ಕಾಡು – ಕಣಿವೆಗಳನ್ನು ತಾಣವಾಗಿಸಿಕೊಂಡು, ಬೇಟೆಯ ಉಪಜೀವನವನ್ನು ರೂಢಿಸಿಕೊಂಡು ಬೇಡ ನಾಯಕರು ಮೂಲತಃ ಕ್ಷತ್ರಿಯ ಕುಲಕ್ಕೆ ಸೇರಿದವರು. ಸಾಹಸ ಶೌರ್ಯಕ್ಕೆ ಹೆಸರಾದ ಈ ಬೇಡ ಜನಾಂಗವನ್ನು ಕರ್ನಾಟಕದ ರಾಜರು ತಮ್ಮ ಸೈನ್ಯದಲ್ಲಿ ಸೇರಿಸಿಕೊಂಡರು. ಯುದ್ಧ ಪ್ರೇಮಿಗಳಾದ ಇವರು ಬಹುಬೇಗ ಸೈನ್ಯದಲ್ಲಿ ಉನ್ನತ ಸ್ಥಾನಮಾನ ಸಂಪಾದಿಸಿದರು.

ವಿಜಯನಗರ ಅರಸರ ಕಾಲದಲ್ಲಿ ಬಹಳಷ್ಟು ಪಾಳೆಯಗಾರರು ತಲೆ ಎತ್ತಿದರು. ವಿಜಯನಗರದ ಅರಸರು ವಿಸ್ತಾರವಾದ ಸಾಮ್ರಾಜ್ಯಕ್ಕೆ ಸೇರಿದ ನಾನಾ ಭಾಗದ ಆಳ್ವಿಕೆಯನ್ನು ತಾವೇ ನೇರವಾಗಿ ಮಾಡುವುದು ಕಷ್ಟವಾದಾಗ ಆಯಾ ಪ್ರದೇಶಗಳ ಆಡಳಿತ ಉಸ್ತುವಾರಿ, ಕಂದಾಯ ವಸೂಲಿ, ಶಾಂತಿ ಸುವ್ಯವಸ್ಥೆ ಕಾಪಾಡಲು ಅಧಿಕಾರಿಗಳನ್ನು ನೇಮಿಸುತ್ತಿದ್ದರು. ಅವರೇ ಕ್ರಮೇಣದಲ್ಲಿ ಪಾಳೆಯಗಾರರೆನಿಸಿಕೊಂಡರು. ಇವರೇ ವಿಜಯನಗರ ಸಾಮ್ರಾಜ್ಯದ ಗಟ್ಟಿ ತಳಪಾಯಗಳಾದರು. ಇವರಿಂದಲೇ ವಿಜಯನಗರದ ಸಾಮ್ರಾಜ್ಯವು ವಿಸ್ತಾರಗೊಳ್ಳಲು ಸಾಧ್ಯವಾಯಿತು. ಹೀಗಾಗಿ ವಿಜಯನಗರ ಸಾಮ್ರಾಜ್ಯವು ಪಾಳೆಯಗಾರರ ಒಂದು ಒಕ್ಕೂಟವೇ ಆಗಿತ್ತು ಎನ್ನಬಹುದು. ವಿಜಯನಗರದ ಅರಸು ದುರ್ಬಲರಾದಂತೆ ಪಾಳೆಯಗಾರರು ಪ್ರಬಲಗೊಳ್ಳುತ್ತಲೇ ಮುನ್ನಡೆದರು. ವಿಜಯನಗರಕ್ಕೆ ಬೆನ್ನೆಲುಬಾಗಿ ನಿಂತಿದ್ದ ಇವರು ಕ್ರಿ.ಶ.೧೫೬೫ ರ ತಾಳೀಕೋಟೆ ಕದನದಲ್ಲಿ ತಮ್ಮ ಧ್ಯೆರ್ಯ ಸಾಹಸಗಳನ್ನು ಮೆರೆದರು, ಆದರೆ ವಿಜಯನಗರ ಸಾಮ್ರಾಜ್ಯಕ್ಕೆ ಕೆಲವು ಕಾರಣಗಳಿಂದ ಸೋಲುಂಟಾಯಿತು.

ಕ್ರಿ.ಶ. ೧೫೬೫ರ ನಂತರ ಬಹುತೇಕವಾಗಿ ವಿಜಯನಗರ ಅಧೀನದ ಪಾಳೆಯಗಾರರು ಸ್ವತಂತ್ರರಾದರು. ಅವರಲ್ಲಿ ಬೇಡ ಸಂಸ್ಥಾನಗಳೇ ಅಧಿಕವಾಗಿವೆ. ಹೀಗಾಗಿ ವಿಜಯ ನಗರೋತ್ತರ ಕಾಲೀನ ಕರ್ನಾಟಕದ ಇತಿಹಾಸವನ್ನು ಬೇಡರ ಇತಿಹಾಸವೆಂದು ಕರೆಯಲಾಗಿದೆ. ಹೈದ್ರಾಬಾದ್ ಕರ್ನಾಟಕದ ರಾಯಚೂರು ಜಿಲ್ಲೆಯಲ್ಲಿಯೂ ನಾಯಕ ಜನಾಂಗದವರು, ಪಾಳೆಯಗಾರರಾಗಿ, ಸಂಸ್ಥಾನಿಕರಾಗಿ, ಅರಸರಾಗಿ ಅತ್ಯಂತ ಸಮರ್ಥವಾಗಿ ರಾಜ್ಯಭಾರ ಮಾಡಿದ್ದಾರೆ, ಅವರುಗಳಲ್ಲಿ ಗುಡಗುಂಟಿ,ಗುಂತಗೂಳ ಮತ್ತು ದೇವದುರ್ಗದ ನಾಯಕ ಮನೆತನಗಳು ಪ್ರಮುಖವಾದವುಗಳಾಗಿವೆ. ಇವರುಗಳು ಬಿಜಾಪುರದ ಆದಿಲ್‌ಶಾಯಿಗಳ ಆಡಳಿತಾವಧಿಯಲ್ಲಿ ನಿರ್ಲಕ್ಷಿಸಲ್ಪಟ್ಟ ಪ್ರದೇಶದಲ್ಲಿ ಸಂಸ್ಥಾನವನ್ನು ಸ್ಥಾಪಿಸಿ, ಬ್ರಿಟಿಷರು ಮತ್ತ ಹೈದ್ರಾಬಾದ್ ನಿಜಾಮಾರ ದಬ್ಬಾಳಿಕೆಯ ನಡುವೆಯೂ ಸಮರ್ಥವಾಗಿ ಆಳ್ವಿಕೆ ನಡೆಸಿದುದ್ದು ವಿಶೇಷವಾಗಿದೆ.

. ಗುಡಗುಂಟಿ ನಾಯಕ ಅರಸರು

ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನಿಂದ ೧೯ ಕಿ.ಮೀ. ದೂರದಲ್ಲಿರುವ ಗುಡಗುಂಟಿಯು ನಾಯಕ ಅರಸುಮನೆತನವಾಗಿತ್ತು. ಸುರಪುರ ಹಾಗೂ ಗುಡಗುಂಟಿ ಅರಸರು ಒಂದೇ ಮೂಲಕ್ಕೆ ಸೇರಿದವರು. ಇವರು ಗೋಸಲ ವಂಶದವರು. ಪ್ರಾಚೀನ ಕೈಫಿಯತ್ತುಗಳ ಪ್ರಕಾರ ಇವರ ಪೂರ್ವಜರು ದಕ್ಷಿಣದಿಂದ ಬಂದವರೆಂದು ಇವರ ಮೂಲಪುರುಷ ನರಸಿಂಹ ನಾಯಕನೆಂದು ಹೇಳುತ್ತದೆ. ಇವರ

ವಂಶಕ್ರಮ ಇಂತಿದೆ.

ನರಸಿಂಹನಾಯಕ
ವೀರಬೊಮ್ಮ ನಾಯಕ
ಸಿಂಗಪ್ಪನಾಯಕ
ಒಡೇರನಾಯಕ
ಕಲ್ಲಪ್ಪ ನಾಯಕ
ಚಿನ್ನ ಹಣಮನಾಯಕ
ಹಾವಿನಾಯಕ
ಪೆದ್ದ ಸೋಮನಾಯಕ
ಎಗ್ರಸಿಂಗನಾಯಕ
ಮದಕರಿನಾಯಕ
ವೀರಝಂಪನಾಯಕ
ಬಲಿಸೋಮನಾಯಕ
ಹಿರೇಪಾಮನಾಯಕ
ಜಕ್ಕಪ್ಪದೇಸಾಯಿ

ಈತನಿಗೆ ಇಬ್ಬರು ಮಕ್ಕಳು. ಗಡ್ಡಿ ಲಿಂಗನಾಯಕ ಮತ್ತು ಗಡ್ಡಿಪಿಡ್ಡನಾಯಕ. ಜಕ್ಕಪ್ಪ ದೇಸಾಯಿ ಕಕ್ಕೇರಿಯಲ್ಲಿರುತ್ತಿದ್ದ. ಈತನ ಮಕ್ಕಳು ಕಕ್ಕೇರಿಯ ಹತ್ತಿರ ಕೃಷ್ಣಾ ನದಿಯನ್ನು ಹರಿಗಡಿದು ಮಾಡಿದ ಸಣ್ಣ ನಡುಗಡ್ಡೆಗಳಲ್ಲಿರುತ್ತಿದ್ದರು. ಇಲ್ಲಿ ಆರು ನಡುಗಡ್ಡೆಗಲಿದ್ದವು. ಅವುಗಳ ಭೂವಿಸ್ತಾರ ಎರಡು ಮೂರು ಮೈಲುಗಷ್ಟಿದ್ದಿತು. ಅವು ನೀರದೇರಗಡ್ಡಿ, ದೇವರಗಡ್ಡಿ, ಜಂಗಿನಗಡ್ಡಿ, ಮೇಲಿನಗಡ್ಡಿ, ನೀಲಕಂಠರಾಯನಗಡ್ಡಿ, ಬೆಣಚಿನಗಡ್ಡಿಗಳಾಗಿದ್ದವು. ಈ ಗಡ್ಡಿಯಲ್ಲಿ ಇವರು ವಾಸಮಾಡುತ್ತಿರುವುದರಿಂದ ಇವರಿಗೆ ಗಡ್ಡಿ ಎಂಬ ಹೆಸರು ಬಂದಿತೆಂದು ಹೇಳುತ್ತಾರೆ.[1]

ಜಕ್ಕಪ್ಪ ದೇಸಾಯಿಯ ಹಿರಿಯ ಮಗನಾದ ಗಡ್ಡಿ ಲಿಂಗನಾಯಕನೇ ಗುಡಗುಂಟಿ ಸಂಸ್ಥಾನದ ಸ್ಥಾಪಕ. ಈ ಮೊದಲು ಕಕ್ಕೇರಿ ಭಾಗವು ವಿಜಾಪುರ ಆದಿಲ್‌ಷಾಹಿಗಳ ಸಾಮ್ರಾಜ್ಯದ ವ್ಯಾಪ್ತಿಗೆ ಒಳಪಟ್ಟಿದ್ದರಿಂದ ಲಿಂಗನಾಯಕ ಗುಡಗುಂಟಿ ಪರಗಣಿಯ ಸರದೇಸಾಯಿಯಾಗಿ ಬಡ್ತಿ ಹೊಂದಿ ಇಲ್ಲಿ ಆಳ್ವಿಕೆ ಪ್ರಾರಂಭಿಸಿದ. ಈತನ ಆಡಳಿತದಲ್ಲಿ ೪೪ ಹಳ್ಳಿಗಳು ಸೇರಿದ್ದವು. ಈತ ತನ್ನ ರಾಜ್ಯವನ್ನು ವಿಸ್ತರಿಸುದಕ್ಕಾಗಿ ಬಿಜಾಪುರದ ಆದಿಲ್‌ಷಾಹಿಗಳೆಡೆಗೆ ಚರ್ಚಿಸಲು ಹೋದಾಗ ಷೇಖಮಿನ ಹಾಜ ಸರದಾರನಿಂದ ಕೊಲ್ಲಲ್ಪಟ್ಟನು. ಈತನಿಗೆ ಏಳು ಜನ ಮಕ್ಕಳಿದ್ದರು. ಆಗ ಸುರಪುರದ ಗಡ್ಡಿ ಪಿಡ್ಡನಾಯಕನಿಗೆ ಮಕ್ಕಳಾಗದ ಕಾರಣ ಗುಡಗುಂಟಿಯ ತನ್ನ ಅಣ್ಣ ಲಿಂಗಾಯನಾಯಕನ ಮಗನಾದ ಪಾಮನಾಯಕನನ್ನು ದತ್ತಕ ತೆಗೆದುಕೊಂಡನು. ಈತನೇ ಸುರಪುರದ ಹಸರಂಗಿ ಪಾಮನಾಯಕ.[2] ಗಡ್ಡಿ ಲಿಂಗನಾಯಕ ಮರಣವನ್ನಪ್ಪಿದ ತರುವಾಯ ಆತನ ಮಗ ಜಡಿ ಸೋಮಪ್ಪನಾಯಕ ಬಿಜಾಪುರುದ ಸುಲ್ತಾನರಲ್ಲಿ ತನ್ನ ಶೌರ್ಯ, ಸಾಹನಗಳನ್ನು ತೋರಿಸಿದ್ದಾಕ್ಕಾಗಿ ‘ಸರ್ಜಾಬಹದ್ದೂರ” ಎಂಬ ಬಿರುದನ್ನು ಪಡೆದಿದ್ದಾನೆ. ಜೊತೆಗೆ ಕ್ರಿ.ಶ. ೧೬೬೯ರಲ್ಲಿ ಇಮ್ಮಡಿ ಆಲಿ ಆದಿಲ್‌ಶಾಹನಿಂದ (ಷಹೂರಸನ್ ಬನಯೀನವ ಅಲಫ ೧೦೭೦) ಒಂದು ಫಾರಸಿ ಸನದು ದೊರಕಿದೆ. ಈ ಸನದಿನಲ್ಲಿ ಸಮತ ಬೈಚಬಾಳು ಮತ್ತು ಕಕ್ಕೇರಿಯ, ಗುಡಗುಂಟಿಯ ಕೆಲವು ಹಳ್ಳಿಗಳನ್ನು ಜಡಿಸೋಮನಾಯಕನಿಗೆ ಇನಾಮು ಕೊಡಲಾಗಿದ್ದು ಇದನ್ನು ಗುಡಗುಂಟಿ ಅಥವಾ ಮಾದರಾಯನ ಕೋಟೆಯ (ಇಂದಿನ ಕೋಠಾ ಗ್ರಾಮ) ದೇಸಾಯಿ ಮತ್ತು ನಾಡಗೌಡರಿಗೆ ಸಂಭೋಧಿಸಲಾಗಿದೆ.[3] ಹೀಗಾಗಿ ಗುಡಗುಂಟಿ ಸಂಸ್ಥಾನವು ಕ್ರಿ.ಶ. ೧೬೬೯ರಲ್ಲಿ ಸ್ಥಾಪನೆಯಾಗಿದೆ.

ಈತನ ತರುವಾಯ ಇಮ್ಮಡಿ ಲಿಂಗನಾಯಕನು ಅಧಿಕಾರಕ್ಕೆ ಬಂದನು. ಈತನ ಆಳ್ವಿಕೆಯ ಕುರಿತಾಗಿ ಯಾವುದೇ ದಾಖಲೆಗಳು ಲಭ್ಯವಿಲ್ಲ. ನಂತರ ಸೋಮಪ್ಪನಾಯಕನು ಅಧಿಕಾರಕ್ಕೆ ಬರುತ್ತಾನೆ. ಸುರಪುರದ ಹಸರಂಗಿ ಪಾಮನಾಯಕನಿಗೆ ಮಕ್ಕಳಿಲ್ಲದ್ದಕ್ಕಾಗಿ ಗುಡಗುಂಟಿಯ ಸೋಮಪ್ಪನಾಯಕನ ಆರು ಮಕ್ಕಳೊಳಗೆ ಪಿಡ್ಡ ನಾಯಕನೆಂಬುವನನ್ನು ದತ್ತು ಮಗನಾಗಿ ತೆಗೆದುಕೊಂಡನು.

ವಾಗಿನಗೇರಿ ಔರಂಗಜೇಬನ ವಶವಾದಾಗ ಪೀತಾಂಬರಿ ಪಿಟ್ಟನಾಯಕನು ತಪ್ಪಿಸಿಕೊಂಡು ಕೃಷ್ಣಾನದಿಯನ್ನು ದಾಟಿ ಗುಡಗುಂಟಿಗೆ ತಲುಪಿದನು. ಗುಡಗುಂಟಿ ಸೋಮಪ್ಪನಾಯಕನು ಈತನನ್ನು ರಕ್ಷಿಸಿದನು. ಆಗ ಈತನ ವೈರಿ ದೇವದುರ್ಗದ ಕುಂಟ ವಾಸುದೇವನಾಯಕನು ಮೊಗಲರ ಸಹಾಯ ಪಡೆದು ಪೀತಾಂಬರಿ ಪಿಡ್ಡನಾಯಕನನ್ನು ಬೆನ್ನಟ್ಟದನು. ದೇವದುರ್ಗ ನಾಯಕನೊಡನೆ ಪಿಡ್ಡನಾಯಕನು ಹೋರಾಡಿ ಸೋಲಿಸಿದನು. ನಂತರ ಗುಡಗುಂಟಿ ಸೋಮಪ್ಪನಾಯಕನ್ನು ಕರೆದುಕೊಂಡು ಅರಸ ಉಡಚನಾಯಕನ ರಕ್ಷಣೆಗೆ ತೆರಳಿದನು. ಉಡಚನಾಯಕನ ಬೆಂಬಲದಿಂದ ಗಂಗಾವತಿಯ ಎಮ್ಮಿ ಗುಡ್ಡವನ್ನು ಸೇರಿದನು. ಒಂದು ವರ್ಷ ಅಲ್ಲಿದ್ದು ಪುನಃ ತನ್ನ ಪರಿವಾರದೊಡನೆ ಗುಡಗುಂಟಿಗೆ ಬಂದನು. ಅಷ್ಟೊತ್ತಿಗೆ ಬಿಜಾಪುರವನ್ನು ಮೊಗಲ ರಾಜ್ಯದ ಒಂದು ಸುಭೆ (Division) ಯನ್ನಾಗಿ ಮಾಡಲಾಗಿತ್ತು. ಜೀನಕುಲಿಚಖಾನನು ಸುಭೇದಾರನಾಗಿದ್ದನು. ಅವನ ನಂತರ ಈ ಸುಭೆಯ ಅಸಫಜಾಹನ ವಶದಲ್ಲಿತ್ತು. ಅವನು ಗುಡಗುಂಟಿಯಲ್ಲಿ ಹಿಮ್ಮತ ಯಾರಖಾನ ಎಂಬುವನನ್ನು ನೇಮಿಸಿದ್ದನು. ಆಗ ಪಿಡ್ಡನಾಯಕನು ತನಗೆ ಸಹಾಯ ನೀಡಿದ ಗುಡಗುಂಟಿಯವರಿಗೆ ಸಹಾಯ ಮಾಡಿದನು. ಹಿಮ್ಮತ ಯಾರಖಾನನ್ನು ಹೊಡೆದೋಡಿಸಿ ಗುಡಗುಂಟಿಯನ್ನು ಅವನಿಂದ ಕಸಿದು ಬಂಧುವಾದ ಸೋಮಸರ್ಜನಾಯಕನಿಗೆ ಕೊಡಿಸಿ ಪೀತಾಂಬರಿ ಬಹರಿ ಪಿಡ್ಡನಾಯಕನು ವೀರಗೊಟ್ಟಕ್ಕೆ ಬಂದುನಿಂತನು.

ಸುರಪುರದಲ್ಲಿ ಮೂರು ಕೇರಿಗಳ ಬೇಡರ ಮೊಂಡಗೈ ವೆಂಕಟಪ್ಪನಾಯಕನ ವಿರುದ್ದ ಬಂಡೆದ್ದರು ಆತ ಗಡಿ ವಿಸ್ತರಿಸಲು ಹೋದಾಗ ಗುಡಗುಂಟಿಯ ಸೋಮಸರ್ಜನಾಯಕನನ್ನು ಸುರಪುರಕ್ಕೆ ಕರೆದುಕೊಂಡು ಹೋಗಿ ಸುರಪುರದ ಅರಸನೆಂದು ಘೋಷಿಸಿದರು. ಒಂಭತ್ತು ತಿಂಗಳಾದ ತರುವಾಯ ರಾಜ್ಯ ವಿಸ್ತರಣೆಯಿಂದ ಮರಳಿಬಂದ ವೆಂಕಟಪ್ಪನಾಯಕನಿಗೆ ಮತ್ತು ಸ್ಥಳೀಯ ಬಂಡುಕೋರರಿಗೆ ಹೋರಾಟವಾಯಿತು.[4] ಆಗ ದೇವದುರ್ಗದ ಅರಸ ಕಿಲಚ ನಾಯಕರ ಮಧ್ಯಸ್ಥಿಕೆಯಿಂದ ವಾತಾವರಣ ತಿಳಿಯಾಯಿತು. ಸೋಮ ಸರ್ಜನಾಯಕ ಗುಡಗುಂಟಿಗೆ ಪಲಾಯನಗೈದನು. ಅಂದಿನಿಂದ ಸುರಪುರ ಮತ್ತು ದೇವದುರ್ಗದವರು ಗುಡಗುಂಟಿ ಅರಸನನ್ನು ದ್ವೇಷಿಸಲು ಪ್ರಾರಂಭಿಸಿದರು.

ಸುರಪುರದ ಮುಮ್ಮಡಿ ಪಾಮನಾಯಕನ ವಿರುದ್ದ ಸುರಪುರದ ರಾಜಧಾನಿಯ ಬೇಡರು ರಾಜನ ವಿರುದ್ಧವೇ ಬಂಡೆದ್ದರು. ಇದರಲ್ಲಿ ಅನೇಕ ಸರದಾರರು, ಹವಾಲ್ದಾರರು ಶಾಮೀಲಾಗಿದ್ದರು. ತಮಗೆ ಸಂಸ್ಥಾನದಿಂದ ಸರಿಯಾದ ಗೌರವ ಪ್ರಾಪ್ತವಾಗಿಲ್ಲವೆಂಬುದೇ ಇವರವಾದವಾಗಿತ್ತು. ಮಂತ್ರಿ ನಿಷ್ಠಿ ಕಡ್ಲಪ್ಪನನ್ನು ನಿಂದಿಸತೊಡಗಿದವರನ್ನು ಬಂಡಿನ ಮುಖಂಡರನ್ನು ಕಪ್ಪಲಬೆಂಚಿನಲ್ಲಿ ಕೊಲ್ಲಿಸಲಾಯಿತು. ತಪ್ಪಿಸಿಕೊಂಡು ಓಡಿ ಹೋದ ಕೆಲವರು ಗುಡಗುಂಟಿಯ ಅರಸರಲ್ಲಿ ಆಶ್ರಯ ಪಡೆದರು. ಕೂಡಲೇ ಅವರನ್ನು ತಮ್ಮ ಸ್ವಾಧೀನಕ್ಕೆ ಒಪ್ಪಿಸಬೇಕೆಂದು ಗುಡಗುಂಟಿಯ ಅರಸನಿಗೆ ಪಾಮನಾಯಕ ಪತ್ರ ಬರೆದ. ಈ ಗುಡಗುಂಟಿಯ ಅರಸ ಆ ಪತ್ರಕ್ಕೆ ಮಾನ್ಯತೆ ಕೊಡಲಿಲ್ಲ. ಆ ಪಾಮನಾಯಕನೇ ಸ್ವತಃ ತಾನೇ ಹುಣಸಗಿ,ಕಕ್ಕೇರಿ ಮಾರ್ಗವಾಗಿ ಗುಡಗುಂಟಿಗೆ ಧಾವಿಸಿ ದಾಳಿ ಮಾಡಿದ. ಆಗ ಹೆದರಿದ ಗುಡಗುಂಟಿ ಅರಸ ಆರೋಪಿಗಳನ್ನೇಲ್ಲಾ ಇವರ ವಶಕ್ಕೆ ಬಿಟ್ಟುಕೊಟ್ಟನು.[5] ಇನ್ನು ಮುಂದೆ ಇಂಥ ಯಾವ ಕೃತ್ಯಗಳನ್ನು ಎಸಗುವುದಿಲ್ಲವೆಂದು ಮಾತುಕೊಟ್ಟ. ಅಂದಿನಿಂದ ಸುರಪುರದೊಂದಿಗೆ ಉತ್ತಮ ಸಂಬಂಧ ಬೆಳೆಯಿತು.

ಗುಡಗುಂಟಿಯ ಮೇಲೆ ಗಜೇಂದ್ರಗಡದವರು ಆಕ್ರಮಣ ಮಾಡಿದ್ದರಿಂದ ಅಪಾರ ಹಾನಿಯಾಯಿತು. ಆಗ ಗುಡಗುಂಟಿಯ ಅರಸ ಸುರಪುರದ ಇಮ್ಮಡಿ ವೆಂಕಟಪ್ಪನಾಯಕ ಆರ್ಥಿಕ ಸಹಾಯವನ್ನು ಬೇಡಿದನು. ವೆಂಕಟ್ಟಪ್ಪನಾಯಕ ನೂರಕ್ಕೆ ಒಂದು ರೂಪಾಯಿಯ ಬಡ್ಡಿಯಂತೆ ೩೦ ಸಾವಿರ ರೂಪಾಯಿಗಳನ್ನು ನೀಡಿದನು. ಹಣದ ಸಲುವಾಗಿ ತಮ್ಮ ಭಾಗದ ಹುಣಸಗಿ ಮತ್ತು ೩೭ ಗ್ರಾಮಗಳನ್ನು ಒತ್ತಿ ಹಾಕಿದರು. ಈ ಹಳ್ಳಿಗಳನ್ನು ಬಿಟ್ಟಿಕೊಡಲು ಗುಡಗುಂಟಿ ಅರಸರು ವೆಂಕಟಪ್ಪನಾಯಕನನ್ನು ಕೇಳಿಕೊಂಡಾಗ, ವೆಂಕಟಪ್ಪನಾಯಕನು ತಾನು ನೀಡಿದ ಹಣವನ್ನು ಬಡ್ಡಿ ಸಮೇತ ಮರಳಿಸಿದರೆ ನಿಮ್ಮ ಗ್ರಾಮಗಳನ್ನು ಬಿಡುವೆನೆಂದು ಉತ್ತರ ಕೊಟ್ಟನು. ಗುಡಗುಂಟಿಯ ಅರಸ ವೆಂಕಟಪ್ಪನಾಯಕನು ಉತ್ತರಕ್ಕೆ ಸಿಟಟಿಗೆದ್ದ, ಅರಕೇರಿಯ ೫ ಗ್ರಾಮಗಳು, ಕಕ್ಕೇರಿ, ರಾಜನಕೋಳೂರು, ಹುಣಿಸಿಗಿ, ಕಲ್ದೇವನಹಳ್ಳಿಗಳನ್ನು ಲೂಟಿ ಮಾಡಿದನು. ಇದನ್ನು ಕೇಳಿದ ವೆಂಕಟಪ್ಪನಾಯಕನು ದಖನಿ, ಸದರ ಬಾರಗಾರ, ಕೊಟಗಾರರು, ನಾಲ್ಕು ತೋಪುಗಳು,೪೦೦ ಸವಾರರು, ೬೦೦೦ ಕಾಲಾಳುಗಳೊಂದಿಗೆ ಕೃಷ್ಣಾನದಿಯನ್ನು ದಾಟಿ ಗುಡಗುಂಟಿಯ ಸಮೀಪಕ್ಕೆ ಬಂದುರ. ಇದನ್ನು ಅರಿತ ಗುಡಗುಂಟಿಯ ಅರಸ ಗೆಜ್ಜಲಗಟ್ಟಿ, ನೀರಲಕೇರಿ, ರೋಡಲಬಂಡಿಯ ನಾಡಗೌಡರ ಸಹಾಯವನ್ನು ಪಡದು ಸುರಪುರದವರನ್ನು ಎದುರಿಸಿದನು. ಈ ಕಾಳಗದಲ್ಲಿ ಸುರಪುರದವರು ಗೆದ್ದರು. ಗುಡಗುಂಟಿಗೆ ಆಕ್ರಮಿಸಿ ಕಕ್ಕೇರಿ ಕಡೆಯ ಗುಡಗುಂಟಿ ಅಗಸಿ ಬಾಗಿಲನ್ನು ಸುಟ್ಟರು. ಗುಡಗುಂಟಿಯನ್ನು ಲೂಟಿ ಮಾಡಹತ್ತಿದ್ದರು. ಆಗ ಗುಡಗುಂಟಿ ಅರಸ ಕನಕಗಿರಿಗೆ ಓಡಿದನು. ಸುರಪುರಕದವರು ಗುಡಗುಂಟಿಯಲ್ಲಿ ಒಂದು ವರ್ಷ ಅಧಿಕಾರ ನಡೆಸಿದರು. ಅನಂತರ ಕನಕಗಿರಿಯವರ ಮಧ್ಯಸ್ತಿಕೆಯಿಂದ ಇಬ್ಬರ ನಡುವೆ ಒಪ್ಪಂದವಾಗಿ ಸಾಲದ ಬದಲಾಗಿ ಹುಣಸಗಿ ಭಾಗವನ್ನು ಸುರಪುರಕ್ಕೆ ಬಿಟ್ಟಿಕೊಡಬೇಕಾಗಿ ನಿರ್ಣಯವಾಯಿತು.[6] ಆಗ ಗುಡಗುಂಟಿ ಅರಸನನ್ನು ಕರೆಯಿಸಿ, ಅವರ ಸಂಸ್ಥಾನವನ್ನು ಒಪ್ಪಿಸಿದರು. ಮತ್ತೊಂದು ಸಲ ಗುಡಗುಂಟಿಯವರು ಸುರಪುರದ ಅರಸರ ಮದುವೆಗೆ ಹೋಗಿದ್ದರು. ತಮಗೆ ಮದುವೆಯಲ್ಲಿ ಮೊದಲನೆ ಮರ‍್ಯಾದೆ ಸಿಗಲಿಲ್ಲವೆಂಬ ಕಾರಣಕ್ಕೆ ಜಗಳಕ್ಕೆ ನಿಂತರು. ಸಿಟ್ಟಿಗೆದ್ದ ಸುರಪುರದವರು ಗುಟಗುಂಟಿಯನ್ನು ಆಕ್ರಮಿಸಿಕೊಂಡರು.[7]

ರಾಜಾ ಸೋಮಲಿಂಗನಾಯಕರಿಗೆ ಮಕ್ಕಳಿರಲಿಲ್ಲ. ಅಷ್ಟೊತ್ತಿಗೆ ನಿಜಾಮ ಸರ್ಕಾರ ಗುಡಗುಂಟಿಯನ್ನು ಆಕ್ರಮಿಸಿಕೊಂಡಿತು. ಆಗ ಅವರ ಆಜ್ಞೆಯ ಪ್ರಕಾರ ರಾಜಾ ಸೋಮಲಿಂಗ ನಾಯಕರ ಪತ್ನಿ ರಾಣಿ ಕಾಟಮ್ಮ ಅಧಿಕಾರವನ್ನು ನೋಡಿಕೊಂಡು ಹೋದರು. ನಿಜಾಂ ಸರ್ಕಾರಕ್ಕೆ ದತ್ತು ತೆಗೆದುಕೊಳ್ಳುವ ಕುರಿತಾಗಿ ಅರಿಕೆ ನೋಡಿಕೊಂಡಳು. ಅವರ ಆಜ್ಞೆಯ ಮೇರೆಗೆ ರಾಣಿ ಕಾಟಮ್ಮ ಮೈದುನನ ಮಗನಾದ ರಾಜ ಜಡಿಸೋಮಪ್ಪನಾಯಕನನ್ನು ದತ್ತಕ ತೆಗೆದುಕೊಂಡಳು. ಈತ ಚಿಕ್ಕವನಿದ್ದ ಕಾರಣಕ್ಕೆ ಸಂಸ್ಥಾನದ ಎಲ್ಲ ಕೆಲಸವನ್ನು ರಾಣಿಯವರೆ ನೋಡಿಕೊಂಡು ಹೋಗುತ್ತಿದ್ದರು. ಆಗ ನಿಜಾಂ ಸರ್ಕಾರ, ಸಂಸ್ಥಾನದ ಆಡಳಿತದ ವ್ಯವಸ್ಥೆಗಾಗಿ ಒಬ್ಬ ಸರ್ಕಾರಿ ಅಧಿಕಾರಿಯನ್ನು ನೇಮಿಸಿದರು. ಅವರಿಗೆ ‘ನಾಜಿಮ್’ ಎನ್ನುತ್ತಿದ್ದರು. ನಂತರ ಅರಸ ವಯಸ್ಸಿಗೆ ಬಂದ ಮೇಲೆ ಆಡಳಿತವನ್ನು ನೋಡಿಕೊಂಡು ಹೋದನು. ಈತ ತೀರಿಕೊಂಡು ತರುವಾಯು ಈ ಸಂಸ್ಥಾನವನ್ನು ನಿಜಾಂ ಸರ್ಕಾರ ತನ್ನ ವಶಕ್ಕೆ ತೆಗೆದುಕೊಂಡಿತು.

ರಾಣಿ ಗೌರಮ್ಮ ನಿಜಾಂ ಸರ್ಕಾರದ ಒಪ್ಪಿಗೆಯ ಮೇರೆಗೆ ತನ್ನ ಮೊಮ್ಮಗನಾದ ರಾಜಾ ತಿಪ್ಪರಾಜು ಜಡಿಸೋಮನಾಯಕ(ಕ್ರಿ.ಶ.೧೯೦೧ ರಿಂದ ೧೯೫೨)ನನ್ನು ದತ್ತಕ ತೆಗೆದುಕೊಂಡಳು. ಈತನೇ ಈ ಸಂಸ್ಥಾನದ ಕೊನೆಯ ದೊರೆ. ಇವರಿಗೆ ಶ್ರೀ ತಿಪ್ಪರಾಜ ಸರ್ಜಾಬಹದ್ದೂರ ಎಂದು ಕರೆಯುತ್ತಿದ್ದರು. ಈತ ತನ್ನ ಅಧಿಕಾರಾವಧಿಯಲ್ಲಿ ೪೪ ಹಳ್ಳಿಗಳಾದ ಗೋನವಾರ, ಬಸ್ಸಾಪುರ, ಸೈದಾಪುರ, ಅಮರಾವತಿ, ಸರ್ಜಾಪುರ, ಚಿಕ್ಕಹೆಸರೂರು, ಅನ್ವರಿ, ಮೇದಿನಾಪುರ, ಗುಡದನಾಳ, ಯರಡೋಣಿ, ಭೂಪುರ, ಪರಾಂಪುರ, ಟಣಮನಕಲ್ಲ್, ರಾಯದುರ್ಗ, ಗೊಲಪಲ್ಲಿ, ಗದ್ದಗಿ, ಪೈದೊಡ್ಡಿ, ಹೊಸಗುಡ್ಡ, ಬಂಡೆ ಭಾವಿ, ರೋಡಲಬಂಡಾ, ಮಾಚನೂರು, ರೋಡಲಬಂಡಾ ತವಗಾ, ಕಡ್ಡೋಣಿ, ಕೋಠಾ, ಹಟ್ಟಿ, ಹೊಸೂರು, ಚಿಕಲದೊಡ್ಡಿ, ಬೆಂಚಲದೊಡ್ಡಿ, ಚುಕ್ಕನಟ್ಟಿ, ಮಲ್ಲಾಪುರ, ಯಲಗಟ್ಟಾ, ದೇವತಗಲ್ಲ, ಹೂವಿನಬಾವಿ, ಜಂಗರಹಳ್ಳಿ, ಚಿಕ್ಕಕಾರ್ಲಕುಂಟಿ, ಮತ್ತು ಅಮರೇಶ್ವರ ಹಳ್ಳಿಗಳ ಉಸ್ತುವಾರಿಯನ್ನು ನೋಡಿಕೊಂಡು ಹೋಗಲು ಸಣ್ಣಪುಟ್ಟ ಜಮೀನುದಾರರನ್ನು ನೇಮಕ ಮಾಡಿದನು. ಅವರಲ್ಲಿ ಗೆಜ್ಜಲಗಟ್ಟಿ, ಆನ್ವರಿ, ಐದಬಾವಿ, ನಗನೂರು, ರೋಡಲ ಬಂಡಾ ಜಮೀನುದಾರರು ಪ್ರಮುಖರಾದವರು. ಇವರನ್ನು ನಾಡಗೌಡರು, ದೇಸಾಯಿಗಳು ಎಂದು ಕರೆಯುತ್ತಿದ್ದರು. ಇವರಿಂದ ಸಂಸ್ಥಾನಕ್ಕೆ ಬರುವ ಅಂದಾಜು ೫೦,೦೦೦ರೂ. ಕಂದಾಯದಲ್ಲಿ ನಿಜಾಂ ಸರ್ಕಾರಕ್ಕೆ ವರ್ಷಕ್ಕೆ ೭೦೦೦ ರೂ. ಗಳನ್ನು ಕೊಡಬೇಕಾಗಿತ್ತು.

ಈ ಸಂಸ್ಥಾನದಲ್ಲಿ ಆಡಳಿತದ ಅನುಕೂಲಕ್ಕಾಗಿ ನಾಲ್ಕು ವಿಭಾಗಗಳಿದ್ದವು. ಮೌಲ್ (Revenue) ಫೌಜದಾರಿ (Criminal), ದಿವಾನಿ (Court Magistrate), ಪೋಲಿಸ್ (Police), ಈ ವಿಭಾಗಗಳಿಗೆ ಪ್ರತ್ಯೇಕ ಕೆಲಸಕಾರ್ಯಗಳಿದ್ದವು.

ಈ ದೊರೆಗಳಿಗೆ ತಮ್ಮ ಅಧಿಕಾರಾವಧಿಯಲ್ಲಿ ವಿನೋಬಾಭಾವೆಯವರ ಭೂದಾನ ಚಳುವಳಿಗೆ ಸ್ಪಂದಿಸಿ ೨೦೦ ಎಕರೆ ಭೂಮಿಯನ್ನು ಭೂದಾನ ಮಾಡಿದ್ದಾರೆ. ಹೀಗೆ ತಮ್ಮ ಅಧಿಕಾರವನ್ನು ಇವರು ಮುಂದುವರೆಸಿದರು. ದೇಶ ಸ್ವಾತಂತ್ರ್ಯಗಳಿಸಿದ ನಂತರ ದೇಶದ ಎಲ್ಲಾ ಅರಸೊತ್ತಿಗೆಗಳು ಭಾರತದ ಒಕ್ಕೂಟದಲ್ಲಿ ಲೀನವಾದರೂ ಹೈದ್ರಾಬಾದ್ ಸಂಸ್ಥಾನದ ಸಮಕಾಲೀನ ಸಂಸ್ಥಾನವಾದ ಗುಡಗುಂಟಿ ೧೯೪೮ ಸೆಪ್ಟೆಂಬರ್ ೧೮ರ ವರೆಗೆ ಅಧಿಕಾರವನ್ನು ಬಿಟ್ಟುಕೊಟ್ಟಿರಲಿಲ್ಲ.

ಗುಡಗುಂಟಿ ವಂಶಸ್ಥರು ಇಂದು ಗುಡಗುಂಟಿಯ ಅರಮನೆಯಲ್ಲಿ ವಾಸಿಸುತ್ತಿದ್ದಾರೆ. ರಾಜಾ ಅಮರಪ್ಪ ನಾಯಕರು ೧೯೮೩ರಲ್ಲಿ ಮಾನ್ವಿ ಕ್ಷೇತ್ರದಿಂದ, ೧೯೮೫ರಲ್ಲಿ ಲಿಂಗಸುಗೂರು ಕ್ಷೇತ್ರದಿಂದ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾದವರು. ಅಂದು ರಾಜಕೀಯ ಕ್ಷೇತ್ರದಲ್ಲಿ ಗುರುರಿಸಿಕೊಂಡವರಾಗಿದ್ದರು. ನಂತರ ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿ ಕೆಲವೇ ಮತಗಳಿಂದ ಸೋತರು. ಹಟ್ಟಿ, ಚಿನ್ನದಗಣಿಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸದ್ಯ ಇವರ ಪುತ್ರ ರಾಜಾ ಸೋಮನಾಥನಾಯಕರು ಗುಡಗುಂಟಿ ಗ್ರಾಮಪಂಚಾಯತಿಯ ಅಧ್ಯಕ್ಷರಾಗಿದ್ದಾರೆ. ಮೊದಲಿನಿಂದಲೂ ಈ ಮನೆತನ ರಾಜಕೀಯ ಕ್ಷೇತ್ರದೊಂದಿಗೆ ಉತ್ತಮ ಸಂಪರ್ಕವನ್ನಿಟ್ಟುಕೊಂಡಿದ್ದರಿಂದ ಇವರು ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಸಬಲರಾಗಿದ್ದಾರೆ. ಇಂದು ಇವರು ನಿರ್ಧರಿಸಿದ ರಾಜಕಾರಣಿ ಶಾಸಕನಾಗುವಷ್ಟು ಸಾಮರ್ಥ್ಯ ಇವರಲ್ಲಿದೆ. ಹೀಗಾಗಿ ರಾಜಾ ಅಮರಪ್ಪ ನಾಯಕರನ್ನು ಈ ಭಾಗದ ರಾಜಕೀಯ ಗುರು ಎಂದು ಕರೆಯುತ್ತಾರೆ. ಈ ಭಾಗದ ಪ್ರಜೆಗಳು, ಮಠಾಧೀಶರು, ಅಧಿಕಾರಿಗಳು, ರಾಜಕಾರಣಿಗಳು ಇವರನ್ನು ರಾಜಮರ‍್ಯಾದೆಯಿಂದ ಕಾಣುತ್ತಾರೆ. ತಾಲೂಕಿನ ಎಲ್ಲಾ ಜಾತಿಯ ಜನ ಇವರನ್ನು ದಣಿಗಳೆಂದು ಸಂಬೋಧಿಸುತ್ತಾರೆ. ಪ್ರೀತಿಯಿಂದ ಕಾಣುತ್ತಾರೆ. ಈ ಭಾಗದ ನಾಯಕ ಜಾಂಗಕ್ಕೆ ನಾಯಕ ಗುರುಗಳಾಗಿಯೇ ಗುರುತಿಸಿಕೊಂಡಿದ್ದಾರೆ.

. ಗುಂತಗೋಳದ ನಾಯಕ ಅರಸರು

ಗುಂತಗೋಳದ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನಿಂದ ಸುಮಾರು ೩೦ ಕಿ.ಮೀ. ಅಂತರದಲ್ಲಿದೆ. ಇಲ್ಲಿ ನಾಯಕ ಜನಾಂಗದ ಅರಸರು ಆಳ್ವಿಕೆ ಮಾಡಿದ್ದಾರೆ. ಈ ಮನೆತನದ ಕುರಿತಾಗಿ ಆಕರಗಳು ಲಭ್ಯವಿಲ್ಲ. ಹೀಗಾಗಿ ಸ್ಥಳೀಯ ಸ್ಮಾರಕಗಳನ್ನು, ಜನಪದ ಹಾಡುಗಳನ್ನು ಅವಲೋಕಿಸಿದಾಗ ವ್ಯಕ್ತಗೊಳ್ಳುವ ಅಭಿಪ್ರಾಯಗಳನ್ನು ಆಧರಿಸಿ ಈ ಮನೆತನದ ವಂಶಸ್ಥರನ್ನು ಗುರುತಿಸಲಾಗಿದೆ. ಹಾಗೂ ಗುಂತಗೋಳ ಪರಿಸರದಲ್ಲಿರುವ ಅನೇಕ ಹಿರಿಯ ತಲೆಮಾರಿನವರನ್ನು ಸಂದರ್ಶಿಸಿ ಮಾಹಿತಿಯನ್ನು ಸಂಗ್ರಹಿಸಲಾಗಿದೆ.

‘ಗುಂತ’ ಎಂದರೆ ತಗ್ಗಾದ ಪ್ರದೇಶ. ‘ಗುಳೆ’ ಎಂದರೆ ವಿಪ್ಲವ ಕಾಲದಲ್ಲಿ ಹೋಗಿ ನೆಲೆಸಿರುವುದು. ತಗ್ಗಾದ ಪ್ರದೇಶದಲ್ಲಿ ಯಾವುದೇ ವಿಪ್ಲವ ಕಾಲದಲ್ಲಿ ಹೋಗಿ ಅಲ್ಲಿ ನೆಲೆಯೂರಿರುವುದರಿಂದ ಈ ಹೆಸರು ಬಂದಿದೆ. ಮೊದಮೊದಲು ಇದನ್ನು ಗುಂತಗುಳೆ ಎಂದು ಕರೆಯುತ್ತಿದ್ದರು.[8] ಗುಂತಗೋಳನಾಯಕರು ಕ್ರಿ.ಶ. ೧೪೯೧ ರಿಂದ ೧೯೪೮ರವರೆಗೆ ಆಳ್ವಿಕೆ ಮಾಡಿದ್ದಾರೆ. ಇವರು ಮೂಲತಃ ಕಂಚಿಯಿಂದ ಬಂದರು. ಬರುವಾಗ ತಮ್ಮೊಂದಿಗೆ ಅನೇಕ ಜನರನ್ನು ಕರೆದುಕೊಂಡು ಬಂದಿದ್ದಾರೆ. ಇವರೊಂದಿಗೆ ಬಂದ ಮನೆತನದವರಿಗೆ ಕಂಚಿಯವರು ಎಂದು ಕರೆಯುತ್ತಾರೆ. ಇವರ ಕುಟುಂಬಗಳು ಇಂದಿಗೂ ಗುಂತಗೋಳದಲ್ಲಿವೆ.

ಗುಂತಗೋಳದ ನಾಯಕರು ಬಿಜಾಪುರದ ಆದಿಲ್‌ಶಾಹಿಗಳ ಆಡಳಿರಾವಧಿಯಲ್ಲಿ (ಕ್ರಿ.ಶ.೧೪೮೯ – ೧೬೮೬) ನಿರ್ಲಕ್ಷಿಸಲ್ಪಟ್ಟ ಪ್ರದೇಶದಲ್ಲಿ ಒಂದು ಸಂಸ್ಥಾನವನ್ನು ಸ್ಥಾಪಿಸಿದರು. ಬ್ರಿಟಿಷ್‌ ಮತ್ತು ಹೈದ್ರಾಬಾದ್ ನಿಜಾಮರ (ಕ್ರಿ.ಶ. ೧೭೨೪ – ೧೯೪೮) ದಬ್ಬಾಳಿಕೆ ಮಧ್ಯೆ ಸಮರ್ಥವಾಗಿ ಆಳ್ವಿಕೆ ನಡೆಸಿದುದು ವಿಶೇಷವಾಗಿದೆ.[9] ಗುಂತಗೋಳದ ನಾಯಕರು ಮೊದಲಿಗೆ ಬಿಜಾಪುರದ ಆದಿಲ್‌ಶಾಹಿಗಳ ಅಧೀನರಾಗಿದ್ದರು. ಆದಿಲ್‌ಶಾಹಿಗಳು ತಮ್ಮ ಅಧೀನದನರಿಗೆ ಜಹಗೀರು ಹಾಕಿಕೊಡುತ್ತಿದ್ದರು. ಹೀಗಾಗಿ ಇವರು ಮೊದಲು ಜಹಗೀರುದಾರರಾಗಿದ್ದರು. ನಂತರ ಜೌರಂಗಜೇಬನು ಬಿಜಾಪುರವನ್ನು ಮುತ್ತಿ ಸಿಕಂದರನನ್ನು ಸೆರೆಹಿಡಿದು ಆದಿಲ್‌ಶಾಹಿಗಳ ಆಳ್ವಿಕೆಯನ್ನು ಸಮಾಪ್ತಿಗೊಳಿಸಿದ ಮೇಲೆ ಇವರು ಸ್ವತಂತ್ರವಾಗಿ ಆಳ್ವಿಕೆ ಪ್ರಾರಂಭಿಸಿದರು. ಜಲದುರ್ಗವೇ ಇವರ ಮೊದಲ ರಾಜಧಾನಿ. ಗುಂತಗೋಳ ಆದಿಲ್‌ಶಾಹಿಗಳ ಕಾಲದಲ್ಲಿ ಖೈದಿಗಳಿಗೆ ಶಿಕ್ಷೆ ನೀಡುವ ಸ್ಥಳವಾಗಿ ಪರಿವರ್ತನೆಯಾದ ತರುವಾಯ ಇವರು ಗುಂತಗೋಳಕ್ಕೆ ಬಂದು ನೆಲೆಸಬೇಕಾಯಿತು.[10]

ಗುಂತಗೋಲ ಸಂಸ್ಥಾನದ ಮೂಲಪುರಷ ಕಾಳಭೈರವನಾಯಕ,[11] ಈತನ ಸಮಾಧಿ ಗುಂತಗೋಳದಲ್ಲಿದೆ. ಅದನ್ನು ಗಲೂ ಕಾಳಭೈರವನಾಯಕನ ಗಚ್ಚಿನಕಟ್ಟೆ ಎಂದು ಕರೆಯುತ್ತಾರೆ. ಗುಂತಗೋಳದ ನಾಯಕ ಅರಸರಲ್ಲಿ ರಾಜಾ ಅಮರಪ್ಪನಾಯಕ, ರಾಜಾಬಸಪ್ಪ ನಾಯಕ, ರಾಜಾ ಇಮ್ಮಡಿ ಅಮರಪ್ಪನಾಯಕ, ರಾಜಾ ಶ್ರೀನಿವಾಸನಾಯಕ, ರಾಜಾ ಇಮ್ಮಡಿಬಸಪ್ಪನಾಯಕ, ರಾಜಾ ರಾಯಪ್ಪನಾಯಕ, ರಾಜಾ ಮುಮ್ಮಡಿ ಅಮರಪ್ಪನಾಯಕ, ರಾಜಾ ಇಮ್ಮಡಿ ರಾಯಪ್ಪನಾಯಕ, ರಾಜಾ ನರಸಿಂಹನಾಯಕ ಇವರುಗಳು ಪ್ರಮುಖರಾಗಿದ್ದರೆ.

ಈ ಸಂಸ್ಥಾನದ ಅರಸರಿಗೆ ‘ಬಹರಿ ಬಹದ್ದೂರ್’, ‘ನಾಯಕಾಚಾರ್ಯ’. ‘ಮಹಾನಾಯಕ’ ಎಂಬ ಬಿರುದುಗಳಿವೆ. ಇವರಿಗೆ ಆದಿಲ್‌ಶಾಹಿಗಳು ‘ಬಹರಿ ಬಹದ್ದೂರ್’ ಎಂಬ ಬಿರುದನ್ನು ನೀಡಿ ಗೌರವಿಸಿದ್ದಾರೆ. ಈ ಭಾಗದ ನಾಯಕ ಜನಾಂಗಕ್ಕೆ ಗುರುಗಳಾದ ಇವರನ್ನು ‘ನಾಯಕಾಚಾರ್ಯರು’ ಎಂದು ಕರೆಯುವರು. ಇವರ ಬಿರುದಿನ ದ್ಯೋತಕವಾಗಿ ಮಹಾನಾಯಕನ ದೊಡ್ಡಿ ಎನ್ನುವುದು ಗುಂತಗೋಳದ ಒಂದು ಭಾಗವಾಗಿತ್ತು.[12] ಈಗಲೂ ಮನೆತನವನ್ನು ಗುರು ಮತ್ತು ದೊರೆ ಮನೆತನ ಎಂದು ಕರೆಯುತ್ತಾರೆ.

ಈ ಸಂಸ್ಥಾನಿಕರ ರಾಜಲಾಂಛನ ಆನೆಯಾಗಿದ್ದು, ಹಸಿರು ಬಣ್ಣದ ಧ್ವಜಕ್ಕೆ ಬೆಳ್ಳಿಯ ಮೊಹರಿದೆ. ಶೈವಪಂಥದವರಾದ ಇವರು ಭಾರದ್ವಾಜ ಗೋತ್ರದವರು. ಇವರ ಆಡಳಿತಕ್ಕೆ ಸುಮಾರು ೧೩೦ ಹಳ್ಳಿಗಳು ಸೇರಿದ್ದು ಇವರ ಗಡಿಯನ್ನು ಸೂಚಿಸುವ ಜನಪದ ನುಡಿಯೊಂದು ಇಂತಿದೆ.

ಮಾಮಲೆ ಮುದಗಲ್, ಕಿಲ್ಲೆ ಜಲದುರ್ಗ
ಸಮತ್ಗೋನವಾಟ್ಲ ಸಂಸ್ಥಾನ ಗುಂತಗೋಳ
ನಮ್ಮ ರಾಜರದು[13]

ಆಡಳಿತ ವ್ಯವಸ್ಥೆಯಲ್ಲಿ ಪಾಟೀಲ, ಕುಲಕರ್ಣಿ, ನಾಡೌಡ, ಮಾಲೀಗೌಡ, ದೇಸಾಯಿ, ಪೋಲಿಸ್ ಪಾಟೀಲ್ ಎಂಬ ಅಧಿಕಾರಿಗಳಿದ್ದರು. ಇವರಲ್ಲಿ ಕಾಳಾಪುರದ ದಣಿಗಳು, ನೀರಲಕೇರಿಯ ನಾಡಗೌಡರು, ಬೆಲ್ಲದ ಮರಡಿಯ ದೇಸಾಯಿಗಳು ಪ್ರಮುಖರಾದವರು. ಇವರು ತಮ್ಮ ಭಾಗದ ಕಂದಾಯವನ್ನು ವಸೂಲಿ ಮಾಡಿ ಗುಂಗೋಳದ ಅರಸರಿಗೆ ಸಲ್ಲಿಸುತ್ತಿದ್ದರು. ಗುಂತಗೋಳದ ಅರಸರು ಹೈದ್ರಾಬಾದ್ ನಿಜಾಮನಿಗೆ ವಾರ್ಷಿಕ ಕಪ್ಪ ಕಾಣಿಕೆಯನ್ನು ಸಲ್ಲಿಸುತ್ತಿದ್ದರು.

ಈ ಸಂಸ್ಥಾನದ ಕಾವಲುಗಾರನ ಹೆಂಡತಿ ಮಾಳಗುಂಡಮ್ಮಳೆಂಬ ಮಹಿಳೆ ಸಂಸ್ಥಾನದ ರಕ್ಷಣೆಗಾಗಿ ಹೋರಾಡಿ ಮಡಿದ ಕತೆ ಜನಜನಿತವಾಗಿದೆ. ಈಕೆಯನ್ನು ಚಿತ್ರದುರ್ಗದ ಒನಕೆ ಓಬವ್ವನಿಗೆ ಹೋಲಿಸುತ್ತಾರೆ. ಒಂದು ಸಲ ೨೦ ಜನ ವೈರಿ ಸೈನಿಕರು (ಆದಿಲ್‌ಶಾಹಿಗಳೋ, ಸುರಪುರದ ನಾಯಕರೋ) ಗುಂತಗೋಳಕ್ಕೆ ರಾತ್ರೋರಾತ್ರಿ ಮುತ್ತಿಗೆ ಹಾಕಲು ಪ್ರಯತ್ನಿಸಿ ಕಾವಲುಗಾರನನ್ನು ಕೊಲೆಗೈದರು. ಮಡದಿ ಮಾಳಗುಂಡಮ್ಮ ಸುದ್ದಿ ತಿಳಿದು ವೀರಾವೇಶದಿಂದ ಕೈಯಲ್ಲಿ ಖಡ್ಗ ಹಿಡಿದು ಅವರನ್ನು ಕೊಚ್ಚಿ ಹಾಕುವುದರೊಂದಿಗೆ ವೀರಮರಣವನ್ನುಪ್ಪುತ್ತಾಳೆ. ಹೀಗಾಗಿ ಊರನ್ನು ರಕ್ಷಿಸಿದ ಈಕೆಯ ಹೆಸರಿನಲ್ಲಿ ಜನ ದೇವಾಲವಯನ್ನು ಕಟ್ಟಿಸಿ ಪೂಜಿಸುತ್ತಿದ್ದಾರೆ. ಈ ಮನೆತನದವರಿಗೆ ಅರಸರು ಇನಾಮುಗಳನ್ನು ನೀಡಿದ್ದರು. ಈಗ ಈ ಸಂತತಿಯವರು ಇಲ್ಲಿ ನೆಲೆಸಿರುವುದಿಲ್ಲ.[14]

ಲಿಂಗಸುಗೂರು ತಾಲೂಕಿನ ಗುಂತಗೋಳದ ಭಾಗದಲ್ಲಿ ಮಾತ್ರ ನಮಗೆ ಅತೀ ಹೆಚ್ಚು ವೀರಗಲ್ಲುಗಳು ಸಿಗುತ್ತವೆ. ಇವುಗಳಿಗೆ ಅಗಸೀಕಟ್ಟೆಯ ವೀರಗಲ್ಲುಗಳು, ತಿಮ್ಮಣ್ಣನ ಹೊಲದ ವೀರಗಲ್ಲುಗಳು, ಗೋನವಾಟ್ಲದ ವೀರಗಲ್ಲುಗಳೆಂದೇ ಜನ ಕರೆಯುತ್ತಾರೆ. ಬಹುಶಃ ಇವುಗಳು ಈ ಭಾಗದ ಬೇಡ ಸೈನಿಕರು ವೀರ ಹೋರಾಟದಲ್ಲಿ ಮಡಿದ ಸವಿನೆನಪಿಗಾಗಿ ಕೆತ್ತಿಸಿರಬಹುದಾದ ಸಾಧ್ಯತೆಗಳಿವೆ.

ಈ ಸಂಸ್ಥಾನದ ಅರಸ ರಾಜಾರಾಯಪ್ಪನಾಯಕನು ಆಧ್ಯಾತ್ಮಿಕ ಒಲವಿನ ಪುರುಷರಾಗಿದ್ದರು. ದರಬಾರಿನಲ್ಲಿ ಪ್ರತಿವರ್ಷ ನಡೆಯುವ ನವರಾತ್ರಿಯ ಸಮಯದಲ್ಲಿ ದೇವಿ ಪುರಾಣವನ್ನು ಸ್ವತಃ ತಾವೇ ಪಾರಾಯಣ ಮಾಡುತ್ತಿದ್ದರು. ಕಲಾ ಪ್ರೇಮಿಗಳು ಹಾಗೂ ಕಲಾಕಾರರಾಗಿದ್ದರು. ನಾಟಕ ಕಂಪನಿಯೊಂದನ್ನು ಹುಟ್ಟುಹಾಕಿ ಕಲಾಕಾರರಿಗೆ ತರಬೇತಿಯನ್ನು ನೀಡುವ ವ್ಯವಸ್ಥೆ ಮಾಡಿದ್ದರು. ಈ ಸಂಸ್ಥಾನಿಕರು ಸುರಪುರ, ದೇವದುರ್ಗ, ಗುಡಗುಂಟಿ, ಕನಕಗಿರಿ, ಗುಡೇಕೋಟೆ, ರತ್ನಗಿರಿ ಮನೆತನಗಳೊಂದಿಗೆ ವೈವಾಹಿಕ ಸಂಬಂಧವನ್ನು ಬೆಳೆಸಿದ್ದಾರೆ.

ಇಂದು ಈ ಮನೆತರನ ವಂಶಸ್ಥರು ಗುಡಗುಂಟಿಯಲ್ಲಿ ವಾಸವಾಗಿದ್ದರೆ. ಗುಂತಗೋಳದಲ್ಲಿ ಸುಸಜ್ಜಿತ ಅರಮನೆ ಇದೆ. ಅಲ್ಲಿಗೆ ವಾರಕ್ಕೊಂದು ದಿನ ಹೋಗಿ ಬರುತ್ತಾರೆ. ಹಬ್ಬ ಹರಿದಿನಗಳಲ್ಲಿ ಭಾಗವಹಿಸುತ್ತಾರೆ. ಈ ಮನೆತನದವರು ಪ್ರಸ್ತುತ ರಾಜಕೀಯದೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ರಾಜಾ ಅಮರಪ್ಪನಾಯಕ ೧೯೮೯ರಲ್ಲಿ ಲಿಂಗಸುಗೂರು ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ನಂತರ ೧೯೯೯ರಲ್ಲಿ ಕಲ್ಮಲಾ ವಿಧಾನಸಭೆ ಕ್ಷೇತ್ರದಿಂದ ಸ್ಪರ್ದಿಸಿ ಆಯ್ಕೆಯಾಗಿ, ರಾಜ್ಯ ತೋಟಗಾರಿಕೆ ಸಚಿವರಾಗಿಯೂ ನಂತರ ಬಂಧಿಖಾನೆ, ಗೃಹರಕ್ಷಕದಳ ಮತ್ತು ಕಾನೂನು ಮಾಪನ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಕಳೆದ ೨೦೦೪ರ ಚುನಾವಣೆಯಲ್ಲಿ ಕಲ್ಮಲಾ ವಿಧಾನಸಭೆಗೆ ಸ್ಪರ್ಧಿಸಿ ಕೆಲವೆ ಮತಗಳಿಂದ ಪರಾಭವಗೊಂಡರು. ಇವರ ಹಿರಿಯ ಸಹೋದರರಾದ ರಾಜಾ ರಾಯಪ್ಪನಾಯಕರು ರಾಯಚೂರು ಜಿಲ್ಲಾ ಪಂಚಾಯತಿಯ ಸದಸ್ಯರಾಗಿದ್ದರು. ಇಂದು ರಾಜಕೀಯದಲ್ಲಿ ಗುರುತಿಸಿಕೊಂಡಿದ್ದಾರೆ. ಇವರ ಕಿರಿಯ ಸಹೋದರ ರಾಜಾ ಶ್ರೀನಿವಾಸನಾಯಕ ಅವರು ದೇವರಭೂಪೂರದ ಮಂಡಲ ಪ್ರಧಾನರಾಗಿ, ಗುಂತಗೋಳ ಗ್ರಾಮಪಂಚಾಯಿತಿಯ ಅಧ್ಯಕ್ಷರಾಗಿಯೂ ಜಿಲ್ಲಾ ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದಶಿಗಳಾಗಿ ಹಾಗೂ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಈಗಲೂ ರಾಜಕೀಯವಾಗಿ, ಮುಂಚೂಣಿಯಲ್ಲಿದ್ದಾರೆ. ಹೀಗೆ ಈ ಮನೆತನದ ವಂಶಸ್ಥರು, ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಈ ಭಾಗದಲ್ಲಿ ಗುರುತಿಸಿಕೊಂಡಿದ್ದಾರೆ. ಅನೇಕ ಜನೋಪಯೋಗಿ ಕೆಲಸಗಳಲ್ಲಿ ಇಂದಿಗೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರೆ.

. ದೇವದುರ್ಗದ ನಾಯಕ ಅರಸರು

ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕು ನಾಯಕ ಅರಸರ ಸಂಸ್ಥಾನವಾಗಿತ್ತು. ಇವರ ಮೂಲಪುರುಷರು ಸವಣೂರು ಬಂಕಾಪುರದಲ್ಲಿ ಮೊದಲ ವಾಸವಾಗಿದ್ದರಂತೆ, ನಂತರ ಇವರ ಮೂಲಪುರುಷ ಸೋಮಜಂಪಲ ಭೂಮಿಪತಿರಂಗಪ್ಪನಾಯಕ ಮೊದಲು ದೇವದುರ್ಗ ತಾಲ್ಲೂಕಿನ ಅರಕೇರಾರದ ಜಂಪಲಮರಡಿಯುಲ್ಲಿ ತಂಗಿದ್ದರು. ಅಲ್ಲಿಂದ ಇವರು ಚಂದನಕೇರಿಗೆ ಬರುತ್ತಾರೆ. ಚಂದನಕೇರಿ ದೇವದುರ್ಗದಿಂದ ಒಂದು ಕಿ.ಮೀ. ದೂರದಲ್ಲಿದೆ, ಅಲ್ಲಿ ವಾಸುದೇವನಾಯಕ ದೊರೆಯೆಂದು ಕರೆಯಿಸಿಕೊಂಡನು. ಈತನೇ ದೇವದುರ್ಗ ಅರಸು ಮನೆತನದ ಸಂಸ್ಥಾಪಕ.

ವಾಸುದೇವನಾಯಕ, ಚಂದನಕೇರಿ ಮತ್ತು ದೇವದುರ್ಗದಲ್ಲಿ ಆಳ್ವಿಕೆಯನ್ನು ಪ್ರಾರಂಭಿಸಿದನು. ಆದರೆ ಚಂದನಕೇರಿಯ ಇವರ ಮೊದಲ ರಾಜಧಾನಿಯಾಯಿತು. ಅದನ್ನು ಚಂದ್ರಗಿರಿ ಎಂತಲೂ ಕರೆಯುತ್ತಿದ್ದರು. ನಂತರದಲ್ಲಿ ಚಂದ್ರಗಿರಿಯಿಂದ ತನ್ನ ರಾಜಧಾನಿಯನ್ನು ದೇವದುರ್ಗಕ್ಕೆ ವರ್ಗಾಯಿಸದನು. ಆಗ ದೇವದುರ್ಗದ ಅಧೀನದ ಏಳು ಪ್ರಮುಖ ಗ್ರಾಮಗಳಿಗೆ ತನ್ನ ಐದು ಜನ ಮಕ್ಕಳನ್ನು ನೇಮಿಸುತ್ತಾನೆ. ದೇವದುರ್ಗವನ್ನು ತಮ್ಮ ಅಧೀನದಲ್ಲಿಯೇ ಇಟ್ಟುಕೊಳ್ಳುತ್ತಾನೆ. ಹಾಗೂ ತನ್ನೊಂದಿಗೆ ತನ್ನ ಹಿರಿಯ ಮಗ ಕಿಲಚ ನಾಯಕನನ್ನು ಉಳಿಸಿಕೊಳ್ಳುತ್ತಾನೆ. ಸಣ್ಣ ಕಿಲಚನಾಯಕನ್ನು ಅರಕೇರಿಗೆ, ವೆಂಕಟಪ್ಪ ನಾಯಕನನ್ನು ಮುಂಡರಿಗಿಗೆ, ವಾಸುದೇವನಾಯಕನನ್ನು ಜಾಲಹಳ್ಳಿಗೆ, ಕೃಷ್ಣನಾಯಕನನ್ನು ರಾಮದುರ್ಗಕ್ಕೆ ರಂಗಪ್ಪನಾಯಕನನ್ನು ಕ್ಯಾದಿಗೇರಿಗೆ, ತಿಮ್ಮಪ್ಪನಾಯಕನನ್ನು ಗಲಗಿಗೆ ಕಳುಹಿಸುತ್ತಾನೆ.[15]

ಸುರಪುರದ ವಾಗಿನಗೇರಿ ಮುತ್ತಿಗೆ ಕ್ರಿ.ಶ.೧೭೦೫ರಲ್ಲಿ ಪ್ರಾರಂಭವಾದಾಗ ಔರಂಗಜೇಬನ ಜೊತೆಗೆ ದೇವದುರ್ಗದ ವಾಸುದೇವನಾಯಕನು ಇದ್ದನು.[16] ಸುರಪುರದ ವಾಗಿನಗೇರಿಯ ಔರಂಗಜೇಬನ ವಶವಾದಾಗ, ಪೀತಾಂಬರ ಬಹರಿ ಪಿಡ್ಡನಾಯಕ (ಕ್ರಿ.ಶ.೧೬೮೨ – ೧೭೨೬)ನು ಅಲ್ಲಿಂದ ತಪ್ಪಿಸಿಕೊಂಡು ಪಲಾಯನಗೈದು ತನ್ನ ಜನರೊಡನೆ ಕೃಷ್ಣಾ ನದಿಯನ್ನು ದಾಟಿ ಗುಡಗುಂಟಿಯನ್ನು ತಲಪುತ್ತಾನೆ. ಅಲ್ಲಿಂದ ಗುಡಗುಂಟಿ ಅರಸ ಹುಚ್ಚ ಸೋಮಪ್ಪನಾಯಕರನ್ನು ಕರೆದುಕೊಂಡು ಹೋಗುವಾಗ ದೇವದುರ್ಗದ ವಾಸುದೇವ ನಾಯಕನು ಜಾಲಹಳ್ಳಿ ಮಾರ್ಗದಿಂದ ಮೊಗಲರ ಸಹಾಯವನ್ನು ಪಡೆದು ಅವರನ್ನು ಬೆನ್ನಟ್ಟುತ್ತಾನೆ. ಪಿಡ್ಡನಾಯಕನ ತಮ್ಮ ಭೂಪತಿನಾಯಕ ಹೆಂಡರು ಮಕ್ಕಳು ವಾಸುದೇವ ನಾಯಕನ ಕೈಗೆ ಸಿಗುತ್ತಾರೆ. ಸುದ್ದಿಯನ್ನು ಕೇಳಿದ ಕೂಡಲೇ ಪೀತಾಂಬರಿ ಬಹರಿ ಪಿಡ್ಡ ನಾಯಕನು ಹಿಂದಿರುಗಿ ವಾಸುದೇವನಾಯಕನನ್ನು ಸೋಲಿಸುತ್ತಾನೆ. ವಾಸುದೇವನಾಯಕ ಮರಳುತ್ತಾನೆ. ಹೀಗೆ ಮೊಗಲರ ಸಂಗಡ ಕೂಡಿ ಅವರಿಗೆ ಪಿಡ್ಡನಾಯಕನ ವಿರುದ್ಧವಾಗಿ ನಿಂತು ಸಹಾಯ ಮಾಡಿದ್ದಕ್ಕಾಗಿ ‘ಶಾಹ ಆಲಮ”ನು ವಾಸುದೇವನಾಯಕನಿಗೆ ರಾಯಚೂರು ಪ್ರಾಂತ್ಯದ ಜಮೀನುದಾರಿಕೆಯನ್ನು ತಾನು ಪಟ್ಟವೇರಿದ ಮೂರನೇ ವರ್ಷದಲ್ಲಿ ನೀಡುತ್ತಾನೆ.[17]

ನಂತರ ಸುರಪುರದ ಅರಸರು ಮತ್ತು ದೇವದುರ್ಗದ ಅರಸರು ವೈವಾಹಿಕ ಸಂಬಂಧವನ್ನು ಬೆಳೆಸುತ್ತಾರೆ. ಸುರಪುರದ ಇಮ್ಮಡಿ ಪಾಮನಾಯಕ ( ಕ್ರಿ.ಶ. ೧೭೨೭ – ೧೭೪೧) ನ ಪಟ್ಟದರಾಣಿ ರುಕ್ಕಮ್ಮ ದೇವದುರ್ಗದವಳಾಗಿದ್ದಳು. ಈ ಪಾಮನಾಯಕನ ಕಾಲದಲ್ಲಿ ಕನಕಗಿರಿಯ ರಂಗಪ್ಪನಾಯಕನ ಮಗ ಹಿರೇನಾಯಕ ಕನಕಗಿರಿಯ ಅರಸನಾಗಿದ್ದು, ಈತನ ಉಪಟಳವನ್ನು ಸಹಿಸದ ದೇಸಾಯಿಗಳು ಹೈದ್ರಾಬಾದ್ ನಿಜಾಮನ ಮೊರೆ ಹೋಗುತ್ತಾರೆ. ಆಗ ನಿಜಾಮ ಕನಕಗಿರಿಯ ಹರೇನಾಯಕನನ್ನು ಬಂಧಿಸಲು ಸುರಪುರದ ಇಮ್ಮಡಿ ಪಾಮನಾಯಕನಿಗೆ ತಿಳಿಸುತ್ತಾನೆ. ಇಮ್ಮಡಿ ಪಾಮನಾಯಕ ಕನಕಗಿರಿಯ ಹಿರೇನಾಯಕನನ್ನು ಬಂಧಿಸಲು ತೆರಳುವಾಗ ತನ್ನ ಸಂಬಂಧಿ ದೇವದುರ್ಗ (ರಾಮದುರ್ಗ)ದ ದೊರೆಯಾದ ಕೃಷ್ಣನಾಯಕನನ್ನು ಕರೆದೊಯ್ಯುತ್ತಾನೆ.

ಪುರುಷಕಾರಿ ಲೋಕಯ್ಯನ ಗ್ರಂಥದಲ್ಲಿ ಇನ್ನೊಂದು ಘಟನೆ ಜರುಗುತ್ತದೆ. ನಿಜಾಮ ಆಸಫಿಜಾಹನು ಪಾಮನಾಯಕನನ್ನು ಭೇಟಿಗಾಗಿ ಕಲ್ಬುರ್ಗಿಯ ಸಮೀಪದ ಸುಲ್ತಾನ ಪುರಕ್ಕೆ ಬರಲು ಹೇಳುತ್ತಾನೆ. ಆಗ ಪಾಮನಾಯಕ ಸುಲ್ತಾನಪುರಕ್ಕೆ ಹೋದಾಗ, ಆಸಫಿಜಾಹನಿಗೆ ಆರೋಗ್ಯ ಸರಿ ಇರದ ಕಾರಣ ಬರದ ತನ್ನ ಸೇನಾಧಿಕಾರಿಯಾದ ಚಂದ್ರಸೇನನನ್ನು ಕಳುಹಿಸುತ್ತಾನೆ. ಚಂದ್ರಸೇನ ಪಾಮನಾಯಕನಿಗೆ ಮುಜುರೆ ಮಾಡುವಾಗ ಅವಮಾನಗೊಳಿಸುತ್ತಾನೆ. ನಾಯಕನು ಖೇದಕೊಳಗಾದನು. ಕೊನೆಗೆ ಪಾಮನಾಯಕ ತೀರಿಕೊಳ್ಳುವಾಗ ಚಂದ್ರಸೇನನು ಅಪಮಾನಗೊಳಿಸಿದುದ್ದನ್ನು ದೇವದುರ್ಗದ ವಾಸುದೇವನಾಯಕನಿಗೆ ತಿಳಿಸುತ್ತಾನೆ. ಮುಂದೆ ದೇವದುರ್ಗದ ವಾಸುದೇವನಾಯಕನು ಸೇಡು ತಿರಿಸಿಕೊಳ್ಳವೆನೆಂದು ವಚನ ಕೊಡುತ್ತಾನೆ.[18]

ವಾಸುದೇವನಾಯಕನ ನಂತರ ಈತನ ಹಿರಿಯ ಮಗ ಕಿಲಚನಾಯಕನು ದೇವದುರ್ಗ ಸಂಸ್ಥಾನದ ಅಧಿಕಾರ ಸ್ವೀಕರಿಸುತ್ತಾನೆ. ಸುರಪುರದ ಅರಸ ಮೊಂಡಗೈ ವೆಂಕಟಪ್ಪನಾಯಕ (ಕ್ರಿ.ಶ. ೧೭೪೨ – ೧೭೫೨)ನು ತನ್ನ ರಾಜ್ಯ ವಿಸ್ತಾರಕ್ಕೆ ತೆರಳಿದಾಗ ಸ್ಥಳೀಯ ಆಸ್ಥಾನಿಕರಲ್ಲಿ ಕೆಲವರು ಮೂರುಕೇರಿಯ ತಮ್ಮ ಕೈಕೆಳಗಿನ ಬೇಡರ ದಂಡನ್ನು ಹುರಿದುಂಬಿಸಿ, ಗುಡಗುಂಟಿಯ ಅರಸ ಸೋಮಸರ್ಜನನ್ನು ಕರೆತಮದು ಸುರಪುರದ ಅರಸನನ್ನಾಗಿ ಮಾಡುತ್ತಾರೆ. ಆತ ಒಂಭತ್ತು ತಿಂಗಳುಗಳ ಕಾಲ ಸುರಪುರವನ್ನು ಆಳುತ್ತಾನೆ. ಮರಳಿ ಮೊಡಗೈ ವೆಂಕಟಪ್ಪನಾಯಕ ಬಂದಾಗ, ಸುರಪುರದ ಬಂಡುಗಾರರು ಈತನನ್ನು ಸೆರೆಯಲ್ಲಿ ಇಡುತ್ತಾರೆ. ದೇವದುರ್ಗದ ಇಲಚನಾಯಕನು ಬಂದು ಮೂರುಕೇರಿಯ ಬೇಡರನ್ನು ಒಟ್ಟುಗೂಡಿಸಿ, ಅರಸನನ್ನು ಬಿಡುಗಡೆ ಮಾಡಿಸುತ್ತಾನೆ. ಆಗ ಸೋಮಸರ್ಜನಾಯಕ ಗುಡುಗುಂಟಿಗೆ ಫಲಾಯನಗೈಯುತ್ತಾನೆ.[19]

ಕೆಲವು ದಿನಗಳ ನಂತರ ದೇವದುರ್ಗದ ಅರಸ ಕಿಲಚನಾಯಕನು ಕ್ಯಾದಿಗೇರಿಯ ಮೇಲೆ ದಾಳಿ ಮಾಡುತ್ತಾನೆ. ಕ್ಯಾದಿಗೇರಿಯ ಪಾಳೆಯಗಾರನು ಸುರಪುರದ ಮುಮ್ಮಡಿ ಪಾಮನಾಯುಕ (ಕ್ರಿ.ಶ. ೧೭೫೦ – ೭೩)ನ ಮೊರೆ ಹೋಗುತ್ತಾನೆ. ಕೂಡಲೇ ಪಾಮನಾಯಕ ತನ್ನ ದಂಡಿನೊಡನೆ ಕ್ಯಾದಿಗೇರಿಗೆ ಹೋಗಿ ದೇವದುರ್ಗದ ಕಿಲಚನಾಯಕನನ್ನು ಬೆನ್ನಟ್ಟುತ್ತಾನೆ. ಕ್ಯಾದಿಗೇರಿಯ ಅರಸನನ್ನು ರಕ್ಷಿಸುತ್ತಾನೆ. ಬಹುಶಃ ಈ ಸಂದರ್ಭದಲ್ಲಿ ಸುರಪುರದ ಅರಸರಿಗೂ ಮತ್ತು ದೇವದುರ್ಗದ ಅರಸರಿಗೂ ಸಂಬಂಧ ಸರಿ ಇಲ್ಲವೆಂದು ಕಾಣುತ್ತದೆ. ನಂತರದಲ್ಲಿ ಕಿಲಚನಾಯಕನು ಮಗಳು ತಿಮ್ಮವ್ವಳನ್ನು ಪಾಮನಾಯಕನಿಗೆ ಕೊಟ್ಟು ವಿವಾಹ ಮಾಡಿದಾಗ ಇವರುಗಳ ಮಧ್ಯೆ ಉತ್ತಮ ಬಾಂಧವ್ಯ ಬೆಳೆಯುತ್ತದೆ.

ಕಿಲಚನಾಯಕನ ಮಗ ರಂಗಪ್ಪನಾಯಕನ ಚಂದನಕೇರಿಯ ಮುಖ್ಯಸ್ಥನಾಗಿದ್ದ. ಇವನ ತಂದೆಯ ನಂತರ ಈತ ಚಂದನಕೇರಿಯ ಪಾಳೆಯಗಾರನಾದ. ಈ ಪ್ರದೇಶ ದೇವದುರ್ಗದ ನಾಯಕನ ಅಧೀನದಲ್ಲಿತ್ತು. ಆದರೆ ಬಿಜಾಪುರದ ಎರಡನೇ ಅಲಿ ಆದಿಲ್‌ಷಾಹನ ಮರಣದ (ಕ್ರಿ.ಶ.೧೬೭೨) ನಂತರ ಈ ಜಿಲ್ಲೆಯ ಸುತ್ತಮುತ್ತಲಿನ ಪ್ರದೇಶವನ್ನು ಶತ್ರುಗಳಿಂದ ರಕ್ಷಿಸಲು ಸುರಪುರದ ದೊರೆ ಹಸರಂಗಿ ಪಾಮನಾಯಕನಿಗೆ ಕೊಡಲ್ಪಟ್ಟಿತು.[20] ದೇವದುರ್ಗದ ಅರಸರು ಹೆಸರಿಗೆ ಆಳ್ವಿಕೆ ಮಾಡುತ್ತಿದ್ದರು. ಸಂಪೂರ್ಣ ಅಧಿಕಾರ ಸುರಪುರದ ಅರಸರದಾಗಿತ್ತು. ಸುರಪುರದ ಅರಸರಿಗೆ ದೇವದುರ್ಗದ ಅರಸರು ತೆರಿಗೆಗಳನ್ನು ಕೊಡಬೇಕಾಗಿತ್ತು. ಈತನ ನಂತರ ಚಿಕ್ಕ ಕೇಶವನಾಯಕ ದೇವದುರ್ಗದ ದೊರೆಯಾದ. ಈತನ ಅಧಿಕಾರವಧಿಯಲ್ಲಿ ಈ ಸಂಸ್ಥಾನದ ವಾರ್ಷಿಕ ಆದಾಯ ಮೂರು ಲಕ್ಷ ರೂಪಾಯಿ ಗಲಷ್ಟಿದ್ದಿರು. ಈತನು ಇಲ್ಲಿ ವಾರಕ್ಕೊಮ್ಮೆ ಸಂತೆ ನಡೆಯುವಂತೆ ಕ್ರಿ.ಶ.೧೭೬೬ರಲ್ಲಿ ಹೈದರಾಲಿಯ ಮೇಲೆ ದಂಡೆಯಾತ್ರೆ ಹೊರಟ ಪೇಶ್ವೆ ಮತ್ತು ನಿಜಾಮರ ಉಭಯ ಪಡೆಗಳು ದೇವದುರ್ಗದಲ್ಲಿ ಬೀಡುಬಿಟ್ಟವು. ಈತನ ತರುವಾಯ ಕೊಳ್ಳಿರಂಗಪ್ಪನಾಯಕ ಅಧಿಕಾರ ಸ್ವೀಕರಿಸಿದ. ಈತ ದೇವದುರ್ಗದ ಪ್ರಸಿದ್ಧ ರಾಜನಾಗಿದ್ದು, ಅನೇಕ ಜನೋಪಯೋಗಿ ಕೆಲಸಗಳನ್ನು ಮಾಡಿದ್ದಾನೆ.

ಸುರಪುರದ ಇಮ್ಮಡಿ ವೆಂಕಟಪ್ಪನಾಯಕ (ಕ್ರಿ.ಶ.೧೭೭೩ – ೧೮೦೨)ನ ತನ್ನ ಪತ್ನಿ ಕನಕಗಿರಿಯ ನರಸಿಂಗಮ್ಮನ ಉದರದಿಂದ ಬಾಪೂಸಾಹೇಬ ಮತ್ತು ಶ್ರೀನಿವಾಸನಾಯಕ ಎಂಬ ಮಕ್ಕಳನ್ನು ಪಡೆಯುತ್ತಾನೆ. ಕಿರಿಯನಾದ ಶ್ರೀನಿವಾಸ ನಾಯಕನ ಜವಳ ಕಾರ್ಯಕ್ರಮಕ್ಕೆ ಸೋದರಮಾವ ರಂಗಪ್ಪನಾಯಕನನ್ನು ಮತ್ತು ಇತರು ಬಂಧು ಬಳಗವನ್ನು ಕರೆ ಕಳುಹಿಸಿದ್ದ. ಆದರೆ ಅವರಾರೂ ಬರಲಿಲ್ಲ. ಕಾರಣ ವೆಮಕಟಪ್ಪನಾಯಕ ಮುಸ್ಲಿಂ ಜಾತಿಯ ಕನ್ಯೆಯನ್ನು ಮದುವೆಯಾಗಿ ತನ್ನ ಕುಲದಲ್ಲಿ ಸೇರಿಸಿಕೊಂಡಿದ್ದನು. ಇಂಥ ಶುಭ ಸಮಾರಂಭದಲ್ಲಿ ಪರಕುಲದವರೊಂದಿಗೆ ಊಟ ಮಾಡುವುದು ಈತನಿಗೆ ಸರಿ ಇರಲಿಲ್ಲ. ಹೀಗಾಗಿ ಬಂಧುವರ್ಗದವರು, ಗುರಿಕಾರ, ಸರನೌಬತ್ತೂ ಸರಹವಾಲ್ದಾರ ಮುಂತಾದ ಸ್ಥಳೀಯ ಎಲ್ಲರ ಜಾತೀರು ಇನಾಮುಗಳನ್ನು ಕಸಿದುಕೊಂಡನು.

ಅಲ್ಲದೆ ಸಾಸಿವಿಗೇರಿ, ಚಂದನಕೇರಿ ಹಾಗೂ ದೇವದುರ್ಗದ ಪ್ರಮುಖ ಬಂಟರನ್ನು ಕರೆದು ದಂಡಿನ ಮುಖ್ಯಸ್ಥರನ್ನು ನೇಮಕ ಮಾಡಿ ದೇವದುರ್ಗದ ರಂಗಪ್ಪ ನಾಯಕನನ್ನು ಸೆರೆಹಿಡಿದು ತರಬೇಕೆಂದು ಆಜ್ಞೆ ಮಾಡುತ್ತಾನೆ. ನಂತರ ಸುರಪುರದ ಸೈನ್ಯ ದೇವದುರ್ಗದ ಅಂಜಳವನ್ನು ಮುತ್ತಿತ್ತು. ರಂಗಪ್ಪನಾಯಕನ ೮೦೦೦ ಸೈನ್ಯ ಇವರನ್ನೆದುರಿಸಿದರೂ, ತೋಪುಗಳ ಹೊಡೆತ ಸಹಿಸದೆ ಹಿಮ್ಮೆಟ್ಟದರು. ಸುರಪುರದವರು ದೇವದುರ್ಗವನ್ನು ಲೂಟಿ ಮಾಡಿದರು. ಈ ಸಮಯದಲ್ಲಿ ರಂಗಪ್ಪನಾಯಕನ ಒಬ್ಬ ಪತ್ನಿ ಪಂದಿಕೋನಿ ಲಕ್ಷ್ಮಮ್ಮ ಮಾತ್ರ ಹೆರಿಗಾಗಿ ತವರುಮನೆಗೆ ಹೋಗಿದ್ದಳು. ರಂಗಪ್ಪನಾಯಕನ ತಲೆ ಮರೆಸಿಕೊಂಡನಾದರೂ ಆತನನ್ನು ಶೋಧಿಸಿ, ಸುರಪುರ ಸೈನ್ಯವು ಬೆನ್ನತ್ತಿತ್ತು. ತಪ್ಪಿಸಿಕೊಳ್ಳುವ ಯತ್ನದಲ್ಲಿ ಈತ ಉಳಿದ ಪರಿವಾರದವರನ್ನು ಕರೆದುಕೊಂಡು ದೇವದುರ್ಗ ಬೆಟ್ಟದ ಪೂರ್ವಕ್ಕಿದ್ದ ಮದ್ದಿನ ಮನೆಗೆ ಹೋಗಿ ತನ್ನ ಕೈಯಲ್ಲಿದ್ದ ಕೊಳ್ಳಿಯಿಂದ ಸಿಡಿಮದ್ದಿಗೆ ಬೆಂಕಿ ಹಚ್ಚಿದಾಗ ತಾನೂ ತನ್ನ ಪರಿವಾರವು ಹಾಗೂ ಈತನನ್ನು ಬೆನ್ನಟ್ಟಿದ್ದ ಸುರಪುರದ ಸೈನ್ಯವು ಸಿಡಿಮದ್ದಿಗೆ ಆಹುತಿಯಾಯಿತು. ಈ ಘಟನೆಯಿಂದ ಈತನಿಗೆ ಕೊಳ್ಳಿರಂಗಪ್ಪನೆಂಬ ಹೆಸರು ಪ್ರಾಪ್ತವಾಯಿತು.

ಮುಂದೆ ಹೆರಿಗೆಗೆ ಹೋಗಿದ್ದ ಪಂದಿಕೋನಿ ಲಕ್ಷ್ಮಮ್ಮನ ಹೊಟ್ಟೆಯಲ್ಲಿ ಕೃಷ್ಣಪ್ಪ ನಾಯಕನೆಂಬ ಮಗ ಜನಿಸಿದ್ದ. ಆತನ ಮುಂದೆ ದೇವದುರ್ಗದ ಅರಸನಾದನು. ಆದರೆ ದೇವದುರ್ಗ, ಅರಕೇರಿ, ಕ್ಯಾದಿಗೇರಿ, ಜಾಲಿಬೆಂಚಿ, ಗೋನವಾಟ್ಲ, ಐದಭಾವಿ ಈ ಪರಗಣಗಳು ವೆಂಕಟಪ್ಪನಾಯಕನ ಅಧೀನಕ್ಕೊಳಟ್ಟವು. ಆಗ ನಿಜಾಮನು ಈ ಪರಗಣಗಳನ್ನು ವೆಂಕಟಪ್ಪನಾಯಕನಿಗೆ ಕೊಟ್ಟು ಸನದು ಬರೆದುಕೊಟ್ಟನು.[21]

ನಂತರ ಸುರಪುರದ ಮುಮ್ಮಡಿ ಪಿಡ್ಡನಾಯಕ (ಕ್ರಿ.ಶ. ೧೮೦೨ – ೧೮೨೭)ನು ದೇವದುರ್ಗದ ಇಚೇರಿ ಕಿಲ್ಲೆಗಳನ್ನು ಕ್ರಿ.ಶ. ೧೮೧೧ರಲ್ಲಿ ಪುನಃ ಜೀರ್ಣೋದ್ಧಾರ ಮಾಡಿದನು. ನಂತರ ಕ್ರಿ.ಶ. ೧೮೫೩ ಮೇ ೨೧ ರಂದು ನಿಜಾಮನು ಬೀರಾರ್ ಒಪ್ಪಂದಕ್ಕೆ ಸಹಿ ಹಾಕಿದನು. ಆ ಪ್ರಕಾರ ಬೀರಾರ್ ಪ್ರಾಂತ್ಯವನ್ನು ಉಸ್ಮಾನಾಬಾದ್ ಹಾಗೂ ರಾಯಚೂರು ಜಿಲ್ಲೆಗಳನ್ನು ಈಸ್ಟ್ ಇಂಡಿಯಾ ಕಂಪನಿಗೆ ಬಟ್ಟುಕೊಡಲಾಯಿತು. ಆಗಿನಿಂದ ಈ ಸಂಸ್ಥಾನವು ಬ್ರಿಟಿಷರ ಅಧೀನಕ್ಕೆ ಒಳಪಟ್ಟಿತ್ತು.[22] ಇಲ್ಲಿ ಬ್ರಿಟಿಷರ ಪ್ರತಿನಧಿಗಳು ಇರುತ್ತಿದ್ದರು. ಹೀಗಾಗಿ ೬೦ ಸೈನಿಕರೊಂದಿಗೆ ಸುರಪುರದ ಶಿಬಿರದಲ್ಲಿದ್ದ ಕ್ಯಾಂಬೆಲ್‌ನಿಗೆ ಅಲ್ಲಿ ಜೀವಭಯ ಶುರುವಾಗಿ ತಮ್ಮ ಆಳ್ವಿಕೆ ಇರುವ ದೇವದುರ್ಗಕ್ಕೆ ತೆರಳಲು ಆಪೇಕ್ಷ ಪಟ್ಟಿದ್ದುದು ಕಂಡುಬರುತ್ತದೆ.[23] ನಂತರ ಈ ಮನೆತನದವರು ಬ್ರಿಟಿಷರ ಆಧೀನದಲ್ಲಿ ಮೌನವಾಗಿ ಕಾಲನೂಕಿದರು ಇವರ ಉಪಜೀವನಕ್ಕಾಗಿ ಬ್ರಿಟಿಷರು ಕೆಲವು ಭೂಮಿಗಳನ್ನು ಬಿಟ್ಟಿದ್ದರು.

ಈಗ ಮನೆತನದ ವಂಶಸ್ಥರು ದೇವದುರ್ಗದಲ್ಲಿಯೇ ನೆಲೆಸಿದ್ದಾರೆ. ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಉತ್ತಮ ಸ್ಥಾನದಲ್ಲಿದ್ದಾರೆ. ಈ ಮನೆತರದ ಹಿರಿಯ ವಕೀಲರಾಗಿದ್ದ ರಾಜಾ ದಿವಂಗತ ಕಿಲಚನಾಯಕರು ೧೯೬೨ರಲ್ಲಿ ಲಿಂಗಸುಗೂರು ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ದಿಸಿದ್ದರು. ಗೆಲುವು ಆಗಲಿಲ್ಲ. ಕಾರಣ ಇವರು ದೇವದುರ್ಗದ ಕ್ಷೇತ್ರದವರಾಗಿದ್ದರು. ಈ ಮನೆತನದವರಾದ ರಾಜಾ ವೆಂಕಟಪ್ಪನಾಯಕರು, ರಾಜಾ ಚಂದ್ರಯಾಸ ನಾಯಕರು, ರಾಜ್ಯದ ರಾಜಕಾರಣಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹಾಗೂ ಆ ಭಾಗದ ಎಲ್ಲಾ ಜನಾಂಗದ ಪ್ರಜೆಗಳ ಮನದಲ್ಲಿದ್ದಾರೆ. ಈಗಲೂ ಸಮಾಜ ಇವರನ್ನು ಗೌರವದಿಂದ ಗುರುತಿಸುತ್ತದೆ. ಆ ಭಾಗದ ಹಬ್ಬ ಹರಿದಿನಗಳಲ್ಲಿ, ಜಾತ್ರೆ ಉತ್ಸವಗಳಲ್ಲಿ ಭಾಗವಹಿಸುತ್ತಾರೆ.

ಛಾಯಾಚಿತ್ರಗಳ ಪಟ್ಟಿ

೧. ಗುಡಗುಂಟಿ ಅರಮನೆ.

೨. ಗುಡಗುಂಟಿಯ ಕೊನೆಯ ಅರಸ ರಾಜಾ ತಿಪ್ಪರಾಜ ಜಡಿಸೋಮಪ್ಪ ನಾಯಕ.

೩. ದೇವದುರ್ಗದ ಅರಮನೆ.

೪. ಗುಂತಗೋಳ ಸಂಸ್ಥಾನ ಸ್ಥಾಪಕ ರಾಜಾ ಕಾಳಭೈರವ ನಾಯಕನ ದೇವಾಲಯ,

೬. ಗುಂತಗೋಳ ಅರಮನೆ.

[1] ಹರ್ತಿಕೋಟೆ ವೀರೇಂದ್ರಸಿಂಹ, ತೇಜಸ್ವಿಕಟ್ಟೀಮನಿ (ಸಂ), ಘಟ್ಟಿಹೊಸಳ್ಳಿ ಗಟ್ಟಗ, ೨೦೦೨,ಪು. ೨೪

[2] ಕೃಷ್ಣಮಾಚಾರ್ಯ. ಬಿ., ಮರೆಯಲಾಗದ ಸುರಪುರ ರಾಜರ ಚರಿತ್ರೆ. ೨೦೦೨,ಪು. ೧೭.

[3] ಕರ್ತಿಕೋಟೆ ವೀರೇಂದ್ರಸಿಂಹ, ತೇಜಸ್ವಿಕಟ್ಟಿಮನಿ (ಸಂ), ಪೂರ್ವೋಕ್ತ, ಪು. ೨೫.

[4] ಅದೇ ಪು.೮೪

[5] ಅದೇ ಪು. ೧೦೨

[6] ರಂಗರಾಜ ದೇವೇಂದ್ರಪ್ಪ, ಸುರಪುರ ಸಂಸ್ಥಾನ : ಒಂದು ಅಧ್ಯಯನ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡಕ್ಕೆ ಸಾದರ ಪಡಿಸಿದ ಪಿಹೆಚ್.ಡಿ. ಮಹಾಪ್ರಬಂಧಕ್ಕೆ ೧೯೯೨ ಪು. ೬೨.

[7] ದುರಗಪ್ಪ ಎಂ.ಕೆ.,ವಿಜಯನಗರೋತ್ತರ ಕಾಲೀನ ಬೇಡ ಜನಾಂಗದಲ್ಲಾದ ಸ್ಥಿತ್ಯಂತರಗಳು: ಚಾರಿತ್ರಿಕ ಅಧ್ಯಯನ, ೨೦೦೪ ಪು ೧೦೭.

[8] ಬಸಣ್ಣ ಜಾವೂರ ಸಾ. ಗುಂತಗೋಳ ತಾ, ಲಿಂಗಸುಗೂರು ಜಿ. ರಾಯಚೂರು ಇವರ ಹೇಳಿಕೆಯಿಂದ

[9] ಅಮರೇಶ ಯತಗಲ್, ಗುಂತಗೋಳ ಸಂಸ್ಥಾನ ಐತಿಹಾಸಿಕ ಪದರುಗಳು. ಇತಿಹಾಸದರ್ಶನ ಸಂಪುಟ ೧೯, ೨೦೦೪ ಪು.೩೩೨.

[10] ಅದೇ ಪುಟ. ೩೩೨.

[11] ಅದೇ ಪುಟ.೩೩೨.

[12] ಅದೇ ಪುಟ. ೩೨೨.

[13] ರಾಜಾ ರಾಯಪ್ಪ ನಾಯಕ ಗುಂತಗೋಳ ರಾಜವಂಶಸ್ಥರ ಹೇಳಿಕೆಯಿಂದ.

[14] ರಾಜಾ ಅಮರಪ್ಪನಾಯಕ ಗುಂಗೋಳ ರಾಜವಂಶಸ್ಥೃ ಹೇಳಿಕೆಯಿಂದ.

[15] ರಾಜಾ ಕಿಲಚನಾಯಕ ದೇವದುರ್ಗ ರಾಜವಂಶಸ್ಥರ ಹೇಳಿಕೆಯಿಂದ.

[16] ಕಪಟರಾಲ ಕೃಷ್ಣರಾವ್ ಪೂರ್ವೋಕ್ತ ೧೯೭೭,ಪು.೬೭.

[17] ಅದೇ.ಪುಟ. ೭೨ – ೭೩.

[18] ಕೃಷ್ಣಮಾಜಾರ್ಯ ಬಿ., ರಾಜಗುರುಗಳು ಸುರಪುರ ಇವರ ಹೇಳಿಕೆಯಿಂದ.

[19] ಕಪಟರಾಳ ಕೃಷ್ಣರಾವ್,ಪೂರ್ವೋಕ್ತ ೧೯೭೭,ಪು.೮೩ – ೮೪.

[20] ದುರಗಪ್ಪ ಎಂ.ಕೆ.ಪೂರ್ವೋಕ್ತ, ೨೦೦೩ ಪು.೧೦೯.

[21] ಪಟಪರಾಳ್ ಕೃಷ್ಣರಾವ್ ಪೂವೋಕ್ತ, ೧೯೭೭, ಪು.೧೨೦.

[22] ಸೆಬಾಸ್ಟಿಯನ್ ಜೋಸಿಫ್ (ಸಂ) ಕರ್ನಾಟಕ ಚರಿತ್ರೆ ಸಂಪುಟ ೬,೧೯೯೭,ಪುಟ ೧೭೦.

[23] ರಂಗರಾಜ ದೇವೇಂದ್ರಪ್ಪ, ಪೂವೋಕ್ತ, ೧೯೯೨, ಪು. ೧೨೦.