ಪ್ರಾರಂಭ

ಈ ಚಿತ್ರದಲ್ಲಿ ನಿಮಗೆ ಯಾವ ಸಮಸ್ಯೆ ಗೋಚರಿಸುತ್ತದೆ?

ಮೀನಿಗೆ ಆಹಾರ ಬೇಕು, ಆದರೆ ಎಟುಕುತ್ತಿಲ್ಲ. ಒಂದು ಪರಿಹಾರವೆಂದರೆ ಒಂದು ಕುಣಿಕೆ ಮಾಡಿ, ಅದರಿಂದ ಆಹಾರದ ಚಮಚವನ್ನು ಸೆಳೆಯುವುದು.

ಮೀನನ್ನು ಸಮಸ್ಯೆಯಿಂದ ಪಾರು ಮಾಡಿ- ಸಮಸ್ಯೆಗೆ ಬೇರೆ ಬೇರೆ ಪರಿಹಾರಗಳನ್ನು ಸೂಚಿಸಲು ಪ್ರಯತ್ನಿಸಿ.

ಅಧ್ಯಾಯದ ಪರಿಕಲ್ಪನೆ

ಅಧ್ಯಾಯದ ಕಲಿಕೆಯ ಉದ್ದೇಶಗಳು:-

 • ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವುದು
 • ಸಮಸ್ಯೆಯ ಸಂದರ್ಭವನ್ನು ಗುರುತಿಸುವುದು
 • ಸಮಸ್ಯಾ-ಪರಿಹಾರ ಮಾಡುವುದಕ್ಕಾಗಿ ಬೇಕಾಗುವ ಗುಣವನ್ನೂ ಹಾಗೂ ದೃಷ್ಟಿಕೋನಗಳನ್ನು ಬೆಳೆಸಿಕೊಳ್ಳುವುದು
 • ಸಮಸ್ಯೆಯ ವಿವಿಧ ಹಂತಗಳನ್ನು ಅರಿಯುವುದು
 • ಸಮಸ್ಯಾಪರಿಹಾರದ ವಿವಿಧ ಶೈಲಿಗಳನ್ನು ವಿವೇಚಿಸುವುದು

ಪ್ರಸಂಗ

ನೀವು ನಿಮ್ಮ ಇಬ್ಬರು ಸ್ನೇಹಿತರೊಡನೆ ಒಂದು ದಟ್ಟವಾದ ಅರಣ್ಯದಲ್ಲಿ ಹೋಗುವಾಗ ಅಕಸ್ಮಾತ್ ನದಿಯನ್ನು ದಾಟಬೇಕಾದ ಸಂದರ್ಭ ಬಂತೆಂದು ಊಹಿಸಿ.  ಆ ರಾತ್ರಿಯಲ್ಲಿ ಬಿರುಗಾಳಿಯಿಂದಾಗಿ ಅನೇಕ ಮರಗಳು ಬುಡ ಸಮೇತ ಉರುಳಿವೆ, ನದಿ ಉಕ್ಕಿ ಹರಿಯುತ್ತಿದೆ. ನಿಮ್ಮಲ್ಲಿ ಯಾರಿಗೂ ಈಜಲು ಬರುವುದಿಲ್ಲ, ನಿಮ್ಮ ಬಳಿ ನಾವೆಯಾಗಲೀ ಇತರ ಸಾಧನಗಳಾಗಲಿ ಇಲ್ಲ, ಕೇವಲ ಒಂದು ಹಗ್ಗ ಮಾತ್ರ ಇದೆ. ಈಗ ನಿಮ್ಮ ಮುಂದಿನ ಹೆಜ್ಜೆ ಏನು?

—————————————————————————————-

—————————————————————————————-

—————————————————————————————-

ಒಂದು ಸಾಧ್ಯವಾದ ಪರಿಹಾರವೆಂದರೆ ಎಲ್ಲರೂ ಸೇರಿ ಬಿದ್ದ ಮರಗಳನ್ನು ಹಗ್ಗದಿಂದ ಕಟ್ಟಿ ಅದನ್ನು ಸೇತುವೆಯಂತೆ ಬಳಸಿ ನದಿಯನ್ನು ದಾಟಲು ಪ್ರಯತ್ನಿಸಬಹುದು.

ಜೀವನದಲ್ಲಿ ಅನೇಕ ಬಗೆಯ ಸಮಸ್ಯೆಗಳು ಬರುತ್ತವೆ. ಯಾರು ಸಮರ್ಥರೋ ಅವರು ಸಮಸ್ಯೆಯಿಂದ ಪಾರಾಗಿ ಜಯಶೀಲರಾಗುತ್ತಾರೆ. ಇನ್ನು ಕೆಲವರು ಸಮಸ್ಯೆಗಳ ಗೊಂದಲಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ, ಮತ್ತೆ ಕೆಲವರು ತಪ್ಪಿಸಿಕೊಳ್ಳುತ್ತಾರೆ. “ನಾವು ಗಾಳಿಯನ್ನು ನಿಯಂತ್ರಿಸುವುದಕ್ಕಾಗುವುದಿಲ್ಲ, ಆದರೆ ನಮ್ಮ ಹಡಗಿನ ಪಟವನ್ನು ಗಾಳಿಯ ದಿಕ್ಕಿನತ್ತ ಹೊರಳಿಸಬಹುದು” ಎನ್ನುವುದು ಚಿರಪರಿಚಿತ ಜಾನ್ನುಡಿ. ಸಮಸ್ಯಾ-ಪರಿಹಾರವೆನ್ನುವುದು ಇಂದಿನ ಪ್ರಪಂಚದಲ್ಲಿ ಅಗತ್ಯವಾದದ್ದು. ಇದು ಕೇವಲ ಕೆಲವು ಬುದ್ಧಿವಂತರ ಪ್ರತ್ಯೇಕ ಹಕ್ಕೇನಲ್ಲ. ಅದಕ್ಕೆ ಬೇರೊಂದು ರೂಪವೂ ಇದೆ. ಜೀವನವು ಸವಾಲುಗಳನ್ನು ಒಡ್ಡುತ್ತಲೇ ಇರುತ್ತದೆ, ತುಂಬು ಜೀವನವನ್ನು ಬಾಳಲು ಇದನ್ನೆಲ್ಲ ಪರಿಹರಿಸಿಕೊಳ್ಳಲೇ ಬೇಕು. ನಾವು ಧೈರ್ಯ-ಭರವಸೆಗಳನ್ನು ಕಳೆದುಕೊಳ್ಳುವಂತಿಲ್ಲ, ಸಮಸ್ಯಾ-ಪರಿಹಾರದತ್ತ ಶ್ರಮಿಸುತ್ತಲೇ ಇರಬೇಕು. ಎಡೆಬಿಡದ ಪ್ರಯತ್ನದಿಂದ ಮುಂದುವರೆಯುವುದು ಹಾಗೂ ಪ್ರತಿಯೊಂದು ವೈಫಲ್ಯವನ್ನೂ ಸರಿದಾರಿಯನ್ನು ತೋರಿಸುವ ದಿಕ್ಸೂಚಿ ಎಂಬಂತೆ ಕಾಣುವುದು ಬಹಳ ಮುಖ್ಯ.

ಚಿತ್ರವನ್ನು ವಿಶ್ಲೇಷಿಸಿ :-

 • ಸಮಸ್ಯೆಯನ್ನು ಗುರುತಿಸಿ
 • ಬೆಕ್ಕು ಮಾಡಿದ ಮೊದಲ ಕ್ರಿಯೆ ಏನು?
 • ಮೂರನೆಯ ಚಿತ್ರದಲ್ಲಿ ಬೆಕ್ಕು ಏನು ಮಾಡುತ್ತಿದೆ?
 • ಬೆಕ್ಕು ಬಳಸಿರುವ ಪರಿಹಾರೋಪಾಯದ ಕುರಿತಾಗಿ ವಿವೇಚಿಸಿ
 • ನೀವು ಆ ಬೆಕ್ಕಾಗಿದ್ದರೆ ಏನು ಮಾಡುತ್ತಿದ್ದಿರಿ?

ಸಮಸ್ಯೆ ಎಂದರೇನು?

 • ಒಂದು ಪ್ರಶ್ನೆಯನ್ನು ವಿವಕ್ಷೆಗೆ ತೆಗೆದುಕೊಂಡು, ಪರಿಹಾರ ಅಥವಾ ಉತ್ತರವನ್ನು ಹುಡುಕುವುದು
 • ಗೊಂದಲ ಅಥವಾ ಕಾಠಿಣ್ಯವನ್ನು ಮುಂದಿಡುವ ಒಂದು ಸಂದರ್ಭ, ವಿಷಯ ಅಥವಾ ವ್ಯಕ್ತಿ
 • ಬಗೆಹರಿಸಬೇಕಾದ ಕಷ್ಟಕರ ಪರಿಸ್ಥಿತಿ
 • ಸಂಶಯ ಅನಿಶ್ಚಿತತೆಯನ್ನು ಒಳಗೊಂಡ ಯಾವುದೆ ಪ್ರಶ್ನೆ ಅಥವಾ ವಿಷಯ
 • ‘ನಮಗೇನು ಬೇಕು’ ಹಾಗೂ ‘ವಾಸ್ತವದಲ್ಲಿ ಏನಾಗುತ್ತಿದೆ’- ಇವೆರಡರ ನಡುವೆ ಇರುವ ಅಂತರವನ್ನು ಸಮಸ್ಯೆ ಎನ್ನಬಹುದು. ಸಾಮಾನ್ಯವಾಗಿ ಇಂತಹ ಸಂದರ್ಭಗಳು ಅಹಿತಕರವಾಗಿರುತ್ತವೆ.

ಸಮಸ್ಯೆಯು ಹೇಗೆ ಉತ್ಪತ್ತಿಯಾಗುತ್ತದೆ?

ಸಮಸ್ಯೆ ಹುಟ್ಟುವುದಕ್ಕೆ ಈ ಕೆಳಕಂಡ ಕಾರಣಗಳನ್ನು ಗಮನಿಸಬಹುದು:

 • ನಾವು ಯಾವ ಸ್ಥಿತಿಯನ್ನು ಬಯಸುತ್ತೇವೆಯೋ ಹಾಗೂ ವಾಸ್ತವದಲ್ಲಿ ಯಾವ ಸ್ಥಿತಿ ಇರುತ್ತದೆಯೋ, ಅವುಗಳ ನಡುವೆ ಅಂತರ ಕಂಡುಬಂದಾಗ…
 • ಎರಡು ಘಟನೆಗಳ ಮಧ್ಯದಲ್ಲಿ ಮಹಾ ಅಂತರ ಬಂದಾಗ ಅಥವಾ ಹೆಚ್ಚು ನಿರೀಕ್ಷೆಯಿಟ್ಟುಕೊಂಡಿದ್ದು ಆ ಬಳಿಕ ನಿರಾಶೆಯಾದಾಗ…
 • ‘ತುಂಬ ಕಷ್ಟ’ ಎನಿಸಿದಾಗ ಅಥವಾ ಯಾವುದಾದರೊಂದು ಗಮ್ಯವನ್ನು ಮುಟ್ಟಲು ಅಸಾಧ್ಯವಾದಾಗ.

ನೀವು ನಿಮ್ಮ ಉನ್ನತ ವ್ಯಾಸಂಗ ಮುಂದುವರೆಸಬೇಕೆಂದಿದ್ದಾಗ, ಹಣದ ಕೊರತೆಯಿಂದಲೋ ಅಥವಾ ತಂದೆತಾಯಿಗಳಿಗೆ ಆ ಆರ್ಥಿಕ-ಸಾಮರ್ಥ್ಯ ಇಲ್ಲದಿದ್ದಾಗಲೋ ನೀವು ನಿರಾಶರಾಗಿ ನಿಮಗೆ ಅನಿಸಬಹುದು- ‘ಇದು ಒಂದು ಸಮಸ್ಯೆ, ಏನಾದರೂ ಮಾಡಬೇಕು’ ಎಂದು.

 • ನಿಮ್ಮ ಇಚ್ಛೆ – ಉನ್ನತ ಶಿಕ್ಷಣ (ಆದರ್ಶ ಸ್ಥಿತಿ)
 • ನಿಮ್ಮ ಸ್ಥಿತಿ – ಹಣದ ಕೊರತೆ (ವಾಸ್ತವ ಸ್ಥಿತಿ)
 • ಈ ಎರಡು ಸ್ಥಿತಗಳ ನಡುವೆ ಗೊಂದಲಬಂದಾಗ ಸಮಸ್ಯೆ ಉಂಟಾಗುತ್ತದೆ.

ಈ ಎರಡು ಸ್ಥಿತಿಗಳಲ್ಲಿ ಸಮಸ್ಯೆ ಬಂದಾಗ – ಈ ಪ್ರಶ್ನೆಗಳನ್ನು ಮನಸ್ಸಿಗೆ ತಂದುಕೊಳ್ಳಿ:-

 • ಸಮಸ್ಯೆ ಏನು?
 • ಇದು ನನ್ನ ಚಿಹ್ನೆಯೇ?
 • ನಾನು ಇದನ್ನು ಪರಿಹರಿಸಲೇ? ಪರಿಹಾರ ಯೋಗ್ಯವೇ?
 • ಇದು ನಿಜವಾಗಿಯೂ ಸಮಸ್ಯೆಯೇ ಅಥವಾ ದೊಡ್ಡ ಸಮಸ್ಯೆಯ ಚಿಹ್ನೆಯೆ?
 • ಒಂದು ವೇಳೆ ಇದು ಹಳೆಯ ಸಮಸ್ಯೆಯಾಗಿದ್ದಲ್ಲಿ, ಕಳೆದ ಬಾರಿಯ ಪರಿಹಾರದಲ್ಲಿ ಕೊರತೆಗಳೇನು?
 • ತಕ್ಷಣವೇ ಪರಿಹಾರ ಬೇಕೇ?  ಅಥವಾ ಕಾಯಬಹುದೇ?
 • ಇದು ತಾನಾಗಿಯೇ ಪರಿಹಾರ್ಯವೇ?
 • ಇದನ್ನು ನಿರ್ಲಕ್ಷ್ಯ ಮಾಡುವುದು ಪರವಾಗಿಲ್ಲವೆ?
 • ಈ ಸಮಸ್ಯೆಗೆ ನೈತಿಕ ಆಯಾಮಗಳು ಇವೆಯೆ?
 • ಪರಿಹಾರವಾದರೊ ಯಾವ ನಿಬಂಧಗಳನ್ನು ಪೂರೈಸಬೇಕಾಗಿದೆ? ಸಂತೃಪ್ತಿಕರವಾದೀತು?
 • ಪರಿಹಾರವು ಬದಲಾಗಲೇ ಬಾರದಂತಹ ಯಾವುದಾದರೊಂದು ಅಂಶದ ಮೇಲೆ ಪರಿಣಾಮ ಬೀರುವುದೆ?

ಸಮಸ್ಯಾಪರಿಹಾರ ಎಂದರೇನು?

ಸಮಸ್ಯೆಗಳು ‘ಪ್ರತ್ಯೇಕ’ ಎನಿಸುವಂತೆ ಇರುವುದಿಲ್ಲ. ಬದಲಾಗಿ, ಅವುಗಳು ಈರುಳ್ಳಿ ಇದ್ದಂತೆ. ಒಂದು ಪದರವನ್ನು (ಸಮಸ್ಯೆಯನ್ನು) ಸುಲಿದು ಹಾಕಿಬಿಟ್ಟರೆ, ಮತ್ತೊಂದು ಇರುವುದು ಕಾಣಬರುತ್ತದೆ. (ಮತ್ತೆ ಮಗದೊಂದು!) ಆದ್ದರಿಂದ ಅದಕ್ಕೆ ಸಂಬಂಧಿಸಿದ ಇನ್ನೂ ಅನೇಕ ಸಮಸ್ಯೆಗಳನ್ನು ನಿವಾರಿಸಿದಲ್ಲದೆ ಸಮಸ್ಯೆಯನ್ನು ಸರಿಯಾಗಿ ಪರಿಹರಿಸಲಾಗದು.

ಹಾಗಾದರೆ ಸಮಸ್ಯೆ ಎಂದರೇನು? ಅದನ್ನು ನಿರ್ವಚನ (define) ಮಾಡುವುದು ಹೇಗೆ? ನಾವು ಸಾಮಾನ್ಯವಾಗಿ ಸಮಸ್ಯೆ ಎನ್ನುವುದನ್ನು ನಕಾರಾತ್ಮಕವಾಗಿಯೆ ಅರ್ಥ ಮಾಡಿಕೊಳ್ಳುತ್ತೇವೆ. ಸಮಸ್ಯೆ ಒಂದು ‘ಅಡ್ಡಿ’, ‘ತಾಪತ್ರಯ’ ಎಂದು. ಇದು ನಿಜವೇ ಆದರೂ ಇನ್ನೂ ಉದಾರವಾಗಿ ನೋಡುವುದಾದರೆ, ಸಮಸ್ಯೆ ಎನ್ನುವುದು ವಾಸ್ತವ, ಏನು ಆಗಬಹುದು (ಸಾಧ್ಯತೆ) ಹಾಗೂ ಎನಾಗಬೇಕಾಗಿದೆ ಎನ್ನುವುದೇ ಆಗಿದೆ.

ನಂಬಿ ಅಥವಾ ಬಿಡಿ, ಆದರೆ ಸಮಸ್ಯೆಗಳಿಗೂ ಅನೇಕ ಅನುಕೂಲಗಳಿವೆ ಎನ್ನುವುದಂತೂ ಸತ್ಯ.

ಸಮಸ್ಯೆಗಳಲ್ಲಿನ ಒಳ್ಳೆಯ ಅಂಶಗಳು ಯಾವುವು?

 • ಹೆಚ್ಚಿನ ಸಮಸ್ಯೆಗಳು ಪರಿಹಾರ್ಯ (ಸ್ವಲ್ಪ ಮಟ್ಟಿಗಾದರೂ ಪರಿಹಾರ್ಯ ಅಥವಾ ಸ್ವಲ್ಪ ಸುಧಾರಿಸಲು ಸಾಧ್ಯ)
 • ಒಳ್ಳೆಯದು ಉಂಟಾಗಬೇಕಾದರೆ ಸಮಸ್ಯೆಗಳೇ ಅವಕಾಶಗಳಾದಾವು! ಸಮಸ್ಯೆಗಳು ಬರದಿದ್ದಲ್ಲಿ ಬದಲಾವಣೆಗೆ ಪ್ರೇರಣೆ ಸಿಗುವುದಾದರೂ ಹೇಗೆ?
 • ಸಮಸ್ಯೆಗಳು ಸವಾಲುಗಳೂ ಆಗಬಲ್ಲವು. ಅವುಗಳು ನಮ್ಮ ಅತ್ಯುತ್ತಮ ಸಾಮರ್ಥ್ಯಗಳನ್ನು ವ್ಯಕ್ತಪಡಿಸುತ್ತವೆ. ನಾವು ಏನು ಮಾಡಬಲ್ಲೆವು ಎಂದು ತಿಳಿದಿರುತ್ತೇವೋ ಅದಕ್ಕಿಂತ ಹೆಚ್ಚಿನದನ್ನೇ ಮಾಡುವಂತೆ ಆಗ್ರಹಪಡಿಸುತ್ತವೆ. ರೂಬಿಕ್ಸ್ ಕ್ಯೂಬ್ ಆಟವನ್ನು ನೆನೆಪಿಸಿಕೊಳ್ಳಿ!

ಮೇಲಿನ ಎಲ್ಲ ವಿಚಾರಗಳನ್ನೂ ಪರಿಗಣಿಸಿ, ‘ಸಮಸ್ಯಾ ಪರಿಹಾರಎಂಬುದು ಏನು ಎನ್ನುವುದನ್ನು ನೋಡೋಣ.

‘‘ಸಮಸ್ಯಾ-ಪರಿಹಾರವೆನ್ನುವುದು ೨ ಬಗೆಯ ಕೌಶಲಗಳಿಂದ ಕೂಡಿದ ವೈಯಕ್ತಿಕ ಅಥವಾ ಸಾಮೂಹಿಕ ಪ್ರಕ್ರಿಯೆ ಎನ್ನಬಹುದು:

೧) ಸಂದರ್ಭವನ್ನು ಖಚಿತವಾಗಿ ವಿಮರ್ಶಿಸುವುದು ಮತ್ತು

೨) ಆ ಅವಿಮರ್ಶೆಯನ್ನು ಆಧರಿಸಿ ಸರಿಯಾದ ನಿರ್ಣಯವನ್ನು ತೆಗೆದುಕೊಳ್ಳುವುದು”.

ಒಂದು ಪರಿಹಾರವನ್ನು ಹುಟ್ಟಿಸುವುದಕ್ಕಾಗಿ ಒಂದು ಗೊಂದಲಮಯ ಅಥವಾ ಕಷ್ಟಕರ ಸಂದರ್ಭವನ್ನು ವಿಮರ್ಶೆ ಮಾಡುವ ತಂತ್ರಗಳು ಎನ್ನಬಹುದು. ಸಮಸ್ಯಾ ಪರಿಹಾರ ಒಂದು ಪ್ರಕ್ರಿಯೆ. ಅದು ಮೊದಲು ಪ್ರಾರಂಭವಾಗುವುದು ‘ಒಂದು ಸವಾಲು ಎದುರಾಗಿದೆ’ ಎನ್ನುವುದು ಗಮನಕ್ಕೆ ಬಂದಾಗ. ಆ ಬಳಿಕ ಅದಕ್ಕೆ ಅನುಕೂಲಿಸುವ ಸೂಕ್ತ ಜ್ಞಾನೋಪಾಯಗಳನ್ನು ಅನುಸರಿಸಿ ನಿವಾರಿಸಲಾಗುತ್ತದೆ.

ಈ ಚಿತ್ರಗಳನ್ನು ಗಮನಿಸಿ ಸಮಸ್ಯಾ-ಪರಿಹಾರದ ಹಂತಗಳನ್ನು ನೀವೇ ರೂಪಿಸಿ-

ಸಮಸ್ಯಾ-ಪರಿಹಾರದ ಚರಮ ಉದ್ದೇಶವು ಅದನ್ನು ‘ಕಾರ್ಯ ರೂಪಕ್ಕೆ ತರುವುದೇ’ ಆಗಿದೆ. ಸಮಸ್ಯೆಯ ಪರಿಹಾರಕ್ಕೆ ಮಧ್ಯಂತರ ಪ್ರವೇಶ ಹಾಗೂ ಪರಿಶೋಧನೆಗಳು ಅಗತ್ಯ. ಹಲವೊಮ್ಮೆ ಸಮಸ್ಯೆಯು ವಿಕಾಸಪ್ರಾಯವೂ ಬದಲಾಗುತ್ತಿರುವ ಪ್ರಕ್ರಿಯೆಯೂ ಆಗಿ ಕಾಣಬರುತ್ತದೆ. ಸಮಸ್ಯಾಪರಿಹಾರಕ್ಕಾಗಿ ನಕ್ಷೆ, ಚಿತ್ರಗಳು, ರೇಖಾಚಿತ್ರಗಳು ಇತ್ಯಾದಿಗಳನ್ನು ಬಳಸುವುದು ಬಹಳ ಹಳೆಯ ಕಾಲದಿಂದಲೂ ಬಂದಿರುವ ವಾಡಿಕೆ.

ಸಮಸ್ಯೆಯನ್ನು ಹುಟ್ಟುಹಾಕಿದ ಮನೋಮಟ್ಟದಲ್ಲೇ ನಿಂತು ಅವುಗಳ ಪರಿಹಾರವನ್ನು ಸೃಷ್ಟಿಸಲು ಸಾಧ್ಯವಿಲ್ಲ’. – ಆಲ್ಬರ್ಟ್ ಐನ್ಸ್ಟೀನ್

ಈ ಸಮಗ್ರ ಪ್ರಕ್ರಿಯೆಯನ್ನು ಈ ಕೆಳಕಂಡ ಮಾನಸಿಕ ನಕ್ಷೆಯ ಮೂಲಕ ಸೂಚಿಸಬಹುದು:

ಸ್ವಾರಸ್ಯಕರ ಪ್ರಸಂಗ

ಜಪಾನಿನ ಕಿರಾಣಿ ಅಂಗಡಿಗಳಲ್ಲಿ ಒಂದು ಸಮಸ್ಯೆ ಬಂದಿತ್ತು. ಈ ಅಂಗಡಿಗಳು ಅಮೆರಿಕಾದ ಕಿರಾಣಿ ಅಂಗಡಿಗಳಂತೆ ವಿಶಾಲವಾಗಿರಲಿಲ್ಲ. ಆದ್ದರಿಂದ ಹೆಚ್ಚು ಸ್ಥಳವನ್ನು ಬಳಸಲು ಅನುಕೂಲವಿರಲಿಲ್ಲ. ಅಲ್ಲಿ ಮಾರುವ ಕಲ್ಲಂಗಡಿ ಹಣ್ಣುಗಳು ದೊಡ್ಡದಾಗಿಯೂ, ಗುಂಡಾಗಿಯೂ ಇರುವ ಕಾರಣ ಶೇಖರಿಸಿಡುವಾಗ ಸಾಕಷ್ಟು ಸ್ಥಳವು ಬೇಕಾಗುತ್ತಿತ್ತು.

ಸಮಸ್ಯೆ: ಕಲ್ಲಂಗಡಿ ಹಣ್ಣು ದೊಡ್ಡದಾಗಿಯೂ, ಗುಂಡಾಗಿಯೂ ಇರುವ ಕಾರಣ- ಹೆಚ್ಚು ಸ್ಥಳದ ಅಗತ್ಯ, ಆದರೆ ಅದಕ್ಕೆ ಅನುಕೂಲವಿಲ್ಲ.

ಪರಿಹಾರ: ಜಪಾನಿನ ರೈತರು ಕಲ್ಲಂಗಡಿ ಹಣ್ಣುಗಳನ್ನು ಚೌಕಾಕಾರದ ವಿನ್ಯಾಸದಲ್ಲಿ ಬೆಳೆಸಲು ನಿರ್ಧರಿಸಿದರು. ಅದು ಬೆಳೆಯುತ್ತಿರುವಾಗಲೇ ಚೌಕಾಕಾರದ ಗಾಜಿನ ಪೆಟ್ಟಿಗೆಯಲ್ಲಿಟ್ಟು ಆ ಆಕಾರದಲ್ಲೇ ಬೆಳೆಯುವಂತೆ ಮಾಡಿದರು.

ಪರಿಣಾಮ: ಅಪೇಕ್ಷಿತ ಚೌಕಾಕಾರದ ಕಲ್ಲಂಗಡಿಗಳು ತಯಾರಾದವು.

ಕಥೆಯಿಂದ ನಾವು ಕಲಿಯಬೇಕಾದ ಅಂಶಗಳು:-

 • ಸಲ್ಲದ ಪೂರ್ವಗ್ರಹಗಳು ಬೇಡ.
 • ಎಲ್ಲವೂ ‘ಸಾಧ್ಯ’
 • ‘ಚೌಕಟ್ಟಿ’ನಿಂದ ಹೊರಬಂದು ಚಿಂತಿಸಿ.
 • ಅವಶ್ಯಕತೆಯೇ ಅವಿಷ್ಕಾರಕ್ಕೆ ಜನನಿ.
 • ಸೃಜನಶೀಲತೆ ಆಧುನಿಕ ಜೀವನದ ಅಂಗ.

ನಿಮ್ಮ ಸ್ವಂತ ಅನಿಸಿಕೆಗಳಿದ್ದಲ್ಲಿ ಅವುಗಳನ್ನೂ ಇಲ್ಲಿ ಸೇರಿಸಿ

—————————————————————————————-

—————————————————————————————-

—————————————————————————————-

ಸಮಸ್ಯಾಪರಿಹಾರದ ತಂತ್ರಗಳು:

ಸಮಸ್ಯಾ-ಪರಿಹಾರಕ್ಕೆ ಹಲವಾರು ತಂತ್ರಗಳಿವೆ. ಅವುಗಳಲ್ಲಿ ಸೂಕ್ತವಾದವುಗಳನ್ನು ಬಳಸಬೇಕಾದರೆ ನಾವು ಮೊದಲು ಸಮಸ್ಯೆಯನ್ನು ವಿಮರ್ಶಿಸಬೇಕು.

ಉದಾಹರಣೆಗೆ: ಸಮಸ್ಯೆಯೊಂದರ ವಿಮರ್ಶೆಯನ್ನು ಹೀಗೆ ಮಾಡಬಹುದು: ಒಂದು ಫುಟ್ಬಾಲ ಪಂದ್ಯದಲ್ಲಿ ತಂಡ ಒಂದೋ ಜಯಗಳಿಸುತ್ತದೆ ಅಥವಾ ಸೋಲುತ್ತದೆ ಅಥವಾ ಡ್ರಾ ಆಗುತ್ತದೆ. ಆಟ ಮುಗಿದ ಬಳಿಕ ದಿನದ ಅಂತ್ಯದಲ್ಲಿ ತಂಡದ ತರಬೇತಿಗಾರ ತಂಡದ ಸದಸ್ಯರೊಂದಿಗೆ ಕುಳಿತು ದಿನದ ಆಟದ ಬಗ್ಗೆ ವಿಮರ್ಶೆ ಮಾಡುತ್ತಾನೆ.

 • ಫಲಿತಾಂಶವು ‘ಗೆಲುವು’ ಆದಲ್ಲಿ ಯಾವುದರಿಂದ ಗೆಲ್ಲಲು ಸಾಧ್ಯವಾಯಿತು ಎನ್ನುವುದನ್ನು ಗುರುತಿಸಿದಲ್ಲಿ ಮುಂದಿನ ಆಟದಲ್ಲೂ ಸೂಕ್ತ ತಂತ್ರವನ್ನು ಬಳಸಿ ಗೆಲ್ಲಬಹುದು.
 • ಪಂದ್ಯವು ‘ಡ್ರಾ’ ಆದಲ್ಲಿ ‘ಯಾವ ಅಂಶಗಳು ಚೆನ್ನಾಗಿ ಆದವು’, ‘ಯಾವುದು ಸರಿಯಾಗಲಿಲ್ಲ’, ‘ನಾವೇನು ಕಲಿತೆವು’, ‘ಮುಂದಿನ ಆಟದಲ್ಲಿ ಯಾವ ಬದಲಾವಣೆಯನ್ನು ಮಾಡಿಕೊಳ್ಳಬೇಕು’, ಮುಂತಾದವುಗಳನ್ನು ವಿಮರ್ಶೆ ಮಾಡಬೇಕು.
 • ಪಂದ್ಯದಲ್ಲಿ ಸೋಲು ಉಂಟಾದಲ್ಲಿ ‘ಎಲ್ಲಿ ತಪ್ಪಾಯಿತು’, ‘ತಪ್ಪುಗಳಿಂದ ಏನನ್ನು ಕಲಿಯಬಹುದು’ ಹಾಗೂ ‘ಹೇಗೆ ಕಲಿಯಬಹುದು’ ಹಾಗೂ ‘ಮುಂದಿನ ಆಟದಲ್ಲಿ ಗೆಲ್ಲಲು ನಾವೇನು ಮಾಡಬಹುದು’ ಎನುವುದನ್ನು ವಿಮರ್ಶಿಸಲಾಗುತ್ತದೆ.

ಉತ್ತಮ ಯಶಸ್ಸಿಗಾಗಿ ಪ್ರಕ್ರಿಯೆ ಹಾಗೂ ಫಲಿತಾಂಶಗಳನ್ನು ಗಮನಿಸುತ್ತಲೇ ಇರಬೇಕು. ವ್ಯವಸ್ಥಿತವಾದ ಸಂಶೋಧನೆಯ ಮೂಲಕ ಮತ್ತೆ ಮತ್ತೆ ಕಾಣಬರುವ ‘ಕಾರಕ’ ಅಂಶ ಯಾವುದು ಎನ್ನುವುದನ್ನು ಗುರುತಿಸಬೇಕು. ಇದನ್ನು ವಿಚಾರಿಸಿ ಸಮಸ್ಯಾ-ಪರಿಹಾರಕ್ಕೆ ಅಳವಡಿಸಬೇಕು ಹಾಗೂ ಉತ್ತಮ ಫಲಿತಾಂಶಗಳನ್ನು ಪಡೆಯಬೇಕು.

ಒಂದು ತಂತ್ರವನ್ನು ಇಲ್ಲಿ ಕೆಳಗೆ ತೋರಿಸಲಾಗಿದೆ

. ಟೊಯೋಟಾರವರ 5 WHYS ( ಯಾಕೆಗಳ) ತಂತ್ರ

ಯಾಕೆಗಳ ಸತ್ಫಲಗಳು:

 • ಸಮಸ್ಯೆಯ ಮೂಲ ಕಾರಣವನ್ನು ಅರಿಯಲು ಅನುಕೂಲಿಸುತ್ತದೆ.
 • ಕಲಿಯಲು ಹಾಗೂ ಅಳವಡಿಸಲು ಇದು ಸುಲಭ.

ಸಲಹೆ: ಯಾಕೆತಂತ್ರ ಸರಳವಾಗಿದ್ದು ಸಮಸ್ಯೆಯ ಮೂಲವನ್ನು ಅರಿಯಲು ಸಹಾಯಕವಾಗಿದೆ.

. ಕಾರಣಪರಿಣಾಮ ರೇಖಾಚಿತ್ರ – Fish bone (ಮೀನುಮೂಳೆ ಚಿತ್ರ)

ಕಾರಣ-ಪರಿಣಾಮ ಅಥವಾ ishujava diagramನ್ನು Fish bone diagram ಎಂದು ಹೇಳಲಾಗುತ್ತದೆ. ಮೀನಿನ ಬೆನ್ನುಮೂಳೆಯನ್ನು ಹೋಲುವುದರಿಂದ ‘ಕಾರ್ಯ-ಕಾರಣ’ ರೇಖಾಚಿತ್ರವನ್ನು ‘ಮೀನು ಮೂಳೆ’ diagram (ರೇಖಾಚಿತ್ರ) ಎಂದು ಕರೆಯಲಾಗುತ್ತದೆ.

ಸಮಸ್ಯೆಯನ್ನು ಕೂಲಂಕುಷವಾಗಿ ಅರಿಯಲು ‘ಕಾರ್ಯ-ಕಾರಣ ರೇಖಾಚಿತ್ರ’ ಸಹಾಯಕ. ಇಲ್ಲಿನ ಮುಖ್ಯ ಲಾಭವೆಂದರೆ ಕೇವಲ ಎದ್ದು ತೋರುವ ಕಾರಣವನ್ನಷ್ಟೇ ಅಲ್ಲದೆ, ಇನ್ನೂ ಹಲವಾರು ‘ಸಾಧ್ಯ’ವೆನಿಸುವ ಕಾರಣಗಳನ್ನೂ ಇದು ನಮ್ಮ ಮುಂದೆ ಬಿಡಿಸಿಡುತ್ತದೆ.

ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸೋಣ:-

ಈ ಕೆಳಕಂಡ ಚಿತ್ರದಲ್ಲಿ ರೈಲ್ವೆ ಹಳಿಯಲ್ಲಿ ಒಂದು ಉಗಿಬಂಡಿ ಇದೆ ಅದರ ಎರಡು ಬದಿಗಳಲ್ಲಿ ಎರಡು ರೈಲ್ರೋಡ್ (ಸಾಮಾನು ಹೊರುವ) ಗಾಡಿಗಳು ಇವೆ. ‘ಬ’ ಗಾಡಿಯಲ್ಲಿ ಈಗ ತಾನೆ ಕಲ್ಲಿದ್ದಲನ್ನು ತುಂಬಿಸಲಾಗಿದೆ. ‘ಅ’ ಗಾಡಿ ಖಾಲಿಯಾಗಿದೆ. ಸುರಂಗದೊಳಗೆ ಗಾಡಿಗಳು ಮಾತ್ರ ಹೋಗಲು ಸಾಧ್ಯ, ಉಗಿಬಂಡಿ ಹೋಗಲು ಸಾಧ್ಯವಿಲ್ಲ. ಎರಡೂ ಗಾಡಿಗಳು ಸುರಂಗಕ್ಕಿಂತ ಉದ್ದವಾಗಿರುವ ಕಾರಣ, ಅವು ಸುರಂಗದ ಒಳಗಡೆ ಇರುವಾಗ, ಸುರಂಗದ ಯಾವ ಕಡೆಯಿಂದಾದರೂ ಅವುಗಳನ್ನು ಎಳೆಯಬಹುದು.

ಗಾಡಿಗಳನ್ನು ಎಳೆಯಲು ಅಥವಾ ತಳ್ಳಲು ಉಗಿಬಂಡಿಯನ್ನು ಬಳಸಿಕೊಂಡು ಎರಡೂ ಗಾಡಿಗಳು ತಮ್ಮ ಸ್ಥಾನವನ್ನು ಪರಸ್ಪರ ಬದಲಾಯಿಸುವಂತೆ ಮಾಡಬಲ್ಲಿರೇನು? ಆದರೆ ಗಾಡಿಗಳ ಸ್ಥಾನಪಲ್ಲಟವಾದ ನಂತರವೂ ಉಗಿಬಂಡಿಯು ಅವೆರಡರ ಮಧ್ಯದಲ್ಲಿ ಬರಬೇಕು.

ಇಲ್ಲಿ ಉತ್ತರಿಸಿ:

ಕೆಳಕಂಡ ವಿನ್ಯಾಸವು ಸಮಸ್ಯೆಗೆ ಪರಿಹಾರವಾಗಲು ಸಹಾಯಕ:

ಗ್ರಂಥ ಸಲಹೆ

 • The Rational Manager by Charles Kepner and Benjamin Tregoe (1965)
 • How We Think (1910) John Dewey.
 • Human Problem Solving (1972).  Allen Newell and Herbert Simon.

ಅಂತರ್ಜಾಲ ಮೂಲ:

http://curriculum-issues.suite101.com/article.cfm/problem_solving_for_students

http://www.masterclassmanagement.com/ManagementCourse-ProblemSolving.html

http://www.managementhelp.org