅನಂತರ ಇದನ್ನು ಬಳಸುವುದಿಲ್ಲ. ಬಳಸಿದರೂ ಅದು ಕೇವಲ ಸಾಂದರ್ಭಿಕ ಅವಶ್ಯಕತೆಗಾಗಿ ಮಾತ್ರ.