ಕರ್ನಾಟಕ ರಾಜಕೀಯ ಇತಿಹಾಸ ಒಂದು ರೀತಿಯಲ್ಲಿ ರಾಜರುಗಳ ಇತಿಹಾಸವಾಗಿ ಕಾಣುತ್ತದೆ. ದೊಡ್ಡ ದೊಡ್ಡ ಅರಸು ಮನೆತನಗಳು, ಅವುಗಳಲ್ಲಿ ಪ್ರಸಿದ್ಧ ರಾಜರುಗಳು ಈ ನಾಡಿನ ರಾಜಕೀಯ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದಿದ್ದಾರೆ ಎಂಬುದು ನಿಜ. ಆದರೆ ಇದು ರಾಜಕೀಯ ಇತಿಹಾಸದ ಪೂರ್ಣ ಚಿತ್ರವಲ್ಲ, ದೊಡ್ಡ ಸಾಮ್ರಾಜ್ಯಗಳು ಅಸ್ಥಿತ್ವದಲ್ಲಿರುವಾಗಲೇ ಚಿಕ್ಕ ಚಿಕ್ಕ ಸಂಸ್ಥಾನಗಳು, ಸಾಮಂತ ರಾಜರುಗಳು ಮತ್ತು ಆಯಾ ಸಂಸ್ಥಾನಗಳ ಪಾಳೆಯಗಾರರು ಕೂಡಾ ಕರ್ನಾಟದಕ ರಾಜಕೀಯ ಇತಿಹಾಸದಲ್ಲಿ ಕಂಗೊಳಿಸುತ್ತಾರೆ. ಹಾಗೆ ನೋಡಿದರೆ ದೊಡ್ಡ ಸಾಮ್ರಾಜ್ಯ ಮತ್ತು ಅಲ್ಲಿನ ಚಕ್ರವರ್ತಿಗಳಿಗಿಂತ ಸ್ಥಳೀಯ ಸಂಸ್ಥಾನಗಳ ಪಾಳೇಗಾರರೇ ಆಯಾ ಪ್ರದೇಶದ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಜೀವನವು ರೂಪಗೊಳ್ಳಲು ಹೆಚ್ಚು ಶ್ರಮಿಸಿದ್ದಾರೆ. ಈ ದೃಷ್ಟಿಯಿಂದ ಕರ್ನಾಟಕದ ರಾಜಕೀಯ ಇತಿಹಾಸವನ್ನು ಅಧ್ಯಯನ ಮಾಡುವಾಗ ಸ್ಥಳೀಯ ಸಂಸ್ಥಾನಗಳ ಬಗೆಗೆ ತಿಳಿದುಕೊಳ್ಳುವುದು ಅಗತ್ಯವಾಗಿದೆ.

ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ವಿಜಯನಗರದ್ದು “ಸುವರ್ಣ ಇತಿಹಾಸ” ವಾಗಿದೆ. ಅದರ ಪಕ್ಕದಲ್ಲಿಯೇ ಇರುವ ಆನೆಗೊಂದಿ ಒಂದು ಚಿಕ್ಕ ಸಂಸ್ಥಾನವಾಗಿ ಮೆರೆದಿತ್ತು. ಆನೆಗೊಂದಿಯಿಂದ ೨ ಕಿ.ಮೀ.ಗಳ ಅಂತರದಲ್ಲಿರುವ ಕುಮ್ಮಟದುರ್ಗ ಪ್ರಸಿದ್ಧ ಕಂಪಿಲರಾಯ ಮತ್ತು ಆತನ ಮಗ ಕುಮಾರರಾಮನ ರಾಜಧಾನಿಯಾಗಿತ್ತು ಎಂಬುದಕ್ಕೆ ಅಲ್ಲಿ ದೊರಕುತ್ತಿರುವ ಅವಶೇಷಗಳೇ ಸಾಕ್ಷಿಯಾಗಿವೆ, ವಿಶಾಲವಾದ ಮೈದಾನದಲ್ಲಿ ಅರಮನೆ, ಕಂಪಿಲರಾಯ ಕಟ್ಟಿದ ಕೆರೆ ಇಂದಿಗೊ ಮೂಕ ಸಾಕ್ಷಿಗಳಾಗಿವೆ, ವಿಜಯನಗರದ ಸಾಮ್ರಾಜ್ಯ ಅಸ್ತಿತ್ವಕ್ಕೆ ಬರುವ ಪೂರ್ವದಲ್ಲಿಯೇ ‘ಕಂಪಿಲರಾಯ’ ಮತ್ತು ಆತನ ತಂದೆ ‘ಮುಮ್ಮಡಿಸಿಂಗ’ರು ಇಲ್ಲಿ ಸಾಮ್ರಾಜ್ಯ ಸ್ಥಾಪಿಸಿದ್ದರೆಂಬುದು ಕರ್ನಾಟಕದ ರಾಜಕೀಯ ಇತಿಹಾಸದ ಮೇಲೆ ಹೊಸ ಅಂಶಗಳನ್ನು ಕಾಣಿಸುತ್ತದೆ. ಆಗ ಆನೆಗೊಂದಿ ಒಂದು ಚಿಕ್ಕ ಪಟ್ಟಣವಾಗಿ ಕಂಪಿಲರಾಯನ ಆಳ್ವಿಕೆಗೆ ಒಳಪಟ್ಟಿರಬೇಕು.

ಈಗ ಆನೆಗೊಂದಿ ಸಂಸ್ಥಾನದ ರಾಜಕೀಯ ಇತಿಹಾಸಕ್ಕೆ ಸಂಬಂಧಿಸಿ ದೊರಕುವ ಮಾಹಿತಿಗಳ ಮೇಲೆ ಕೆಲವು ವಿಚಾರಗಳನ್ನು ಇಲ್ಲಿ ವಿವರಿಸಿದೆ.

ಆನೆಗೊಂದಿ ಸಂಸ್ಥಾನದ ಕುರಿತು ಎರಡು ಅಭಿಪ್ರಾಯಗಳು ಗಮನ ಸೆಳೆದಿವೆ. ೧. ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಾಗುವ ಪೂರ್ವದಲ್ಲಿಯೇ ಆನೆಗೊಂದಿ ಸಂಸ್ಥಾನ ಅಸ್ತಿತ್ವದಲ್ಲಿತ್ತು. ೨. ವಿಜಯನಗರದ ಕೊನೆಯ ಯುದ್ಧ ‘ರಕ್ಕಸ ತಂಗಡಿ’ಯ ನಂತರ ಈ ಸಂಸ್ಥಾನ ಅಸ್ತಿತ್ವಕ್ಕೆ ಬಂತು.

ಈ ಮೇಲಿನ ಅಭಿಪ್ರಾಯಗಳಲ್ಲಿ ಮೊದಲಿನ ಅಭಿಪ್ರಾಯವೇ ಸರಿಯೆಂದೆನಿಸುತ್ತದೆ. ಏಕೆಂದರೆ ವಿಜಯನಗರ ಸಾಮ್ರಾಜ್ಯ ಅಸ್ತಿತ್ವಕ್ಕೆ ಬರುವ ಪೊರ್ವದಲ್ಲಿಯೇ ಕಂಪಿಲರಾಯನ ತಂದೆಯಾದ ಮುಮ್ಮಡಿ ಸಿಂಗನು ಆನೆಗೊಂದಿ ಪ್ರದೇಶದಲ್ಲಿ ರಾಜ್ಯಭಾರ ಮಾಡುತ್ತಿದ್ದ, ಆತನ ಮಗ ಕಂಪಿಲ ಪ್ರಸಿದ್ಧ ಅರಸನಾಗಿದ್ದ. ಅಷ್ಟೇ ಅಲ್ಲ ಕಂಪಿಲನ ಮಗ ಕುಮಾರ ರಾಮನಂತೂ ಯುದ್ಧವೀರನಲ್ಲದೆ, ಸಾಂಸ್ಕೃತಿಕ ವೀರನಾಗಿಯೂ ಮೆರೆದು ತಮ್ಮ ಸಾಮ್ರಾಜ್ಯವನ್ನು ದಕ್ಷಿಣದ ಹಳೇ ಮೈಸೂರು ಪ್ರಾಂತದವರೆಗೆ ಕುಮ್ಮಟದುರ್ಗ, ಹೊಸಮಲೆದುರ್ಗ, ಕಂಪ್ಲಿ ಮುಂತಾದ ಪ್ರದೇಶಗಳು ಕೋಟೆ – ಕೊತ್ತಲಗಳಿಂದ, ಪ್ರಸಿದ್ಧ ದೇವಸ್ಥಾನಗಳಿಂದ ವಿಜೃಂಭಿಸಿದ್ದುದನ್ನು ಈ ಹಿನ್ನೆಲೆಯಲ್ಲಿ ಗಮನಿಸಬಹುದಾಗಿದೆ. ಕ್ರಿ.ಶ. ೧೩೧೯ – ೨೯ ರ ಸುಮಾರಿನಲ್ಲಿ ಆಗ್ಗೆ ಆ ಪ್ರದೇಶದ ಅರಸನಾಗಿದ್ದಾಗ ಕೈಗೊಂಡ ಯುದ್ಧವೊಂದರಲ್ಲಿ ಆತನ ಮಂತ್ರಿಗಳಲ್ಲಿ ಒಬ್ಬನಾದ ಬೆಂಡುಪುಡ್ಡಿ ಅನ್ನಾ ಎಂಬುವವನೊಂದಿಗೆ ಅರವೀಡು ಪ್ರಭುಗಳ ವಂಶಿಯನಾದ ಸೋಮದೇವನನ್ನು ಸೋಲಿಸಿ ಅವನ ಕುಟುಂಬದ ಏಳು ಮಂದಿಯನ್ನು ವಶಪಡಿಸಿಕೊಂಡಂತೆ ಶ್ರೀನಾಥ ‘ಭೀಮಖಂಡ’ ಹಾಗೂ ಕೋನೇರು ಕವಿಯ ‘ಬಾಲಭಾಗವತಮು’ ಎಂಬ ಕೃತಿಗಳಿಂದ ತಿಳಿದುಬರುತ್ತದೆ. ಇಲ್ಲಿ ಉಕ್ತನಾಗಿರುವ ರಾಘವನು ಕಾಕತೀಯರ ಕೈಕೆಳಗೆ ಕರ್ನೂಲು ಮತ್ತು ಅದರ ಆಸುಪಾಸಿನ ಪ್ರದೇಶದ ಒಬ್ಬ ಚಿಕ್ಕ ಪ್ರಭುವಾಗಿದ್ದನು೧ ಅಂದರೆ ವಿಜಯನಗರ ಸಾಮ್ರಾಜ್ಯ ಪೂರ್ವಕಾಲದಲ್ಲಿಯೇ ಪ್ರಸಿದ್ಧ ಸಾಮ್ರಾಜ್ಯವೊಂದು ಅಸ್ತಿತ್ವದಲ್ಲಿತ್ತೆಂಬುದಕ್ಕೆ ಮೇಲಿನ ಮಾತುಗಳು ನಿದರ್ಶನವಾಗಿವೆ.

ಆನೆಗೊಂದಿ ಸಂಸ್ಥಾನದ ರಾಜಮನೆತನಗಳಲ್ಲಿ ಬೇಡಜನಾಂಗದ ಅರಸರೆ ಮೊದಲಿನವರಾಗಿದ್ದು, ಆ ಸಂತತಿ ಇಂದಿಗೂ ಉಳಿದುಕೊಂಡು ಬಂದಿರುವುದನ್ನು ಕಾಣುಬಹುದು. ಮೇಲಾಗಿ ವಿಜಯನಗರ ಸಂಸ್ಥಾನದ ಮೂಲ ಪುರುಷರು ಆಗಲೇ ಅಸ್ತಿತ್ವದಲ್ಲಿದ್ದ ಆನೆಗೊಂದಿ ಪಟ್ಟಣವನ್ನೆ ರಾಜಧಾನಿಯನ್ನಾಗಿ ಮಾಡಿಕೊಂಡು ಸಾಮ್ರಾಜ್ಯ ಸ್ಥಾಪಿಸಿದ್ದರೆಂದು ತಿಳಿದುಬರುತ್ತದೆ.

ಈ ಮೊದಲೇ ಹೇಳಿರುವಂತೆ ವಿಜಯನಗರ ಸಾಮ್ರಾಜ್ಯದ ಪ್ರಾರಂಭದಲ್ಲಿ ‘ಆನೆಗೊಂದಿ’ಯೇ ರಾಜಧಾನಿಯಾಗಿದ್ದಿತು. ಕ್ರಿ.ಶ. ೧೩೬೮ ವರೆಗಿನ ಯಾವುದೇ ಅಧಿಕೃತ ದಾಖಲೆಗಳಲ್ಲಿ ವಿಜಯನಗರವನ್ನು ತಮ್ಮ ರಾಜಧಾನಿಯೆಂದು ಉಲ್ಲೇಖಿಸಿಕೊಂಡಿಲ್ಲ. ಇತ್ತೀಚೆಗೆ ಹಂಪಿಯಲ್ಲಿ ಶೋಧವಾದ ಬುಕ್ಕರಾಯನ ಕಾಲದ ಶಾಸನಗಳು೨ ಬುಕ್ಕರಾಯನ ವಿಜಯನಗರ ಎಂದ ಖಚಿತವಾಗಿ ಉಲ್ಲೇಖಸಿರುವುದರಿಂದ ಬುಕ್ಕರಾಯನ ಕಾಲಕ್ಕಿಂತ ಹಿಂದೆ ವಿಜಯನಗರ ರಾಜಧಾನಿ ರಚನೆಯಾಗಿರಲಿಲ್ಲ ಎಂಬುದನ್ನು ಇನ್ನಷ್ಟು ಖಚಿತಪಟ್ಟಿದೆ. ಕ್ರಿ.ಶ.೧೩೭೯ರವರೆಗೂ ಹಸ್ತಿನಾವತಿ ಆನೆಗೊಂದಿ ರಾಜಧಾನಿಯಾಗಿ ಕಾರ್ಯನಿರ್ವಹಿಸುತ್ತಿತ್ತೆಂಬುದಕ್ಕೆ ಶಾಸನಾಧಾರವಿದೆ.

ಅರವೀಡು ವಂಶಸ್ಥರು ಮೊದಲಿಗೆ ಆನೆಗೊಂದಿಯಲ್ಲಿಯೆ ರಾಜ್ಯಭಾರ ಮಾಡಿ, ನಂತರ ಹಂಪಿಗೆ ಸ್ಥಳಾಂತರಿಸಿದರು ಎಂಬುದು ಕೂಡಾ ದೃಡಪಟ್ಟಿದೆ. ಏಕೆಂದರೆ ಇವರ ಶಾಸನಗಳಲ್ಲಿ ‘ಹಂಪಿ – ಹಸ್ತಿನಾವತಿ’ ಅಥವಾ ‘ವಿಜಯನಗರ’ ಇತ್ತು. ಆನೆಗೊಂದಿ ಕೋಟೆ ಮುಂತಾದ ಪದಗಳು ಅಲ್ಲಿ ದಾಖಲಾಗಿವೆ. ಇದನ್ನು ನೋಡಿದರೆ ಕ್ರಿ.ಶ.೧೩೬೮ಕ್ಕಿಂತ ಪೂರ್ವದಲ್ಲಿ ಆನೆಗೊಂದಿ ರಾಜಧಾನಿ ಆಗಿತ್ತು ಎಂಬುದು ದೃಢಪಟ್ಟಿದೆ. ಅದೇನೆ ಇದ್ದರೂ…………… ವಿಜಯನಗರದ ಪತನಾಂತರ ಆನೆಗೊಂದಿ ಮತ್ತು ಹಂಪೆ ಎರಡು ಮುಸ್ಲಿಂರ ದಾಳಿಗೆ ಒಳಗಾಗಿವೆ (೧೫೫೬ ಅಲಿ ಆದಿಲ್‌ಷಹ, ಬಿಜಾಪುರ).

ನಂತರ ಕೃಷ್ಣದೇರಾಯನ ಮೊಮ್ಮಗ ಪೆದ್ದತಿಮ್ಮ ಮತ್ತು ತಿರುಮಲ, ಅಳಿಯ ರಾಮರಾಜನ ಮಗ ೪ನೇ ರಂಗ ಮುಂತಾದವರು ಈ ಸಂಸ್ಥಾನದಲ್ಲಿ ರಾಜ್ಯಬಾರ ಮಾಡಿದ ವಿಷಯ ತಿಳಿದುಬರುತ್ತದೆ. ೧೭೪೯ ರಲ್ಲಿ ಮರಾಠರು ಆನೆಗೊಂದಿಯ ಮೇಲೆ ದಾಳಿಮಾಡಿ, ಅಧಿಕಾರ ಸ್ಥಾಪಿಸುತ್ತಾರೆ. ಇವರ ಮೇಲೆ ಹೈದರಾಬಾದ ನಿಜಾಮ ಮತ್ತು ಮರಾಠ ಪೇಶ್ವಗಳ ಜಹಗೀರ ಆಗಿ ಪರಿವರ್ತಿತಗೊಂಡು, ಪುನಃ ೧೭೯೯ ರಲ್ಲಿ ಟಿಪ್ಪು ಇವರನ್ನು ಸೋಲಿಸಿ ಆನೆಗೊಂದಿಯನ್ನು ತನ್ನ ಅಂಕಿತಕ್ಕೆ ಸೇರಿಸಿಕೊಂಡ ವಿಷಯವು ಇತಿಹಾಸದಲ್ಲಿ ದಾಖಲಾಗಿದೆ. ಈ ಜಹಗೀರನ ವಾರಸುದಾರರಾಗಿ ತಿರುಮಲದೇವರಾಯ, ಅಚ್ಯುತದೇವರಾಯ, ಕೃಷ್ಣದೇವರಾಯ ಈಗಿನ ಈ ಭಾಗದ ಮಾಜಿ ಶಾಸಕರಾದ ಶ್ರೀರಂಗದೇವರಾಯಲಯ,ರಾಮದೇವರಾಯ ಮತ್ತು ಅವರ ಕುಟುಂಬದವರು ಇದ್ದಾರೆ ಎಂಬುದನ್ನು ನಾವಿಂದು ಸ್ಮರಿಸಿಕೊಳ್ಳಬಹುದು. ಈ ಸಂಸ್ಥಾನಿಕರ ವಂಶಾವಳಿ ಈ ಕೆಳಗಿನಂತಿದೆ.

ಆನೆಗೊಂದಿ ಸಂಸ್ಥಾನದ ಅವಶೇಷಗಳು

ಆನೆಗೊಂದಿ ಪಟ್ಟಣದ ಸುತ್ತ – ಮುತ್ತ ಇವೊತ್ತಿಗೂ ಉಳಿದಕೊಂಡು ಬಂದಿರುವ ಅವಶೇಷಗಳು ಈ ಸಮ್ರಾಜ್ಯದ ಹಿರಿಮೆಯನ್ನು ಸಾರುತ್ತವೆ. ಭದ್ರವಾದ ಕೋಟೆ, ತುಂಗಭದ್ರಾ ನದಿಯ ಸೇತುವೆ, ಕುದುರೆಸಾಲು ಮಂಟಪ, ಎತ್ತರದ ದೀಪಸ್ತಂಭ, ಶಿಲಾ ಗುಹೆಗಳು, ಪ್ರಾಚೀನ ಅರಮನೆ, ರಂಗನಾಥ ದೇವಾಲಯ, ದುರ್ಗಾಮಾತೆಯ ಬೆಟ್ಟ ಮತ್ತು ದೇವಸ್ಥಾನ ಇವೆಲ್ಲ ಆ ಕಾಲದ ಉನ್ನತಿಯನ್ನು ಸಾರುವ ಮೂಕ ಸಾಕ್ಷಿಗಳಾಗಿವೆ. ಆನೆಗೊಂದಿ ಕೋಟೆಗಳಂತೂ ಉಕ್ಕಿನ ಕೋಟೆಗಳೆಂದೇ ಹೆಸರು ಪಡೆದಿದ್ದು, ಅನ್ಯ ಮತೀಯರ ದಾಳಿಗೆ ಸಿಕ್ಕು, ಆನೆಗೊಂದಿ ಸಂಸ್ಥಾನ ನಲುಗಿಹೋಗಿದ್ದರೂ, ಇಲ್ಲಿನ ಕೋಟೆಕೊತ್ತಲಗಳು, ದೇವಸ್ಥಾನಗಳು ಅಷ್ಟು ಮುಕ್ಕಾಗದೆ ಉಳಿದೆವೆ. ಪಟ್ಟಣ ಪ್ರವೇಶದ ದ್ವಾರ ಬಾಗಿಲುಗಳು ಇಂದಿಗೂ ಕೈಮಾಡಿ ಕರೆಯುತ್ತವೆ. ಇಲ್ಲಿನ ರಂಗನಾಥ ದೇವಸ್ಥಾನ ಸಾಂಸ್ಕೃತಿಕ ಮಹತ್ವವನ್ನು ಪಡೆದೆದೆ. ಇವೆಲ್ಲ ಒಂದು ಕಾಲಕ್ಕೆ ಈ ಪ್ರದೇಶದ ಪಾತ್ರ, ತೇಜಸ್ಸು ಎಷ್ಟೊಂದು ತ್ಯಾಗ ಬಲಿದಾನಗಳ ಕೇಂದ್ರ ಸ್ಥಾನವಾಗಿತ್ತು ಎಂಬುದನ್ನು ವಿವರಿಸುತ್ತವೆ. ಇತಿಹಾಸ ಪೂರ್ವಕಾಲದಿಂದಲೂ ಪ್ರಸಿದ್ಧ ಪಟ್ಟಣವಾಗಿ ಹೆಸರಾಂತ ರಾಜಧಾನಿಯಾಗಿ ಆನೆಗೊಂದಿ ಮೆರೆದಿದೆ. ಈ ಸಾಮ್ರಾಜ್ಯವನ್ನು ಮೂಲದಲ್ಲಿ ಈ ಭಾಗ ಬೇಡ ಜನಾಂಗವೇ ಕಟ್ಟಿತೆಂದು ಇನ್ನೂ ಸಂಶೋಧನೆಯಿಂದ ಗಟ್ಟಿಗೊಳ್ಳಬೇಕಾಗಿದೆ. ಆದರೆ ಇತಿಹಾಸ ಪ್ರಸಿದ್ಧ ಕಂಪಿಲರಾಯ ಮತ್ತು ಆತನ ಮಗ ಕುಮಾರರಾಮ ಬೇಡ ಜನಾಂಗದವರೆ ಆಗಿದ್ದು, ವಿಜಯನಗರ ಸಾಮ್ರಾಜ್ಯಕ್ಕಿಂತಲೂ ಪೂರ್ವದಲ್ಲಿ ಒಂದು ಸಾಮ್ರಾಜ್ಯದ ಅಧಿಪತಿಗಳಾಗಿ ಮೆರೆದಿದ್ದಾರೆ. ಕುಮಾರರಾಮನಂತೂ ಇತಿಹಾಸದಲ್ಲಿ ಅಷ್ಟೇ ಅಲ್ಲ, ಜನರ ಸ್ಮರಣೀಯ ಭಾಗವಾಗಿ ಕಾವ್ಯ, ಕಥೆ, ನಾಟಕಗಳಲ್ಲಿ ನಾಯಕನಾಗಿ ಚಿತ್ರಣಗೊಂಡಿದ್ದಾನೆ. ಇವರು ಕಟ್ಟಿದ ಸಾಮ್ರಾಜ್ಯ ಅನತಿಕಾಲದಲ್ಲಿಯೇ ಬಿದ್ದು ಹೋದ ಪರಿಣಾಮವಾಗಿಯೇ ಅಥವಾ ಇವರೆಲ್ಲ ಕೆಳಜಾತಿಯ ರಾಜರಾಗಿದ್ದರೆಂದೂ, ಪ್ರಚಾರದಲ್ಲಿ ಈ ಸಂಸ್ಥಾನ ಮುಂದುವರೆಯಲಿಲ್ಲ. ನಾಡಿನ ಇತಿಹಾಸಕಾರರು ಮತ್ತು ಸಂಶೋಧಕರೂ ಕೂಡ ಈ ಕುರಿತು ಹೆಚ್ಚಿನ ಸಂಶೋಧನೆ ಯಾಕೆ ನಡೆಸಲಿಲ್ಲವೊ ತಿಳಿಯದು. ಆದರೆ ಇಂದು ಕೆಳಜಾತಿಯ ಜನಗಳಲ್ಲೂ ಜಾಗೃತಿ ಮೂಡಿದೆ. ಚರಿತ್ರೆಯಲ್ಲಿ ತಾವು ಎಂತಹ ಶೂರರಾಗಿದ್ದೇವೆಂಬುದನ್ನು ಅವರು ಮನಃ ಗಾಣುತ್ತಿದ್ದಾರೆ. ಇನ್ನಾದರೂ ಮಸುಕು ಮಸಕಾಗಿರುವ ಆನೆಗೊಂದಿ ಸಂಸ್ಥಾನ ಕುರಿತು ಈ ಪ್ರಧೇಶದ ಸಾಂಸ್ಕೃತಿಕ ವೈಭವ ಕುರಿತು, ಆಳಿದ ಅರಸು ಮನೆತನಗಳ ಕುರಿತು ಹೆಚ್ಚಿನ ಸಂಶೋಧನೆ ನಡೆದರೆ ಇನ್ನಷ್ಟು ಹೊಸ ಅಂಶಗಳು ಬೆಳಕಿಗೆ ಬರಬಹುದು.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)