ಪ್ರಾಚೀನ ಕಾಲದಲ್ಲಿ ದಕ್ಷಿಣ ಭಾರತವನ್ನು ಅನೇಕ ಅರಸು ಮನೆತನಗಳು ಆಳಿದ್ದು ಎಲ್ಲರಿಗೂ ಗೊತ್ತಿದ್ದ ಸಂಗತಿ. ಅವುಗಳಲ್ಲಿ ಪ್ರಮುಖವಾದದ್ದು ಕಲ್ಯಾಣ ಚಾಲುಕ್ಯವಂಶ. ರಾಷ್ಟ್ರಕೂಟರನ್ನು ಸೋಲಿಸಿ ಇಮ್ಮಡಿ ತೈಲ ಕ್ರಿ.ಶ. ೯೭೬ರಿಂದ ಆಳ್ವಿಕೆ ಆರಂಭಿಸಿದರೆ, ಉಳಿದ ಹನ್ನೆರಡು ಅರಸರು (ಬಾಡದ ಶಾಸನ ಪ್ರಕಾರ) ಕ್ರಿ.ಶ. ೧೧೭೩ರವರೆಗೂ ಆಳಿದ್ದು ಗೊತ್ತಾಗುವುದು. ಗುಲ್ಬರ್ಗಾ ಜಿಲ್ಲೆಯ ಕಲ್ಯಾಣವನ್ನು ಮುಖ್ಯ ಪಟ್ಟಣವನ್ನಾಗಿ ಮಾಡಿ ಆಳಿದ್ದರಿಂದ ಇವರಿಗೆ ಕಲ್ಯಾಣ ಚಾಲುಕ್ಯರೆಂದೇ ಕರೆದರು.

ಹದಿಮೂರು ಜನ ಅರಸರಲ್ಲಿ ಪ್ರಮುಖ ಹಾಗೂ ಪ್ರಖ್ಯಾತ ಅರಸ ಆರನೆಯ ವಿಕ್ರಮಾದಿತ್ಯ. ಕ್ರಿ.ಶ. ೧೦೭೬ರಿಂದ ೧೧೨೬ರವರೆಗೆ ದಕ್ಷಿಣ ಭಾರತದ ಬಹುಭಾಗವನ್ನು ತನ್ನ ಆಳ್ವಿಕೆಯ ತೆಕ್ಕೆಗೆ ತಂದು ಆಳಿದ ಸಮರ್ಥ ಕನ್ನಡ ಅರಸ. ಈ ಅರಸನಿಗೆ ಆರುಮಂದಿ ರಾಣಿಯರು, ಹದಿನಾರು ಉಪಪತ್ನಿಯರು ಒಟ್ಟು ೨೨ಜನರು.

ಮಹಾಮಂಡಳೇಶ್ವರರು ಹದಿನಾಲ್ಕು ಜನರು. ಇವರೆಲ್ಲ ಚಕ್ರವರ್ತಿಯಲ್ಲಿ ಅಚಲ ನಂಬಿಕೆಯುಳ್ಳವರು ಹಾಗೂ ಮಹಾಪರಾಕ್ರಮಿಗಳು. ಬಳ್ಳಾರಿ ಜಿಲ್ಲೆಯಲ್ಲಿ ದೊರೆತ ಶಾಸನಗಳ ಪ್ರಕಾರ ಸುಮಾರು ೨೫ ವರ್ಷ ಕಾಲ ಕಲಚೂರ್ಯರು ಚಾಲುಕ್ಯರ ರಾಜ್ಯಕ್ಕೆ ಒಡೆಯರಾಗಿದ್ದರು.

ನೊಳಂಬವಾಡಿ

ಗಂಗರು ಆಳಿದ ರಾಜ್ಯ ಗಂಡವಾಡಿ ೯೬೦೦೦. ಸಿಂಧರು ಆಳಿದ ಭಾಗಕ್ಕೆ ಸಿಂಧವಾಡಿ ೧೦೦೦, ಗೋವಿಂದವಾಡಿಗಳೆಂದು ಕರೆದಂತೆ, ನೊಳಂಬರು ಆಳಿದ ಪ್ರದೇಶಕ್ಕೆ ನೊಳಂಬಳಿಗೆ ನೊಳಂಬವಾಡಿ ೩೨೦೦೦ ಎಂದು ಕರೆದಿರುವರು. ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಅವರ ಸಾಮ್ರಾಜ್ಯದ ದಕ್ಷಿಣ ಭಾಗದ ಅಂದರೆ ತುಂಗಭದ್ರಾ ನದಿಯ ಆಸುಪಾಸಿನ ಭಾಗಗಳು ನೊಳಂಬವಾಡಿ ೩೨೦೦೦ ಆಗಿದ್ದಿತು. ಈ ನೊಳಂಬವಾಡಿ ೩೨೦೦೦ ದ ಒಂದು ಪ್ರಮುಖ ಉಪವಿಭಾಗವೇ ಕದಂಬಳಿಗೆ ಸಾಸಿರೆಂದು ಪಿ.ವಿ. ಕೃಷ್ಣಮೂರ್ತಿಯವರು ತಿಳಿಸಿರುವರು. ನೊಳಂಬ ಪಲ್ಲವರು ಪೂರ್ವಕ್ಕೆ ಪೆನ್ನಾರು, ಪಶ್ಚಿಮಕ್ಕೆ ಹಗರಿ ನದಿಗಳು ಅನಂತಪುರ, ಚಿತ್ರದುರ್ಗ, ತುಮಕೂರು, ಜಿಲ್ಲೆಗಳನ್ನೊಳಗೊಂಡ ನೊಳಂಬಳಿಗೆ ೧೦೦೦ದ ಮೇಲೆ ರಾಜ್ಯ ಆಳಿದರು. ಹತ್ತನೆಯ ಶತಮಾನದ ಆರಂಭದ ಹೊತ್ತಿಗೆ ಇವರ ಆಡಳಿತ ೩೨೦೦೦ ಜಿಲ್ಲೆ ಆಯಿತು. ತುಮಕೂರು, ಚಿತ್ರದುರ್ಗ ಜಿಲ್ಲೆಗಳ ಜೊತೆ ಬಳ್ಳಾರಿ, ಅನಂತಪುರ, ಕೋಲಾರ, ಬೆಂಗಳೂರು ಜಿಲ್ಲೆಗಳ ಭಾಗಗಳೂ ಒಳಗೊಂಡಿದ್ದವು. ಶಾಸನಗಳಾಧಾರದಂತೆ ಸೇಲಂ ಜಿಲ್ಲೆಯ ಧರ್ಮಪುರಿಯವರೆಗೂ ಇವರ ಆಡಳಿ ಹರಡಿದ್ದಿತು. ಅನಂತಪುರ ಜಿಲ್ಲೆಯ ಮಡಕಸಿರಾ ತಾಲೂಕು ಹೆಂಜೇರು ಅಥವಾ ಹೇಮಾವತಿ ಇವರ ಮೊದಲ ರಾಜಧಾನಿ.

ಗುಂಟೂರು ಜಿಲ್ಲೆ ತೆನಾಲಿ ತಾಲೂಕು ಕೊಲ್ಲೂರು ಗ್ರಾಮದ ಅನಸ್ತೆ (ಅನಂತ) ಭೋಗೇಶ್ವರ ಗುಡಿ ಕ್ರಿ.ಶ. ೧೧೧೫ – ೧೬ರ ಸಂಸ್ಕೃತ ಶಾಸನದಲ್ಲಿ ಕಲ್ಯಾಣ ಚಾಲುಕ್ಯ ತ್ರಿಭುವನ ಮಲ್ಲದೇವ ವಿಕ್ರಮನ ವಿಚಾರವಿದ್ದು, ಪಾಂಡ್ಯರ ವಿಚಾರವಿಲ್ಲ. ಅನಂತಪುರ ಜಿಲ್ಲೆ ಗುತ್ತಿ ತಾಲೂಕು ಉರವಕೊಂಡ ತಾಲೂ ಕಚೇರಿ ಮುಂದಿನ ಕ್ರಿ.ಶ. ೨೫.೧೨.೧೧೦೯ರ ಶಾಸನದಲ್ಲಿ ಚಾಲುಕ್ಯ ಚಕ್ರವರ್ತಿ ತ್ರಿಭುವನಮಲ್ಲನ ಪ್ರಸ್ತಾಪವಿದ್ದು, ಪಾಂಡ್ಯರ ವಿಚಾರಗಳಿಲ್ಲ. ಕಡಪ ಜಿಲ್ಲೆಯ ಜಯಮ್ಮಲಮಡುಗು ತಾಲೂಕು ಶಿವಗುಡಿಯ ಕ್ರಿ.ಶ. ೧೧೨೪ರ ಶಾಸನದಲ್ಲಿ ಚಾಲುಕ್ಯ ಚಕ್ರವರ್ತಿಗೆ ಮಹಾಮಂಡಳೇಶ್ವರ ಆಯ್ತನಚೋಳನಿರುವುದು ಕಂಡುಬರುವುದು. ಇದರಿಂದ ನೊಳಂಬವಾಡಿ ೩೨೦೦೦ ನೊಳಂಬ ಪಲ್ಲವರ ಕಾಲದಲ್ಲಿ ದಕ್ಷಿಣಕ್ಕೆ ಕೋಲಾರ ಹಾಗೂ ಸೆಲಂ ಧರ್ಮಪುರಿಯವರೆಗೆ ವ್ಯಾಪಸಿದ್ದು, ಪಾಂಡ್ಯರ ಕಾಲದಲ್ಲಿ ಕೇವಲ ಚಿತ್ರದುರ್ಗ, ಶಿವಮೊಗ್ಗ, ಚನ್ನಗಿರಿ, ದಾವಣಗೆರೆ, ಬಳ್ಳಾರಿ ಜಿಲ್ಲೆಯ ಪಶ್ಚಿಮಕ್ಕೆ ತುಂಗಭದ್ರಾ ನದಿಯವರೆಗೂ ವ್ಯಾಪ್ತಿಸಿದ್ದುದು ಗೊತ್ತಾಗುವುದು.

ಹೆಂಜೇರು – ಈಗಿನ ಹೇಮಾವತಿ ಸಿದ್ಧೇಶ್ವರ ಗುಡಿ ಕಂಬದ ಶಾಸನದಲ್ಲಿ ನೊಳಂಬರ ವಂಶಾವಳಿಯ ವಿವರವಿದೆ. ನೊಳಂಬರು ತಮ್ಮ ದೇವರು ಸಿದ್ಧೇಶ್ವರನನ್ನು ಸೋಮೇಶ್ವರನನ್ನಾಗಿ ಸ್ಥಾಪಿಸಿದರು. ಅದು ಭೈರವನ ರೂಪದಲ್ಲಿದೆ. ಅದರ ಪೀಠದಲ್ಲಿ ಕುದುರೆ ಚಿತ್ರವಿದೆ. ಇದು ಭೈರವನ ಅರ್ಥಾತ್ ಮೈಲಾರನ ಬಿಂಬ.

ನೊಳಂಬರು ಕಲ್ಯಾಣ ಚಾಲುಕ್ಯರಿಗೆ ನಿಷ್ಠಾರಾಗಿ, ವೈವಾಹಿಕ ಸಂಬಂಧ ಬೆಳೆಸಿ, ಸಾಮಂತರಾಗಿ, ಕ್ರಿ.ಶ. ೯೨೨ರಿಂದ ೧೦೫೪ರವರೆಗೂ ನೊಳಂಬವಾಡಿ ೩೨೦೦೦ ರಾಜ್ಯವನ್ನು ಆಳಿದರು.

ಶಾಸನಗಳ ಪ್ರಕಾರ ನೊಳಂಬವಾಡಿ ೩೨೦೦೦ ರಾಜ್ಯವನ್ನು ಇಡಿಯಾಗಿ ನೊಳಂಬರೇ ಆಳಲಿಲ್ಲ. ಆಗಾಗ್ಗೆ ಕೆಲಭಾಗಗಳಲ್ಲಿ ಕೆಲವಂಶದ ಚಿಕ್ಕ ಚಿಕ್ಕ ಅರಸರೂ ಆಳಿದ್ದುಂಟು, ಅವರು ೧. ಮಹಾಬಲಿ ವಂಶೀಯರು, ೨. ಬ್ರಹ್ಮಾಧಿರಾಯರು ೩. ಮೈದುಂಬರು, ೪. ಗುತ್ತ ವಂಶೀಯರು, ೫. ಕೊಟ್ಟೂರಿನ ಕದಂಬರು ೬. ಸಿಂಧರು.

ನೊಳಂಬರ ಬಳಿಕ ಚಾಲುಕ್ಯ ಚಕ್ರವರ್ತಿಗಳಲ್ಲಿ ಕಾಣಿಸಿಕೊಂಡ ಪ್ರಬಲ ಸಾಮಂತ ಅರಸರು ಎಂದರೆ ಪಾಂಡ್ಯರು, ಇವರು ಉಚ್ಚಂಗಿ ಪಾಂಡ್ಯರೆಂದು ಕರೆಯಲ್ಪಟ್ಟರು.

ಉಚ್ಚಂಗಿ ಪಾಂಡ್ಯರು:

ಪಾಂಡ್ಯರ ಶಾಸನಗಳಲ್ಲಿ ಹೀಗೆ ಹೇಳಿದೆ.

ಯುದ್ವಂ ಶಾಂಬರದ್ಯುಮಣಿ ಸುಭ್ಹಟ ಚೂಡಾಮಣಿ ನಿಜಕುಳ ಕಮಳ ಮಾರ್ತ್ತಂಣ್ಡಂ ಕಾಂಚಿಪುರವರಾಧೀಶ್ವರಂ

ಪಾಂಡ್ಯ ಅರಸರ ಹೆಸರುಗಳು ತಮಿಳು ಭಾಷಾ ಶೈಲಿಯಲ್ಲಿರುತ್ತವೆ. ಉದಾ: ಪಲಮಾಂದ ಪಾಂಡ್ಯ, ಇರುಕ್ಕವೇಳ್, ಸೊಂಚಿ ಪಾಂಡ್ಯ, ಗೊಲೆಯ ಪಾಂಡ್ಯ, ನಾಗಿಯಾಂಡರಸಿ, ಇರುಕ್ಕವೇಲ್ – ವೇಲ್ ಪದದ ಅರ್ಥ ಶೂರ. ಇವುಗಳನ್ನು ಗಮನಿಸಿದರೆ ಪಾಂಡ್ಯರ ಒಂದು ಶಾಖೆ ತಮಿಳುನಾಡಿನ ಕಂಚಿ ಅಥವಾ ಪರಿಸರದಿಂದ ಹೊರಟು ಕರ್ನಾಟಕ ಪ್ರದೇಶದ ಕೊಂಕಣದಲ್ಲಿ ನೆಲೆಸಿ ಚಿಕ್ಕ ರಾಜ್ಯ “ಹೈಹ” ವನ್ನು ಶಿಸುಗಲಿ ಮತ್ತು ಉಳುಮೆಗಳಿಂದ ಆಳಿರುವುದು ಗೊತ್ತಾಗುತ್ತದೆ. ಇವರು ಕೂಡಾ ನೊಳಂಬ ಪಲ್ಲವ ವಂಶದವರೇ ಇದ್ದು ತರುವಾಯ ಕನ್ನಡ ನಾಡಿಗೆ ಆಗಮಿಸಿರಬೇಕು. ಆದರೆ ಇವರು ತಮಿಳುನಾಡಿನಿಂದ ಯಾವಾಗ ಬಂದರು? ಮುಂತಾದ ಖಚಿತ ದಾಖಲೆಗಳು ಈವರೆಗೂ ದೊರಕಿಲ್ಲ. ನೀಲಗುಂದ (ಹರಪನಹಳ್ಳಿ ತಾಲೂಕು) ಮುಕ್ತೇಶ್ವರ ಗುಡಿ ಕ್ರಿ.ಶ. ೨೦.೧.೧೦೭೯ರ ಶಾಸನದಲ್ಲಿ ಮಹಾಮಂಡಳೇಶ್ವರ ತ್ರಿಬುವನಮಲ್ಲ ರಾಯಪಾಂಡ್ಯದೇವನು ನೊಳಂಬವಾಡಿ – ೩೨೦೦೦ ಮತ್ತು ಕಣೆಯಕಲ್ಲು – ೩೦೦ ಪ್ರದೇಶವನ್ನು ಉಳುವ ನೆಲೆವೀಡಿನಿಂದ ಆಳುತ್ತಿದ್ದನು ಎಂದಿದೆ. ಇವರು ನೊಳಂಬ ಪಲ್ಲವರಂತೆ ಕಲ್ಯಾಣ ಚಾಲುಕ್ಯ ಚಕ್ರವರ್ತಿಗಳಲ್ಲಿ ನಿಷ್ಟೆತೋರಿಸಿ ಸಾಮಂತರಾಗಿ, ಮಹಾಮಂಡಲೇರ್ಶವರನಾಗಿ ರಾಜ್ಯವಾಳಿದರು. ತಾವು ಸೂರ್ಯವಂಶದವರು, ತಮ್ಮ ಲಾಂಛನ ಮತ್ಸ್ಯ ಎಂದು ತಿಳಿಸಿರುವರು. ಇವರ ವಂಶಾವಳಿ ಇವರು ಬರೆಯಿಸಿದ ಶಾಸನಗಳಿಂದ ಗೊತ್ತಾಗುವುದು. ಈ ವಂಶಾವಳಿ ಕ್ರಮದಲ್ಲಿ ಸ್ವಲ್ಪ ವ್ಯತ್ಯಾಸ ಕಂಡು ಬರುವುದು. ಆದ್ದರಿಂದ ಸಂಶೋಧಕ ವಿದ್ವಾಂಸರು ತಮಗೆ ದೊರೆತ ಪಾಂಡ್ಯರ ಹಾಗೂ ಹೊಯ್ಸಳರ ಶಾಸನಗಳ ಆಧಾರಗಳಿಂದ ಪಾಂಡ್ಯರ ವಂಶಾವಳಿಯನ್ನು ಈ ಕೆಳಗಿನಂತೆ ಗುರುತಿಸಿರುವರು.

ವಿಜಯ ಪಾಂಡ್ಯ ಅಥವಾ ಕಾಮದೇವನಿಗೆ ಸೇರಿದ ಕಾಲವಿಲ್ಲದ ಬಾಗಳಿಯ ಒಂದು ಸಂಸ್ಕೃತ ಶಾಸನದಲ್ಲಿ ಸಾಮ್ರಜ್ಯಃ ಕತಿನಾಮ – ಹೈಹ”

೧. ಚೇದಿ ರಾಜೋ
೨. ಪಾಂಡಿ ಭೂಪಂ
೩. ಇರುಕ್ಕವೇಳೋ
೪. ಶ್ರೀರಾಯಪಾಂಡೋ – ಸೋಮದೇವಿ – ಮಡದಿ.
ಮಕ್ಕಳು ೧. ಪಂಡಿತ ಪಾಂಡ್ಯ ದೇವ
೨. ವೀರ ಪಾಂಡ್ಯನೃಪಂ.
೩. ವಿಜಯಪಾಂಡ್ಯಸ್ಯ ನೂನಂ

ಶ್ರವಣಬೆಳ್ಗೊಳ ಶಾಸನದಲ್ಲಿ

೧೨೪
೩೨೪
ಕ್ರಿ.ಶ. ೧೧೬೦
೧. ಫಲಮಾಂಡ ಪಾಂಡ್ಯ
೨. ಫಲಕ ಪಾಂಡ್ಯ
೩. ಸೂಂಚಿ ಪಾಂಡ್ಯ
೪. ರಾಯ ಪಾಂಡ್ಯ
೫. ಗೊಲೆಯಪಾಂಡ್ಯ
೬. ಕುಮಾರ ವಿಜಯ ಪಾಂಡ್ಯ

ಕರ್ನಾಟಕ ಪರಂಪರೆ ಸಂಪುಟ೧ದಲ್ಲಿ:

೧. ಮಂಗಯ್ಯ – ಆದಿತ್ಯ ದೇವ
೨. ಚೇದಿ ರಾಜ
೩. ಪಾಂಡ್ಯ
೪. ಪಲಂತನು
೫. ಇರುಕ್ಕವೇಲ್(ತ್ರಿಭುವನಮಲ್ಲ ಪಾಂಡ್ಯ)
೬. ರಾಯ ಪಾಂಡ್ಯ – ಅವನ ಮಕ್ಕಳು:
ಅ. ಪಂಡಿತ ಪಾಂಡ್ಯ; ಆ. ವೀರ ಪಾಂಡ್ಯ; ಇ. ವಿಜಯ – ಕಾಮದೇವ.

ಹುಲ್ಲೂರು ಶ್ರೀನಿವಾಸ ಜೋಯಿಸರ ಪ್ರಕಾರ

೧. ಪಳಿತ ಪಾಂಡ್ಯ – ಕ್ರಿ.ಶ. ೧೦೭೬ – ೧೦೮೩
೨. ಇರುಕ್ಕವೇಲ ಕ್ರಿ.ಶ. ೧೦೮೩ – ೧೧೨೭
೩. ತ್ರಿಭುವನಮಲ್ಲ
ರಾಯ ಪಾಂಡ್ಯ ಕ್ರಿ.ಶ. ೧೧೨೪ – ೧೧೩೮
೪. ಪಂಡಿತ ಪಾಂಡ್ಯ ಕ್ರಿ.ಶ. ೧೧೩೮ – ೧೧೪೩
೫. ವೀರಪಾಂಡ್ಯ ಕ್ರಿ.ಶ. ೧೧೪೩ – ೧೧೬೮
೬. ವಿಜಯ ಪಾಂಡ್ಯ

ಬಳ್ಳಾರಿ ಜಿಲ್ಲೆಯ ಸಾಂಸ್ಕೃತಿ ಇತಿಹಾಸ ಡಾ. ಜೆ.ಎಂ. ನಾಗಯ್ಯನವರು ಬರೆದದ್ದು ಅದರಲ್ಲಿದೆ.

೧. ತ್ರಿಭುವನ ಮಲ್ಲರಾಯಪಾಂಡ್ಯ
೨. ತ್ರಿಭುವನ ಪಾಂಡ್ಯದೇವ
೩. ಮಹಾಮಂಡಳೇಶ್ವರ ವೀರಪಾಂಡ್ಯ – ೧
೪. ಮಹಾಮಂಡಳೇಶ್ವರ ವಿಜಯ ಪಾಂಡ್ಯ – ೧
೫. ತ್ರಿಭುವನ ಮಲ್ಲರಾಯ ಪಾಂಡ್ಯ – ೨
೬. ಜಗದಕಮಲ್ಲಾ ವೀರಪಾಂಡ್ಯ – ೨
೭. ವಿಜಯಪಾಂಡ್ಯ
೮. ಕದಂಬ ವಂಶದ ಜಗದಳ ಪಾಂಡ್ಯ

Some Feudatory families of Medieval Karnataka – A study – By Z.K. Ansari:

೧. ಆದಿತ್ಯ ದೇವ
೨. ಚೇದಿ ರಾಜ.
೩. ಪಲಮಾಂದ ಪಾಂಡ್ಯ – ೧
೪. ಇರುಕ್ಕವೇಲ್.
೫. ರಾಯಪಾಂಡ್ಯ ಅವನ ಮಡದಿ – ಸೋಮದೇವಿ ಅಥವಾ ಸೋವಲದೇವಿ.

ರಾಯ ಪಾಂಡ್ಯನ ಮಕ್ಕಳು

೧. ಪಂಡಿತ ಪಾಂಡ್ಯ – ಮಗ ತೈಲಪ
೨. ವೀರ ಪಾಂಡ್ಯ ಮಡದೀಯರು ೧. ಗಂಗಾದೇವಿ. ೨. ವಿಜಯ ದೇವ
೩. ವಿಜಯ ಪಾಂಡ್ಯ ಅಥವಾ ಕಾಮದೇವ ಅವನ ಮಕ್ಕಳು
೧. ಒಡೆಯ ಅಥವಾ ಉದಯ
೨. ಪಂಡಿತ ಪಾಂಡ್ಯ – ೨
೩. ವಿಜಯ ಪಾಂಡ್ಯ – ೨

ಪ್ರಸ್ತುತ ಲೇಖನ ಪ್ರಕಾರ

೧. ಆದಿತ್ಯದೇವ – ಮಂಗಯ್ಯ(ಪಾಂಡ್ಯ ದೇವ)
೨. ಚೇದಿ ರಾಜ
೩. ಪಲಮಾಂದ ದೇವ ಪಾಂಡ್ಯ – ೧
೪. ಇರುಕ್ಕವೇಲ್ – ಅರ್ಥಾತ್ ಪಲಿತ ಪಾಂಡ್ಯ – ೨
೫. ರಾಯಪಾಂಡ್ಯ – ಮಡದಿ – ಸೋಮದೇವಿ ಅರ್ಥಾತ್ ಸೋಮಲದೇವಿ

ರಾಯ ಪಾಂಡ್ಯನ ಮಕ್ಕಳು

೧. ಪಂಡಿತ ಪಾಂಡ್ಯ (ರಾಜ್ಯ ಆಳಲಿಲ್ಲ)
೨. ವೀರ ಪಾಂಡ್ಯ (ರಾಜ್ಯ ಆಳಿದ)
೩. ವಿಜಯ ಪಾಂಡ್ಯ ಕಾಮದೇವ (ರಾಜ್ಯ ಆಳಿದ)
೪. ವೀರಪಾಂಡ್ಯಯನ ಮಡದಿಯರು ೧. ಗಂಗಾದೇವಿ, ೨. ವಿಜಯದೇವಿ

ವಿಜಯಪಾಂಡ್ಯನ ಮಕ್ಕಳು

೧. ಒಡೆಯ ಉದಯ (ರಾಜ್ಯ ಆಳಲಿಲ್ಲ)
೨. ಪಂಡಿತ ಪಾಂಡ್ಯ ೨ (ರಾಜ್ಯ ಆಳಲಿಲ್ಲ)
೩. ಕುಮಾರ ವಿಜಯ ಪಾಂಡ್ಯ (ರಾಜ್ಯ ಆಳಿದ)

ಮೊದಲ ಪಂಡಿತ ಪಾಂಡ್ಯನ ಮಗ ೧. ತೈಲಪ (ರಾಜ್ಯ ಆಳಲಿಲ್ಲ)

ಜಗದ್ದಳ ಪಾಂಡ್ಯ(ರಾಜ್ಯ ಆಳಿದ)

ಉಜ್ಜಿನಿ ಮತ್ತು ಅಂಬಳಿ ಗುಡಿಗಳ ಶಾಸನಗಳಿಂದ ಜಗದ್ದಳ ಪಾಂಡ್ಯನ ಮಾಹಿತಿ ದೊರಕುತ್ತದೆ. ಕದಂಬ ವಂಶಕ್ಕೆ ಸೆರಿದವನು.

ಉಜ್ಜಿನಿಶಾಸನದಲ್ಲಿ ಇವನನ್ನು ನಳ, ನಹುಷ, ಸಗರಖೇಚರ, ದಿಪೀಪ, ಕಾರ್ತಿವೀರ್ಯಾರ್ಜುನರಿಗೆ ಹೋಲಿಸಿ ಬಣ್ಣಿಸಿವೆ. ಇವನಿಗೂ ಪಾಂಡ್ಯರಿಗೂ ಇದ್ದ ಸಂಬಂಧವನ್ನು ತಿಳಿಸಿಲ್ಲ. ಸೋಮಲದೇವಿ – ಭಿಲ್ಲವ ಅರಸನ ಮಗಳು. ಇವಳು ವಿಕ್ರಮಾದಿತ್ಯನ ಸಹೋದರಿ. ವಿಕ್ರಮಾದಿತ್ಯರು ಇಬ್ಬರು ಕಾಣಿಸಿಕೊಳ್ಳುವರು. ಇವರು ಯಾರು ಎಂದು ಗುರುತಿಸಬೇಕಿದೆ. ಆದಿತ್ಯದೇವನ ಮಗನೇ ಚೇದಿರಾಜ. ಚೇದಿರಾಜನ ಮಗನೇ ಪಲಮಾಂದ ಪಾಂಡ್ಯ. ಪಲಮಾಂದ ಪಾಂಡ್ಯನ ಮಗನೇ ಪಲಿತ ಪಾಂಡ್ಯ ಅರ್ಥಾತ್ ಇರುಕ್ಕವೇಳ್, ಮೊದಲ ಮೂರು ಜನ ಪಾಂಡ್ಯ ಅರಸರ ಹೆಸರುಗಳನ್ನು ಶಾಸನಗಳು ಉಲ್ಲೇಖಿಸಿದರೂ ಅವರ ಆಳ್ವಿಕೆ ಕ್ಷೇತ್ರ “ಹೈಹ” ಪ್ರದೇಶ ಶಿಶುಗಲಿ ಉಳುವ, ರಾಜಧಾನಿ ಎಂದಿಷ್ಟೇ ತಿಳಿಸುತ್ತವೆ. ಹೆಚ್ಚಿನ ವಿವರಗಳು ಲಭ್ಯವಿಲ್ಲ.

ಪಲಿತ ಪಾಂಡ್ಯ (ಇರುಕ್ಕವೇಳ್) – ಕಲ್ಯಾಣ ಚಾಲುಕ್ಯ ಆರನೇ ವಿಕ್ರಮಾದಿತ್ಯನಲ್ಲಿ ಸರ್ವಾಧ್ಯಕ್ಷನಾಗಿದ್ದುದನ್ನು ಶಾಸನ ತಿಳಿಸುತ್ತದೆ. ಚಾಲುಕ್ಯ ರಾಜ್ಯದ ಸೈನ್ಯಾಡಳಿತವನ್ನು ಪೂರ್ಣ ಜವಾಬ್ದಾರಿಯಿಂದ ನಿರ್ವಹಸುವುದಕ್ಕಾಗಿಯೇ ನೊಳಂಬವಾಡಿ ೩೨೦೦೦ ರಾಜ್ಯವನ್ನು ತನ್ನ ಮಗರಾಯ ಪಾಂಡ್ಯನಿಗೆ ಒಪ್ಪಿಸಿ ಅದರ ಮೇಲ್ವಿಚಾರಣೆಯನ್ನು (ಉಸ್ತುವಾರಿಯನ್ನು) ಅವನು ನೋಡಿಕೊಂಡಿರಬೇಕು. ಇದರಿಂದ ತಂದೆ ಮಕ್ಕಳು ಸಂಯುಕ್ತ ಆಳ್ವಿಕೆ ನಡೆಸಿದಂತೆ ಕಂಡುಬರುವುದು.

ಕ್ರಿ.ಶ. ೧೦೨೪ರಲ್ಲಿ ಶ್ರೀ ಮುದ್ಧಣ ದೇವಪ್ಪಯ್ಯ, ಕ್ರಿ.ಶ. ೧೦.೦೭.೧೦೭೦ರಲ್ಲಿ ದಾಮಪ್ಪಯ್ಯ ಉಚ್ಚಂಗಿ ೩೦ನ್ನು ಆಳಿದರೆ ನೊಳಂಬವಾಡಿ ೩೨೦೦೦ವನ್ನು ಪಲ್ಲವ ಪೆರ್ಮಾಡಿ ಆಳುತ್ತಿದ್ದು. ಕ್ರಿ.ಶ. ೩೧.೦೫.೧೨೭೪ರಲ್ಲಿ ಹೊಳಲು ಶಾಸನದಲ್ಲಿ ಗಂಡಾರಾದಿತ್ಯ ಚತುರ್ವೇದಿ ಮತ್ತು ಮಂಗಳರ ವಿಚಾರವಿದೆ. ಕೂಡ್ಲಿಗಿ ತಾಲೂಕು ಹಳ್ಯ ಹನುಮಂತ ದೇವರ ಗುಡಿ ಕ್ರಿ.ಶ. ೧೦೭೫ರ ಶಾಸನದಲ್ಲಿ ಕೋಗಳಿಯನ್ನು ಕದಂಬರ ನಾಚಿದೇವನು ಆಳುವುದು ಗೊತ್ತಾಗುವುದು. ಹೂವಿನಹಡಗಲಿ ಕ್ರಿ.ಶ. ೧೦೭೭ರ ಶಾಸನದಲ್ಲಿ ಚಾಲುಕ್ಯ ತ್ರಿಭುವನಮಲ್ಲ ಗೋವಿಂದವಾಡಿಯನ್ನು ಆಳುತ್ತಿದ್ದಾಗ ಮಹಾಸಾಮಂತ ಘಟ್ಟಿಯರಸ ದಂಡನಾಯಕ ಚಿದ್ದಯ್ಯರ ಹೆಸರುಗಳಿವೆ. ಕ್ರಿ.ಶ. ೧೦೭೭ರ ವರೆಗೂ ಪಾಂಡ್ಯರ ವಿಚಾರ ಉಚ್ಚಂಗಿ ಮತ್ತು ಬಳ್ಳಾರಿ ಭಾಗದಲ್ಲಿ ಕಂಡುಬರುತ್ತಿಲ್ಲ. ಮಹಾಸಾಮಂತ ಘಟ್ಟಿಯರಸನ ವಿಚಾರ ತ್ರಿಭುವನಮಲ್ಲರಾಯ ಪಾಂಡ್ಯನ ಶಾಸನದಲ್ಲಿ ಬರುವುದರಿಂದ ಕ್ರಿ.ಶ. ೧೦೭೭ರ ನಂತರ ಕ್ರಿ.ಶ. ೧೦೭೮ – ೭೯ರಿಂದ ಪಲತಿ ಪಾಂಡ್ಯನ ಆಳ್ವಿಕೆ ಆರಂಭವಾಗಿರಲು ಸಾಧ್ಯ. ಈ ಭಾಗದಲ್ಲಿ ಕ್ರಿ.ಶ. ೧೦೭೯ರ ರಾಯಪಾಂಡ್ಯನ ಶಾಸನವೇ ಮೊದಲನೆಯದು. ಇರುಕ್ಕವೇಲ್ ಅರ್ಥಾತ್ ಪಲಿತ ಪಾಂಡ್ಯನ ಆಳ್ವಿಕೆಯ ಆರಂಭದ ಶಾಸನಗಳು ಈವರೆಗೂ ದೊರೆತಿರಲಿಲ್ಲ. ಇತ್ತೀಚೆಗೆ ದೊರೆತ ಎರಡು ತಾಮ್ರ ಫಲಕ ಶಾಸನಗಳು ಕ.ವಿ.ವಿ.ಹಂಪಿ ಶಸನ ಸಂಪುಟ – ೧ರಲ್ಲಿ ಪ್ರಕಟವಾಗಿರುತ್ತವೆ.

೧. ಕ್ರಿ.ಶ. ೨೫.೧೨.೧೦೮೨
೨. ಕ್ರಿ.ಶ. ೦೩.೦೯.೧೧೨೩

ಇವುಗಳಲ್ಲಿ “ಚಾಲುಕ್ಯ ರಾಜ ತ್ರಿಭುವನಮಲ್ಲನು ಕಲ್ಯಾಪುರದ ನೆಲೆವೀಡಿನಿಂದ ಆಳುತ್ತಿದ್ದಾಗ ಅವನ ಮಹಾಮಂಡಳೇಶ್ವರ ಪಲಿತ ಪಾಂಡ್ಯನು ಬ್ರಾಹ್ಮಣರಿಗೆ ನೀರ್ಗುಂದವನ್ನು ದಾನನೀಡಿದನು. ಈ ಊರು ಕೋಗಳಿ ಐನೂರು ಬಿಕ್ಕಿಗ – ೭೦ರಲ್ಲಿದ್ದಿತು”

ಎರಡನೆಯ ಶಾಸನದಲ್ಲಿ “ಚಾಲುಕ್ಯ ಅರಸ ತ್ರಿಭುವನಮಲ್ಲ ಬನವಾಸಿಯಲ್ಲಿ ತಂಗಿದ್ದಾಗ ಅವನ ಸರ್ವಾಧ್ಯಕ್ಷನಾದ, ಪಲಿತ ಪಾಂಡ್ಯನ ಮಗರಾಯ ಪಾಂಡ್ಯನ ಕೋರಿಕೆಯಂತೆ ಕೃಷ್ಣಪಲ್ಲಿಕವನ್ನು ಬ್ರಾಹ್ಮಣರಿಗೆ ದಾನ ನೀಡಿದನು”

ಇದರಿಂದ ಪಲಿತ ಪಾಂಡ್ಯನು ಚಾಲುಕ್ಯ ಆರನೇಯ ವಿಕ್ರಮನ ಆಳ್ವಿಕೆಯ ಆರಂಭದ ಮರುವರ್ಷ ಕ್ರಿ.ಶ. ೧೦೭೮ – ೭೯ಕ್ಕೆ ತನ್ನ ಆಳ್ವಿಕೆ ಆರಂಭಿಸಿದಂತೆ ಕಂಡುಬರುವುದು. (ತಂದೆ ಮಗನಿಗಿಂತ ವಯಸ್ಸಿನಲ್ಲಿ ಹಿರಿಯ) ಈಗ ದೊರೆತ ಎರಡೂ ಶಸನಗಳಲ್ಲಿ ಎರಡನೇಯ ಶಾಸನ ಗಣನೆಗೆ ತೆಗೆದುಕೊಂಡಲ್ಲಿ ಕ್ರಿ.ಶ. ೧೦೭೯ರಿಂದ ೦೩.೦೯.೧೧೨೩ರವರೆಗೂ ಪಲಿತಪಾಂಡ್ಯ ನೊಳಂಬವಾಡಿಯ ೩೨೦೦೦ ರಾಜ್ಯವನ್ನು ಆಳಿರಲು ಸಾಧ್ಯ.

೧. ಪಲಿತ ಪಾಂಡ್ಯ ಕ್ರಿ.ಶ. ೧೦೭೯ರಿಂದ ೧೧೨೩, ೪೨ವರ್ಷರಾಯಪಾಂಡ್ಯ ತಂದೆಯ ಕೂಡ. ಸಂಯುಕ್ತ ಆಳ್ವಿಕೆ ನಡೆಸಿರಬೇಕು.

೨. ರಾಯ ಪಾಂಡ್ಯನ ಸ್ವತಂತ್ರ ಆಳ್ವಿಕೆ ಕ್ರಿ.ಶ. ೧೧೨೩ರಿಂದ ೧೧೨೯ರ ವರೆಗೆ ೧೬ವರ್ಷಗಳು ಮಾತ್ರ.

೩. ವೀರಪಾಂಡ್ಯ ಕ್ರಿ.ಶ. ೧೧೪೨ ರಿಂದ ೧೧೨೬ರವರೆಗೆ ೨೧ ವರ್ಷ.

೪. ಮೊದಲ ವಿಜಯ ಪಾಂಡ್ಯ ಕಾಮದೇವ ಕ್ರಿ.ಶ. ೧೧೬೪ರಿಂದ ೧೧೯೧, ೨೭ ವರ್ಷಗಳು

೫. ಕುಮಾರ ವಿಜಯ ಪಾಂಡ್ಯ ೨ ಕ್ರಿ.ಶ. ೧೧೯೪ ರಿಂದ ೧೨೦೬ – ೦೭ರ ವರೆಗೆ ೧೨ – ೧೩ ವರ್ಷಗಳು ಹಿರೇಕುರುತ್ತಿ ಶಾಸನದ ಪ್ರಕಾರ

ಕ್ರಿಸ್ತಶಕ ೨೫.೧೨.೧೦೮೭ ಮತ್ತು ಕ್ರಿಸ್ತಶಕ ೩.೯.೧೧೨೩ರ ಎರಡು ತಾಮ್ರ ಶಾಸನ ಮೂರು ಹಲಗೆಗಳು ವರಾಹ ಮುದ್ರೆ ಕ್ರಿಸ್ತಶಕ ೨೫.೧೨.೧೦೮೭ ಮತ್ತು ಕ್ರಿಸ್ತಶಕ ೩.೯.೧೧೨೩ರಲ್ಲಿ ನೀರ್ಗುಂದ ಗ್ರಾಮ ಮತ್ತು ಕೃಷ್ಣ ಪಲ್ಲಿಕಗಳನ್ನು ಮಗ ರಾಯ ಪಾಂಡ್ಯನ ಕೋರಿಕೆಯಂತೆ ಪಲಿತ ಪಾಂಡ್ಯನು ಬ್ರಾಹ್ಮಣರಿಗೆ ದಾನ ನೀಡುವನು. ಮಗನ ಕೋರಕೆಯಂತೆ ಎಂದಿದ್ದರಿಂದ ಪಲಿತ ಪಾಂಡ್ಯನೇ ಅರಸ ಎಂದು ತಿಳಿಯುತ್ತದೆ. ಎರಡನೆಯದಾಗಿ ಕಲ್ಯಾಣ ಚಾಲುಕ್ಯರಲ್ಲಿ ಪಲಿತ ಪಾಂಡ್ಯ ಸರ್ವಾಧ್ಯಕ್ಷನಾಗಿದ್ದುದರಿಂದ ನೊಳಂಬವಾಡಿ ೩೨೦೦೦ ರಾಜ್ಯವನ್ನು ನೋಡಿಕೊಳ್ಳಲು ಮಗ ರಾಯಪಾಂಡ್ಯನನ್ನು ನೇಮಿಸಿದಂತೆ ಕಂಡುಬರುತ್ತದೆ.

ಶಾಸನಗಳಲ್ಲಿ ಒಬ್ಬ ಅರಸನಿಗೆ ಹಲವು ಹೆಸರುಗಳು ಕಂಡುಬರುವುವು: –

೧. ಸೊಂಚಿ ಪಾಂಡ್ಯ
ಇರುಕ್ಕವೇಳ್ – ವೇಲ್ ಒಬ್ಬ ಅರಸ
ಪಲಿತಪಾಂಡ್ಯ – ಪೊಂಡಿ – ಪಾಂಡ್ಯ

೨. ತ್ರಿಭುವನ ಪಾಂಡ್ಯ
ತ್ರಿಭುವನ ಮಲ್ಲ ಪಾಂಡ್ಯ
ತ್ರಿಭುವನ ಮಲ್ಲ ಪಾಂಡ್ಯರಸ ಒಬ್ಬ ಅರಸ
ತ್ರಿಭುವನ ಮಲ್ಲ ಪಾಂಡ್ಯದೇವ
ತ್ರಿಭುವನ ಮಲ್ಲ ರಾಯಪಾಂಡ್ಯ

೩. ಗೊಲೆಯ ಪಾಂಡ್ಯ
ವೀರ ಪಾಂಡ್ಯ ಒಬ್ಬ ಅರಸ
ಜಗದೇಕಮಲ್ಲ ವೀರಪಾಂಡ್ಯ
ತ್ರಿಭುವನಮಲ್ಲ ವೀರಪಾಂಡ್ಯ

೪. ವಿಜಯ ಪಾಂಡ್ಯ – ೧
ಕಾಮದೇವ ಒಬ್ಬ ಅರಸ
ವಿಜಯ ಪಾಂಡ್ಯರಸ

೫. ಕುಮಾರ ವಿಜಯ ಪಾಂಡ್ಯ – ೨

೧. ಶಿಶುಗಲಿ ೨. ಉಳುಮೆ ೩. ಬೆಳ್ತೂರು – ಬೇಲೂರು ೪. ಉಚ್ಚಂಗಿದುರ್ಗ ಅವರ ರಾಜಧಾನಿಗಳು

ಪಾಂಡ್ಯ ಅರಸರಲ್ಲಿ ರಾಜ್ಯವಾಳದವರು

೧. ಪಂಡಿತ ಪಾಂಡ್ಯ – ೧
೨. ತೈಲಪ (ಪಂಡಿತ ಪಾಂಡ್ಯನ ಪುತ್ರ)
೩. ಉದಯ (ಕಾಲದೇವನ ಪುತ್ರ)
೪. ಪಂಡಿತ ಪಾಂಡ್ಯ – ೨ (ಕಾಮದೇವನ ಪುತ್ರ)

೧. ಕ್ರಿ.ಶ. ೧೧೧೬ರಲ್ಲಿ ಹೊಯ್ಸಳರಿಗೂ ಪಾಂಡ್ಯರಿಗೂ ದುಮ್ಮಿಬಳಿ ನಡೆದ ಕದನದಲ್ಲಿ ತ್ರಿಭುವನಮಲ್ಲ ರಾಯಪಾಂಡ್ಯ ಕೊಲ್ಲಲ್ಪಟ್ಟನೆಂದು ಡಾ. ಬಿ.ಆರ್. ಗೋಪಾಲರು ಹೇಳುವರು. ಆದರೆ ತ್ರಿಭುವನ ಮಲ್ಲ ರಾಯಪಾಂಡ್ಯ ಈ ಕದನ ನಡೆದ ಬಳಿಕ ಮುಂದುವರಿದ ಅನೇಕ ಶಾಸನಗಳು ಕ್ರಿ.ಶ. ೧೧೨೬ರವರೆಗೂ ಹರಪನಹಳ್ಳಿ ತಾಲೂಕಿನಲ್ಲಿ ಮತ್ತು ದಾವಣಗೆರೆ ದುರ್ಗಾಂಬಿಕಾ ದೇವಾಲಯಗೋಡೆ ಶಾಸನ ಕ್ರಿ.ಶ. ೧೧೩೯ ಕಾಣಬಹುದು.

೨. ಎರಡನೆಯದಾಗಿ ಹರಪನಹಳ್ಳಿ ತಾಲೂಕು ಚಟ್ನಿಹಳ್ಳಿ ಕಲ್ಲೇಶ್ವರ ಗುಡಿ ಕ್ರಿ.ಶ.೧೧೧೬ರ ವೀರ ಪಾಂಡ್ಯನ ಶಾಸನದಲ್ಲಿ ಅಜೇಯ ರಾಯಪಾಂಡ್ಯ ಮತ್ತು ರಾಣಿ ಸೋಮಲದೇವಿಗೆ ಪುಣ್ಯವಾಗಲೆಂದು ನೊಯ್ಯೇಶ್ವರ ದೇವರ ಸತ್ರಕ್ಕೆ ದಾನ ಬಿಟ್ಟ ಉಲ್ಲೇಖವಿದೆ.

ಮೇಲೆ ತಿಳಿಸಿದ ಈ ಉದಾಹರಣೆಗಳು ತ್ರಿಭುವನಮಲ್ಲ ರಾಯಪಾಂಡ್ಯ ಕ್ರಿ.ಶ. ೧೧೧೬ ರಲ್ಲಿ ದುಮ್ಮಿ ಬಳಿ ನಡೆದ ಕದನದಲ್ಲಿ ಕೊಲ್ಲಲ್ಪಟ್ಟಿಲ್ಲ ಎಂಬುದನ್ನು ಸಾಬೀತುಪಡಿಸುತ್ತವೆ.

ಕ್ರಿ.ಶ. ೧೧೯೧ರಲ್ಲಿ ಸೊರಟೂರಿನಲ್ಲಿ ಹೊಯ್ಸಳರಿಗೂ ಸೇವುಣರಿಗೂ ಯುದ್ಧ ಸುಭವಿಸಿತು. ಸೇವುಣರ ಸೈನ್ಯ ಸೋತು ಲಕ್ಕುಂಡಿ ಕೋಟೆಯನ್ನು ಸೇರಿತು. ಹೊಯ್ಸಳರು ಅಲ್ಲಿಗೂ ಹೋಗಿ ಕೋಟೆಯನ್ನು ಮುತ್ತಿದರು. ಸೋತ ಸೇವುಣರು ಪಲಾಯನ ಮಾಡುತ್ತಿದ್ದರು. ಶತ್ರು ಸೈನ್ಯ ಅವರ ಮೇಲೆ ಬಿದ್ದು ಅವರನ್ನು ಕೊಂದಿತು. ಇದರಲ್ಲಿ ಸೇವುಣರ ಮತ್ತು ಅವರ ಪರ ಹೋರಾಡುತ್ತಿದ್ದ ಅನೇಕ ಯುದ್ಧವೀರರು ಕೊಲ್ಲಲ್ಪಟ್ಟರು. ಅವರಲ್ಲಿ ರಾಜ ಭಿಲ್ಲಮ, ದಂಡನಾಯಕ ಜೈತುಗಿ, ಉಚ್ಚಂಗಿ ಪಾಂಡ್ಯ ಕಾಮದೇವ ಮತ್ತು ಅವನ ಮಗ ಉದಯ ಇದ್ದರು (ಎರಡನೆಯ ವೀರಬಲ್ಲಾಳನ ಕಾಲ ಕ್ರಿ.ಶ.೧೧೭೩ – ೧೨೨೦) ಬಾಗಳಿ ಕಲ್ಲೇಶ್ವರ ಗುಡಿ ಆವರಣದ ಕ್ರಿ.ಶ. ೧೦.೧೧.೧೧೯೩ರ ಒಂದು ಶಾಸನದಲ್ಲಿ ಎರಡನೆಯ ವೀರಬಲ್ಲಾಳನು ಬಾಳ್ಗುಳಿ ನೆಲೆವೀಡಿನಲ್ಲಿದ್ದು ಕಲ್ಲೇಶ್ವರ ದೇವರಗುಡಿ ಜೀರ್ಣೋದ್ಧಾರಕ್ಕೆ ನಂದಿಬೇವೂರು ಸಮಸ್ತ ಭೂಮಿದಾನ ಮಾಡಿದ್ದು ಅದರಲ್ಲಿ ಪಾಂಡ್ಯ ಅರಸರ ಪ್ರಸ್ತಾಪವಿಲ್ಲ. ಇದು ಕಾಮದೇವ ಮಡಿದದ್ದು ದೃಢಪಡಿಸುತ್ತದೆ. ಚೋಳರು ಉಚ್ಚಂಗಿ ಕೋಟೆಯನ್ನು ಹನ್ನೆರಡು ವರ್ಷಗಳ ಕಾಲ ಮುತ್ತಿದರೂ ಅದನ್ನು ವಶಪಡಿಸಿಕೊಳ್ಳಲು ಆಗಲಿಲ್ಲ. ಹೊಯ್ಸಳರ ದೊರೆ ಇಮ್ಮಡಿ ಬಲ್ಲಾಳನು ಅದನ್ನು ಗೆದ್ದು ವೀರ ಪಾಂಡ್ಯನ ಮೇಲಿನ ಗೌರವದಿಂದ ಉಚ್ಚಂಗಿಯನ್ನು ಅವನಿಗೆ ಹಿಂದಿರುಗಿಸಿದನು. ಬಳಿಕ ಪಾಂಡ್ಯರ ಕೊನೆ ಅರಸ ಕುಮಾರ ವಿಜಯ ಪಾಂಡ್ಯದೇವನು ೧೧೯೪ರಿಂದ ಇಮ್ಮಡಿ ವೀರಬಲ್ಲಾಳನ ಸಾಮಂತನಾಗಿ ನೊಳಂಬವಾಡಿ ಕೆಲ ಪ್ರದೇಶವನ್ನು ಆಳಿದಂತೆ ಕಂಡು ಬರುತ್ತದೆ.

ಹಿರೇಕುರುವತ್ತಿ ಮಲ್ಲಿ ಕಾರ್ಜುನ ಗುಡಿ ಕ್ರಿ.ಶ. ೧೨೦೬ – ೦೭ರ ಹೊಯ್ಸಳರ ಶಾಸನದಲ್ಲಿ ಉಚ್ಚಂಗಿಯ ಪಾಂಡ್ಯದೇವನ ಅನುಮತಿಯಂತೆ ಮುಕ್ಕರಬ್ಬೆ ಗ್ರಾಮವನ್ನು ಅಹಮಲ್ಲೇಶ್ವರ ದೇವರ ಪೂಜಾ ಕಾರ್ಯಕ್ಕೆ ಅರಸ ದಾನ ಮಾಡಿದ್ದು ತಿಳಿಯುವುದು. ಆದರೆ ಯಾವ ಪಾಂಡ್ಯ? ಅವನ ಹೆಸರು ಉಲ್ಲೇಖವಾಗಿಲ್ಲ.

ಹರಪನಹಳ್ಳಿಯಿಂದ ಹೂವಿನಹಡಗಲಿಗೆ, ಹರಪನಹಳ್ಳಿಯಿಂದ ಉಚ್ಚಂಗಿದುರ್ಗಕ್ಕೆ ಮಲೆಬೆನ್ನೂರಿನಿಂದ ಶಿವಮೊಗ್ಗಕ್ಕೆ ಪ್ರಯಾಣ ಮಾಡು ರಸ್ತೆಗಳಲ್ಲಿ ಒಂದೊಂದು ದೊರಕುವುವು. ಅವುಗಳಿಗೆ ಕುಮಾರಹಳ್ಳಿ – ಕೊಮಾರನಹಳ್ಳಿಗಳೆಂದು ಕರೆಯುವರು. ಇವು ಪಾಂಡ್ಯರ ಕೊನೆ ಅರಸಕುಮಾರ ವಿಜಯಪಾಂಡ್ಯ ಹೆಸರಿನಲ್ಲಿ ಸ್ಥಾಪನೆ ಆಗಿರುವುದಾಗಿ ನಮ್ಮ ಭಾಗದ ವಯೋವೃದ್ಧರು ಹೇಳುವರು.

ಬಾಗಳಿಯ ಸಂಸ್ಕೃತಿ ಶಾಸನದಲ್ಲಿ ಕಾಲದ ಉಲ್ಲೇಖವಿಲ್ಲ. ಸಂಕ್ಷಿಪ್ತವಾಗಿ ಪಾಂಡ್ಯರ ವಂಶಾವಳಿಯನ್ನು ತಿಳಿಸುವುದು. ಶ್ರವಣಬೆಳ್ಗೊಳ ಶಾಸನ ಪಾಂಡ್ಯ ಅರಸರ ಮೂಲ ಹೆಸರುಗಳನ್ನು ವಿವರಿಸಿದೆ. ಕರ್ನಾಟಕ ಪರಂಪರೆ ಸಂಪುಟ ಒಂದರಲ್ಲಿ ಇರುಕ್ಕೆವೇಲ್ ಎಂಬ ಹೆಸರಿನ ತ್ರಿಭುವನ ಮಲ್ಲಪಾಂಡ್ಯ ನೊಳಂಬವಾಡಿಯನ್ನು ಆಳಿದ ಎಂದಿದೆ. ಅದರಲ್ಲಿ ಕ್ರಿ.ಶ. ೧೦೮೩ ಕ್ರಿ.ಶ ೧೧೦೧, ಕ್ರಿ.ಶ. ೧೧೧೩ ಶಾಸನಗಳನ್ನು ಉಲ್ಲೇಖಿಸಿದೆ. ಈ ಶಾಸನಗಳ ಅವಧಿಯಲ್ಲಿ ಕಾಣಿಸಿಕೊಳ್ಳುವ ಪಾಂಡ್ಯ ಅರಸ ತ್ರಿಭುವನಮಲ್ಲ ರಾಯಪಾಂಡ್ಯ ಇರುಕ್ಕುವೇಲ್ ಅರ್ಥಾತ್ ಪಲಿತ ಪಾಂಡ್ಯದೇ, ರಾಯಪಾಂಡ್ಯ ತಂದೆ, ಇವನು ಕಲ್ಯಾಣ ಚಾಲುಕ್ಯರಲ್ಲಿ ಸರ್ವಾಧ್ಯಕ್ಷನಾಗಿದ್ದನು.

ಹುಲ್ಲೂರು ಶ್ರೀನಿವಾಸ ಜೋಯಿಸರು ರಾಯಪಾಂಡ್ಯನೇ ತ್ರಿಭುವನ ಮಲ್ಲನೆಂದು ಸಮರ್ಥಿಸಿರುವರು. ಡಾ. ಅನ್ಸಾರಿಯವರು ಇದನ್ನೇ ಬೆಂಬಲಿಸಿರುವರು. ಹುಲ್ಲೂರು ಶ್ರೀನಿವಾಸ ಜೋಯಿಸರು ಮತ್ತು ಡಾ. ಜೆಡ್. ಕೆ. ಅನ್ಸಾರಿಯವರು ಪಾಂಡ್ಯರ ಆಳ್ವಿಕೆಯ ಕಾಲವನ್ನು ಪ್ರಾಯೋಗಿಕವೆಂದು ನಿರ್ಧರಿಸಿರುವರು (ಅಂದಾಜು)

ದಿನಕರ ದೇಸಾಯಿ ಮತ್ತು ಬಿ.ಎಲ್. ರೈಸ್‌ರವರು ಇರುಕ್ಕವೇಲ್ ಚೇದಿ ರಾಜನ ಸೋದರ ಎಂದಿರುವರು. ಇತ್ತೀಚೆಗೆ ಹೊಸ ಶಾಸನ ಪಲಿತ ಪಾಂಡ್ಯನದು ದೊರೆತ ಬಳಿಕ ಅವರ ವಾದಕ್ಕೆ ತೆರೆಬಿದ್ದಿತು. ದಿನಕರ ದೇಸಾಯಿ ಮತ್ತು ಡಾ. ಜೆ.ಎಂ. ನಾಗಯ್ಯನವರು ತ್ರಿಭುವನಮಲ್ಲ ಪಾಂಡ್ಯ ಬೇರೆ, ರಾಯ ಪಾಂಡ್ಯ ಬೇರೆ ಎಂದಿರುವರು. ನಾಗಯ್ಯನವರು ಪಾಂಡ್ಯ ಅರಸರ ಸಂಖ್ಯೆಯನ್ನು ಹೆಚ್ಚಿಸಿರುವರು.

೧. ೩೦.೧.೧೦೭೯ರ ನೀಲಗುಂದ ಮುಕ್ತೇಶ್ವರ ಗುಡಿ ಶಾಸನ
೨. ೨೬.೧.೧೦೭೯ರ ಬಾಗಳಿ ಕಲ್ಲೇಶ್ವರ ಗುಡಿಗಳ ಸಮಕಾಲೀನ ಶಾಸನಗಳು ಎರಡು.

ಒಂದರಲ್ಲಿ ತ್ರಿಭುವನಮಲ್ಲ ರಾಯಪಾಂಡ್ಯ ಎಂದಿದ್ದರೆ, ಮತ್ತೊಂದರಲ್ಲಿ ತ್ರಿಭುವಮಮಲ್ಲ ಪಾಂಡ್ಯ ಎಂದು ಉಲ್ಲೇಖಿಸಿದೆ. “ತ್ರಿಭುವನಮಲ್ಲ ಪಾಂಡ್ಯ ದೇವ ರಾಯಪಾಂಡ್ಯನ ಪುತ್ರ ಕ್ರಿ.ಶ. ೧೦೮೩ರಿಂದ ಕ್ರಿ.ಶ. ೧೧೨೩ರವರೆಗೆ ಮಹಾಮಂಡಳೇಶ್ವರನಾಗಿ ಆಳಿದನೆಂದು ಹೇಳಬಹುದು” ಎಂದು ಡಾ. ನಾಗಯ್ಯನವರು ತಮ್ಮ ಬಳ್ಳಾರಿ ಜಿಲ್ಲಾ ಸಾಂಸ್ಕೃತಿ ಇತಿಹಾಸ ದರ್ಶನದಲ್ಲಿ ಮೇಲಿನಂತೆ ತಿಳಿಸಿರುವರು.

೧. ಹರಪನಹಳ್ಳಿ ತಾಲೂಕು ಬಾಗಳಿ ಕಲ್ಲೇಶ್ವರ ಗುಡಿ ಕ್ರಿ.ಶ. ೨೨.೬.೧೧೨೬ರ ಶಾಸನ.

೨. ಹರಪನಹಳ್ಳಿ ತಾಲೂಕು ದುಗ್ಗತಿ ಈಶ್ವರ ಗುಡಿ ಬಳಿ ನಿಲ್ಲಿಸಿರುವ ಕ್ರಿ.ಶ. ೧೬.೩೧೨.೧೧೨೬ರ ಶಾಸನ

ದಾವಣೆಗೆರೆ ದುರ್ಗಾಂಬಿಕ ದೇವಿ ಗುಡಿ ೧೧೩೯ರ ಶಾಸನಗಳನ್ನು ಡಾ. ನಾಗಯ್ಯನವರು ನೋಡಿದಂತೆ ಕಂಡುಬರುವುದಿಲ್ಲ. ಪ್ರಾಚೀನ ಕಾಲದ ಮಹಾಮಂಡಳೇಶ್ವರರು ತಮ್ಮ ಚಕ್ರವರ್ತಿಗಳ ಬಿರುದುಗಳನ್ನು ಧರಿಸಿ ರಾಜ್ಯ ಆಳಿದರು. ಇದನ್ನು ನೊಳಂಬರು ಮತ್ತು ಹೊಯ್ಸಳರ ಶಾಸನಗಳು ದೃಢಪಡಿಸುವುವು.

ಡಾ. ಜೆ.ಎಂ. ನಾಗಯ್ಯನವರು ತಾವು ಬರೆದು ಪ್ರಕಟಿಸಿದ ಬಳ್ಳಾರಿ ಜಿಲ್ಲೆಯ ಸಾಂಸ್ಕೃತಿಕ ಇತಿಹಾಸದಲ್ಲಿ ತ್ರಿಭುವನಮಲ್ಲ ಪಾಂಡ್ಯ ದೇವರು ನೊಳಂಬವಾಡಿ ೩೨೦೦೦ವನ್ನು ಕೇಶವಪುರದ ನೆಲೆವೀಡಿನಿಂದ ಆಳುತ್ತಿದ್ದನೆಂದು ಹೇಳಿರುವರು. “ನೆಲೆವೀಡು” ಎಂದರೆ ಇಲ್ಲಿ ರಾಜ್ಯದ ರಾಜಧಾನಿಯಲ್ಲ. ಅರಸ ಕ್ಯಾಂಪುಮಾಡಿದ ಸ್ಥಳವಾಗಿರುತ್ತದೆ. ಆದಿತ್ಯದೇವ ಮೊದಲ ಅರಸ. ಆಳುಪರನ್ನು ಗೆದ್ದು ಪಾಂಚಾಲರಿಂದ ಕಷ್ಟವನ್ನು ಯರಬಾಳು ಕಲ್ಲೇಶ್ವರ ಗುಡಿ ಕ್ರಿ.ಶ. ೭.೧೨.೧೧೨೨ರ ಶಾಸನ ತಿಳಿಸುವುದು. ಇಲ್ಲಿ ರತ್ನಪುರ ಎಂದರೆ ಈಗಿನ ಲಕ್ಷ್ಮೇಶ್ವರ ಪಟ್ಟಣ.

ಕ್ರಿ.ಶ. ೧೧೨೪ರ ಒಂದು ಶಾಸನದಲ್ಲಿ ಆದಿಯಮರಸ ಕ್ರಿ.ಶ. ೧೧೦೬ರ ಶಾಸನದಲ್ಲಿ ದಾಕರಸ, ಜಗಳೂರು ತಾಲೂಕು ಕ್ರಿ.ಶ. ೧೧೧೧ರ ಶಾಸನದಲ್ಲಿ ಮಹಾಸಾಮಂತ ಮಲ್ಲರಸ ನೊಳಂಬವಾಡಿಗೆ ಅರಸರಿಲ್ಲದೆ ವೇಳೆಯಲ್ಲಿ ನೋಡಿಕೊಳ್ಳುತ್ತಿದ್ದರು. ಕುಕ್ಕವಾಡಿ – ೩೦ಕ್ಕೆ ಒಡೆಯನಾಗಿದ್ದ ಗಂಗರಸ, ಕೋಗಳಿ – ೫೦೦ನ್ನು ಆಳುತ್ತಿದ್ದ ಘಟ್ಟಿಯರಸ, ಯರಬಾಳು ಸ್ವಾಮಿದೇವ, ಕೊಂಚಾಪುದ ಯಿರುಂಗರಸ, ಮೂವತ್ತರ ಮುತ್ತಿಗೆ ಪ್ರಭುಗಾವುಂಡರು, ರಾವಘಟ್ಟದ ತಿಕ್ಕಮಯ್ಯ, ದುಗ್ಗತ್ತಿಯ ಬ್ರಹ್ಮದೇವಯ್ಯ ನಾಯಕ, ಬಿಕ್ಕಿಗ ೭೦ರ ಬೀರ ಭಟ್ಟ, ಬಾಗಳಿ ಶಾಸನ ೧೦.೩.೧೧೨೨ರ ಪ್ರಕಾರ ಪತಿಕಾರ್ಯದುರಂಧರ, ಸಮಸ್ತ ಪ್ರಶಸ್ತಿ ಸಹಿತ ಶ್ರೀಮನ್ ಮಹಾಪ್ರಧಾನ ದಣ್ಣನಾಯಕ, ಬನ್ನಿಗೋಳದ ಪ್ರಭು ಸೋವರಸ, ಬೆಳಗುತ್ತಿ ಸಿಂಧರು ಹಳ್ಳ ಊರಿನಿಂದ ಆಳುತ್ತಿದ್ದರು. ಅವರು ಪಾಂಡ್ಯರ ಮಿತ್ರರಾಗಿದ್ದರು. ಕದಂಬರ ಮಯೂರಶರ್ಮ ವಿಜಯಪಾಂಡ್ಯನ ಸಾಮಂತನಾಗಿದ್ದನು. ನಾಗಾತ್ಯರಸ, ಹರಿಹರಸ, ಮಾಚರಸ, ಕುಮಾರ ಕೇತರಸ, ಮಹಾಸಾಮಂತ ಕಾಮಯ್ಯ ನಾಯಕ, ದಂಡ ನಾಯಕ ರಿಷಿಯಣ್ಣ ಭಟ್ಟ, ದಂಡಾಧಿಪತಿ, ರವಿಗ, ಮಹಾಪ್ರಧಾನ ಮಹಾದೇವಯ್ಯ ಮುಂತಾದವರು ಪಾಂಡ್ಯರ ಗುರುವಾಗಿದ್ದನು. ‘ರಾಯ’ ಎಂಬುವ ಪದ ಪಾಂಡ್ಯರ ಕಾಲದಲ್ಲಿ ಹೆಚ್ಚು ಪ್ರಚಲಿತವಿದ್ದು ವಿಜಯನಗರ ಅರಸರ ಆಳ್ವಿಕೆಯಲ್ಲಿ ಪುನಃ ಮರುಕಳಿಸಿತು. ಬಳ್ಳಾರಿ ಮಂಗಳೂರು ಜಿಲ್ಲೆಗಳಲ್ಲಿ ದೊಡ್ಡವರಿಗೆ ಮತ್ತು ಸರಕಾರಿ ಅಧಿಕಾರಿಗಳಿಗೆ (ಗೌರವ ಸೂಚಕ) ‘ರಾಯರೇ’ ಎಂದು ಹಳೇ ಮೈಸೂರು ಭಾಗಗಳಲ್ಲಿ “ಸ್ವಾಮಿ” ಎಂಬುವ ಪದ ಮಹಾರಾಷ್ಟ್ರ ಕನ್ನಡ ಪ್ರದೇಶಗಳಲ್ಲಿ ‘ಸಾಹೇಬರೇ’ ಪದಗಳು ಪ್ರಚಾರದಲ್ಲಿದ್ದವು. ಅಖಂಡ ಕರ್ನಾಟಕ ರಾಜ್ಯ ಉದಯದ ನಂತರ ‘ಸಹೇಬರು’ ಎಂಬುದು ಎಲ್ಲ ಭಾಗಕ್ಕೂ ವ್ಯಾಪಿಸಿತು. ಹೆಚ್ಚು ಊಟ ಮಾಡುವರಿಗೆ ಈಗಲೂ ನಮ್ಮ ಭಾಗದಲ್ಲಿ ಕೂಳು ಪಾಂಡ್ಯರೆಂದು ಕರೆಯುವರು. ಪಾಂಡ್ಯರಸರು ಬಲಶಾಲಿಗಳಾಗಿದ್ದು ಹೆಚ್ಚು ಆಹಾರ ಸೇವಿಸುತ್ತಿದ್ದರು.

ಧರ್ಮಕ್ಕೆ ಕಾರ್ಯಕ್ಕೆ ನೆರವು

೧. ಕೆರೆಗುಡಿಹಳ್ಳಿಯ ಈಶ್ವರ ಗುಡಿ ಕ್ರಿ.ಶ. ೨೦.೧೨.೧೧೪೨ ರ ಶಾಸನದ್ಲಿ ಅರಸೀಕೆರೆ ನೊಳಂಬೇಶ್ವರ ದೇವರಿಗೆ ಪೂಜಾ ಕಾರ್ಯಕ್ಕೆ ದಾನ ಬಿಟ್ಟರು.

೨. ಬೆಣ್ಣಿ ಹಳ್ಳಿ ಬಳಿವಾಡ ಕ್ರಿ.ಶ. ೧೬.೭.೧೧೪೪ರ ಶಾಸನದಲ್ಲಿ ನೊಳಂಬೇಶ್ವರನಿಗೆ ದಾನಮಾಡಿದ್ದು ತಿಳಿಯುತ್ತದೆ.

೩. ರಾಮಘಟ್ಟದ ರಾಮೇಶ್ವರ ಗುಡಿ ಕ್ರಿ.ಶ. ೨೫.೧೨.೧೧೨೨ರ ಶಾಸನದಲ್ಲಿ ಹಾಲಮರಸ ರಾಮೇಶ್ವರ ದೇವರಿಗೆ ಗುಡಿ ಕಟ್ಟಿಸಿ ರಾಯಪಾಂಡ್ಯನಿಗೆ ನಿವೇದಿಸಿದ ಎಂದಿದೆ.

ನೀರಾವರಿಗೆ ಆದ್ಯತೆ

೧. ಹೂವಿನಹಡಗಲಿ ಕ್ರಿ.ಶ. ೧೧೧೩ರಲ್ಲಿ ಸುಂಕಾಧಿಕಾರಿ ಮುದ್ದರಸ ಗುಡಿ ಮತ್ತು ಕೆರೆಗಳನ್ನು ಕಟ್ಟಿಸಿ ಅವುಗಳ ಜೀಣೋದ್ಧಾರ ಮಾಡಿದ ಎಂದಿದೆ.

೨. ಉಚ್ಚಂಗಿದುರ್ಗದ ಕ್ರಿ.ಶ. ೨೫.೬.೧೧೨೫ರ ಶಾಸನದಲ್ಲಿ ಚಟ್ಟನೀಹಳ್ಳಿ ಚಿಕ್ಕಮ್ಮನ ಕೆರೆಯಿಂದ ಚಟ್ಟನ ಕೆರೆಯ ಉತ್ತರದ ಕೋಡಿಯವರೆಗಿನ ನೀರಾವರಿ ಭೂಮಿಯನ್ನು ಆ ದೇವರಿಗೆ ದಾನಬಿಟ್ಟ.

೩. ಅಲಗಿಲವಾಡದ ಕಲ್ಲೇಶ್ವರ ಗುಡಿ ಕ್ರಿ.ಶ. ೨೫.೧೨.೧೧೫೪ರ ಶಾಸನದಲ್ಲಿ ಹಳ್ಳಿ ಮತ್ತು ಎರಡು ಕೆರೆಗಳನ್ನು ಕಟ್ಟಿಸಿದ್ದು ಗೊತ್ತಾಗವುದು.

೪. ಕ್ರಿ.ಶ. ೧೦.೨.೧೧೧೫ರ ಶಾಸನದಲ್ಲಿ ದಿನವೂ ೫ ಜನರಿಗೆ ಊಟಕ್ಕೆ ಮಿಕ್ಕ ಹಣವನ್ನು ಊರಿನ ಪರಿಯ ಕೆರೆಯ ಕೆಲಸಕ್ಕೆ ದಾನವಿತ್ತರು.

ಶಿಕ್ಷಣಕ್ಕೆ ಪ್ರೋತ್ಸಾಹ

೧. ಹಗರಿಬೊಮ್ಮನಹಳ್ಳಿ ರಾಮೇರ್ಶವರ ಗುಡಿ ಹನಶಿ ಕ್ರಿ.ಶ. ೧೨.೭.೧೧೧೧ರ ಶಾಸನದಲ್ಲಿ ಪಾಂಡ್ಯ ಅರಸನ ಕಾಲದಲ್ಲಿ ದೇವರ ಅಂಗಭೋಗ ಸ್ನಾನ ನೈವೇದ್ಯಕ್ಕೆ ಅತಿಥಿ ಅಭ್ಯಾಗತರ ತಪೋಧರ, ವಿದ್ಯಾರ್ಥಿ ಆಹಾರ ದಾನ ಖಂಣ್ಡ ಸ್ಪುಟಿತ ಜೀರ್ಣೋದ್ಧಾರಕ್ಕಂ ಎಂದಿದೆ.

೨. ಹರಪನಹಳ್ಳಿ ತಾಲೂಕು ಕೆರೆಗುಡಿಹಳ್ಳಿ ಕ್ರಿ.ಶ. ೨೨.೧೨.೧೧೧೧ರ ಶಾಸನದಲ್ಲಿ ಪಾಂಡ್ಯರು ನೊಳಂಬೇಶ್ವರ ದೇವರ ಪೂಜಾ ಮತ್ತು ಓದುವ ಮಕ್ಕಳಿಗೆ ಭೂದಾನ ಮಾಡಿದರು ಎಂದಿದೆ.

ಆಧಾರ ಸೂಚಿ ಮತ್ತು ಟಿಪ್ಪಣಿಗಳು

೧. ಕರ್ನಾಟಕ ಪರಂಪರೆ ಸಂಪುಟ – ೧ ಕನ್ನಡ ಸಂಸ್ಕೃತಿ ಇಲಾಖೆ ಪ್ರಕಟಣೆ.

೨. ಐತಿಹಾಸಿಕ ಲೇಖನಗಳು ಹುಲ್ಲೂರು ಶ್ರೀನಿವಾಸ ಜೋಯಿಸರು ಸಂ ಲಕ್ಷ್ಮಣ ತೆಲಗಾವಿ ಮತ್ತು ಎಂ.ವಿ. ಶ್ರೀನಿವಾಸ.

೩. ಪಿ.ವಿ. ಕೃಷ್ಣಮೂರ್ತಿ ಪ್ರಾಚೀನ ಕರ್ನಾಟಕದ ಆಡಳಿತ ವಿಭಾಗಗಳು ಭಾಗ ಡಿ ಕದಂಬಳಿಗೆ ಸಾಸಿರ ಕನ್ನಡ ವಿಶ್ವವಿದ್ಯಾಲಯ, ಹಂಪಿ ಪ್ರಕಟಣೆ.

೪. ಕನ್ನಡ ವಿಶ್ವವಿದ್ಯಾಲಯ ಶಾನ ಸಂಪುಟ – ೧ ಬಳ್ಳಾರಿ ಜಿಲ್ಲೆ.

೫. ಡಾ. ಜೆ. ಎಂ.ನಾಗಯ್ಯ ಬಳ್ಳಾರಿ ಜಿಲ್ಲೆಯ ಸಾಂಸ್ಕೃತಿ ಇತಿಹಾಸ ಕ.ವಿ.ವಿ. ಹಂಪಿ ಪ್ರಕಟಣೆ

೬. ವಯೋವೃದ್ಧರ ಹೇಳಿಕೆಗಳು

೭. ಜೋಗೇರ ಹಾಡು

  1. Dr. S. Sri Kanta Sastry Souce of Karnataka History
  2. Nikanta Sastry K.A.A. History of South India.
  3. Epigrphia carroatia – old series ED B.L. Rice.
  4. The Chalukyas of Kalyan and the Kalachuris – B.R. Gopal.
  5. South Indian Inscriptions, Volume – IX Part – 1.
  6. Some Fendatory Families of Medieval Karnataka Study Dr. Z.K. Ansari.
  7. Karnataka Through the ages – Old Mysore Government.
  8. Karnataka Historical Review – K.H.R.

ಕಲ್ಯಾಣ ಚಾಲುಕ್ಯರು

೧. ಇಮ್ಮಡಿ ತೈಲ ಕ್ರಿ.ಶ. ೯೭೩ – ೯೯೨

೨. ಸತ್ಯಾಶ್ರಮ ಇರವಬೆಡಂಗ ೯೯೭ – ೧೦೦೮

೩. ೫ನೆಯ ವಿಕ್ರಮಾದಿತ್ಯ ೧೦೦೮ – ೧೫

೪. ಅಯ್ಯಣ ೧೦೦೫ – ?

೫. ಇಮ್ಮಡಿ ಜಯಸಿಂಹ ೧೦೧೫ – ೪೨

೬. ಮೊದಲನೆಯ ಸೋಮೇಶ್ವರ ೧೦೪೨ – ೬೮

೭. ಇಮ್ಮಡಿ ಸೋಮೇಶ್ವರ ೧೦೬೮ – ೭೬

೮. ಆರನೆಯ ವಿಕ್ರಮಾದಿತ್ಯ ೧೦೭೬ – ೧೧೨೬

೯. ಮುಮ್ಮಡಿ ಜಗದೇಕ ಮಲ್ಲ

೧೦. ಪೆರ್ಮ ಇಮ್ಮಡಿ ಜಗದೇಕಮಲ್ಲ ೧೧೩೮ – ೫೫

೧೧. ಮುಮ್ಮಡಿ ತೈಲಪ ೧೧೪೯ – ೬೩

೧೨. ಮುಮ್ಮಡಿ ಜಗದೇಕ ಮಲ್ಲ ೧೧೬೩ – ೮೨

೧೩. ನಾಲ್ವಡಿ ಸೋಮೇಶ್ವರ ೧೧೮೪ – ೧೨೦೦

೬ನೇ ವಿಕ್ರಮಾದಿತ್ಯನಿಗೆ ಜನ ರಾಣಿಯರು

೧. ಸಾವಲದೇವಿ
೨. ಲಕ್ಷ್ಮಲದೇವಿ
೩. ಜಕ್ಕಲದೇವಿ
೪. ಮಲ್ಲೆಯ ಮಹಾದೇವಿ
೫. ಚಂದಲಾದೇವಿ
೬. ಮಾಳಲಾದೇವಿ

ಮಂಡಳೇಶ್ವರರು ೧೪ ಜನರು
೧. ಇಮ್ಮಡಿ ಕೀರ್ತಿವರ್ಮ
೨. ಮುಂಜರಾಜ
೩. ಧಲಿಭಾಂಡಕ
೪. ಅನಂತದೇವ
೫. ಇಮ್ಮಡಿ ಕಾರ್ತವೀರ್ಯ
೬. ಮೊದಲ ಬಲ್ಲಾಳ
೭. ಇಮ್ಮಡಿ ತೈಲಪ್
೮. ಹೈಹಯ ಯನೆಮರಸ
೯. ಗಂಡರಾದಿತ್ಯ
೧೦. ತ್ರಿಭುವನಮಲ್ಲ ಕಾಮದೇವ
೧೧. ಹೊಯ್ಸಳರ ವಿಷ್ಣುವರ್ಧನ
೧೨. ಪೆರ್ಮಾಡಿ
೧೩. ತ್ರಿಭುವನಮಲ್ಲ ಪಾಂಡ್ಯದೇವ
೧೪. ಇಮ್ಮಡಿ ಜಯಕೇಶಿ

ನೊಳಂಬ ಪಲ್ಲವರು ಚಾಲುಕ್ಯರ ಸಾಮಂತರಾಗಿ ಸುಮಾರು ೯೦ ವರ್ಷಗಳ ಕಾಲ ನೊಳಂಬವಾಡಿ ೩೨೦೦೦ವನ್ನು ಆಳಿದರು.

ನೊಳಂಬ ಪಲ್ಲವರು

೧. ಅಯ್ಯಪ
೨. ಅಣ್ಣಿಗ
೩. ನನ್ನಿ ನೊಳಂಬ
೪. ವೀರ ನೊಳಂಬ
೫. ತ್ರೈಲೋಕ್ಯಮಲ್ಲ ಇರಿವ ನೊಳಂಬ ನರಸಿಂಘದೇವ ಘಟೆಯಂಕಾರ
೬. ಜಗದೇಕಮಲ್ಲ ನೊಳಂಬ ಪೆರ್ಮಾನಡಿ ಉದಯಾದಿತ್ಯ
೭. ತ್ರೈಲೋಕ್ಯಮಲ್ಲ ನನ್ನಿ ನೊಳಂಬಾಧಿ ರಾಜ.
೮. ಜಗದೇಕಮಲ್ಲ ನೊಳಂಬ ಪೆರ್ಮಾನಡಿ
ಕ್ರಿ.ಶ. ೯೨೨ರಿಂದ ೧೦೫೪ರವರೆಗೂ ಚಾಲುಕ್ಯರ ಸಾಮಂತರಾಗಿ ರಾಜ್ಯವಾಳಿದರು.

ಪಾಂಡ್ಯ ಅರಸರು

೧. ಆದಿತ್ಯ ದೇವ
೨. ಚೇದಿ ರಾಜ
೩. ಪಲಮಾಂದ ಪಾಂಡ್ಯ
೪. ಪಲಿತಪಾಂಡ್ಯ ಅಥವ ಇರುಕ್ಕವೇಳ್

ಮೊದಲಿನ ೩ ಜನ ಅರಸರು ‘ಹೈಹ’, ‘ಶಿಶುಗಲಿ’, ‘ಉಳುವ’ ರಾಜಧಾನಿಗಳೆಂದು ಹೆಚ್ಚಿನ ವಿವರ ದೊರಕುತ್ತಿಲ್ಲ.

೫. ರಾಯಪಾಂಡ್ಯ
೬. ವೀರಪಾಂಡ್ಯ
೭. ವಿಜಯಪಾಂಡ್ಯ – (ಕಾಮದೇವ)
೮. ಕುಮಾರ ವಿಜಯಪಾಂಡ್ಯ (ಇವನಿಗೆ ವೀರ ವಿಜಯ ಎಂದೂ ಕರೆದಿದೆ)

ಜಗದ್ದಳ ಪಾಂಡ್ಯ ಇವನ ಸಂಬಂಧ ತಿಳಿದಿಲ್ಲ (ಉಜ್ಜಿನಿ ಶಾಸನ) ಕದಂಬ ವಂಶಕ್ಕೆ ಸೇರಿದವನು. ಪಾಂಡ್ಯನು ಸೂರ್ಯ ವಂಶಕ್ಕೆ ಸೇರಿದವರೆಂದು ಹೇಳಿಕೊಂಡಿರುವರು.

ಲಾಂಛನ ಮತ್ಸ್ಯ

ಪಲಂಗ:
ಬಿರುದುಗಳು
೧. ಮಹಾಮಂಡಳೇಶ್ವರ
೨. ಕಾಂಚಿಪುರವರಾಧೀಶ್ವರ
೩. ಪರಿಚ್ಛೇದಿ ಗಂಡ