ಜಾನಪದ ಕಲೆಯು ಅಭಿಜಾತ ಕಲೆಗೆ ಸರಿಸಮವಾಗಿ, ಸ್ವತಂತ್ರವಾಗಿ ಹುಟ್ಟಿ ; ಬೆಳೆಯಿತು. ಅದರ ಬೆಳವಣಿಗೆ ಗ್ರಾಮಗಳಲ್ಲಿ. ಇದರ ಪ್ರಾಚೀನತೆಗೆ ಅಧಾರಗಳು ಹೆಚ್ಚಾಗಿಲ್ಲ. ಏಕೆಂದರೆ ಜಾನಪದ ಕಲಾವಿದರು, ಪೋಷಕರು ಸಹ ನಿರಕ್ಷರಿಗಳು. ಆದರೂ ಅಲ್ಲೊಂದು ಇಲ್ಲೊಂದು ಶಿಲಾಶಾಸನಗಳಲ್ಲಿ ಕಾವ್ಯಗಳಲ್ಲಿ ಸೂಚಿತವಾಗಿದೆ. ಗ್ರಾಮಿಣ ರಂಗಭೂಮಿಯ ಬಗ್ಗೆ ಇರುವ ಲಿಖಿತಗಳು ಅಸ್ಪಷ್ಟ. ನಮ್ಮ ಸಂಪ್ರದಾಯದಲ್ಲಿ ಪ್ರತಿಯೊಂದೂ ದೇವರಿಂದ ಅಥವಾ ಅವರ ಸಮಾನ ಪುರುಷರಿಂದ ಪ್ರಾರಂಭವಾಯಿತೆಂದು ಹೇಳುವುದು ರೂಢಿ. ಅಂತೆಯೇ ಕಲೆಯು ಉಗಮವೂ ಕೂಡ:  ರಂಗಭೂಮಿಯ ಉಗಮದ ಒಂದು ಕಥೆ ನಾಟ್ಯ ಶಾಸ್ತ್ರದಲ್ಲಿ ಬರುತ್ತದೆ. ಅದರ ಸಾರಂಶ ಇಂತಿದೆ :

ತ್ರೇತಾಯುಗದಲ್ಲಿ ಪ್ರಪಂಚವನ್ನು ಮಾಯಿ ಮೋಹಗಳು ಅವರಿಸಿದ್ದವು. ದೇವತೆಗಳೆಲ್ಲ ಸೇರಿ ದೇವನ ದೇವನಾದ ಬ್ರಹ್ಮನಲ್ಲಿಗೆ ಹೋಗಿ ತಮಗೆ ಒಂದು ವಿಶೇಷವಾದ ಕ್ರೀಡೆಯನ್ನು-ಆಟವನ್ನು ದಯಪಾಲಿಸಬೇಕೆಂದು ಮನ ಒಲಿಸಿದರು. ಆ ಆಟವನ್ನು ಆಡುವುದರಿಂದ, ನೋಡುವುದರಿಂದ. ಅಥವಾ ಅದನ್ನು ಆಲಿಸುವುದರಿಂದಲೂ ತೃಪ್ತಿಯುಂಟಾಗಬೇಕು ಅಂಥ ಆಟವನ್ನು ದಯಪಾಲಿಸೆಂದು ಅವರು ಬೇಡಿಕೊಂಡರು. ಅವರ ಬೇಡಿಗೆಯನ್ನು ಮನ್ನಿಸಿ ಐದನೆಯ ವೇದವನ್ನು ರಚಿಸಿದನು. ಇದೇ ನಾಟ್ಯಶಾಸ್ತ್ರ. ಇದರ ರಚನೆಗಾಗಿ ಆತನು ಋಗ್ವೇದದಿಂದ ಸಾಹಿತ್ಯವನ್ನು, ಗದ್ಯಭಾಗವನ್ನು ಯಜುರ್ವೇದದಿಂದ ಅಭಿನಯವನ್ನೂ, ಸಾಮವೇದದಿಂದ ಸಂಗೀತವನ್ನೂ ಅಥರ್ವಣ ವೇದದಿಂದ ರಸವನ್ನೂ ಪಡೆದು, ಅವನ್ನೆಲ್ಲ ಸಂಯೋಜಿಸಿ ಸೃಷ್ಟಿಸಿದನು. ಆದ್ದರಿಂದ ನಾಟ್ಯಶಬ್ದವು ಒಂದು ಸಂಮಿಶ್ರಣ. ಇದರಲ್ಲಿ ಗದ್ಯ, ಅಭಿನಯ, ಸಂಗೀತ ಮತ್ತು ರಸಗಳಿವೆ. ಶಾಸ್ತ್ರವೇನೋ ತಯಾರಾಯಿತು. ಅದನ್ನು ಮೊದಲು ಪ್ರಯೋಗಿಸಿ. ಶಾಸ್ತ್ರವನ್ನು ಅನುಷ್ಟಾನಕ್ಕೆ ತರಲು ಒಂದು ಕಲಾವಿದರ ತಂಡ ಬೇಕಲ್ಲ! ಈ ಕಾರ್ಯವನ್ನು ಕೈಗೊಂಡ ಭರತಮುನಿ ತನ್ನ ನೂರು ಶಿಷ್ಯರೊಡನೆ ದೇವತೆಗಳೆದುರಿಗೆ ಪ್ರಪ್ರಥಮವಾಗಿ ನಾಟ್ಯವನ್ನು ಪ್ರದರ್ಶಿಸಿದನು. ಅದು ದೇವತೆಗಳು ಅಸುರರನ್ನು ಜಯಿಸಿದ ಕಥೆಯಾಗಿತ್ತು. ನೆರೆದ ಅಸುರರಿಗೆ ಅಪಮಾನವೆನಿಸಿ ಕೆಲವರು ಸಭೆಯ ಕಾರ್ಯಕಲಾಪಗಳಿಗೆ ಅಡ್ಡಿಯನ್ನುಂಟು ಮಾಡಿದರು. ಪಾತ್ರಗಳ ಮಾತುಗಳು ಅಲ್ಲಿಯ ಪ್ರೇಕ್ಷಕರಿಗೆ ಕೇಳಿಸಲಾರದಷ್ಟು ಗದ್ದಲವುಂಟಾಯಿತು. “ಸೂತ್ರಧಾರನು” ಬೇರೆ ಮಾರ್ಗಕಾಣದೆ ಆಟವನ್ನು ನಿಲ್ಲಿಸಿದ. ದೇವರ ಅರಸ ದೇವೇಂದ್ರ ತನ್ನ ಧ್ವಜವನ್ನು ತೋರಿಸಿ ಸದ್ದನ್ನು ಆಡಗಿಸಿದ. ಆಗ್ಗೆ ಸೃಷ್ಟಿಕರ್ತ, ಬ್ರಹ್ಮದೇವರಿಗೆ “ರಂಗ ಮಂದಿರದ” ಅವಶ್ಯಕತೆಯೆನಿಸಿತು. ದೇವಶಿಲ್ಪಿಯಾದ ವಿಶ್ವಕರ್ಮನು ಒಂದು ಸುಸಜ್ಜಿತವಾದ ರಂಗ ಮಂದಿರವನ್ನು ನಿರ್ಮಿಸಿದನು. ಅದನ್ನು ರಕ್ಷಿಸಬೇಕೆಂದು ಅಷ್ಟದಿಕ್ಪಾಲಕರನ್ನು ಕೇಳಿ ಕೊಂಡನು. ಇದು ಇಂತ ಕಥೆಯಾದರೂ ಇಂದಿಗೂ ರಂಗ ಭೂಮಿಯಲ್ಲಿ ದೇವತಾ ಧ್ವಜ ಅಷ್ಟದಿಕ್ಪಾಲಕರ ಪೂಜೆ ಅವ್ಯಾಹತವಾಗಿ ನಡೆಯುತ್ತಿರುವುದನ್ನು ಎತ್ತಿ ತೋರಿಸುತ್ತದೆ.

ನೃತ್ಯದ ಅಧಿದೇವತೆ-ಶಿವನು-ಇದರಿಂದಾಗಿ ಆತನು ‘ನಟರಾಜ’, ನಟ್ಟುವ ಎಂಬ ಒಂದು ಆದಿವಾಸಿ ಜನಾಂಗದ ಆರಾಧ್ಯ ದೇವತೆಯಾಗಿದ್ದಾನೆ. ಈ ನಟರಾಜ…. ನಟರಾಜನನ್ನು ತಮ್ಮ ಮನೆತನದ ದೇವರೆಂದು ಕುಲದ ಆರಾಧ್ಯ ದೈವವೆಂದು ಪೂಜಿಸುವವರು ನಟುವರನ್ನು ಬಿಟ್ಟರೆ ಬೇರಿಲ್ಲ. ನಟರಾಜನು ತನ್ನ ಸತಿಯೊಡನೆ ಮೊದಲು ನರ್ತಿಸಿದನೆಂದು ಪ್ರತೀತಿ. ಅಂದರೆ ನೃತ್ಯ ಪ್ರದರ್ಶನ, ಅಭಿನಯವು ಸಹ ದೇವತೆಯಿಂದ ಆರಂಭವಾಯಿತು. ಗಜಾಸುರನನ್ನು ಸಂಹರಿಸಿದ ದೃಶ್ಯದ ಈ ನಾಟ್ಯ ‘ತಾಂಡವ’ ಇದು. ಯುದ್ಧದಲ್ಲಿಯ ಆತನ ಪರಾಕ್ರಮದ ಸಂಕೇತ. ವೈರಿಗಳನ್ನು ನಾಶ ಮಾಡುವುದರಲ್ಲಿ ತಾಂಡವ ನೃತ್ಯವೂ ಕೊನೆಗೊಳ್ಳುವಂತೆ, ವೈರಿಯನ್ನು ಶೂರತನದಿಂದ ಶಿವನು, ನಟರಾಜನು ತನ್ನ ಎದುರಾಳಿ ದೈತ್ಯರಿಗೆ, ನೃತ್ಯ ಮಾಡಲು ಹೇಳಿದ. ಇಬ್ಬರೂ ಪ್ರಾರಂಭಿಸಿದರು. ಕ್ರಮೇಣ ಗಜಾಸುರನ ನಾಶವಾಯಿತು-ಎಂದು ತಿಳಿದು ಬರುತ್ತದೆ.

ಲಾಸ್ಯವು ಮಧುರವಾದ, ಪ್ರೇಮ ಸಂಕೇತದ ಅಹ್ಲಾದಕರವಾದ ನೃತ್ಯ., ಲಾಸ್ಯ, ಸಂಗೀತ ಪ್ರಧಾನವಾಗಿದ್ದು ಪ್ರೇಮದ ಬಾಹ್ಯ ಬದಲಾವಣೆಗಳನ್ನು, ಉತ್ಸುಕತೆಯನ್ನು, ‘ನೃತ್ಯ’ ಎರಡರ ಅಧಿದೇವತೆ ಈಶ್ವರ, ಎರಡನ್ನೂ ಆದರ್ಶಪ್ರಾಯವಾಗಿ ಅಭಿನಯಿಸಿದವನೂ ಅವನೇ. ಜಾನಪದ ನೃತ್ಯದಲ್ಲಿ ಮತ್ತು ದೇಶಿ ನೃತ್ಯಗಳಲ್ಲಿಯೂ ಶಿವನ ದೇಶೀ ನೃತ್ಯಗಳು-ಜಾನಪದ ನೃತ್ಯದಲ್ಲಿ ಮತ್ತು ದೇಶಿ ನೃತ್ಯಗಳಲ್ಲಿಯೂ ಶಿವನ ಆರಾಧನೆಯು ಕಂಡು ಬರುತ್ತದೆ. ನಾಟ್ಯಶಾಸ್ತ್ರದ ಉಗಮ ಕಾಲದಲ್ಲಿಯೇ ನಾಡಿನಲ್ಲಿ ದೇಶೀ ನೃತ್ಯಗಳು-ಜಾನಪದ ನೃತ್ಯಗಳು ಜನಪ್ರಿಯವಾಗಿದ್ದವು. ನಾಟ್ಯಶಾಸ್ತ್ರದಲ್ಲಿ ಅದರ ಪ್ರಭಾವವನ್ನು ಗುರುತಿಸಬಹುದು. ನಾಟ್ಯಶಾಸ್ತ್ರದಲ್ಲಿ ವರ್ಣಿಸಿದ ನೃತ್ಯಗಳು ಬಯಲಾಟ, ಕೃಷ್ಣ ಪಾರಿಜಾತ, ಭಾಮಾಕಲಾಪ, ತೆರೆಕೋಟ್ಟಮ್ ವಿಲ್ತೇ ಆಟ ಇತ್ಯಾದಿಗಳಲ್ಲಿ ಕಾಣಬಹುದು. ಬಯಲಾಟಗಳ ಪೂರ್ವದಲ್ಲಿ. ಚಿಕ್ಕ ವಾದ್ಯಗೋಷ್ಟಿಯೊಂದಿಗೆ, ಹಾಡು, ನೃತ್ಯಗಳು ಜನಪ್ರಿಯವಾಗಿದ್ದವೆಂದು ಕಂಡುಬರುತ್ತವೆ. ತಮಿಳು ಸಾಹಿತ್ಯದಲ್ಲಿ ನೀಲಿಗಿರಿ ಬೆಟ್ಟದ ಅರಸನನ್ನು ನಾಟ್ಯದಿಂದ ಮನರಂಜಿಸಿದ ವರ್ಣನೆ ಬಂದಿದೆ. ಆ ದಿವಸಗಳಲ್ಲಿ ರಂಗಭೂಮಿಯು ಆ ವೇಳೆಗಾಗಲೇ ಪ್ರೌಢಸ್ಥಿತಿಗೆ ಬಂದಿರಬೇಕು. ಇಲ್ಲದಿದ್ದಲ್ಲಿ ‘ಅರಸನನ್ನು’ ತೃಪ್ತಿಪಡಿಸುವ ಕಲೆಯೆಂದು ಭಾವಿಸಿ ಆತನ ಮುಂದೆ ಪ್ರದರ್ಶಿಸುವ ಧೈರ್ಯವಾದರೂ ಜಾನಪದ ಕಲಾವಿದರಿಗೆ ಎಲ್ಲಿಂದ ಬರಬೇಕು? ಆ ರಂಗಮೇಳದಲ್ಲಿ ಇಬ್ಬರು ನಾಯಕರು ಕೊಳಲು, ಮೃದಂಗಮಾಲ, ಸಂಗೀತ ಸಲಕರಣೆಗಳನ್ನು ಉಪಯೋಗಿಸಲಾಯಿತೆಂದು ವರ್ಣನೆಯೂ ಇದ್ದು ಪ್ರಾಚೀನ ನೃತ್ಯದಲ್ಲಿ ಸ್ತ್ರೀಯರು ಭಾಗವಹಿಸುತ್ತಿದ್ದರೆಂಬುದಕ್ಕೆ ನಿದರ್ಶನವಾಗಿದೆ.

ನಾಟ್ಯಲೋಕಕ್ಕೆ ದಕ್ಷಿಣ ಭಾರತೀಯರ ಕೊಡುಗೆ, ದ್ರಾವಿಡರ ಕೊಡುಗೆ ಹೆಚ್ಚಿನ ಪ್ರಮಾಣದಲ್ಲಿದೆ. ಅಂದು ಜನಸಾಮಾನ್ಯರಿಗೆ ಧಾರ್ಮಿಕ ಸಂದೇಶ ಬೀರುವುದಕ್ಕಾಗಿ ಜನಪ್ರಿಯ ಮಾರ್ಗಗಳನ್ನು ಅನುಸರಿಸಿ, ಹಾಡು ಜನಟೆಗಳು ಹೆಚ್ಚಿನ ಪ್ರಮಾಣದಲ್ಲಿ ರೂಪುಗೊಂಡಿಬೇಕು. ಅವುಗಳಲ್ಲಿ ಧಾರ್ಮಿಕ ತತ್ವಗಳು, ಪುರಾಣ ವ್ಯಕ್ಯಿಗಳ ಚರಿತ್ರೆಗಳೂ ತುಂಬಿರಲು ಸಾಕು. ಅವುಗಳ ಅವಿಭಾಜ್ಯ ಸಂಗತಿಗಳು ನಾಟ್ಯಶಾಸ್ತ್ರದಲ್ಲಿ ಕಂಡು ಬರುವ ಸಂಪ್ರದಾಯದ ಸ್ಪೂರ್ತಿಯ ಸೆರೆಗಳಾಗಿದ್ದಿರಬೇಕು.

ಕವಿಗಳು ‘ದೇಶಿ ಕವಿಗಳನ್ನು’ ಅಂದರೆ ಗ್ರಾಮೀಣ ಕವಿಗಳನ್ನು ಮೊದಲಿನಿಂದಲೂ ಗೌಣವಾಗಿ ಕಾಣುತ್ತ ಬಂದಿದ್ದಾರೆ. ಅದರಿಂದ ಹಾಗೇ ಇತರರನ್ನು ಹಳಿಯುವರಿಂದಲೇ ತನ್ನ ಪ್ರತಿಷ್ಠೆ ಹೆಚ್ಚುತ್ತದೆಂಬ ನಂಬಿಕೆ ಮನೋಭಾವ, ನಡವಳಿಕೆ, ಇಂದಿಗೂ ತೋರಿ ಬರುವುದರಿಂದ ಇಂದು ಮಾನವಶಾಸ್ತ್ರಗಳ ಶಿಕ್ಷಣ ಶಾಸ್ತ್ರಗಳ ಅಧ್ಯಯನ ಹೆಚ್ಚಿ, ಆಳವಾದ ತಿಳಿವಳಿಕೆ ಕಂಡು ಬಂದರೂ ಈ ‘ಭಾವನೆ’ ಕಡಿಮೆಯಾಗದಿರುವುದರಿಂದ ಅಂದು ಇದು ಯಾವ ಪ್ರಮಾಣದಲ್ಲಿದ್ದಿರಬಹುದು? ಮಧುರ ಕವಿಯು ಯಾವುದು? ಎಂಬುದು ತಿಳಿಯದಿದ್ದರೂ ಇಲ್ಲಿ ಸೂಚಿತವಾಗಿರುವುದು ಒಂದು ರೀತಿಯ ದೇಶೀಯ ಕರೆ ಆಟ, ಎಂಬುದು ನಿಸ್ಸಂದೇಹವಲ್ಲವೇ ! ಹಾಡುಗಳ ಅಪಹಾಸ್ಯವೆಂದರೂ ಸರಿಯೇ ಬೀರನ ಕಥೆ ಒಂದು ದಂತ ಕಥೆ ಅಥವಾ ಒಂದು ಲಾವಣಿ ಮಾದರಿಯದಾಗಿರಬಹುದು, ಮತ್ತು ಜನಸಮುದಾಯದಲ್ಲಿ ಅಂದು ಜನಪ್ರಿಯವಾದ್ದಿರಬೇಕು. ಕವಿರಾಜಮಾರ್ಗದಲ್ಲಿ ಪಗರಣ-ಹಗರಣ, ಸೋಗು ಇಲ್ಲಿ ನಟನೆ ಸೂಚ್ಯವಾಗಿದೆ, ‘ನಿನ್ನ ಹಗರಣ ಸಾಕು’ ಎನ್ನುವಲ್ಲಿ ‘ನಿನ್ನ ನತನೆ ಕೃತಿಮತೆ ಸಾಕೆಂಬ ಭಾವವನ್ನು ಇಂದಿಗೂ ನಾವು ವ್ಯಕ್ತಪಡಿಸುತ್ತೇವೆ. ‘ಸೋಗು’ ಉತ್ತರ ಕರ್ನಾಟಕದಲ್ಲಿ ಅತ್ಯಂತ ಜನಪ್ರಿಯವಾದ ಆಡು ಪದ. “ಸಾಕು ನಿನ್ನ ಸೋಗು” ಎನ್ನುವುದಂತೂ ದಿನಬಳಕೆಯ ಮಾತು. ಹಗರಣ ಒಂದು ರೀತಿಯ ದೇಶೀ ಆಟವಾಗಿದ್ದು ಬಹಳ ಪ್ರಾಚೀನತೆಯನ್ನು ಹೊಂದಿದಂತೆ ಕಂಡು ಬರುತ್ತದೆ. ಪುರಾತನ ಕಾಲದ ಒಂದು ದೇಶೀ ಆಟವು ಇದಾಗಿರಬೇಕು. ‘ಮದನ ತಿಲಕ’ ಎನ್ನುವ ಒಂದು ಗ್ರಂಥದಲ್ಲಿ ಈ ತೆರನಾದ ಆಟವನ್ನು ಜವ್ವನೆಯರು, ಕನ್ಯಾಮಣಿಗಳು ನೋಡಕೂಡದೆಂದು ಹೇಳಿದೆ. ಅಂದರೆ ಈ ಗ್ರಂಥ ರಚನೆಯ ಕಾಲಕ್ಕೆ ದೇಶಿ ರಂಗಭೂಮಿಯ ಜನಪ್ರಿಯವಾಗಿ ಅದರಲ್ಲಿ ಹೆಚ್ಚಾದ ಭಾಗ ಶೃಂಗಾರ ಅಶ್ಲೀಲತೆಯನ್ನು ಒಳಗೊಂಡಿದ್ದಿರಬೇಕು. ಅದಕ್ಕಾಗಿಯೇ ಈ ವಿಮರ್ಶೆ ಇರಬೇಕು.

ಹಗರಣವೆಂಬುದು ಚಿಕ್ಕ ಕಥೆಯನ್ನೊಳಗೊಂಡ ಒಂದು ದೇಶೀ ಆಟವಾಗಿರಬೇಕು. ‘ನಳಪಗರಣ’ಎಂಬುದು ಕವಿರಾಜಮಾರ್ಗದಲ್ಲಿ ಸೂಚಿಸಲ್ಪಟ್ಟಿದ್ದು ಇದು ಸಂಸ್ಕೃತದ ಪ್ರಕಟಕ್ಕಿಂತ ಪ್ರಾಚೀನತೆಯನ್ನು ಹೊಂದಿದೆ. ಬಹುಶಃ ಏಕಪಾತ್ರಾಭಿನಯ ರೂಪವಾಗಿದ್ದಿರಬಹುದು. ಹಗಲು ವೇಷಗಾರರಂತಹ ಮಾದರಿಯದು ಇರಬಹುದೆಂದು ನನ್ನ ಭಾವನೆ.

ಕರ್ನಾಟಕದ ಅನೇಕ ಹಳ್ಳಿಗಳಲ್ಲಿ ಹೋಳಿಹಬ್ಬದ ಸಂದರ್ಭದಲ್ಲಿ ಪ್ರತಿ ದಿನ ಸಾಯಂಕಾಲ ದೇವಸ್ಥಾನದಿಂದ, ಶೃಂಗಾರಿಸಿದ ಎತ್ತಿನ ಬಂಡಿಗಳ ಮೇಲೆ ‘ಅವತಾರಗಳ ಸೋಗನ್ನು’ಅದಕ್ಕೆ ಸಂಬಂಧಿಸಿದ ಅಭಾ ಮಂಟಪಗಳಲ್ಲಿ ನಿರ್ಮಿಸಿ ಊರೆಲ್ಲಾ ಸುತ್ತುವರು. ಇಲ್ಲಿ ಸೋಗುಗಳು ಮಾತನ್ನು ಹೇಳದ ಮೂಕ ದೃಶ್ಯ ಮಾತ್ರ ಇಲ್ಲಿದೆ. ಮುಖ ವರ್ಣಾಲಂಕಾರ ಸಾಂಪ್ರದಾಯಕ ರೀತಿಯಲ್ಲಿರುತ್ತದೆ. ಸಮುದಾಯವು ಈ ಉತ್ಸವದಲ್ಲಿ ಭಾಗವಹಿಸುತ್ತದೆ. ಸುಮಾರು ಏಳು ದಿನಗಳ ಕಾಲ ಪ್ರತಿ ರಾತ್ರಿಯಲ್ಲೂ ವಿವಿಧ ಅವತಾರಗಳ, ಪುರಾಣ ಚರಿತ್ರೆಗೆ ಸಂಬಂಧಿಸಿದ ಘಟನೆಗಳ ಸಭೆ ಮಂಟಪಗಳ ಬಂಡಿಗಳು (ಎತ್ತಿನ ಗಾಡಿಯ ಮೇಲೆ ಹಲಗೆಗಳನ್ನು ಜೋಡಿಸಿ ಸೊಗನ್ನು ಕೂಡಿಸಿರುತ್ತಾರೆ) ಮೊದಲು ಪಂಜಿನ ಬೆಳಕಿನಲ್ಲಿ ಸಾಗಿದರೆ ಇಂದು ಪೆಟ್ರೋಮ್ಯಾಕ್ಸಿನ ಬೆಳಕಿನಲ್ಲಿ ಮೆರವಣಿಗೆ ಹೊರಡುತ್ತವೆ. ಒಂದು ದೇವಾಲಯದಿಂದ ಹೊರಟ ಮೆರವಣಿಗೆಯು ಹಳ್ಳಿಯ ಎಲ್ಲಾ ದೇವಾಲಯಗಳಿಗೂ ಭೇಟಿ ನೀಡಿ ಭಕ್ತರ ಪೂಜೆಯನ್ನು ಸ್ವೀಕರಿಸುತ್ತದೆ. ಈ ಸಂಪ್ರದಾಯದಲ್ಲಿ ನಮ್ಮ ಧರ್ಮಗಳೆಲ್ಲಾ ಒಂದೆಂಬ ಭಾವನೆಯು ತೋರಿಬರುವುದಿಲ್ಲವೇ? ಮೆರವಣಿಗೆಯಲ್ಲಿ ವಾದ್ಯಗಾರರ ಒಂದು ಮೇಳವಿದೆ-ಹಲಿಗೆ, ಶಹನಾಯಿ, ಪುಂಗಿ, ಸಾರಂಗಿಗಳು ಇರುತ್ತವೆ. ಕೈಪೇಟಿ. ಬಟ್ಟಲ ತಾಳಗಳೂ ಕಂಡುಬರುತ್ತವೆ. ಸಾಯಂಕಾಲ ಏಳು ಗಂಟೆಗೆ ಮೆರವಣಿಗೆ ಪುನಃ ತನ್ನ ಸ್ಥಾನಕ್ಕೆ ಒಂದು ಸೇರುವುದು ರಾತ್ರಿ ೧೧ಕ್ಕೋ ಅಥವಾ ಮಧ್ಯರಾತ್ರಿಗೋ. ಜನ ಸಮುದಾಯವೆಲ್ಲ ನಗುತ್ತ “ತಮ್ಮದೆಂಬ” ಭಾವನೆಯಿಂದ ಈ ಉತ್ಸವಗಳಲ್ಲಿ ಭಾಗವಹಿಸುವುದು, ಮನರಂಜನೆ ಆಗಮನದಿಂದ ಉಂಟಾದ ಕಲೆಯಿದಾಗಿರಬೇಕು. ಇದರ ಬಗ್ಗೆ ಹನ್ನೇರಡನೆಯ ಶತಮಾನದಲ್ಲಿ ದಾಖಲೆಗಳುಂಟು. ಅವರು ಶಿವ. ಜನ, ವಿಷ್ಣುವಿನ ಅವತಾರಗಳ ಆಟಗಳನ್ನು ಆಡುತ್ತಿದ್ದರು. ಇದರ ಈ ಕಲೆಯ ಉಗಮವು ಜೈನರ ಕಾಲದಲ್ಲಿ, ಚಂದ್ರ ಗುಪ್ತನ ಕಾಲದಲ್ಲಿ ಕರ್ನಾಟಕಕ್ಕೆ ಭದ್ರಬಾಹು ಬಂದಷ್ಟು ಪ್ರಾಚೀನತೆಯನ್ನು ಹೊಂದುವ ಸಾಧ್ಯತೆ ಇದೆ. ಮೇಲಿನವು ರಂಗಕಲೆಯ ಪ್ರಾಚೀನತೆಯ ವಿವಿಧ ಹಂತಗಳೆಂದು ನಾವು ಗ್ರಹಿಸಬಹುದು.

ಜಾನಪದ ಕಲೆಯ ಹರಡುವಿಕೆ

ಜಾನಪದ ಸಂಸ್ಕೃತಿಯ ಹರಡುವಿಕೆಯಲ್ಲಿ ಅನಾದಿ ಕಾಲದಿಂದ ಸ್ತ್ರೀಯು ಮಹತ್ವದ ಭಾಗವಹಿಸಿದ್ದಾಳೆ. ಉಚ್ಚ ವರ್ಗದ ಜನತೆಯ ಸಂಸ್ಕೃತಿಯನ್ನು ಇತರರು ಪ್ರಾಕೃತವನ್ನು ಉಪಯೋಗಿಸುತ್ತಿದ್ದರೆಂದು ತಿಳಿದು ಬಂದಿದೆ. ಗ್ರಾಮ ಮತ್ತು ಹಳ್ಳಿಯ ಜನತೆ ಸ್ತ್ರೀಯನ್ನು ಅನಾದಿ ಕಾಲದಿಂದ ಗೌರವದಿಂದ ಕಾಣುತ್ತ ಬಂದಿದೆ. ‘ಮಾತೃ ದೇವೋ ಭವ’ ಎಂಬುದು ವೇದೋಕ್ತಿಯಾದರೆ ‘ತಾಯಿಯು ದೇವರು’ ಎಂಬುದು ಹಳ್ಳಿಯ ಜನತೆಯ ಉಕ್ತಿ, ನಂಬಿಕೆ. ನಮ್ಮ ಶಿಲ್ಪಿಗಳು ಮಾತೃತ್ವವನ್ನು ನಿರೂಪಿಸುವುದಕ್ಕಾಗಿ ಶಿಲಾಕೃತಿಗಳಲ್ಲಿ ಎದೆಯನ್ನು ಹೆಚ್ಚಾಗಿ ಒಡೆದು ಕಾಣುವಂತೆ ನಿರ್ಮಿಸಿದ್ದಾರೆಂದು ಕಲಾ ವಿಮರ್ಶಕರ ಅಭಿಪ್ರಾಯ. ಅದು ಮಾತೃತ್ವದ ಸಂಕೇತ. ಸಾಮಾನ್ಯವಾಗಿ ಸ್ತ್ರೀಯು ಗೃಹಿ/ಣಿಯಾಗಿ, ಪತ್ನಿಯಾಗಿ, ತಾಯಿಯಾಗುವುದನ್ನೇ ನಮ್ಮ ಸಂಸ್ಕೃತಿಯು ನಿರೀಕ್ಷಿಸುತ್ತದೆ. ಕಾರಣ ಲಲಿತ ಕಲೆಗಳನ್ನು ಅಭ್ಯಸಿಸುವುದಾಗಲಿ, ಹಾಡುವುದಾಗಲಿ, ಕುಣಿಯುವುದಾಗಲಿ ಅವಳಿಗೆ-ಸ್ತ್ರೀಗೆ ಪ್ರಾಧಾನ್ಯವಲ್ಲ. ಸ್ತ್ರೀ ಜೀವನದ ಈ ಹಂತದ ಬಂಧನಗಳಿಲ್ಲದ ದೇವದಾಸಿಯರು ಮಾತ್ರ ಈ ಕಲೆಗಳಿಗಾಗಿ ಕಾಲ ಕಳೆಯಲು ಶಕ್ತರಾದರು. ಪ್ರಸಿದ್ಧ ದೇವಾಲಯಗಳಲ್ಲಿ ಆಯಾ ದೇವಾಲಯಗಳ ದೇವದಾಸಿಯರಿದ್ದು ನಿಶ್ಚಿತ ಧಾರ್ಮಿಕ ದಿನಗಳಲ್ಲಿ ದೇವರ ಸೇವಾರ್ಥವಾಗಿ ತಮ್ಮ ನೃತ್ಯ ಸಂಗೀತದ ಸೇವೆ ಸಲ್ಲಿಸುತ್ತಿದ್ದರು. ಇವರು ಮಾರ್ಗ ಸಂಸ್ಕೃತಿಯ ನಿರ್ವಾಹಕರಾದರು; ಮತ್ತು ಪ್ರೋತ್ಸಾಹಕರೂ ಆದರು. ಅವರಲ್ಲಿ ಅನೇಕರು ಸಂಸ್ಕೃತ ನಾಟಕಗಳಲ್ಲಿ ಭಾಗವಹಿಸಿದರು. ಜನ ಸಮುದಾಯದಲ್ಲಿ ಹೆಚ್ಚಿನ ಜನತೆ ಕುಶಲಕರ್ಮಿಗಳು ಮತ್ತು ಸೇವಕರು. ಜನ ಸಾಮಾನ್ಯರು ಗ್ರಾಮೀಣ ರೀತಿಯಿಂದ ಸ್ವತಂತ್ರವಾದ ರೀತಿಯಲ್ಲಿ ದೇಶಿ ಸಂಸ್ಕೃತಿಯ ನಿಜವಾದ ನಿರ್ವಾಹಕರಾದರು. ಇವರ ಸಾಹಿತ್ಯ ಕಂಠಸ್ತವಾದುದು. ಜಾನಪದ ಸಾಹಿತ್ಯದ ಕೆಲವು ಮಾದರಿಗಳನ್ನು ವಿಶ್ಲೇಷಿಸಿದಲ್ಲಿ ಅವರ ಕಲ್ಪನಾ ಶಕ್ತಿ, ಶಬ್ದ ಸಂಪತ್ತು ಎಂಥದೆಂಬುದು ತಿಳಿಯುತ್ತದೆ. ವಿವಿಧ ಭಾಗಗಳ ಜಾನಪದ ಸಾಹಿತ್ಯದ ತುಲನಾತ್ಮಕ ಅಧ್ಯಯನದಿಂದ ಜಾನಪದ ಗೀತೆಗಳು, ಖಂಡಕಾವ್ಯ ಹಾಡುಗಳು, ಒಗಟು, ಗಾದೆಯ ಮಾತು ಇವೆಲ್ಲ ಭಾಷೆಯ ಸೀಮೆಯನ್ನು ಮೀರಿ ವಿಪುಲವಾಗಿ ದೇಶದ ತುಂಬಾ ಹರಡಿದೆ; ಜನಪ್ರಿಯವಾಗಿದೆ. ಅವುಗಳಲ್ಲಿಯ ನಾಮಾಜಿಕ, ಧಾರ್ಮಿಕ ಕಟ್ಟುಪಾಡುಗಳು ಒಂದೇ ಆಗಿವೆ. ಪಟ್ಟಣದ ಉಚ್ಚವರ್ಗದ ಸ್ತ್ರೀಯರು ಇತರ ಜನತೆ ಈ ಸಂಸ್ಕೃತಿಯ ಪೋಷಕರಾದರು. ಕಾರಣವೆಂದರೆ ದೇಶಿ ಮತ್ತು ಮಾರ್ಗ ಇವೆರಡೂ ಜೀವನದ ಪರಮ ಗುರಿಯನ್ನು ಒಂದೇ ರೀತಿಯಿಂದ ಕಾಣುವುದಾಗಿದೆ. ಜನಸಾಮಾನ್ಯರಿಗೆ ದಂಥಕಥೆಗಳನ್ನು ಧಾರ್ಮಿಕ ಕಥೆಗಳನ್ನು ಸಂಗೀತ ಇತ್ಯಾದಿಗಳನ್ನು ಹೇಳಿಕೊಡುವ ಯಾವ ಸಂಘ ಸಂಸ್ಥೆಗಳು ಇರಲಿಲ್ಲ. ಕೆಲವು ಪ್ರಸಂಗಗಳಲ್ಲಿ ಭಾಗವಹಿಸುವುದು ವೈಯಕ್ತಿಕ ಶಿಕ್ಷಣವಾಗಿತ್ತು. ಸಾಂಘಿಕ ನೃತ್ಯಗಳು, ಗೀತೆಗಳಲ್ಲಿ ಭಾಗವಹಿಸುವುದು ಒಂದು ಸಾಮಾಜಿಕ ಕಟ್ಟಳೆಯಾಗಿ ಪರಿವರ್ತಿತವಾಯಿತು. ಸಾಂಘಿಕ ಹಾಡುಗಳಲ್ಲಿ ಉದಾಹರಣೆಗೆ ಬತ್ತ ಕುಟ್ಟುವ, ಬೀಸುವ ಕಾರ್ಯಗಳಲ್ಲಿ ತೊಡಗಿದ ಸ್ತ್ರೀಯರು ಬೇಸಾಯದಲ್ಲಿ ತೊಡಗಿದ ಪುರುಷರಲ್ಲಿ ಈ ಕಾರ್ಯ ಚಟುವಟಿಕೆ ಅವ್ಯಾಹತವಾಗಿ ಹರಿದು ಬಂದಿದೆ. ಪರಶುರಾಮನ ಬಗ್ಗೆ ಪ್ರಚಲಿತವಿರುವ ಒಂದು ಕಥೆ, ಬೆಳಗಾವಿ ಜಿಲ್ಲೆಯ ಸವದತ್ತಿ, ಬಿಜಾಪುರ ಜಿಲ್ಲೆಯ ಐಹೊಳೆ, ಮೈಸೂರು ಬಳಿಯ ನಂಜನಗೂಡು ಎಲ್ಲೆಲ್ಲೂ ಹರಡಿದೆ. ಕಥೆಗಳು ತತ್ವಶಃ ಒಂದೇ ಆಗಿವೆ. ಕೆಲವು ರೀತಿಯಿಂದ ಅಲ್ಲಲ್ಲಿ ಈ ಜಾನಪದ ಸಂಸ್ಕೃತಿಯು ನಾಗರಿಕ ಸಂಸ್ಕೃತಿ, ಕಲೆಯ ಕಥೆ, ಹಾಡು, ಇವುಗಳಿಂದ ಭಿನ್ನವಾಗಿವೆಯೆಂದು ಕಂಡು ಬಂದರೂ ಅವುಗಳ ಹಿನ್ನಲೆ ಒಂದೇ. ಎರಡೂ ಅಧ್ಯಾತ್ಮಿಕ ತಳಹದಿಯಿಂದ ಉದ್ಭವಿಸಿವೆಯೆಂದು ಕಂಡು ಬರುತ್ತದೆ.