ಕರ್ನಾಟಕದ ಇತಿಹಾಸವನ್ನು ಅಭ್ಯಸಿಸುವಾಗ ಬರೀ ರಾಜಮನೆತನಗಳನ್ನು ಗಮನಿಸಿದರೆ ಸಾಲದು, ಜೊತೆಗೆ ಈ ರಾಜ ಮನೆತನಗಳ ಅಡಿಯಲ್ಲಿರುವ “ಸಾಮಂತ ಅರಸು” ಮನೆತನಗಳನ್ನು ಗಮನಿಸಿದಾಗ ಮಾತ್ರ ಇತಿಯಾಸದ ಅಧ್ಯಯನ ಪೂರ್ಣವಾಗುತ್ತದೆ. ಏಕೆಂದರೆ ನಾಡು, ನುಡಿ ರಕ್ಷಣೆಯಲ್ಲಿ ಇವರ ಪಾತ್ರ ಬಹು ದೊಡ್ಡದು, ದೊಡ್ಡ ಕಟ್ಟಡಕ್ಕೆ ಅದು ಬೀಳದಂತೆ ಸಣ್ಣ ಕಲ್ಲುಗಳಾಗಿ ಈ ಅರಸು ಮನೆತನಗಳು ಶ್ಲಾಘನೀಯವಾದ ಕಾರ್ಯವನ್ನು ಮಾಡಿದವು. ಈ ಸಾಮಂತ ಅರಸು ಮನೆತನಗಳಲ್ಲಿ ದಕ್ಷಿಣ ಭಾರತದ ಮಂಡಳೇಶ್ವರರಿಗೆ ಬಹಳಷ್ಟು ಕಾಲ ಬೆನ್ನುಲುಬಾಗಿ ನಿಂತವರ ಸಿಂದರು. ಇವರು ತಮ್ಮನ್ನು ನಾಗಕುಲದವರೆಂದು “ಭೋಗಾವತಿ ಪುರವರೇಶ್ವರ”ರೆಂದು, ಫಣಿಮಶೋದ್ಭವರೆಂದು ಕರೆದುಕೊಂಡಿದ್ದಾರೆ. ಜಿದು ದೋಳನೆಂ ತಮ್ಮ ಮೂಲ ಪುರುಷನೆಂದು ಅಭಿಮಾನದಿಂದ ಹೇಳುತ್ತಾರೆ. ಸುಮಾರು ಮೂರು ಶತಮಾನಗಳವರೆಗೆ ಕರ್ನಾಟಕದ ಅರಸುಗಳ ಅಧೀನದಲ್ಲಿದ್ದ ಈ ಸಿಂದರು ಕರ್ನಾಟಕದ ವಿವಿಧ ಭಾಗಗಳಲ್ಲಿ ರಾಜ್ಯಭಾರ ಮಾಡಿದರು. ಬಾಗಲಕೋಟೆಯ ಬಾಗಡಿಗೆಯ ಸಿಂದರು, ಬಳ್ಳಾರಿ ಜಿಲ್ಲೆಯ ಕುರಗೋಡ ಸಿಂದರು, ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬೆಳಗುತ್ತಿ ಸಿಂದರು, ಧಾರವಾಡ ಜಿಲ್ಲೆಯ ಕರ್ಜಗಿ ತಾಲೂಕಿ ಗುತರ‍್ತಲ ಸಿಂದರು, ಮುಳಗುಂದ ಭಾಗದ ಮುಳಗುಂದ ಸಿಂದರು, ಬೀದರ ಜಿಲ್ಲೆಯ ರಂಜೋಲಣಿಯ ರಂಜೋಲ ಸಿಂದರು, ಯಲಬುರ್ಗಿಯ ಯರಂಬರಗಿಯ ಸಿಂದರು ಪ್ರಮುಖರಾಗಿದ್ದಾರೆ. ಛೆಂದ್ ಅಥವಾ ಸಿಂದ ಎಂಬ ಹೆಸರಿನಿಂದ ಈ ಮನೆತನವು ಐದು ಆರನೇ ಶತಮಾನದಲ್ಲಿಯೇ ಕನ್ನಡ ನಾಡಿನಲ್ಲಿ ಕಾಲೂರಿ ಕ್ರಮೇಣ ಕರ್ನಾಟಕದ ಹಲವಾರು ಭಾಗಗಳಲ್ಲಿ ಪಸರಿಸಿ ಆ ಭಾಗದ ಪ್ರಾತಿನಿಧಿಕ ಹೆಸರನ್ನು ಧರಿಸಿ ಹತ್ತಾರು ಭಾಗಗಳಲ್ಲಿ ರಾಜ್ಯಭಾರ ಮಾಡಿದ ವಂಶ ಇದಾಗಿದೆ.

ಇವರ ಬಗೆಗಿರುವ ಬಹಳಷ್ಟು ಶಾಸನಗಳು ಇವರನ್ನು ನಾಗ ವಂಶಕ್ಕೆ ಸೇರಿದವರೆಂದು ತಿಳಿಸುತ್ತವೆ. ಬಿಜಾಪುರ ಜಿಲ್ಲೆಯ ಭೈರನಮಟ್ಟಿ, ಗ್ರಾಮದಲ್ಲಿ ದೊರೆತ ಶಾಸನದಲ್ಲಿ

ಧರಣೇಂದ್ರಾಹೀಶ್ವರ ಮಾನವ ಭವನುತ ಭೂಲೋಕಮಂ
ನೋರ್ಪ್ಪನೆಂದಾ ದರದಿಂ ತತ್ಸೈನಮಂ ಪಿಂತಿರಿಸಿ ವನಿತೆಯುಂ
ತಾನುಮಾಕದಕ್ಕಛಿಂದಂ ಬರೆ ಗರ್ಬ್ಭಂ ತೋಱು ತದ್ವಲ್ಲಭೆಗೆ
ಪಡೆದ ಹಿಚ್ಛತ್ರದೂಳು ಪುಟ್ಟಿದಂ ಭಾಗಸುರತೇಜೋದ್ಧಾಸಿ
ಸಿಂಧೂನದಿಯ ಕುಱವದೊಳು ಸಿಂದನೆಂಬಂ ಕುಮಾರ

ಎಂದು ಹೇಳಲಾಗಿದೆ. ಹೀಗೆ ಭೂಲೋಕದ ಮಾನವರನ್ನು ನೋಡಲು ಬಂದಾಗ ನಾಗರಾಜನಿಗೆ ಅಹಿಚ್ಛತ್ರದಲ್ಲಿ ಪುತ್ರೋತ್ಸವವಾಗಲು, ಇದರಿಂದ ಬೆಚ್ಚಿಳಿಸದ ನಾಗೇಂದ್ರನು ಆ ಕುಮಾರನನ್ನು

ಪಡೆದ ವಿಮೋಹಮಂ ಪುಲಿಗಹೀಶ್ವರನೀ ಶಿಶುವಂ ಸುರಕ್ಷಿತಂ
ನಡಪೆನೆ ಪನ್ನಾಗಾಧಿ ಪತಿಯೊಳು ಬೆಸವೆತ್ತು ಮಹಾಮಹೀಶನರ
ನಡಪೆನೆ ಕುಮಾರಕಂ ಬಳೆದಿಳಾಧಿಕ ಶೌರ್ಯ್ಯದ ದೀರ್ಘವಾಹುವಂ
ಪಡೆದನೊ ಸನ್ದದ ಸಿನ್ದವಿಷಯಾಧಿ ಪನುನ್ನತ ವೀರಶಾಸನ

ಹೀಗೆ ಪುಲಿಯ ಅಪೇಕ್ಷೆಯ ಮೇರೆಗೆ ನಾಗೇಂದ್ರನ ಕೃಪೆಯಿಂದಾಗಿ ಅವನ ಮಗನ ದೀರ್ಘಬಾಹುಗನ್ನು ಪಡೆದು ನಿಡುದೋಳ್‌ಸಿಂದ ಎನಿಸಿಕೊಂಡನು. ಈ ನಿಡುದೋಳ ಸಿಂದನೇ ಸಿಂದವಂಶದ ಮೂಲಪುರುಷನೆಂದು ಭೈರನಮಟ್ಟಿಯ ಶಾಸನದಲ್ಲಿರುವ ಈ ಕೆಳಗಿನ ಪದ್ಯ ನಿರೂಪಿಸುತ್ತದೆ.

ಭರದಿಂದಂ ನಿಡುದೋಳಸಿಂದ ವಿಭುಕಯ್ಯ ಮುಚ್ಚೆಕಣ್ಣಂಕಡಂ
ಬರಾಧೀಶಪ್ರಿಯದಿಂ ತನೂಭವೆಯುನೀಯಲು ಕೊಂಡು ತಾನಾ ಮನೋ
ಹರೆಯೂಳು ಕ್ರೀಡಿಸುತ್ತಿಪ್ಪಿನಂ ತನಯಾರಾದರ್ಮ್ಮೂವರಾ ಮೂವರಿಂ
ಪರೆದತ್ಯುನ್ನತಸಿಂದವಂಶಮಹಿಭ್ರಿತ್ಸಂ ಜಾತರೀಲೋಕದೊಳು

ಈ ವಂಶದ ಮೂವತ್ತೊಂದು ಮಂದಿ ಬಗಡೆಗೆಯಲ್ಲಿ ಅಧಿಕಾರ ನಡೆಸುತ್ತಿದ್ದು ಅವರ ಬಳಿಕ ಸಿಂದನೆಂಬುವನು ಅ ವಂಶದಲ್ಲಿ ಜನಿಸಿದನೆಂದು ಈ ಶಾಸನ ತಿಳಿಸುತ್ತದೆ. ಬಾಗಡಗೆಯ ಸಿಂದರು ಈ ವಂಶದ ಮೊದಲಿಗರೆಂದು ತೋರುತ್ತದೆ.

ಆದರೆ ಬೆಳಗುತ್ತಿ ಗ್ರಾಮದಲ್ಲಿ ದೊರೆತ ಶಾಸನದಲ್ಲಿ
ಶಿವಸಿಂಧುಪ್ರಿಯ ಸಂಗದಿಂದೊಣೆದನೋರ್ವ್ವಂ ಕುಮಾರಂ ಮಹೋ
ತ್ಸಿವದಿಂದಂ ಗಿರಿಜಾಮನೋರಮಣನಂದ ನ್ವರ್ತ್ಥಮಪ್ಪಂತು ಸೈ
ನ್ದವನೆ…….ದಿಟನೊಲ್ದು ಪೆಸರಂ ತಾನಳ್ಳಱೆಂ ಧಾರಿಣೀ
ಧವನಾಗೆಂದುರಗಾಧಿರಾಜವಿಳಸಂ ದಕ್ಷಾಸಮೇತಂ ಭವಂ

ಈ ಪದ್ಯ ಹರಿಹರದ ಶಾಸನದಲ್ಲೂ ಇತ್ತೀಚೆಗೆ ಧಾರವಾಡ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಹಳ್ಳೂರಿನಲ್ಲಿ ದೊರೆತ ಶಾಸನವೊಂದರಲ್ಲಿಯೂ ಸ್ವಲ್ಪ ಮಾರ್ಪುಗೊಂಡಿದೆ.

ಅದು ಹೀಗಿದೆ.

ಶಿವಸಿಂಧು ಸಂಗದಿಂದು
ದ್ಬವಿಸಿದನೊರ್ಬ್ಬಕುಮಾರನಾತನ ಪೆಸರಂ
ಭವನಿಟ್ಟನೊಲ್ಲದು ಸೈ
ನ್ಧವನೆದ್ದರುರಗಾಧಿರಾಜ ರಕ್ಷಾಸಹಿತಂ

ಹೀಗೆ ಶಿವ ಮತ್ತು ಸಿಂಧು ಇವರಿಗೆ ಜನಿಸಿದ ಕುಮಾರನಿಗೆ ಭವನು ಸೈನ್ಧವನೆಂಬ ಅನ್ವರ್ತ್ಥನಾಮವನಿಟ್ಟಿನಂತೆ ಈ ಕುಮಾರನು ಬೆಳೆದ ರೀತಿಯೂ ಅದ್ಭುತವಾದದ್ದೇ ತನ್ನ ಕುಮಾರನು ವೀರನೂ ಧೀರನೂ ಆಗಬೇಕಾದರೆ ಸಾಧಾರಣೆ

ಮಾನವರಂತೆ ಬೆಳೆಯಬಾರದೆಂದು ಗೌರೀಪತಿಗೆ ತೋರಿತು
ಪುಲಿವಾಲಂ ಕುಡದಲ್ಲದೆ
ಕಲಿಯಾಗಂ ಪುತ್ರನಿವನೆನ್ದು ಗೌರೀಪತಿ
ನ್ನೊಲವಿಂ ಪುಲಿಯಂ ನಿಮ್ಮಿಸೆ
ಪುಲಿವಾಲಂ ಕುಡಿದು ಬೆಳೆದನಂ ಧರಯೋಳು

ಹೀಗೆ ಬೆಳೆದ ತನ್ನ ಕುಮಾರನನ್ನು “ಆ ಪರಮೇಶ್ವರಂ ಶ್ರೀಮಾತಾದೇವಿಯ ಸಂಗ್ರಾಮಕ್ಕೆ ಸಹಾಯಯಾಗೆಂದು ಬೆಸನೆ ನಿಡುದೋಳ ಸಿಂದನೆಂದೆರಡನೆಯ ಪೆಸರಂಕುಡೆ” ಅದನ್ನು ಪಡೆದ ನಿಡುದೋಳಸಿಂದನು

“ಕರಹಾಟಂ ಯೋಗಪೀಠಂ ತನಗೆ ನೆಲೆಯಲ್ಸಿಂದು ತದ್ಪೂಮಿಪಾಳೋ ತರಮಂ ಬೆಂಕೊಂಡು ಕೊಣ್ದಂ ಭುಜಬಳದಿನಿಳಾ ಚಕ್ರಮಂ ತನ್ನ ನೃಪಳಂಧರಣೀ ಪಾಳರ್ಕ್ಕಕೊಳು ಬಲ್ಲಿದನದಟನುದಾರಂ ಕುಖ್ಯಾತನೆನ್ದುರ್ವ್ವರೆ ನಿಚ್ಚಂ ಬಣ್ಣಸಲ್ಭೂವನಹೊಳೆಸದಂ ಸಿಂದವಂಶಾವತಾರಂ”

ಹೀಗೆ ಸಿಂದರ ವಂಶ ಬೆಳೆಯಿತು ಎಂದು ಎಲ್ಲಾ ದಾಖಲೆಗಳಿಂದ ತಿಳಿದು ಬರುತ್ತೆ. ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಇವರು ದಕ್ಷಿಣ ಹಿಂದೂಸ್ತಾನದ ಪ್ರಬಲ ದ್ರಾವಿಡ ಜನಾಂಗವಾದರೂ ಕರ್ನಾಟಕದ ಮೂಲದವರಾಗಿದ್ದಾರೆ. ಕಲವು ಶಾಸನಕಾರರು ಇವರನ್ನು ಸಿಂಧೂ ನದಿಯೊಂದಿಗೆ ತಳಕು ಹಾಕುತ್ತಾರೆ. ಆದರೆ ಸಿಂದ ಎಂದರೆ ಜಯಸಿದವ, ನೆಲೆನಿಂತವ, ಅಥವಾ ಯಶಸ್ವಿಯಾದನೆಂಬ ಅರ್ಥಗಳೂ ಇವೆ. ಈ ಸಿಂದ ವಂಶದಲ್ಲಿ ಪ್ರಮುಖರಾಗಿ ಅತ್ಯಂತ ಪ್ರಸಿದ್ಧಿ ಪಡೆದ ಯಲಬುರ್ಗಿಯ ಸಿಂದರು ದಾಖಲಾರ್ಹ ಮನೆತನದವರಾಗಿದ್ದಾರೆ. ಈ ಸಾಮಂತ ಅರಸ ಮೊದಲ ಅಟುಗೆಯನ್ನು “ವಿಕ್ರಮಾದಿತ್ಯನ ಕಟ್ಟಿದ ಅಲಗು” ಎಂದು ಕರೆದ ಕಾರಣ ಇವರ ಆಳ್ವಿಕೆಯು ಆರನೇ ವಿಕ್ರಮಾದಿತ್ಯನ ಕಾಲದಲ್ಲಿ ೧೦೭೩ ಆಗಿರಬೇಕು. ಈ ಹಿನ್ನೆಲೆಯಲ್ಲಿ ಅವರ ಆಳ್ವಿಕೆ ಪ್ರದೇಶವನ್ನು ಸಿಂದುನಾಡು ಎಂದು ಕರೆಯಲ್ಪಡುತ್ತದೆ. ಈ ಆಡಳಿದ ಪರಿಧಿಯಲ್ಲಿ ಕಿರಿವೀದಿ ೩೦೦ ಕುಂಟಿಗೆ ೭೦, ಕುಕನೂರ ೩೦ ಮೊದಲಾದ ಭಾಗಗಳೂ ಸೇರಿದ್ದರುಂಟು ಮೊದಮೊದಲು ಪಟ್ಟದಕಲ್ಲು ಈ ನಾಡಿನ ರಾಜಧಾನಿಯಾಗಿದ್ದು, ತರುವಾಯ ಯಲಬುರ್ಗಿ ಆ ಸ್ಥಾನವನ್ನು ಪಡೆಯಿತು. ಇಡೀ ಮನೆತನ ಯಲಬುರ್ಗಿ ಸಿಂದವಂಶ ಎಂದು ಪ್ರಸಿದ್ಧಿ ಪಡೆಯಿತು.

ಬೆಳಗುತ್ತಿರುವ ಶಾಸನದಂತೆ ಶಿವ ಮತ್ತು ಸ್ಕೈಂದವನ ಸಂಗದಿಂದ ಜನಿಸಿ ಈ ಸ್ಕಂದನ ಸಹಾಯಕ್ಕಾಗಿ ಶ್ರೀ ಮಾಳಾಪತಿದೇವಿ ಆಸ್ಥೆ ವಹಿಸಿದಳು ಎಂದು ಈ ಹಿಂದೆ ತಿಳಿಯುತ್ತದೆಯಲ್ಲವೆ? ಇದರ ಪ್ರಕಾರ ಇಂದಿಗೂ ಈ ಯಲಬುರ್ಗಿಯಲ್ಲಿ ಕಾಳಾಮುಖರ ಹುಲಿಕಂತಿ ಮಠವಿದ್ದು ಅಲ್ಲಿ ದೇವಿಯೊಬ್ಬಳ ಉಪಾಸನೆ ಯಡೆಯುತ್ತಿದ್ದು ಆ ದೇವಿಯೇ ಮಾಳಾದೇವಿಯಾಗಿರಬಹುದು. ಇದರೊಂದಿಗೆ ಅಲ್ಲಿ ನಾಗಪೂಜೆ ನಡೆಯುವುದರಿಂದ ಇದು ಸಿಂದು ವಂಶದ ಅರಸು ಮನೆತನದ ಪಳಡಯುಳಿಕೆ ಎಂದು ಖ್ಯಾತ ವಿದ್ವಾಂಸರಾದ ಡಾ. ಬಿ.ವ್ಹಿ. ಶಿರೂರವರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಆದರೆ ಕಲವು ಇತಿಹಾಸಕಾರರು ಶಾಸನಗಳಲ್ಲಿ ಬರುವ ಹುಲಿಗೂ ಮತ್ತು ಇಲ್ಲಿ ಬರುವ ಹುಲಿಕಂಟಮಠಕ್ಕೂ ಸಂಬಂಧವಿಲ್ಲವೆಂದು ಡಾ. ದೇವರಕೊಂಡಾರೆಡ್ಡಿಯವರು ಹೇಳುತ್ತಾರೆ.

ಈ ಯಲಬುರ್ಗಿಗೆ ಸಮೀಪದಲ್ಲಿ ನಾಗರಸಕೊಪ್ಪ ಎಂಬ ಊರಿನ ಪಕ್ಕದಲ್ಲಿ ಹಳೆಯದಾದ ಊರೊಂದು ಇದ್ದು ಈ ಗ್ರಾಮಕ್ಕೆ ಈ ಹೆಸರು ಬರಲು ನಾಗ ಅರಸರಾದ ಈ ಸಿಂದರು ಈ ಪ್ರದೇಶಕ್ಕೆ ಬಂದು ಆಗಾಗ ವಾಸಿಸುತ್ತಿರಬಹುದು ಅಥವಾ ಈ ಸ್ಥಳವನ್ನೇ ಪ್ರಮುಖವಾಗಿಟ್ಟುಕೊಂಡು ಯಲಬುರ್ಗಿಯನ್ನು ಆಳ್ವಿಕೆ ಮಾಡಿದ ಸಾಧ್ಯತೆಗಳಿವೆ.

ಯಲಬುರ್ಗಿಯ ಈ ಸಿಂದವಂಶವು ಸಪ್ತ ಸಹೋದರರಿಂದ ಪ್ರಾರಂಭವಾಗುತ್ತದೆ. ಈ ಸಪ್ತಸಹೋದರರ ತಂದೆ ಮತ್ತು ಯಲಬುರ್ಗಿ ಸಿಂದ ವಂಶದ ಸ್ಥಾಪಕ ಬಾಗಿಡಿಗೆಯ ಪ್ರಸಿದ್ಥ ಸಾಮಂತ ಅರಸ ನಾಗಾದಿತ್ಯನಾಗಿರಹುದು. ಈ ಸಪ್ತಸಹೋದರರ ಮತ್ತು ನಾಗಾದಿತ್ಯನ ಸಂಬಂಧವನ್ನು ಉಲ್ಲೇಖಿಸುವ ಯಾವ ಶಾಸನವು ದೊರೆಯುವುದಿಲ್ಲ. ಈ ಕಾರಣದಿಂದ ಸಪ್ತಸಹೋದರರ ಹಿತಿಯ ಅರಸ ಒಂದನೇ ಅಚುಗೆಯಿಂದಲೇ ಯಲಬುರ್ಗಿ ಸಿಂದರ ಆಡಳಿತ ಪ್ರಾರಂಭವಾಗುವ ಬಗ್ಗೆ ಶಾಸನಗಳು ಹೇಳುತ್ತವೆ. ಇದಕ್ಕೆ ಆಧಾರವಾಗಿ ಸೂಡಿ ಮತ್ತು ನಿಡಗುಂದಿ ಶಾಸನಗಳು “ಆದಿಮಂಡಳಿಕ” ಎಂದು ಬಣ್ಣಿಸಿವೆ. ಅಚುಗೆ, ಅಚುಗಿದೇವ, ಅಚರಸನೆಂದು ಹಲವು ಶಾಸನಗಳಿಂದ ನಂಬಿಗಸ್ಥ ಮತ್ತು ಸಮರ್ಥ ಮಂಡಲೀಕನಾಗಿದ್ದನು. ಅವನ್ನು ಶಾಸನಗಳು.

ಮೊನೆಯೊಳು ರ್ಪಂ ತೋರುತ್ತ
ವನುಮರದೊಳು ಬಲದೊಳು ಮರುತಂ ತ್ರಭುವನ
ಲ್ಲನ ಕಟ್ಟದಲಗಿನಂತೆಸೆ
ಆಚರ ಸಮಂಡಳೇಶ್ವರಂ ಭೂತಳದೊಳು

ಎಂದು ಹೊಗಳಿವೆ. ಇವರು ೬ನೇ ವಿಕ್ರಮಾದಿತ್ಯನ ಶೌರ್ಯ ಸಾಹಸದ ಪ್ರತೀಕವಾಗಿ ಆತನ ಯುದ್ಧದಲ್ಲಿ ಭಾಗವಹಿಸಿದ ಕಾರಣ ಈತನ ಕಾಲವನ್ನು ೧೦೭೬ ಎಂದು ಗ್ರಹಿಸಬಹುದಾಗಿದೆ. ಇವನ ಸಾಹಸ ಶೌರ್ಯಗಳಲ್ಲದೇ ನಾನಾ ಕಲೆಗಳಲ್ಲಿ ಪ್ರಾವಿಣ್ಯತೆ ಪಡೆದಿದ್ದು ಅವುಗಳನ್ನು ಸೂಡಿ ಶಾಸನವು ಪ್ರಚುರಪಡಿಸುತ್ತದೆ. ಇವನ ಸಾವಿನ ವೇಳೆಯಲ್ಲಿ ಇವನ ಮಗ ಬೊಮ್ಮ ಇನ್ನೂ ಚಿಕ್ಕವನಿದ್ದ ಕಾರಣ ಇವನ ತಮ್ಮಂದಿರಾದ ಚಾವುಂಡನು ರಾಜ್ಯಭಾರ ಮಾಡಿನಂತೆ ತಿಳಿಯುತ್ತದೆ. ಒಂದನೇಯ ಅಚುಗೆಯ ಸೋದರರನ್ನು ನರೇಗಲ್ಲಿನ ಶಾಸನವು “ಗುಣೋನ್ನತರೆಸೆದರ್” ಎಂದು ಬಣ್ಣಿಸಿದೆ. ಈ ಸೋದರರೆಂದರೆ ನಾಗ, ಸಿಂಗ, ದಾಸದೇವ, ಚಾವುಂಡ ಮತ್ತು ಚಾವ, ಈ ಎಲ್ಲ ಭೂಭುಜರು ಹೆಸರು ಪಡೆದಿದ್ದರು ತಮ್ಮ ಊದಾರತೆಯನ್ನು ಮೆರೆದು ಇವರ‍್ಯಾರು ಪಟ್ಟಕ್ಕೆ ಬರದೇ ಅಣ್ಣನ ಮಗ ಬೊಮ್ಮನನ್ನೆ ಸಿಂಹಾಸನಕ್ಕೆ ಕೂಡ್ರಿಸಿ ರಾಜ್ಯಭಾರ ಮಾಡಿದರು. ಇವರೆಲ್ಲರು ಈ ಬೊಮ್ಮನು ತಾರುಣ್ಯಕ್ಕೆ ಬರುವವರೆಗೆ ಅವನ ಬೆಂಗಾವಲಾಗಿ ನಿಂತು ರಾಜ್ಯ ಭಾರ ಮಾಡಿದರು.

ಅಧಿಕ ಪ್ರತಾಪನಿಧಿ ಜಯಲಕ್ಷ್ಮೀರಮಣ ಇತ್ಯಾದಿ ಹೊಗಳಿಕೆಗೆ ಭಾಜನನಾದ ಬೊಮ್ಮನು ೧೦೮೩ ತನ್ನ ಶೌರ್ಯ ಉನ್ನತಿಗಾಗಿ ಚಕ್ರವರ್ತಿಯಿಂದ ಸಾಕಷ್ಟು ಸಿರಿಸಂಪತ್ತನ್ನು ಪಡೆದ ಬಗ್ಗೆ ಕಾಲಕಾಲೇಶ್ವರ ಶಾಸನವು ಉಲ್ಲೇಖಿಸುತ್ತದೆ. ಸವಡಿ ಶಾಸನವು ಇವನು ಕಿಸಿಕಾಡು ಮೊದಲಾವುಗಳನ್ನು ಏಳನೆ ವಿಕ್ರಮ ವರ್ಷದಲ್ಲಿ ಆಳುತ್ತಿದ್ದನು ಎಂದಿದೆ. ಪಾಂಡಿತ್ಯ ಪ್ರತಿಭೆಗಳ ಸಂಗಮವಾಗಿದ್ದ ಇವನು ಉತ್ತರಾಧಿಕಾರಿ ಇಲ್ಲದೇ ಮಡಿದದ್ದರಿಂದ ಎರಡನೇ ಸಿಂದನ ಮಗನ ಎರಡನೇ ಆಚರಸ ಪಟ್ಟಕ್ಕೆ ಬಂದನು. ಕೆಲವು ಶಾಸನಗಳು ಬೊಮ್ಮನ ತರುವಾಯ ಅಚುಗೆಯನ್ನು ಹೆಸರಿಸಿದರೆ ಕೆಲವು ಶಾಸನಗಳು ಬೊಮ್ಮನ ತಮ್ಮ ಆಚರಸ ಎಂದು ಉಲ್ಲೇಖಿಸಿವೆ ಹೊರತು ಸ್ವತಂತ್ರವಾಗಿ ಏನನ್ನು ಹೇಳಿಲ್ಲ ಕ್ರಿ.ಶ.೧೦೭೬ರ ಸುಮಾರಿನಲ್ಲಿ ಪಶ್ಚಿಮ ಚಾಲುಕ್ಯ ಅರಸು ಎರಡನೇ ಸೋಮೇಶ್ವರನ ಮಹಾ ಮಂಡಲೇಶ್ವರನಾಗಿ ಒಬ್ಬ ಸಿಂಗಣನು ಆಳುತ್ತಿದ್ದನೆಂದು ತಿಳಿದು ಬರುತ್ತದೆ. ಈತನ ಹೆಂಡತಿ ಕೆತಲದೇವಿಯನ್ನು ಸರಸ್ವತಿ ಎಂದು ಸೂಡಿ ಶಾಸನವೊಂದು ಹೇಳುತ್ತದೆ. ಈತನ ತರುವಾಯ ಇದೇ ಮನೆತನದ ಪ್ರಸಿದ್ಧಿ ಪಡೆದ II ಅಚುಗಿ ಪಟ್ಟಕ್ಕೆ ಬಂದನು.

ಎರಡನೇ ಆಚರಸು (ಅಚಗಿ II) (೧೧೧೩ – ೧೧೨೫) ಯಲಬುರ್ಗಿ ಸಿಂದ ವಂಶದಲ್ಲಿ ಪ್ರಖ್ಯಾತ ಪಡೆದ ಅರಸನು ಈತನನ್ನು ಸವಡಿಯ ಶಾಸನವು ಚಾಲುಕ್ಯ ಚಕ್ರವರ್ತಿ ತ್ರಿಭುವನ ಮಲ್ಲದೇವನ ಪಾದಾರತನೆಂದು ಬಣ್ಣಿಸಲಾಗಿದೆ. ಕಾಲಕಾಲೇಶ್ವರದ ಶಾಸನವು ಈತನನ್ನು “ತ್ರಿಭುವನಮಲ್ಲ ಕೇಸರಿ” ಎಂಬ ಬಿರುದನ್ನು ಪಡೆದಿದ್ದನೆಂದಿದೆ. ಆರನೇ ವಿಕ್ರಮಾದಿತ್ಯನ ಬಲಿಷ್ಠ ಸಾಮಂತನಾಗಿದ್ದನು ಎಂದು ಹೇಳುತ್ತ ಇನ್ನೂ ಹಲವಾರು ಶಾಸನಗಳು ಈತನ ಪ್ರತಿಭೆಯನ್ನು ಬಣ್ಣಿಸಿವೆ. ತನ್ನ ದೊರೆ ಆರನೇ ವಿಕ್ರಮಾದಿತ್ಯನ ಸಲುವಾಗಿ ದಕ್ಷಿಣದಿಂದ ಹೊಯ್ಸಳರು, ಪಶ್ಚಿಮದಿಂದ ಗೋವದ ಕದಂಬರು, ಉತ್ತರದಿಂದ ಕರಹಾಡದ ಶಾಲಾ ಹಾರರು ಮತ್ತು ಪೂರ್ವದಿಂದ ಉಚ್ಚಂಗಯ ಪಾಂಡ್ಯರು ತನ್ನ ದೊರೆಯ ಮೇಲೆ ಏರಿ ಬಂದಾಗ ಅವರೆಲ್ಲರನ್ನು ಸಮುದ್ರ ಉಕ್ಕೇರಿ ಉಪ್ಪಿನ ಕಟ್ಟೆ ಒಡೆಂತೆ ವೈರಿಗಳನ್ನು ಓಡಿಸಿದನೆಂದು ಶಾಸನಗಳು ಬಣ್ಣಿಸುತ್ತವೆ. ಈ ಸಂದರ್ಭದಲ್ಲಿ ಹೊಯ್ಸಳರು ಈ ದಾಳಿಯ ಅನೇಕ ಸಾಮಂತರನ್ನು ಸ್ವತಂತ್ರರಾಗುವಂತೆ ಪ್ರೆರೇಪಿಸಿತು. ಇವನಿಗೆ “ಮಾಳವರ ಮಾರಿ” ಎಂಬ ಬಿರುದು ಕೂಡಾ ಇತ್ತು. ತನ್ನ ದೊರೆ ಆರನೇ ವಿಕ್ರಮಾದಿತ್ಯನು ನರ್ಮದಾ ನದಿ ದಾಟಿ ದಿಗ್ವಿಜಯ ಸಾಧಿಸುವಲ್ಲಿ ಇವನು ಪ್ರಮುಖ ಪಾತ್ರ ವಹಿಸಿದಂತೆ ಕಾಣುತ್ತದೆ. ಈವರೆಗೆ ಸಿಂದರು ವಂಶಪಾರಂಪರ್ಯವಾಗಿ ಆಳುತ್ತ ಬಂದ ಕಿಸುಕಾಡು ೭೦, ನರೆಂಗಲ್ ೧೨, ಕೆಳವಾಡಿ ೩೦೦ ಮತ್ತು ಬಗಡಿಗೆ ೭೦ನ್ನು ತನ್ನ ಆಡಳಿತಕ್ಕೆ ಒಳಪಡಿಸಿಕೊಂಡನು. ಭೂಮಂಡಲದ ಮೇಲೆ ಸೂರ್ಯನಂತಿರುವ ಮಹಾಸೂರರಾದ ಇವನ ಹೆಸರು ಚಿರಸ್ಥಾಯಿಯಾಗಿ ಊಲಿದು ಸಾಹಸದಿಮದ ನಡುಗುತ್ತ ಯುದ್ಧವೇ ವ್ಯಸನವಾಗಿ ಸಿಡಿಲನ್ನು ತುಂಡರಿಸುವ ಹಾಗೆ ಆಶ್ಚರ್ಯಕರ ರೀತಿಯಲ್ಲಿ ವರ್ತಿಸುತ್ತಿದ್ದಾನೆ. ಇವನ ಹರಿತವಾದ ಖಡ್ಗದ ಬೆಳಕಿನಲ್ಲಿ ವೈರಿಗಳು ತಮ್ಮ ತಮ್ಮ ಅರಸಿಯರ ಅಲರ್ಗಣ್ಣ ಬೆಳಕನ್ನು ಕಂಡರು ಎಂದು ಸೂಡಿ ಶಾಸನವು ಬಣ್ಣಿಸುತ್ತದೆ.

ಈತನ ಕಲಾಪ್ರೀಯತೆ, ನೀತಿ ಶಾಸ್ತ್ರ ಸಂಗೀತಗಳ ಬಗ್ಗೆ ದೇವಾಲಯಗಳಿಗೆ, ಪಂಡಿತರಿಗೆ ದತ್ತಿದಾನಗಳನ್ನು ಇತ್ತದಾಗಿ ಕಾಲಕಾಲೇಶ್ವರದ ಶಾಸನವು ವಿವರಿಸುತ್ತದೆ. ಈತನನ್ನು “ಕುಶವ ಅರಸ”ನೆಂದು ಬಣ್ಣಿಸುವ ಕಾರಣ ಈ ವಂಶಕ್ಕೆ ಕುಶವ ಎಂಬ ಹೆಸರು ಕೂಡಾ ಇತ್ತು. ಈತನ ಕೈಗಿನ ಮತ್ತೊಬ್ಬ ಸಾಮಂತ ಜೋಗಗಾವುಂಡ ಎಂಬುವವನು ಕುಸಿಕಾಡು ೭೦ ರಲ್ಲಿರುವ ರಾಜೂರ ಗ್ರಾಮವನ್ನು ಆಳುತ್ತಿದ್ದು. ಜೋಗೇಶ್ವರ ದೇವರ ಪ್ರತಿಷ್ಠಾಪನೆ ಮಾಡಿದ. ಈ ಗಾವುಂಡನು ಈ ದೇವರಿಗೆ ಗೌರೇಶ್ವರ ದೇವರೆಂದು ಹೆಸರಿತ್ತುದಾಗಿ ರಾಜೂರ ಶಾಸನವು ಬಣ್ಣಿಸುತ್ತದೆ. ಈತನಿಗೆ ಮಹಾದೇವಿ ಎಂಬ ಹೆಂಡತಿ ಪೆರ್ಮನೆಂಬ ಮಗ ಹಾಗೂ ಚಂದಲಾದೇವಿಯಂಬ ಇನ್ನೊಬ್ಬ ಹೆಂಡತಿಯಿಂದ ಚಾವುಂಡನೆಂಬ ಮಗನಿದ್ದುದಾಗಿ ತಿಳಿದು ಬರುತ್ತದೆ. ಈತನ ಆಳ್ವಿಕೆಯಲ್ಲಿ ನಂಬಿಗಸ್ಥರು ವಿಶ್ವಾಸರ್ಹರು ಆದ ಅಧಿಕಾರಿಗಳಿದ್ದು ಅಂತಹವರಲ್ಲಿ ಬೊಮ್ಮನೆಂಬವನ ಬಗ್ಗೆ ಕೊಡಿಕೊಪ್ಪದ ಶಾಸನವು ಬೆಳಕು ಚೆಲ್ಲುತ್ತದೆ. ೧೧೨೪ರಲ್ಲಿ ಮರಣವಾದ ತರುವಾಯ ಇವನ ಮಗ ಪೆರ್ಮಾಡಿ ಪಟ್ಟಕ್ಕೆ ಬಂದನು.

ಒಂದನೇ ಪೆರ್ಮಾಡಿ (೧೧೨೫ – ೧೧೪೪) ಅಚರಸ ಮತ್ತು ಮಹಾದೇವಿಗೆ ಜನಿಸಿದನೆಂದು ಶಾಸನ ಬೆಳಕು ಚೆಲ್ಲುತ್ತದೆ. ಇವನು ಪ್ರಸಿದ್ಧಿ ಬೆಳಿದಿಂಗಳು ಭಾಮಂಡಲವು ಹೊಗಳುವ ಹಾಗೆ ಪಸರಿಸಿತು. ಸಿಂದ ಕುಲ ಕಮಲಾರ್ತಂಡನಾಗಿ ಮೆರೆದನು. ಇವನ ಸಾಹಸದ ಯುದ್ಧಗಳನ್ನು ಹಲವು ಶಾಸನಗಳು ಉಲ್ಲೇಖಿಸಿದರೆ, ಅವುಗಳ ಹೆಚ್ಚಿನ ವಿವರಗಳು ತಿಳಿದು ಬರುವದಿಲ್ಲ. ಈ ಪೆರ್ಮಾಡಿಯು ಸಾಧಿಸಿದ ವಿಜಯ ರೋಮಾಂಚನಕಾರಿಯಾದುದು. ಇವನು ಹೊಯ್ಸಳದ ಅರಸು ವಿಷ್ಣುವರ್ಧನನ್ನು ತುಂಗಭದ್ರೆಯ ಆಚೆ ದೂಡಿದುದಲ್ಲದೇ ಅವನ ರಾಜಧಾನಿಯಾದ ದೋರಸಮುದ್ರದವರೆಗೆ ಏರಿ ಹೋಗಿ ಬೆಳಾವುರವನ್ನು ಹಿಡಿದುಕೊಂಡನು. ಒಬ್ಬ ಸಾಮಂತನು ತನ್ನ ಸಾಮ್ರಾಟನಿಗಾಗಿ ಈ ರೀತಿ ಒಬ್ಬ ಸಾಮ್ರಾಟನ ಮೇಲೆ ಏರಿ ಹೋದದ್ದು ನಿಜಕ್ಕೂ ರೋಮಾಂಚನಕಾರಿಯದುದು.

ಅನೇಕ ಬಿರುದುಗಳನ್ನು ಹೊಂದಿದ ಈತನ ಕಾಲದಲ್ಲಿ ರಾಜಧಾನಿಯಾಗಿದ್ದ ಪಟ್ಟದಕಲ್ಲುದಿಂದ ಯಲಬುರ್ಗಿಗೆ ಸ್ಥಳಾಂತರವಾಗಿರಬಹುದೆಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಈತನ ಕಾಲದಲ್ಲಿ ಹೊಸ ಹೊಸ ಕಾವ್ಯಗಳು ಬೆಳಕಿಗೆ ಬಂದರೂ ಅವುಗಳ ಬಗ್ಗೆ ಹೆಚ್ಚಿನ ವಿವರಗಳು ದೊರಕುವುದಿಲ್ಲ. ಆನಂದವನ್ನು ಪಡೆಯುವುದರಲ್ಲಿ ಶಂಕರ ನಂದನನು ಸ್ವಾತಂತ್ರ್ಯವನ್ನು ಭೋಗಿಸುವಲ್ಲಿ ರವಿಧಾನನು ಆಗಿದ್ದನು. ತನ್ನ ಪಾಂಡಿತ್ಯದ ಕಾರಣ “ಎರಡನೇ ಭೋಜ” ಎಂಬ ಬಿರುದನ್ನು ಧರಿಸಿದ್ದನು. ಅನೇಕ ದೇವಾಲಯ ಮತ್ತು ಪಂಡಿತರಿಗೆ ಸಾಕಷ್ಟು ದಾನ ಧರ್ಮಗಳನ್ನು ನೀಡಿದನು.

ಇವನ ಧಾರ್ಮಿಕ ಚಟುವಟಿಕೆಗಳಿಗೆ ಪೋಷಕರಾಗಿ ನಿಂತವರು ಗುರುಗಳಾದ ಕಳೇಶ್ವರ ಸದ್ದಾಂತಿ ರಾಜಗುರುಗಳು. ಇವರನ್ನು “ಸಿಂದಾನ್ವಯದ ಶಿಕ್ಷಾದೀಕ್ಷಾಚಾರ್ಯಂ” ಎಂದು ಕರೆಯಲಾಗಿದೆ. ಈತನ ಆಳ್ವಿಕೆ ಶಾಂತಿ ಸಮೃದ್ಧಿಯಿಂದ ಕೂಡಿತ್ತು ಸುಮಾರು ಕ್ರಿ.ಶ. ೧೧೪೪ರಲ್ಲಿ ಮರಣ ಹೊಂದಿರಬೇಕು. ಇವನಿಗೆ ಮಕ್ಕಳಿಲ್ಲದ ಕಾರಣ ಇವನ ತಮ್ಮ ಚಾವುಂಡನು ಪಟ್ಟಕ್ಕೆ ಬಂದನು.

ಪಟ್ಟಕ್ಕೆ ಬಂದ ಎರಡನೇ ಚಾವುಂಡನು (೧೧೪೪ – ೧೧೬೯) ಆಚರಸ ಮತ್ತು ಚಂದಲದೇವಿಯವರ ಮಗ. ಇವನು ಉದಾರಗುಣನು ಶೌರ್ಯ ತ್ಯಾಗಗಳ ಪ್ರತೀಕನಾಗಿ ಇವನಿಂದ ಪೆರ್ಮಾಡಿ ದೇವನ ಕೀರ್ತಿ ದಶದಿಕ್ಕುಗಳಲ್ಲಿ ಪ್ರಕಾಶಮಾನವಾಗಿ ಹೊಳೆಯಿತು. ಆನೆಗಳಿಗೆ ಸಿಂಹದಂತೆ ರಾಣಿಯರ ಮುಕಮಂಡಳಕ್ಕೆ ಚೂಡಾಮಣಿ ಎನಿಸಿದ್ದನು. “ಕಂದುಕಾಳಿ” ಆಟದಲ್ಲಿ ಪ್ರವೀಣನಾದ ಈತನು ನೂರ್ಮಡಿ ತೈಲಪನ “ಪದಸೇವಾತತ್ಸರ ಬೃಂಗ” ಎಂದು ಶಾಸನಗಳು ಬಣ್ಣಿಸುವ ಹಿನ್ನಲೆಯಲ್ಲಿ ಮಹಾಮಂಡಳೇಶ್ವರ ನೂರ್ಮಡಿ ತೈಲಪನ ಮಹಾಮಂಡಳೇಶ್ವರನಾಗಿದ್ದನು ಎಂದು ಸ್ಪಷ್ಟವಾಗುತ್ತದೆ. ಇವನನ್ನು ನೋಡಿ ಬ್ರಹ್ಮನು ಅತಿಭಕ್ತನಾದರೆ, ಕಾಮನು ಸೋತರೆ, ಕುಬೇರನು ತನ್ನ ಸಂಪತ್ತನ್ನು ನೀಡಿದನು. ಈ ಹಿಂದೆ ವಿಷ್ಣುವರ್ಧನ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಅವನ ಮಗ ಒಂದನೇ ನರಸಿಂಹ ಪ್ರಯತ್ನಿಸಿರಬಹುದು ಆದರೆ ಈ ಹಿಂದೆ ಎರಡನೆಯ ಅಚುಗಿ, ಒಂದನೆಯ ಪೆರ್ಮಾಡಿಯ ಈ ಪ್ರಯತ್ನಕ್ಕೆ ಆತಂಕ ಒಡ್ಡಿದಂತೆ ಎರಡನೇ ಚಾವುಂಡನು ಸಮರ್ಥ ರೀತಿಯಿಂದ ಆ ದಾಳಿಯನ್ನು ಹತ್ತಿಕ್ಕಿದನು. ಎರಡನೆಯ ಅಚುಗಿ ಒಂದನೇಯ ಪೆರ್ಮಾಡಿ ಕಾಲದಲ್ಲಿದ್ದ ತಿಕ್ಕಾಟ ಇವನ ಕಾಲದಲ್ಲಿ ಇದ್ದಂತೆ ತೋರುವದಿಲ್ಲ. ಆರನೆಯ ವಿಕ್ರಮಾದಿತ್ಯನ ತರುವಾಯ ಚಾಲುಕ್ಯ ವಂಶ ಅವನತಿಗೊಂಡು ಮುಮ್ಮಡಿ ತೈಲಪನ ಕಾಲದಲ್ಲಿ ಕಳಚೂರಿ ಅರಸ ಬಿಜ್ಜಳನ ಪ್ರಾಬಲ್ಯಕ್ಕೆ ಬಂದು ಅರಸೊತ್ತಿಗೆ ಹಿಡಿದುಕೊಂಡನು. ಈತನಿಗೆ ಬಿಜ್ಜಳನ ತಂಗಿಯರಾದ ಸಿರಿಯಾದೇವಿ ಮತ್ತು ಲಕ್ಷ್ಮೀದೇವಿಯರನ್ನು ಕೊಟ್ಟು ಲಗ್ನ ಮಡಲಾಗಿತ್ತು. ಈ ಕಾರಣದಿಂದ ಕ್ರಾಂತಿಯ ಕಾಲದಲ್ಲಿ ಈತನು ಬಿಜ್ಜಳನ ಪರವಾಗಿದ್ದನು. ಇವನ ಮರಣಾನಂತರ ಅವನ ಮಕ್ಕಳಲ್ಲಿ ಆಶ್ರಯಿಸಬೇಕಾಯಿತು. ಇವನ ಕಾಲದಲ್ಲಿ ಯಲಬುರ್ಗಿಯ ಇಂದ್ರನ ಅಮರಾವತಿಯಂತೆ ರಾಮನ ಅಯೋಧ್ಯೆಯಂತೆ ಕೃಷ್ಣನ ಮಧುರೆಯಂತೆ ಶೋಭಿಸುತ್ತೆಂದು ಬೆಂಚನಮಟ್ಟಿಯ ಶಾಸನವು ವರ್ಣಿಸುತ್ತದೆ. ಇವನ ಪಟ್ಟದ ರಾಣಿ ದೇಮಲದೇವಿಯ ಕೀರ್ತಿ ದಶದಿಕ್ಕುಗಳಿಗೆ ಹಬ್ಬಿ ಆಕೆಯ ಪತಿ ಭಕ್ತಿ ಉದಾರಗುಣಗಳನ್ನು ಅನೇಕ ಶಾಸನಗಳು ಬಣ್ಣಿಸುತ್ತವೆ. ಈಕೆಯ ಗಂಡನೊಂದಿಗೆ, ಅವನ ಅನುಮತಿಯೊಂದಿಗೆ ಯಲಬುರ್ಗಿಯಲ್ಲಿರುವ ನೇಮಿಚಂದ್ರದೇವರಿಗೆ ದಾನವಿತ್ತುದ್ದು ತಿಳಿದುಬರುತ್ತದೆ. ಈ ರೀತಿ ಜೀನ ಶಾಲೆಗೆ ಮತ್ತು ಜೈನ ಗುರುಗಳಿಗೆ ಒಬ್ಬ ಶೈವ ಅರಸು ದಾನವಿತ್ತಿರುವುದು ಕರ್ನಾಟಕದ ಅರಸು ಮನೆತನದ ಪರಧರ್ಮ ಸಹಿಷ್ಣತೆಗೆ ಮಾದರಿಯಾಗಿದೆ. ಈಕೆಯ ಪಂಡಿತಳಾಗಿದ್ದಳಲ್ಲದೇ ಅನೇಕ ಶಿಕ್ಷಕರಿಗೆ ದಾನವಿತ್ತದ್ದಲ್ಲದೆ ತನ್ನ ಗಂಡನೊಂದಿಗೆ ರಾಜ್ಯ ಕಾರ್ಯದೊಂದಿಗೆ ತೊಡಗಿದ್ದಳು. ಚಾವುಂಡನಿಗೆ ದೇಮಲದೇವಿಯಲ್ಲದೆ ಈ ಹಿಂದೆ ಹೇಳಿದಂತೆ ಬಿಜ್ಜಳನ ಸಹೋದರಿಯಾದ ಸಿರಿಯಾದೇವಿ, ಲಕ್ಷ್ಮೀದೇವಿಯರೆಂಬ ಹೆಂಡತಿಯರು ಕೂಡಾ ಇದ್ದು ಇವರು ಗಂಡನೊಂದಿಗೆ ರಾಜ್ಯಭಾರದಲ್ಲಿ ಭಾಗವಹಿಸುತ್ತಿದ್ದರು. ಇವನ ಮಕ್ಕಳಾದ ವೀರಬಿಜ್ಜಳ ಮತ್ತು ವಿಕ್ರಮದೇವರು “ಶ್ರೀಮತು ಕಿಸುಕಾಡು ಎಪ್ಪತ್ತುಂ ಬಾಗಡಿಗೆ ಎಪ್ಪತ್ತುಂ ಕೆಳವಾಡಿ ಮೂನ್ನೂರುಂ ಸುಖಸಂಖಥಾ ವಿನೋಧದಿಂದ ರಾಜ್ಯಗೈಯುತ್ತಿದ್ದರೆಂದು” ಶಾಸನವೊಂದು ಬಣ್ಣಿಸುತ್ತದೆ.

ಈ ಚಾವುಂಡನು ಆಡಳಿತದ ಅನುಕೂಲಕ್ಕಾಗಿ ಮತ್ತು ಕಲಚೂರಿ ಅರಸರಿಂದ ತನ್ನ ರಾಜ್ಯ ರಕ್ಷಿಸುವುದಕ್ಕೆ ರಾಜ್ಯವನ್ನು ಭಾಗ ಮಾಡಿ ಅವುಗಳ ಆಡಳಿತ ಭಾರವನ್ನು ಹೆಂಡಿರ ಮಕ್ಕಳಲ್ಲಿ ಹಂಚಿದ್ದನು ಎಂಬುದು ತಿಳಿದು ಬರುತ್ತದೆ. ಅದರು ಕೆಲವರು ಇದನ್ನು ಅಲ್ಲಗಳೆಯುತ್ತಾರೆ. ಇವನ ಇನ್ನೊಬ್ಬ ದಂಡನಾಯಕ ಸೋಮರಸನ ಪ್ರಸ್ತಾಪವು ಮುಧೋಳದ ಶಾಸನದಲ್ಲಿ ಉಲ್ಲೇಖಿತವಾಗಿದೆ. ಇಪ್ಪತೈದು ವರ್ಷ ರಾಜ್ಯಭಾರ ಮಾಡಿ ೧೧೬೯ರಲ್ಲಿ ಇತನು ಮರಣವಪ್ಪಿದನು. ಇವನ ತರುವಾಯ ಇವನ ಮಕ್ಕಳಾದ ಬಿಜ್ಜಳ ಮತ್ತು ವಿಕ್ರಮನು ಮೂರನೇ ಅಚುಗಿ ಮತ್ತು ಎರಡನೇ ಪೆರ್ಮಾಡಿ ಪರಸ್ಪರ ಹೋರಾಡಿ ರಾಜ್ಯಭಾರ ಮುಂದುವರೆಸಿದರು.

ಮುಂದೆ ಚಾವುಂಡನಿಗೆ ರಾಮಲಕ್ಷ್ಮಣರಂತೆ ಬಿಜ್ಜಳ ಮತ್ತು ವಿಕ್ರಮನು(೧೧೬೯ – ೧೨೨೦) ಜನಿಸಿ ರಾಜ್ಯಭಾರ ಮಾಡಿದರು ಇವರಲ್ಲಿ ಬಿಜ್ಜಳನಿಗೆ “ಮಿಕ್ಕಪುರದೇವ ಮೂವರ ಗಂಡ” ಎಂಬ ಬಿರುದುಗಳಿದ್ದವು. ಬಿಜ್ಜಳನ ವೈರಿಗಳೆಂಬ ಆನೆಗಳಿಗೆ ಸಿಂಹದಂತೆ ಇದ್ದನಲ್ಲದೆ; ೬೪ ಕಲೆಗಳಲ್ಲಿ ಪ್ರಾವಿಣ್ಯತೆಯನ್ನು ಪಡೆದಿದ್ದನು.

ವಿಕ್ರಮನು ಅರಸರಲ್ಲಿ ಚೂಡಾಮಣಿ ಎನಿಸಿ ಸೂರ್ಯ ವಂಶದ ಯಾವ್ವನಾಶ್ವನ ಮಗಂನತೆ ಭೂಮಂಡಲವನ್ನು ರಕ್ಷಿಸಿದನು. “ನೂತನ ಬಲಿ” ಎನಿಸಿ ಮೆರೆದನು. ಇವರ ಕಾಲ ಸಂಘರ್ಷದ ಕಾಲ, ಎರಡನೇ ಚಾವುಂಡನ ಕಾಲಕ್ಕೆ ಎದ್ದ ವೈರತ್ವದ ಕಿಡಿ ಹಾಗೆ ಮುಂದುವರೆಯಿತು. ಕಲಚೂರಿ ಅರಸನು ಮತ್ತು ಚಾಲುಕ್ಯ ಅರಸರು ಹೋರಾಡುತ್ತಿದ್ದ ಕಾಲವದು. ಈ ಸಂದರ್ಭದಲ್ಲಿ ಕೆಲವು ದಿನ ಚಾಲುಕ್ಯ ಅರಸರ ಸಂಬಂಧ ಕಡಿದುಕೊಂಡು ಸ್ವತಂತ್ರವಾಗಿ ರಾಜ್ಯಭಾರ ಮಾಡಿದಂತೆ ಕಾಣುತ್ತದೆ. ಆಗ ಇವರಲ್ಲೇ ನಡೆದ ಅಂತಃಕಲಹದ ಉಪಯೋಗವನ್ನು ಕಲಚೂರಿ ಅರಸರು ಪಡೆದುಕೊಂಡ ಹಿನ್ನೆಲೆಯಲ್ಲಿ ಸಿಂದರು ಮೊದಲಿನಂತೆ ಸಾಮಂತರಾಗಿ ಉಳಿಯಬೇಕಾಯಿತು. ಕ್ರಿ.ಶ. ೧೧೭೪ರ ನಿಡಗುಂದಿ ಶಾಸನದಲ್ಲಿ “ಕಿಸಕಾಡು ನಾಡು ಅದರೊಳು ಭುವನಸ್ಪತ ರಾಜಧಾನಿ ಆ ವರಪುರ (ಯಲಬುರ್ಗಿ)ವನ್ನು ಪ್ರೀತಿಯಿಂದ ಆಳುವವನು ಅಮಲನಾದ ಸಿಂದಾನ್ವಯ ಲಕ್ಷ್ಮೀಧರನೆನಿಸದ ಬಿಜ್ಜಳದೇವ” ಎನ್ನಲಾಗಿದೆ. ಅಬ್ಬಿಗೇರಿಯ ಕ್ರಿ.ಶ.೧೧೭೪ರ ಶಾಸನದ ಪ್ರಕಾರ ಕಳಚೂರಿ ಅರಸುರಾಯ ಮುರಾರಿ ಸೋಯಿದೇವನು ರಾಜ್ಯವಾಳುತ್ತಿದ್ದಾಗ ಅವನ ಪಾದ ಪದ್ಮೋಪಜೀವಿ ಸಮಧಿಗತ ಪಂಚಮಹಾಶಬ್ದ ಮಹಾಮಂಡಳೇಶ್ವರ ಸಿಂದಕುಲ ಕಮಲಮಾರ್ತಾಂಡ ಹೆಟ್ಟಹಾಅಕುಲಾನ್ವಯ ಸಿಂದಾನ್ವಯರು ಇದ್ದುದಾಗಿ ಈ ಶಾಸನ ಉಲ್ಲೇಖಿಸಿದೆ. ಇದರಿಂದ ಸಿಂದರು ಕಳಚೂರಿವಂಶದ ಅರಸರ ಆಡಳಿತಕ್ಕೆ ಒಳಪಟ್ಟಿದ್ದರೆಂಬುದು ಸ್ಪಷ್ಟವಾಗುತ್ತದೆ. ಇಲ್ಲಿ ಸಿಂದ ಅರಸರನ್ನು ಹೆಟ್ಟಗಾಱುಕುಲಾನ್ವಯರೆಂದು ಕರೆದಿರುವದು ವಿಶೇಷವಾಗಿದೆ. ಕ್ರಿ.ಶ.೧೧೭೯ರ ರೋಣ ಶಾಸನವು ಕಲಚೂರಿ ಸಂಗಮ ದೇವನ ಮಾಂಡಲೀಕನಾಗಿ ವಿಕ್ರಮಾದಿತ್ಯನು ನಿಜರಾಧಾನಿಯೆನಿಪೆರಂಬರಗೆಯ ನೆಲೆವೀಡಿನೊಳು ಸುಖ ಸಂಕಥಾ ವಿನೋಧದಿಂದ ರಜ್ಯಂಗೈಯ್ಯುತ್ತಮಿದ್ದರು ಎಂದಿದೆ. ಮುಂದೆ ವಿಕ್ರಮನಿಗೆ ಮಕ್ಕಳಿಲ್ಲದೆ ಸತ್ತಿರಬಹುದು. ಈ ಸಂದರ್ಭದಲ್ಲಿ ಚಾಲುಕ್ಯ ಅರಸರು ವಾಸುದೇವನಾಯಕನನ್ನು ಅಧಿಕಾರಿಯನ್ನಾಗಿ ನೇಮಿಸಿ ಯಲಬುರ್ಗಿಯನ್ನು ಆಳಿದ್ದಾಗಿ ತಿಳಿದು ಬರುತ್ತದೆ. ಹೀಗೆ ಸಿಂದರು ೧೧೮೩ ರಿಂದ ೮೬ರವರೆಗೆ ಚಾಲುಕ್ಯವಂಶಾಧಿಪತ್ಯಕ್ಕೆ ಒಳಪಟ್ಟಿದ್ದರೆಂದು ಸ್ಪಷ್ಟವಾಗುತ್ತದೆ. ತಮ್ಮ ಅಧಿಕಾರದ ಏಳು ಬೀಳಿನಲ್ಲಿ ಅನೇಕ ದಾನ ದತ್ತಿಗಳನ್ನು ನೀಡಿದರು ೧೨ನೇ ಶತಮಾನದಲ್ಲಿ ಆಳಿದ ವಿಕ್ರಮನ ಮಂತ್ರಿಯಾದ ದೇವಣ್ಣರ್ಯನಾಯಕನು ಯಲಬುರ್ಗಿಯ ಪಾರ್ಶ್ವನಾಥ ಬಸದಿಗೆ ದಾನವಿತ್ತುದಾಗಿ ಶಾಸನಗಳು ಉಲ್ಲೇಖಿಸುತ್ತವೆ. ಹೀಗೆ ಬಿಜ್ಜಳ ವಿಕ್ರಮರು ೫೦ ವರ್ಷದವರೆಗೆ ಬೇರೆ ಬೇರೆ ಅರಸರ ಕೈಕಳಗೆ ರಾಜ್ಯಬಾರ ಮಾಡಿದರು.

ದೇಮಲದೇವಿ ಮತ್ತು ಚಾವುಂಡರಿಗೆ ಅಚಿದೇವ ಮತ್ತು ಪೆರ್ಮಾಡಿಯರು ಕೌಶಲ್ಯ ಮತ್ತು ದಶರಥನಿಗೆ ರಾಮಲಕ್ಷ್ಮಣರಂತೆ ಜನಿಸಿದ ಇವರು ವಿಕ್ರಮಬಿಜ್ಜಳನ ನಂತರ ಆಳ್ವಿಕೆಯನ್ನು(೧೧೬೩ – ೧೧೯೪) ಆರಂಭಿಸಿದರು ೩ನೇ ಅಚಗಿ ಮತ್ತು ೨ ನೇ ಪೆರ್ಮಾಡಿ ಎಂಬ ಹೆಸರಿನ ಇವರು ಅಪ್ರತಿಮ ತೇಜೋಮೂರ್ತಿಗಳು ಸಮುದ್ರ ಗಂಭೀರರು ಆಗಿದ್ದರೆಂದು ಕಾಲಕಾಲೇಶ್ವರ ಶಾಸನ ಬಣ್ಣಿಸುತ್ತದೆ. ಇವರು ವೀರ ಚಾವುಂಡರಾಯನು ಕಿಸಕಾಡು ೭೦, ಬಾಗಡಿಗೆ೭೦,ಕೆಳವಾಡಿ ೩೦೦ರನ್ನು ಆಳುತ್ತಿದ್ದಾಗ ಯಲಬುರ್ಗಿಯನ್ನು ಸುಖ ಸಂಖತಾ ವಿನೋಧದಿಂದ ಆಳ್ವಿಕೆ ಮಾಡುತ್ತಿದ್ದರು. ಚಾವುಂಡನ ಮರಣ ನಂತರ ಅವನ ಮಲ ತಂಮ್ಮದಿರಾದ ಬಿಜ್ಜಳ ಮತ್ತು ವಿಕ್ರಮಂದಿರು ಇವರ ಅರಸೊತ್ತಿಗೆಯನ್ನು ಕಿತ್ತುಕೊಂಡರು. ಬಿಜ್ಜಳ ಮತ್ತು ವಿಕ್ರಮರಿಗೆ ಕಲಚೂರಿವಂಶದ ಅರಸರು ಸಹಾಯ ಮಾಡಿದರೆ ೩ನೇ ಅಚುಗಿ ಮತ್ತು ೨ನೇ ಪೆರ್ಮಾಡಿಯರಿಗೆ ಅನುವಂಶಿಕವಾಗಿ ಅರಸೊತ್ತಿಗೆ ಮಾಡುತ್ತ ಬಂದಿದ್ದ ಚಾಲುಕ್ಯರ ೪ನೇ ಸೋಮೇಶ್ವರನೇ ಸಹಾಯ ಮಾಡಿದ್ದಾಗಿ ಕಾಲಕಾಲೇಶ್ವರ ಶಾಸನವು ೧೧೯೪ ಆಧಾರ ಒದಗಿಸುತ್ತದೆ. ಆಚಿದೇವ ಅರಸರು ಕಾಲಕಾಲೇಶ್ವರ ದೇವಸ್ಥಾನಕ್ಕೆ ನಿತ್ಯ ನೈವೇದ್ಯಕ್ಕೆ ದಾನವಿತ್ತುದಾಗಿ ಈ ಶಾಸನ ಹೇಳುತ್ತದೆ. ೧೨ನೇ ಶತಮಾನದ ಕೊನೆಯಲ್ಲಿ ಹೊಯ್ಸಳ ವಂಶದ ವೀರ ಬಲ್ಲಾಳನು ಯಾದವ ವಂಶದ ಭಿಲ್ಲಮನು ಏರಿ ಬಂದು ಧಾರವಾಡ ಉತ್ತರ ಭಾಗದವರೆಗೆ ಹೋಗಿ ೪ನೇ ಸೋಮೇಶ್ವರನ ಮಂತ್ರಿ ಬ್ರಹ್ಮನ್ನು ಸೋಲಿಸಿದನು. ಇಂಥ ಪ್ರಸಂಗದಲ್ಲಿ ಅಚುಗಿ ತನ್ನ ರಾಜ್ಯವನ್ನು ಕಳೆದುಕೊಂಡನು. ಆದರೆ ಮರಣದ ಕಾಲ ನಿರ್ಧಿಷ್ಟವಾಗಿ ತಿಳಿಯುವದಿಲ್ಲ ಈ ಅಚರಸ ಮತ್ತು ಪೆರ್ಮಾಡಿಯರು ಒಕ್ಕಲಿಗರ ಸಂತೋಷವೇ ತಮ್ಮ ಸಂತೋಷವೆಂದು ತಿಳಿದು ಭೂಮಿ ದನಕರುಗಳನ್ನು ದಾನವಾಗಿ ಇತ್ತರು.

ಅವಸಾನ ಕಂಡು ಅರಸುಮನೆತನ

ಬಿಜ್ಜಳ ಮತ್ತು ವಿಕ್ರಮರ ಮೂರನೇ ಅಚುಗಿ ಎರಡನೇ ಪೆರ್ಮಾಡಿ ಕಾಲದಲ್ಲಿ ಚಾಲುಕ್ಕರು ಪುನಃ ರಾಜ್ಯಸ್ಥಾಪನೆಯ ಪ್ರಯತ್ನ ಮುಂದುವರೆಸಿದರು ಚಾಲುಕ್ಯ ಅರಸು ೪ನೇ ಸೋಮೇಶ್ವರನು ೧೧೮೫ರಲ್ಲಿ ತನ್ನ ರಾಜ್ಯವನ್ನು ಎತ್ತಿ ಕಟ್ಟಲು ಪ್ರಯತ್ನಿಸಿದರು. ಆದರೆ ಯಾದವ ಅರಸರ ಪ್ರತಿರೋಧದಿಂದ ಸೋಲನ್ನು ಅನುಭವಿಸಬೇಕಾಯಿತು. ಇದರಿಂದ ಎರಡನೇ ವೀರಬಲ್ಲಾಳನ ತರುವಾಯ ಎರಡನೇ ನರಸಿಂಹನು ಈ ಅಕ್ರಮವನ್ನು ಮುಂದವರೆಸಿದನು. ಆದರೆ ಹೊಯ್ಸಳರ ಮತ್ತು ಯಾದವರ ಪ್ರಬಲ ದಾಳಿಯಿಂದ ತತ್ತರಿಸಿ ೧೨೧೫ರಲ್ಲಿ ಸಿಂದ ವಂಶ ಮೂಲೆ ಗುಂಪಾಗಿ ಯಾದವರ ಕೈವಶವಾಯಿತು.

ಸುಮಾರು ವರ್ಷಗಳ ಕಾಲ ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಒಂದು ಸಾಮ್ರಾಜ್ಯದ ಜೋಳವಾಬ್ದಿಯಾಗಿನಿಂತು ರಾಜ್ಯ ರಾಜ್ಯಗಳ ತಾಕಲಾಟದ ಮಧ್ಯ ಸಿಂದ ವಂಶವು ಸಣ್ಣಾಗಿ ಅಳಿದು ಹೋಯಿತು. ಈ ವಂಶದ ಅವನತಿಯೊಂದಿಗೆ ಇವರ ಮಂಡಳೇಶ್ವರರಾಗಿದ್ದ ಚಾಲುಕ್ಯ ಸಾಮ್ರಾಜ್ಯವು ನೆಲಕಚ್ಚಿಹೋಯಿತು.

ಸಮಕಾಲೀನ ಮಾಂಡಲೀಕರಲ್ಲಿ ಅತ್ಯಂತ ಪ್ರಸಿದ್ಧರಾದ ಈ ಸಿಂದರು ಚಾಲುಕ್ಯ ಕುಲಕ್ಕೆ ಭಕ್ತರಾಗಿ ವೀರತ್ಯಾಗಗಳ ನೃಪಶ್ರೇಷ್ಠರಾಗಿದ್ದರು, ಅರಿಮೊಕ್ಕಲು,ರೊಡೆಯರು, ಸರ್ಬ್ಯಗಾವುಂಡರು, ಮಹಾಜನಾಂಗಳನ್ನು ನೇಮಿಸುತ್ತಿದ್ದರು. ದೇವರ ನಂದಾದೇವಿಗೆ ಅಗ್ರಹಾರದಲ್ಲಿ ಬ್ರಾಹ್ಮಣ ಬೋಜನಕ್ಕೆ ದಾನಗಳನ್ನು ಬಿಡುತ್ತಿದ್ದರು. ಇದವರ ಗುರುಗಳಾದ ಸಿಂದವಂಶದ ದಿಕ್ಷಾಚಾರ್ಯರೆಂದು ಕರೆದುಕೊಂಡು ಕಳೇಶ್ವರಸಿದ್ದಾಂತ ಚಕ್ರವರ್ತಿಗಳು ಆಗ ಸಿದ್ದಾಂತ, ಮಂತ್ರಗಳ ಪರಿಣಿತರಾಗಿದ್ದರು. ಈ ಅರಸರ ಕಾಲದಲ್ಲಿ ಕೆಯ್ಸಾಮೊಳೆ, ನಿಡಗುಂದಿ, ಕಡಕೇರೆಗಳು ಪ್ರಮುಖ ಅಗ್ರಹಾರಗಳಾಗಿ, ಋಗ್ವೇದದ ತಾಯಿ, ಋಗ್ವೇದ ವಿರ್ಪನೆಲೆಗಳಾಗಿದ್ದವು. ಸುಮರು ೧೧ರಿಂದ ೧೩ನೇ ಶತಮಾನದವರೆಗೆ ಆಳಿದ ಈ ಮನೆತನ ಯಲಬುರ್ಗಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳಿದವು. ಆದರೆ ಇವರು ಆಳ್ವಿಕೆ ಮಾಡಿದ ಕುರುಹುಗಳಾಗಲಿ ಅರಮನೆ, ಗುರುಮನೆಗಳಾಗಲಿ ಇಂದು ಎಲ್ಲಿಯೂ ಪಳಿಯುಳಿಕೆಗಳಾಗಿಯೂ ಉಳಿದಿಲ್ಲ. ಚಾಲುಕ್ಯ ಸಾಮ್ರಾಟರ ಇವರು ನಾಡಿನ ಇತಿಹಾಸದ ಚಿರಸ್ಥಾಯಿಯಾಗಿ ಚಾಲುಕ್ಯ ಮಂಡಳೇಶ್ವರರಿಗೆ ಮಹಾಮಂಡಳೇಶ್ವರರಾಗಿ ಮೆರೆದ ಕೀರ್ತಿ ಈ ವಂಶದ್ದಾಗಿದೆ.

ಆಧಾರ ಗ್ರಂಥಗಳು

೧. ಡಾ. ಬಿ.ವ್ಹಿ. ಶಿರೂರ., ಯಲಬುರ್ಗಿಯ ಸಿಂದರು, ಉಪನ್ಯಾಸ ಗ್ರಂಥಮಾಲೆ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ,೧೯೭೭.

೨. ಡಾ. ಚನ್ನಬಸಯ್ಯ ಹಿರೇಮಠ, ಕುರುಗೋಡ ಸಿಂದರು ಒಂದು ಅಧ್ಯಯನ, ಸಂಗಣ್ಣ ಅಂಗಿ ಸಂಸ್ಕೃತಿ ಪ್ರತಿಷ್ಠಾನ, ಕೊಪ್ಪಳ, ೧೯೯೫

೩. ಡಾ. ಎಂ. ಚಿದಾನಂದಮೂರ್ತಿ, ಕನ್ನಡ ಶಾಸನಗಳು ಸಾಂಸ್ಕೃತಿಕ ಅಧ್ಯಯನ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು, ೧೯೬೬.

೪. ಡಾ. ಜಿ.ಎಂ. ನಾಗಯ್ಯ, ಬಳ್ಳಾರಿ ಜಿಲ್ಲೆಯ ಸಾಂಸ್ಕೃತಿಕ ಇತಿಹಾಸ, ಲೋಹಿಯಾ ಪ್ರಕಾಶನ ಬಳ್ಳಾರಿ, ೨೦೦೨

೫. ಸಂ, ಸರಿತಾಜ್ಞಾನಾನಂದ ಕೋಲಾರ, ಡಾ.ಬಾ.ರಾ. ಗೋಪಾಲ್ ಅವರ ಕನ್ನಡ ಲೇಖನಗಳು, ಕನ್ನಡ ಸಾಹಿತ್ಯ ಪರಿಷತ್ತು, ಕೆ.ಜಿ.ಎಫ್.

೬. Epigrhoa Indica, Vol – III

೭. Epigrhoa Indica, Vol – VII

೮. ಕನ್ನಡ ವಿಷಯ ವಿಶ್ವಕೋಶ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು,೧೯೭೯.