“ಇವನು ನಮ್ಮ ಮಗ ವಿನಯ್. ಬಹಳ ಬುದ್ಧಿವಂತ, ಎಸ್ಸೆಸ್ಸೆಲ್ಸಿಯಲ್ಲಿ ೯೦% ಅಂಕಗಳನ್ನು ತೆಗೆದಿದ್ದ. ಈತ ಡಾಕ್ಟರಾಗುತ್ತಾನೆ, ಇಂಜಿನಿಯರ್ ಆಗುತ್ತಾನೆ ಎಂದು ಕನಸು ಕಂಡಿದ್ದೆವು. ವಿಜಯ ಕಾಲೇಜಿಗೇ ಸೇರಿಕೊಂಡ. ಪಿಯು ಮೊದಲ ವರ್ಷದ ಪರೀಕ್ಷೆಯಲ್ಲಿ ಇವನು ತೆಗೆದದ್ದು ೫೪% ಅಂಕಗಳು. ಹದಿನೈದು ಸಾವಿರ ಕೊಟ್ಟು ಕೋಚಿಂಗ್ ಕ್ಲಾಸ್‌ಗೆ ಸೇರಿಸಿದೆವು. ಸರಿಯಾಗಿ ಹೋಗಲಿಲ್ಲ. ಶ್ರಮಪಟ್ಟು ಓದಲಿಲ್ಲ. ಪಿಯು ಎರಡನೇ ವರ್ಷದಲ್ಲಿ ಮೂರು ಸಬ್ಜೆಕ್ಟ್‌ಗಳಲ್ಲಿ ಫೇಲಾದ. ಫೇಲಾದ ಮೇಲೂ ಬುದ್ಧಿ ಬರಲಿಲ್ಲ. ಬೈಕು, ಫ್ರೆಂಡ್ಸ್ ಅಂತ ಊರೆಲ್ಲ ಸುತ್ತುತ್ತಾನೆ. ಇಷ್ಟ ಬಂದಾಗ ಮನೆಗೆ ಬರುತ್ತಾನೆ. ಕುಳಿತುಕೊಂಡು ಓದು ಅಂದರೆ, ನಮ್ಮ ಬಲವಂತಕ್ಕೆ ಹತ್ತು ನಿಮಿಷ ಕೂರುತ್ತಾನೆ. ಆಮೇಲೆ ತಲೆನೋವು ಎಂದು ಮಲಗಿಬಿಡುತ್ತಾನೆ. ಓದಿಯೇ ಉದ್ದಾರಾಗಬೇಕಿಲ್ಲ. ಸಂಪಾದನೆಗೆ ನೂರೆಂಟು ಮಾರ್ಗಗಳಿವೆ. ನನ್ನನ್ನು ಓದು ಎಂದು ಬಲವಂತ ಮಾಡಬೇಡಿ. ಬಲವಂತ ಮಾಡಿದರೆ ಮನೆ ಬಿಟ್ಟು ಎಲ್ಲಿಗಾದರೂ ಹೋಗಿಬಿಡುತ್ತೇನೆ ಎಂದು ಹೆದರಿಸುತ್ತಾನೆ. ಹೇಗಿದ್ದವನು ಹೇಗಾದ ಎಂದು ಇವನ ತಾಯಿ ಕೊರಗುತ್ತಾಳೆ. ಎಲ್ಲ ಅನುಕೂಲಗಳನ್ನು ಮಾಡಿಕೊಟ್ಟಿದ್ದೇವೆ. ಓದಲು ಏನಡ್ಡಿ ಎಂದು ನೀವೇ ಕೇಳಬೇಕು ಡಾಕ್ಟ್ರೆ ಎಂದರು ಅನಂತರಾಮ್.

“ಬಿಕಾಂ ಮಾಡಬೇಕು ಎಂದು ಇವಳೇ ಇಷ್ಟಪಟ್ಟು, ತನಗೆ ಬೇಕಾದ ಕಾಲೇಜಿಗೆ ಸೇರಿಕೊಂಡಳು ಸಾರ್, ನಮಗೇನೋ ಇವಳು ಡಾಕ್ಟರಾಗಲಿ ಅಂತ ಆಸೆ ಇತ್ತು. ಹಾಗಂತ, ಇವಳ ಇಷ್ಟಕ್ಕೆ  ನಾವು ಅಡ್ಡಿಮಾಡಲೇ ಇಲ್ಲ. ಕಳೆದವಾರ, ಇವಳ ಕಾಲೇಜಿನಿಂದ ಲೆಟರ್ ಬಂತು. ‘ನಿಮ್ಮ ಮಗಳು ಕಾಲೇಜಿಗೆ ಬರುತ್ತಿಲ್ಲ, ಸದಾ ಫ್ರೆಂಡ್ಸ್ ಜೊತೆ ಸುತ್ತುತ್ತಿರುತ್ತಾಳೆ ಎಂದು ನಮಗೆ ತಿಳಿದು ಬಂದಿದೆ. ಟೀಚರ‍್ಸ್ ಜೊತೆಸಹ ವಿದ್ಯಾರ್ಥಿಗಳ ಜೊತೆ ಆಕೆ ಒರಟಾಗಿ ವರ್ತಿಸುತ್ತಾಳೆ ಅಂತ ಕಂಪ್ಲೆಂಟ್ಸ್ ಬಂದಿದೆ. ವಿಚಾರಿಸಿದರೆ, ಇವೆಲ್ಲ ಸುಳ್ಳು, ಅವರಿಗೆ ನನ್ನ ಬಗ್ಗೆ ಹೊಟ್ಟೆಕಿಚ್ಚು ಎನ್ನುತ್ತಾಳೆ. ನಿಮ್ಮ ಮಗಳಿಗೆ ಬುದ್ಧಿ ಹೇಳಿ, ಅವಳು ಬದಲಾಗಬೇಕು. ಇಲ್ಲದಿದ್ದರೆ ನಾವು ಶಿಸ್ತಿನ ಕ್ರಮವನ್ನು ಕೈಗೊಳ್ಳಬೇಕಾಗುತ್ತದೆ ಎಂದು ಕಾಲೇಜಿನ ಪ್ರಿನ್ಸಿಪಾಲ್ ಬರೆದಿದ್ದರು. ನಾವು ಕಾಲೇಜಿಗೆ ಹೋಗಿ ಟೀಚರ‍್ಸ್ ಮತ್ತು ಕೆಲವು ಸಹಪಾಠಿಗಳ ಜೊತೆ ಮಾತಾಡಿದೆವು. ಪ್ರಿನ್ಸಿಪಾಲ್ ಬರೆದಿದ್ದೆಲ್ಲಾ ನಿಜ ಎಂದು ತಿಳಿಯಿತು. ಇವಳು ‘ಇದೆಲ್ಲ ಬರೀ ಸುಳ್ಳು ಈ ಕಾಲೇಜಿಗೆ ನಾನು ಮತ್ತೆ ಕಾಲಿಡುವುದಿಲ್ಲ ಎಂದು ಕೂಗಾಡಿದಳು. ಕಾಲೇಜಿಗೆ ಹೋಗುವುದನ್ನೂ ಬಿಟ್ಟಳು. “ನನ್ನನ್ನು ಬೇರೆ ಕಾಲೇಜಿಗೆ ಸೇರಿಸಿ ಎಂದು ಹಠ ಮಾಡತೊಡಗಿದಳು.ಇವರ ತಂದೆ ತಮಗಿದ್ದ ಇನ್‌ಫ್ಲೂಯನ್ಸ್‌ನ್ನೆಲ್ಲಾ ಬಳಸಿ ಬೇರೊಂದು ಕಾಲೇಜಿಗೆ ಸೇರಿಸಿದರು. ಅಲ್ಲೂ ಇದೇ ಕಥೆಯ ಪುನರಾವರ್ತನೆ ಆಯಿತು. ಕಾಲೇಜಿಗೆ ನಾನೇ ಅವಳನ್ನು ಕರೆದೊಯ್ದು, ವಾಪಸ್ ಕರೆ ತರಲು ಶುರು ಮಾಡಿದೆ. ಮೊದಲ ಕ್ಲಾಸ್, ಕಡೇ ಕ್ಲಾಸ್ ಅಟೆಂಡ್ ಮಾಡಿ ಉಳಿದ ಕ್ಲಾಸ್‌ಗಳಿಗೆ ಚಕ್ಕರ್ ಹೊಡೆಯುತ್ತಿದ್ದಳು. ಬೈದು, ರೇಗಿ, ಹೊಡೆದು, ಹೀಗೆ ಮಾಡಬೇಡ ಎಂದೆವು. ಕೇಳುವುದಿಲ್ಲ. ನಿನಗೆ ಓದು ಬೇಡವಾದರೆ ಬಿಡ, ಮನೆ ಕೆಲಸ ಕಲಿ, ಇನ್ನೇನಾದರೂ ಕಲಿ. ಮದುವೆಯಾಗಿ ಗೃಹಿಣಿಯಾಗಿರುವಂತೆ ಎಂದರೆ, ಸಿಡಿಯುತ್ತಾಳೆ. ನಾನು ಓದಬೇಕು, ಸ್ವಾವಲಂಬಿಯಾಗಿ ಬದುಕುತ್ತೇನೆಯೇ ಹೊರತು, ಮದುವೆಯಾಗಿ ಗಂಡನ ಗುಲಾಮಳಾಗಿರಲು ಸಾಧ್ಯವಿಲ್ಲ ಎನ್ನುತ್ತಾಳೆ. ಇಪ್ಪತ್ತು ವರ್ಷ ವಯಸ್ಸಾಗಿದೆ. ನಮ್ಮ ಕುಟುಂಬದ ಸರ್ಕಲ್‌ನಲ್ಲಿ ಇವಳ ವಯಸ್ಸಿನ ಅನೇಕರಿಗೆ ಮದುವೆಯಾಗಿ, ಮಗುವಿನ ತಾಯಿ ಆಗಿದ್ದಾರೆ. ಇವಳು ಓದುತ್ತಲೂ ಇಲ್ಲ, ಮದುವೆಗೆ ಒಪ್ಪುತ್ತಲೂ ಇಲ್ಲ. ನಮಗೆ ದಿಕ್ಕು ತೋಚದಂತಾಗಿದೆ ಎಂದರು ಕಾತ್ಯಾಯಿನಿ, ಅವರ ಕಣ್ಣಂಚಿನಲ್ಲಿ ಕಣ್ಣೀರು ತುಳುಕಿತು.

“ನನಗೆ ಏಕಾಗ್ರತೆ ಇಲ್ಲ, ಮನಸ್ಸು ತುಂಬಾ ಚಂಚಲ, ಓದಲು ಕೂತರೆ, ಏನೇನೋ ಬೇಡದ ಯೋಚನೆಗಳು ಬರುತ್ತವೆ. ಕ್ಲಾಸ್‌ನಲ್ಲಿ ಕುಳಿತು ಪಾಠ ಕೇಳಲು ಆಗುವುದಲ್ಲ. ತಲೆ ನೋವು ಬರುತ್ತದೆ. ಚಡಪಡಿಸುತ್ತೇನೆ, ಡಾಕ್ಟರಲ್ಲಿಗೆ ಹೋಗಿ ತೋರಿಸಿದೆ. ಅವರು ದೃಷ್ಟಿ ಪರೀಕ್ಷಿಸಿದರು. ‘ಸೈನುಸೈಟೀಸ್ ಇರಬಹುದು ಎಂದು ಎಕ್ಸರೇ ತೆಗೆಸಿದರು. ಎಲ್ಲ ನಾರ್ಮಲ್ ಆಗಿತ್ತು. ತಲೆನೋವಿಗೆ ಕಾರಣ ಬಹುಷಃ ಯಾವುದೋ ಟೆಂಶನ್. ಸ್ವಲ್ಪ ಯೋಗ, ಧ್ಯಾನ ಮಾಡಿ ರಿಲ್ಯಾಕ್ಸ್ ಮಾಡು ಎಂದರು. ನನಗೆ ಏನೂ ಪರಿಹಾರ ಕಾಣಲಿಲ್ಲ. ಹೇಗೋ ಕಷ್ಟಪಟ್ಟು ಓದಿದರೂ ಓದಿದ್ದು ಏನೂ ಜ್ಞಾಪಕದಲ್ಲಿರುವುದಿಲ್ಲ. ಪರೀಕ್ಷೆಯಲ್ಲಿ ತುಂಬಾ ಕಡಿಮೆ ಮಾರ್ಕ್ಸ್ ಬರುತ್ತೆ, ಜೊತೆಯವರ ಎದುರು ನನಗೆ ಅವಮಾನವಾಗುತ್ತಿದೆ ಎಂದ ಕಿಶೋರ್.

ಹರೆಯದವರು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಅಥವಾ ಡಿಗ್ರಿ ಕೋರ್ಸ್‌ಗೆ ಪ್ರವೇಶ ಪಡೆದಾಗ, ಅವರ ಕಲಿಕೆ ಕುಂಠಿತವಾಗಬಹುದು. ಅದುವರೆಗೆ ಪ್ರಥಮ ಶ್ರೇಣಿಯಲ್ಲಿ ೮೦ ಅಥವಾ ೯೦ ಅಂಕಗಳನ್ನು ತೆಗೆಯುತ್ತಿದ್ದ ಹುಡುಗ/ಹುಡುಗಿ ಈಗ ವಿದ್ಯಾಭ್ಯಾಸದಲ್ಲಿ ಹಿಂದುಳಿಯತೊಡಗಿದಾಗ ತಂದೆ-ತಾಯಿಗಳು ಚಿಂತಿತರಾಗುತ್ತಾರೆ. ‘ಏಕೋ ಹೀಗ್ಮಾಡ್ತೀಯಾ, ಇಷ್ಟು ಕಡಿಮೆ ಮಾರ್ಕ್ಸ್ ತೆಗೆದರೆ ಹೇಗೋ, ನಿನ್ನ

ವಿದ್ಯಾಭ್ಯಾಸಕ್ಕೋಸ್ಕರ ನಾವು ಎಷ್ಟು ಖರ್ಚು ಮಾಡ್ತಿದ್ದೇವೆ, ನೀನು ಚೆನ್ನಾಗಿ ಓದಬೇಕು, ಒಳ್ಳೆಯ ಮಾರ್ಕ್ಸ್ ತೆಗೀಬೇಕು, ಡಾಕ್ಟರೋ, ಎಂಜಿನೀಯರೋ ಆಗಬೇಕು ಅಂತಾ ನಾವೆಲ್ಲ ಕನಸು ಕಂಡಿದ್ದೇವೆ. ನೀನು ನೋಡಿದ್ರೆ ಫೇಲಾಗೋ ಮಟ್ಟವನ್ನು ಮುಟ್ಟಿದ್ದೀಯಾ ಎಂದು ಕೇಳಿದರೆ, ಹರೆಯದವರು ಏನೂ ಉತ್ತರ

ಕೊಡದಿರಬಹುದು. ‘ಯಾಕ್ ಸುಮ್ನೆ ಚಿಂತೆ ಮಾಡ್ತೀರಿ, ನಾನು ಚೆನ್ನಾಗಿ ಓದ್ತೇನೆ, ಒಳ್ಳೇ ಮಾರ್ಕ್ಸ್ ತೆಗೀತೀನಿ ನೋಡ್ತಿರಿ ಎನ್ನಬಹುದು. ಪರಿಸ್ಥಿತಿ ಸುಧಾರಿಸದಿದ್ದಾಗ, ತಂದೆ-ತಾಯಿಗಳು ಹತಾಶರಾಗುತ್ತಾರೆ. ಕೋಚಿಂಗ್, ಟ್ಯೂಶನ್ ಎಂದು ಮತ್ತಷ್ಟು ಹಣ ಖರ್ಚು ಮಾಡುತ್ತಾರೆ.

ಹರೆಯದವರು ಕಲಿಕೆಯಲ್ಲಿ ಹಿಂದುಳಿಯಲು ಅಥವಾ ನಿರಾಸಕ್ತಿ ಬೆಳೆಸಿಕೊಳ್ಳಲು ಅನೇಕ ಕಾರಣಗಳಿವೆ, ಅವನ್ನು ಗುರುತಿಸಿ ಪರಿಹಾರೋಪಾಯಗಳನ್ನು ಮಾಡಬೇಕು.

೧. ಐಕ್ಯೂ: ನೋಡಿ,ಕೇಳಿ,ಓದಿ ಮಾಹಿತಿಯನ್ನು ಅರ್ಥ ಮಾಡಿಕೊಳ್ಳುವುದು, ನೆನಪಿನಲ್ಲಿಟ್ಟುಕೊಳ್ಳುವುದು, ಭಾಷಾ ಸಾಮರ್ಥ್ಯ, ಸಂವಹನ ಕೌಶಲ, ಚಿಂತನೆ ವಿಶ್ಲೇಷಣೆ, ಸಮಸ್ಯಾ ಪರಿಹಾರ, ಗಣಿತ, ವಿಜ್ಞಾನದ ವಿಚಾರಗಳನ್ನು ಅರ್ಥಮಾಡಿಕೊಳ್ಳುವುದು, ಕಾರ್ಯ ಕಾರಣ ಸಂಬಂಧವನ್ನು ಅರ್ಥ ಮಾಡಿಕೊಳ್ಳುವುದು, ಬುದ್ಧಿವಂತಿಕೆಯ ಪ್ರಮುಖ ಭಾಗಗಳು. ಈ ಬುದ್ಧಿವಂತಿಕೆ ಎಲ್ಲರಲ್ಲೂ ಒಂದೇ ಮಟ್ಟಕ್ಕೆ ಇರುವುದಿಲ್ಲ. ಅನುವಂಶಿಯತೆ. ಮಿದುಳಿನ ವಿಕಾಸ, ಪರಿಸರ, ಬಾಲ್ಯದಲ್ಲಿ ದೊರೆತ ಶಿಕ್ಷಣದ ಗುಣಮಟ್ಟದ ಮೇಲೆ ಕೆಲವರಲ್ಲಿ ಬುದ್ಧಿಮಟ್ಟ (ಐಕ್ಯೂ) ಹೆಚ್ಚಿದ್ದರೆ, ಕೆಲವರಲ್ಲಿ ಅದು ಕಡಿಮೆ ಇರುತ್ತದೆ. ಯಾವುದೇ ಸಮುದಾಯದಲ್ಲಿ ಶೇಕಡಾ ೭೦ರಷ್ಟು ಮಕ್ಕಳಿಗೆ ಸಾಧಾರಣಮಟ್ಟದ ಐಕ್ಯೂ (೮೪ ರಿಂದ ೧೧೦) ಇದ್ದರೆ, ಶೇಕಡಾ ೧೫ರಷ್ಟು ಮಂದಿಗೆ ಅಧಿಕ ಮಟ್ಟದ ಐಕ್ಯೂ (೧೧೦ ರಿಂದ ೧೩೫) ಶೇಕಡಾ ೧೨ ರಷ್ಟು ಮಂದಿಗೆ ಕೆಳಮಟ್ಟದ ಐಕ್ಯೂ (೭೦ ರಿಂದ ೮೩) ಇರುತ್ತದೆ. ಶೇಕಡಾ ೩ ಮಕ್ಕಳಿಗೆ ಐಕ್ಯೂ ೭೦ಕ್ಕಿಂತ ಕಡಿಮೆ ಇದ್ದು, ಅವರು ಬುದ್ಧಿಮಾಂದ್ಯರು ಎನಿಸಿಕೊಳ್ಳುತ್ತಾರೆ. ನಿಮ್ಮ ಮಗ/ಮಗಳಿಗೆ ಕೆಳಮಟ್ಟದ ಐಕ್ಯೂ ಇದ್ದರೆ, ಎಸ್ಸೆಸ್ಸೆಲ್ಸಿ/ ಪಿಯು ಮಟ್ಟದ ವಿಷಯಗಳನ್ನು ಕಲಿಯಲಾರರು. ಹಿಂದೆ ಬೀಳುತ್ತಾರೆ. ನಿಧಾನವಾಗಿ ಹಂತಹಂತವಾಗಿ ಹೇಳಿಕೊಟ್ಟು, ಪ್ರೋತ್ಸಾಹಿಸಿದರೆ, ಸ್ವಲ್ಪ ಚೇತರಿಸಿಕೊಳ್ಳುತ್ತಾರೆ. ದಡ್ಡ, ಸೋಮಾರಿ, ನಾಲಾಯಕ್ ಎಂದು ಜರಿದರೆ ಮತ್ತಷ್ಟು ಮಂಕಾಗುತ್ತಾರೆ. ೭,೮,೯ ನೇ ತರಗತಿಗಳಲ್ಲಿ ನಿಮ್ಮ ಮಗ/ಮಗಳು ಕಲಿಕೆಯು ನಿಧಾನವಾಗುತ್ತಿದ್ದಂತೆ ನೀವು ಎಚ್ಚತ್ತುಕೊಳ್ಳಬೇಕು. ಅವರಿಗೆ ಪ್ರೋತ್ಸಾಹ/ಒತ್ತಾಸೆ ನೀಡಬೇಕು. ಅವರು ಕಲಿಯುವ ವಿಧಾನವನ್ನು ಉತ್ತಮಪಡಿಸಬೇಕು.

೨. ನಿಮ್ಮ ಮಗ/ಮಗಳ ಎಡ ಮಿದುಳು ಚೆನ್ನಾಗಿ ವಿಕಾಸ ಹೊಂದಿದೆಯೇ ಅಥವಾ ಬಲಮಿದುಳೇ?

ನಮ್ಮ ಮಿದುಳಿನಲ್ಲಿ ಮೂರು ಪ್ರಮುಖ ಭಾಗಗಳಿರುವುದು ನಿಮಗೆ ಗೊತ್ತು. ಪ್ರಧಾನ ಮಿದುಳು, ಉಪಮಿದುಳು ಮತ್ತು ಮಿದುಳಿನ ಕಾಂಡ. ಪ್ರಧಾನ ಮಿದುಳಿನಲ್ಲಿ ಎಡ ಮತ್ತು ಬಲ ಅರೆಗೋಳಗಳಿವೆ. ಎಡ ಅರೆಗೋಳವು ಚಿಂತನೆಗೆ, ಭಾಷೆ, ವಿಜ್ಞಾನ, ತಂತ್ರಜ್ಞಾನ ಮತ್ತು ಗಣಿತವನ್ನು ಕಲಿಯಲು ಹಾಗೂ ಕರಗತ ಮಾಡಿಕೊಳ್ಳಲು ನೆರವಾಗುತ್ತದೆ. ಬಲ ಅರೆಗೋಳವು ಸಂಗೀತ, ನೃತ್ಯ, ಚಿತ್ರಕಲೆ ಹಾಗೂ ಇನ್ನಿತರ ಕಲಾ ಕೌಶಲಗಳ ಕಲಿಕೆಗೆ ನೆರವಾಗುತ್ತದೆ. ಜೊತೆಗೆ ಭಾವನೆಗಳನ್ನು ಅನುಭವಿಸಿ ಪ್ರಕಟಿಸುವ ಹಾಗೂ ಸಂಬಂಧಗಳನ್ನು ಬೆಳೆಸಿ, ಉಳಿಸಿಕೊಳ್ಳುವ ಜವಾಬ್ದಾರಿಯನ್ನು ಹೊರುತ್ತದೆ. ಹೀಗಾಗಿ ಎಡ ಅರೆಗೋಳ ಪ್ರಧಾನವಾದ ವ್ಯಕ್ತಿ ಭಾಷಾಪಂಡಿತನಾಗಿ, ವಿಜ್ಞಾನ, ತಂತ್ರಜ್ಞಾನದಲ್ಲಿ ನಿಪುಣನಾಗುತ್ತಾನೆ, ಚಿಂತಕನಾಗುತ್ತಾನೆ. ಬಲಮಿದುಳು ಪ್ರಧಾನವಾಗಿರುವ ವ್ಯಕ್ತಿ ಕಲಾವಿದನಾಗುತ್ತಾನೆ. ಸಂಗೀತ, ನೃತ್ಯ, ಕಲಾವಿದಳಾಗುತ್ತಾಳೆ, ಭಾವಜೀವಿಯಾಗುತ್ತಾನೆ. ಎಲ್ಲರೊಡನೆ ಸ್ನೇಹ-ಸಂಬಂಧವಿಟ್ಟುಕೊಂಡು, ಹೆಚ್ಚು ಮಾನವೀಯತೆಯಿಂದ ಸ್ಪಂದಿಸುತ್ತಾಳೆ, ಸೃಜನಶೀಲ ವ್ಯಕ್ತಿಯಾಗುತ್ತಾನೆ. ಎಡ ಬಲ ಆದ್ದರಿಂದ ಹದಿನೈದು ವರ್ಷಗಳ ಅವಧಿಯಲ್ಲಿ ನಿಮ್ಮ ಮಗ/ಮಗಳನ್ನು ಗಮನಿಸಿ, ಅವರ ಅಭಿರುಚಿ, ಆಸಕ್ತಿಗಳನ್ನು ನೋಡಿ ಆತ/ಆಕೆ ಎಡ ಮಿದುಳು ಪ್ರಧಾನವಾದ ಅಥವಾ ಬಲಮಿದುಳು ಪ್ರಧಾನವಾದ ವ್ಯಕ್ತಿಯೇ  ಅಥವಾ ಎರಡೂ ಮಿದುಳು ವಿಕಾಸ ಹೊಂದಿದ್ದು, ವಿಜ್ಞಾನ ಮತ್ತು ಕಲೆಯಲ್ಲಿ ಸಮಾನ ಆಸಕ್ತಿ, ಅಭಿರುಚಿ ಇರುವ ವ್ಯಕ್ತಿಯೇ ಎಂಬುದು ನಿಮಗೆ ಅರ್ಥವಾಗುತ್ತದೆ. ಆಗ ಎಸ್ಸೆಸ್ಸೆಲ್ಸಿ ಆದ ಮೇಲೆ, ನಿಮ್ಮ ಮಗ/ಮಗಳು ವಿಜ್ಞಾನದ ಕೋರ್ಸ್‌ಗೆ ಸೇರಬೇಕೇ, ಕಲಾವಿಷಯಗಳ ಕೋರ್ಸ್ ಸೇರಬೇಕೇ ಅಥವಾ ವಾಣಿಜ್ಯ ವಿಷಯಗಳ ಕೋರ್ಸ್ ಸೇರಬೇಕೇ ಎಂಬುದನ್ನು ನಿರ್ಧರಿಸಲು ಅವರಿಗೆ ನೆರವಾಗಿ, ಪ್ರತಿಷ್ಠೆಗಾಗಿ ಅಥವಾ ಬೇರೆಯ ಮಕ್ಕಳು ಸೇರಿದ್ದಾರೆ ಎಂದು ಅಥವಾ ನಿಮ್ಮ ಆಸೆ ಆಕಾಂಕ್ಷೆಯ ಪೂರೈಕೆಗಾಗಿ ನಿಮ್ಮ ಮಗ/ಮಗಳನ್ನು ಅವರಿಗೆ ಆಸಕ್ತಿ, ಸಾಮರ್ಥ್ಯದ ಅಭಾವವಿರುವ ಕೋರ್ಸ್‌ಗೆ ಬಲವಂತವಾಗಿ ಸೇರಿಸಬೇಡಿ. ಸೇರಿಕೊಂಡಿದ್ದರೆ, ಅವರಿಗೆ ಆ ಕೋರ್ಸ್ ನಿಭಾಯಿಸಲು ಕಷ್ಟವಾಗುತ್ತಿದ್ದರೆ, ಹಿಂಜರಿಯದೇ ಕೋರ್ಸ್ ಬದಲಾಯಿಸಿ.

ಬೇಗ ಉದ್ಯೋಗಸ್ಥನಾಗಲು, ತರಬೇತಿ ನೀಡುವ ಅನೇಕ ಕೋರ್ಸ್‌ಗಳು, ಡಿಪ್ಲೋಮಗಳಿವೆ, ಹೆಚ್ಚು ಓದಲಾಗದ, ಡಿಗ್ರಿ ಕ್ಲಾಸ್‌ಗಳಿಗೆ ಸೇರಲಾಗದ ಹರೆಯದವರನ್ನು ‘ಜಾಬ್ ಓರಿಯೆಂಟೆಡ್ ಕೋರ್ಸ್‌ಗಳಿಗೆ ಸೇರಿಸಲು ಅಥವಾ ತಮ್ಮ ಪರಿಚಯದವರು ಮನೆ  ಸಮೀಪದಲ್ಲಿರುವ ಕಾರ್ಖಾನೆಗಳು, ಉದ್ಯಮಗಳು, ವ್ಯಾಪಾರ, ವ್ಯವಹಾರ, ಕಂಪ್ಯೂಟರ್ ಟ್ರೈನಿಂಗ್, ಅರೆಕೌಶಲದ ಉದ್ಯೋಗಗಳು (ಸೆಮಿಸ್ಕಿಲ್‌ಡ್ ಜಾಬ್ಸ್) ಇತ್ಯಾದಿಗಳನ್ನು ಗಮನಿಸಿ, ಅವರಿಗೆ ತರಬೇತಿ ಕೊಡಿಸಿ, ಸ್ವಾವಲಂಬಿಯಾಗಿ ಬದುಕಲು ದಾರಿಮಾಡಿಕೊಡಬೇಕು.

ನಿರ್ದಿಷ್ಟ ವಿಷಯವನ್ನು ಅರ್ಥಮಾಡಿಕೊಳ್ಳಲು, ಕಲಿಯಲು ಹರೆಯದವರು ಕಷ್ಟಪಡುತ್ತಿದ್ದರೆ (ಉದಾ ಗಣಿತ, ವಿಜ್ಞಾನ, ಇಂಗ್ಲೀಷ್ ಭಾಷೆ) ಅವರಿಗೆ ವಿಶೇಷ ಕೋಚಿಂಗ್ ಬೇಕಾಗುತ್ತದೆ. ವಿಷಯವನ್ನು ಸರಳೀಕರಣಮಾಡಿ, ಆಕರ್ಶಣೀಯ ರೀತಿಯಲ್ಲಿ ಪಾಠ ಮಾಡಿ, ವಿದ್ಯಾರ್ಥಿಗೆ ಪಾಠ ಮಾಡಿ, ವಿದ್ಯಾರ್ಥಿಗೆ ಕಲಿಯಲು ಉತ್ತೇಜನ ನೀಡಬಲ್ಲಂತಹ ಶಿಕ್ಷಕರು ಬೇಕು. ಈ ಪರಿಣಿತಿ ಪಡೆಯಲು ಶಿಕ್ಷಕರಿಗೆ ತರಬೇತಿಯಾಗಬೇಕು.

೩. ಕಲಿಯಲು ಇಚ್ಚೆ, ಆಸಕ್ತಿ (ಮೋಟಿವೇಷನ್) ಕಡಿಮೆ

ಪ್ರತಿಯೊಬ್ಬ ವ್ಯಕ್ತಿಯಲ್ಲಿ ನಾನು ಪ್ರಗತಿ ಹೊಂದಬೇಕು. ಸ್ಪರ್ಧೆಯಲ್ಲಿ ಮುಂದಿರಬೇಕು, ಸ್ಥಾನ, ಮಾನ, ಮರ್ಯಾದೆ, ಅಧಿಕಾರವನ್ನು ಗಳಿಸಬೇಕು. ಈ ಹೊತ್ತಿಗಿಂತ ನಾಳೆ ಮತ್ತಷ್ಟು ಅಭಿವೃದ್ಧಿ ಹೊಂದಬೇಕು ಎಂಬ ಆಸೆ/ಬಯಕೆ ಇರುತ್ತದೆ. ಕಾರಣಾಂತರಗಳಿಂದ  ಕೆಲವರು ಅಲ್ಪ ತೃಪ್ತರಾಗುತ್ತಾರೆ. ಅಥವಾ ಅವರಿಗೆ ಆಸೆ-ಮಹಾತ್ವಾಕಾಂಕ್ಷೆ ಇರುವುದಿಲ್ಲ. ಹೇಗೋ ಬದುಕಿದರಾಯಿತು. ಗುಂಪಿನಲ್ಲಿ ಗೋವಿಂದ ಎಂದರಾಯಿತು ಎನ್ನುವ ಮನೋಭಾವನೆಯನ್ನು ಬೆಳೆಸಿಕೊಳ್ಳುತ್ತಾರೆ. ಓದಿನ ವಿಚಾರದಲ್ಲಿ ಅವರು ನಿರ್ಲಪ್ತರಾಗಿರಬಹುದು. ತಂದೆ-ತಾಯಿಯ ಬಲವಂತಕ್ಕೆ ಅಥವಾ ಯಾರದೋ ಒತ್ತಾಯಕ್ಕೆ ಶಾಲೆ-ಕಾಲೇಜಿಗೆ ಹೋಗುತ್ತಾರೆ. ಓದದೆಯೇ ಜೀವನ ಮಾಡಬಹುದು. ವಿದ್ಯಾಭ್ಯಾಸವಿಲ್ಲದೆಯೇ ಹಣ, ಅಧಿಕಾರವನ್ನು ಗಳಿಸಬಹುದೆಂದು ಯೋಚಿಸುತ್ತಾರೆ. ಅಂತಹ ಮಾದರಿಗಳನ್ನು ಸುತ್ತಮುತ್ತ ಗಮನಿಸಿ, ‘ಅವನು ಏನೂ ಓದಿಲ್ಲ, ನೋಡಿ, ಎಷ್ಟೊಂದು ಸಂಪಾದಿಸುತ್ತಿದ್ದಾನೆ. ಎಂತಹ ಸ್ಥಾನಮಾನ ಪಡೆದುಕೊಂಡಿದ್ದಾನೆ. ನಾನೂ

ಹೇಗೋ ಸಂಪಾದಿಸುತ್ತೇನೆ. ಓದುವ ಕಷ್ಟವೇಕೆ ಎಂಬ ಧೋರಣೆಯನ್ನು ಬೆಳೆಸಿಕೊಳ್ಳುತ್ತಾರೆ. ಈ ರೀತಿಯ ನಕಾರಾತ್ಮಕ ಧೋರಣೆಗೆ ತಂದೆ,ತಾಯಿಗಳು, ಅಜ್ಜ-ಅಜ್ಜಿ, ಸಹಪಾಠಿಗಳು ಕುಮ್ಮಕ್ಕು ನೀಡಬಹುದು, ಹರೆಯದವರು ತಂದೆತಾಯಿಗಳ ಮೇಲಿನ ಕೋಪಕ್ಕೋ, ಶಾಲೆ ಶಿಕ್ಷಕರ ಮೇಲಿನ ಕೋಪ, ಅಸಮಾಧಾನಕ್ಕೋ ಅಥವಾ ಮನರಂಜನಾ ಚಟುವಟಿಕೆಗಳಿಗೆ ಹೆಚ್ಚು ಆದ್ಯತೆ ನೀಡುವ ಸಲುವಾಗಲೋ ಅಥವಾ ವಿದ್ಯೆ ಕಲಿತರೆ-ಡಿಗ್ರಿ ಪಡೆದರೆ ಏನು ಉಪಯೋಗ, ಉದ್ಯೋಗ ಸಿಗುವುದಿಲ್ಲ ಎಂಬ ನಕಾರಾತ್ಮಕ ಧೋರಣೆಯಿಂದಲೋ, ಈಗಾಗಲೇ ಹಣ ಸಂಪಾದನೆಯ ಮಾರ್ಗವನ್ನು ಕಂಡು ಹಿಡಿದುಕೊಂಡಿರುವುದರಿಂದಲೋ ಅಥವಾ ವಿದ್ಯೆ ಕಲಿಯಲು ಅದಕ್ಕಾಗಿ ಕಷ್ಟಪಡಲು ಪ್ರೋತ್ಸಾಹ ಮಾರ್ಗದರ್ಶನವಿಲ್ಲದೆಯೋ, ಹರೆಯದವರು ಕಲಿಯುವುದದರಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ. ಆಸಕ್ತಿ/ಇಚ್ಛೆಯೇ ಇಲ್ಲದ ಮೇಲೆ, ಅವರು ಕಲಿಯಲು ಪ್ರಯತ್ನ ಮಾಡುವುದನ್ನೇ ಬಿಡುತ್ತಾರೆ. ಏನಾದರೂ ನೆಪ ಹೇಳುತ್ತಾ, ಕಲಿಯದೇ, ಹಿಂದುಳಿಯುತ್ತಾರೆ. ತಾವು ಹಿಂದುಳಿಯುತ್ತಿರುವುದರ ಬಗ್ಗೆ ಅವರಿಗೆ ಯಾವ ಬಗೆಯ ಕಾಳಜಿಯಾಗಲೀ, ಪಶ್ಚಾತ್ತಾಪವಾಗಲೀ ಇರುವುದಿಲ್ಲ. ತಮ್ಮ ಈ ಸ್ಥಿತಿಗೆ ತಂದೆ-ತಾಯಿಗಳನ್ನೋ, ಶಾಲೆ-ಕಾಲೇಜು, ಶಿಕ್ಷಕರನ್ನೋ ಅಥವಾ ಸಮಾಜ/ಸರ್ಕಾರವನ್ನೋ ಬಯ್ಯುತ್ತಾರೆ.

ಹರೆಯವದವರೊಂದಿಗೆ ಆತ್ಮೀಯವಾಗಿ ಮಾತನಾಡಿ, ಅವರ ನಿರಾಸಕ್ತಿಗೆ ಕಾರಣಾಂಶಗಳನ್ನು ಹುಡುಕಿ ನಿವಾರಿಸಬೇಕು. ವಿದ್ಯೆ ಕಲಿಯುವುದರ ಮಹತ್ವವನ್ನು ಅವರಿಗೆ ಮನದಟ್ಟು ಮಾಡಬೇಕು. ವಿದ್ಯೆ ಕಲಿಯದವನ ಹತ್ತಿರ ಹಣ, ಅಧಿಕಾರ ಕೂಡಿಕೊಂಡರೂ, ವಿದ್ಯೆ, ಹಣ, ಅಧಿಕಾರ ಈ ಮೂರೂ ಮಿಳಿತವಾದರೆ ಎಷ್ಟು ಅನುಕೂಲ, ಲಾಭ ಎಂಬುದನ್ನು ವಿವರಿಸಬೇಕು.

೪. ಏಕಾಗ್ರತೆಯ ಕೊರತೆ: ಯಾವುದೇ ಕೆಲಸ ಮಾಡಲು, ಏಕಾಗ್ರತೆ ಬಹಳ ಬೇಕು. ಅದರಲ್ಲೂ ಅಧ್ಯಯನ ಮಾಡಲು, ಕಲಿಯಲು ಏಕಾಗ್ರತೆ ಬಹುಮುಖ್ಯ. ಮನಸ್ಸು ಸ್ವಭಾವತಃ ಚಂಚಲ. ಈ ಕ್ಷಣ ಇಲ್ಲಿ, ಮರುಕ್ಷಣ ಮತ್ತೆಲ್ಲೋ! ಸಾಮಾನ್ಯವಾಗಿ ಆರೋಗ್ಯವಂತ ವ್ಯಕ್ತಿಯಲ್ಲಿ ಗರಿಷ್ಠ ಪ್ರಮಾಣದ ಏಕಾಗ್ರತೆ ೩೦ ರಿಂದ ೪೦ ನಿಮಿಷಗಳ ಕಾಲ ಇರುತ್ತದೆ. ಸಾಕಷ್ಟು ಹರೆಯದವರಿಗೆ ಏಕಾಗ್ರತೆಯೇ ಇರುವುದಿಲ್ಲ, ಚಂಚಲ ಚಿತ್ತರಾಗಿರುತ್ತಾರೆ. ಕಾರಣಗಳು ಹಲವು:

ಶಾರೀರಕ ಅನಾರೋಗ್ಯ: ಅನೀಮಿಯಾ, ನಮ್ಮ ದೇಶದಲ್ಲಿ ಶೇಕಡಾ ೩೦ ರಿಂದ ೫೦ರಷ್ಟು ಹರೆಯದವರಿಗೆ ಅನೀಮಿಯಾ, ಅವರ ರಕ್ತದ ಹಿಮೋಗ್ಲಾಬಿನ್ ಪ್ರಮಾಣ ಪ್ರತಿ ೧೦೦ ಮಿಲಿಯಲ್ಲಿ ೧೦ ಗ್ರಾಂಗಿಂತ ಕಡಿಮೆ ಇರುತ್ತದೆ. ಹಿಮೋಗ್ಲಾಬಿನ್ ಕೆಲಸ ಪ್ರತಿ ಜೀವಕೋಶಕ್ಕೆ ಆಮ್ಲಜನಕವನ್ನು ಪೂರೈಸುವುದು. ಹೀಗಾಗಿ ಮಿದುಳಿನ ೧೦ ಸಾವಿರ ಕೋಟಿ ನರಕೋಶಗಳಿಗೆ ಆಮ್ಲಜನಕ ಪೂರೈಕೆ ಸರಿಯಾಗಿ ಆಗುವುದಿಲ್ಲ. ನಿಶ್ಯಕ್ತಿ, ಆಯಾಸ, ಏಕಾಗ್ರತೆಯ ಕೊರತೆಯಿಂದ ವ್ಯಕ್ತಿ ಬಳಲುತ್ತಾನೆ/ಳೆ. ಆದ್ದರಿಂದ ಹರೆಯದ ವಿದ್ಯಾರ್ಥಿಯ ಕೈ ಬೆರಳ ಉಗುರುಗಳನ್ನು, ನಾಲಿಗೆಯನ್ನು, ಕಣ್ಣಿನ ಒಳಭಾಗವನ್ನು ಗಮನಿಸಿ, ಅವು ಬಿಳಚಿಕೊಂಡಿದ್ದರೆ, ವೈದ್ಯರಲ್ಲಿಗೆ ಕರೆದೊಯ್ಯಿರಿ.ಪರೀಕ್ಷಿಸಿ ಅನೀಮಿಯಾ ಇದ್ದರೆ ಸರಿಪಡಿಸುತ್ತಾರೆ. ಅಪೌಷ್ಠಿಕತೆ, ಹೊಟ್ಟೆಯಲ್ಲಿ ಜಂತು, ರಕ್ತ ಹೋಗುವ ಕಾಯಿಲೆಗಳು ಅನೀಮಿಯಾಗೆ ಸಾಮಾನ್ಯ ಕಾರಣ.

ಕಣ್ಣು/ಕಿವಿ ದೋಷ: ಅನೇಕರಿಗೆ ದೃಷ್ಟಿ ದೋಷವಿರುತ್ತದೆ. ಶ್ರವಣದೋಷವಿರುತ್ತದೆ. ಸಣ್ಣ ಅಕ್ಷರಗಳನ್ನು ಓದಲಾರರು. ಸ್ವಲ್ಪ ಹೊತ್ತು ಓದಿದರೆ ತಲೆ ನೋವು, ಕಣ್ಣುಗಳಲ್ಲಿ ನೀರು ತುಂಬಿಕೊಂಡು, ಓದುಮುಂದುವರೆಸಲು ಆಗುವುದಿಲ್ಲ. ಅಥವಾ ಶಬ್ದಗಳು ಸರಿಯಾಗಿ ಕೇಳಿಸುವುದಿಲ್ಲ. ನನಗೆ ದೃಷ್ಟಿ ದೋಷವಿದೆ, ಶ್ರವಣದೋಷವಿದೆಯೆಂದು ಹೇಳಲು ಹರೆಯದ ಹುಡುಗ/ಹುಡುಗಿಯರು ನಾಚುತ್ತಾರೆ. ಇದನ್ನು ಗುರುತಿಸಿ ಸರಿಪಡಿಸಬೇಕು.

ಹಲ್ಲು, ವಸಡುರೋಗಗಳು: ಎಲ್ಲೆಂದರೆ ಅಲ್ಲಿ ಯಾವಾಗೆಂದರೆ ಆವಾಗ, ಅಂಟು ಮತ್ತು ಸಿಹಿ ಪದಾರ್ಥಗಳನ್ನು ಸೇವಿಸುವುದು, ನಿತ್ಯ ಎರಡು ಸಲ ಬಾಯಿ, ಹಲ್ಲುಗಳನ್ನು ಸ್ವಚ್ಚ ಮಾಡದಿರುವುದು, ಬಾಯಲ್ಲಿ ಉಸಿರಾಡುವುದು, ಹಲ್ಲು, ವಸಡು ರೋಗಗಳಿಗೆ ಎಡೆಮಾಡಿಕೊಡುತ್ತದೆ. ಪಯೋರಿಯಾ, ಹುಳುಕು ಹಲ್ಲು, ಹಲ್ಲು ನೋವು, ದುರ್ವಾಸನೆಯ ಬಾಯಿ ಇವೆಲ್ಲ ವ್ಯಕ್ತಿಯ ಸ್ವಾಸ್ಥ್ಯವನ್ನು ಹಾಳುಮಾಡುತ್ತವೆ. ಹುಮ್ಮಸ್ಸು, ಏಕಾಗ್ರತೆಯನ್ನು ಕುಗ್ಗಿಸುತ್ತವೆ.

ಪದೇ-ಪದೇ ಸೋಂಕು, ದೀರ್ಘಕಾಲದ ಸೋಕು: ಗಂಟಲು ನೋವು, ಟಾನ್ಸಿಲೈಟಿಸ್, ಆಸ್ತಮಾ, ರುಮಾಟಿಕ್ ಕೀಲು ನೋವು, ಪದೇ-ಪದೇ ಭೇದಿ, ಆಮಶಂಕೆ ಇತ್ಯಾದಿ ದೈಹಿಕ ಬೇನೆಗಳಿಂದ ವ್ಯಕ್ತಿ ನಿತ್ರಾಣಿಯಾಗುತ್ತಾನೆ. ಏಕಾಗ್ರತೆ ಕುಗ್ಗುತ್ತದೆ. ಅಂಗವೈಕಲ್ಯಗಳಿದ್ದರೆ, ವ್ಯಕ್ತಿ ಕೀಳರಿಮೆಗೆ ತುತ್ತಾಗಿ, ಸದಾ ತನ್ನ ಅಂಗವೈಕಲ್ಯಗಳ ಬಗ್ಗೆ ಅಥವಾ ಇತರರ ಅನಾದರಣೆ ಮತ್ತು ಪರಿಹಾಸ್ಯಗಳ ಬಗ್ಗೆ ಚಿಂತಿಸುತ್ತಾ, ಏಕಾಗ್ರತೆಯನ್ನು ಕಳೆದುಕೊಳ್ಳುತ್ತಾನೆ. ವೈದ್ಯರ ಮಾರ್ಗದರ್ಶನದಲ್ಲಿ ಆರೋಗ್ಯವನ್ನು ಉಳಿಸಿಕೊಳ್ಳಬೇಕು, ವೃದ್ಧಿಸಿಕೊಳ್ಳಬೇಕು.

ಮಾನಸಿಕ ಕಾರಣಗಳು

೧. ಆಕರ್ಷಣೆಗಳು, ವಿಕಷಣೆಗಳು : ಹರೆಯದವರಿಗೆ ಅನೇಕ ಆಕರ್ಷಣೆಗಳು ಮತ್ತು ವಿಕರ್ಷಣೆಗಳು (Attractions and distractions) ಕಾಡುತ್ತವೆ. ಇವು ಆಂತರಿಕವಾದವುಗಳಾಗಿರಬಹುದು ಅಥವಾ ಬಾಹ್ಯದಲ್ಲಿರಬಹುದು. ಆಂತರಿಕ ಆಕರ್ಷಣೆ/ವಿಕರ್ಷಣೆಗಳ ಉದಾಹರಣೆಗಳೆಂದರೆ

* ಪಠ್ಯೇತರ ವಿಷಯಗಳ ಬಗ್ಗೆ ಆಸಕ್ತಿ: ಸಂಗೀತ, ಸಾಹಿತ್ಯ, ನೃತ್ಯ, ಚಿತ್ರಕಲೆ, ಫೋಟೋಗ್ರಫಿ, ಕ್ರೀಡೆಗಳು, ಸೃಜನಶೀಲ ಚಟುವಟಿಕೆಗಳು ಅವುಗಳಲ್ಲಿ ಪರಿಣತಿ ಸಾಧಿಸುವ ಮಹಾತ್ವಾಕಾಂಕ್ಷೆ.

* ಚಿಂತೆ, ವ್ಯಥೆ-ವ್ಯಾಕುಲಗಳು: ಕೌಟುಂಬಿಕ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಭವಿಷ್ಯದ ಬಗ್ಗೆ ವ್ಯಕ್ತಿ ವಿಪರೀತ ಚಿಂತೆ, ವ್ಯಥೆ, ವ್ಯಾಕುಲಗಳನ್ನು ಹೊಂದಿರುವುದು.

* ದ್ವಂದ್ವಗಳು/ಗೊಂದಲಗಳು: ನಿತ್ಯ ಚಟುವಟಿಕೆಗಳು ವ್ಯವಹಾರದ ಬಗ್ಗೆ ದ್ವಂದ್ವಗಳು ನೈತಿಕ ಮೌಲ್ಯಗಳ ಬಗ್ಗೆ, ಜೀವನ ಶೈಲಿ, ಗುರಿಗಳ ಬಗ್ಗೆ ಗೊಂದಲಗಳು, ಸರಿತಪ್ಪುಗಳ ಬಗ್ಗೆ ಜಿಜ್ಞಾಸೆಗಳು.

* ಲೈಂಗಿಕ ಆಸೆ, ಅಭಿವ್ಯಕ್ತಿಯ ಬಗ್ಗೆ ಯೋಚನೆಗಳು, ಭಯಗಳು, ನಿರೀಕ್ಷೆಗಳು, ತಪ್ಪಿತಸ್ಥ ಭಾವನೆಗಳು.

* ವಿಪರೀತ ಕೀಳರಿಮೆ: ಆತ್ಮವಿಶ್ವಾಸದ ಕೊರತೆ

* ಆರೋಗ್ಯ, ದೈಹಿಕ, ಮಾನಸಿಕ ಶಕ್ತಿ ಸಾಮರ್ಥ್ಯಗಳ ಬಗ್ಗೆ ಅನುಮಾನ ಆತಂಕಗಳು

* ನಕಾರಾತ್ಮಕ ಭಾವನೆಗಳು: ಭಾವೋದ್ವೇಗಗಳು, ಬೇಸರ, ದುಃಖ, ಸಿಟ್ಟು, ಆತಂಕ, ಭಯ, ಕೀಳರಿಮೆ, ಜಿಗುಪ್ಸೆ, ಮತ್ಸರ, ಇತ್ಯಾದಿ.

ಸಾಮಾನ್ಯ ಬಾಹ್ಯ ಆಕರ್ಷಣೆ, ವಿಕಷಣೆಗಳು:

ಇಂದು ಬಹುತೇಕ ಮನೆಗಳಲ್ಲಿ ‘ಟೀವಿ ಅತ್ಯಂತ ಸಾಮಾನ್ಯ ಆಕರ್ಷಣೆಯೂ ಹೌದು; ವಿಕರ್ಷಣೆಯೂ ಹೌದು. ಟೀವಿ ಜ್ಞಾನಾರ್ಜನೆಯ ಮಾಧ್ಯಮಕ್ಕಿಂತ ಮನರಂಜನಾ ಮಾಧ್ಯಮವಾಗಿಬಿಟ್ಟಿದೆ. ಹರೆಯದ ಹುಡುಗ-ಹುಡುಗಿಯರಿಗೆ ಟೀವಿ ವೀಕ್ಷಣೆ ಜನಪ್ರಿಯ ಹವ್ಯಾಸವಾಗಿದೆ. ಸಿನೆಮಾಗಳು ಅಥವಾ ಸಿನೇಮಾ ಆಧಾರಿತ ಕಾರ್ಯಕ್ರಮಗಳು, ಹಾಡು, ನೃತ್ಯಗಳು, ಟಾಕ್ ಶೋಗಳು ಅವರ ಗಮನವನ್ನು ಸೆಳೆಯುವುದರಲ್ಲಿ ಯಶಸ್ವಿಯಾಗುತ್ತವೆ. ಹಾಗೇ ರಾತ್ರಿ ಸರಿ ಹೊತ್ತಿನ ತನಕ ಅವರು ಟೀವಿ ವೀಕ್ಷಣೆಯಲ್ಲಿ ತೊಡಗಬಹುದು. ಜೊತೆಗೆ ಟೀವಿಯಲ್ಲಿ ಬರುವ ಜಾಹೀರಾತುಗಳು, ಭೋಗವಸ್ತುಗಳ ಪ್ರಚಾರ, ಪ್ರ್ರಾಯೋಜನೆಗಳು, ಗ್ಲಾಮರಸ್ ಜೀವನದ ಪಲುಕುಗಳು ಅವರ ಚಿತ್ತವನ್ನು ಕದಡುತ್ತವೆ. ಇವುಗಳ ಮುಂದೆ ಪಠ್ಯ ವಿಷಯಗಳು ಅನಾಕರ್ಷಣೀಯವೆನಿಸುತ್ತವೆ!

ಸುತ್ತಮುತ್ತಲಿನ ಚಟುವಟಿಕೆಗಳು ಜನರ ಮಾತುಕತೆ, ಶಬ್ದ, ಗದ್ದಲ, ಮನಸ್ಸನ್ನು ಕಲಕುವ ಘಟನೆಗಳು, ಸ್ನೇಹಿತರು ಅವರೊಡನೆ ಒಡನಾಟ, ಆಹಾರ ಸೇವನೆ, ಮೋಜು ಮನರಂಜನೆಗಳು, ಜಗಳ, ಮನಸ್ತಾಪಗಳು, ಪಠ್ಯೇತರ ವಿಷಯ-ಚಟುವಟಿಕೆ ಕೆಲಸಗಳಿಗೆ ಉತ್ತೇಜನ ನೀಡುವ ಪರಿಸರ- ಇವೆಲ್ಲ ಹರೆಯದವರ ಏಕಾಗ್ರತೆಯನ್ನು ಭಂಗಗೊಳಿಸುತ್ತವೆ. ಕೆಲವರು ಪಾರ್ಟ್‌ಟೈಂ ಉದ್ಯೋಗ ಮಾಡುತ್ತಾ, ಅಧ್ಯಯನವನ್ನು ಮಾಡುತ್ತಿರುತ್ತಾರೆ. ಸಂಜೆ ಕಾಲೇಜಿನಲ್ಲಿ ಓದುತ್ತಿರುತ್ತಾರೆ. ಉದ್ಯೋಗದ ಸಹೋದ್ಯೋಗಿಗಳ ಮೇಲಧಿಕಾರಿಗಳ ಕಿರಿಕಿರಿ, ಸಮಸ್ಯೆಗಳು, ವ್ಯಕ್ತಿಯ ಮನಸ್ಸನ್ನು ಚಂಚಲಗೊಳಿಸುತ್ತವೆ. ದಣಿವು, ಆಯಾಸವು ತಮ್ಮ ಕೊಡುಗೆಯನ್ನು ನೀಡುತ್ತವೆ.

ಮಾನಸಿಕ ಕಾಯಿಲೆಗಳಾದ ಆತಂಕ, ಖಿನ್ನತೆ, ಮನೋರೋಗ, ಸ್ಕಿಜೋಪ್ರಿನಿಯಾ, ಮೇನಿಯಾ ರೋಗ, ಮದ್ಯ ಮಾದಕ ವಸ್ತುಗಳ ಸೇವನೆಯ ಚಟ, ನಿದ್ರಾ ಹೀನತೆ (ಇನ್ಸೋಮ್ನಿಯಾ) ಇವೆಲ್ಲ ಏಕಾಗ್ರತೆಯನ್ನು ಕುಂಠಿತಗೊಳಿಸುತ್ತವೆ.

ಏಕಾಗ್ರತೆಯನ್ನು ವೃದ್ಧಿಸುವುದು ಹೇಗೆ? (ಇದನ್ನು ಓದಲು ನಿಮ್ಮ ಮಕ್ಕಳಿಗೆ ಹೇಳಿ)

 • ಒಂದು ನಿರ್ದಿಷ್ಟ ಕೆಲಸಕ್ಕೆ ಒಂದು ನಿರ್ದಿಷ್ಟ ಅವಧಿ/ ವೇಳೆಯನ್ನು ನಿಗದಿಮಾಡಿಕೊಳ್ಳಿ, ಉದಾಹರಣೆಗೆ ಅಧ್ಯಯನ ಮಾಡಲು ಬೆಳಿಗ್ಗೆ ೬ ರಿಂದ ೮ ಗಂಟೆ ಮತ್ತೆ ಸಂಜೆ ೭ರಿಂದ ೯ ಗಂಟೆ. ಆಟವಾಡಲು ಸಂಜೆ ೫ರಿಂದ ೬ ಗಂಟೆ, ಸ್ನೇಹಿತರ ಜೊತೆ ಮಾತನಾಡಲು ಸಂಜೆ ೬ ರಿಂದ ೬.೩೦, ಪ್ರತಿ ಭಾನುವಾರ ಬೆಳಿಗ್ಗೆ ೯ ರಿಂದ ೧ ಗಂಟೆವರೆಗೆ ಮನೆ ಕೆಲಸ ಮಾಡಲು ಇತ್ಯಾದಿ, ಆಯಾ ಅವಧಿಯಲ್ಲಿ ಆ ಕೆಲಸ, ಚಟುವಟಕೆಯನ್ನಲ್ಲದೆ ಬೇರೇನನ್ನೂ ಯೋಚಿಸಬೇಡಿ ಹಾಗೂ ಯೋಚನೆ ಬಂದರೆ ಬೇಡ ಬರಬೇಡಿ ಎನ್ನಿ.
 • ಹಿನ್ನೆಲೆಯಲ್ಲಿ ತಗ್ಗು ಸ್ವರದಲ್ಲಿ ಸಂಗೀತ, ಅದರಲ್ಲೂ ವಾದ್ಯ ಸಂಗೀತದ ಕೆಸೆಟ್ಟನ್ನು ಹಾಕಿ. ಸಂಗೀತ ನಿಮ್ಮ ಕಿವಿಯ ಮೇಲೆ ಬೀಳುತ್ತಿರಲಿ.
 • ಸುತ್ತಮುತ್ತ ಯಾವುದೇ ಆಕಷಣೆ/ವಿಕಷಣೆ ಇರದಂತೆ ನೋಡಿಕೊಳ್ಳಿ. ಏನನ್ನು ಓದಬೇಕೋ ಅದನ್ನು ಅರ್ಥಮಾಡಿಕೊಂಡು ಓದಿ. ಹಾಗೇ ಅರ್ಥಮಾಡಿಕೊಂಡ ವಿಷಯದ ಬಗ್ಗೆ ಸಂಕ್ಷಿಪ್ತವಾದ ‘ನೋಟ್ಸ್ ಬರೆಯಿರಿ.
 • ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ಹತ್ತು ನಿಮಿಷ ಪ್ರಾಣಾಯಾಮ ಅಥವಾ ದೀರ್ಘ‌ಉಸಿರಾಟದ ವ್ಯಾಯಾಮ ಮಾಡಿ, ನೆಲದ ಮೇಲೆ/ ಕುರ್ಚಿಯ ಮೇಲೆ ಆರಾಮವಾಗಿ ಕುಳಿತುಕೊಳ್ಳಿ, ಮೈ ಸಡಿಲವಾಗಿರಲಿ. ಯಾವುದೇ ಅಂಗವನ್ನು ಬಿಗಿಯಾಗಿಡಬೇಡಿ. ಕಣ್ಣು ಮುಚ್ಚಿಕೊಳ್ಳಿ. ಈಗ ಆಳವಾಗಿ ಮತ್ತು ನಿಧಾನವಾಗಿ ಉಸಿರನ್ನು ಒಳಗೆಳೆದುಕೊಳ್ಳಿ. ನಂತರ ನಿಧಾನವಾಗಿ ಉಸಿರು ಬಿಡಿ. ಉಸಿರು ಬಿಡುವಾಗ ‘ಓಂ ಎನ್ನಿ ಅಥವಾ ಮ್..ಮ್.. ಎಂದು ಶಬ್ದ ಮಾಡಿ ಆ ಶಬ್ದವನ್ನೇ ಆಲಿಸಿ.
 • ಯಾವುದೇ ಸಮಸ್ಯೆ, ವಿಚಾರವಿದ್ದರೆ ಅದರ ಬಗ್ಗೆ ಚಿಂತೆ ಮಾಡದೇ, ಮನೆಯವರೊಡನೆ, ಸಂಬಂಧಪಟ್ಟವರೊಡನೆ ಚರ್ಚಿಸಿ. ಸಮಸ್ಯೆ/ವಿಷಯ ಬಗೆಹರಿಯದಿದ್ದರೆ, ಪರಿಹಾರ ಕಾಣದಿದ್ದರೆ, ಅದರೊಂದಿಗೆ ಹೊಂದಿಕೊಳ್ಳಿ.
 • ಪ್ರತಿನಿತ್ಯ ಯಾವುದಾದರೂ ಒಂದು ಆಟ, ವ್ಯಾಯಾಮ, ಚಿತ್ರಕಲೆ, ಸಂಗೀತ ಕಲಿಯುವುದು, ಸೃಜನ ಶೀಲ ಚಟುವಟಿಕೆಯಲ್ಲಿ ಭಾಗವಹಿಸುವುದು ಮಾಡಿ. ಇದರಿಂದ ಮನಸ್ಸು ಪ್ರಶಾಂತವಾಗಿ, ಏಕಾಗ್ರತೆ ಹೆಚ್ಚುತ್ತದೆ.
 • ಕಲಿಯಬೇಕಾದ ವಿಷಯ/ಕೌಶಲದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಿ, ಚೆನ್ನಾಗಿ ಕಲಿಯಬೇಕೆಂಬ ಗುರಿಯಿಟ್ಟುಕೊಂಡರೆ ಏಕಾಗ್ರತೆ ಸಾಧ್ಯವಾಗುತ್ತದೆ.
 • ವೇಳೆಗೆ ಸರಿಯಾಗಿ ಊಟ, ತಿಂಡಿ, ನಿದ್ರೆ, ಮನರಂಜನೆ, ವಿರಾಮದಾಯಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ.
 • ಏಕಾಗ್ರತೆಯನ್ನು ಭಂಗಗೊಳಿಸುವ ಅಂಶಗಳನ್ನು ಪತ್ತೆಮಾಡಿ, ನಿವಾರಿಸಿ.

೫. ನೆನಪಿನ ಶಕ್ತಿ ಕಡಿಮೆ

‘ನಮ್ಮ ಹುಡುಗಿ ಕಷ್ಟಪಟ್ಟು ಓದುತ್ತಾಳೆ, ಆದರೆ ಓದಿದ್ದೆಲ್ಲ ಅವಳಿಗೆ ಬಹಳ ಬೇಗ ಮರೆತು ಹೋಗುತ್ತದೆ. ಏನು ಮಾಡುವುದು?

‘ನಮ್ಮ ಹುಡುಗ ದಿನಕ್ಕೆ ನಾಲ್ಕೈದು ಗಂಟೆಗಳ ಕಾಲ ಓದುತ್ತಾನೆ. ಓದಿದ್ದು, ಆ ದಿನ ನೆನಪಿನಲ್ಲಿರುತ್ತದಂತೆ, ಮರು ದಿನ ಅರ್ಧದಷ್ಟು ವಿಷಯ ನೆನಪಿನಲ್ಲಿರುವುದಿಲ್ಲವಂತೆ, ಒಂದು ವಾರದ ಮೇಲೆ ನೋಡಿದರೆ, ಏನೂ ಜ್ಞಾಪಕದಲ್ಲಿರದೇ ಪಾಠ ಹೊಸತರಂತೆ ಕಾಣುತ್ತದಂತೆ, ನೆನಪಿನ ಶಕ್ತಿಯನ್ನು ಜಾಸ್ತಿ ಮಾಡುವ ಔಷಧಿ, ಟಾನಿಕ್, ಇದ್ದರೆ ಡಾಕ್ಟರನ್ನು ಕೇಳಬೇಕು.

‘ಈ ಹುಡುಗ ಹುಡುಗಿಯರಿಗೆ ಪಠ್ಯ ವಿಚಾರಗಳು ನೆನಪಿನಲ್ಲಿರುವುದಿಲ್ಲ, ಆದರೆ ಸಚಿನ್ ತೆಂಡೂಲ್ಕರ್ ಬಗ್ಗೆ, ಶಾರುಖ್‌ಖಾನ್ ಬಗ್ಗೆ, ವಿಶ್ವ ಪುಟ್‌ಬಾಲ್ ಬಗ್ಗೆ, ಸಾನಿಯಾ ಮಿರ್ಜಾ ಬಗ್ಗೆ, ಐಶ್ವರ್ಯ ರೈ ಬಗ್ಗೆ ಕೇಳಿ ಅವರ ವಿವರಗಳೆಲ್ಲವನ್ನೂ ಹೇಳುತ್ತಾರೆ.

ಇದು ನಿಜ, ಆಸಕ್ತಿ ಇರುವ ವಿಷಯಗಳು ನೆನಪಿನಲ್ಲಿರುತ್ತವೆ. ಬೇಗ ಮರೆಯುವುದಿಲ್ಲ, ಬೇಸರ ಹುಟ್ಟಿಸುವ, ಯಾಂತ್ರಿಕ ವಿವರಗಳು, ಪಠ್ಯ ವಿಚಾರಗಳು ಬಹಳ ಬೇಗ ಮರೆತುಹೋಗುತ್ತವೆ. ಆದರೆ ಅವನ್ನು ನಾವು ಮರೆಯುವಂತಿಲ್ಲ. ನಮ್ಮ ನೆನಪಿನ ಶಕ್ತಿ ಏಕೆ ಕಡಿಮೆಯಾಗಿರುತ್ತದೆ. ಅದನ್ನು ಹೆಚ್ಚಿಸಲು ಯಾವ ವಿಧಾನವನ್ನು ಅನುಸರಿಸಬೇಕು ನೋಡೋಣ.

ಜ್ಞಾಪಕ ಕ್ರಿಯೆ ಮೂರು ಹಂತಗಳಲ್ಲಿ ನಡೆಯುತ್ತದೆ.

೧. ನೋಂದಣಿ: ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಚರ್ಮಗಳ(ಪಂಚೇಂದ್ರಿಯಗಳು) ಮೂಲಕ ಹೊಸ ಮಾಹಿತಿಯು ಮಿದುಳಿನೊಳಕ್ಕೆ ಸೇರುತ್ತದೆ. ಅಲ್ಲಿ ನರ ಕೋಶಗಳಲ್ಲಿ ನೋಂದಾಯಿಸಲ್ಪಡುತ್ತದೆ. ಈ ನೋಂದಣಿಯ ಸಮಯದಲ್ಲಿ ನರಕೋಶಗಳಲ್ಲಿ ಕೇವಲ ವಿದ್ಯುತ್ ತರಂಗಗಳು ಕಾಣಿಸಿಕೊಳ್ಳುತ್ತವೆ. ಮಾಹಿತಿ ಏನು ಎಂದು ನಮಗೆ ಅರ್ಥವಾಗುತ್ತದೆ.

೨. ಮುದ್ರಣ: ಮಾಹಿತಿ ನಮಗೆ ಮುಖ್ಯ ಎಂದೆನಿಸಿದರೆ ಈಗ ಅದು ನರಕೋಶಗಳಲ್ಲಿ ಮುದ್ರಣಗೊಳ್ಳುತ್ತದೆ. ಮುದ್ರಣಕ್ಕೆ ಅಸಿಟೈಲ್ ಕೊಲೈನ್ ಎಂಬ ನರವಾಹಕ ವಸ್ತು ಅಗತ್ಯ. ಈ ವಸ್ತು ನರಕೋಶಗಳ ತುದಿಯಲ್ಲಿ ಶೇಖರವಾಗುತ್ತದೆ. ೩೦ರಿಂದ ೬೦ ನಿಮಿಷಗಳ ಕಾಲ ಮುದ್ರಣವಾಗಲು ಬೇಕಾದಷ್ಟು ಅಸಿಟೈಲ್ ಕೊಲೈನ್ ಸಂಗ್ರಹವಿರುತ್ತದೆ. ಆಮೇಲೆ ಸಂಗ್ರಹ ಮುಗಿದು ಮುದ್ರಣ ಕಷ್ಟವಾಗುತ್ತದೆ.

೩. ಸ್ಮರಣೆ: ಹೀಗೆ ದಾಖಲುಗೊಂಡ ಮಾಹಿತಿಯು ನೆನಪಿನ ಉಗ್ರಾಣದಲ್ಲಿ ಶೇಖರವಾಗುತ್ತದೆ. ಅಗತ್ಯ ಬಿದ್ದಾಗ ಮಾಹಿತಿಯನ್ನು ಹೊರತೆಗೆದು ಉಪಯೋಗಿಸಿಕೊಳ್ಳುವುದೇ ಸ್ಮರಣೆ.

ಓದಿದ್ದು ನೆನಪಿನಲ್ಲಿ ಉಳಿಯದಿರಲು ಸಾಮಾನ್ಯ ಕಾರಣಗಳೆಂದರೆ:

 • ಏಕಾಗ್ರತೆಯಿಂದ ಓದದಿರುವುದು, ಪಾಠ ಕೇಳದಿರುವುದು. ಓದುವಾಗ, ಪಾಠ ಕೇಳುವಾಗ ಅನ್ಯಮನಸ್ಕರಾಗಿರುವುದು, ಇತರ ಆಕರ್ಷಣೆ, ವಿಕರ್ಷಣೆಗೆ ಒಳಗಾಗುವುದು.
 • ನಿರ್ದಿಷ್ಟ ವಿಷಯ, ಕೋರ್ಸ್‌ನಲ್ಲಿ, ವಿದ್ಯೆ ಕಲಿಯುವುದರಲ್ಲಿ ಆಸಕ್ತಿ ಇಲ್ಲದಿರುವುದು ಅಥವಾ ನಿರ್ದಿಷ್ಟ ತೊಂದರೆಗಳಿರುವುದು.
 • ಭಾವೋದ್ವೇಗಗಳು: ಯಾವುದೇ ಕಾರಣದಿಂದ ಮನಸ್ಸು, ಆತಂಕ, ಭಯ, ಸಿಟ್ಟು, ಕೋಪ, ಬೇಸರ, ದುಃಖಗಳಿಂದ ಆವೃತವಾಗಿದ್ದರೆ, ವಿಷಯ ನೋಂದಣಿಯಾಗುವುದಿಲ್ಲ, ಭಾವೋದ್ವೇಗದಿಂದ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳೂ, ಮರೆವಿಗೆ ಒಳಗಾಗಿ ತೊಂದರೆಗೀಡಾಗುತ್ತಾರೆ.
 • ಶಾರೀರಕ ಮತ್ತು ಮಾನಸಿಕ ಅನಾರೋಗ್ಯ: ಯಾವುದೇ ಶಾರೀರಕ ಮತ್ತು ಮಾನಸಿಕ ಅನಾರೋಗ್ಯದಿಂದ ವ್ಯಕ್ತಿಯ ಚೈತನ್ಯ ಕುಗ್ಗುತ್ತದೆ. ಏಕಾಗ್ರತೆ ನಷ್ಟವಾಗುವುದಲ್ಲದೆ, ಅಧ್ಯಯನ ಮಾಡುವುದು ಅಥವಾ ಕುಳಿತು ಪಾಠ ಕೇಳುವುದು ಕಷ್ಟವಾಗುತ್ತದೆ. ಬೇಗ ಆಯಾಸ, ದಣಿವಾಗುತ್ತದೆ. ಅನೀಮಿಯಾದಂತಹ ರೋಗಸ್ಥಿತಿಯಲ್ಲಿ ಮಿದುಳಿನ ನರ ಕೋಶಗಳ ಸಾಮರ್ಥ್ಯವೇ ಕುಸಿಯುತ್ತದೆ.
 • ತಪ್ಪು ಅಧ್ಯಯನ ವಿಧಾನಗಳು:

೧) ಅನುಕೂಲಕರವಲ್ಲದ, ಗದ್ದಲದ, ಕಿರಿಕಿರಿ ಆಯಾಸವನ್ನುಂಟುಮಾಡುವ ಪರಿಸರದಲ್ಲಿ ಅಧ್ಯಯನ ಮಾಡುವುದು.

೨) ತಪ್ಪು ಭಂಗಿಯಲ್ಲಿ ಕುಳಿತು, ನಿಂತು ಅಥವಾ ಮಲಗಿಕೊಂಡು ಓದುವುದು.

೩) ವಿರಾಮ ಕೊಡದೇ, ಗಂಟೆಗಟ್ಟಲೆ ಒಂದೇ ಸಮನೆ ಓಡುವುದು.

೪) ಓದಿದ್ದನ್ನು ಅರ್ಥಮಾಡಿಕೊಳ್ಳದೇ ಓದುವುದು, ಬಾಯಿ ಪಾಠ ಮಾಡಲು, ಉರುಹಚ್ಚಲು ಪ್ರಯತ್ನಿಸುವುದು.

೫) ಒಂದೇ ವಿಷಯವನ್ನು ದೀರ್ಘಕಾಲ ಅಥವಾ ಇಡೀ ದಿವಸ ಓದುವುದು.

೬) ಓದುವಾಗ ಬರೆಯದೇ, ಮನನ ಮಾಡದೇ ಇರುವುದು.

೭) ಸ್ನೇಹಿತರೊಂದಿಗೆ, ಸಹಪಾಠಿಗಳೊಂದಿಗೆ ಹರಟೆ ಹೊಡೆಯುತ್ತಾ ಓದುವುದು.

೮) ಉಪವಾಸವಿದ್ದು, ಅಥವಾ ಫುಲ್ ಮೀಲ್ಸ್ ಮಾಡಿ, ಹೊಟ್ಟೆ ಭಾರವಿದ್ದಾಗ ಓದುವುದು.

೯) ರೇಡಿಯೋ ಕೇಳುತ್ತಾ, ಟೀವಿ ನೋಡುತ್ತಾ ಓದುವುದು.

೧೦) ನಕಾರಾತ್ಮಕ ಯೋಚನೆಗಳನ್ನು ತಲೆಯಲ್ಲಿ ತುಂಬಿಕೊಂಡು(ಉದಾಹರಣೆಗೆ ಈ ವಿಷಯ ನನಗೆ ಇಷ್ಟವಿಲ್ಲ, ಇದನ್ನು ಓದುವುದು ಒಂದು ಕರ್ಮ, ನಾನಿದರಲ್ಲಿ ಪಾಸಾಗುವುದು ಡೌಟು) ಓದುವುದು.

೧೧) ಓದಿದ್ದನ್ನು ಆಗಾಗ ನೆನಪಿಸಿಕೊಳ್ಳದಿರುವುದು, ಮಿದುಳಿನಲ್ಲಿ ಎಷ್ಟು ರೆಕಾರ್ಡಾಗಿದೆ ಎಷ್ಟು ಸ್ಮರಣೆಗೆ ಬರುತ್ತದೆ ಎಂದು ಚೆಕ್ ಮಾಡದಿರುವುದು.

೧೨) ಅತಿಯಾದ ಆತ್ಮವಿಶ್ವಾಸ; ಇದೇನು ಮಹಾ ನನಗೆಲ್ಲ ಗೊತ್ತು, ಪಾಸ್ ಮಾಡಲು ಏನೂ ಕಷ್ಟಪಡಬೇಕಿಲ್ಲ, ಪರೀಕ್ಷೆ ಸಮಯದಲ್ಲಿ ಓದಿದರೆ, ರಿವೈಸ್ ಮಾಡಿದರೆ ಸಾಕು ಇತ್ಯಾದಿ.

ಹಾಗಾದರೆ ಮರೆವು ಕಡಿಮೆ ಮಾಡಿ ಜ್ಞಾಪಕ ಶಕ್ತಿಯನ್ನು ವೃದ್ಧಿಸಿಕೊಳ್ಳಲು, ವಿದ್ಯಾರ್ಥಿಗಳು ಏನು ಮಾಡಬೇಕು?

ಜ್ಞಾಪಕ ಶಕ್ತಿ ವೃದ್ಧಿಗೆ ಕೆಲ ಸಲಹೆಗಳು

೧. ನೀವು ಆಯ್ಕೆ ಮಾಡಿಕೊಂಡ ಕೋರ್ಸನ್ನು ಪ್ರೀತಿಸಿ, ಆಸಕ್ತಿಯನ್ನು ಹೆಚ್ಚಿಸಿಕೊಳ್ಳಿ.

೨. ಕೋರ್ಸ್ ಆರಂಭದಿಂದಲೇ ಓದಲು ಆರಂಭಿಸಿ, ಕ್ರಮಬದ್ಧವಾಗಿ ಆರಂಭಿಸಿ.

೩. ಮುಂಜಾನೆ, ಸಂಜೆ ಅಥವಾ ರಾತ್ರಿಯ ಯಾವುದಾದರೊಂದು ಪ್ರಶಾಂತ, ಅನುಕೂಲಕರ ಸಮಯವನ್ನು ಆಯ್ದುಕೊಂಡು ದಿನ ನಿತ್ಯ ಅಭ್ಯಸಿಸಿ.

೪. ಶಾರೀರಕವಾಗಿ ಅಥವಾ ಮಾನಸಿಕವಾಗಿ ಆಯಾಸಗೊಂಡಾಗ ಓದಲು ಕೂರಬೇಡಿ, ವಿಶ್ರಾಂತಿಯ ನಂತರ ಮುಂದುವರೆಸಿ.

೫. ಓದಲು ಕುಳಿತಾಗ ಅದಕ್ಕೆ ಅಡಚಣೆ ತರುವ ಸಂದರ್ಭಗಳಿಂದ ತಪ್ಪಿಸಿಕೊಳ್ಳಿ, ಆ ತೊಂದರೆಗಳ ಬಗ್ಗೆ ವಿವೇಚಿಸಲು ಬೇರೆಯೇ ಒಂದು ಸಮಯವನ್ನು ನಿಗದಿಪಡಿಸಿಕೊಳ್ಳಿ.

೬. ಓದುವಾಗ ಅದಲ್ಲದೇ ಬೇರೇನನ್ನೂ ಮಾಡಬೇಡಿ.

೭. ಅರ್ಧ ಗಂಟೆ ಓದಿ, ಪುಸ್ತಕವನ್ನು ಮುಚ್ಚಿಟ್ಟು ಆ ಅವಧಿಯಲ್ಲಿ ಓದಿರುವುದನ್ನು ಮನಸ್ಸಿನಲ್ಲಿ ತಂದುಕೊಳ್ಳಿ, ಮನನ ಮಾಡಿಕೊಳ್ಳಿ.

೮. ಮೂರು ನಿಮಿಷ ವಿಶ್ರಾಂತಿ ಪಡೆಯಿರಿ, ಮುಖ್ಯಾಂಶಗಳನ್ನು ನೆನಪಿಸಿಕೊಂಡು ಬರೆಯಿರಿ, ನೆನಪಿಗೆ ಬರದವುಗಳನ್ನು ಮತ್ತೆ ಗಮನಿಸಿ. ಗಂಟೆಗಟ್ಟಲೆ ಓದುವುದರಿಂದ ಶ್ರಮವೇ ಹೊರತು ಕಲಿಕೆ ಸಾಧ್ಯವಿಲ್ಲ ಎಂಬುದನ್ನು ಗಮನಿಸಿ.

೯. ಓದಿದ ವಿಷಯಗಳನ್ನು ಸಹಪಾಠಿಗಳೊಡನೆ ಚರ್ಚಿಸಿ, ಇನ್ನೊಬ್ಬ ಗೆಳೆಯನಿಗೆ ಹೇಳಿಕೊಡಿ.

೧೦. ಹಳೆಯ ಪ್ರಶ್ನೆ ಪತ್ರಿಕೆ ತೆಗೆದುಕೊಂಡು ಅದರಲ್ಲಿರುವ ಪ್ರಶ್ನೆಗಳಿಗೆ ಕಾಲಮಿತಿಯಲ್ಲಿ ಉತ್ತರ ಬರೆಯುವ ಅಭ್ಯಾಸ ಮಾಡಿ. ಉತ್ತರಗಳನ್ನು ಶಿಕ್ಷಕರಿಗೆ ತೋರಿಸಿ, ಹೆಚ್ಚು ಅಂಕಗಳನ್ನು ಪಡೆಯಲು ಹೇಗೆ ಬರೆಯಬೇಕೆಂದು ವಿಚಾರಿಸಿ. ಇದರಿಂದ ಪರೀಕ್ಷಾ ಕಾಲದಲ್ಲಿ ಉದ್ವೇಗ ಉಂಟಾಗುವುದು ತಪ್ಪುತ್ತದೆ.

ನೆನಪಿಡಿ: ನೆನಪಿನ ಶಕ್ತಿಯನ್ನು ಹೆಚ್ಚಿಸುವ ನಿರ್ದಿಷ್ಟ ಆಹಾರ ಪದಾರ್ಥಗಳಾಗಲೀ, ಮಾತ್ರೆ, ಟಾನಿಕ್, ಇಂಜೆಕ್ಷನ್‌ಗಳಾಗಲೀ ಇಲ್ಲ. ಮಾರುಕಟ್ಟೆಯಲ್ಲಿ ಅಬ್ಬರದ ಪ್ರಚಾರದೊಂದಿಗೆ ಮಾರಾಟವಾಗುವ ಔಷಧಿ, ಟಾನಿಕ್‌ಗಳು ಜ್ಞಾಪಕಶಕ್ತಿಯನ್ನು ಹೆಚ್ಚಿಸುತ್ತವೆ ಎನ್ನಲು ವೈಜ್ಞಾನಿಕವಾದ ಆಧಾರವಿಲ್ಲ.

೬. ಪರೀಕ್ಷಾ ಭಯ:

‘ಪರೀಕ್ಷೆ ಎಂದರೆ ಸಾಕು ನಡುಗಿ ಹೋಗುತ್ತಾಳೆ ಸರ್, ಎಲ್ಲಾ ಓದಿರ‍್ತಾಳೆ, ಮನೆಯಲ್ಲಿ ಶಾಲೆಯಲ್ಲಿ ಪ್ರಶ್ನೆ ಕೇಳಿದರೆ, ಸರಿಯಾಗಿ ಉತ್ತರ ಕೊಡುತ್ತಾಳೆ, ಆದರೆ ಪರೀಕ್ಷಾ ದಿನ ಏನಾಗುತ್ತದೋ ಕಾಣೆ. ಭಯದಿಂದ ಏನೂ ಬರೆಯುವುದಿಲ್ಲ. ಕೆಲವು ಸಲ ಖಾಲಿ ಪೇಪರ್ ಕೊಟ್ಟು ಬಂದಿದ್ದಾಳೆ. ಅಥವಾ ಯಾವುದೋ ಪಶ್ನೆಗೆ ಯಾವುದೋ ಉತ್ತರವನ್ನು ಕೊಡ್ತಾಳೆ, ಎಷ್ಟು ಧೈರ್ಯ ಹೇಳಿದರೂ, ಏನೂ ಪ್ರಯೋಜನವಾಗಿಲ್ಲ ಎಂದರು ಶ್ರೀನಿವಾಸ್.

ಪರೀಕ್ಷಾ ಭಯ ಸಾರ್ವತ್ರಿಕ ಸಮಸ್ಯೆ, ಪರೀಕ್ಷೆಗೆ ಹೋಗುವ ಬಹುತೇಕ ವಿದ್ಯಾರ್ಥಿಗಳಿಗೆ ಭಯ ಸಹಜವಾದದ್ದೇ. ಇಡೀ ಆರು ತಿಂಗಳು ಅಥವಾ ಒಂದು ವರ್ಷ ಕಾಲ ಕಲಿತ ವಿಷಯ ಕೌಶಲಗಳನ್ನು ಕೇವಲ ಮೂರು ಗಂಟೆಗಳ ಅವಧಿಯಲ್ಲಿ ಆಯ್ದ ಕೆಲವೇ ಪ್ರಶ್ನೆಗಳಿಗೆ ಉತ್ತರಿಸುವುದರ ಮೂಲಕ ಪಾಸು-ಫೇಲು ನಿರ್ಧರಿಸುವುದರಿಂದ, ಅವರ ಮನಸ್ಸಿನಲ್ಲಿ ಪರೀಕ್ಷೆ ಎಂದರೆ ‘ಫೇಲಾಗಬಹುದು ಎಂಬ ಅನುಮಾನ ಉತ್ಪತ್ತಿಯಾಗುವುದೇ ಭಯಕ್ಕೆ ಕಾರಣ. ಕೆಲವರಿಗೆ ಈ ಭಯ ಅತಿಯಾಗಿ, ಅವರ ನಿರ್ವಹಣೆ ಮತ್ತು ವರ್ತನೆ ಅಸ್ತವ್ಯಸ್ತಗೊಳ್ಳುತ್ತದೆ. ಅತಿ ಭಯದಿಂದ ಅವರಲ್ಲಿ ಈ ಕೆಳ ಕಾಣುವ ಲಕ್ಷಣಗಳು ಕಾಣಿಸಿಕೊಳ್ಳಬಹುದು.

೧. ಅಧ್ಯಯನ ಮಾಡಲು ಏಕಾಗ್ರತೆ ಇಲ್ಲದಿರುವುದು.

೨. ನೆನಪು ಕಡಿಮೆಯಾಗುವುದು.

೩. ಬರೆಯುವ ವೇಗ ಕಡಿಮೆಯಾಗುವುದು.

೪. ಆಲೋಚನೆಗೂ-ಬರವಣಿಗೆಗೂ ಹೊಂದಾಣಿಕೆ ಇಲ್ಲದಿರುವುದು.

೫. ಕೈ ನಡುಕ ಅಥವಾ ಇಡೀ ಶರೀರ ನಡುಗುವುದು.

೬. ಪದೇ-ಪದೇ ಮಲ ಮೂತ್ರ ವಿಸರ್ಜನೆಗೆ ಅವಸರವಾಗುವುದು.

೭. ತಲೆ ನೋವು, ಎದೆ ನೋವು, ಮೈ, ಕೈ ನೋವು, ಸುಸ್ತು, ಆಯಾಸ ಕಾಣಿಸಿಕೊಳ್ಳುವುದು.

೮. ಬ್ಯಾಕ್ಟೀರಿಯಾ, ವೈರಸ್ ಸೋಂಕಾಗಿ ಜ್ವರ, ಕೆಮ್ಮು, ವಾಂತಿ, ಭೇದಿಯುಂಟಾಗುವುದು.

೯. ಪರೀಕ್ಷಾ ಹಾಲ್‌ನಲ್ಲಿ ‘ತಲೆ ಖಾಲಿಯಾದಂತೆ ಅನಿಸುವುದು.

೧೦. ತಲೆ ಹಗುರವಾಗಿ ಸುತ್ತು, ಚಕ್ಕರ್ ಬಂದಂತಾಗುವುದು.

೧೧. ಬವಳಿ ಬಂದು ಬೀಳುವುದು.

೧೨. ಕೈ ನಿಷ್ಕ್ರಿಯವಾಗಿ ಬರೆಯಲಾಗದಿರುವುದು.

೧೩. ವಿಪರೀತ ಬೆವರು ಉತ್ಪತ್ತಿಯಾಗುವುದು.

೧೪. ದೈಹಿಕ, ಮಾನಸಿಕ ಚಡಪಡಿಕೆ.

ಈ ಅತಿಭಯಕ್ಕೆ ಕಾರಣಗಳೇನು ನೋಡೋಣ

೧. ಕೀಳರಿಮೆ ಮತ್ತು ಕುಗ್ಗಿದ ಆತ್ಮವಿಶ್ವಾಸ: ಸಿದ್ಧತೆ ಸಾಲದು ಎಂದೋ, ತಾನು ಅಷ್ಟು ಬುದ್ಧಿಂತನಲ್ಲ ಅಂತಲೋ, ಯಾವುದೋ ಒಂದು ಸಬ್ಜೆಕ್ಟ್ ಕಷ್ಟ ಎಂತಲೋ, ಹಿಂದಿನ ವಿಫಲತೆಯನ್ನು ನೆನಸಿಕೊಂಡೋ, ವಿದ್ಯಾರ್ಥಿ ಭಯಪೀಡಿತನಾಗುವುದು.

೨. ವಿಪರೀತ ಸ್ಪರ್ಧೆ: ಹೆಚ್ಚು ಮಾರ್ಕ್ಸ್ ತೆಗೆಯಲು ಅಥವಾ ಪ್ರಥಮ ಶ್ರೇಣಿಯಲ್ಲಿ ಪಾಸಾಗಲು ವಿಪರೀತ ಒತ್ತಡ ಮತ್ತು ಸ್ಪರ್ಧೆ ಇರುವುದು.

೩. ಪರೀಕ್ಷೆ ಮತ್ತು ಪರೀಕ್ಷಕರು: ಬಹಳ ಸ್ಟ್ರಿಕ್ಟ್ ಅಥವಾ ಟಫ್ ಆಗಿರುತ್ತಾರೆ ಎಂಬ ನಿರೀಕ್ಷೆ ಅನುಮಾನ ಅಥವಾ ವಾಸ್ತವಿಕ ಸತ್ಯ.

೪. ಪರೀಕ್ಷಾ ಅಕ್ರಮಗಳು: ಇತರರು ಕಾಪಿಮಾಡಿ ಅಥವಾ ಇತರರಿಂದ ಹೇಳಿಸಿಕೊಂಡು ಅಥವಾ ಹಣ ಕೊಟ್ಟು ಹೆಚ್ಚು ಅಂಕಗಳನ್ನು ಪಡೆದು ಪಾಸ್ ಆಗುತ್ತಾರೆ. ತನಗೆ ಅದನ್ನು ಮಾಡಲು ಸಾಧ್ಯವಿಲ್ಲ ಎಂದು ಅಸಹಾಯಕತೆ.

೫. ಆತಂಕದ ವ್ಯಕ್ತಿತ್ವ: ಕೆಲವರಿಗೆ ಯಾವುದೇ ಒತ್ತಡದ ಸನ್ನಿವೇಶ ಸಂದರ್ಭದಲ್ಲಿ ಅಥವಾ ಎಲ್ಲಾ ಸಂದರ್ಭಗಳಲ್ಲಿ ವಿಪರೀತ ಆತಂಕ ಭಯವನ್ನು ಅನುಭವಿಸುವ ಪ್ರವೃತ್ತಿ ಇರುವುದು.

೬. ಆತಂಕ ಮನೋರೋಗ (anxiety disorder)

೭. ಸಾಂಕ್ರಾಮಿಕ ಭಯ: ಇತರ ವಿದ್ಯಾರ್ಥಿಗಳು ಭಯ ಪಡುವುದನ್ನು ಕಂಡು ಅಥವಾ ಭಯಪಡುವ ವಿದ್ಯಾರ್ಥಿಗಳ ಜೊತೆಯಲ್ಲಿರುವ ವಿದ್ಯಾರ್ಥಿಗೆ ಭಯ ಸಾಂಕ್ರಾಮಿಕವಾಗಿ ಹರಡುತ್ತದೆ!

೮. ನಕಾರಾತ್ಮಕ ಆಲೋಚನೆಗಳು: ನಾನು ಪಾಸಾಗುವುದಿಲ್ಲ, ನನಗೆ ಒಳ್ಳೆಯ ಮಾರ್ಕ್ಸ್ ಸಿಗುವುದಿಲ್ಲ, ನನ್ನ ಅದೃಷ್ಟ ಚೆನ್ನಾಗಿಲ್ಲ, ಗ್ರಹಗತಿ ಸರಿ ಇಲ್ಲ, ನಾನು ಮುಟ್ಟಿದ್ದೆಲ್ಲಾ ಮಣ್ಣಾಗುತ್ತದೆ. ಚಿನ್ನವಾಗುವುದಿಲ್ಲ. ನಾನು ಸೋಲಲೆಂದೇ ಹುಟ್ಟಿದವನು. ಎಲ್ಲಡೆ ಭ್ರಷ್ಟಾಚಾರವಿದೆ. ಪಕ್ಷಪಾತ ಮಾಡುತ್ತಾರೆ. ನನ್ನ ಮುಖ ನೋಡಿದರೆ ಪರೀಕ್ಷಕರು ಕಡಿಮೆ ಅಂಕಗಳನ್ನು ನೀಡುತ್ತಾರೆ. ಯಶಸ್ಸು ನನ್ನ ಹಣೆಯಲ್ಲಿ ಬರೆದಿಲ್ಲ. ಹೀಗೆ ಸದಾ ನಕಾರಾತ್ಮಕ ವಿಚಾರಗಳು ಮನಸ್ಸಿನಲ್ಲಿರುವುದು.

೯. ಶಿಕ್ಷೆ, ಅವಮಾನದ ನಿರೀಕ್ಷೆ, ತಾನು ಫೇಲಾದರೆ, ಕಡಿಮೆ ಅಂಕಗಳನ್ನು  ತೆಗೆದರೆ ಪಾಲಕರು, ಶಿಕ್ಷಕರು ಸಿಟ್ಟಿಗೆದ್ದು, ತನಗೆ ಶಿಕ್ಷೆ ನೀಡಬಹುದು. ಎಲ್ಲರೆದುರು ಹೀನಾಯ ಮಾಡಿ ಅವಮಾನಿಸುವುದು ಎಂಬ ನಿರೀಕ್ಷೆ ಅಥವಾ ಹಿಂದಿನ ಅನುಭವದಿಂದ ಅತಿ ಭಯ ಉಂಟಾಗುತ್ತದೆ.

ಪರೀಕ್ಷಾ ಭಯದ ನಿವಾರಣ

೧. ಕ್ರಮಬದ್ಧವಾಗಿ, ಕೋರ್ಸ್‌ನ ಪ್ರಾರಂಭದಿಂದಲೇ ಪರೀಕ್ಷೆಗೆ ಸಿದ್ಧತೆ ಮಾಡುವುದು.

೨. ಕಷ್ಟವಾದ ವಿಷಯ ಅಧ್ಯಾಯಗಳನ್ನು ಗುರುತಿಸಿ, ನುರಿತ ಶಿಕ್ಷಕರ ಮತ್ತು ಸಹಪಾಠಿಗಳ ನೆರವು ಪಡೆಯುವುದು.

೩. ಅಧ್ಯಯನ ಮಾಡುವಾಗ ಸ್ಮರಣೆ (ರೀಕಾಲ್) ಮತ್ತು ತಾಲೀಮಿಗೆ

(REHEARSAL) ಹೆಚ್ಚು ಆದ್ಯತೆ ನೀಡುವುದು. ಪದೇ-ಪದೇ ಟೆಸ್ಟ್, ಮಾದರಿ ಪರೀಕ್ಷೆಗಳಲ್ಲಿ ಭಾಗವಹಿಸುವುದು. ಉತ್ತರಗಳ ಗುಣಮಟ್ಟವನ್ನು ಗಮನಿಸಿ, ಉತ್ತಮಪಡಿಸುವುದು.

೪. ಯಾವುದೇ ವಿಷಯ, ಪರೀಕ್ಷಕರು, ಪರೀಕ್ಷೆ ಬಗ್ಗೆ ನಕಾರಾತ್ಮಕ ಆಲೋಚನೆಗಳನ್ನು ಬದಿಗಿಟ್ಟು, ಸಕಾರಾತ್ಮಕವಾಗಿ ಚಿಂತಿಸುವುದು.

೫. ಸ್ಪರ್ಧೆ, ಒತ್ತಡವಿದ್ದಾಗ ‘ಐ ವಿಲ್ ಡು ಮೈ ಬೆಸ್ಟ್ ನಾನು ನನ್ನ ಅತ್ಯುತ್ತಮ ಪ್ರಯತ್ನ ಮಾಡುತ್ತೇನೆ. ಫಲಿತಾಂಶ ಚೆನ್ನಾಗಿಯೇ ಇರುತ್ತದೆ ಎಂಬ ಆಶಾವಾದವನ್ನು ಜಪಿಸುವುದು. ತನ್ನ ಪೋಷಕರಿಗೆ, ಶಿಕ್ಷಕರಿಗೆ, ನನ್ನನ್ನು ಉತ್ತೇಜಿಸಿ ಬೆನ್ನುತಟ್ಟಿ ಎಂದು ಹೇಳಿಕೊಳ್ಳುವುದು.

೬. ಸಹಪಾಠಿಗಳೊಂದಿಗೆ ವಿಷಯ/ಪ್ರಶ್ನೆಗಳ ಉತ್ತರವನ್ನು ಚರ್ಚಿಸುವುದು.

೭. ವೇಳೆಗೆ ಸರಿಯಾಗಿ ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಸೇವಿಸುವುದು, ನಿದ್ದೆ ಮಾಡುವುದು.

೮. ನಿತ್ಯ ಒಂದು ಗಂಟೆ ಕಾಲ, ವ್ಯಾಯಾಮ, ಕ್ರೀಡೆ, ಸಂಗೀತ ಇತ್ಯಾದಿ ಆರೋಗ್ಯಕರ ಚಟುವಟಿಕೆಗಳಲ್ಲಿ ಭಾಗವಹಿಸುವುದು.

೯. ಆರೋಗ್ಯವನ್ನು ಗರಿಷ್ಠ ಮಟ್ಟದಲ್ಲಿಡುವುದು, ವೈದ್ಯರ ಮಾರ್ಗದರ್ಶನ ಪಡೆಯುವುದು.

೧೦. ಯೋಗ, ಪ್ರಾಣಾಯಾಮ, ಧ್ಯಾನ ಮಾಡುವುದು.

೧೧. ಯಾವುದೇ ಕಷ್ಟ, ನಷ್ಟ, ನೋವು ನಿರಾಶೆಗಳ ಬಗ್ಗೆ ಚಿಂತೆ ಮಾಡದೇ ಮನಸ್ಸನ್ನು ಆದಷ್ಟು ಪ್ರಶಾಂತ ಸ್ಥಿತಿಯಲ್ಲಿಡುವುದು.

೧೨. ಇಷ್ಟೆಲ್ಲಾ ಮಾಡಿದ ಮೇಲೂ ಭಯ ತಗ್ಗದಿದ್ದರೆ, ಮನೋವೈದ್ಯರನ್ನು ಕಾಣುವುದು. ಅವರ ಮಾರ್ಗದರ್ಶನದಲ್ಲಿ ಭಯ ತಗ್ಗಿಸುವ ಔಷಧವನ್ನು ಸ್ವಲ್ಪ ಕಾಲ ಸೇವಿಸುವುದು. ಪ್ರೋಪ್ರನಲಾಲ್, ಕ್ಲೋನಜೆಪಾಮ್, ಬುಸ್ಪರಾನ್ ನಂತಹ ಮಾತ್ರೆಗಳು ಸಹಾಯಕಾರಿ. ಅಡ್ಡ ಪರಿಣಾಮಗಳಿಲ್ಲದ, ಅಭ್ಯಾಸ, ಅವಲಂಬನೆಯನ್ನುಂಟು ಮಾಡದ ಈ ಮಾತ್ರೆಗಳನ್ನು ಕ್ಷೇಮವಾಗಿ ಬಳಸಬಹುದು.