ಪ್ರಾರಂಭ:

ಪ್ರಾಮಾಣಿಕತೆಯ ಪ್ರಯೋಜನ


ಸಿ.ವಿ. ರಾಮನ್ ರವರ ವಿಜ್ಞಾನ ಸಂಶೋಧನೆ ಸಂಸ್ಥೆಯಲ್ಲಿ ಅನೇಕ ಉದ್ಯೋಗಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಸಂದರ್ಶನದ ದಿನದಂದು ಸಾಯಂಕಾಲದ ಹೊತ್ತಿಗೆ ಆಯ್ಕೆ ಮುಗಿದಿತ್ತು. ಸಿ.ವಿ. ರಾಮನ್ ರವರು ಮನೆಗೆ ಹೊರಡುತ್ತಿರುವಾಗ ಗೇಟಿನ ಹತ್ತಿರ ಒಬ್ಬ ವಿಫಲನಾದ ಅಭ್ಯರ್ಥಿ ನಿಂತಿರುವುದನ್ನು ಗಮನಿಸಿದರು. ಅವನು ಅವರ ಹತ್ತಿರ ಬರುತ್ತಿದ್ದಂತೆ ರಾಮನ್ ರವರು, ‘ಅವನು ತನ್ನ ಆಯ್ಕೆ ಬಗ್ಗೆ ವಿನಂತಿಸಿಕೊಳ್ಳಲು ಬರುತ್ತಿದ್ದಾನೆ’ ಎಂದು ಊಹಿಸಿ ಅವನಿಗೆ ಹೇಳಿದರು – “ಮಗು, ನೀನು ಆಯ್ಕೆ ಆಗಿಲ್ಲ ಎನ್ನುವುದು ದುಃಖದ ವಿಷಯವೆ.  ಆದರೇನು ಮಾಡುವುದು? ಮುಂದಿನ ಸಲಕ್ಕೆ ಚೆನ್ನಾಗಿ ತಯಾರಾಗು. ನಿನ್ನ ಭೌತಶಾಸ್ತ್ರದ ಜ್ಞಾನವನ್ನು ಉತ್ತಮ ಪಡಿಸಿಕೋ” ಎಂದು. ಆ ಯುವಕ ಹೇಳಿದ- “ಸರ್, ನಾನು ಬಂದದ್ದು ತಮ್ಮಲ್ಲಿ ಆ ವಿಷಯವಾಗಿ ವಿನಂತಿಸಿಕೊಳ್ಳವುದಕ್ಕಾಗಿ ಅಲ್ಲ. ಸಂಸ್ಥೆಯು ನೀಡಿದ ಪ್ರವಾಸ ಭತ್ಯದಲ್ಲಿ ಉಳಿದ ರೂ ೭/-ನ್ನು ಹಿಂತಿರುಗಿಸಬೇಕಾಗಿದೆ. ಆದರೆ ಲೆಕ್ಕಿಗನು ಇಂದಿನ ಲೆಕ್ಕ-ವ್ಯವಹಾರವನ್ನು ಮುಗಿಸಿಟ್ಟಿದ್ದಾನಂತೆ, ಈ ಹಣವನ್ನು ಸ್ವೀಕರಿಸಲು ಒಪ್ಪುತ್ತಿಲ್ಲ. ಅದನ್ನು ನಾನೇ ಇಟ್ಟುಕೊಳ್ಳಬಹುದೆಂದು ಹೇಳಿದ್ದಾನೆ. ಆದರೆ, ಸಂಸ್ಥೆಯ ಹಣವನ್ನಿಟ್ಟುಕೊಳ್ಳಲು ನನಗೆ ಇಷ್ಟವಿಲ್ಲ”. ರಾಮನ್ ರವರು ಆ ಹಣವನ್ನು ಅವನಿಂದ ತೆಗೆದುಕೊಂಡರು, ಮೌನವಾಗಿ ಕೆಲವು ಹೆಜ್ಜೆ ಮುನ್ನಡೆದು, ಆ ಬಳಿಕ ಹಿಂದಿರುಗಿ ಹೇಳಿದರು – “ನಾಳೆ ಬಂದು ನನ್ನನ್ನು ಭೇಟಿಯಾಗು”. ಮರುದಿನ ಆ ಯುವಕ ಬಂದಾಗ ರಾಮನ್ ರವರು ಹೇಳಿದರು – “ನೀನು ‘ಭೌತಶಾಸ್ತ್ರದ ಪರೀಕ್ಷೆ’ಯಲ್ಲಿ ವಿಫಲನಾಗಿದ್ದೀಯೆ, ಆದರೆ ‘ಪ್ರಾಮಾಣಿಕತೆಯ ಪರೀಕ್ಷೆ’ಯಲ್ಲಿ ಉತ್ತೀರ್ಣನಾಗಿದ್ದೀಯೆ. ನಾನು ನಿನಗಾಗಿ ಒಂದು ಉದ್ಯೋಗವನ್ನು ಸೃಷ್ಟಿಸಿದ್ದೇನೆ. ನೀನು ಕೆಲಸಕ್ಕೆ ಆಯ್ಕೆಯಾಗಿದ್ದೀಯೆ”. ಆ ಹುಡುಗ ಮುಂದೆ ದೊಡ್ಡ ವಿಜ್ಞಾನಿಯಾದ.

ಮೌಲ್ಯಗಳು ಬೇರೆಲ್ಲಕ್ಕಿಂತ ಉಚ್ಚ ಸ್ಥಾನವನ್ನು ಪಡೆಯುತ್ತವೆ.

 • ಈ ಪ್ರಸಂಗದಿಂದ ನಿಮಗೆ ಯಾವ ಸಂದೇಶ ಸಿಗುತ್ತಿದೆ?
 • ಈ ಕಥೆಯಲ್ಲಿ ಯಾವುದಾದರೂ ನೀತಿ ಇದೆ ಎಂದೆನಿಸುತ್ತದೆಯೆ?
 • ಇದೇ ನೀತಿಯನ್ನು ಪ್ರತಿಫಲಿಸುವ ಇಂತಹದ್ದೇ ಸಂದರ್ಭ/ ಕಥೆ ಇದ್ದಲ್ಲಿ ದಯವಿಟ್ಟು ಹಂಚಿಕೊಳ್ಳಿ.

ಅಧ್ಯಾಯದ ಬೆಳವಣಿಗೆ

ಅಧ್ಯಾಯದ ಕಲಿಕೆಯ ಉದ್ದೇಶ:
 • ಮಾನವೀಯ ಮೌಲ್ಯಗಳ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳುವುದು.
 • ನೀತಿ ಮಾರ್ಗ ಮತ್ತು ಮೌಲ್ಯಗಳು.
 • ಮಾನವೀಯ ಮೌಲ್ಯಗಳ ಮಹತ್ವ.
ಮೌಲ್ಯ ಎಂದರೇನು?

ನಮ್ಮ ಸ್ನೇಹಿತನೊಬ್ಬ ತುಂಬ ಆಕರ್ಷಕವಾದ ಶರ್ಟ್ನ್ನು ಹಾಕಿಕೊಂಡದ್ದನ್ನು ನೋಡಿದಾಗ ನಾವು ಸಹಜವಾಗಿ ಅವನ ಬಳಿ ಹೋಗಿ “ಶರ್ಟ್, ತುಂಬಾ ಚೆನ್ನಾಗಿದೆ” ಎಂದಾಗ ಅವನು ಪ್ರತ್ಯುತ್ತರ ನೀಡುತ್ತ ಧನ್ಯವಾದಗಳನ್ನು ಹೇಳುತ್ತಾ “ನಾನು ಇದಕ್ಕೆ ೧,೦೦೦/- ರೂ ಕೊಟ್ಟಿದ್ದೇನೆ” ಅಂದ. ನೀವು ಒಂದು ಸುಂದರವಾದ ಸೀರೆಯನ್ನು ಖರೀದಿಸಿ, ಆಫೀಸಿಗೆ ಉಟ್ಟುಕೊಂಡು ಹೋದರೆ ಅಲ್ಲಿ ನಿಮ್ಮ ಸಹೋದ್ಯೋಗಿಗಳು ಮೆಚ್ಚಿ, ಅದರ ಬಟ್ಟೆ ಮತ್ತು ವಿನ್ಯಾಸದ ಬಗ್ಗೆ ಹೇಳಿದಾಗ – ‘ಈ ಸೀರೆಗೋಸ್ಕರ ನಾನು ಬಹಳಷ್ಟು ಹಣವನ್ನು ಕೊಟ್ಟಿದ್ದೇನೆ. ನಾನು ಅದನ್ನು ಕೊಂಡುಕೊಳ್ಳುವುದೊ ಅಥವಾ ಬಿಡುವುದೊ ಎಂಬ ದ್ವಂದ್ವ ನನ್ನಲ್ಲಿತ್ತು. ಕೊನೆಗೆ, ಅದು ಉತ್ತಮ ಖರೀದಿ ಆಗಿತ್ತು ಎಂದು ಭಾವಿಸಿ ಕೊಂಡುಕೊಂಡೆ” ಎನ್ನುತ್ತೀರಿ.

ನೀವು ನಿಮ್ಮ ನಾಯಿಯೊಂದಿಗೆ ಪಾರ್ಕಿನಲ್ಲಿ ಅಡ್ಡಾಡುವಾಗ ಜೊತೆಗೆ ಬಂದವರು “ಒಳ್ಳೆಯ ನಾಯಿ” ಎಂದಾಗ ಸಾಧಾರಣವಾಗಿ ನಿಮ್ಮ ಪ್ರತಿಕ್ರಿಯೆ “ಇದು ಒಳ್ಳೆಯ ತಳಿ”.  ಇದು ಮರಿಯಾಗಿದ್ದಾಗ, ನಾನು ಇದಕ್ಕೆ ರೂ ೩೦೦೦/- ಕೊಟ್ಟಿದ್ದೆ”.

ನೀವು ಒಂದು ಹೊಸ ಕಾರನ್ನು ಖರೀದಿಸಿ, ನಿಮ್ಮ ಸ್ನೇಹಿತರ ಮನಗೆ ಡ್ರೈವ್ ಮಾಡಿಕೊಂಡು ಹೋದಾಗ, “ವಾಹ್” ಎಂದು ಮೆಚ್ಚಿಗೆ ಸೂಚಿಸಿದಾಗ ನೀವೆನ್ನುವಿರಿ – “ನನ್ನ ಉಳಿತಾಯದ ಬಹಳಷ್ಟು ಭಾಗವನ್ನು ಈ ಕಾರನ್ನು ಖರೀದಿಸಲು ಬಳಸಿದೆ. ಅದಕ್ಕಾಗಿ ಮುಂಬರುವ ಮೂರು ವರುಷಗಳವರೆಗೆ ನನ್ನ ಸಂಬಳದ ಒಂದು ಭಾಗವನ್ನು ಇರಿಸಿದ್ದೇನೆ”.

ಅಂದರೆ ನಮ್ಮ ಸುತ್ತಮುತ್ತ ಇರುವ ಪ್ರಪಂಚದ ಪ್ರತಿಯೊಂದು ವಸ್ತುವಿನ ಮೌಲ್ಯವನ್ನು ನಾವು ದುಡ್ಡಿನಲ್ಲಿಯೇ ಅಳೆಯುತ್ತೇವೆ.  ಒಂದು ದಿನ ನಿಮ್ಮ ಸ್ನೇಹಿತ ತಮ್ಮ ಮಗ / ಮಗಳೊಂದಿಗೆ ನಿಮ್ಮ ಮನೆಗೆ ಬಂದಾಗ, “ನಿಮ್ಮ ಮಗನಿಗೆ / ಮಗಳಿಗೆ ಎಷ್ಟು ಹಣ ಕೊಟ್ಟಿದ್ದೀರಿ?” ಎಂದು ಕೇಳುವುದಿಲ್ಲ. ಇದರ ಅರ್ಥ ಇಷ್ಟೇ. ಪ್ರಪಂಚದ ಪ್ರತಿಯೊಂದು ವಸ್ತುವಿನ ಬೆಲೆಯನ್ನು ಹಣದಲ್ಲಿ ಅಳೆಯುವ ನಾವು ಮನುಷ್ಯರ ಬೆಲೆಯನ್ನು ಮಾತ್ರ ಹಣದಲ್ಲಿ ಅಳೆಯಲಾರೆವು.  ಅದಕ್ಕೇ ಅದನ್ನು ಮಾನವೀಯ ಮೌಲ್ಯಗಳು ಎಂದು ಕರೆಯುವುದು.  ಅದು ಹಣವನ್ನು ಮೀರಿದ್ದು.

ನೀವು ಗಮನಿಸಿದ್ದೀರಾ?

 • ಲೌಕಿಕ ವಸ್ತುಗಳ ಮೌಲ್ಯವನ್ನು ಅದರ ಬೆಲೆಯ ಮುಖಾಂತರ ನಿರ್ಧರಿಸುತ್ತೇವೆ.
 • ಮನುಷ್ಯರ ಮೌಲ್ಯವನ್ನು ಅಳೆಯುವುದಕ್ಕೆ ಹಣವು ಹೇಗೆ ತಾನೆ ಅಳತೆಗೋಲಾದೀತು?
 • ನನ್ನ ಮಗನ ಬೆಲೆಯು………. ಲಕ್ಷ ರೂಗಳು ಅಥವಾ ನನ್ನ ತಂಗಿಯನ್ನು……
 • ರೂಪಾಯಿಗಳಿಗೆ ಕೊಂಡು ಕೊಂಡಿದ್ದೇನೆ ಎಂದು ಯಾರಾದರೂ ಹೇಳಿರುವುದನ್ನು ಕೇಳಿದ್ದೀರಾ?
ಸಜ್ಜನರನ್ನು ಗೆದ್ದುಕೊಂಡು ದುರ್ಜನರನ್ನು ದೂರ ಮಾಡುವುದೇನೋ ಒಳ್ಳೆಯದೆ. ಆದರೆ ಜನರಲ್ಲಿನ ಒಳಿತನ್ನು ಗುರುತಿಸಿ ದುಷ್ಟತನವನ್ನು ಮಾತ್ರ ದೂರವಿಡುವುದು ಇನ್ನೂ ಒಳ್ಳೆಯದು.
ನೆನಪಿಡಿ, ಮಾನವ ಜೀವನ ದುಡ್ಡಿನಿಂದ ಅಳೆಯಲಾಗದಂತಹದ್ದು

ಹಾಗಾದರೆ ಜೀವನವನ್ನು ಅಳೆಯುವ ಮಾಪನ ಯಾವುದು?
ಗಾಂಧಿಜಿ, ಸುಭಾಷ್ ಚಂದ್ರಬೋಸ್, ಮುಂತಾದವರು ಮಹಾತ್ಮರೆಂದು ಜಗತ್ತು ಒಪ್ಪಿದೆ.
ಇವರುಗಳ ಮಾಹಾತ್ಮ್ಯವನ್ನು ಅಳೆದಿರುವುದಾದರೂ ಹೇಗೆ?

ಮೌಲ್ಯಗಳನ್ನು ಹೇಗೆ ವ್ಯಾಖ್ಯಾನಿಸುತ್ತೀರಿ?

ಶಬ್ದಕೋಶವು “ಮೌಲ್ಯ” ಎಂಬ ಪದದ ಅರ್ಥವನ್ನು ಭಿನ್ನ ರೀತಿಗಳಲ್ಲಿ ವ್ಯಾಖ್ಯಾನಿಸುತ್ತದೆ. ಅದು ಯಾವುದೇ ವಸ್ತುವಿನ ಆರ್ಥಿಕ ಮೌಲ್ಯ, ಉಪಯುಕ್ತತೆ ಅಥವಾ ಪ್ರಾಮುಖ್ಯತೆಯ ಬಗ್ಗೆ ಹೇಳುತ್ತದೆ.

ಈಗ ನಾವು ನಿರ್ದಿಷ್ಟವಾದ ವ್ಯಾಖ್ಯಾನಕ್ಕೆ ಬರೋಣ. ‘ಮೌಲ್ಯ’ ಎಂದರೆ ಒಬ್ಬ ವ್ಯಕ್ತಿಯಲ್ಲಿನ ಅಪೇಕ್ಷಿತ ಮತ್ತು ನಿರ್ದಿಷ್ಟವಾದ ವರ್ತನೆಯಾಗಿದ್ದು ಅದನ್ನು ಅನುಸರಿಸುವುದರಿಂದ ವ್ಯಕ್ತಿಗೆ ಮತ್ತು ಸಮಾಜಕ್ಕೆ ಒಳಿತಾಗುವುದು.

ಮಾನವೀಯ ವರ್ತನೆಯ ಸ್ತರ ಮತ್ತು ಸಿದ್ಧಾಂತಗಳೇ ಮೌಲ್ಯಗಳು. ಜನರಲ್ಲಿ ‘ಯಾವುದು ಸರಿ’, ‘ಯಾವುದು ತಪ್ಪು’ ಮತ್ತು ‘ತಮ್ಮ ಜೀವನದಲ್ಲಿ ಯಾವುದು ಪ್ರಮುಖ’ ಎಂಬ ವಿವೇಚನೆ ಹಾಗೂ ಭಾವನಾತ್ಮಕ ಹೂಡಿಕೆಯಂತಿರುವುದು ವೈಯಕ್ತಿಕ ಹಾಗೂ ಸಾಮೂಹಿಕ ವಿಶ್ವಾಸಗಳು. ಮೌಲ್ಯಗಳನ್ನು ನಾವು ಈಗ ಸ್ತರ, ಸಿದ್ಧಾಂತ, ವಿಶ್ವಾಸ, ಸರಾಸರಿಗಳ ಕಲ್ಪನೆಗಳಿಗೆ ಹೊಂದಿಸುತ್ತೇವೆ.

ಕೇವಲ ಉಪದೇಶದಿಂದ ಮೌಲ್ಯ ಸಿದ್ಧಿಸುವುದಿಲ್ಲ.

ನಾವು ಮೌಲ್ಯವನ್ನು ಆಚರಣೆಗೆ ತರಬೇಕು. ಆಗ ಮಾತ್ರ ಜನರು ನಮ್ಮನ್ನು ಅನುಸರಿಸುತ್ತಾರೆ.

೨೦ನೇ ಶತಮಾನದ ಪ್ರಾರಂಭದಲ್ಲಿ ಮಹಾತ್ಮಾಗಾಂಧೀಜಿ ದಕ್ಷಿಣ ಆಫ್ರಿಕಾದಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿದ್ದರು. ಆ ಸಂದರ್ಭದಲ್ಲಿ ಅವರು ಭಾರತೀಯರ ಪಾಲಿಗೆ ‘ದೇಶ-ಪ್ರೇಮಿ’ ಎನ್ನುವುದಕ್ಕಿಂತಲೂ ಹೆಚ್ಚಾಗಿ ‘ಒಬ್ಬ ಪ್ರಖ್ಯಾತ ಬ್ಯಾರಿಸ್ಟರ್’ ಎಂದೇ ಮಾನ್ಯರಾಗಿದ್ದರು. ಅವರು ಭಾರತಕ್ಕೆ ಮರಳಿದ ನಂತರ ಭಾರತೀಯ ಜೀವನ ಶೈಲಿ ಹಾಗೂ ಪ್ರಚಲಿತ ಸಮಸ್ಯೆಗಳ ಬಗ್ಗೆ ಸುದೀರ್ಘ ಅಧ್ಯಯನ ನಡೆಸಿದರು. ಅವರಿಗೆ ಮನವರಿಕೆಯಾಯಿತು, ಬಹುತೇಕ ಭಾರತೀಯರಿಗೆ ದಿನಕ್ಕೆ ಎರಡು ಹೊತ್ತು ಊಟ ಕೂಡ ಸಿಗುತ್ತಿಲ್ಲ ಎಂದು.

ಒಮ್ಮೆ ಗಾಂಧೀಜಿಯವರು ಪ್ರಚಾರ ಮಾಡುತ್ತ ಒಂದು ಗುಡಿಸಿಲಿಗೆ ಬಂದರು. ಆದರೆ ಅಲ್ಲಿದ್ದ ದಂಪತಿಗಳು ಏಕ ಕಾಲದಲ್ಲಿ ಹೊರಗೆ ಬರದೆ ಒಬ್ಬರಾದ ಮೇಲೆ ಒಬ್ಬರು ಬಂದು ಆದರಿಸಿದರು. “ಏಕೆ, ನೀವಿಬ್ಬರೂ ಒಟ್ಟಿಗೆ ಬರಬಾರದೆ?” ಎಂದು ಗಾಂಧೀಜಿರವರು ವಿಚಾರಿಸಿದಾಗ ತಿಳಿಯಿತು ಅವರಿಬ್ಬರಿಗೂ ಧರಿಸಲು ಇದ್ದದ್ದು ಒಂದೇ ತುಂಡು ಬಟ್ಟೆ. ಹಾಗಾಗಿ ಯಾರು ಆಚೆ ಬರಬೇಕಿತ್ತೋ ಅವರು ಮಾತ್ರ ಆ ಬಟ್ಟೆಯನ್ನು ಹೊದ್ದು ಹೊರಬರಬೇಕಾಗಿತ್ತು. ಬೇರೊಬ್ಬರು ಒಳಗಡೆಯೆ ಇರಬೇಕಿತ್ತು. ಗಾಂಧೀಜಿರವರ ಮನ ಮಿಡಿಯಿತು. ಅಂದಿನಿಂದ ಗಾಂಧೀಜಿಯವರು ಸ್ವಯಂಪ್ರೇರಿತ ಬಡತನವನ್ನು ಆರೋಪಿಸಿಕೊಂಡರು. ಊಟ ಬಟ್ಟೆ ಮುಂತಾದ ಎಲ್ಲ ಜೀವನಾವಶ್ಯಕತೆಗಳನ್ನು ಸಾಕಷ್ಟು ಮಿತಗೊಳಿಸಿಕೊಂಡು ಜೀವನದುದ್ದಕ್ಕೂ ಹಾಗೇ ಇದ್ದರು. ಅವರ ಸರಳ ನಿಃಸ್ಪೃಹ ಜೀವನ ಸದಾ ಭಾರತದ ಪುನರುತ್ಥಾನದ ಕೆಲಸದಲ್ಲಿ ಮಗ್ನವಾಗಲು ಪ್ರೇರಣೆ ಹಾಗೂ ಸಮಯವನ್ನು ಕಲ್ಪಿಸಿತು. ಅವರು ತಮ್ಮ ಜೀವನದಲ್ಲಿ ಸತ್ಯಸಂಧತೆ, ಪವಿತ್ರತೆ, ಮತ್ತು ಅಹಿಂಸೆಯನ್ನು ಅಳವಡಿಸಿಕೊಂಡರು. ಜನರು ಮರುಮಾತಿಲ್ಲದೆ ಅವರನ್ನು ಅನುಸರಿಸಿದಕ್ಕೆ ಮುಖ್ಯಕಾರಣ- ಅವರು ‘ನುಡಿದಂತೆ ನಡೆದವರು’.

ನೀವು ಏನು ‘ಹೇಳುತ್ತೀರೋ’ ಜನರು ಅದನ್ನು ಮಾಡುವುದಿಲ್ಲ. ಬದಲಾಗಿ, ನೀವು ಏನು ‘ಮಾಡುತ್ತೀರೋ’ ಅದನ್ನೇ ಮಾಡುತ್ತಾರೆ !

ಒಂದು ಸಂಸ್ಕೃತ ಸುಭಾಷಿತದಲ್ಲಿ ಹೇಳಿದಂತೆ, ಸಜ್ಜನರ ನುಡಿ, ನಡೆ ಹಾಗೂ ಭಾವನೆಗಳಲ್ಲಿ ವ್ಯತಿರೇಕ ವೈರುಧ್ಯಗಳು ಇರುವುದಿಲ್ಲ. (ಮನಸ್ಯೇಕಂ ವಚಸ್ಯೇಕಂ ವಪುಷ್ಯೇಕಂ ಮಹಾತ್ಮನಾಂ)

ಚಟುವಟಿಕೆ

 • ಮೂರು ಜನ ಮಹಾನ್ ಮತ್ತು ಸಫಲರಾದ ವ್ಯಕ್ತಿಗಳ ಬಗ್ಗೆ ಬರೆಯಿರಿ.
 • ಅವರು ಮಹಾನ್ ವ್ಯಕ್ತಿಗಳಾಗಲು ಮತ್ತು ಮಹತ್ತರ ಸಾಧನೆಗಳನ್ನು ಮಾಡಲು ಕಾರಣಗಳೇನಿರಬಹುದು?

ಮೌಲ್ಯಗಳು ಏಕೆ ಬೇಕು?

ನಮ್ಮ ಜೀವನದಲ್ಲಿ ನಂಬಿಕೆಗಳು ಮತ್ತು ಸಿದ್ಧಾಂತಗಳು ಮಹತ್ವಪೂರ್ಣ ಸ್ಥಾನವನ್ನು ಪಡೆದಿವೆ. ಈ ಮೌಲ್ಯಗಳು ನಮ್ಮ ವ್ಯಕ್ತಿತ್ವ ಮತ್ತು ಧೋರಣೆಗಳನ್ನು ರೂಪಿಸುತ್ತವೆ ಹಾಗೂ ಸಮಾಜದ ಪ್ರತಿ ಇರುವ ನಮ್ಮ ದೃಷ್ಟಿಕೋನ ಹಾಗೂ ವ್ಯವಹಾರಕೌಶಲಗಳನ್ನು ಪ್ರಭಾವಗೊಳಿಸುತ್ತವೆ. ನಾವು ನಮ್ಮ ಪರಿಸರದಲ್ಲಿ ಸುಖವಾಗಿದ್ದೇವೋ ಇಲ್ಲವೋ ಎನ್ನುವುದನ್ನು ನಿರ್ಧರಿಸುವುದು ನಮ್ಮ ವೈಯಕ್ತಿಕ ಮೌಲ್ಯಗಳೇ. ಅಷ್ಟೇ ಅಲ್ಲ, ನಾವು ನಮ್ಮ ಸ್ನೇಹಿತರನ್ನೂ, ಸಹೋದ್ಯೋಗಿಗಳನ್ನೂ ಇತರರನ್ನೂ ಅಳೆಯುವುದು ನಮ್ಮ ವೈಯಕ್ತಿಕ ಮೌಲ್ಯಗಳ ಆಧಾರದ ಮೇಲೆಯೇ. ಈ ಮೌಲ್ಯಗಳೇ ನಮ್ಮ ಜೀವನಕ್ಕೆ ಅರ್ಥವನ್ನು ಕೊಟ್ಟು, ದಿಕ್ಕು ಮತ್ತು ಧ್ಯೇಯಗಳನ್ನು ಕಾಣಿಸುತ್ತವೆ. ನಮ್ಮ ನೆಲೆ ಹಾಗೂ ಒಲವುಗಳನ್ನು ಸಾರುವುದೂ ಈ ಮೌಲ್ಯಗಳೇ. ಮೌಲ್ಯಗಳು ವ್ಯಕ್ತಿಗತ ವಿಶೇಷಗಳು ಎನ್ನುವುದು ಇದರಿಂದ ತಿಳಿಯುತ್ತದೆ.


ಅನುಭವವು ನಾವು ನಂಬಿದ ಮೌಲ್ಯಗಳನ್ನು ದೃಢಪಡಿಸುತ್ತ ಹೋಗುತ್ತದೆ. ಮೌಲ್ಯವನ್ನು ನಾವು ಅಂತರ್ಗತ ಮಾಡಿಕೊಂಡಾಗ ಅದು ಶಕ್ತಿಯುತವಾಗುತ್ತ ಹೋಗುತ್ತವೆ.

ಉದಾಹರಣೆಗೆ ‘ಶಿಸ್ತನ್ನು’ ತೆಗೆದುಕೊಂಡರೆ- ನಾವು ನಮ್ಮ ಜೀವನದಲ್ಲಿ ಶಿಸ್ತನ್ನು ಅಳವಡಿಸುತ್ತೇವೆ. ನಮಗೆ ಅನುಭವದಿಂದ, ಅಶಿಸ್ತಿನಿಂದಾಗುವ ತೊಂದರೆಗಳು ಶಿಸ್ತಿನಿಂದ ಹೇಗೆ ನಿವಾರಣೆಯಾಗುತ್ತವೆ ಎನ್ನುವುದು ಅರ್ಥವಾದಲ್ಲಿ ಪ್ರಜ್ಞಾಪೂರ್ವಕವಾಗಿ ಶಿಸ್ತನ್ನು ಅಳವಡಿಸಲು ಹಾಗೂ ಶಿಸ್ತಿನ ಪರಿಸರವನ್ನು ನಿರ್ಮಿಸಿಕೊಳ್ಳಲು ಎಲ್ಲ ಪ್ರಯತ್ನಗಳನ್ನು ಸಹಜವಾಗಿಯೇ ಮಾಡುತ್ತೇವೆ.

ಚಿಕ್ಕಮಕ್ಕಳಿಗೆ ಸಾಮಾನ್ಯ ಸುರಕ್ಷತೆಯ ಮೌಲ್ಯಗಳನ್ನು ಕಲಿಸುತ್ತೇವೆ. ನಮ್ಮನ್ನು  ನಾವು ಅಪಾಯದಿಂದ ರಕ್ಷಿಸಿಕೊಳ್ಳಲು ಪ್ರಯತ್ನಿಸುವುದು ಹುಟ್ಟಿನಿಂದಲೂ ಸಹಜವಾಗಿ ಬಂದ ಪ್ರವೃತ್ತಿ. ಪಾಲಕರು ಮಕ್ಕಳಿಗೆ ಬೆಂಕಿ ಹಾಗೂ ವಿದ್ಯುತ್ ಉಪಕರಣಗಳು ಹಾಗೂ ರಸ್ತೆ ದಾಟುವಾಗ ಗಮನವಿಡಬೇಕಾದ ಅಂಶಗಳು, ಇತ್ಯಾದಿಗಳ ಬಗ್ಗೆ ಸಾಕಷ್ಟು ಎಚ್ಚರಿಕೆ ನೀಡುತ್ತಾರೆ. ಕಾಲಕ್ರಮೇಣ ಈ ಶಿಸ್ತಿನ ಮೌಲ್ಯವು ನಮ್ಮ ಜೀವನದಲ್ಲಿ ತಾವೇ ತಾವಾಗಿ ಪ್ರಾಧಾನ್ಯವನ್ನು ಪಡೆಯುತ್ತವೆ. ಹಾಗೇ, ಚಿಕ್ಕಂದಿನಿಂದಲೂ ತಂದೆ ತಾಯಂದಿರು, ಅಜ್ಜ-ಅಜ್ಜಿಯರು ನಮಗೆ ಜೀವನ ಮೌಲ್ಯಗಳ ಕುರಿತಾಗಿ ಹೇಳುತ್ತಾ ಪೌರಾಣಿಕ ಕತೆಗಳನ್ನು, ಸ್ವಾತಂತ್ರ್ಯ ಸಂಗ್ರಾಮದ ಶೌರ್ಯಗಾಥೆಯ ಬಗ್ಗೆ, ಪ್ರಾಮಾಣಿಕತೆ, ಸ್ವಾಮಿನಿಷ್ಠೆ, ನ್ಯಾಯ, ಇತಿಹಾಸ, ಚರಿತ್ರೆಗಳು, ಸ್ವಾತಂತ್ರ್ಯ ಮುಂತಾದವುಗಳ ಬಗ್ಗೆ, ಹಾಗೂ ಸ್ನೇಹ ಸಂಬಂಧಗಳು ಮತ್ತು ಕರ್ತವ್ಯ ಪಾಲನೆಗಳ ಬಗ್ಗೆ ತಿಳಿ ಹೇಳುತ್ತಾರೆ. ಹೀಗೆ ಅನೇಕ ಮೌಲ್ಯಗಳು ನಾವು ನಮ್ಮ ಗುರು-ಹಿರಿಯರಿಂದ ಪಡೆದುಕೊಂಡಿರುತ್ತೇವೆ. ಆದರೆ ಜೀವನದಲ್ಲಿ ಈ ಮೌಲ್ಯಗಳನ್ನು ಎಷ್ಟರ ಮಟ್ಟಿಗೆ ಅನುಸರಿಸುತ್ತೇವೆ ಎನ್ನುವುದು ಮುಖ್ಯ. ನ್ಯಾಯ ಮತ್ತು ಪ್ರಾಮಾಣಿಕತೆಗಳಿಗಿರುವ ಪ್ರಾಧಾನ್ಯ ಹಾಗೂ ವ್ಯವಹಾರದಲ್ಲಿ ಅವುಗಳ ಬಳಕೆ ಇವೆರಡೂ ಬೇರೆ ಬೇರೆ. ಮೌಲ್ಯಗಳು ಎಲ್ಲ ಜೀವಿಗಳಲ್ಲಿ ಅಂತರ್ಗತವಾಗಿದ್ದು ಅವರ ನೈಜ ಸ್ವಭಾವವೇ ಆಗಿರುತ್ತದೆ. ಅದನ್ನು ಉಳಿಸಿ ಬೆಳೆಸುವ ಬಾಧ್ಯತೆ ನಮ್ಮದು.

ಉತ್ತಮ ಜೀವನಕ್ಕೆ ಬೇಕಾದ ಮೌಲ್ಯಗಳ ಪಟ್ಟಿ ಮಾಡಿ.
ಮೌಲ್ಯಗಳನ್ನು ಎತ್ತಿ ತೋರಿಸುವುದಕ್ಕೆ ಯಾವುದಾದರೂ ಒಂದು ಕತೆಯನ್ನು ಜೋಡಿಸಿ ಮೌಲ್ಯದ ಪಾತ್ರವೇನೆಂದು ತಿಳಿಸಿ?

ಎರಡು ಸ್ವಾರಸ್ಯಕರ ಘಟನೆಗಳು

ಉದಾಹರಣೆ ಸ್ಕಾಂಡಿನೇವಿಯಾದ ಬೆಟ್ಟಗಳಲ್ಲಿ ‘ಲೆಮಿಂಗ್ಸ್’ ಎಂಬ ಜಾತಿಯ ಹೆಗ್ಗಣಗಳು ವಾಸಿಸುತ್ತವೆ. ಆಗಾಗ ಅವುಗಳ ಸಂಖ್ಯೆ ತುಂಬ ಹೆಚ್ಚಿ ಆಹಾರ ಮತ್ತು ವಸತಿಗಳ ಕೊರತೆ ಉಂಟಾಗುತ್ತದೆ. ಇಂತಹ ಪರಿಸ್ಥಿತಿ ಬಂದಾಗಲೆಲ್ಲ ಕಿರಿಯ ಹೆಗ್ಗಣಗಳು ಬದುಕಲಿ ಎಂದು ಹಿರಿಯ ಹೆಗ್ಗಣಗಳು ಸ್ವಯಂಪ್ರೇರಣೆಯಿಂದ ಸಾವಿರಾರು ಸಂಖ್ಯೆಯಲ್ಲಿ ಒಟ್ಟೊಟ್ಟಿಗೆ ಬೆಟ್ಟದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುತ್ತವೆ. ಎಂತಹ ಉದಾತ್ತ ಬಲಿದಾನ!

ಒಂದು ಪುಟ್ಟ ಪ್ರಾಣಿ ಸಮೂಹ ಅಷ್ಟರಮಟ್ಟಿಗೆ ನಿಸ್ವಾರ್ಥ ತ್ಯಾಗದ ರೂಪವನ್ನು ನಮ್ಮ ಕಣ್ಣ ಮುಂದೆ ಮಾದರಿಯಾಗಿ ಇಟ್ಟಿದೆ.

ಪ್ರತಿಯೊಂದು ಸಮಸ್ಯೆಗೂ ಪರಿಹಾರ ಇರುತ್ತದೆ. ಆದರೆ ನಿಜವಾಗಿ ಸಾಧ್ಯವಾಗುವುದು  ಅದು ಮೌಲ್ಯಾಧಾರಿತವಾದಾಗ ಮಾತ್ರ. ಆದರೆ ಪರಿಹಾರೋಪಾಯವು ದುರ್ಮಾರ್ಗದಲ್ಲಿ ನಡೆದರೆ ಸಮಸ್ಯೆ ಇದ್ದೇ ಇರುತ್ತದೆ.

ಉದಾಹರಣೆ೨ಜಪಾನಿನಲ್ಲಿ ನಡೆದ ಘಟನೆ. ಒಮ್ಮೆ ಒಬ್ಬ ಬಡಗಿ ಕಟ್ಟಡ ಕೆಲಸ ಮಾಡುವಾಗ ಗೋಡೆಯ ಮರದ ಪಟ್ಟಿಯ ಮೇಲೆ ಅವನಿಗೆ ಅರಿವಿಲ್ಲದೆಯೇ ಒಂದು ಜೀವಂತ ಹಲ್ಲಿಯ ಬಾಲವನ್ನೂ ಸೇರಿಸಿ ಮೊಳೆಯನ್ನು ಹೊಡೆದುಬಿಟ್ಟ. ಇದನ್ನು ಆತನೂ ಗಮನಿಸಲಿಲ್ಲ. ಮೂರು ವರ್ಷಗಳ ನಂತರ ಅದೇ ಕಟ್ಟಡದ ಕೆಲಸಮಾಡುವಾಗ ಆ ಹಲ್ಲಿ ಆತನ ಗಮನಕ್ಕೆ ಬಂತು. ಆದರೆ ಮೂರು ವರ್ಷಗಳ ನಂತರವೂ ಆ ಹಲ್ಲಿ ಜೀವಂತವಾಗಿದ್ದುದು ಅವನಿಗೆ ಆಶ್ಚರ್ಯವೋ ಆಶ್ಚರ್ಯ! ಇದು ಹೇಗೆ ಸಾಧ್ಯವೆಂದು ಗಮನಿಸುತ್ತ ಕುಳಿತ.  ಕೆಲಗಂಟೆಗಳ ಬಳಿಕ ಬೇರೊಂದು ಹಲ್ಲಿ ತನ್ನ ಬಾಯಲ್ಲಿ ಆಹಾರವನ್ನು ಕಚ್ಚಿಕೊಂಡು ಬಂದು ಈ ಅಸಹಾಯಕ ಹಲ್ಲಿಗೆ ತಿನ್ನಿಸಿತು! ಹೀಗೆ ಮೂರುವರ್ಷಗಳಿಂದಲೂ ಪ್ರತಿದಿನವೂ ಹಲ್ಲಿಯ ಜೊತೆಗಾರರು ಅದಕ್ಕೆ ನಿಯಮಿತವಾಗಿ ಆಹಾರವನ್ನು ಒದಗಿಸುತ್ತಿದ್ದವು! ಎಂತಹ ಜೀವದಯೆ! ಒಂದು ಚಿಕ್ಕ ಜೀವಸಮೂಹ ಇಂತಹ ಉನ್ನತ ಮೌಲ್ಯಗಳನ್ನು ಹೊಂದಿರುವಾಗ ನಾವು ಮನುಷ್ಯರು ಇನ್ನೆಷ್ಟು ಮಾಡಬಹುದು?

ಜೀವನದಲ್ಲಿ ಉನ್ನತ ಮೌಲ್ಯಗಳಿಗಾಗಿ ಉನ್ನತ ಆದರ್ಶಗಳು ಬೇಕು 
ಮೌಲ್ಯಗಳು ನಮ್ಮ ಜೀವನದಲ್ಲಿ ಸಕಾರಾತ್ಮಕ ಶಕ್ತಿಯನ್ನು ಬೆಳೆಸಲು ಮತ್ತು ದುರಭ್ಯಾಸಗಳಿಂದ ದೂರವಿರಲು ಸಹಾಯ ಮಾಡುತ್ತವೆ. ಸ್ವಾಮಿ ವಿವೇಕಾನಂದರು ಹೇಳುತ್ತಾರೆ– “ಐದು ಆದರ್ಶಗಳನ್ನು ಹೊಂದಿರಿ. ಅವುಗಳನ್ನು ನಿಮ್ಮ ಜೀವನ ಹಾಗೂ ಸ್ವಭಾವವನ್ನಾಗಿ ಅಳವಡಿಸಿಕೊಳ್ಳಿ. ಆಗ ನೀವು ಸಮಸ್ತ ಗ್ರಂಥರಾಶಿಯನ್ನೇ ಓದಿಮುಗಿಸಿದ ಜ್ಞಾನಿಗಿಂತಲೂ ಹೆಚ್ಚು ವಿದ್ಯಾವಂತರೆನಿಸುವಿರಿ”.
ಮೌಲ್ಯ ಎನ್ನುವುದು ನಾವು ಆಂತರಿಕವಾಗಿ ಅರ್ಥಮಾಡಿಕೊಳ್ಳುವ ವಿಷಯ, ನಡವಳಿಕೆ ಎನ್ನುವುದು ಹೊರಗಡೆ ಕಾಣಿಸಿಕೊಳ್ಳುವ ವಿಷಯ.

ನಮ್ಮ ಮುಂದಿರುವ ನಿಷ್ಕಳಂಕ ಚಾರಿತ್ರ್ಯದ ಒಬ್ಬ ಮಹಾತ್ಮರು ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯನವರು. ಕಳೆದ ಶತಮಾನದ ಭಾರತದ ಔದ್ಯೋಗಿಕ ಮತ್ತು ಆರ್ಥಿಕ ಉನ್ನತಿಗೆ ರೂವಾರಿಗಳಾಗಿದ್ದವರಿವರು. ಅವರು ಕುಂದಿಲ್ಲದ ಉನ್ನತ ಚಾರಿತ್ರ್ಯಕ್ಕೆ ಹೆಸರಾದರು. ಅವರು ಎಷ್ಟು ಪ್ರಾಮಾಣಿಕರಾಗಿದ್ದರೆಂದರೆ ಸರಕಾರದ ಭತ್ಯೆ, ವಾಹನಗಳು ಮುಂತಾದ ಯಾವುದೇ ಸವಲತ್ತುಗಳನ್ನು ತಮ್ಮ ವೈಯಕ್ತಿಕ ಉಪಯೋಗಕ್ಕೆ ಬಳಸುತ್ತಿರಲಿಲ್ಲ. ತಮ್ಮ ವೈಯಕ್ತಿಕ ಟಿಪ್ಪಣಿ ಬರೆದುಕೊಳ್ಳಲು ಸರಕಾರದ ಮಸಿ, ಕಾಗದಗಳನ್ನೂ ಸಹ ಬಳಸದೆ ಅದಕ್ಕಾಗಿ ತಮ್ಮದೇ ಮಸಿ ಕಾಗದಗಳನ್ನು ಮನೆಯಿಂದ ತಂದುಕೊಳ್ಳುತ್ತಿದ್ದರು! ಅವರು ಸರಕಾರಿ ಪದವಿಯಿಂದ ನಿವೃತ್ತರಾದ ದಿನ ಮನೆಗೆ ಹಿಂದಿರುಗುವಾಗ ಸರಕಾರಿ ವಾಹನವನ್ನು ಉಪಯೋಗಿಸಲು ನಿರಾಕರಿಸಿದರು! ಅವರು ಮೈಸೂರು ಸಂಸ್ಥಾನದ ದಿವಾನರಾಗಿದ್ದಾಗಲೂ ಎಂದೂ ಅವರ ಸ್ನೇಹಿತರಿಗಾಗಿ ಅಥವಾ ಬಂಧುಗಳಿಗಾಗಿ ಅನಗತ್ಯ ಸರಕಾರಿ ಉಪಚಾರಗಳನ್ನು ಕಲ್ಪಿಸಲಿಲ್ಲ. ಅವರನ್ನು ಆಧುನಿಕ ‘ಋಷಿ’ ಎನ್ನಬಹುದು. ವಿಶ್ವೇಶ್ವರಯ್ಯನವರ ಸಫಲತೆಗೆ ಹಿನ್ನಲೆಯ ಸ್ಫೂರ್ತಿ ಅವರ ತಾಯಿ. ಅವರು ಹುಟ್ಟಿಬೆಳೆದದ್ದು ನೀರಿನ ತೀವ್ರ ಅಭಾವವಿದ್ದ ಕುಗ್ರಾಮವೊಂದರಲ್ಲಿ. ಒಮ್ಮೆ ವಿಷಮ ಜ್ವರದಿಂದ ಬಳಲುತ್ತಿರುವ ಮಗನನ್ನು ಕಾಪಾಡಲು ನೀರು ಒದಗಿಸಲು ಬಹಳ ದೂರ ಕ್ರಮಿಸಿ, ತೊಂದರೆಗಳನ್ನು ಎದುರಿಸಬೇಕಾಯಿತು. ಮಗ ಜ್ವರದಿಂದ ಚೇತರಿಸಿಕೊಂಡ ಮೇಲೆ ತಾಯಿಯು ಅವನ ಪುಟ್ಟ ಕೈಗಳನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ಹೇಳಿದಳು – “ಮಗು, ನನಗೊಂದು ಮಾತು ಕೊಡು. ನೀನು ದೊಡ್ಡವನಾದ ಮೇಲೆ ಏನಾದರೂ ಮಾಡಿ ಈ ಹಳ್ಳಿಗೆ ನೀರಿನ ವ್ಯವಸ್ಥೆಯನ್ನು ಮಾಡಿಸಬೇಕು”. ತಾಯಿಯ ಈ ಮಾತುಗಳನ್ನು ವಿಶ್ವೇಶ್ವರಯ್ಯಯನವರು ಮುಂದೆ ನಡೆಸಿಕೊಟ್ಟರು ಕೂಡ! ಕೇವಲ ಆ ಹಳ್ಳಿಗಷ್ಟೇ ನೀರು ಬರೆಸುವುದಿರಲಿ ಜಲ-ಸ್ಥಾವರ, ವಿದ್ಯುತ್-ಸ್ಥಾವರ, ನೀರಾವರಿ ಯೋಜನೆ, ಔದ್ಯೋಗೀಕರಣ, ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರ, ಶಿಕ್ಷಣ ಕ್ಷೇತ್ರ ಮುಂತಾದವುಗಳಲ್ಲಿನ ಅಪಾರ ಸತ್ಕ್ರಾಂತಿಗಳ ರೂವಾರಿಯಾದರು. ಇವರ ಯೋಗದಾನಗಳು ಇಂದಿಗೂ ದೇಶಕ್ಕೆ ಮಹತ್ತರ ಆರ್ಥಿಕ, ಔದ್ಯೋಗಿಕ, ವೈಜ್ಞಾನಿಕ, ಶೈಕ್ಷಣಿಕ ಸಂಪನ್ಮೂಲ ಕೇಂದ್ರಗಳಾಗಿ ಮೆರೆಯುತ್ತಿವೆ.

ಸುಂದರ ಜೀವನಕ್ಕೆ ಮೌಲ್ಯಗಳು ಬಹಳ ಮುಖ್ಯವೂ ಅಗತ್ಯವೂ ಆಗಿದ್ದರೂ ಜನರು ಏಕೆ ಅವುಗಳನ್ನು ಅನುಸರಿಸುವುದಿಲ್ಲ? ಮೌಲ್ಯಗಳ ಪ್ರಾಧಾನ್ಯತೆಯ ಕುರಿತಾಗಿ ನಿಮ್ಮ ಅನಿಸಿಕೆಗಳನ್ನು ಬರೆಯಿರಿ. 

ನಾವು ತಿಳಿದೂ ತಿಳಿದೂ ಏಕೆ ತಪ್ಪುಗಳನ್ನು ಎಸಗುತ್ತೇವೆ? ನಮ್ಮ ಅಸಹನೆ ಮತ್ತು ತಳಮಳಗಳಿಗೆ ಕಾರಣವೇನು?

ದುರಾಸೆ ಮನುಷ್ಯನನ್ನು ಅಸಹನೆ ಮತ್ತು ಅಶಾಂತಿಯತ್ತ ಒಯ್ಯುತ್ತದೆ. ಆ ಮನೋಭಾವದಲ್ಲಿದ್ದಾಗ ಮನುಷ್ಯ ಸುಲಭವೆನಿಸುವ ನೀಚ shortcutಗಳನ್ನು ಬಳಸಲು ಮುಂದಾಗುತ್ತಾನೆ. ಆದರೆ ಯಶಸ್ಸು ಹಾಗೂ ಸಾಫಲ್ಯತೆಗೆ Shortcut ಎನ್ನುವುದೇ ಇಲ್ಲ. ಜೀವನದಲ್ಲಿ ‘ರಾಜಬೀದಿ’ಯಲ್ಲಿ ಕ್ರಮಿಸಬೇಕೆ ಹೊರತು ‘ಸಂದಿ’ಯಲ್ಲಲ್ಲ. ‘Shortcuts cut you short’ ಎನ್ನುವ ಮಾತಿದೆ.

ಪ್ರಾಚೀನ ಕಾಲದ ಋಷಿಗಳುಸಮಸ್ತಿ ಪ್ರಜ್ಞಾಗೆ ಒತ್ತು ಕೊಟ್ಟರು. ಅಂದರೆ ಐಕ್ಯತೆ ಮತ್ತು ವಿಶ್ವಬಂಧುತ್ವ ಅನಾದಿಕಾಲದಿಂದಲೂ ಆದರ್ಶಗಳು. ಸುಭಾಷಿತವೊಂದರ ನುಡಿ– “ವಸುಧೈವ ಕುಟುಂಬಕಂ’ (ಜಗತ್ತೆಲ್ಲಾ ಒಂದು ಪರಿವಾರ) ಎಂದು ಭಾರತೀಯರು ನಂಬುತ್ತಾರೆ. ಅಭಿವೃದ್ಧಿ ಮತ್ತು ಶಾಂತಿಗಳಿಗೆ ಇದೇ ಪ್ರೇರಕ ಮಂತ್ರ. ದುರಾಸೆ ಎಲ್ಲಾ ಮೌಲ್ಯಗಳನ್ನು ಮತ್ತು ಸಹನಾಶಕ್ತಿಯನ್ನು ಕಬಳಿಸುತ್ತದೆ.

ಒಂದು ಪೌರಾಣಿಕ ನಿದರ್ಶನವಿದೆ: “ರಾಕ್ಷಸರು ಸೃಷ್ಟಿಕರ್ತನಾದ ಬ್ರಹ್ಮನ ಬಳಿ ದೂರಿದರು- “ದೇವತೆಗಳಿಗೆ ನಮಗಿಂತ ಹೆಚ್ಚಿನ ಸುಖಸೌಲಭ್ಯಗಳನ್ನು ಕೊಟ್ಟಿದ್ದೀಯೆ, ಇದು ಪಕ್ಷಪಾತ” ಎಂದು. ಬ್ರಹ್ಮನು ತಾನು ಪಕ್ಷಪಾತವಿಲ್ಲದೆ ಎಲ್ಲರಿಗೂ ಸರಿಸಮವಾಗಿ ಎಲ್ಲ ಸೌಲಭ್ಯಗಳನ್ನೂ ಹಂಚಿರುವುದಾಗಿ ಹೇಳಿದರೂ ರಾಕ್ಷಸರು ಒಪ್ಪಲಿಲ್ಲ. ಆಗ ಬ್ರಹ್ಮನು ದೇವತೆಗಳನ್ನೂ, ರಾಕ್ಷಸರನ್ನೂ ಒಟ್ಟಿಗೇ ಕರೆದು ಒಂದು ತಟ್ಟೆಯ ತುಂಬಾ ಸಿಹಿ ತಿನಿಸು ಇಟ್ಟು ತಿನ್ನಲು ಹೇಳಿದ. ಅದಕ್ಕೆ ಒಂದು ನಿಯಮವಿಟ್ಟ- ‘ಕೈಯ್ಯನ್ನು ಮಡಚದೇ ನೆಟ್ಟಗೆ ಇಟ್ಟುಕೊಂಡು ತಿನ್ನಬೇಕು’ ಎಂದು. ಮೊದಲನೇ ಸರದಿ ರಾಕ್ಷಸರದ್ದು. ಆದರೆ ಅವರು ಎಷ್ಟೇ ಪ್ರಯತ್ನಪಟ್ಟರೂ ಕೈಯ್ಯನ್ನು ಮಡಚದೇ ತಿನ್ನಲು ಆಗದೆ, ಸೋಲೊಪ್ಪಿಕೊಂಡರು. ನಂತರ ದೇವತೆಗಳ ಸರದಿ. ಅವರು ಕೈಯ್ಯನ್ನು ಮಡಚದೇ ಒಬ್ಬರಿಗೊಬ್ಬರು ತಿನ್ನಿಸಿ ಜಯಗಳಿಸಿದರು. ಆಗ ಬ್ರಹ್ಮನು ವಿವರಿಸಿದ- ‘ಎಲ್ಲರಿಗೂ ಸವಲತ್ತುಗಳನ್ನು ಸರಿಸಮಾನವಾಗಿ ಹಂಚಿದ್ದರೂ ರಾಕ್ಷಸರು ತಮ್ಮ ದುರಾಸೆಯಿಂದಾಗಿ ತಾನು ತನಗೆ ಎನ್ನುವ ಭಾವದಿಂದ ಅವುಗಳನ್ನು ದುರ್ಬಳಕೆ ಮಾಡಿ ಕಳೆದುಕೊಳ್ಳುತ್ತ ಬಂದರು. ದೇವತೆಗಳು ತಮ್ಮ ಸದ್ಬುದ್ಧಿಯಿಂದಾಗಿ ಎಲ್ಲವನ್ನು ಹಂಚಿಕೊಳ್ಳುತ್ತ, ಪರಸ್ಪರರಿಗೆ ಸಹಕರಿಸುತ್ತ ಇರುವುದನ್ನು ವೃದ್ಧಿಗೊಳಿಸಿಕೊಳ್ಳುತ್ತ ಬಂದರು’.

ಕಿರಿಯರು ಮೌಲ್ಯಗಳ ಮಾರ್ಗವನ್ನು ಏಕೆ ಅನುಸರಿಸಬೇಕು?

ನಾವು ಇಂದು ಮಾಡುವ ಚಿಂತನೆಗಳಿಂದಲೇ ನಾಳಿನ ಭವಿಷ್ಯವನ್ನು ಕಟ್ಟುತ್ತೇವೆ

ನಾವು ಚಿಕ್ಕಂದಿನಿಂದ ಬೆಳೆಸಿಕೊಳ್ಳುವ ಧೋರಣೆ ಮತ್ತು ಹವ್ಯಾಸಗಳೇ ನಮ್ಮ ಭವಿಷ್ಯದ ಚಾರಿತ್ರ್ಯವನ್ನು ನಿರ್ಮಿಸುತ್ತವೆ.

ಮರಗೆಲಸ ಮಾಡುತ್ತಿದ್ದವನೊಬ್ಬ ವಯಸ್ಸಾಯಿತೆಂದು ನಿವೃತ್ತಿ ಹೊಂದಲು ನಿಶ್ಚಯಿಸಿದ. ಹೆಂಡತಿಮಕ್ಕಳೊಂದಿಗೆ ಉಳಿದ ಜೀವನವನ್ನು ಶಾಂತವಾಗಿ ಕಳೆಯಬೇಕೆಂದು ಇಚ್ಛಿಸಿದ. ಯಜಮಾನನ ಬಳಿಗೆ ಹೋಗಿ ನಿವೃತ್ತಿಗಾಗಿ ವಿನಂತಿಸಿಕೊಂಡ.

‘ನಿವೃತ್ತಿ ಹೊಂದುವ ಮೊದಲು ಇನ್ನೂ ಒಂದು ಮನೆಯನ್ನು ಕಟ್ಟಬೇಕು’ ಎಂದು ಯಜಮಾನ ಅಪ್ಪಣೆಯಿತ್ತ. ಈತನಿಗೆ ಇಷ್ಟವಿಲ್ಲ. ಆದರೂ ಅರೆಮನಸ್ಸಿನಲ್ಲೇ ಒಪ್ಪಿಕೊಂಡು ಉದಾಸೀನ, ನಿರುತ್ಸಾಹಗಳಿಂದಲೇ ಕಳಪೆ ಮಟ್ಟದ ಕೆಲಸ ಮಾಡಿ ಮುಗಿಸಿದ. ಯಜಮಾನನ ಬಳಿ ಹೋಗಿ ‘ಇನ್ನು ಬಿಟ್ಟುಕೊಡಬೇಕು’ ಎಂದು ವಿನಂತಿಸಿದ. ಯಜಮಾನ ಈತನ ಬಹು ವರ್ಷಗಳ ಸೇವೆಯನ್ನು ಮೆಚ್ಚಿದ. ಆಗತಾನೆ ಕಟ್ಟಿದ ಆ ಮನೆಯ ಕೀಲಿಕೈಯನ್ನು ಈತನಿಗೆ ಕೊಟ್ಟು- “ಇಷ್ಟು ದಿನಗಳು ನನಗಾಗಿ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದೀಯೆ. ಇಗೋ, ಈ ಮನೆಯನ್ನು ನಿನಗೇ ಉಡುಗೊರೆಯಾಗಿ ಕೊಡುತ್ತಿರುವೆ” ಎಂದ. ಮರಗೆಲಸದವನಿಗೆ ಗರ ಬಡಿದಂತಾಯಿತು. ‘ಅಯ್ಯೋ, ಈ ಮನೆ ನನಗೇ ದಕ್ಕುತ್ತದೆ ಎಂದು ಗೊತ್ತಿದ್ದರೆ, ಮುತುವರ್ಜಿಯಿಂದ ಒಳ್ಳೆಯ ನಿರ್ಮಾಣಕಾರ್ಯ ಮಾಡುತ್ತಿದ್ದೆನಲ್ಲ!’ ಎಂದು ಸಂಕಟ ಪಟ್ಟುಕೊಂಡ.

ತಿಳಿದೋ ತಿಳಿಯದೆಯೋ ನಾವು ಮಾಡಿದ ಕೆಲಸದ ಪರಿಣಾಮ ನಮಗೇ ಮರಳೀತು ಎನ್ನುವುದನ್ನು ನೆನಪಿಡಬೇಕು. ಆದ್ದರಿಂದ ಯಾವ ಕೆಲಸವನ್ನೇ ಆಗಲಿ ಶ್ರದ್ಧೆ-ಪ್ರೀತಿಗಳಿಂದ ಮಾಡಿದರೆ ಯಶಸ್ಸು ದಕ್ಕುತ್ತದೆ. ಇಲ್ಲದಿದ್ದರೆ ಆ ವೃದ್ಧ ಮರಗೆಲಸದವನ ಪಾಡೇ ನಮ್ಮದಾದೀತು. ಜೀವನದಲ್ಲಿ ಅವಕಾಶಗಳು ಮತ್ತೆ ಮತ್ತೆ ಬರುವುದಿಲ್ಲ, ಬಂದದ್ದು ಕೈತಪ್ಪಿ ಹೋಗಲು ಬಿಟ್ಟರೆ ಕಾಲಕ್ರಮದಲ್ಲಿ ನಷ್ಟಕ್ಕೆ ಒಳಗಾಗಿ ನೊಂದುಕೊಳ್ಳಬೇಕಾದೀತು.

ಹಿಡಿದ ಕಾರ್ಯವನ್ನು ಕೈಬಿಡದಿರು
ಆಗಾಗ ಕೆಲಸಗಳು ಆದಾವು ಹಾಳು |
ನಡೆವ ಹಾದಿಯು ಕುಸಿದು ಉಳಿದೀತು ಗೋಳು
||
ಹಣದ ಕೊರತೆಯ ಜೊತೆಗೆ ಸಾಲಗಳ ಭಾರ
|
ವೈಫಲ್ಯಗಳು ಬಂದು ಅಹುದು ಮನ ಖಾರ
||
ಬಂಧುಮಿತ್ರರ ಋಣವು ಒತ್ತಡವ ತರಲು
|
ನಗಬೇಕು ಎನಿಸಿದರೂ ನಿಟ್ಟುಸಿರೆ ಬರಲು ||
ಒಂದಿನಿತು ವಿಶ್ರಮಿಸು, ಆದರೆಂದೆಂದೂ
|
ಕೈಬಿಟ್ಟು ಕೂಡದಿರು, ನಡೆಯುತಿರು ಮುಂದು
||
ಬಳಸು ದಾರಿಯ ಬಾಳು ತಿಳಿಯದಾ ಮಾಟ
|
ಚಿತ್ರವದು ಕಲಿಸುವುದು ಎಲ್ಲರಿಗು ಪಾಠ
||
ವೈಫಲ್ಯಗಳ ನೀನು ಎದುರಿಸಿರೆ ಅಂದು
|
ಗೆಲುವನ್ನು ತರವುದದೆ ಮರೆಯಲ್ಲಿ ನಿಂದು
||
ವೇಗದಲಿ ಸಾಗುತಿಲ್ಲೆಂಬ ವ್ಯಥೆ ಬೇಡ
|
ಏಟೊಂದು ನಿನ ಮೇಲಕೆಸೆದೀತು ನೋಡ
||
ಗೆಲುವು ಸೋಲಿನ ವೇಷ ಧರಿಸುವುದು ಜಾಣ
|
ಕರಿಮೋಡದಂಚಿನಲಿ ಬೆಳ್ಳಿ ದಿಟ ಕಾಣ
||
ಗಮ್ಯಕ್ಕೆ ಎಷ್ಟು ನೀ ಹತ್ತಿರವೋ ತಿಳಿಯೆ
|
ದೂರವಿದೆ ಎನಿಸಿದರು ಇದೆ ನಿನ್ನ ಬಳಿಯೆ
||
ಸಹಿಸಲಾಗದ ಹೊಡೆತವೆನಿಸಿದರು ಘೋರ
|
ಕೈಬಿಡದೆ ಮುನ್ನಡೆಯೋ, ಅಳುಕದಿರು ಧೀರ
||
ಭಾವಾನುವಾದ- ಡಾ ವಿ ಬಿ ಆರತಿ
Don’t You Quit
When things go wrong as they sometimes will
When the road you’re trudging seems all up hill.
When funds are low and the debts are high.
And you want to smile, but you have to sigh.
When care is pressing you down a bit.
Rest, if you must, but don’t you quit.
Life is queer with its twists and turns.
As everyone of us sometimes learns.
And many a failure turns about
When he might have won had he stuck it out.
Don’t give up though the pace seems slow –
You may succeed with another blow.
Success is failure turned inside out –
The silver tint of the clouds of doubt.
And you never can tell how close you are.
It may be near when it seems so far:
So stick to the fight when you’re hardest hit
It’s when things seem worst that you must not quit.

 

ಏಸು ಸಲ ಗಪವಗೈದೇಸು ಬನ್ನವನಾಂತು
ಕೌಶಿಕಂ ಬ್ರಹ್ಮರ್ಷಿ ಪದಕರ್ಹನಾದನ್ |
ಘಾಸಿ ಪಡುತಿನ್ನೊಮ್ಮೆ ಮತ್ತೊಮ್ಮೆ ಮರಮರಳಿ
ಲೇಸಾಗಿಸಾತ್ಮವನು – ಮಂಕುತಿಮ್ಮ ||

 ಜೀವನದಲ್ಲಿ ಇರಬೇಕಾದ ಮುಖ್ಯವಾದ ಮೌಲ್ಯಗಳ ಬಗ್ಗೆ ಪಟ್ಟಿ ಮಾಡಿ.

ಗ್ರಂಥ ಸಲಹೆ:

 • Eternal Values for a changing society (4 Vol) by Swami Ranganathananada : Ramakrishana math publication
 • Complete works of swami Vivekananda (8 vol) by Ramakrishna Mission.
 • The power of positive thinking, by Norman Vincent Peale
 • The Islamic Tradition (1988) byVictor Danner 

ಅಂತರ್ಜಾಲ ಮೂಲ:

www.successconsciousness.com

www.sathyasaiehv.org.uk