ಪ್ರಾಚೀನ ಕರ್ನಾಟಕದ ರಾಜಕೀಯ ಮತ್ತು ಸಾಂಸ್ಕೃತಿಕ ಹಿರಿಮೆಯನ್ನು ಹೊತ್ತು ನಿಂತಿದ್ದ ಪ್ರಮುಖ ಸಾಮ್ರಾಜ್ಯಗಳಲ್ಲಿ ವಿಜಯನಗರ ಒಂದಾಗಿತ್ತು. ವಿಶಾಲವಾದ ಈ ಸಾಮ್ರಾಜ್ಯದಲ್ಲಿ ಹಲವಾರು ಪಾಳೆಯಗಾರಿಕಾ ರಾಜ್ಯಗಳು ಅಸ್ತಿತ್ವದಲ್ಲಿದ್ದವು. ಇಂಥವುಗಳಲ್ಲಿ ಕನಕಗಿರಿಯೂ ಒಂದು ಪ್ರಮುಖ ರಾಜ್ಯವಾಗಿತ್ತು.

ಕನಕಗಿರಿ ಪ್ರಸ್ತುತ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿದೆ. ಹಂಪಿಯಿಂದ ದಕ್ಷಿಣಕ್ಕೆ ಮೂವತ್ತೈದು ಕಿ.ಮೀ. ದೂರದಲ್ಲಿರುವ ಕನಕಗಿರಿ ಚಾರಿತ್ರಿಕವಾಗಿ ನಾಯಕರ ಆಡಳಿತ ಕೇಂದ್ರವಾದಂತೆ ಧಾರ್ಮಿಕವಾಗಿ ಶ್ರೀಕನಕಾಚಲ ಲಕ್ಷ್ಮೀನರಸಿಂಹ ದೇವಾಲಯದಿಂದಾಗಿ ಪ್ರಸಿದ್ಧಿ ಹೊಂದಿದೆ. ಕ್ರಿ.ಶ. ೧೫ನೇ ಶತಮಾನದಲ್ಲಿ ವಿಜಯನಗರದರಸರಿಗೆ ಮಾಂಡಲೀಕರಾಗಿ ಇಲ್ಲಿ ಗುಜ್ಜಲವಂಶದ ನಾಯಕಮನೆತನದವರು ಆಡಳಿತ ಪ್ರಾರಂಭಿಸಿದರು. ಕನಕಗಿರಿ ಪಾಳೆಯಗಾರರು ವಿಜಯನಗರದ ರಾಜಸ್ಥಾನದಲ್ಲಿ ಬಲಪಾರ್ಶ್ವದ ಮರ್ಯಾದೆಗಳನ್ನು ಹೊಂದಿದ್ದರೆಂದು ಹೇಳುವ ಮಾತು ಅವರ ರಾಜಕೀಯ ಮಹತ್ವವನ್ನು ಬಿಂಬಿಸುತ್ತದೆ. ಕ್ರಿ.ಶ. ೧೫೬೫ರಲ್ಲಿ ವಿಜಯನಗರ ಪತನಗೊಂಡ ನಂತರ ಕನಕಗಿರಿ ರಾಜ್ಯ ಕೆಲಕಾಲ ಬಿಜಾಪುರದ ಆದಿಲ್‌ಷಾಯಿಗಳಿಗೆ ನಂತರ ಕನಕಗಿರಿ ರಾಜ್ಯ ಕೆಲಕಾಲ ಬಿಜಾಪುರದ ಆದಿಲ್‌ಷಾಯಿಗಳಿಗೆ ನಂತರ ಹೈದರಾಬಾದ್ ನಿಜಾಮನ ಅಧೀನದಲ್ಲಿ ಮುಂದುವರೆದು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತದೆ. ಕ್ರಿ.ಶ. ೧೮೩೩ರಲ್ಲಿ ನಡೆದ ಎಮ್ಮಿಗುಡ್ಡ ಕಾಳಗದಲ್ಲಿ ಕನಕಗಿರಿ ರಾಜ್ಯ ಪತನಗೊಳ್ಳುತ್ತದೆ. ಆದಾಗ್ಯೂ ಈ ವಂಶದ ಕೆಲನಾಯಕರು ಹುಲಿಹೈದರ್ ಸಂಸ್ಥಾನಕ್ಕೆ ಸೀಮಿತರಾಗಿ ಕೆಲಕಾಲ ಆಡಳಿತ ನಡೆಸಿದರು. ಅಂದರೆ ಭಾರತದ ಸ್ವಾತಂತ್ರ‍್ಯ ನಂತರ ೧೯೪೮ರಲ್ಲಿ ನಡೆದ ಹೈದರಾಬಾದ್ ರಾಜ್ಯದ ವಿಮೋಚನೆಯ ವರೆಗೂ ಈ ಮನೆನತದವರು ಅಧಿಕಾರದಲ್ಲಿದ್ದರು. ಕರ್ನಾಟಕದ ಚರಿತ್ರೆಯಲ್ಲಿ ತಲಕಾಡಿನ ಗಂಗರಂತೆ ಸುಮಾರು ಐದು ಶತಮಾನಗಳ ಸುದೀರ್ಘಕಾಲ ಆಡಳಿತ ರಾಜಕೀಯ ಸ್ಥಿತ್ಯಂತರಗಳನ್ನು ಅನುಭವಿಸಿದಾಗ್ಯೂ ನಿರಂತರವಾಗಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡ ಈ ಮನೆತನದಲ್ಲಿ ಸದ್ಯ ತಿಳಿದುಬರುವಂತೆ ಒಟ್ಟು ೧೨ ಜನ ನಾಯಕರು ಆಳ್ವಿಕೆ ನಡೆಸಿದ್ದಾರೆ. ಅವರಲ್ಲಿ ಕ್ರಮವಾಗಿ ಮೊದಲ ಒಂಭತ್ತು ಜನ ಕನಕಗಿರಿಯಿಂದಲೂ, ಉಳಿದ ಮೂವರು ಕನಕಗಿರಿಯನ್ನು ಹೊರತುಪಡಿಸಿ ಪಕ್ಕದ ಹುಲಿಹೈದರ್‌ದಿಂದ ಕನಕಗಿರಿ ಪ್ರದೇಶವನ್ನು ಆಳಿದ್ದಾರೆ.[1]

ಆಕರಗಳು

ಕನಕಗಿರಿ ಪಾಳೆಯಗಾರರ ಚರಿತ್ರೆಯ ಪುನರಾರಚನೆಗೆ ಸಂಬಂಧಿಸಿದಂತೆ ದಾಖಲೆಗಳ ಕೊರೆತ ಇದೆ. ಆದಾಗ್ಯೂ ಕನಕಗಿರಿ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ದೊರೆಯುವ ನಾಯಕರ ಶಿಲಾಶಾನಗಳು[2] ಶೃಂಗೇರಿ ಮಠಕ್ಕೆ ನಾಯಕರು ನೀಡಿದ ಗ್ರಾಮದಾನಗಳ ಮೂರು ತಾಮ್ರ ಶಾಸನಗಳು[3], ಎರಡು ಸನದುಗಳು[4], ಒಂದು ಕೈಫಿಯತ್ತು[5], ಒಂದು ಪತ್ರ[6] ಹಾಗೂ ಸಾಹಿತ್ಯ ಕೃತಿಗಳಾದ ಶಂಕರಕವಿಯ ಶರಣಮೊನಯ್ಯನ ಚರಿತ್ರೆ[7], ಅಪರಾಳ ತಮ್ಮಣ್ಣ ಹಾಗೂ ಶಿರಗುಪ್ಪಿ ಸದಾಶಿವಯ್ಯರ ಶ್ರೀಕೃಷ್ಣಪಾರಿಜಾತನಾಯಕ[8] ಮತ್ತು ಕನಕಗಿರಿಯವರೇ ಆದ ನಾಯಕರ ಕಾಲದಲ್ಲಿದ್ದ ಕವಿ ಜಯವೆಂಕಟಾಚಾರ್ಯರ ದಂಡಕ, ಭಟ್ಟಂಗಿಗಳಿಂದ[9] ನಾಯಕ ಮನೆತನದ ಬಗೆಗೆ ಕೆಲವೊಂದು ಅಂಶಗಳು ತಿಳಿದುಬರುತ್ತವೆ. ಅಲ್ಲದೇ ಸ್ಥಳೀಯವಾಗಿ ಪ್ರಚಲಿತವಿರುವ ಐತಿಹ್ಯಗಳು, ದಂತಕತೆಗಳು, ಮೌಖಿಕ ಮಾಹಿತಿಗಳಿಂದಲೂ ಇವುಗಳನ್ನು ಆದರಿಸಿ ೨೦ನೇ ಶತಮಾನದ ಆರಂಭಿಕ ದಶಕಗಳಲ್ಲಿ ಬರೆದಿರಬಹುದಾದ ಕೆಲವು ಸ್ಥಳೀಯ ಬರವಣಿಗೆಗಳಿಂದಲೂ[10] ನಾಯಕರ ರಾಜಕೀಯ ಹಾಗೂ ಸಾಂಸ್ಕೃತಿಕ ಚರಿತ್ರೆಯ ಬಗೆಗೆ ಕೆಲವು ಸಂಗತಿಗಳನ್ನು ತಿಳಿದುಕೊಳ್ಳಬಹುದು. ಈ ಎಲ್ಲಾ ದಾಖಲೆಗಳ ವ್ಯವಸ್ಥಿತ ಅಧ್ಯಯನ ಹಾಗೂ ಪರಾಮರ್ಶನಗಳಿಂದ ತಿಳಿದುಬರುವಂತೆ ನಾಯಕರ ಇತಿಹಾಸವನ್ನು ಈ ಮುದಿನಂತೆ ನಿರೂಪಿಸಿಬಹುದು.

ನಾಯಕ ವಂಶ ಮತ್ತು ಮೂಲ

ನಾಯಕರು ಶಾನಗಳಲ್ಲಿ ತಮ್ಮನ್ನು ಗುಜ್ಜಲವಂಶೋದ್ಭವ[11]ರೆಂದು ಕರೆದುಕೊಂಡಿದ್ದಾರೆ. ಗುಜ್ಜಲ ‘ಗುಜ್ಜ’ ಶಬ್ದವು ‘ಗುಡ್ಡ’ಗಳನ್ನು[12] ಎಂಬ ಅರ್ಥವನ್ನು ಕೊಡುತ್ತದೆ. ಕನಕಗಿರಿಯ ಸುತ್ತಮುತ್ತಲಿನ ಕೆಲ ಊರುಗಳಲ್ಲಿ ಈಗಲೂ ಗುಜ್ಜಲ ಎಂಬ ಹೆಸರನ್ನು ಹೊಂದಿದ ಮನೆತನದವರಿದ್ದಾರೆ. ಕೃಷಿ ಇವರ ಮುಖ್ಯ ಉದ್ಯೋಗ ಇವರೆಲ್ಲ ಕೆಲವರ ಮನೆದೇವರು ಮಲ್ಲಿಕಾರ್ಜುನ (ಶ್ರೀಶೈಲ) ಇನ್ನು ಕೆಲವರ ಮನೆದೇವರು ವೆಂಕಟೇಶ್ವರ (ತಿರುಪತಿ) ಆದ್ದರಿಂದ ಇಲ್ಲಿ ಗುಜ್ಜಲ ಶಬ್ದಕ್ಕೆ ತೆಲುಗಿನ ಪ್ರಭಾವವಿದ್ದು, ಗುಡ್ಡವೆಂದು ಅರ್ಥವಿರಬಹುದು. ಹಾಗಾಗಿ ಇವರು ಮೂಲತಃ ಆಂಧ್ರದ ಗುಡ್ಡಗಾಡಿನ ಜನರಾಗಿರಬಹುದೆಂದು ತೋರುತ್ತದೆ. ಅಲ್ಲದೆ ಸ್ಥಳೀಯ ದಂತಕತೆಯೊಂದರ ಪ್ರಕಾರ ನಾಯಕರ ಮೂಲ ಪುರುಷನಾದ ಪರಸಪ್ಪನು ತನ್ನ ಅಪಾರ ಪರಿವಾರದೊಂದಿಗೆ ಕನಕಗಿರಿ ಪ್ರದೇಶಕ್ಕೆ ಬಂದು ಬೀಡುಬಿಟ್ಟದ್ದು, ಇದೇ ಸಂದರ್ಭದಲ್ಲಿ ತಿರುಪತಿ ವೆಂಟೇಶ್ವರ ಅವನಿಗೆ ಕನಸಿನಲ್ಲಿ ಕಾಣಿಸಿಕೊಂಡು ಲಕ್ಷ್ಮೀನರಸಿಂಹ ದೇವಾಲಯದ ಸ್ಥಾಪನೆಗೆ ಕಾರಣನಾದ ಸಂಗತಿಯನ್ನು ಕೂಡ ಇಲ್ಲಿ ಗಮನಿಸಬಹುದು.

ಅಲ್ಲದೇ ‘ಗುಜ್ಜ’ ಶಬ್ದಕ್ಕೆ ಮತ್ತೊಂದು ಅರ್ಥ ‘ಕುಳ್ಳು’ ‘ಗಿಡ್ಡ’, ಕುಬ್ಜ[13] ಎಂದು, ಇದೇ ಕನಕಗಿರಿಯಲ್ಲಿರುವ ಈ ನಾಯಕರ ಪೂರ್ಣ ಪ್ರಮಾಣದ ಶಿಲಾಪ್ರತಿಮೆಗಳು ಸಹಜ ರೂಪದಲ್ಲಿರದೇ ಸ್ವಲ್ಪ ಗಿಡ್ಡಾಕೃತಿಯವರಾಗಿದ್ದಿರಬಹುದೆನೊ ಎಂದೆನಿಸುತ್ತದೆ.

ನಾಯಕ ಉಪನಾಮ

ಕನಕಗಿರಿ ಪಾಳೆಯಗಾರರಿಗೆ(ನಾಯಕರಿಗೆ) ವುಡಸಿ, ಉಡಿಶಿ, ಉಡಚ[14] ನಾಯಕರೆಂಬ ಉಪನಾಮವಿದೆ. ಮೇಲೆ ನೋಡಿದ ದಂತಕತೆಯಂತೆ ಪರಸಪ್ಪನು ಕನಕಗಿರಿ ಪ್ರದೇಶಕ್ಕೆ ಬಂದಾಗ ಇಲ್ಲಿ ಉಡಚಲಮ್ಮ ದೇವಾಲಯ(ಕನಕಗಿರಿಯಿಂದ ಉತ್ತರಕ್ಕೆ ೨ ಕಿ.ಮೀ ದೂರದಲ್ಲಿದೆ.)ದ ಬಳಿ ಬೀಡುಬಿಟ್ಟಿದ್ದನಂತೆ ಇವರಿಗೆ ಗುಜ್ಜಲ ಎಂಬ ಮನೆತನದ ಹೆಸರಿದ್ದರೂ ಸ್ಥಳೀಯ ಜನ ಇವರನ್ನು ಗುರುತಿಸುವಾಗ ಉಡಚಲಮ್ಮ[15] ದೇವಾಲಯದ ಹತ್ತಿರ ಇದ್ದಿದ್ದರಿಂದ ಉಡಚನಾಯಕರೆಂದು ಕರೆದಿರುವ ಸಾರ್ಧಯತೆ ಇದೆ.

ನಾಯಕರ ಬಿರುದುಗಳು

ಕನಕಗಿರಿ ನಾಯಕರು ತಮ್ಮನ್ನು ಶ್ರೀಮನ್ ಮಹಾನಾಯಕಾಚಾರ್ಯ, ನಾಯಕ ಶಿರೋ ಮಣಿ[16] ಎಂದು ವರ್ಣಿಸಿಕೊಂಡಿದ್ದಾರೆ. ಇವರಿಗೆ ಯಾವ ಸಂದರ್ಭದಲ್ಲಿ ಮತ್ತು ಯಾವ ಕಾರಣಕ್ಕಾಗಿ ‘ಆಚಾರ್ಯ’ ಮತ್ತು ‘ಶಿರೋಮಣಿ’ ಬಿರುದುಗಳನ್ನು ಧರಿಸಿಕೊಳ್ಳಲು ಸಾಧ್ಯವಾಯಿತೆಂದು ತಿಳಿಯುವುದಿಲ್ಲವಾದರೂ ನಾಯಕ ಜನಾಂಗದಲ್ಲಿ ಇವರ ಶ್ರೇಷ್ಠತ್ವವನ್ನು ಇವು ಬಿಂಬಿಸುತ್ತವೆ. ಈಗಲೂ ಈ ಮನೆತನದ ವಂಶಸ್ಥರನ್ನು ನಾಯಕ ಸಮಾಜದ ಗುರುಗಳೆಂದು ಪರಿಗಣಿಸಲಾಗುತ್ತಿರುವುದು ಗಮನಾರ್ಹ.

ನಾಯಕ ಮನೆತನದ ಐದನೆಯ ದೊರೆಯಾದ ಇಮ್ಮಡಿ ಉಡಚನಾಯಕನ ಕಾಲದಿಂದ ಲಕ್ಷ್ಮಾನಾಗತ್ತಿ (ಲಕ್ಷ್ಮೀನಾಗತಿ)[17] ಎಂದು ನಾಯಕರು ತಮ್ಮ ಹೆಸರಿನ ಜೊತೆಗೆ ಸೇರಿಸಿ ಕೊಂಡಿದ್ದಾರೆ. ಈ ಲಕ್ಷ್ಮೀನಾಗತಿಯ ಬಗ್ಗೆ ಒಂದು ಸ್ಥಳೀಯ ಕಥೆ ಇದೆ. ಲಕ್ಷ್ಮೀನಾಗತಿಯು ಕನಕಗಿರಿಯನ್ನಾಳಿದ ನಾಲ್ಕನೆಯ ದೊರೆ ಕನಕಪ್ಪ ಉಡಚನಾಯಕನ ರಾಣಿ ಇವಳು ಸಾಕ್ಷಾತ್ ಲಕ್ಷ್ಮೀದೇವಿಯ ಸನ್ನಿಧಿಗೆ ಪಾತ್ರಳಾಗಿದ್ದಳಂತೆ ಕನಕಾಚಲಪತಿದೇವರು ಆಗಾಗ್ಗೆ ರಾಜವೇಷದಿಂದ ಅವಳ ಅಂತಪುರಕ್ಕೆ ಹೋಗಿ ರಾಣಿಯೊಡನೆ ಪಗಡೆಯಾಟ ಆಡುತ್ತಿದ್ದನಂತೆ ಒಂದು ದಿನ ರಾಜನು ಇದನ್ನು ಕಂಡು ಅವನನ್ನು ಸಂಹರಿಸಲು ಖಡ್ಗ ಹಿಡಿದುಕೊಂಡು ಬರಲು ಶಂಖ, ಚಕ್ರ, ಗದಾಪಾಣಿಯಾದ ವಿಷ್ಣುವು ದರ್ಶನವಿತ್ತನಂತೆ. ಅಂದಿನಿಂದ ರಾಜನು ತನ್ನ ಪತ್ನಿಯ ವಿಷಯದಲ್ಲಿ ಪೂಜ್ಯಭಾವನೆಯಿಂದ ಇದ್ದನಂತೆ. ಲಕ್ಷ್ಮೀನಾಗತಿಯು ಪ್ರಾಯಶಃ ಇಮ್ಮಡಿ ಉಡಚನಾಯಕರ ತಾಯಿಯಾಗಿರಬಹುದು ಹಾಗಾಗಿ ಅವನು ತನ್ನ ತಾಯಿಯ ಮೇಲಿನ ಗೌರವ ಹಾಗೂ ಪೂಜ್ಯ ಭಾವನೆಯಿಂದ ಆಕೆಯ ಹೆಸರನ್ನು ತನ್ನ ಹೆಸರಿನ ಜೊತೆ ಸೇರಿಸಿಕೊಂಡಿರಬೇಕೆಂದು ತರ್ಕಿಸಬಹುದು. ಇದೇ ಪರಂಪರೆಯನ್ನು ಮುಂದಿನ ಎಲ್ಲಾ ನಾಯಕರು ಮುಂದುವರೆಸಿಕೊಂಡು ಹೋದರು.

ಆರನೆಯ ದೊರೆಯಾದ ಇಮ್ಮಡಿ ಕನಕಪ್ಪ ಉಡಚನಾಯಕನ ಕಾಲದ ಶಾಸನಗಳಿಂದ ರಂಗಪ್ಪನಾಯಕನ ಕಾಲದ ಶಾಸನಗಳವರೆಗೆ ಲಕ್ಷ್ಮಾನಾಗತಿಯ ಹೆಸರಿನ ಜೊತೆಗೆ ರಾಜಾರಾಮ ಜಯಸಿಂಗ ಮುಮ್ಮಡಿ[18] ಎಂಬ ಹೆಸರು ಕೂಡ ಬರುತ್ತದೆ. ಉದಾಹರಣೆಗೆ ಶ್ರೀಮನ್ ಮಹಾನಾಯಕಾಚಾರ್ಯ ನಾಯಕ ಶಿರೋಮಣಿಗಳಾದ ಕನಕಗಿರಿ ಲಕ್ಷ್ಮಾನಾಗತಿ ರಾಜಾರಾಮ ಜಯಸಿಂಗ ಮುಮ್ಮಡಿ ಕನಕಪ್ಪ ಉಡಚನಾಯಕ ಸ್ಥಳೀಯ ಹೇಳಿಕೆಯ ಪ್ರಕಾರ ರಾಜಾರಾಮ ಜಯಸಿಂಗ ಎನ್ನುವುದು ಈ ನಾಯಕರ ಒಂದು ಬಿರುದು. ಆದರೆ ರಾಜಾರಾಮ ಜಯಸಿಂಗ ಒಂದು ಬಿರುದು ಆಗಿರುವ ಸಾಧ್ಯತೆ ಕಡಿಮೆ ಇದು ಒಂದು ವ್ಯಕ್ತಿಯ ಹೆಸರಾಗಿರುವ ಸಾಧ್ಯತೆ ಇದೆ. ಆದರೆ ಈ ವ್ಯಕ್ತಿಯು ನಾಯಕ ಮನೆತನದವನಾಗಿ ಕಾಣುವುದಿಲ್ಲ. ಯಾಕೆಂದರೆ ಈ ಮನೆತನದ ಎಲ್ಲರೂ ಕೂಡಾ ತಮ್ಮ ಹೆಸರಿನ ಕೊನೆಯಲ್ಲಿ ‘ನಾಯಕ’ ಎಂದು ಸೇರಿಸಿ ಕೊಂಡಿದ್ದಾರೆ. ಎರಡನೆಯದಾಗಿ ಇವರ ಹೆಸರುಗಳು ಸಾಮಾನ್ಯವಾಗಿ ಪರಸಪ್ಪ, ಕನಕಪ್ಪ, ರಂಗಪ್ಪ ಎಂದಿದ್ದು, ರಾಜಾರಾಮ ಜಯಸಿಂಗ ಎಂಬ ಹೆರು ಒಬ್ಬ ವ್ಯಕ್ತಿಯಾದಾಗಿದ್ದು, ಈ ವ್ಯಕ್ತಿಯು ನಾಯಕ ಮನೆತನದಕ್ಕೆ ಸೇರಿದವನಾಗಿರದೆ, ಈ ಮನೆನತಕ್ಕೆ ಬಹಳ ಸಹಾಯ ಮಾಡಿದವನಾಗಿರಬಹುದು. ಆದ್ದರಿಂದ ಕೃತಜ್ಞತೆಯಿಂದ ಅವನ ಹೆಸರನ್ನು ತಮ್ಮ ಹೆಸರಿನಲ್ಲಿ ಸೇರಿಸಿಕೊಳ್ಳುವ ಸಂಪ್ರದಾಯ ಶುರುವಾಗಿರುತ್ತದೆಂದು ತೋರುತ್ತದೆ.

ನಾಯಕರ ವಂಶಾವಳಿ

ಕನಕಗಿರಿ ನಾಯಕರ ಮೂಲ ಪುರುಷನ ಬಗೆಗಾಗಲಿ ಇಲ್ಲವೇ ಒಟ್ಟುವಂಶಾವಳಿಯ ಬಗೆಗಾಗಲಿ ಶಾಸನಗಳಿಂದ ತಿಳಿಯುವುದಿಲ್ಲ. ಈ ವಂಶದ ಒಟ್ಟುಮೂರು ನಾಯಕರ ಹೆಸರುಗಳು ಮಾತ್ರ ಶಾಸನಗಳಿಂದ ತಿಳಿದುಬರುತ್ತವೆ. ಅವು ಕಾಲಾನುಕ್ರಮವಾಗಿ ಹೀಗಿವೆ. ೧. ಯಿಮಡಿ(ಇಮ್ಮಡಿ) ಉಡಚನಾಯಕ ೨. ಕನಕಪ್ಪ ಉಡಚನಾಯಕ ೩. ರಂಗ ಅಥವಾ ರಂಗಪ್ಪನಾಯಕ ಕಾಲಮಾನದ ದೃಷ್ಟಿಯಿಂದ ಮೇಲಿನ ಮೂರುಜನ ನಾಯಕರ ಸಂಬಂಧ ಸ್ಪಷ್ಟವಾಗುತ್ತದೆ. ಅಂದರೆ ಕನಕಪ್ಪ ಉಡಚನಾಯಕ, ಇಮ್ಮಡಿ ಉಡಚನಾಯಕನ ಮಗನೆಂದು ನಿರ್ಧರಿಸಬಹುದು ಅದರಂತೆ ರಂಗಪ್ಪನಾಯಕ ಕನಕಪ್ಪನಾಯಕನ ಮಗನೆಂಬುದು ಸ್ಪಷ್ಟ ಇಷ್ಟು ಮಾತ್ರ ನಾಯಕರ ವಂಶಾವಳಿ ಬಗ್ಗೆ ಶಾಸನಗಳಿಂದ ತಿಳಿದುಬರುವ ಸಂಗತಿ ಆದರಂತೆ ಮೇಲೆ ಉಲ್ಲೇಕಿಸಿದ ಸಾಹಿತ್ಯ ಕೃತಿಗಳಿಂದಲೂ ಕೂಡಾ ವಂಶಾವಳಿ ಕುರಿತು ಅಂಥಮಹತ್ವದ ವಿಷಯ ತಿಳಿದುಬಂದಿಲ್ಲ.

ಆದರೆ ಸ್ಥಳೀಯ ದಂತಕತೆಗಳಲ್ಲಿ ಮಾತ್ರ ಕನಕಗಿರಿಯಿಂದಾಳಿದ ಈ ವಂಶದ ಒಂಭತ್ತು ನಾಯಕರ ಉಲ್ಲೇಖವಿದೆ. ಇದರ ಪ್ರಕಾರ ಕನಕಗಿರಿ ಪ್ರದೇಶವನ್ನು ಆಳಲು ಸುರುಮಾಡಿದವನು ಪರಸಪ್ಪನಾಯಕ, ಇವನ ಆಡಳಿತ ಕಾಲದ ಸುಮಾರು ಕ್ರಿ.ಶ. ೧೪೩೬ – ೩೭ರಿಂದ ೧೫೧೦. ಇವನ ನಂತರ ಇವನ ಮಗ, ಮೊಮ್ಮಗ ಮರಿಮೊಮ್ಮಕ್ಕಳಾದ ನವಾಬ ಉಡಚ ನಾಯಕ (ಕ್ರಿ.ಶ.೧೫೧೦ರಿಂದ ೧೫೩೩) ಕೆಲವಡಿ ಉಡಚನಾಯಕ (ಕ್ರಿ.ಶ.೧೫೩೩ ರಿಂದ ೧೫೭೮) ಮತ್ತು ಒಂದನೆಯ ಕನಕಪ್ಪ ಉಡಚನಾಯಕ (ಕ್ರಿ.ಶ.೧೫೭೮ ರಿಂದ ೧೬೧೮) ಆಳ್ವಿಕೆ ನಡೆಸಿದರು. ಕನಕಪ್ಪ ಉಡಚನಾಯಕನ ಮಗನೇ ಇಮ್ಮಡಿ ಉಡಚಪ್ಪನಾಯಕ (ಕ್ರಿ.ಶ. ೧೬೧೮ರಿಂದ ೧೭೦೮) ಮತ್ತು ಇವನ ನಂತರ ಇವನ ಮಗ (ಇಮ್ಮಡಿ) ಕನಕಪ್ಪ ನಾಯಕ (ಕ್ರಿ.ಶ. ೧೭೦೮ ರಿಂದ ೧೭೫೨) ಇವನ ನಂತರ ಇವನ ಮಗ (ಇಮ್ಮಡಿ) ಕನಕಪ್ಪ ನಾಯಕ (ಕ್ರಿ.ಶ. ೧೭೦೮ರಿಂದ ೧೭೫೨) ಮೊಮ್ಮಗ ಹಿರೇರಂಗಪ್ಪನಾಯಕ (ಕ್ರಿ.ಶ. ೧೭೫೨ರಿಂದ ೧೭೮೧) ಕ್ರಮವಾಗಿ ಆಡಳಿತ ನಡೆಸಿದರು ಮೇಲೆ ನೋಡಿದಂತೆ ಈ ಮೂವರ ಬಗ್ಗೆ ಮಾತ್ರ ಶಾಸನಗಳಿಂದ ತಿಳಿದುಬರುತ್ತದೆ. ಹಿರೇರಂಗಪ್ಪನಾಯಕನ ನಂತರ ಮುಮ್ಮಡಿ ಕನಕಪ್ಪ ನಾಯಕ (ಕ್ರಿ.ಶ. ೧೭೮೧ ರಿಂದ ೧೭೮೮) ಮತ್ತು ಹಿರೇನಾಯಕರು (ಕ್ರಿ.ಶ. ೧೭೮೮ರಿಂದ ೧೮೩೩) ಕ್ರಮವಾಗಿ ಆಡಳಿತ ನಡೆಸಿದರು.

ನಂತರ ಮೂರು ಜನನಾಯಕರು ರಂಗನಾಥಪ್ಪನಾಯಕ, ರಂಗಪ್ಪನಾಯಕ ಮತ್ತು ಉಡಚಪ್ಪನಾಯಕ ಹುಲಿಹೈದರ್‌ನಿಂದ ರಾಜ್ಯವಾಳುತ್ತಾರೆ. ಅಂದರೆ ಈ ಹೇಳಿಕೆ ಪ್ರಕಾರ ಗುಜ್ಜಲ ವಂಶದ ನಾಯಕ ಮನೆತನದವರು ಕ್ರಿ.ಶ. ೧೪೩೬ ರಿಂದ ಕ್ರಿ.ಶ. ೧೬೩೩ರವರೆಗೆ ಕನಕಗಿರಿಯಲ್ಲೂ ಮುಂದೆ ಕ್ರಿ.ಶ. ೧೮೩೩ರಿಂದ ಕ್ರಿ.ಶ. ೧೯೪೮ರವರೆಗೆ ಹುಲಿಹೈದರ್‌ದಿಂದಲೂ ಕನಕಗಿರಿ ಪ್ರದೇಶವನ್ನು ಆಳಿದ್ದು ತಿಳಿಯುತ್ತದೆ.

ಈ ವಂಶಾವಳಿಯಲ್ಲಿ ಮೇಲಿನ ಶಾಸನೋಕ್ತ ಮೂರು ನಾಯಕರ ಹೆಸರು ಇದೆ ಅಲ್ಲದೆ ಸ್ಥಳೀಯ ಹೇಳಿಕೆಯಲ್ಲಿಯ ಕಾಲಮಾನ ಮತ್ತು ವಂಶಾವಳಿ ಶಾಸನದಿಂದ ದೊರೆಯುವ ನಾಯಕರ ಕಾಲಮಾನ ಹಾಗೂ ವಂಶಾವಳಿಗೆ ಹೊಂದಿಕೆಯಾಗುತ್ತದೆ. ಆದ್ದರಿಂದ ಸ್ಥಳೀಯ ಹೇಳಿಕೆಗಳನ್ನು ಸಂಪೂರ್ಣವಾಗಿ ದಂತಕತೆಗಳೆಂದು ನಿರ್ಧರಿಸುವಂತಿಲ್ಲ. ಶಾಸನೋಕ್ತ ಮೂವರುನಾಯಕರನ್ನು ಹೊರತುಪಡಿಸಿ ಉಳಿದ ನಾಯಕರ ಬಗ್ಗೆ ಲಭ್ಯ ಸಾಹಿತ್ಯಕ ಕೃತಿಗಳಲ್ಲಿ ಒಂದೆರಡು ಅಂಶಗಳು ಮಾತ್ರ ಪರೋಕ್ಷವಾಗಿ ಗೊತ್ತಾಗುವವು. ಉಳಿದಂತೆ ಈ ಎಲ್ಲಾ ನಾಯಕರ ಕುರಿತಾಗಿ ಕೇವಲ ಸ್ಥಳೀಯ ಹೇಳಿಕೆಗಳು ಪರಂಪರಾನುಗತವಾಗಿ ಬಂದಿವೆ. ಆದ್ದರಿಂದ ಹೇಳಿಕೆಗಳನ್ನು ಇಟ್ಟುಕೊಂಡು ಇತರ ಎಲ್ಲಾ ಪ್ರಕಾರದ ಲಭ್ಯ ಆಧಾರಗಳಿಂದ ತಿಳಿದುಬರುವ ಸಂಗತಿಗಳನ್ನು ಆಯಾ ಅರಸರ ಹೆಸರು ಮತ್ತು ಕಾಲಮಾನಕ್ಕೆ ಹೊಂದಿಸಿಕೊಂಡು ನಾಯಕರ ವೈಯಕ್ತಿಕ ಇತಿಹಾಸವನ್ನು ಸಂಕ್ಷಿಪ್ತವಾಗಿ ಈ ಮುಂದಿನಂತೆ ಸಂಗ್ರಹಿಸಬಹುದು.

ಪರಸಪ್ಪನಾಯಕ (ಕ್ರಿ.. ೧೪೩೬೧೫೧೦)

ಪರಸಪ್ಪನಾಯಕನು ಕನಕಗಿರಿಯ ಗುಜ್ಜಲವಂಶದ ಮೊದಲ ದೊರೆ. ಇವನ ಕುರಿತಾಗಿ ಯಾವುದೇ ಶಾಸನಗಳು ಲಭ್ಯವಿಲ್ಲ ಆದರೆ ಸ್ಥಳೀಯ ದಂತಕತೆಯಲ್ಲಿ ಇವನ ಮೂಲ, ಕಾಲ ಹಾಗೂ ಅಧಿಕಾರಕ್ಕೆ ಬಂದ ಬಗೆಯನ್ನು ಹೇಳಲಾಗಿದೆ. ಇವನು ತನ್ನ ಜನಾಂಗದ ಅನೇಕ ಕುಟುಂಬಗಳೊಡನೆ ಕನಕಗಿರಿ ಪ್ರದೇಶಕ್ಕೆ ಸುಮಾರು ೧೫ನೇ ಶತಮಾನದ ಆರಂಭಿಕ ವರ್ಷಗಳಲ್ಲಿ ಬಂದು ನೆಲೆಸಿದ್ದನು. ಹೀಗಿರಲು ಒಂದು ಘಟನೆ ಜರುಗಿತು. ಪರಸಪ್ಪನ ಹಾಲು ಕರೆಯುವ ಹಸು ಹಠಾತ್ತನೆ ಕೆಲ ದಿನಗಳಿಂದ ಹಾಲು ಕರೆಯವುದನ್ನು ನಿಲ್ಲಿಸಿ ಬಿಟ್ಟಿತು. ಇದರ ಕಾರಣ ಅರಿಯಲು ಆಳುಗಳು ಒಂದು ದಿನ ಆಕಳನ್ನು ಹಿಂಬಾಲಿಸಿದರು. ಆಕಳು ನದಿದಡದಲ್ಲಿರುವ ಒಂದು ಹುತ್ತದ ಮೇಲೆ ಹಾಲ್ಗರೆಯುತ್ತಿತ್ತು. ಇದರಿಂದ ಕುಪಿತರಾದ ಆಳುಗಳು ಗುದ್ದಲಿಯಿಂದ ಹುತ್ತನ್ನು ಅಗೆಯಲು ಹೋದಾಗ ಮೂರ್ಚೆ ಬಂದು ಬಿದ್ದರು. ಈ ಸಂಗತಿಯನ್ನು ಕೇಳಿ ಪರಸಪ್ಪ ಚಿಂತಿತನಾದನು. ಆ ದಿನ ರಾತ್ರಿ ತಿರುಪತಿ ವೆಂಕಟೇಶ್ವರನು ಕನಸಿನಲ್ಲಿ ಕಾಣಿಸಿಕೊಂಡು ತಿರುಪತಿಯಲ್ಲಿ ಅಸ್ಪೃಶ್ಯ ಭಕ್ತರಿಗೆ ದರ್ಶನ ವಿಲ್ಲದ ಕಾರಣ ಆ ಭಕ್ತವೃಂದಕ್ಕೂ ದರ್ಶನವನ್ನಿಯುವ ಉದ್ದೇಶದಿಂದ ನಾನು ಇಲ್ಲಿ ಸಾಲಿಗ್ರಾಮ ರೂಪದಲ್ಲಿ ಅವತರಿಸಿರುವೆ ಎಂದು ಹೇಳಿದನು. ಮರುದಿನ ನದಿ ಪ್ರವಾಹದಿಂದ ಹುತ್ತಕರಗಿ ಸಾಲಿಗ್ರಾಮ ಶಿಲೆ ವ್ಯಕ್ತವಾಯಿತು. ಈ ಸಂಗತಿಯನ್ನು ಪರಸಪ್ಪನು ವಿಜಯನಗರದ ಅರಸ ಪ್ರೌಢದೇವರಾಯನಿಗೆ ಅರುಹಿದನು. ಪ್ರೌಢದೇವರಾಯನು ಈ ಲಕ್ಷ್ಮೀನರಸಿಂಹ ಸಾಲಿಗ್ರಾಮಕ್ಕೆ ದೇವಾಲಯವನ್ನು ನಿರ್ಮಿಸಿ, ನಿತ್ಯಪೂಜೆಗಳನ್ನು ನೆರವೇರಿಸಿಕೊಂಡು ಹೋಗಲು ಪರಸಪ್ಪನಾಯಕನಿಗೆ ಕನಕಗಿರಿ ಗ್ರಾಮವನ್ನು ಉಂಬಳಿ ಹಾಕಿಕೊಟ್ಟನು. ಈ ಹೇಳಿಕೆಯನ್ನು ಹೀಗೆ ಅರ್ಥೈಸಬಹುದು. ಲಕ್ಷ್ಮೀನರಸಿಂಹ ದೇವಾಲಯದ ಸುತ್ತಲಿನ ಕಲ್ಯಾಣ ಚಾಲುಕ್ಯ ಕಾಲದ ದೇವಾಲಯದ ಭಾಗಗಳನ್ನು ಅನುಲಕ್ಷಿಸಿ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಲಕ್ಷ್ಮೀನರಸಿಂಹ ದೇವರಿಗೆ ಒಂದು ಶಿಷ್ಟ ಪ್ರಕಾರದ ದೇವಾಲಯ ನಿರ್ಮಾಣವಾಗಿದ್ದು ಅದು ಪ್ರಾಯಶಃ ಮಲ್ಲಿಕಾಫರನ ದಕ್ಷಿಣದ ದಂಡಯಾತ್ರೆಯಲ್ಲಿ ನಾಶವಾಗಿರಬಹುದು. ಹೀಗೆ ನಾಶವಾದ ದೇವಾಲಯದ ಮೂಲ ಶಾಲಿಗ್ರಾಮವು ಮಣ್ಣಿನಲ್ಲಿ ಮುಚ್ಚಿಹೋಗಿದ್ದು, ಮುಂದೆ ಪರಸಪ್ಪನು ಈ ಪ್ರದೇಶಕ್ಕೆ ಬಂದಾಗ ಆಕಸ್ಮಿಕವಾಗಿ ನದಿ ಪ್ರವಾಹದಿಂದ ಅದು ಹೊರಗೆ ಪ್ರಕಟವಾಗಿ ಅವನ ಗಮನ ಸೆಳೆದಿದೆ. ಈ ಹೊತ್ತಿಗಾಗಲೇ ನಾಯಕ ಜನಾಂಗದ ಮುಖಂಡನಾದ ಪರಸಪ್ಪನು ಕನಕಗಿರಿ ಪ್ರದೇಶದ ಒಬ್ಬ ಪ್ರಭಾವಿ ವ್ಯಕ್ತಿಯಾಗಿ ಬೆಳೆದಿದ್ದನು. ನಂತರ ಅವನು ಪ್ರೌಢದೇವರಾಯನಿಗೆ ವಿಷಯ ಅರುಹಿದ್ದು, ದೇವರಾಯನು ಲಕ್ಷ್ಮೀನರಸಿಂಹದೇವಾಲಯ ನಿರ್ಮಿಸಿ ಅದರ ನಿರ್ವಹಣೆಗಾಗಿ ಬಿಟ್ಟ ಕನಕಗಿರಿ ಗ್ರಾಮದ ಆಡಳಿತವನ್ನು ಪರಸಪ್ಪನಿಗೆ ವಹಿಸಿದ್ದು, ಮುಖ್ಯವಾಗಿ ಈ ಹೇಳಿಕೆಯಿಂದ ತಿಳಿಯುವ ಸಂಗತಿಗಳಾಗಿವೆ. ಪ್ರೌಢದೇವರಾಯನು ಕ್ರಿ.ಶ. ೧೪೩೬ – ೩೭ರಲ್ಲಿ ಕನಕಗಿರಿನಾಥ ದೇವರ ಅಮೃತಪಡಿ ನೈವೇದ್ಯ ಅಂಗರಂಗ ವೈಭೋಗಗಳಿಗೆ ಕನಕಗಿರಿ ಪೇಟೆ ಗ್ರಾಮವನ್ನು ದಾನ ನೀಡಿದ ಬಗ್ಗೆ ಶಾಸನವಿದ್ದು[19] ಪರಸಪ್ಪ ಇದೇಕಾಲದಲ್ಲಿ ಕನಕಗಿರಿಯ ಆಡಳಿತಗಾರನಾಗಿ ನೇಮಕಗೊಂಡಿರಬಹುದೆಂದು ಹೇಳಬಹುದು.

ಪರಸಪ್ಪನಾಯಕ ಕನಕಗಿರಿ ಆಡಳಿತವನ್ನು ಯಶಸ್ವಿಯಾಗಿ ನಡೆಸಿ ಕ್ರಮೇಣ ಪ್ರೌಢದೇವರಾಯನ ವಿಶ್ವಾಸವನ್ನು ಗಳಿಸುತ್ತಾನೆ. ಪ್ರೌಢದೇವರಾಯನ ನಂತರ ನರಸಿಂಹ ದೇವರಾಯ ಕ್ರಿ.ಶ. ೧೪೮೮ರಲ್ಲಿ ಕನಕಗಿರಿನಾಥದೇವರ ಅಮೃತ ಪಡಿಗೆ ಗೋಡಿರಹಾಳ ಮತ್ತು ಖೇಡೆದ ಗ್ರಾಮಗಳನ್ನು ದಾನವಾಗಿ ಸಮರ್ಪಿಸಿದಾಗ ಅವುಗಳ ಆಡಳಿತವು ಕೂಡ ಪರಸಪ್ಪನ ಅಧೀನವಾಯ್ತು. ಪ್ರಾಯಶಃ ಅವನು ಮಹಾನಾಯಕಾಚಾರ್ಯನ ಸ್ಥಾನಮಾನಗಳನ್ನು ಪಡೆದುಕೊಂಡನು. ಇವನು ಕ್ರಿ.ಶ. ೧೫೧೦ರವರೆಗೆ ಆಡಳಿತ ನಡೆಸಿದನು.

ನವಾಬ ಉಡಚಪ್ಪನಾಯಕ (ಕ್ರಿ.. ೧೫೧೦೧೫೩೩)

ಪರಸಪ್ಪ ನಾಯಕನ ನಂತರ ಅವನ ಮಗ ನವಾಬ ಉಡಚನಾಯಕ ಕ್ರಿ.ಶ. ೧೫೧೦ರಲ್ಲಿ ಪಟ್ಟಕ್ಕೆ ಬಂದನು. ಇವನಿಗೆ ‘ನವಾಬ’ನೆಂಬ ಅಭಿದಾನ ಹೇಗೆ ಬಂತೆಂಬುದು ತಿಳಿಯುವುದಿಲ್ಲ. ಇವನ ಜನ್ಮದ ಕುರಿತಾಗಿ ಒಂದು ಕಥೆ ಪ್ರಚಲಿತದಲ್ಲಿದೆ. ಈತನ ತಾಯಿ ಈತನಿಗೆ ಜನ್ಮನೀಡಿದಾಗ ಈ ಶಿಶುವಿಗೆ ಅವಯವಗಳು ನಿರ್ಮಾಣವಾಗಿರದೆ ಕೇವಲ ಮಾಂಸದ ಮುದ್ದೆಯಂತಿತ್ತಂತೆ. ಆಗ ತಂದೆ ಪರಸಪ್ಪ ನಾಯಕನು ಆ ಮಾಂಸದ ಪಿಂಡವನ್ನು ಬಿದಿರು ಬುಟ್ಟಿಯಲ್ಲಿರಿಸಿ ಕನಕಾಚಲಪತಿ ದೇವಾಲಯದ ದೇವರ ಸನ್ನಿಧಿಯಲ್ಲೆ ಏಳು ದಿನ ಇರಿಸಿ ದೇವರನ್ನು ಸುತ್ತಿಸಿದನಂತೆ. ಏಳು ದಿನಗಳಾದ ಮೇಲೆ ಬಾಗಿಲು ತೆಗೆದುನೋಡಲು ಅಲ್ಲಿ ಸುಂದರವಾದ ಕೂಸು ಆಡುತ್ತಿತ್ತಂತೆ. ಮುಂದೆ ದಾಸಿಯರು ಕೂಸನ್ನು ದೇವಾಲಯಕ್ಕೆ ಆಡಲು ಕರೆದುಕೊಂಡು ಬಂದಾಗಲೊಮ್ಮೆ ಲಕ್ಷ್ಮೀದೇವಿಯ ಗರ್ಭಗೃಹದ ಬಾಗಿಲು ಕೊಂಡಿಗಳು ತಾವೆ ಕಳಚಿ ಕೂಸು ಒಳಹೋಗಿ ದವಡೆಯಲ್ಲಿ ಹಾಲು ತುಂಬಿಕೊಂಡು ಬರುತ್ತಿತ್ತಂತೆ. ಆದ್ದರಿಂದ ಇವನು ದೈವಾಂಶ ಸಂಭೂತನೆಂದು ಜನ ಭಾವಿಸಿದ್ದರಂತೆ ಹಿರೇರಂಗಪ್ಪ ನಾಯಕನ (ಕ್ರಿ.ಶ. ೧೭೫೨ – ೧೭೮೧) ಕಾಲದಲ್ಲಿದ್ದ ಜಯವೆಂಕಟಾಚಾರ್ಯರು ರಚಿಸಿರುವ ಒಂದು ಕೃತಿಯಲ್ಲಿ (ಲಕ್ಷ್ಮೇದೇವಿ ಭಟ್ಟಂಗಿ)ಯಲ್ಲಿ ಪರೋಕ್ಷವಾಗಿ ಈ ನಾಯಕನಿಗೆ ಸಂಬಂಧಿಸಿದ ಒಂದು ವಿಷಯವಿದೆ. ‘ನಾಡೋಳು ಹಿಂದಕ್ಕೊಮ್ಮೆ ಹಿರೇಕರ್ತಗೇ ನೀ ಮೊಲೆ ಹಾಲುಣಿಸಿ ರೂಢಿಗೆ ತಂದ….’[20] ಎಂದು ಈ ಪದ್ಯದಲ್ಲಿ ನಾಯಕನ ಹೆಸರಿಲ್ಲದಿದ್ದರೂ ಕೂಡಾ ಇಲ್ಲಿಯ ಸಂದರ್ಭದ ವರ್ಣನೆಯಿಂದ ಸ್ಥಳೀಯ ಕಥೆಯಲ್ಲಿ ಬರುವ ನವಾಬ ಉಡಚಪ್ಪ ನಾಯಕನೆಂದು ಗುರುತಿಸಬಹುದು. ಒಟ್ಟಾರೆ ಇವನ ಬಗ್ಗೆ ಬರುವ ಕಥೆ ದೇವರ ಮಹಿಮೆಯನ್ನು ವರ್ಣಿಸುವುದಕ್ಕೆ ಉತ್ಪ್ರೇಕ್ಷಿಸಲಾಗಿದೆ. ಇವನು ಹುಟ್ಟಿದಾಗ ಇವನಲ್ಲಿ ತಾತ್ಕಾಲಿಕ ದೋಷವಿದ್ದು, ಅದು ಕ್ರಮೇಣ ಪರಿಹಾರವಾಗಿರಬೇಖು. ಇದು ದೇವರ ಮಹಿಮೆಯಿಂದಲೇ ಆಯಿತೆಂದು ಜನರ ಭಾವನೆ ಈ ವಿಷಯ ಸ್ಥಳೀಯ ಹೇಳಿಕೆಯ ಕಥಾವಸ್ತುವಾಗಿದೆ.

ನವಾಬ ಉಡಚಪ್ಪನಾಯಕನ ಕಾಲದಲ್ಲಿ ಕನಕಗಿರಿ ವಿಸ್ತಾರ ಹೊಂದಿತು. ಸುತ್ತಲಿನ ಏಳುವಾಡಿಗಳನ್ನು ಕನಕಗಿರಿಗೆ ಸ್ಥಳಾಂತರಿಸಿ ಕನಕಗಿರಿಯನ್ನು ದೊಡ್ಡ ಗ್ರಾಮವನ್ನಾಗಿ ಮಾಡಿದನು. ಅದಕ್ಕೆ ಸುತ್ತಲೂ ಕೋಟೆಯನ್ನು ನಿರ್ಮಿಸಿದನು. ಇವನ ಆಳ್ವಿಕೆಯ ಸಮದಯಲ್ಲಿ ವಿಜಯನಗರದಲ್ಲಿ ಕೃಷ್ಣದೇವರಾಯನು ಅರಸನಾಗಿದ್ದನು. ಅವನು ಕ್ರಿ.ಶ. ೧೫೧೨ರಲ್ಲಿ ಕನಕಗಿರಿನಾಥದೇವರ ಅಮೃತ ಪಡಿಗೆ ಚಿನ್ನಾಪುರ, ಯಡಗಲ್, ಕಳಸ ಮತ್ತು ಬೈರಾಪುರ ಎಂಬ ಗ್ರಾಮಗಳನ್ನು ದಾನವಾಗಿ ನೀಡಿದನು.[21] ಅವುಗಳ ಆಡಳಿತವು ಈಗ ನಾಯಕರಿಗೆ ಸೇರಿತು. ಕ್ರಮೇಣ ಅವರ ರಾಜಕೀಯ ಅಧಿಕಾರ ವ್ಯಾಪ್ತಿ ಜಾಸ್ತಿಯಾಯಿತು. ನಾಯಕರ ಸ್ಥಾನಮಾನಗಳು ಹೆಚ್ಚಳಗೊಂಡವು. ವಿಜಯನಗರದ ಸಾಮ್ರಾಟರಲ್ಲಿ ನಿಷ್ಠೆ ಹೊಂದಿದ್ದ ಇವರಿಗೆ ರಾಜಾಸ್ಥಾನದಲ್ಲಿ ಬಲಪಾರ್ಶ್ವದ ಮರ್ಯಾದೆಗಳು ದೊರಕಿದವು.

ಕೃಷ್ಣದೇವರಾಯನು ಕೈಗೊಂಡ ಅನೇಕ ನಿರ್ಮಾಣ ಚಟುವಟಿಕೆಗಳು ನವಾಬ ಉಡಚಪ್ಪ ನಾಯಕನ ಮೇಲೂ ಪರಿಣಾಮ ಬೀರಿರಬೇಕು. ಆದ್ದರಿಂದ ಉಡಚಪ್ಪನಾಯಕನು ತನ್ನ ರಾಜಧಾನಿ ಹಾಗೂ ಸುತ್ತಮುತ್ತಲಿನ ಸ್ಥಳಗಳಲ್ಲಿ ಅನೇಕ ದೇವಾಲಯ ಕಟ್ಟಡಗಳನ್ನು ನಿರ್ಮಿಸುತ್ತಾನೆ. ಕನಕಾಚಲಪತಿ ದೇವಾಲಯದ ಬಲಭಾಗದಿಂದ ಪಶ್ಚಿಮದ ಕಡೆಗೆ ಸು. ಒಂದು ಕಿ.ಮೀ. ಉದ್ದದ ನೂರಡಿ ಅಗಲದ ವಿಸ್ತಾರವಾದ ಬೀದಿಯನ್ನು (ರಥಬೀದಿ) ನಿರ್ಮಿಸಿ ಅದರ ಇಕ್ಕೆಲಗಳಲ್ಲಿ ಶಂಕರಲಿಂಗ, ಮಹಿಷಾಸುರ ಮರ್ಧಿನಿ, ವೀರಭದ್ರ, ನಗರೇಶ್ವರ, ಪಂಪಾಪತಿ, ಗಜಲಕ್ಷ್ಮೀ ರೇಣುಕಾದೇವಿ (ಯಲ್ಲಮ್ಮ) ಮಲ್ಲಿಕಾರ್ಜೂನ ಮತ್ತು ಸಂಜೀವಮೂರ್ತಿ ದೇವಾಲಯಗಳನ್ನು ನಿರ್ಮಿಸುತ್ತಾನೆ. ಕನಕಾಚಲ ಪತಿ ದೇವಾಲಯದ ಪ್ರಾಕರ ಕೂಡ ಇವನ ನಿರ್ಮಾಣ.

ರಾಜಧಾನಿ (ಕನಕಗಿರಿ)ಯ ಹೊರಗೆ ನವಲಿಯ ಭೋಗಾಪುರೇಶ, ವೀರಭದ್ರೇಶ್ವರ ದೇವಾಲಯಗಳನ್ನು ಕಟ್ಟಿಸುತ್ತಾನೆ. ಇವನ ಮಹತ್ವದ ನಿರ್ಮಾಣವೆಂದರೆ ಹಂಪಿ ವಿರೂಪಾಕ್ಷ ದೇವಾಲಯದ ಉತ್ತರದಿಕ್ಕಿನ ದ್ವಾರಗೋಪುರ[22] ಈಗಲೂ ಆ ಗೋಪುರಕ್ಕೆ ಕನಕಗಿರಿ ಗೋಪುರವೆಂದೇ ಕರೆಯಲಾಗುತ್ತಿದೆ. ಒಟ್ಟಿನಲ್ಲಿ ಇವನು ವಾಸ್ತು ನಿರ್ಮಾಪಕನು, ಕಲೆ ವಾಸ್ತುಶಿಲ್ಪ ಪ್ರೇಮಿಯೂ ಆಗಿದ್ದನೆಂದೂ, ಸರ್ವಮತಗಳನ್ನು ಸಮಾನವಾಗಿ ಗೌರವಿಸುತ್ತಿದ್ದನೆಂದು ತಿಳಿಯುತ್ತದೆ. ಹಂಪಿಯಲ್ಲಿ ದ್ವಾರಗೋಪುರ ನಿರ್ಮಿಸಿದ ಸಂಗತಿ ಕೃಷ್ಣದೇವರಾಯನಿಗೂ ಇವನಿಗೂ ಒಳ್ಳೆಯ ಸಂಬಂಧವಿದ್ದ ಬಗ್ಗೆ ಹಾಗೂ ವಿಜಯನಗರದ ಆಡಳಿತದಲ್ಲಿ ಪ್ರಭಾವಿ ಪಾತ್ರವನ್ನು ಹೊಂದಿದ್ದನೆಂದು ತಿಳಿಯಬಹುದು. ಇವನ ಕಾಲದಲ್ಲಿ ಸಣ್ಣ ಗ್ರಾಮವಾಗಿದ್ದ ಕನಕಗಿರಿ ಒಂದು ಪಟ್ಟಣವಾಗಿ ಬೆಳೆದು ಆಡಳಿತ ಕೇಂದ್ರವಾಗಿರುವಂತೆ ತೋರುತ್ತದೆ.

ಕೆಲವಡಿ ಉಡಚನಾಯಕ ಕ್ರಿ.. (೧೫೩೩೧೫೭೮)

ಕೆಲವಡಿ ಉಡಚನಾಯಕನು ನವಾಬ ಉಡಚಪ್ಪನಾಯಕನ ಮಗ ಇವನ ವ್ಯಕ್ತಿತ್ವದ ಬಗ್ಗೆ ಸ್ಥಳೀಯ ಹೇಳಿಕೆಯಿಂದಲೂ ತಿಳಿಯುವುದಿಲ್ಲ. ಇವನ ಆಶ್ರಯದಲ್ಲಿ ಆದ ಒಂದೆರಡು ನಿರ್ಮಾಣಗಳು ಮಾತ್ರ ತಿಳಿಯುತ್ತವೆ. ಕೆಲವಡಿ ಉಡಚನಾಯಕನು ಕನಕಗಿರಿಯ ಕನಕಾ ಚಲಪತಿ ದೇವಾಲಯವನ್ನು ವಿಸ್ತರಿಸಿ ಅಂದಗೊಳಿಸಿದನು. ದೇವಾಲಯಕ್ಕೆ ವಿಶಾಲವಾದ ರಂಗಮಂಟಪವನ್ನು ಸೇರಿಸದನು. ಮತ್ತು ಪ್ರಾಕಾರದ ಮೂರು ದ್ವಾರಗೋಪುರಗಳನ್ನು ನಿರ್ಮಿಸಿದನು. ಅಲ್ಲದೆ ಛತ್ರಿನಲ್ಲಿಯ ಚಿತ್ರಕಲೆ ಮತ್ತು ದೇವಾಲಯದಲ್ಲಿಯ ಎಲ್ಲಾ ಗಾರೆ ಶಿಲ್ಪಗಳನ್ನು ಇವನೇ ನಿರ್ಮಿಸಿದ. ಕನಕಾಚಲತಿ ದೇವ ಜಾತ್ರೆ ಮತ್ತು ಉತ್ಸವಗಳ ಏರ್ಪಾಡು ಮಾಡಿ ಎರಡು ದೊಡ್ಡ ರಥಗಳನ್ನು ನಿರ್ಮಾಣಗೊಳಿಸಿದ ಇದನ್ನೆಲ್ಲಾ ಪರಿಶೀಲಿಸಿದರೆ ಇವನಿಗೆ ಕನಕಾಚಲಪತಿ ದೇವರಲ್ಲಿ ವಿಶೇಷ ಭಕ್ತಿ ಇದ್ದದ್ದು ವ್ಯಕ್ತವಾಗುತ್ತದೆ. ಎರಡನೆಯದಾಗಿ ಇವನ ನಿರ್ಮಾಣ ಕಾರ್ಯದಲ್ಲಿ ವ್ಯಾಪಕತೆ ಮತ್ತು ಚಿತ್ರಗಳು, ಈ ಹಲವಾರು ಪ್ರಕಾರಗಳ ಕಾಲಕೃತಿಗೆ ಇವನು ಕಾರಣನಾದನು. ಅಲ್ಲದೇ ಜಾತ್ರೆ ಉತ್ಸವದಂತಹ ಸಾರ್ವಜನಿಕ ಕಾರ್ಯಕ್ರಮಗಳಿಗೆ ವಿಶೇಷ ಪ್ರೋತ್ಸಾಹ ಮತ್ತು ಆಶ್ರಯ ಕೊಟ್ಟನೆಂದು ಹೇಳಬಹುದು.

ಕೆಲವಡಿ ಉಡಚನಾಯಕನು ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಅಂದರೆ ಕ್ರಿ.ಶ. ೧೫೩೩ರಲ್ಲಿ ಅಚ್ಚುತದೇವರಾಯನು ಕನಕಗಿರಿನಾಥದೇವರ ಅಮೃತಪಡಿ, ನೈವೇಧ್ಯ, ಪೂಜೆ ಪುನಸ್ಕಾರ, ದೀಪಾರಾಧನೆ, ಅಂಗರಂಗ ವೈಭೋಗತೇರು ಪಂಚಪರ್ವತಿ ನಿತ್ಯ ನೈಮಿತ್ಯಗಳಿಗಾಗಿ ಇಂಗಳದಾಳ, ಅಚ್ಚುತರಾಯಮಲ್ಲಾಪುರ, ಸಿದ್ದನಹಾಳ ಮತ್ತು ರಾಮಾಪುರ ಗ್ರಾಮಗಳನ್ನು ದಾನವಾಗಿ ನೀಡುತ್ತಾನೆ.[23]

ಇಲ್ಲಿ ಇನ್ನೊಂದು ಸಂಗತಿ ಎಂದರೆ ಶಂಕರಕವಿಯ ಅಪ್ರಕಟಿತ ಶರಣ ಮೊನಯ್ಯನ ಚರಿತ್ರೆ (ಸಂಧಿ – ೬)[24] ಯಲ್ಲಿ ಶರಣ ಮೊನಯ್ಯನ ಕನಕಗಿರಿಗೆ ಭೇಟಿಕೊಟ್ಟ ವಿಷಯವನ್ನು ಪ್ರಸ್ತಾಪಿಸಲಾಗಿದೆ. ಕನಕಗಿರಿಗೆ ಬಂದ ಮೊನಯ್ಯನು ಗ್ರಾಮ ದೇವತೆಯಾದ ಕನಕರಾಯನ ಜೊತೆ ಸಂಭಾಷಣೆ ನಡೆಸುತ್ತಾನೆ ಇದನ್ನು ಕಂಡ ಅರ್ಚಕನು ದೊರೆಸಾನಿ (ರಾಣಿ) ಕೌಟಮ್ಮಳಿಗೆ ತಿಳಿಸುತ್ತಾನೆ. ಯಾರೋ ಮಹಾತ್ಮರಿರಬೇಕೆಂದು ರಾಣಿಯು ಮಗ ಉಡಚನಾಯಕನೊಂದಿಗೆ ಸಕಲ ವೈಭವದೊಂದಿಗೆ ಮಾನಯ್ಯನಲ್ಲಿಗೆ ಬಂದು, ಭಕ್ತಿಯಿಂದ ಪೂಜಿಸಿ ಗೌರವಿಸುತ್ತಾಳೆ. ಸಂಪ್ರೀತನಾದ ಮನಪ್ಪಯ್ಯ ದೊರೆಸಾನಿ ಕೌಟಮ್ಮಳ ಮಗನಾದ ಉಡಚನಾಯಕನಿಗೆ ಭರ್ಚಿ (ಆಯುಧ) ಗಳನ್ನು ಕೊಟ್ಟು ಆಶೀರ್ವಾದಿಸುತ್ತಾನೆ. ಇಷ್ಟು ಸಂಗತಿ ಪುರಾಣದಲ್ಲಿದ್ದರೆ, ಮೊನಯ್ಯನವರ ಕುರಿತಾಗಿ ಬೇರೊಂದು ರೀತಿ ಸ್ಥಳೀಯ ಕಥೆ ಇದೆ. ವಿವಿಧ ಕ್ಷೇತ್ರಗಳನ್ನು ಸಂದರ್ಶಿಸುತ್ತಾ ಕನಕಗಿರಿಗೆ ಆಗಮಿಸಿದ ಮೋನಯ್ಯ ದೊರೆಸಾನಿ ಕೊನಾಟ್ಟೆಮ್ಮನ ಬಹುದಿನದ ವ್ಯಾಧಿಯನ್ನು ನಿವಾರಿಸುತ್ತಾನೆ. ಅದಕ್ಕಾಗಿ ರಾಣಿ ಮೊನಯ್ಯನವರಿಗೆ ಒಂದು ಮಠವನ್ನು ಕಟ್ಟಿಸಿಕೊಡುತ್ತಾಳೆ. ಕನಕಗಿರಿಯಲ್ಲಿ ಈಗಲೂ ಇರುವ ಮೊನಪ್ಪಯನ ಮಠ(ಮಹಂತರ ಮಠ) ಸ್ಥಳೀಯ ಕಥೆಯಲ್ಲಿ ಬರುವ ರಾಣಿ ಕಟ್ಟಿಸಿದ ಮಠವಾಗಿರಬೇಕು.

ಮೋನಯ್ಯನವರ ಕಾಲ ಸುಮಾರು ೧೬ನೆ ಶತಮಾನದ ಮಧ್ಯಬಾಗ ಸ್ವಲ್ಪ ಹೆಚ್ಚು ಕಡಿಮೆ ಈ ಅವಧಿಯಲ್ಲಿಯೇ ಅವರು ಕನಕಗಿರಿಗೆ ಬಂದಿರಬೇಕು. ಈ ಸಂದರ್ಭದಲ್ಲಿ ನವಾಬ ಉಡಚನಾಯಕನ ಆಡಳಿತ ಕೊನೆಗೊಂಡು ಕೆಲವಡಿ ಉಡಚನಾಯಕನ ಆಡಳಿತ ಪ್ರಾರಂಭವಾಗಿತ್ತೇ ಅಥವಾ ಇಲ್ಲವೋ ಅಸ್ಪಷ್ಟ ಆದ್ದರಿಂದ ಇವರೀರ್ವರಲ್ಲಿ ಯಾರ ಕಾಲಕ್ಕೆ ಈ ಸಂತರು ಕನಕಗಿರಿಗೆ ಬಂದರೆಂಬುದು ಸದ್ಯಕ್ಕೆ ತೀರ್ಮಾನಿಸುವುದು ಕಷ್ಟವಾಗುತ್ತದೆ. ಎರಡನೆಯದಾಗಿ ಇವರು ಬಂದ ಸಮಯದಲ್ಲಿ ಆಳುತ್ತಿದ್ದ ನಾಯಕನ ರಾಣಿ ಕಾಟಮ್ಮಳೆಂದು ಇವರಿಬ್ಬರ ಮಗ ಉಡಚಪ್ಪನಾಯಕನೆಂಬುದು ಸ್ಪಷ್ಟವಾಗುತ್ತದೆ. ಈ ಪುರಾವೆಗಳಿಂದ ನಾಯಕರ ವಂಶಾವಳಿಗೆ ಹೆಚ್ಚು ಸೃಷ್ಟಿ ದೊರೆಯುತ್ತದೆ.

ಒಂದನೆಯ ಕನಕಪ್ಪ ಉಡಚನಾಯಕ (ಕ್ರಿ.. ೧೫೭೮೧೬೧೮)

ಕೆಲವಡಿ ಉಡಚನಾಯಕನಿಗೆ ಕನಕಪ್ಪ ಮತ್ತು ವೆಂಕಟಪ್ಪ ಎಂಬ ಇಬ್ಬರು ಮಕ್ಕಳು ಅವರಲ್ಲಿ ಹಿರಿಯವನಾದ ಕನಕಪ್ಪ ಉಡಚನಾಯಕನು ತಂದೆಯ ನಂತರ ಅಧಿಕಾರಕ್ಕೆ ಬರುತ್ತಾನೆ. ಇವನರಾಣಿ ಲಕ್ಷ್ಮೀನಾಗತಿ ಈಕೆ ಮಹಾದೈವಭಕ್ತೆಯಾಗಿದ್ದಳಂತೆ ಹಾಗಾಗಿ ಕನಕಾಚಲಪತಿ ದೇವರು ರಾಜನ ವೇಷದಲ್ಲಿ ಇವಳ ಅಂತಃಪುರಕ್ಕೆ ಬಂದು ರಾಣಿಯೊಡನೆ ಪಗಡೆಯಾಟ ಆಡುತ್ತಿದ್ದನಂತೆ ಇದನ್ನು ಕಂಡ ರಾಜ ತನ್ನ ರಾಣಿಯ ವಿಷಯದಲ್ಲಿ ಗೌರವ ಭಾವ ತಾಳಿದನಂತೆ ಇದಕ್ಕಿಂತ ಹೆಚ್ಚಿನ ವಿಷಯ ಬೇರೆ ಯಾವ ಆಧಾರಗಳಿಂದಲೂ ಇವನ ಬಗ್ಗೆ ತಿಳಿಯುವುದಿಲ್ಲ. ಆದರೆ ಇವನ ಜೀವನದಲ್ಲಿ ಕೂಡ ಒಂದು ವಿಶಿಷ್ಟ ಸಂಗತಿ ಇದೆ. ಅದೇನೆಂದರೆ ಇವನ ಧಮ್ ಪತ್ನಿಯನ್ನು ದೈವಾಂಶ ಸಂಭೂತಳೆಂದು ತಿಳಿಯಲಾಗಿದ್ದು ಇವಳ ಹೆಸರೇ ತರುವಾಯ ಕಾಲದಿಂದ ಅಧಿಕಾರಕ್ಕೆ ಬಂದ ನಾಯಕರುಗಳ ಹೆಸರಿನ ಜೊತೆಗೆ ತಪ್ಪದೆ ಜೋಡಿಸಲಾಯಿತು. ಈ ಸ್ಥಳೀಯ ಮಾಹಿತಿಯು ಶಾಸನದಲ್ಲಿ ನಾಯಕರ ಹೆಸರಿನೊಡನೆ ಉಲ್ಲೇಖಿತವಾದ ಈ ಹೆಸರಿನ ಜೋಡಣೆಯ ಸಂದರ್ಭವನ್ನು ತಿಳಿಯಲು ಸಹಾಯಕವಾಗಿದೆ.

ಕನಕಪ್ಪ ಉಡಚನಾಯಕನು ತೊಂಡೆತೆವರಪ್ಪ ಎಂಬ ಆಂಜನೇಯ ದೇವಾಲಯ ಮತ್ತು ಸೂರ್ಯ ದೇವಾಲಯದ ಮುಂದೆ, ಹಾಗೂ ರಂಗನಾಥ ದೇವಾಲಯದ ಮುಂದೆ ವಿಶಾಲವಾದ ಪುಷ್ಕರಣೆಗಳನ್ನು ನಿರ್ಮಿಸಿದನು. ಇವನ ತಮ್ಮ ವೆಂಕಟಪ್ಪ ನಾಯಕನು ವೆಂಕಟಪತಿ ಭಾವಿ ಎಂದು ಕರೆಯುವ ಆಕರ್ಷಕ ಕಟ್ಟಡವನ್ನು ನಿರ್ಮಿಸಿದ್ದಾನೆ. ಇವನ ಪ್ರತಿಮಾ ಮಂದಿರವು (ವೆಂಕಟಪತಿ ಗುಡಿ) ಅಪೂರ್ಣಗೊಂಡಿದ್ದು, ಪೂರ್ಣಗೊಂಡಿದ್ದರೇ ಅದೊಂದು ಅಪೂರ್ವವಾದ ಸ್ಮಾರಕವಾಗುತ್ತಿತ್ತು.

ಇಮ್ಮಡಿ ಉಡಚನಾಯಕ (ಕ್ರಿ..ಸು. ೧೬೧೮೧೭೦೮)

ಕನಕಪ್ಪ ಉಡಚನಾಯಕನ ನಂತರ ಅವನ ಮಗ ಇಮ್ಮಡಿ ಉಡಚನಾಯಕನು ಪಟ್ಟಾಧಿಕಾರವಹಿಸಿಕೊಂಡನು. ಇವನ ಕುರಿತಾಗಿ ಆರು ಶಿಲಾಶಾಸನಗಳು[25] ಒಂದು ಕೈಫಿಯತ್ತು,[26] ಎರಡು ಪತ್ರಗಳು[27] ದೊರೆಯುತ್ತಿವೆ. ಅವುಗಳಿಂದ ಕೆಲವು ಮುಖ್ಯ ಸಂಗತಿಗಳು ತಿಳಿಯುತ್ತವೆ. ಶಾಸನಗಳಲ್ಲಿ ಇವನನ್ನು ಗುಜ್ಜಲವಂಶೋದ್ಭವ, ಶ್ರೀಮನ್ ಮಹಾನಾಯಕಾಚಾರ್ಯ ನಾಯಕ ಶಿರೋಮಣಿ, ಲಕ್ಷ್ಮೀನಾಗತಿ, ಇಮ್ಮಡಿ ಉಡಚನಾಯಕನನೆಂದು ಕರೆಯಲಾಗಿದೆ.

ಇಮ್ಮಡಿ ಉಡಚನಾಯಕ ಪ್ರಬಲ ದೊರೆಯಾಗಿದ್ದನು. ಇವನ ಕೆಲವು ಮಹತ್ವದ ರಾಜಕೀಯ, ಸೈನಿಕ ಚಟುವಟಿಕೆಗಳು ಗಮನಾರ್ಹವಾಗಿವೆ. ಆಧಾರಗಳಿಂದ ತಿಳಿದುಬರುವಂತೆ ಇವನ ಕಾಲದ ಚಟುವಟಿಕೆಗಳು ಇಂತಿವೆ.

ಬಿಜಾಪುರದ ಆದಿಲ್ಷಾಯಿಯೊಂದಿಗೆ ಯುದ್ಧ (೧೬೫೩)

ಇಮ್ಮಡಿ ಉಡಚನಾಯಕನ ಕಾಲದಲ್ಲಿ ಆಡಳಿತದಲ್ಲಿದ್ದ ಆದಿಲ್‌ಷಾನು ಕನಕಗಿರಿಯನ್ನು ಗೆದ್ದುಕೊಳ್ಳುವ ಉದ್ದೇಶದಿಂದ ಕ್ರಿ.ಶ. ೧೬೫೩ರಲ್ಲಿ ತನ್ನ ಸೇನಾಧಿಪತಿ ಅಫ್‌ಜಲ್‌ಖಾನ್‌ನ ನೇತೃತ್ವದಲ್ಲಿ ಸೈನ್ಯ ಕಳುಹಿಸಿದನು. ಆದರೆ ಸೈನಿಕವಾಗಿ ಸಮರ್ಥನಾಗಿದ್ದ ಇಮ್ಮಡ ಉಡಚನಾಯಕ ಕನಕಗಿರಿ ಕಾಳಗದಲ್ಲಿ ಅಫಜಲ್‌ಖಾನನ್ನು ಸೋಲಿಸಿ ಹಿಮ್ಮೆಟ್ಟಿಸಿದನು.

ಕನಕಗಿರಿಯ ಈ ಯುದ್ಧದಲ್ಲಿ ಅಫ್‌ಜಲ್‌ಖಾನನ ಜೊತೆಗೆ ಬಂದಿದ್ದ ಬಿಜಾಪುರದ ಮತ್ತೊಬ್ಬ ಸೇನಾಪತಿ ಮರಾಠನಾಯಕ ಷಹಜಿಯ ಮಗ ಸಂಭಾಜಿಯು ಹತನಾದನು.[28] ಅವನನ್ನು ಕನಕಗಿರಿಯಲ್ಲಿಯೇ ಸಮಾಧೀ ಮಾಡಲಾಯಿತು.[29]

ಷಹಜಿಯ ದಾಳಿ (೧೬೫೭)

ಚಿಕ್ಕ ಪಾಳೆಯಗಾರಿಕಾ ರಾಜ್ಯದ ಕೈಯಲ್ಲಿ ಸೋತು ಅಡಗಿರಬೇಕು. ಏಕೆಂದರೆ ಷಹಜಿ ಕಂಪ್ಲಿಯಿಂದ ಆದಿಲ್‌ಷಹನಿಗೆ ೧೬೫೭ರಲ್ಲಿ ಬರೆದ ಪತ್ರದನ್ವಯ ಆದಿಲ್‌ಷಹ ಷಹಜಿಗೆ ಕೊಟ್ಟ ಜಾಗೀರುಗಳಲ್ಲಿ ಕನಕಗಿರಿಯೂ ಸೇರಿದ್ದಿತು.

ಇಮ್ಮಡಿ ಉಡಚನಾಯಕನ ಸ್ವಾತಂತ್ರ್ಯ

ಸುರಪುದ ಹಸರಂಗಿ ಪಾಮನಾಯಕನು ಬಿಜಾಪುರದ ಸುಲ್ತಾನನಿಗೆ ಬರೆದ ಪತ್ರದಲ್ಲಿ “ಕಿಲ್ಲೆ ಕಾದಿರದುರ್ಗವು ಬೀಕ್ಷಡೆಆಗಿದೆ. ಕಿಲ್ಲೆಯ ಕೆಳಗಿನ ಹಳ್ಳಿಗಳನ್ನು ಕನಕಗಿರಿಯ ಉಡ್ಚೆ ನಾಯಕನು ತನ್ನ ಸ್ವಾಧೀನ ಮಾಡಿಕೊಂಡಿರುವನು…. ಆದ್ದರಿಂದ ಕಿಲ್ಲೆ ಮಜಕೂರು…. ಸಂಬಂಧಿಸಿದ ಹಳ್ಳಿಗಳನ್ನು ಒಂದು ವರ್ಷಕ್ಕೆ ೫೦೦೦ ಹೊನ್ನು ನಜರಾಣೆ ತೆಗೆದುಕೊಂಡು ನನಗೆ ದಯಪಾಲಿಸಬೇಕು. ನಾನು ಅವುಗಳ ರಕ್ಷಣೆಯನ್ನು ಮಾಡುವೆನು” ಎಂದು ೧೬೭೪ರ ಒಂದು ಪತ್ರದಲ್ಲಿ[30] ಬರೆದುಕೊಂಡಿದ್ದಾನೆ. ಇದರಿಂದ ತಿಳಿದುಬರುವ ಸಂಗತಿಯೆಂದರೆ ೧೬೬೪ರಲ್ಲಿ ಷಹಜಿ ಮರಣಹೊಂದಿದ ನಂತರ ಪುನಃ ಸ್ವತಂತ್ರನಾಗಿ ಸೈನಿಕ ಆಕ್ರಮಣಗಳನ್ನು ನಡೆಸಿರುವುದು. ಅಂಥ ಒಂದು ಆಕ್ರಮಣ ಮೇಲಿನ ಪತ್ರದಲ್ಲಿ ಉಲ್ಲೇಖಿಸಲ್ಪಟ್ಟಿದೆ ಅಂದರೆ ೧೬೭೪ಕ್ಕೆ ಸ್ವಲ್ಪ ಮುಂಚೆ ಇಮ್ಮಡಿ ಉಡಚನಾಯಕನು ದೇವದುರ್ಗ ಜಿಲ್ಲೆಯ ಕೆಳಗಿನ ಹಳ್ಳಿಗಳನ್ನು ವಶಪಡಿಸಿಕೊಂಡಿರಬೇಕು.

[1] ಕನಕಗಿರಿಯ ಚರಿತ್ರೆಯ ಬಗೆಗೆ ಜಯತೀರ್ಥರಾಜಪುರೋಹಿತರು ಚಿಕ್ಕಪುಸ್ತಿಕೆ ಬರೆದಿದ್ದಾರೆ. ನೋಡಿ. ಕನಕಗಿರಿ: ೧೯೭೭, ಐ.ಬಿ.ಹೆಚ್. ಪ್ರಕಾಸನ, ಬೆಂಗಳೂರು. ೧೯೯೪ರಲ್ಲಿ ನಾನು ಕ.ವಿ.ವಿ.ಗೆ ಎಂ.ಫಿಲ್‌ ಪ್ರಬಂಧ (ಕನಕಗಿರಿ ಸ್ಮಾರಕಗಳು ಮತ್ತು ಮೂರ್ತಿಶಿಲ್ಪಗಳು)ದಲ್ಲೂ ಕನಕಗಿರಿ ನಾಯಕರ ಕುರಿತಾಗಿ ವಿವೇಚಿಸಿದ್ದೇನೆ.)

[2] ARIE. 1972, No. B.12 to 30, ಮತ್ತು ಶರಣಬಸಪ್ಪ ಕೋಲ್ಕಾರ ೧೯೯೫, “ಕನಕಗಿರಿ ಪಾಳೆಯಗಾರರ ಹೊಸದಾಗಿ ದೊರೆತ ನಾಲ್ಕು ಶಾಸನಗಳು” ಸ.ಶು. ಕಾಯಕ ೬ – ೩ – ೪, ಹಾಗೂ “ಕನಕಗಿರಿಯ ಆರು ಅಪ್ರಕಟಿತ ಶಾಸನಗಳು” ಸ.ಶು.ಕಾಯಕ ೭ – ೩ – ೪, ೧೯೯೭, ಚಿತ್ರದುರ್ಗ

[3] ಶ್ರೀಮಜ್ಞಗದ್ಗುರು ಶ್ರೀ ಕೂಡ್ಲೀ ಶೃಂಗೇರೀ ಸಂಸ್ಥಾನದ ಪ್ರಾಚೀನ ಲೇಖನ ಸಂಗ್ರಹ (ಭಾಗ – ೧) ೧೯೬೫; ಶ್ರೀ ಕೂಡಲಿ ಕ್ಷೇತ್ರ.)

[4] ಕಪಟರಾಳ ಕೃಷ್ಣರಾವ್; ೧೯೭೭; ಸುರಪುರ ಸಂಸ್ಥಾನದ ಇತಿಹಾಸ, ಬೆಂಗಳೂರು, ಮತ್ತು ಇಟ್ಟಣ್ಣನವರ್, ಆರ್.ಬಿ. ೧೯೮೪, ಶ್ರೀಕೃಷ್ಣಪಾರಿಜಾತ ಒಂದು ಅಧ್ಯಯನ, ಕ.ವಿ.ವಿ.ಗೆ ಸಲ್ಲಿಸಿದ ಪಿಎಚ್‌.ಡಿ. ಪ್ರಬಂಧ, ಧಾರವಾಡ

[5] ಕಪಟರಾಳ ಕೃಷ್ಣರಾವ್. ಅದೇ

[6] Sardesai, G.S. (Ed): 1927. Shivaji Souvenir, Bombay

[7] ಶಂಕರಕವಿಯ ಶರಣಮೋನಯ್ಯನ ಚರಿತ್ರೆ (ಅಪ್ರಕಟಿತ ಹಸ್ತಪ್ರತಿ) ಕನ್ನಡ ಅಧ್ಯಯನ ಪೀಥ, ಕ.ವಿ.ವಿ. ಧಾರವಾಡ.

[8] ಕುಲಕರ್ಣಿ, ಆರ್‌.ಜಿ. (ಸಂ); ೧೯೭೨, ಶ್ರೀಕೃಷ್ಣಪಾರಿಜಾತ, ಮೈಸೂರ ವಿಶ್ವವಿದ್ಯಾನಿಲಯ, ಮೈಸೂರು.

[9] ಜಯತೀರ್ಥ ರಾಜಪುರೋಹಿತ ೧೯೭೨, ‘ಜಯವೆಂಕಟಾಚಾರ್ಯ ಕವಿ’ ಪ್ರಬುದ್ಧ ಕರ್ನಾಟಕ ಸಂ.೩, ಮೈಸೂರ ವಿ.ವಿ. ಮೈಸೂರು.

[10] ಇಂಥ ಕೆಲವು ಹಸ್ತಪ್ರತಿಗಳು ದೊರೆಯುತ್ತವೆ.

[11] ಆಕರ ಕ್ರಮ ಸಂಖ್ಯೆ ೨ರಂತೆ

[12] ಕಿಟೆಲ್‌, ಆರ್.ಎಫ್‌. ೧೮೯೪ ಕನ್ನಡ – ಇಂಗ್ಲಿಷ್‌ಡಿಕ್ಸನರಿ, ಮಂಗಳೂರು

[13] ಕಿಟೆಲ್‌, ಆರ್.ಎಫ್‌. ೧೮೯೪ ಕನ್ನಡ – ಇಂಗ್ಲಿಷ್‌ಡಿಕ್ಸನರಿ, ಮಂಗಳೂರು.

[14] ಕ್ರಮಸಂಖ್ಯೆ ೨ರ ಶಾಸನಗಳ ವರದಿಯಂತೆ

[15] ಕಿಟೆಲ್. ಆರ್.ಎಫ್, ಪೂರ್ವೋಕ್ತ ಉಡಚಲಮ್ಮ ಎಂದರೆ ರೋಗನಿವಾರಕ ದೇವತೆ.

[16] ಕ್ರಮಸಂಖ್ಯೆ ೨ರ ಶಾಸನಗಳು

[17] ಕ್ರಮಸಂಖ್ಯೆ ೨ರ ಶಾಸನಗಳು

[18] ಶ್ರೀ ಮಜ್ಜಗದ್ಗುರು ಶ್ರೀ ಕೂಡ್ಲೀ – ಶೃಂಗೇರಿ ಸಂಸ್ಥಾನದ ಪ್ರಾಚೀನ ಲೇಖನ ಸಂಗ್ರಹ, ಪೂರ್ವೋಕ್ತ

[19] A.R.I.E, 1972, No. B. 127 and 128.

[20] ಜಯತೀರ್ಥ ರಾಜಪುರೋಹಿತ ೧೯೭೨, ಪೂರ್ವೋಕ್ತ

[21] A.R.I.E, 1972, No. B.129

[22] ಶರಣಬಸಪ್ಪ ಕೋಲ್ಕಾರ ೨೦೦೦, ಹಂಪಿ ವಿರೂಪಾಕ್ಷ ದೇವಾಲಯದ ಕನಕಗಿರಿ ಗೋಪುರದ ನಿರ್ಮಾಣ ಕಾಲ, ಕರ್ತೃ ವಿಜಯನಗರ ಅಧ್ಯಯನ ಸಂ.೫, ಮೈಸೂರು

[23] A.R.I.E. 1972, No. B.130

[24] ಶಂಕರ ಕವಿಯ ಶರಣ ಮೋನಯ್ಯನ ಚರಿತ್ರೆ ಪೂರ್ವೋಕ್ತ

[25] ಶರಣಬಸಪ್ಪ ಕೋಲ್ಕಾರ ೧೯೯೬ ಮತ್ತು ೧೯೯೭, ಪೂರ್ವೋಕ್ತ.

[26] ಕಪಟರಾಳ್ ಕೃಷ್ಣರಾವ್, ಪೂರ್ವೋಕ್ತ

[27] ಅದೇ ಮತ್ತು

[28] Srinivasan C.K., 1945, Maratha rule in the Carnatic, Annamalai Unirersity, Annamalai Nagar. p.p. 80 – 81

[29] ೧೯೯೩ರಲ್ಲಿ ನಾನು ಕೈಗೊಂಡ ಕ್ಷೇತ್ರಕಾರ್ಯದಲ್ಲಿ ಕನಕಾಚಲಪತಿ ದೇವಾಲಯದ ಉತ್ತರ ದಿಕ್ಕಿನಲ್ಲಿ ಹಳ್ಳದ ತೀರದಲ್ಲಿ ಈ ಸಮಾದಿ ಪತ್ತೆಯಾಯಿತು.

[30] ಕಪಟರಾಳ್ ಕೃಷ್ಣರಾವ್. ಪೂರ್ವೋಕ್ತ ಪುಟ. ೨೯