ನಾವಿಬ್ಬರೂ ಉದ್ಯೋಗದಲ್ಲಿದ್ದೇವೆ. ಮದುವೆಯಾಗಿ ಹತ್ತು ವರ್ಷ, ನಮಗೆ ಒಂಭತ್ತು ವರ್ಷದ ಮಗನಿದ್ದಾನೆ. ಹೆರಿಗೆಯಲ್ಲಿ ನೋವು ಅನುಭವಿಸಿದ ಮೇಲೆ ಸಿಜೇರಿಯನ್. ಅವನು ಹುಟ್ಟಿದಾಗಿನಿಂದ ಆರೋಗ್ಯವಾಗಿದ್ದಾನೆ. ಮೂರು ವರುಷಕ್ಕೆ ಸ್ಕೂಲಿಗೆ ಸೇರಿಸಿದೆವು. ಮೂರನೇ  ತರಗತಿಯಲ್ಲಿ ಕಲಿಯುತ್ತಿದ್ದಾನೆ. ಆದರೆ ಸ್ಕೂಲಿಗೆ ಸೇರಿಸಿದಾಗಿನಿಂದ ಪ್ರತಿ ದಿನವೂ ಆಯಾ ತರಗತಿಗಳ ಟೀಚರುಗಳು ನಮಗೆ ಅವನ ಬಗ್ಗೆ ಹೇಳುತ್ತಲೇ ಇದ್ದಾರೆ. ಸರಿಯಾಗಿ ಓದುವುದಿಲ್ಲ. ಬರೆಯುವುದಿಲ್ಲ, ಯಾವುದಕ್ಕೂ ಸ್ವಲ್ಪ ಸಮಯವೂ ಕುಳಿತುಕೊಳ್ಳುವುದಿಲ್ಲ. ಬೇಗ ಬೇಗ ಗಮನ ಬೇರೆ ಕಡೆಗೆ ಹೊರಳುತ್ತದೆ. ಲೋಕಜ್ಞಾನ ಇಲ್ಲ, ಯಾವಾಗಲೂ ಹಾರುವುದು, ಕುಣಿಯುವುದು ಏನನ್ನಾದರು ಅಗಿಯುವುದು, ಇಲ್ಲವೆ ಚೀಪುವುದು ಮಾಡುತ್ತಿರುತ್ತಾನೆ. ಚಿಕ್ಕವನಾದಾಗಿನಿಂದಲೂ ಯಾವ ಆಟದ ಸಾಮಾನು ತಂದುಕೊಟ್ಟರೂ ಅದನ್ನು ಮುರಿದು ಹಾಕುವುದೇ ಅವನಿಗೆ ಸಂತೋಷ ಇತ್ಯಾದಿ. ಅವನು ಎಲ್ಲಾ ಮಕ್ಕಳ ತರಹ ಓದುವುದಿಲ್ಲ ಎಂದು ಕೊರಗುತ್ತಿದ್ದೇನೆ. ಹುಡುಗನನ್ನು ಪರೀಕ್ಷಿಸಬೇಕು ಎಂದರೆ ನಾವು ಕರೆದುಕೊಂಡು ಬರಲು ತಯಾರಿದ್ದೇವೆ.

ನಿಮ್ಮ ಮಗುವಿನ ಸಮಸ್ಯೆಯ ಬಗ್ಗೆ ನೀವು ನೀಡಿದ ಮಾಹಿತಿ ಪರಿಪೂರ್ಣವಾಗಿಲ್ಲ. ನಿಮ್ಮ ಹುಡುಗನ ನಡವಳಿಕೆ ವರ್ತನೆಯ ಬಗ್ಗೆ ನೀವು ನೀಡಿದ್ದ ಮಾಹಿತಿ ಸಾಮಾನ್ಯವಾಗಿ ಮಾನಸಿಕ ಆಘಾತಕ್ಕೊಳಗಾದ ಎಲ್ಲಾ ಮಕ್ಕಳಲ್ಲಿಯೂ ಕಾಣಿಸಿಕೊಳ್ಳಲು ಸಾಧ್ಯ. ಅದು ಬುದ್ಧಿಮಾಂದ್ಯತೆ ಇರಬಹುದು. ಮೆದುಳಿಗೆ ಸಣ್ಣಪ್ರಮಾಣದ ಆಘಾತವಾದಾಗ ಕಾಣಿಸಿಕೊಳ್ಳುವ ಹೈಪರ‍್ ಕೈನೆಟಕ್ ಸಿಂಡ್ರೋಮ್’ ಇರಬಹುದು. ಮಕ್ಕಳು ಮನೋಚಾಂಚಲ್ಯ ಅಲ್ಲದೇ ಇತ್ತೀಚೆಗೆ ಗುರುತಿಸಲ್ಪಟ್ಟಿರುವ ನಿರ್ದಿಷ್ಟ ತಿಳಿಯುವಿಕೆಯ ಅಶಕ್ತತೆಯ ಸ್ಥಿತಿಯಲ್ಲಿ (ಸ್ಪೆಸಿಫಿಕ್ ಲರ‍್ನಿಂಗ್ ಡಿಸೆಬಲಿಟಿ ಸಿಂಡ್ರೋಮ್) ಈ ರೀತಿಯ ವರ್ತನೆ ವೈಪರೀತ್ಯ ಕಾಣಿಸಿಕೊಳ್ಳುತ್ತದೆ. ಮಗುವನ್ನು ಅತಿ ಮುದ್ದಿನಿಂದ ಕಂಡು ಮಗುವಿನ ಪರವಾಗಿ ಎಲ್ಲಾ ಕೆಲಸಗಳನ್ನು ತಾವೇ ಮಾಡುವ ತಂದೆ ತಾಯಂದಿರ ಮಾದರಿ ಅಥವಾ ನಿಮ್ಮಗಳ ಕೆಲಸದಲ್ಲಿಯೇ ಹೆಚ್ಚು ಮಗ್ನರಾಗಿ ಮಗುವನ್ನು ನಿರ್ಲಕ್ಷತೆಯಿಂದ ಕಂಡಾಗಲೂ ಮಗುವು ನೀವು ತಿಳಿಸಿದ ಹಾಗೆ ವರ್ತಿಸುತ್ತದೆ. ಹಾರುವುದು, ಕುಣಿಯುವುದು, ರಚ್ಚೆ ಹಿಡಿಯುವುದು, ಹಠ ಮಾಡುವುದು, ಚಟುವಟಿಕೆಯಲ್ಲಿ ನಿರಂತರತೆ ಹೈಪರ‍್ ಕೈನೆಟಿಕ್ ಸಿಂಡ್ರೋಮ್‌ನಲ್ಲಿ ಕಂಡು ಬಂದರೆ ಆತ ಓದಲು ಬರೆಯಲು ಅಶಕ್ತನಾಗಿರುವುದು, ಕಲಿಯುವಿಕೆಯ ಅಶಕ್ತತೆಯ ಸ್ಥಿತಿಯಲ್ಲಿಯೂ ಮತ್ತು ಲೋಕಜ್ಞಾನದ ಬಗ್ಗೆಯೇ ಅರಿವು ಇಲ್ಲದಿರುವುದು ಬುದ್ಧಿಮಾಂದ್ಯತೆಯ ಸ್ಥಿತಿಯಲ್ಲಿಯೂ ಕಂಡು ಬರುತ್ತದೆ. ಈ ಸಂಕೀರ್ಣ ಸ್ಥಿತಿಯಲ್ಲಿ ನೀವು ಮನೋವೈದ್ಯರಲ್ಲಿ ತುರ್ತು ಪರೀಕ್ಷೆ ಮಾಡಿಸಿ ತಿಳಿದುಕೊಳ್ಳಬೇಕಾದ ಅಂಶವೆಂದರೆ ನಿಮ್ಮ ಮಗುವಿನ ವರ್ತನೆ ವ್ಯತ್ಯಾಸದ ಹಿನ್ನೆಲೆಯಲ್ಲಿ ದೋಷಪೂರ್ಣ ಮೆದುಳು ಕಾರಣವೋ ಅಥವಾ ನಿಮ್ಮ ಮಗುವಿನ ಮಾನಸಿಕ ರೂಪುರೇಷೆಯಲ್ಲಿನ ವ್ಯತ್ಯಾಸದಿಂದಲೋ ಅಥವಾ ತಂದೆ ತಾಯಿಯಾಗಿ ನೀವು ಮಗುವಿಗೆ ನೀಡುವ ಅಪರಿಪೂರ್ಣ ಮಾದರಿಯ ಸಂಕೇತವೋ ಕೂಡಲೇ ತಿಳಿದು ಅದಕ್ಕನುಗುಣವಾದ ಚಿಕಿತ್ಸಾಕ್ರಮವನ್ನು ರೂಪಿಸಬೇಕು.

ಮಾನಸಿಕ ಪ್ರಕ್ರಿಯೆಯಲ್ಲಿನ, ವ್ಯತ್ಯಾಸವಾದರೆ ಕೇವಲ ಮಾರ್ಗದರ್ಶನ ಮನೋಸಂವಾದ ಸಾಕಾಗುತ್ತದೆ. ಬುದ್ಧಿಮಾಂದ್ಯತೆಯಾದರೆ ಮೆದುಳನ್ನು ಬೆಳೆಸುವ ಒಲಿಸುವ ಯಾವ ನಿರ್ದಿಷ್ಟ ಔಷಧಿಯೂ ಇಲ್ಲದಿರುವುದರಿಂದ ಮಗುವಿನ ಭವಿಷ್ಯದ ಪುನಶ್ಚೇತನದ ಕಾರ್ಯಕ್ರಮವನ್ನು ರೂಪಿಸಿಕೊಳ್ಳಬೇಕಾಗುತ್ತದೆ. ಸ್ಪೆಸಿಫಿಕ್ ಲರ‍್ನಿಂಗ್ ಡಿಸೆಬಲಿಟಿ ಸಿಂಡ್ರೋಮ್ ಆದರೆ ಮಗುವಿನ ಬುದ್ಧಿ ಮತ್ತೆ ಅಭಿರುಚಿಗೆ ಅನುಗುಣವಾದ ಪರಿಹಾರ ಕ್ರಮವನ್ನು ಕೂಡಲೇ ಕೈಗೊಳ್ಳಬೇಕಾಗುತ್ತದೆ.