ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಹೋಬಳಿ ಕೇಂದ್ರವಾಗಿರುವ ಗುಡೇಕೋಟೆ ಮಧ್ಯಕಾಲೀನ ಯುಗದಲ್ಲಿ ಐತಿಹಾಸಿಕ ಕೇಂದ್ರವಾಗಿದ್ದು, ವಿಜಯನಗರ – ನಗರೋತ್ತರ ಕಾಲದಲ್ಲಿ ಒಂದು ಪ್ರಮುಖ ಪಾಳೆಯಪಟ್ಟಾಗಿತ್ತು. ಇದು ಬಳ್ಳಾರಿಯಿಂದ ನೈಋತ್ಯಕ್ಕೆ ೬೫ ಕಿ.ಮೀ., ಕೂಡ್ಲಿಗಿಯಿಂದ ೨೮ ಕಿ.ಮೀ. ಅಂತರದಲ್ಲಿದೆ. ಶಿಲಾಯುಗದ ಸಂಸ್ಕೃತಿಯ ನೆಲೆಯಾಗಿದ್ದ ಗುಡೇಕೋಟೆಯ ಚಾರಿತ್ರಿಕ ಹಿನ್ನೆಲೆ ಗಮನಾರ್ಹವಾಗಿದೆ. ಮೌರ್ಯರ ಆಳ್ವಿಕೆಯಿಂದ ಆರಂಭವಾಗಿ ಬ್ರಿಟೀಷರವರೆಗೆ ಇಲ್ಲಿನ ಆಡಳಿತವನ್ನು ಗುರುತಿಸಬಹುದು. ಆದರೆ ಗುಡೇಕೋಟೆ ಪ್ರಸಿದ್ಧಿಗೆ ಬಂದು ಚಾರಿತ್ರಿಕ ದಾಖಲೆಯನ್ನು ನಿರ್ಮಿಸಿದ್ದುದು ವಿಜಯನಗರ – ನಗರೋತ್ತರ ಕಾಲದಲ್ಲಿ ಆಳ್ವಿಕೆ ಮಾಡಿದ ಪಾಳೆಯಗಾರರ ಕಾಲದಿಂದಲೇ ಎನ್ನಬಹುದು. ಅಂತಹ ಪಾಳೆಯಗಾರರ ಚರಿತ್ರೆಯನ್ನು ವಿವರವಾಗಿ ಪರಿಶೀಲಿಸೋಣ.

ಗುಡೇಕೋಟೆಯ ಸ್ಥಳನಾಮ

ಈ ಹೆಸರಿನ ಹಿಂದೆ ಅನೇಕ ಪ್ರತೀತಿ, ದಂತಕಥೆ, ನಂಬಿಕೆಗಳಿವೆ. ಇಲ್ಲಿ ಬಾಣಾಸುರ ಎಂಬ ಅರಸ ಆಳುತ್ತಿದ್ದನೆಂಬ ಪ್ರತೀತಿ ಇದೆ. ಇವನು ಪಾರ್ವತಿ ಪರಮೇಶ್ವರರ ಪರಮ ಭಕ್ತನಾಗಿದ್ದು, ಅವನ ಭಕ್ತಿಗೆ ಮೆಚ್ಚಿದ ಈಶ್ವರನು ಆ ಪಟ್ಟಣದ ಮಹಾದ್ವಾರವನ್ನು ಸದಾಕಾಲ ಕಾಯುತ್ತಿರುವಂತೆ ಆದೇಶಿಸಿದನೆಂಬ ಕಥೆ ಇದೆ. ಗುಡೇಕೋಟೆಯನ್ನು ಶಾಸನಗಳೂ ಸಹಾ ಗುಡೇಕೋಟೆ ಎಂತಲೇ ದಾಖಲಿಸಿವೆ.[1] ಕೈಫಿಯತ್ತುಗಳಲ್ಲಿ ಅನೇಕ ಕಡೆ ಗುಡೀಕೋಟೆ[2] ಗುಡೇಕೋಟೆ[3] ಎಂತಲೂ ಉಲ್ಲೇಖವಾಗಿದೆ. ಸಿ.ಡಿ. ಮ್ಯಾಕಲಿನ್‌ರವರು Godi cotals > Gudicota ಇದನ್ನು Godi ಎಂದರೆ Temple ಎಂದೂ Kota ಎಂದರೆ Fort ಎಂದು ತಿಳಿಸಿದ್ದಾರೆ.[4] ಮೆಕಂಜಿಯ ಪ್ರಕಟವಾಗದಿರುವ ಕೈಫಿಯತ್ತು From the pagoda or Goodee and Fort or cotta it was called Goodikota ಎಂದು ಗುಡೀಕೋಟೆಯ ಹೆಸರಿನ ಮೂಲದ ಬಗ್ಗೆ ತಿಳಿಸುತ್ತದೆ.[5] ಈ ಗ್ರಾಮದ ಎರಡೂ ಬದಿಗಳಲ್ಲಿ ಕಲ್ಲು ಮಣ್ಣುಗಳಿಂದೊಡಗೂಡಿದ ಅಷ್ಟೇನೂ ಎತ್ತರವಲ್ಲದ ಗುಡ್ಡೆಯಂತಹ ಸ್ಥಳವಿದೆ. ಆ ಗುಡ್ಡೆಯಂತಹ ಕಲ್ಲು ಮಣ್ಣಿನ ಸ್ಥಳವನ್ನುಪಯೋಗಿಸಿಕೊಂಡು ಕೋಟೆಯನ್ನು ಕಟ್ಟಿರುವುದರಿಂದ ಆ ಸ್ಥಳಕ್ಕೆ ಗುಡ್ಡೆಯಕೋಟೆ ಎಂದು ಹೆಸರು ಬಂದಿರಬಹುದು. ಕ್ರಮೇಣ ಗುಡ್ಡೆಕೋಟೆ ಗುಡೇಕೋಟೆ ಯಾಗಿರುವಂತಿದೆ. ಇದೇ ರೀತಿಯ ಅಭಿಪ್ರಾಯವನ್ನು ಇನ್ನೊಬ್ಬ ಸಂಶೋಧಕರೂ ವ್ಯಕ್ತಪಡಿಸಿದ್ದಾರೆ.[6] ಗುಡಿ ಮತ್ತು ಕೋಟೆಗೆ ಸಂಬಂಧಿಸಿದ ಸಮಂಜಸವೆನಿಸುವುದಿಲ್ಲ ಹಾಗೂ ನಾಯಕ ಜಾತಿಯ ಬೆಡಗುಗಳೆಲ್ಲೊಂದಾದ ಗುಡಿಕೊಟ್ಟಲಾರು ಎಂಬುದಕ್ಕೆ[7] ಸಂಬಂಧಿಸಿರಲು ಸಾಧ್ಯವಿಲ್ಲ ಎಂದು ಹೇಳಬಹುದು. ಏಕೆಂದರೆ, ಕೋಟೆಯನ್ನು ರಕ್ಷಣೆಗಾಗಿಯೂ, ದೇವಾಲಯಗಳನ್ನು ಧಾರ್ಮಿಕ ಆಚರಣೆಗಾಗಿಯೂ ಎಲ್ಲಾ ಗಿರಿದುರ್ಗಗಳಲ್ಲಿ ನಿರ್ಮಿಸಿರುವುದನ್ನು ಸಾಮಾನ್ಯವಾಗಿ ನೋಡಬಹುದು. ಆದುದರಿಂದ ಇದರಲ್ಲಿ ವಿಶೇಷತೆ ಇಲ್ಲದಿರುವುದರಿಂದ ಹಿಂದಿನ ಎಲ್ಲಾ ಗುಡಿ ಮತ್ತು ಕೋಟೆಗೆ ಸಂಬಂಧಿಸಿದ ಮತ್ತು ಬೆಡಗು ಎಂದು ಹೇಳುವ ಸಂಶೋಧನೆಗಳನ್ನು ಒಪ್ಪಲು ಸಾಧ್ಯವಿಲ್ಲ.

ಆಕರಗಳು

ಗುಡೇಕೋಟೆ ಪಾಳೆಯಗಾರರ ಬಗೆಗೆ ಚಾರಿತ್ರಿಕ ದಾಖಲೆಗಳು ಹೆಚ್ಚಿಗೆ ಇಲ್ಲದಿರುವುದರಿಂದ ಅವರ ಸರಿಯಾದ ಚಾರಿತ್ರಿಕ ಚಿತ್ರಣವನ್ನು ನೀಡುವುದು ಕಷ್ಟದಾಯಕ ಸಂಗತಿಯಾಗಿದೆ. ಇತಿಹಾಸ ರಚನೆಗೆ ಶಾಸನಗಳು ಅಮೂಲ್ಯವಾದ ಸಮಕಾಲೀನ ಲಿಖಿತ ದಾಖಲೆಗಳಾಗಿವೆ. ಈ ಮನೆತನಕ್ಕೆ ಸಂಬಂಧಿಸಿದ ಕೇವಲ ಮೂರು ಶಿಲಾಶಾಸನಗಳಿವೆ. ಈ ಶಾಸನಗಳು ಕೇವಲ ದಾನದ ವಿಷಯವನ್ನೊಳಗೊಂಡಿದ್ದು ಪಾಳೆಯಗಾರರ ಆಳ್ವಿಕೆಯನ್ನು ಗುರುತಿಸಲು ಸಹಾಯಕವಾಗಿವೆ. ಈ ಶಾಸನಗಳು ಪುರಾತತ್ವ ವರದಿಯಲ್ಲಿ ಪ್ರಕಟಗೊಂಡಿವೆ.[8] ಈ ಶಾಸನಗಳನ್ನು ಬಿಟ್ಟರೆ ನಮಗೆ ದೊರಕುವ ಪ್ರಮುಖ ಆಧಾರಗಳೆಂದರೆ ಸ್ಮಾರಕಗಳು, ದೇವಾಲಯಗಳು ವಾಸ್ತುಶಿಲ್ಪಕ್ಕೆ ಪ್ರಸಿದ್ಧವಾಗಿರುವುದಲ್ಲದೆ ಸ್ಮಾರಕಗಳಲ್ಲಿ ಇವು ಬಹುಮುಖ್ಯ ಭಾಗವಾಗಿವೆ. ಆಂಜನೇಯ, ಚೌಡಮ್ಮ ಮರಿಯಮ್ಮ, ರಾಮಲಿಂಗೇಶ್ವರ, ಬಸವಣ್ಣ, ಕಾಳಮ್ಮ, ಈಶ್ವರ, ಲಕ್ಷ್ಮಿವೆಂಕಟೇಶ್ವರ, ಉಮಾ ಮಹೇಶ್ವರ, ಪಂಚಲಿಂಗೇಶ್ವರ, ಮೊದಲಾದ ದೇವಾಲಯಗಳಲ್ಲಿ ಆ ಕಾಲದ ಜನ ಜೀವನದ ಸ್ಥಿತಿಗತಿ ಜನರ ಉಡುಗೆ ತೊಡುಗೆ ಹವ್ಯಾಸ ಮೊದಲಾದವುಗಳನ್ನು ತಿಳಿದುಕೊಳ್ಳಬಹುದು. ದೇವಾಲಯವೇ ಅಲ್ಲದೇ ಕೋಟೆ, ಅರಮನೆ, ಮಂಟಪ ಕೂಡಾ ಆ ಪ್ರದೇಶದಲ್ಲಿ ಪ್ರಾಮುಖ್ಯತೆ ಪಡೆದಿವೆ.

ಶಾಸನ ಮತ್ತು ಸ್ಮಾರಕಗಳನ್ನು ಬಿಟ್ರೆ ನಮಗೆ ದೊರಕುವ ಪ್ರಮುಖ ದಾಖಲೆ ಎಂದರೆ ಮೆಕಂಜಿಯವರು ಸಂಗ್ರಹಿಸಿರುವ ಕೈಫಿಯತ್ತುಗಳು.[9] ಇವುಗಳಲ್ಲಿ ಉಲ್ಲೇಖಗೊಂಡಿರುವ ಕೆಲವು ಸಂಗತಿಗಳಾದರೂ ಚರಿತ್ರೆಕಾರರಿಗೆ ವಿಶ್ವಾಸನೀಯ ಸಾಕ್ಷ್ಯವಾಗಬಲ್ಲವು. ಮೆಕಂಜಿಯು ದೇಶೀಯಪಂಡಿತರ ಸಹಾಯದಿಂದ ಇವುಗಳನ್ನು ರೂಪಿಸಿದನು. ಇವುಗಳೇ ಗುಡೇಕೋಟೆ ಪಾಳೇಗಾರರ ಚರಿತ್ರೆಗೆ ಪ್ರಮುಖ ಆಕರವಾಗಿವೆ.

ಅಧ್ಯಯನ

ಇದುವರೆಗೆ ಈ ಪಾಳೆಯಗಾರರ ಬಗೆಗೆ ಕೆಲವು ಅಧ್ಯಯನಗಳು ನಡೆದಿವೆ. ಈ ಪಾಳೆಯಗಾರರ ಬಗೆಗೆ ಮೊದಲು ಬಳ್ಳಾರಿ ಜಿಲ್ಲಾ ಗೆಜೆಟಿಯನರ್‌ನಲ್ಲಿ ಸಂಕ್ಷಿಪ್ತವಾದ ಲೇಖನವಿದ್ದು[10] ಈ ಮಾಹಿತಿಯನ್ನಾಧರಿಸಿ, ಕ್ಷೇತ್ರಕಾರ್ಯದ ಮೂಲಕ ಮತ್ತು ಆ ಮನೆತನದವರ ಬಳಿ ಇರುವ ಕೆಲ ದಾಖಲೆಗಳನ್ನು ಪರಿಶೀಲಸಿ ಇತ್ತೀಚೆಗೆ ವಿರೂಪಾಕ್ಷ ಪೂಜಾರಿಹಳ್ಳಿಯವರು ಲೇಖನವೊಂದನ್ನು ಬರೆದಿದ್ದಾರೆ. ಅದು ಬಳ್ಳಾರಿ ಜಿಲ್ಲೆಯ ಪಾಳೆಯ ಗಾರರು ಎಂಬ ಕೃತಿಯಲ್ಲಿ ಪ್ರಕಟವಾಗಿದೆ. ಗುಡೇಕೋಟೆ – ಚಾರಿತ್ರಿಕ ಅಧ್ಯಯನ ಎಂಬ ಕೃತಿಯೂ; ಇದೇ ವಿಷಯದ ಬಗ್ಗೆ ಹಂಪಿ ವಿ.ವಿ.ಗೆ ಸಲ್ಲಿಸಿರುವ ಎಂ.ಫಿಲ್ ಪ್ರಬಂಧವೂ ಆ ಮನೆತನದ ಬಗ್ಗೆ ಬೆಳಕು ಚೆಲ್ಲುವ ಪ್ರಮುಖ ಲೇಖನಗಳು. ಆದರೆ ಇತ್ತೀಚೆಗೆ ಮೆಕಂಜಿ ಸಂಗ್ರಹದಲ್ಲಿ ಅಪ್ರಕಟಿತ ಇಂಗ್ಲೀಷ್ ದಾಖಲೆಯಾದ Historical Account of Gudekote and of the poligar of that District from information collected there on December 1806ನ್ನು ಜಪಾನಿನ ನನ್ನ ಸ್ನೇಹಿತರಾದ ಓ. ಓತಾ ಎಂಬುವರಿಂದ ಪಡೆದುಕೊಂಡು, ಅದರ ಆಧಾರದ ಮೇಲೆ ಹಿಂದಿನ ಎಲ್ಲಾ ಪ್ರಕಟಿತ ಲೇಖನಗಳನ್ನು ಗಮನದಲ್ಲಿಟ್ಟುಕೊಂಡು ಆ ಪಾಳೆಯಗಾರರ ಬಗ್ಗೆ ಚಾರಿತ್ರಿಕ ವಿವರಣೆ ನೀಡಲು ಪ್ರಯತ್ನಿಸಿದ್ದೇನೆ. ಈ ದಾಖಲೆಯನ್ನು ಉಪಯೋಗಿಸುವಾಗ ಮುಂದೆ ನಾನು ಅಡಿ ಟಿಪ್ಪಣಿಯಲ್ಲಿ ಮೆಕಂಜಿ ಇಂಗ್ಲೀಷ್ ದಾಖಲೆ ಎಂದು ಉಲ್ಲೇಖಿಸುತ್ತೇನೆ.

ಮೂಲ

ಗುಡೆಕೋಟೆ ನಾಯಕ ಮನೆತನ ಅಮರನಾಯಕ ಸಂಕೀರ್ಣ ವ್ಯವಸ್ಥೆಯ ಒಂದು ಭಾಗವಾಗಿ ವಿಜಯನಗರದ ತುಳುವ ವಂಶದ ಕೃಷ್ಣದೇವರಾಯನ ಕಾಲದಲ್ಲಿ ಉಗಮ ಗೊಂಡಿತು. ಗುಡೇಕೋಟೆಯನ್ನು ಕಟ್ಟುವವರೆಗೆ ಈ ಮನೆತನ ಹೆಚ್ಚು ಪ್ರಕಾಶಮಾನಕ್ಕೆ ಬಂದಿರಲಿಲ್ಲ. ಅಲ್ಲಿನ ಸುತ್ತಮುತ್ತಲಿನ ಸಂಪನ್ಮೂಲಗಳನ್ನು ತಮ್ಮದಾಗಿಸಿಕೊಂಡ ಆ ಮನೆತನದ ಆರಂಭ ನಾಯಕರು ಕೃಷ್ಣದೇವರಾಯನ ನಂತರ ಪ್ರಖ್ಯಾತರಾದರು. ಈ ಹಿನ್ನೆಲೆಯಲ್ಲಿ ಗುಡೇಕೋಟೆ ನಾಯಕರ ಮೂಲದ ಬಗೆಗೆ ಅಥವಾ ಅದರ ಸಂಸ್ಥಾಪಕರ ಬಗೆಗೆ ದೊರೆಯುವ ಕೆಲ ಮಾಹಿತಿಗಳನ್ನು ವಿಶ್ಲೇಷಿಸಲಾಗಿದೆ. ಮೊದಲು ಗುಡೇಕೋಟೆ ನಾಯಕ ಮನೆತನದ ಮೂಲ ಸ್ಥಳ ಯಾವುದು ಎಂಬ ಪ್ರಶ್ನೆ ನಮ್ಮ ಮುಂದೆ ಬರುತ್ತದೆ. ಪ್ರಸ್ತುತ ದೊರಕುವ ಆಧಾರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ[11] ಈ ಮನೆತನದ ಸ್ಥಾಪಕನಾದ ಗಂಡಾಳನಾಯಕನ ಪೂರ್ವಜರು ಆರಂಭದಲ್ಲಿ ಅಂದರೆ ಈ ರಾಜ್ಯ ಸ್ಥಾಪನೆ ಮಾಡುವುದಕ್ಕೆ ಮೊದಲು ನೆಲ್ಲೂರಿನಲ್ಲಿದ್ದರೆಂದು ತಿಳಿಸುತ್ತದೆ.[12] It is said that the ancestors of Gondal Naik came with their family from Nellore country. ಅಲ್ಲಿಂದ ಕರ್ನಾಟಕ ಬಳ್ಳಾರಿ ಜಿಲ್ಲೆಯ ವಿಜಯನಗರಕ್ಕೆ ಬಂದರು ಎಂಬ ಹೇಳಿಕೆ ನಮಗೆ ದಾಖಲೆಗಳಲ್ಲಿ ಸಿಗುತ್ತದೆ.[13] ಆದರೆ ಈ ಮನೆತನದ ಬಗೆಗೆ ಹಿಂದೆ ಪ್ರಕಟಗೊಂಡಿರುವ ಎಲ್ಲಾ ಲೇಖನಗಳು ಈ ವಿಷಯದ ಬಗೆಗೆ ಮೌನವಹಿಸಿವೆ. ಪ್ರಕಟಗೊಂಡಿರುವ ಅಂತಾಪುರ ಕೈಫಿಯತ್ತಿನಲ್ಲಿ ಮೂಲಪುರುಷ ಕುಮಾರರಾಮನ ವಂಶಸ್ಥರು ಬೊಮ್ಮಂತರಾಜ ಎಂಬ ಹೇಳಿಕೆಯನ್ನು ಆಧಾರವಾಗಿಟ್ಟುಕೊಂಡು ಇವರ ಮೂಲವನ್ನು ಕಂಪಿಲಿಯ ಕುಮಾರರಾಮನ ವಂಶರೆಂದು ಹೇಳುವ ಪ್ರಯತ್ನ ಮಾಡಲಾಗಿದೆ.[14] ಕುಮಾರರಾಮ ೧೪ನೇ ಶತಮಾನದ ಪೂರ್ವಾರ್ಧದಲ್ಲಿದ್ದ ಒಬ್ಬ ಸಾಂಸ್ಕೃತಿ ವೀರ. ಕಮ್ಮಟದುರ್ಗದ ಆಸುಪಾಸಿನಲ್ಲಿ ಬಾಳಿದ ವಿಜಯನಗರದ ಚಕ್ರವರ್ತಿಗಳಿಗೆ ದೊರಕದ ಗೌರವ, ಆದರ, ಪ್ರೀತಿಗಳು ಜನಸಾಮಾನ್ಯರಿಂದ ಕುಮಾರರಾಮನಿಗೆ ದೊರೆತಿರುವುದು ಆತನ ಸಂಕ್ಷಿಪ್ತ ಜೀವನಾವಧಿಯಲ್ಲಿ ಅವನು ಸಾಧಿಸಿದ ಅಪಾರ ಹಿರಿಮೆಯ ದ್ಯೋತಕವಾಗಿದೆ. ಆದ್ದರಿಂದಲೇ ಅವನ ಬಗ್ಗೆ ಐದು ಕೃತಿಗಳು ರಚನೆಗೊಂಡಿವೆ. ಇಂತಹ ವೀರನ ವಂಶಸ್ಥನೆಂದು ಹೇಳಿಕೊಳ್ಳುವುದು ಹೆಮ್ಮೆಯ ವಿಷಯ ಹಾಗೂ ಸೇರಿರುವುದರಿಂದ ಗುಡೇಕೋಟೆಯ ನಾಯಕ ಬೊಮ್ಮಂರಾಜನ ಕಾಲದಲ್ಲೋ ಅಥವಾ ನಂತರದಲ್ಲೋ ಕುಮಾರರಾಮನ ವಂಶದವರೊಂದಿಗೆ ವೈವಾಹಿಕ ಸಂಬಂಧ ಮಾಡಿಕೊಂಡಿರಬಹುದು ಎಂದು ಊಹಿಸಬಹುದಷ್ಟೇ. ಇದಕ್ಕೆ ದಾಖಲೆಗಳಿಲ್ಲ. ಆದ್ದರಿಂದಲೇ ಕೈಫಿಯತ್ತುಗಳಲ್ಲಿ ಕುಮಾರರಾಮನ ವಂಶಜರೆಂದು ಹೇಳಿರುವ ಸಾಧ್ಯತೆ ಇದೆ. ಆದುದರಿಂದ ಗುಡೇಕೋಟೆ ನಾಯಕರು ಕುಮಾರರಾಮನ ನೇರ ವಂಶಜರಲ್ಲ ಎಂದು ನಿಖರವಾದ ಮತ್ತು ಇನ್ನೂ ಹೆಚ್ಚಿನ ದಾಖಲೆಗಳು ದೊರಕುವವರೆಗೆ ಮೆಕಂಜಿಯ ಅಪ್ರಕಟಿತ ಇಂಗ್ಲೀಷ್ ದಾಖಲೆಯನ್ನು ಆಧಾರವಾಗಿಟ್ಟುಕೊಂಡು ಹೇಳಬಹುದು.

ವಲಸೆ

ದೊರಕಿರುವ ಅಪ್ರಕಟಿತ ದಾಖಲೆಯಂತೆ ನೆಲ್ಲೂರು ಗುಡೇಕೋಟೆ ನಾಯಕರ ಮೂಲ ಸ್ಥಳ ನೆಲ್ಲೂರು. ಇಂದಿನ ಆಂಧ್ರಪ್ರದೇಶದ ಪ್ರಮುಖ ಕೇಂದ್ರವಾಗಿದೆ. ಅಂದರೆ ಈ ಮನೆತನದ ಮೂಲ ಪುರುಷ ತೆಲುಗು ಮೂಲದವನೆಂದು ಊಹಿಸಬೇಕಾಗುತ್ತದೆ. ಹೀಗೆ ಅವರು ವಲಸೆ ಬರಲು ಕಾರಣಗಳೇನು? ಎಂಬುದನ್ನು ಪರಿಶೀಲಿಸಿದಾಗ ಅವರು ಸಾಹಸ ಪ್ರವೃತ್ತಿಯುಳ್ಳವರಾಗಿದ್ದು ನೆಲ್ಲೂರಿನಂತಹ ಹೆಚ್ಚು ಪ್ರಶಸ್ತವಲ್ಲದ ಪ್ರದೇಶವನ್ನು ಬಿಟ್ಟು ತಮ್ಮ ಸಾಹಸ ಪ್ರದರ್ಶನಕ್ಕೆ ಅನುಕೂಲವಾಗಿದ್ದ ಹಾಗೂ ಸಾಹಸಿಗಳಿಗೆ ಹೆಚ್ಚು ಪ್ರೊತ್ಸಾಹ ಸಿಗುತ್ತಿದ್ದ ವಿಜಯನಗರಕ್ಕೆ ಬಂದಿರಬಹುದು. ಏಕೆಂದರೆ ೧೫ – ೧೬ನೇ ಶತಮಾನದಲ್ಲಿ ಕರ್ನಾಟಕದಲ್ಲಿ ಸಾಹಸಿಗರಿಗೆ ರಾಜಕೀಯ ಘಟಕಗಳನ್ನು ಸ್ಥಾಪಿಸಿಕೊಳ್ಳುವ ನೂರಾರು ಅವಕಾಶಗಳು ಇದ್ದವು ಎಂಬುದನ್ನು ಬೇರೆ ಬೇರೆ ನಾಯಕ ಮನೆತನಗಳ ಮೂಲಪುರಷರ ಚರಿತ್ರೆಗಳನ್ನು ಆ ಕುಟುಂಬಗಳ ವಲಸೆಯ ಹಿನ್ನೆಲೆಗಳನ್ನು ಅಧ್ಯಯನ ಮಾಡಿದಾಗ ತಿಳಿಯುತ್ತದೆ. ಆದ್ದರಿಂದ ಗಂಡಳನಾಯಕನ ಪೂರ್ವಜರು ತಮ್ಮ ಕುಟುಂಬ ಪರಿವಾರ ಸಮೇತ ನೆಲ್ಲೂರಿನಿಂದ ರಾಜಕೀಯ ಆಕಾಂಕ್ಷೆಯಿಟ್ಟುಕೊಂಡೇ ವಿಜಯನಗರದ ಕಡೆಗೆ ಬಂದಿರಬಹುದು.

ತೆಲುಗು ಮೂಲದ ಗುಡೇಕೋಟೆ ನಾಯಕರ ಮೂಲ ಪುರುಷ ಬೇಡ ಕುಲಕ್ಕೆ ಸೇರಿದವನು ಎಂದು ಅವರು ಚಿತ್ರದುರ್ಗ, ಹರಪನಹಳ್ಳಿ, ನಾಯಕನಹಟ್ಟಿ, ಸುರಪುರ ಕನಕಗಿರಿ ನಾಯಕರೊಂದಿಗೆ ವೈವಾಹಿಕ ಸಂಬಂಧವನ್ನು ಮಾಡಿಕೊಂಡಿರುವ ದಾಖಲೆಗಳೊಂದಿಗೆ ಹೇಳಬಹುದು. ಇವರು ಬೇಡಕುಲದ ಮೆಳೆಲೋರು ಗೋತ್ರಕ್ಕೆ ಸೇರಿದವರು.[15] ಇದು ಮಂದ ಲೋರು ಪ್ರಧಾನ ಶಾಖೆಯೊಳಗೆ ಮತ್ತೊಂದು ಒಳ ಬೆಡಗು ವೈವಾಹಿಕ ಸಂಬಂಧಕ್ಕೆ ಹೆಣ್ಣುಗಳ ಕೊರತೆ ಉಂಟಾದಾಗ ತಮ್ಮಲ್ಲೇ ಕೆಲವು ಗುಂಪನ್ನು ವರ್ಗೀಕರಿಸಿ ನೆಂಟರನ್ನಾಗಿ ಮಾಡಿಕೊಂಡರು. ಹೀಗಾಗಿ ಹೊಸದಾಗಿ ಸೃಷ್ಟಿಯಾದ ಮೆಳೆಲೋರು ವರ್ಗಕ್ಕೆ ಎರಡು ಪ್ರಧಾನಕೊಂಡರು. ಹೀಗಾಗಿ ಹೊಸದಾಗಿ ಸೃಷ್ಟಿಯಾದ ಸಹಜಬೀಗರಾದರೆ ಒಂದು ಕಾಲಕ್ಕೆ ಸೋದರರೇ ಆಗಿದ್ದ ಮಂದಲೋರು ಕೂಡಾ ಬೀಗರಾದರು.[16] ಹೀಗೆ ಸಮಾಜದ ಅತ್ಯಂತ ಕೆಳವರ್ಗದಲ್ಲಿ ಜನಿಸಿ ರಾಜ್ಯ ಕಟ್ಟಿ ವಿಜಯನಗರದವರ ಮನ್ನಣೆಗೆ ಪಾತ್ರವಾಗುವ ಅಂತಸ್ತನ್ನು ಗಳಿಸಿದ್ದು ಅಂದಿನ ಸಾಂಪ್ರದಾಯಿಕ ಒಟ್ಟಾರೆ ದೃಷ್ಟಿಯನ್ನು ಗಮನಿಸಿದರೆ ಇದೊಂದು ವಿಶಿಷ್ಟ ಉದಾಹರಣೆಯಾಗಿದೆ.

ರಾಜ್ಯ ಸ್ಥಾಪನೆಯತ್ತ

ಗಂಡಗಳ ನಾಯಕನ ಪೂರ್ವಜರು ವಿಜಯನಗರದವರಿಂದ ತುಂಗಭದ್ರಾ ನದಿಗೆ ಹೊಂದಿಕೊಂಡ ದಕ್ಷಿಣದ ಪ್ರದೇಶಗಳಿಗೆ ಮುಖ್ಯ ತಳವಾರ ಹುದ್ದೆಗೆ ನೇಮಕ ಮಾಡಲಾಯತೆಂದು ಅಪ್ರಕಟಿತ ಇಂಗ್ಲೀಷಿನ ಕೈಫಿಯತ್ತು ದಾಖಲಿಸಿದೆ.[17] ಅಲ್ಲಿಂದ ಗಂಡಳನಾಯಕ ನವರೆಗೆ ಅವರು ಅದೇ ಹುದ್ದೆಯಲ್ಲಿ ಮುಂದುವರೆದರು. ಇವನ ಪೂರ್ವಜರು ಯಾರು? ಎಂಬ ಪ್ರಶ್ನೆಗೆ ಅಂತಾಪುರ ಕೈಫಿಯತ್ತಿನೆಲ್ಲಿರುವ ಅಂಶಗಳ ಆಧಾರದ ಮೇಲೆ ಹೇಳುವುದಾದರೆ ಬೊಮ್ಮಂತರಾಜನೇ ಇರಬೇಕೆಂದು ಹೇಳಬೇಕಾಗುತ್ತದೆ. ಏಕೆಂದರೆ ಅಲ್ಲಿ ದಾಖಲಾಗಿರುವಂತೆ ಬೊಮ್ಮಂತರಾಜನು ವಿಜಯನಗರದ ಕೃಷ್ಣದೇವರಾಯನಿಗೆ ಮನವಿ ಮಾಡೋ ಸಮಯದಲ್ಲಿ “ನಮಗೆ ಪೂರ್ವದಲ್ಲಿ ನಾಡ ತಳವಾರಿಕೆ ಕಾವಲಿ ಸ್ವಾಸ್ತಿಭಾಗದ್ದು ಶುದ್ಧ ನಡೆ ಉತ್ತಾಯಿತ್ತು ಅದೇ ಪಾಲಿಸಿದರೆ ಪಾಲಿಸಬೇಕೆಂದು ಬಿನ್ನಹ ಮಾಡಿಕೊಳ್ಳಲು ಅದೇ ಮೇರೆಗೆ ರಾಯರು ಸಂತೋಷ ಬಿಟ್ಟು ಕೊಟ್ಟ ತಾಲೂಕು ವಿವರ ಕುತ್ತಾನೆ, ಸಂಡೂರು, ಜರಿಮಲೆ, ಧರೋಧಿ ಸಹಾ ಗುಡೇಕೋಟೆ, ಬಾಣರಾವಿ, ಉಜನಿ[18] ಅಂದರೆ ಗಂಡಳನಾಯಕನ ಪೂರ್ವಜನಾದ ಬೊಮ್ಮಂತರಾಜನು ಕುತ್ತಾನೆ, ಸಂಡೂರು, ಜರಿಮಲೆ ಗುಡೇಕೋಟೆ ಮುಂತಾದ ಪ್ರಾಂತ್ಯಗಳ ನಾಡ ತಳವಾರಿಕೆ ಮಾಡಿಕೊಂಡಿದ್ದಾನೆಂದು ಹೇಳಬಹುದು. ಗುಡೇಕೋಟೆ ಸಂಸ್ಥಾನವು ಶಕ ೧೪೨೮ನೇ (೧೫೦೬ಕ್ರಿ.ಶ) ಪ್ರಭವನಾಮ ಸಂವತ್ಸರ ಕಾರ್ತಿಕ ಶುದ್ಧ ದ್ವಾದಶಿಯಂದು ಸ್ಥಾಪಿತವಾಯಿತೆನ್ನಲಾಗಿದೆ. ಇದರ ಮೊದಲ ಅರಸ ಗಂಡಳನಾಯಕ ಎನ್ನಲಾಗಿದೆ.[19] ಇದರ ಆಧಾರದ ಮೇಲೆ ಹೇಳುವುದಾದರೆ ಗಂಡಳನಾಯಕನ ಪೂರ್ವಜರು ಕೃಷ್ಣದೇವರಾಯನ ಕಾಲಕ್ಕಿಂತ ಮೊದಲೇ ಅಂದರೆ ಸಾಳುವರ ಅಥವಾ ಸಂಗಮರ ಕೊನೆಯ ಕಾಲದಲ್ಲೋ ವಿಜಯನಗರಕ್ಕೆ ಬಂದಿರಬಹುದು. ನಂತರ ತುಳುವರ ಕಾಲದಲ್ಲಿ ಪ್ರಾಮುಖ್ಯತೆ ಪಡೆದರೆಂದು ಹೇಳಬಹುದು. ಕೈಫಿಯತ್ತಿನಲ್ಲಿ ಉಲ್ಲೇಖಗೊಂಡಿರುವ ಕೃಷ್ಣದೇವರಾಯ ಬೊಮ್ಮಂತರಾಜನ ಸಮಕಾಲೀನನಲ್ಲವಾದುದರಿಂದ ಅವನು ಕೃಷ್ಣದೇವರಾಯನಿಗಿಂತ ಮೊದಲು ಆಳಿದ ಬೇರೆ ದೊರೆ ಇರಬೇಕು ಏಕೆಂದರೆ ತಮ್ಮ ಚರಿತ್ರೆಗೆ ಘನತೆ ತರಬೇಕೆಂಬ ಉದ್ದೇಶದಿಂದ ಅನೇಕ ವಂಶಾವಳಿ, ಕೈಫಿಯತ್ತುಗಳಲ್ಲಿ ಪ್ರಸಿದ್ಧರಾದ ರಾಜರ ಹೆಸರನ್ನು ಉಪಯೋಗಿಸಿಕೊಳ್ಳುವುದು ಸಾಮಾನ್ಯ ಸಂಗತಿಯಾಗಿದೆ.

ಈ ವಂಶಕ್ಕೆ ಸೇರಿದ ಗಂಡಳನಾಯಕನನ್ನು ಕೃಷ್ಣದೇವರಾಯನು ತನ್ನ ಸೈನ್ಯದಲ್ಲಿ ಸೈನಿಕಾಧಿಕಾರಿ ಹುದ್ದೆಗೆ ನೇಮಕ ಮಾಡಿದನೆಂದು ದಾಖಲೆಯು ತಿಳಿಸುತ್ತದೆ.[20] ಆ ಹುದ್ದೆಯಲ್ಲಿದ್ದಾಗ ಗಂಡಳನಾಯಕನು ಅನೇಕ ಯುದ್ಧಗಳಲ್ಲಿ ಭಾಗವಹಿಸುವುದರ ಮೂಲಕ ತನ್ನ ಧೈರ್ಯ, ಸಾಹಸ ನಿಷ್ಟೆಯನ್ನು ತೋರಿಸಿ ಕೃಷ್ಣದೇವರಾಯನ ವಿಶ್ವಾಸಕ್ಕೆ ಪಾತ್ರನಾದನು. ಇದರಿಂದ ಸಂತೃಪ್ತಿಗೊಂಡ ಚಕ್ರವರ್ತಿಯು ಆತನನ್ನು ಸೇನಾ ಇಲಾಖೆಯಲ್ಲಿ ಬಡ್ತಿ ನೀಡಿ ಹೆಚ್ಚಿನ ಜವಾಬ್ದಾರಿ ಕೊಟ್ಟನು. ಈ ಸನ್ನಿವೇಶದಲ್ಲಿ ಆತನಿಗೆ ತನ್ನ ಶಕ್ತಿ ಪ್ರದರ್ಶಿಸುವ ಅವಕಾಶ ದೊರೆಯಿತು. ಮೆಕಂಜಿ ಇಂಗ್ಲೀಷ್ ದಾಖಲೆಯ ಪ್ರಕಾರ[21]

“The Rayalo being informed that the country of Suoondoor, Voojanee, Coodatenee, Allamutty and their dependednces were occupied by plunders who settled in these jungles by robbing passengers ordered Naik as a duty importance to finished thither and after exterminating rhese robbers and destroying the wild beasts that infosted these tracts to dettle the country and endeavor to populate it”

ಕೃಷ್ಣದೇವರಾಯನ ಸೈನ್ಯದಲ್ಲಿ ಸೇನಾಧಿಕಾರಿಯಾಗಿದ್ದು ತನ್ನ ಸಾಹಸಗಳಿಂದ ಗಮನ ಸೆಳೆದಿದ್ದ ಗಂಡಳನಾಯಕನು ರಾಯನು ಆದೇಶದಂತೆ ಮೇಲೆ ತಿಳಿಸಿದ ಪ್ರದೇಶಗಳ ಮೇಲೆ ಸ್ವತಂತ್ರವಾಗಿಯೇ ಆಕ್ರಮಣ ಮಾಡಿ ಯಶಸ್ವಿಯಾಗಿದ್ದುದು ಆತನ ಬಲದಲ್ಲಿನ ವೃದ್ಧಿಯನ್ನು ತೋರಿಸುತ್ತದೆ. ಹೀಗೆ ಬಲಶಾಲಿಯಾಗಿ ವಿಜಯಿಯಾಗಿ ವಿಜಯನಗರಕ್ಕೆ ಹಿಂತಿರುಗುತ್ತಿದ್ದ ಸಮಯದಲ್ಲಿ ಇಂದಿನ ಗುಡೇಕೋಟೆ ಇರುವ ಜಾಗಕ್ಕೆ ಬಂದನು. ಆ ಸನ್ನಿವೇಶವನ್ನು ಅದೇ ಇಂಗ್ಲೀಷ್ ದಾಖಲೆಯು ಈ ರೀತಿ ತಿಳಿಸುತ್ತದೆ.[22]

“ಗಂಡಳನಾಯಕನು ಪ್ರಸ್ತುತ ಗುಡೇಕೋಟೆ ಇರುವ ಸ್ಥಳದಲ್ಲಿ ಮರದ ಕೆಳಗೆ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದನು. ಆ ಸಂದರ್ಭದಲ್ಲಿ ಒಂದು ನಾಯಿಯ ಕಾಡಿನ ಮಧ್ಯದ ಕಣಿವೆಯಿಂದ ಆಗಮಿಸುತ್ತಿರುವುದನ್ನು ಮತ್ತು ಅದು ನೀರಿನಿಂದ ತೋಯ್ದಿರುವುದನ್ನು ನೋಡಿ, ಆಶ್ಚರ್ಯದಿಂದ ಅವನು ನಾಯಿ ಹೋಗಿದ್ದ ದಿಕ್ಕಿನಲ್ಲೇ ಕಾಡಿನೊಳಗೆ ಪ್ರವೇಶಿಸಿದಾಗ ಅಲ್ಲಿ ಶಿವನ ದೇವಾಲಯ ಸನಿಹದಲ್ಲೇ ಕೆರೆ ಇರುವುದನ್ನು ಕಂಡನು. ನಂತರ ಅವನು ಆ ದೇವಾಲಯದ ಹತ್ತಿರ ತನ್ನ ವಾಸಕ್ಕೆ ಮನೆಯೊಂದನ್ನು ನಿರ್ಮಿಸಿ ಗುಡ್ಡದ ಮೇಲೆ ಕೋಟೆಯನ್ನು ಕಟ್ಟಿ ಅಲ್ಲಿಯೇ ವಾಸ ಮಾಡತೊಡಗಿದನು.”

ಈ ಕಥೆಗಳು ಎಲ್ಲಾ ಚಾರಿತ್ರಿಕ ದಾಖಲೆಗಳಲ್ಲಿ ಸರ್ವೇಸಾಮನ್ಯವಾಗಿ ಕಂಡುಬರುತ್ತವೆ. ಇದರ ಅಶಯವೇನೆಂದರೆ, ದರೋಡೆಕೋರರನ್ನು ಸದೆಬಡಿದು ಹಿಂತಿರುಗಿಬರುವಾಗ ಗಂಡಳನಾಯಕನಿಗೆ ತನ್ನ ಬಲದಲ್ಲಿ ಆತ್ಮವಿಶ್ವಾಸ ನಂಬಿಕೆ ಹೆಚ್ಚಾಗಿರಬೇಕು. ಆಗ ಅವನು ಅದಕ್ಕಾಗಿ ಸೂಕ್ತ ಸ್ಥಳವನ್ನರಸುತ್ತಿರಬೇಕು. ಆ ಸಂದರ್ಭದಲ್ಲಿ ಇಂದಿನ ಗುಡೇಕೋಟೆ ಅವನಿಗೆ ದೊರಕಿರಬಹುದೆಂದು ಊಹಿಸಬಹುದು. ಮೇಲಿನ ದಾಖಲೆಯು ಆ ಸ್ಥಳದಲ್ಲಿ ಕೋಟೆ ನಿರ್ಮಾನ ಮಾಡುವ ಮೊದಲೇ ಶಿವನ ದೇವಾಲಯು ಆ ಸ್ಥಳದಲ್ಲಿ ಜನವಸತಿ ಇದ್ದು ಕಾಲಾಂತರದಲ್ಲಿ ಅದು ನಾಶವಾಗಿಬಹುದು. ಇಂದಿಗೂ ಅವನತಿಯ ಹಂತದಲ್ಲಿರುವ ಕಲ್ಯಾಣ ಚಾಲುಕ್ಯರ ಕಾಲದ ಕಲ್ಲೇಶ್ವರ, ಚೌಳೇಶ್ವರ ದೇವಾಲಯಗಳ ಇದನ್ನು ಸಮರ್ಥಿಸುತ್ತವೆ. ಈ ಪರಿಸರದಲ್ಲಿ ಶಿಲಾಯುತದ ನೆಲೆಗಳು ಮತ್ತು ಮೌರ್ಯರ ರಾಜ್ಯಾಳ್ವಿಕೆಯಿಂದಲೇ ಇಲ್ಲಿನ ಆಡಳಿತವನ್ನು ಗುರುತಿಸಬುದೆಂದು ಸಂಶೋಧನೆಗಳು ತಿಳಿಸುತ್ತವೆ.[23] ಆದುದರಿಂದ ಗಂಡಳನಾಯಕನ ಕಾಲಕ್ಕಿಂತ ಮೊದಲೇ ಈ ಸ್ಥಳ ಜನವಸತಿಯಿಂದ ಕೂಡಿದ್ದು ಕಾರಣಾಂತರದಿಂದ ನಾಶವಾದ ಈ ಸ್ಥಳವೇ ಅವನಿಗೆ ರಕ್ಷಣೆಗೆ ಆಯಕಟ್ಟಿನ ಸ್ಥಳವಾಯಿತು. ಆದುದರಿಂದ ಅವನು ಅಲ್ಲಿ ಗುಡ್ಡದ ಮೇಲೆ ಕೋಟೆಯನ್ನು ಕಟ್ಟಿ ಶಿವನ ದೇವಾಲಯದ ಬಳಿ ಅರಮನೆಯೊಂದನ್ನು ನಿರ್ಮಾನ ಮಾಡಿಕೊಂಡು ಸ್ವತಂತ್ರವಾದ ಸಂಸ್ಥಾನವೊಂದಕ್ಕೆ ಆಸ್ತಿಭಾರ ಹಾಕಿ ಅಲ್ಲಿಯೇ ನೆಲೆಸತೊಡಗಿದನು. ತನ್ನ ಆಡಳಿತ ಕೇಂದ್ರವಾದ ಈ ಸ್ಥಳವನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸಿದ ನಾಯಕನು ಅಲ್ಲಿ ನೆಲಸಲು ಬರುವ ಜನರಿಗೆ ಅನೇಕ ಅನುಕೂಲಗಳನ್ನು ಮಾಡಿಕೊಟ್ಟು ಜನ ಸಂಘಟನೆ ಮಾಡಿದನು. ಆದಾಗ್ಯೂ ವಿಜಯನಗರಕ್ಕೆ ನಿಷ್ಟೆಯಿಂದಿದ್ದು ಅವರು ನೀಡಿದ್ದ ಉಜ್ಜನಿ, ಕುಡತಿನಿ, ಸಂಡೂರು ಮುಂತಾದ ಪ್ರದೇಶಗಳ ಮೇಲ್ವಿಚಾರಣೆ ನೋಡಿಕೊಳ್ಳುತ್ತಾ ಮರಣ ಹೊಂದಿದನು.

ಹೀಗೆ ಗುಡೇಕೋಟೆನಾಯಕ ವಂಶದ ಪೂರ್ವಜರು ನೆಲ್ಲೂರಿನಿಂದ ವಿಜಯನಗರಕ್ಕೆ ಆಗಮಿಸಿ ತಳವಾರಹುದ್ದೆ ಪಡೆದು ಸೈನಿಕ ಸೇವೆಗೆ ಸೇರಿ, ಸೇನಾಧಿಕಾರಿಗಳಾಗಿ ಗಂಡಳ ನಾಯಕನ ಕಾಲಕ್ಕೆ ಸ್ವತಂತ್ರ ಪಾಳೇಪಟ್ಟನ್ನು ನಿರ್ಮಿಸುವ ಮಟ್ಟಕ್ಕೆ ಬೆಳೆದದ್ದು ಆ ನಾಯಕರ ಇತಿಹಾಸದಲ್ಲಿ ಪ್ರಮುಖ ಸಾಧನೆಯಾಗಿದೆ.

ಗಂಡಳನಾಯಕನ ನಂತರ ಪೆನ್ನಪ್ಪನಾಯಕ ಅವನ ನಂತರ ಪಾಪಳನಾಯಕ ಆಳ್ವಿಕೆ ನಡೆಸಿದರೆಂದು ದಾಖಲೆಗಳು ತಿಳಿಸುತ್ತವೆ. ಆದರೆ ಈ ನಾಯಕರ ಆಡಳಿತದ ಬಗೆಗೆ ವಿವರಗಳಿಲ್ಲ. ನಂತರ ಪಾಪಳನಾಯಕನ ಮೊಮ್ಮಗ ತಿಮ್ಮಪ್ಪನಾಯಕನ ಆಳ್ವಿಕೆ ಆರಂಭವಾಗುತ್ತದೆ.

ತಿಮ್ಮಪ್ಪನಾಯಕ

ವಿಜಯನಗರದ ಕೃಷ್ಣದೇವರಾಯನ ಸಮಕಾಲೀನನಾಗಿದ್ದ ಗಂಡಳನಾಯಕನ ಆಳ್ವಿಕೆ ಮುಗಿದ ನಂತರ ಇವರ ವಂಶಾವಳಿಯಲ್ಲಿ ತಿಮ್ಮಪ್ಪನಾಯಕನವರೆಗೆ ಅನೇಕ ಗೊಂದಲಗಳಿದ್ದು, ಇವರ ಮನೆತನದ ಹಸ್ತಪ್ರತಿಗಳಲ್ಲಿ ಕೃಷ್ಣದೇವರಾಯನ ೧೫೦೯ – ೧೫೨೯ ಸಮಕಾಲೀನನಾದ ಗಂಡಳನಾಯಕನ ಮಗ ಪೆನ್ನಪ್ಪನಾಯಕ ೩೨ ವರ್ಷ ಅವನ ಮಗ ಪಾಪಳನಾಯ್ಕ ೧೭ವರ್ಷ ಅವನ ಮಗ ಕಮ್ಮಯ್ಯರಾಜ ೪೪ ವರ್ಷ ಆಳ್ವಿಕೆ ಮಾಡಿದರೆಂದು ದಾಖಲಾಗಿದೆ. ಅಂದರೆ ಒಟ್ಟು ೯೩ ವರ್ಷಗಳು ತಿಮ್ಮಪ್ಪನಾಯಕನಿಗಿಂತ ಮೊದಲು ಆಳ್ವಿಕೆ ನಡೆಸಲಾಯ್ತು. ಇದನ್ನು ಆಧಾರವಾಗಿಟ್ಟುಕೊಂಡು ಹೇಳುವುದಾದರೆ ತಿಮ್ಮಪ್ಪನಾಯಕನ ಆಳ್ವಿಕೆ ಪ್ರಾಯಶಃ ೧೭ನೇ ಶತಮಾನದ ಪೂರ್ವಾಧದಲ್ಲಿ ಆರಂಭವಾದಂತೆ ತೋರುತ್ತದೆ.

ತಿಮ್ಮಪ್ಪನಾಯಕ ಗುಡೇಕೋಟೆಯ ಪಾಳೆಯಪಟ್ಟಿನ ನಾಯಕನಾಗಿ ಅಧಿಕಾರ ವಹಿಸಿಕೊಳ್ಳುವ ವೇಳೆಗೆ ದಕ್ಷಿಭಾರತದಲ್ಲಿ ಅನೇಕ ರಾಜಕೀಯ ಬದಲಾವಣೆಗಳಾಗಿದ್ದವು. ಗಂಡಳನಾಯಕನ ಸಮಕಾಲೀನ ವಿಜಯನಗರದ ಕೃಷ್ಣದೇವರಾಯನ ಮರಣದ ನಂತರ ವಿಜಯನಗರದಲ್ಲಿ ಸಿಂಹಾಸನಕ್ಕಾಗಿ ಅಂತಃ ಕಲಹಗಳು ಆರಂಭಗೊಂಡು ಸರ್ವಾಧಿಕಾರಿ ಆಳಿಯ ರಾಮರಾಯನ ಪ್ರಭಾವ ಹೆಚ್ಚಾಯಿತು. ಈ ರಾಮರಾಯ ಷಾಯಿ ಸುಲ್ತಾನರ ಅನೈಕ್ಯತೆಯ ಲಾಭ ಪಡೆದುಕೊಂಡು ವಿಜಯನಗರದ ಪ್ರಭಾವವನ್ನು ಹೆಚ್ಚಿಸಲು ಪ್ರಯತ್ನಿಸಿ ಸಫಲನಾದನು. ಇದನ್ನರಿತ ಅವರೆಲ್ಲಾ ಒಟ್ಟಾಗಿ ಸೇರಿ ವಿಜಯನಗರದ ಮೇಲೆ ದಾಳಿ ಮಾಡಿ ಅದರ ನಾಶಕ್ಕೆ ಕಾರಣರಾದರು. ವಿಜಯನಗರಕ್ಕೆ ಸೇರಿದ್ದ ತುಂಗಭದ್ರಾ ತೀರದ ಎಲ್ಲಾ ಪ್ರದೇಶಗಳು ಅವರ ವಶವಾದವು. ಉತ್ತರ ಕರ್ನಾಟಕದಲ್ಲಿ ವಿಜಾಪುರದ ಆದಿಲ್‌ಶಾಹಿಗಳು ಒಂದು ಪ್ರಬಲ ರಾಜಕೀಯ ಶಕ್ತಿಯಾಗಿ ಬೆಳೆದರು. ಕ್ರಿ.ಶ. (೧೬೨೭ – ೧೬೫೬)ರ ಅವಧಿಯಲ್ಲಿ ಆಳಿದ ಮಹಮದ್ ಆದಿಲ್‌ಷಾನು ಮೊಗಲರ ರಾಜ್ಯವಿಸ್ತರಣೆಯನ್ನು ೧೬೩೮ರ ವರೆಗೆ ಯಶಸ್ವಿಯಾಗಿ ತಡೆದರೂ ಕೊನೆಗೆ ಅವರಿಗೆ ಸೋತು ಅವರೊಂದಿಗೆ ಅಧೀನತ್ವದ ಒಪ್ಪಂದ ಮಾಡಿಕೊಂಡನು. ಇವನು ಉತ್ತರಭಾಗದಲ್ಲಿ ತನಗಾದ ನಷ್ಟವನ್ನು ತುಂಬಿಕೊಳ್ಳಲು ದಕ್ಷಿಣ ಭಾಗದ ಪ್ರದೇಶಗಳ ಮೇಲೆ ದಾಳಿ ಮಾಡಿ ಪ್ರಭುತ್ವ ಸಂಪಾದಿಸಿದನು. ಇವನ ನಂತರ ಬಂದ ಆಲಿ ಆದಿಲ್‌ಷಾ (೧೬೫೬ – ೧೬೭೨) ಮತ್ತು ಸಿಕಂದರ್ ಆದಿಲ್ ಷಾ(೧೬೭೨ – ೧೬೮೯)ರ ಕಾಲದಲ್ಲಿ ಆದಿಲ್‌ಶಾಹಿ ಸಾಮ್ರಾಜ್ಯ ಕುಸಿಯತೊಡಗಿದರೂ ಅದನ್ನೇ ಕೆಲಕಾಲ ತನ್ನ ಬುದ್ಧಿವಂತಿಕೆಯನ್ನು ಬೆಳೆಸಿ ರಕ್ಷಿಸಿದವನೇ ಸಿದ್ಧಿ ಮಾಸೂದ್‌ಖಾನನು. ಇವನು ಆರಂಭದಲ್ಲಿ ಆದಿಲ್‌ಶಾಹನ ಸೇವಕ ಮಂಡಳಿಯಲ್ಲಿದ್ದನು. ಕ್ರಮೇಣ ತನ್ನ ಪ್ರಭಾವವನ್ನು ಹೆಚ್ಚಿಕೊಳ್ಳತೊಡಗಿದ.ಇವನು ಕರ್ನೂಲಿನಲ್ಲಿ ಅಮೀರನಾಗಿದ್ದ ಸಿದ್ದಿ ಜೋಹರನ ಅಳಿಯನಾದನು. ಅವನ ಪರವಾಗಿ ಯುದ್ಧದಲ್ಲಿ ಹೋರಾಟ ಮಾಡಿ ಅಮೀರಿಯಾ ಹಾಗೂ ಖಾನ್ ಎಂಬ ಬಿರುದನ್ನು ಗಳಿಸಿದನು. ಸಿದ್ಧಿ ಜೋಹರ್ ಮರಣಿಸಿದಾಗ ಅವನ ಮಗ ಅಬ್ದುಲ್ ಅಜೀಜನು ಬೆಳೆಯುತ್ತಿದ್ದ ಸಿದ್ಧಿ ಮಾಸೂದನನ್ನು ಬಂಧಿಸಲು ಪ್ರಯತ್ನಿಸಿದಾಗ ತಪ್ಪಿಸಿಕೊಂಡು ಆದೋನಿ ಕೋಟೆಯ ಕಡೆಗೆ ಓಡಿಹೋದನು. ಅಲ್ಲಿನ ಶೇಖ ಇನಾಯತುಲ್ಲಾಖಾನ್ ಅವನಿಗೆ ಆಶ್ರಯ ಕೊಟ್ಟನು. ಆಶ್ರಯ ಕೊಟ್ಟ ವ್ಯಕ್ತಿಯಿಂದಲೇ ಆ ಕೋಟೆಯನ್ನು ಕೈ ವಶಮಾಡಿಕೊಂಡನು. ಈ ಕೋಟೆಯು ಆದಿಲ್ ಶಾಹಿಗಳ ಭದ್ರವಾದ ಕೋಟೆಯಾಗಿತ್ತು. ತನ್ನ ಮಾವನಾದ ಸಿದ್ಧಿ ಜೋಹರ್‌ನಿಂದ ಆಲಿ ಆದಿಲ್‌ಶಹಿಯ ವಿಶ್ವಾಸಗಳಿಸಿಕೊಂಡಿದ್ದ ಇವನು ತನ್ನ ಶಕ್ತಿ ಮತ್ತು ಬುದ್ಧಿವಂತಿಕೆಯಿಂದ ಆದಿಲ್‌ಶಾಹಿ ರಾಜ್ಯದ ವಜೀರ ಪದವೀಗೇರಿದನು. ಹೀಗೆ ಆದೋನಿಯ ಜಾಗೀರಿನ ಆಡಳಿತದ ಜೊತೆಗೆ ಆದಿಲ್‌ಶಾಹಿ ರಾಜ್ಯದ ವಜೀರನಾಗಿಯೂ ಕೆಲಸ ಮಾಡತೊಡಗಿದನು. ಈ ಸನ್ನಿವೇಶದಲ್ಲಿ ಸಿದ್ಧಿ ಮಸೂದ್‌ಖಾನನು (ಕ್ರಿ.ಶ. ೧೬೫೦ – ೧೬೯೦) ತಿಮ್ಮಪ್ಪ ನಾಯಕರೊಂದಿಗೆ ಕದನಕ್ಕಿಳಿಯುವ ಸಂದರ್ಭ ಒದಗಿತು.

ವಿಜಯನಗರಕ್ಕೆ ಸೇರಿದ ತುಂಗಭದ್ರಾ ನದಿ ತೀರದ ದಕ್ಷಿಣ ಪ್ರದೇಶಗಳು ಅನೇಕ ಪಾಳೆಯ ಪಟ್ಟುಗಳ ಕೇಂದ್ರಗಳಾಗಿದ್ದವು. ಆ ಸಂಸ್ಥಾನಗಳು ಪರಸ್ಪರ ಯುದ್ಧ ನೀತಿಯನ್ನು ಕೈಗೊಂಡು ರಾಜ್ಯ ವಿಸ್ತರಣೆಯಲ್ಲಿ ತೊಡಗಿದ್ದವು. ಅಷ್ಟೇನೂ ಬಲಾಢ್ಯವಲ್ಲದ ಈ ಸಂಸ್ಥಾನಗಳ ಮೆಲೆ ಆದಿಲ್‌ಶಾಹಿ ವಜೀರನಾಗಿದ್ದ ಸಿದ್ಧಿ ಮಸೂದ್ ಖಾನನ ದೃಷ್ಟಿಬಿತ್ತು ಇವನ ದಾಳಿಗೆ ಗುಡೇಕೋಟೆ ಸಂಸ್ಥಾನ ಸಿಲುಕಿತು. ಅದನ್ನು ಮೆಕಂಜಿಯ ಇಂಗ್ಲಿಷ್ ದಾಖಲೆಯು ಹೀಗೆ ತಿಳಿಸುತ್ತದೆ.

“ಸಿದ್ಧಿ ಮಸೂದ್‌ಖಾನನು ಗುಡೇಕೋಟೆಯ ಮೇಲೆ ಮುತ್ತಿಗೆ ಹಾಕಿದನು. ಅದು ಹನ್ನೆರಡು ವರ್ಷಗಳವರೆಗೆ ಮುಂದುವರೆಯಿತು. ಆದರೂ ಸಂಪೂರ್ಣವಾಗಿ ಕೋಟೆಯನ್ನು ವಶಪಡಿಸಿಕೊಳ್ಳಲಾಗಲಿಲ್ಲ ಹಾಗೂ ತಿಮ್ಮಪ್ಪ ನಾಯಕನೊಂದಿಗೆ ತಾತ್ಕಾಲಿಕ ಶಾಂತಿ ಒಪ್ಪಂದ ಮಾಡಿಕೊಳ್ಳಲು ಬಯಸಿದನು. ತಿಮ್ಮಪ್ಪನಾಯಕನ ಸಾಹಸಕ್ಕೆ ಮೆಚ್ಚಿದ ವಜೀರನು ಅವನಿಗೆ “ರಾಜ” ಎಂಬ ಬಿರುದನ್ನು ನೀಡಿ ಕೋಟೆ ಮತ್ತು ನಗರಗಳನ್ನು ನಿರ್ಮಾಣ ಮಾಡಲು ಅನುಮತಿ ಕೊಟ್ಟನು.”[24]

ಹೀಗೆ ತಿಮ್ಮಪ್ಪನಾಯಕನು ರಾಜಾ ತಿಮ್ಮನಾಯಕನಾದನು ಅಂದಿನಿಂದ ಈ ಮನೆತನದವರೆಲ್ಲೂ “ರಾಜಾ” ಎಂಬ ಹೆಸರಿನಿಂದಲೇ ಕರೆಯಲ್ಪಟ್ಟಿದ್ದಾರೆ. ಸಿದ್ದಿ ಮಾಸೂದ್ ಖಾನನಿಂದ ಗೌರವಿಸಲ್ಪಟ್ಟ ರಾಜಾ ತಿಮ್ಮಪ್ಪನಾಯಕನು, ಅವನಿಗೆ ಅತ್ಯಂತ ನಿಷ್ಟೆಯಿಂದಿದ್ದು, ಆ ಭಾಗದ ಸರ್ಕಾರದ ಎಲ್ಲಾ ಆಗುಹೋಗುಗಳನ್ನು ಅವನಿಗೆ ಚಾಚೂ ತಪ್ಪದೆ ವರದಿ ಮಾಡುತ್ತಿದ್ದನು. ಈ ವಿಧೇಯತೆಗೆ ಮೆಚ್ಚಿದ ಸಿದ್ಧಿ ಮಾಸೂದ್‌ಖಾನನು ಆ ಭಾಗದ ಆಕ್ರಮಣಗಳನ್ನು ಸ್ಥಗಿತಗೊಳಿಸಿ ಬಿಜಾಪುರಕ್ಕೆ ಹಿಂತಿರುಗಿದನು. ಮತ್ತು ರಾಜಾ ತಿಮ್ಮಪ್ಪನಾಯಕನಿಗೆ ವಜೀರನು ತಾನು ಗೆದ್ದಿದ್ದ ತುಂಗಭದ್ರಾ ತೀರದ ಎಲ್ಲಾ ಪ್ರದೇಶಗಳ ಜವಾಬ್ದಾರಿ ನೀಡಿದ್ದೇ ಅಲ್ಲದೆ ಅವನಿಗೆ ಅವನ ಹಳೆಯ ಪ್ರದೇಶಗಳನ್ನು ಮಾನ್ಯ ಮಾಡುವುದರ ಜೊತೆಗೆ ಹೊಸದಾಗಿ, ಸಂಡೂರು, ಕುಡುತಿನಿ, ನಾಗಲಾಪುರ, ಗೂಳೂರು, ಮಚ್ಛೇರಿ, ದೊಡ್ಡಘಟ್ಟ, ಹೊಸೂರು, ನಾರಾಯಣದೇವರಕೆರೆ, ಚೋರಕುಂಟೆ ಮೊದಲಾದ ಪ್ರದೇಶಗಳನ್ನು ನೀಡಿದನು.[25] ಹೀಗೆ ವಿಜಯನಗರದವರ ಪ್ರೇರಣೆಯಿಂದ ರಾಜ್ಯಕಟ್ಟಿದ ಗುಡೇಕೋಟೆ ಪಾಳೆಯಗಾರರು ರಾಜಾ ತಿಮ್ಮಪ್ಪನಾಯಕನ ಕಾಲಕ್ಕೆ ವಿಜಾಪುರದ ಆದಿಲ್‌ಶಾಹಿಗಳಿಗೆ ನಿಷ್ಠರಾಗಿ ರಾಜ್ಯ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದುದು ಅಂದಿನ ರಾಜಕೀಯ ವಾತಾವರಣದಲ್ಲಿ ಅನಿವಾರ್ಯವಾಗಿತ್ತು. ಆದರೂ ರಾಜಾ ತಿಮ್ಮಪ್ಪನಾಯಕನು ವಜೀರನು ದೂರದ ಬಿಜಾಪುರದಲ್ಲಿದ್ದರೂ ಯಾವುದೇ ಆತಂಕಕ್ಕೊಳಗಾಗದೇ ಅನೇಕ ವರ್ಷಗಳಕಾಲ ತೊಂದರೆಯಿಲ್ಲದೆ ಆಡಳಿತ ನಡೆಸಿ ಮರಣ ಹೊಂದಿದನು.

ರಾಮರಾಜ

ರಾಜಾ ತಿಮ್ಮಪ್ಪನಾಯಕನ ಮರಣಾನಂತರ ರಾಮರಾಜಪ್ಪನಾಯಕನು ಗುಡೇಕೋಟೆ ಸಂಸ್ಥಾನದ ನಾಯಕನಾದನು. ಇವನು ಚಿತ್ರದುರ್ಗದ ಭರಮಣ್ಣನಾಯಕನ (೧೬೮೯ – ೧೭೨೦ ಕ್ರಿ.ಶ) ಸಮಕಾಲೀನನಾಗಿದ್ದನು. ಆಡಳಿತ ವಹಿಸಿಕೊಂಡ ತರುವಾಯದಲ್ಲೇ ಗುಡೇಕೋಟೆ ಗುಡೇಕೋಟೆಯಲ್ಲಿ ನೆಲೆಸುವಂತೆ ಪ್ರೇರೇಪಿಸಿ ಅವರಿಗೆ ಎಲ್ಲಾ ಅನುಕೂಲಗಳನ್ನು ಒದಗಿಸಿಕೊಟ್ಟನು. ಭರಮಣ್ಣನಾಯಕನಿಗೆ ಹರಪನಹಳ್ಳಿಯವರ ಮೇಲೆ ಯುದ್ಧ ಮಾಡಲು ಸೈನ್ಯ ಸಮೇತನಾಗಿ ಹೋಗಿ ಸಹಾಯ ಮಾಡಿದ್ದನು. ಇದರಿಂದ ಅಣಜಿಕೋಟೆ ದುರ್ಗದವರ ವಶವಾಯ್ತು. ಹೀಗೆ ದುರ್ಗದವರ ಸ್ನೇಹ ಬೆಳೆಸಿಕೊಂಡಿದ್ದರೂ ದುರ್ಗದವರು ಗುಡೇ ಕೋಟೆಯ ಮೇಲೆ ಆಕ್ರಮಣ ಮಾಡುವ ಸನ್ನಿವೇಶವೊಂದು ಸೃಷ್ಟಿಯಾಯಿತು. ದಿಲಾವರ್ ಬಕ್‌ಷನ ದಂಡು ಚಿತ್ರದುರ್ಗದವರ ಮೇಲೆ ದಾಳಿ ಮಾಡಿದಾಗ ಅವನು ಗುಂಟನೂರು ಮಲ್ಲಪ್ಪನ ಮುಖಾಂತರ ೩ ಕೋಟೆ ವರಹ ಕೊಡಬೇಕೆಂದು ಒತ್ತಾಯಿಸಿದನು. ಈ ಸಂದರ್ಭದಲ್ಲಿ ದುರ್ಗದವರು ಅವನೊಡನೆ ಯುದ್ಧಕ್ಕಿಳಿಯಲು ಸಂಪನ್ಮೂಲ ಕ್ರೋಢೀಕರಣಕ್ಕೆ ಬಹುಧಾನ್ಯ ಸಂವತ್ಸರದಲ್ಲಿ (ಕ್ರಿ.ಶ. ೧೬೯೯) ಗುಡೇಕೋಟೆ ಮೇಲೆ ಆಕ್ರಮಣ ಮಾಡಿದರು[26] ಆಗ ಗುಡೇಕೋಟೆಯಲ್ಲಿ ರಾಮರಾಜನ ಆಳ್ವಿಕೆಯಿತ್ತು. ಅವರಿಗೆ ಸೇರಿದ್ದ ಸಂದರ್ಭ ಒದಗಿದಾಗ ಗುಡೇಕೋಟೆ ಪಾಳೇಗಾರನು ಸಕ್ಕರೆ ನಾರಾಣಪ್ಪನನ್ನು ದುರ್ಗದವರೊಂದಿಗೆ ಸಂಧಾನಕ್ಕೆ ಕಳುಹಿಸಿದನು. ಅದರಂತೆ ಗುಡೇಕೋಟೆ ಹೆಣ್ಣುಮಗಳು ಬಂಗಾರವ್ವ ನಾಗತಿಯನ್ನು ಭರಮಣ್ಣ ನಾಯಕನಿಗೆ ಕೊಟ್ಟು ವಿವಾಹ ಮಾಡಲಾಯಿತು.[27] ನಂತರ ಗುಡೇಕೋಟೆ ಪಾಳೇಗಾರನು ಕೊಟ್ಟೂರಿನ ಆಕ್ರಮಣದಲ್ಲಿ ದುರ್ಗದವರ ಪರವಾಗಿ ಭಾಗವಹಿಸಿದ್ದನು.

ಹೀಗೆ ಚಿತ್ರದುರ್ಗದವರೊಂದಿಗೆ ಮೈತ್ರಿಯಿಂದ ಇರುತ್ತಾ, ಅವರು ಕೇಳಿದ ಸಂದರ್ಭದಲ್ಲಿ ಸೈನಿಕ ಸೇವೆ ನೀಡುತ್ತಾ ಇರುವ ಕಾಲದಲ್ಲಿ ರಾಮರಾಜಪ್ಪನಾಯಕನಿಗೆ ಗುಡೇಕೋಟೆಯ ಬಳಿ ಜಮೀನೊಂದರಲ್ಲಿ ಉಮಾಮಹೇಶ್ವರ ವಿಗ್ರಹವು ದೊರಕಿತು. ಅದಕ್ಕೆ ಒಂದುಹೊಸ ದೇವಾಲಯ ಕಟ್ಟಿಸಿ ಅಲ್ಲಿ ಆ ವಿಗ್ರಹವನ್ನು ಪ್ರತಿಷ್ಠಾಪಿಸಿದನೆಂದು ದಾಖಲೆಯು ತಿಳಿಸುತ್ತದೆ.[28] ಗುಡೇಕೋಟೆಯ ಪಶ್ಚಿಮ ದಿಕ್ಕಿಗೆ ಕೂಡಲಗಿ ಮಾರ್ಗದಲ್ಲಿ ದಕ್ಷಿಣ ಬದಿಗಿರುವ ದೇವಾಲಯವೇ ಇದಾಗಿದೆ. ಗರ್ಭಗುಡಿ, ಅಂತರಾಳ, ನವರಂಗ, ಮುಖಮಂಟಪ, ಸುತ್ತುಗೋಡೆ, ಇಟ್ಟಿಗೆಯ ಗೋಪುರ, ಗ್ರಾನೈಟ್ ಶಿಲೆ, ಗಾರೆ, ಇಟ್ಟಿಗೆ, ಮುಂತಾದ ಲಕ್ಷಣಗಳು ವಿಜಯನಗರ – ನಗರೋತ್ತರ ಶೈಲಿಯನ್ನು ನೆನಪಿಸುವುದರಿಂದ ಪ್ರಾಯಶಃ ಈ ದೇವಾಲಯವನ್ನು ರಾಮರಾಜನಾಯಕನೇ ನಿರ್ಮಿಸಿರಬಹುದು. ದೇವಾಲಯದ ಗರ್ಭಗುಡಿಯಲ್ಲಿ ವಿಗ್ರಹವನ್ನು ೩ಅಡಿ ಎತ್ತರ ಇರುವ ಪೀಠದ ಮೇಲೆ ಪ್ರತಿಷ್ಠಾಪಿಡಲಾಗಿದೆ. ಶಿವನು ತನ್ನ ಎಡತೊಡೆಯ ಮೇಲೆ ಪಾರ್ವತಿಯನ್ನು ಕುಳ್ಳಿರಿಸಿಕೊಂಡಿರುವ ಭಂಗಿ ನಯನ ಮನೋಹರವಾಗಿದೆ. ಇದನ್ನು ಸಂಶೋಧಕರೊಬ್ಬರು ಶಿವಪಾರ್ವತಿ ವಿಗ್ರಹ ಎಂದು ಕರೆದಿದ್ದಾರೆ.[29] ವಿಗ್ರಹದಲ್ಲಿ ಶಿವಪಾರ್ವತಿ ಶಿಲ್ಪಗಳೇ ಇದ್ದರೂ ತಾಂತ್ರಿಕವಾಗಿ ಪೌರಾಣಿಕ ಕಥೆಗಳಂತೆ, ಇಂಗ್ಲೀಷ್ ದಾಖಲೆಯಲ್ಲಿ ಇರುವಂತೆ, ಉಮಾಮಹೇಶ್ವರನ ಮೂರ್ತಿಯೇ ಆಗಿದೆ ಎಂದು ಯಾವುದೇ ಸಂದೇಹವಿಲ್ಲದೇ ಹೇಳಬಹುದು.

[1] ಎಂ.ಎ.ಆರ್. ೧೯೩೫ ಪುಟ ೧೪೬, ೧೪೭, ೧೪೮.

[2] ಎಂ.ಎಂ.ಕಲಬುರ್ಗಿ (ಸಂ) ಕರ್ನಾಟಕದ ಕೈಫಿಯತ್ತುಗಳು ಪು. ೧೯೦, ೪೦೬, ೪೧೦, ೪೫೫, ೪೭೦, ೫೬೧, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ-೧೯೯೪.

[3] ಅದೇ ಪು. ೩೧, ೫೧೦, ೫೧೧.

[4] ಮ್ಯಾನುಯಲ್ ಆಫ್ ದಿ ಅಡ್ಮಿನಿಸ್ಟ್ರೇಶನ್ ಆಫ್ ದಿ ಮದ್ರಾಸ್ ಪ್ರಸಿಡೆನ್ಸಿ – ಸಂಪುಟ-೩.

[5] ಪ್ರಕಟಿತವಾಗದಿರುವ ಮೆಕಂಜಿ ಕೈಫಿಯತ್ತು.

[6] ವಿರೂಪಾಕ್ಷ ಪೂಜಾರಿಹಳ್ಳಿ, ಬಳ್ಳಾರಿ ಜಿಲ್ಲೆಯ ಪಾಳೆಯಗಾರರು, ಪು.೧೩, ಪ್ರಸಾರಾಂಗ ಹಂಪಿ-೨೦೦೪.

[7] ಅದೇ.

[8] ಎಂ.ಎ.ಆರ್. ೧೯೩೫ ಪುಟ ೧೪೮, ೧೪೯, ಪುಟ ೧೪೬, ೧೪೭, ಎ.ಆರ್.ಎಸ್.ಐ.ಇ. ೧೯೨೪-೨೫, ನಂ.-೨೮೮.

[9] ಎಂ.ಎಂ. ಕಲಬುರ್ಗಿ (ಸಂ) ಕರ್ನಾಟಕದ ಕೈಫಿಯತ್ತುಗಳು, ಪ್ರಸಾರಾಂಗ, ಹಂಪಿ-೧೯೯೪.

[10] ಬಳ್ಳಾರಿ ಗೆಜೆಟಿಯರ್ ಡಬ್ಲೂ, ಫ್ರಾನ್ಸಿಸ್ ಮದ್ರಾಸ್-೧೯೦೪ ಪುನರ್ ಮುದ್ರಣ ಕರ್ನಾಟಕ ಸರ್ಕಾರ-೨೦೦೪.

[11] ಮೆಕಂಜಿ ಇಂಗ್ಲೀಷ್ ದಾಖಲೆ.

[12] ಅದೇ.

[13] ಅದೇ.

[14] ವಿರೂಪಾಕ್ಷ ಪೂಜಾರಿಹಳ್ಳಿ ಬಳ್ಳಾರಿ ಜಿಲ್ಲೆ ಪಾಳೆಯಗಾರರು ಪುಟ.೧೯.

[15] ಕಲಬುರ್ಗಿ ಎಂ.ಎಂ. ಸಂ. ಕರ್ನಾಟಕ ಕೈಫಿಯತ್ತುಗಳು ಪುಟ, ೪೧೦.

[16] ಡಾ. ಮಿರಾಸಾಬಿಹಳ್ಳಿ ಶಿವಣ್ಣ – ಮ್ಯಾಸ ಮಂಡಲ ಪು. ೩೦, ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು-೨೦೦೫.

[17] ಮೆಕಂಜಿ ಇಂಗ್ಲೀಷ್ ದಾಖಲೆ.

[18] ಕಲಬುರ್ಗಿ ಎಂ.ಎಂ. ಸಂ, ಕರ್ನಾಟಕದ ಕೈಫಿಯತ್ತುಗಳು ಪು.೪೧೦.

[19] ವಿರೂಪಾಕ್ಷ ಪೂಜಾರಿಹಳ್ಳಿ ಬಳ್ಳಾರಿ ಜಿಲ್ಲೆ ಪಾಳೆಯಗಾರರು ಪುಟ. ೨೧

[20] ಮೆಕಂಜಿ ಇಂಗ್ಲೀಷ್ ದಾಖಲೆ

[21] ಅದೇ.

[22] ಅದೇ.

[23] ವಿರೂಪಾಕ್ಷ ಪೂಜಾರಿಹಳ್ಳಿ ಬಳ್ಳಾರಿ ಜಿಲ್ಲೆ ಪಾಳೆಯಗಾರರು ಪುಟ. ೧೪ ಮತ್ತು ೧೫.

[24] ಮೆಕಂಜಿ ಇಂಗ್ಲೀಷ್ ದಾಖಲೆ

[25] ಅದೇ.

[26] ಪುಟ್ಟಣ್ಣ ಎಂ.ಎಸ್. ಚಿತ್ರದುರ್ಗದ ಪಾಳೆಯಗಾರರು ಪು. ೫೩.

[27] ಅದೇ.

[28] ಮೆಕಂಜಿ ಇಂಗ್ಲೀಷ್ ದಾಖಲೆ

[29] ವಿರೂಪಾಕ್ಷ ಪೂಜಾರಿಹಳ್ಳಿ ಬಳ್ಳಾರಿ ಜಿಲ್ಲೆ ಪಾಳೆಯಗಾರರು ಪುಟ. ೩೧