ಸುರಪುರದ ದೊರೆಗೆ ಆಶ್ರಮ

ಸುರಪುರದಲ್ಲಿ ಹಸರಂಗಿ ಪಾಮನಾಯಕನ ನಂತರ ಅಧಿಕಾರಕ್ಕೆ ಬಂದಿದ್ದ ಪೀತಾಂಬರಿ ಬಹರಿ ಪಿಡ್ಡನಾಯಕನು ವಾಗಿನಗೇರಿ ಕೋಟೆಯಲ್ಲಿದ್ದಾಗ ಅವನನ್ನುಸೆರೆ ಹಿಡಿಯಲು ಮೊಗಲ್ ಸಾಮ್ರಾಟನಾದ ಔರಂಗಜೇಬನು ಕೋಟೆಗೆ ಮುತ್ತಿಗೆ ಹಾಕುತ್ತಾನೆ. ಆದರೆ ಪಾಮನಾಯಕನು ಅಲ್ಲಿಂದ ತಪ್ಪಿಸಿಕೊಂಡು ತಾವರಗೇರಿ ಮಾರ್ಗದಿಂದ ಕನಕಗಿರಿಗೆ ಬರುತ್ತಾರೆ. ದೊರೆ ಇಮ್ಮಡಿ ಉಡಚನಾಯಕನಿಗೆ ವಿಷಯ ಅರುಹಿ ಆಶ್ರಯಕ್ಕಾಗಿ ಬೇಡಿ ಕೊಳ್ಳುತ್ತಾನೆ. ಇಮ್ಮಡಿ ಉಡಚನಾಯಕ ಆಶ್ರಯ ನೀಡಲು ಒಪ್ಪಿಕೊಂಡು ಅವನನ್ನು ಎಮ್ಮಿಗುಡ್ಡದ ಕೋಟೆಯಲ್ಲಿ ಅಡಗಿಸಿಟ್ಟನು. ಬಹರಿ ಪಿಡ್ಡನಾಯಕ ಅಲ್ಲಿ ಒಂದು ವರ್ಷವಿದ್ದನು.[1]

ಪ್ರಬಲನಾದ ಔರಂಗಜೇಬನನ್ನು ಪರೋಕ್ಷವಾಗಿ ಎದುರುಹಾಕಿಕೊಂಡು ಆಶ್ರಯಬೇಡಿ ಬಂದ ನಾಯಕನಿಗೆ ರಕ್ಷಣೆ ಮಾಡುವ ಸಾಹಸಕ್ಕೆ ಕೈ ಹಾಕಿದ್ದು ಇಮ್ಮಡಿ ಉಡಚನಾಯಕನ ಧೈರ್ಯ ಮತ್ತು ಎಂತಹ ಸಂದರ್ಭದಲ್ಲಿ ರಾಜಕೀಯ ಮೌಲ್ಯ ಪರಿಪಾಲನೆಯ ಆದರ್ಶವನ್ನು ಇಟ್ಟುಕೊಂಡಿದ್ದನೆಂಬುದು ವ್ಯಕ್ತವಾಗುತ್ತದೆ. ಆದ್ದರಿಂದ ಇವನೊಬ್ಬ ಘನ ವ್ಯಕ್ತಿ ಎಂದು ಹೇಳಬಹುದು.

ಇಮ್ಮಡಿ ಉಡಚನಾಯಕನು ಅನೇಕ ಉಂಬಳಿ, ಜಹಗೀರಗಳನ್ನು ಹಾಕಿಕೊಟ್ಟನು. ಇವನ ಚಿಕ್ಕಮಾದಿನಾಳ ಶಾಸನದಿಂದ[2] ಇವನು ನರಭಕ್ಷಕ ಹುಲಿಯನ್ನು ಬೇಟೆಯಾಡಿ ಕೊಂದಿದ್ದಕ್ಕಾಗಿ ವಿಠಲಾಪುರದ ಶಿಕಾರಿ ವೀರಪ್ಪನಮಗ ಸೋಲಾಬಯ್ಯನಿಗೆ ಗೌರವಿಸಿ ಭೂದಾನ ನೀಡಿದ ವಿಷಯ ತಿಳಿಯುತ್ತದೆ. ಇವನ ಕನಕಗಿರಿಯ ಮತ್ತೊಂದು ಶಾಸನದ[3] ವಿಷಯವು ತೀರ ಅಪರೂಪವಾಗಿದೆ. ಇದರಲ್ಲಿ ವಿಷ್ಣು ಪಾರಮ್ಯವನ್ನು ಪ್ರತಿಪಾದಿಸಲಾಗಿದೆ. ಆದ್ದರಿಂದ ಇವನು ಕಟ್ಟಾ ವಿಷ್ಣು ಭಕ್ತನಾಗಿದ್ದನೆಂದು ಹೇಳಬಹುದು.

ಇಮ್ಮಡಿ ಉಡಚನಾಯಕನಿಗೆ ಶಾಸನಗಳಿಂದ ಇವನ ರಾಣಿಯರ ಇಬ್ಬರ ಹೆಸರುಗಳು ತಿಳಿಯುತ್ತವೆ. ಅವರಲ್ಲಿ ಒಬ್ಬಳ ಚಿನ್ನಮ್ಮ. ಇನ್ನೊಬ್ಬಳು ಕನಕಮ್ಮ ಸ್ಥಳೀಯ ಹೇಳಿಕೆಯಿಂದ ಮತ್ತೊಂದು ಹೆಸರು ತಿಳಿಯುವುದು. ಅವಳು ರಾಣಿ ಅಚ್ಚಮ್ಮ. ಈ ರಾಣಿಯರು ಕೂಡಾ ಸಾಮಾಜಿಕ ಮತ್ತು ಧಾರ್ಮಿಕ ಚಟುವಟಿಕೆಗಳನ್ನು ಕೈಗೊಂಡಿದ್ದಾರೆ. ರಾಣಿ ಕನಕಮ್ಮಳು ಲಕ್ಷ್ಮೀದೇವಿ ಗುಡ್ಡದ ಬುಡದಲ್ಲಿ ದೊಡ್ಡ ಭಾವಿಯೊಂದನ್ನು ತೊಡಿಸಿ ಅದಕ್ಕೆ ಆಕರ್ಷಕವಾಗಿ ಕಲ್ಲಿನಿಂದ ಕಟ್ಟಿಸಿದಳು[4] ರಾಣಿ ಚಿನ್ನಮ್ಮಳು ಕನಕಾಚಲಪತಿ ದೇವಾಲಯದ ಪ್ರಕಾರದಲ್ಲಿ ನೆಲಕ್ಕೆ ಕಲ್ಲು ಹಾಸಿಕೆಗಳನ್ನು ಹಾಕಿಸಿದ್ದಾಳೆ[5] ಮತ್ತು ಕನಕಗಿರಿಯ ಖಝೂರದಲ್ಲಿ ಪೇಟೆ ಬಸವಣ್ಣ ದೇವಾಲಯವನ್ನು ನಿರ್ಮಿಸಿದ್ದಾಳೆ. ಈ ಈಕೆ ನಿರ್ಮಿಸಿದ ಕೆರೆಯನ್ನು ಈಗಲೂ ಚಿನ್ನಾದೇವಿ ಕೆರೆಯೆಂದು ಕರೆಯುತ್ತಾರೆ.[6] ರಾಣಿ ಅಚ್ಚಮ್ಮಳು ಕನಕಗಿರಿ ಕನ್ನೆರಯಡು ಗ್ರಾಂದ ದಾರಿಯಲ್ಲಿ ಆಕರ್ಷವಾದ ಬಾವಿಯೊಂದನ್ನು ನಿರ್ಮಿಸಿದ್ದಾಳೆ ಅದಕ್ಕೆ ಈಗಲೂ ಅಚ್ಚಮ್ಮಬಾವಿ ಎಂದು ಹೆಸರಿದೆ.

ಇಮ್ಮಡಿ ಚಿಕ್ಕ ಕನಕಪ್ಪ ಉಡಚನಾಯಕ (ಕ್ರಿ..೧೭೦೮೧೭೫೨)

ಕನಕಪ್ಪ ಉಡಚನಾಯಕ ಇಮ್ಮಡಿ ಉಡಚನಾಯಕನ ಮಗ ಇವನ ವ್ಯಕ್ತಿತ್ವ ಮತ್ತು ಸಾಧನೆ ಕುರಿತಾಗಿ ಸ್ಥಳೀಯ ಹೇಳಿಕೆಗಳಿಂದಲೂ ಹೆಚ್ಚಿನ ವಿವರಗಳು ತಿಳಿದುಬರುವುದಿಲ್ಲ. ಆದರೆ ಇವನ ಒಂದು ತಾಮ್ರಶಾಸನ ಲಭ್ಯವಿದೆ[7] ಶಾಸನದಲ್ಲಿ ಮೊದಲ ಬಾರಿಗೆ ಇವರ ಬಿರುದಾವಳಿಗಳ ಸಾಲುಗಳಲ್ಲಿ ರಾಜರಾ ಜಯಸಿಂಗ ಎಂಬ ಹೆಸರು ಕಂಡುಬರುತ್ತದೆ.

ಕನಕಪ್ಪನಾಯಕನು ಸಾಧು ಸಂತರಲ್ಲಿ ಗೌರವ ಹೊಂದಿದ್ದನು ತನ್ನ ಆಳ್ವಿಕೆಯ ಕಾಲದಲ್ಲಿ ರಾಜಧಾನಿ ಕನಕಗಿರಿಗೆ ಆಗಮಿಸಿದ ಕೂಡಲೇ ಶೃಂಗೇರಿ ಮಠದ ಶ್ರೀ ಶಂಕರಭಾರತಿ ಸ್ವಾಮಿಗಳಿಗೆ ಸತ್ಕರಿಸಿ ಅವರ ಶೃಂಗೇರಿ ಮಠಕ್ಕೆ ಕನಕಗಿರಿ ಸೀಮೆಯ ತೊಂಡೆಹಾಳ ಗ್ರಾಮವನ್ನು ದಾನ ನೀಡಿದನು.[8] ಈತನ ಕಾಲದಲ್ಲಿ ರಾಜಧಾನಿ ಕನಕಗಿರಿಗೆ ಸಮೀಪದ ಬಗಳಾಮುಖಿ ಕ್ಷೇತ್ರ ಅಂಬಾಮಠದಲ್ಲಿ ವಾಸಿಸುತ್ತಿದ್ದ ಚಿದಾನಂದಾವಧೂತರನ್ನು ಕನಕಪ್ಪ ನಾಯಕನು ರಾಜಧಾನಿಗೆ ಬಂದು ವಾಸಿಸಲು ಬೇಡಿಕೊಳ್ಳುತ್ತಾನೆ. ಅರಸನ ಆಹ್ವಾನವನ್ನು ಮನ್ನಿಸಿದ ಅವಧೂತರು ತಮ್ಮ ಜೀವಿತದ ಕೊನೆಗಾಲವನ್ನು ಕಳೆಯಲು ಕನಕಗಿರಿಗೆ ಆಗಮಿಸಿದರು. ಅವರಿಗೆ ಕನಕಪ್ಪ ನಾಯಕ ಅರಮನೆಗೆ ಹತ್ತಿರದ ತೋಟದಲ್ಲಿ ಆಶ್ರಯವನ್ನು ನಿರ್ಮಿಸಿಕೊಡುತ್ತಾನೆ.

ಕನಕಪ್ಪನಾಯಕನು ವ್ಯಾಧಿಯಿಂದಾಗಿ ಕ್ರಿ.ಶ. ೧೭೫೭ರಲ್ಲಿ ನಿಧನ ಹೊಂದಿದನು. ಇವನ ಸ್ಮರಣಾರ್ಥ ಕನಕಗಿರಿಯ ದಕ್ಷಿಣದ ಕೊನೆಯಲ್ಲಿ ಒಂದು ಪ್ರತಿಮಾ ಗುಡಿಯನ್ನು ಸುಂದರವಾದ ಪುಷ್ಕರಣಿಯನ್ನು ನಿರ್ಮಿಸಲಾಗಿದೆ. ಗುಡಿಯ (ಮಂದಿರ) ಗರ್ಭಗೃಹದಲ್ಲಿ ಇವನ ಆಳೆತ್ತರ ಪ್ರತಿಮೆ ಇದೆ.

ಹಿರೇರಂಗಪ್ಪ ನಾಯಕ(ಕ್ರಿ..೧೭೧೭೫೨೧೭೮೧)

ಹಿರೇರಂಗಪ್ಪ ನಾಯಕನು ಇಮ್ಮಡಿ ಚಿಕ್ಕ ಕನಕಪ್ಪ ನಾಯಕನ ಮಗ. ಈತನು ತಂದೆಯ ಜೀವಿತಾವಧಿಯಲ್ಲಿಯೇ ಅಧಿಕಾರಕ್ಕೆ ಬರುತ್ತಾನೆ. ಈತನ ಕುರಿತಾಗಿ ಎರಡು ತಾಮ್ರ ಶಾಸನ, ಬಂದು ಸನದು[9] ಮತ್ತು ಎರಡು ಸಾಹಿತ್ಯಕ ಕೃತಿಗಳಲ್ಲಿ[10] ಉಲ್ಲೇಖವಿದೆ. ಈ ನಾಯಕನ ಕಾಲ ಕನಕಗಿರಿಯ ಸಾಂಸ್ಕೃತಿಕ ಇತಿಹಾಸದಲ್ಲಿ ಮಹತ್ವದ್ದಾಗಿದೆ. ಇವನ ಆಶ್ರಯದಲ್ಲಿದ್ದ ಕನಕಗಿರಿಯವರೇ ಆದ ಜಯವೆಂಕಟಾಚಾರ್ಯರು ಕನ್ನಡ ಮತ್ತು ಸಂಸ್ಕೃತದಲ್ಲಿ ಶ್ರೇಷ್ಠ ವಿದ್ವಾಂಸರಾಗಿದ್ದರು. ಇವರು ಕನ್ನಡದಲ್ಲಿ ದಂಡಕ ಮತ್ತು ಭಟ್ಟಂಗಿ ಸಾಹಿತ್ಯವನ್ನು ರಚಿಸಿದ್ದಾರೆ. ಈ ನಾಯಕನ ತಂದೆಯ ಕಾಲದಲ್ಲಿ ರಾಜಧಾನಿಗೆ ಆಗಮಿಸಿದ್ದ ಚಿದಾನಂಧಾವ ಧೂತರು ಇವನ ಆಶ್ರಯದಲ್ಲಿ ಚಿದಾನಂದ ವಚನ, ಚಿದಾನಂದ ಕೀರ್ತನ, ಕಾಮವಿಡಂಬನೆ ಮತ್ತು ಪ್ರಸಿದ್ಧವಾಗಿರುವ ದೇವಿಪುರಾಣಗಳನ್ನು ರಚಿಸಿದರು. ಹಿರೇರಂಗಪ್ಪ ನಾಯಕನ ಇಚ್ಚೆಯಂತೆ ಕವಿ ಶಿರಗುಪ್ಪಿ ಅಥವಾ ಅರಳಿಕೊಪ್ಪದ ಸದಾಶಿವಯ್ಯನು ಅರ್ಧಕ್ಕೆ ನಿಂತಿದ್ದ ಅಪಾರಳ ತಮ್ಮಣ್ಣನ ಶ್ರೀಕೃಷಣಪಾರಿಜಾತ ನಾಟಕವನ್ನು ಪೂರ್ತಿಗೊಳಿಸಿದನು,[11] ಹಿರೇರಂಗಪ್ಪನಾಯಕನು ತನ್ನ ತಂದೆಯಂತೆ ಸಾಧು ಸಂತರಲ್ಲಿ ಗೌರವ ಭಕ್ತಿಯನ್ನು ಹೊಂದಿದ್ದನು. ತನ್ನ ಕಾಲದಲ್ಲಿ ಕನಕಗಿರಿಗೆ ಆಗಮಿಸಿದ ಶೃಂಗೇರಿ ಮಠದ ನರಸಿಂಹಭಾರತಿ ಸ್ವಾಮಿಗಳನ್ನು ಸತ್ಕರಿಸಿದನು. ತನ್ನ ತಂದೆಯ ಕಾಲದಲ್ಲಿ ಶೃಂಗೇರಿ ಮಠಕ್ಕೆ ನೀಡಿದ್ದ ತೊಂಡೆಹಾಳ ಗ್ರಾಮವು ಈಗ ನವಲಿ ಸಂದೇಸಾಯಿಕೆಗೆ ಸೇರಿದ್ದರಿಂದ ಅದರ ಬದಲಿಗೆ ಜೂಲದೊಡ್ಡಿ ಮತ್ತು ಜೂಕುಂಟಿ ಎಂಬೆರಡು ಗ್ರಾಮಗಳನ್ನು ದಾನವಾಗಿ ನೀಡಿದನು.[12] ಇವನ ಕಾಳದ ಒಂದು ಸನದಿನಲ್ಲಿ[13] ಅರಮನೆಯ ಭಟ್ಟರಿಗೆ ಭೂಮಿದಾನ ನೀಡಿದ ಬಗ್ಗೆ ವಿವರವಿದೆ.

ಮುಮ್ಮಡಿ ಕನಕಪ್ಪನಾಯಕ (ಕ್ರಿ.. ೧೭೮೧೧೭೮೮)

ಹಿರೇರಂಗಪ್ಪನಾಯಕನು ಮೃತನಾದ ನಂತರ ಅವನ ಮಗ ಕನಕಪ್ಪ ಉಡಚನಾಯಕನು ಅಧಿಕಾರಕ್ಕೆ ಬಂದನು. ಈತನ ಕುರಿತಾಗಿ ಯಾವುದೇ ಆಧಾರಗಳು ಲಭ್ಯವಿಲ್ಲ. ಆದರೆ ಸ್ಥಳೀಯ ಹೇಳಿಕೆಯಲ್ಲಿ ಇವನು ಕನಕಗಿರಿಯನ್ನು ಮುತ್ತಿದ ಬಿಜಾಪುರದ ಸುಲ್ತಾನನ ಸೈನ್ಯವನ್ನು ಸೋಲಿಸಿದನೆಂದು, ನಂತರ ಆತನ ಮಿತ್ರರಾಜನಾಗಿ ಅವನ ಪರಾರ್ಕಾಟ್ ಯುದ್ಧದಲ್ಲಿ ಭಾಗವಹಿಸಿದಾಗ ಮರಣ ಹೊಂದಿದನೆಂದು ಇದೆ. ಆದರೆ ಇವನ ಕಾಲದಲ್ಲಿ ಆದಿಲ್‌ಷಾಯಿಯ ಸೈನ್ಯವು ಕನಕಗಿರಿ ಪ್ರಾಂತವನ್ನು ಮುತ್ತಿಗೆ ಹಾಕಲು ಸಾಧ್ಯವಿದ್ದಿಲ್ಲ. ಏಕೆಂದರೆ ಆದಿಲ್‌ಷಾಯಿ ಅರಸು ಮನೆತನವು ೧೬೮೬ರಲ್ಲಿ ಕೊನೆಗೊಂಡಿತ್ತು. ಹಾಗಾಗಿ ಈತನ ಬಗೆಗೆ ನಿಖರವಾದ ಮಾಹಿತಿಗಳು ತಿಳಿಯಬೇಕಾಗಿದೆ.

ಹಿರೇನಾಯಕ (ಕ್ರಿ.. ೧೭೮೮೧೮೩೩)

ಹಿರೇನಾಯಕನು ಮುಮ್ಮಡಿ ಕನಕಪ್ಪ ನಾಯಕನ ಮಗನಾಗಿದ್ದು, ಅವನ ನಂತರ ಅಧಿಕಾರಕ್ಕೆ ಬರುತ್ತಾನೆ. ಇವನು ಕನಕಗಿರಿಯಲ್ಲಿ ಆಳಿದ ಕೊನೆಯ ಅರಸ ಇವನು ಕ್ರೂರ ನಡೆತೆಯುಳ್ಳವನಾಗಿದ್ದನು. ರಾಣಿವಾಸದ ಜನರನ್ನು, ಕಂಡ, ಕಂಡ ಶಿಶುಗಳನ್ನು ಚಾಕಿ(ಚೂರಿ) ನಿಂದ ಇರಿದು ಕೊಲ್ಲುತ್ತಿದ್ದನು. ದುರ್ನಡತೆಯುಳ್ಳವನು ಆಗಿದ್ದ ಇವನು ಮುಂಡರಗಿಯ ದೇಸಾಯಿಯ ಮಗಳನ್ನು, ಬಾದರಬಂಡಿಯ ದೇಸಾಯಿಯರ ಹೆಂಡತಿಯನ್ನು ಬಲವಂತವಾಗಿ ಅಪಹರಿಸಿದ್ದನು. ಇದರಿಂದ ಈ ದೇಸಾಯಿಗಳು ಹೈದರಾಬಾದಿನ ನವಾಬ ನಿಜಾಮನಲ್ಲಿ ದೂರಿಕೊಳ್ಳುತ್ತಾರೆ. ಇದೇ ಸಮಯದಲ್ಲಿ ನಿಜಾಮನ(ಸಿಕಂದರ್ ಝೂ) ನ ಮಂತ್ರ ಚಂದೂಲಾಲನು ತಿರುಪತಿ ಮತ್ತು ಹಂಪಿಯನ್ನು ಸಂದರ್ಶಿಸಿ ಕನಕಗಿರಿಯ ಮೇಲಿನಿಂದ ಹೈದರಾಬಾದಗೆ ಹಿಂತಿರುಗಿ ಹೊರಟಿದ್ದನು. ಹಿರೇನಾಯಕನ ಸೈನಿಕರು ಶತ್ರುಗಳು ಯುದ್ಧಕ್ಕೆ ಬಂದರೆಂದು ಭಾವಿಸಿ ಚಂದೂಲಾಲನ ಸೈನಿಕರನ್ನು ಪೀಡಿಸಿ, ಅವರ ಕುದುರೆಗಳ ಕಿವಿ ಕೊಯ್ದು ಓಡಿಸಿಬಿಡುತ್ತಾರೆ. ಇದರಿಂದ ಅವಮಾನಿತನಾದ ಚಂದೂಲಾಲನು ಹೈದ್ರಾಬಾದಿಗೆ ಹಿಂತಿರುಗಿ ನಂತರ ಕನಕಗಿರಿ ನಾಯಕರಿಂದ ನಜರಾನಾ(ಕಪ್ಪ) ಹಣ ವಸೂಲಿ ಮಾಡುವ ನೆಪ ಹೂಡಿ ಹಿರೇನಾಯಕನನ್ನು ದಂಡಿಸಿ ಅವನ ರಾಜ್ಯವನ್ನು ಕಸಿಯುವುದಕ್ಕೋಸ್ಕರ ಸುರಪುರದ ಪಾಮನಾಯಕನನ್ನು ಕಳುಹಿಸಿದನು.

ಎಮ್ಮಿಗುಡ್ಡ ಕಾಳಗ (೧೮೮೩)

ಸುರಪುರದ ಪಾಮನಾಯಕನು ನಿಜಾಮನ ಆದೇಶದಂತೆ ತನ್ನ ಸೈನ್ಯದೊಂದಿಗೆ ಕನಕಗಿರಿಯ ಮೇಲೆ ಆಕ್ರಮಣಗೈಯುತ್ತಾನೆ. ಮೂರು ತಿಂಗಳವರೆಗೆ ಕಾಳಗ ನಡೆದ ನಂತರ ಹಿರೇನಾಯಕ ತನ್ನ ಸುಭದ್ರವಾದ ಎಮ್ಮಿಗುಡ್ಡ ಕೋಟೆಯನ್ನು ಸೇರಿದನು. ಈ ಯುದ್ಧದಲ್ಲಿ ಪಾಮನಾಯಕನು ಅನೇಕ ನಾಯಕರನ್ನು ಮತ್ತು ಅಪಾರ ಸೈನ್ಯವನ್ನು ಕಳೆದುಕೊಳ್ಳುತ್ತಾನೆ. ಈ ಸುದ್ದಿಯನ್ನು ಅರಿತ ನಿಜಾಮನು ಮೂರು ಲಕ್ಷ ರೂಪಾಯಿಗಳೊಡನೆ ೧೦,೦೦೦ ಸೈನಿಕರನ್ನು ಪಾಮನಾಯಕನ ನೆರವಿಗೆ ಕಳುಹಿಸಿದನು. ಯುದ್ಧ ಪುನಃ ಆರಂಭವಾಗಿ ಒಂಭತ್ತು ದಿನಗಳ ಕಾಲ ನಡೆಯಿತು ಆದರೂ ಪಾಮನಾಯಕನಿಗೆ ಹಿರೇನಾಯಕನನ್ನು ಸೋಲಿಸಲಾಗಲಿಲ್ಲ. ಆಗ ಪಾಮನಾಯಕನು ಸಂಚನ್ನು ರೂಪಿಸಿ ಹಿರೇನಾಯಕನು ಮಧ್ಯಪಾನ ಮಾಡಿ ರಾತ್ರಿ ಮಲಗಿದ್ದಾಗ ಸೆರೆಹಿಡಿದು ಕೋಟೆಯಿಂದ ಹೊರತಂದರು. ಅಲ್ಲಿಂದ ಅವನನ್ನು ಹೈದ್ರಾಬಾದಿಗೆ ಕರೆದೊಯ್ಯಲಾಯಿತು. ಅಲ್ಲಿ ಹಿರೇನಾಯಕನನ್ನು ತೋಪಿನ ಬಾಯಿಗೆ ಕಟ್ಟಿ ಹಾರಿಸಿ ಹತ್ಯೆಗೈಯಲಾಯಿತು. ಕನಕಗಿರಿಯ ಸಹಿತ ರಾಜ್ಯದ ಎಲ್ಲ ಪ್ರದೇಶಗಳು ನಿಜಾಮನ ಸ್ವಾದೀನವಾದವು. ಹಿರೇನಾಯಕನ ಹತ್ಯೆಯೊಂದಿಗೆ ಕನಕಗಿರಿಯಲ್ಲಿ ಗುಜ್ಜಲ ವಂಶದ ನಾಯಕರ ಆಳ್ವಿಕೆ ಕೊನೆಗೊಂಡಿತು.

ಹುಲಿಹೈದರ್ದಿಂದ ಆಡಳಿತ

ಕನಕಗಿರಿ ರಾಜ್ಯವನ್ನು ನಿಜಾಮನು ತನ್ನ ವಶಪಡಿಸಿಕೊಂಡ ನಂತರ ಹತ್ಯೆಯಾದ ಹಿರೇನಾಯಕನ ಎರಡನೆಯ ಮಗ ರಂಗನಾಥಪ್ಪ ನಾಯಕ (ಗುಡ್ಡದ ದೊರೆ)ನು ನಿಜಾಮನ ವಿರುದ್ಧ ಬಂಡೇಳುತ್ತಾನೆ. ಇದರಿಂದ ನಿಜಾಮನು ಇವನಿಗೆ ಕನಕಗಿರಿಯನ್ನು ಹೊರತುಪಡಿಸಿ ೧೬ ಹಳ್ಳಿಗಳನ್ನು ನೀಡಿನು. ರಂಗನಾಥಪ್ಪನಾಯಕ ಈ ೧೬ ಹಳ್ಳಿಗಳನ್ನು ಹುಲಿಹೈದರ್‌ನ್ನು ಕೇಂದ್ರವಾಗಿಟ್ಟುಕೊಂಡು ಆಡಳಿತ ಪ್ರಾರಂಭಿಸಿದನು. ಇದಕ್ಕೆ ಹುಲಿಹೈದರ್ ಸಂಸ್ಥಾನವೆಂದು ಕರೆಯಲಾಯಿತು.

ಈ ಸಂಸ್ಥಾನದಿಂದ ೧೯೪೮ರ ವರೆಗೆ ಮೂರು ಜನ ನಾಯಕರು ಆಡಳಿತ ನಡೆಸಿದರು. ರಂಗಪ್ಪನಾಯಕನ ಅಣ್ಣ ರಂಗಪ್ಪನಾಯಕನು ಸುರಪುರಕ್ಕೆ ಹೋದಾಗ ಮೃತನಾದನು. ತಮ್ಮ ಹನುಮಪ್ಪನಾಯಕ ತನ್ನ ಉಪಜೀವನಕ್ಕೆ ಪ್ರತ್ಯೇಕ ವ್ಯವಸ್ಥೆಬೇಕೆಂದು ಗೊಡಿನಾಳ ಗ್ರಾಮವನ್ನು ಪಡೆದು, ಪ್ರತ್ಯೇಕನಾದನು. ಕನಕಗಿರಿ ನಿಜಾಮ ಸಂಸ್ಥಾನದ ಆಧೀನದಲ್ಲಿದ್ದರೂ ಶ್ರೀಕನಕಾಚಲಪತಿ ದೇವರ ಜಾತ್ರೆ ನಡೆಸುವ ಅಧಿಕಾರವನ್ನು ನಾಯಕರಿಗೆ ಬಿಟ್ಟುಕೊಟ್ಟನು. ಅದಕ್ಕಾಗಿ ನಿಜಾಮ ರಾಜ್ಯದಿಂದ ೩ಸಾವಿರ ರೂಪಾಯಿಗಳನ್ನು ನೀಡಲಾಗುತ್ತಿತ್ತು. ನಂತರ ಹಣದ ಸಹಾಯ ನಿಲ್ಲಿಸಿದರೂ ಕೂಡ ರಂಗನಾಥಪ್ಪ ನಾಯಕ ಸ್ವಂತ ಖರ್ಚಿನಿಂದ ಜಾತ್ರೆ ಹತ್ತು ನಿತ್ಯ ಪೂಜೆಗಳನ್ನು ನಡೆಯಿಸಿದನು. ಇವನ ಕಾಲದಲ್ಲಿ ಟಿಪ್ಪುಸುಲ್ತಾನನು ಕನಕಗಿರಿಯ ಮೇಲೆ ದಾಳಿ ಮಾಡಿ ಕನಕಾಚಲಪತಿ ದೇವಾಲಯದ ಸಂಪತ್ತನ್ನು ದೋಚಿದನೆಂದು ಅವನ ದಾಳಿಗೆ ದೇವಾಲಯವು ದಕ್ಕೆಗೊಂಡಿತೆಂದು, ದೊಡ್ಡ ರಥ ಬೆಂಕಿ ಹಚ್ಚಿ ಸುಟ್ಟಲ್ಪಟ್ಟಿತೆಂದು, ಟಿಪ್ಪು ಸಂಗಡ ಬಂದಿದ್ದ ಹರಪನಹಳ್ಳಿಯ ದೊರೆ ಕನಕಾಚಲಪತಿ ದೇವರ ಚಿನ್ನದ ಕಿರೀಟವನ್ನು ಅಪಹರಿಸಿದನೆಂದು ಸ್ಥಳೀಯವಾಗಿ ಹೇಳುತ್ತಾರೆ. ಈ ಬಗೆಗೆ ಹೆಚ್ಚಿನ ಶೋಧನೆ ಮಾಡಬೇಕಾಗಿದೆ.

ರಂಗನಾಥಪ್ಪ ನಾಯಕನಿಗೆ ಇಬ್ಬರು ರಾಣಿಯರಿಂದ ಮೂರು ಜನ ಮಕ್ಕಳು. ರಂಗಪ್ಪ ನಾಯಕ, ಕನಕಪ್ಪನಾಯಕ ಮತ್ತು ಎರಡನೆಯ ರಾಣಿಯ ಮಗ ಜಮ್ಮಾಳನಾಯಕ ಇವರಲ್ಲಿ ಹಿರಿಯನಾದ ರಂಗಪ್ಪನಾಯಕನು ತಂದೆಯನಂತರ ಅಧಿಕಾರ ವಹಿಸಿಕೊಳ್ಳುತ್ತಾನೆ.

ರಂಗಪ್ಪನಾಯಕ

ರಂಗಪ್ಪನಾಯಕನು ಕೂಡಾ ಕನಕಗಿರಿ ಕನಕಾಚಲಪತಿ ದೇವರ ಜಾತ್ರೆ ಮತ್ತು ನಿತ್ಯ ಪೂಜೆಗಳನ್ನು ಜರುಗಿಸಿದನು. ಇವನ ತಮ್ಮಂದಿರಾದ ಕನಕಪ್ಪನಾಯಕ ಮತ್ತು ಜಮ್ಮಾಳ ನಾಯಕರು ಸೋಮಸಾಗರ ಮತ್ತು ಗುಂತಮಡುವು ಗ್ರಾಮಗಳನ್ನು ತೆಗೆದುಕೊಂಡು ಪ್ರತ್ಯೇಕರಾದರು.

ರಂಗಪ್ಪನಾಯಕನಿಗೆ ನಾಲ್ಕು ಜನ ರಾಣಿಯರಿದ್ದು ಅವರಿಂದ ಲಕ್ಷ್ಮಮ್ಮ, ದಂಡೆಮ್ಮ ಮತ್ತು ಹಿರೆಮ್ಮ ಎಂಬ ಕೇವಲ ಮೂವರು ಹೆಣ್ಣು ಮಕ್ಕಳಿದ್ದರು ಗಂಡು ಸಂತಾನವಿರಲಿಲ್ಲ. ರಂಗಪ್ಪನಾಯಕನ ನಿಧನ ನಂತರ ಪಟ್ಟದ ರಾಣಿ ವೆಂಕಟಮ್ಮಳು ಇತರ ಮೂರು ಜನ ರಾಣಿಯರ ಸಮಕ್ಷಮದಲ್ಲಿ ತನ್ನ ಮೈದುನ ಸೋಮಸಾಗರದ ಕನಕಪ್ಪನಾಯಕನ ಮಗ ಉಡಸಿನಾಯಕನನ್ನು ದತ್ತು ತೆಗೆದುಕೊಂಡಳು. ಅವನು ಅಲ್ಪ ವಯಸ್ಸಿನಾಗಿದ್ದರಿಂದ ತಾನೇ ಕೆಲ ಕಾಲ ಆಡಳಿತ ನಡೆಸಿದಳು.

ಉಡಸಿನಾಯಕ

ಉಡಸಿನಾಯಕನ ಕಾಲದಲ್ಲಿ ಕನಗಿರಿಯ ರೈತರ ಒತ್ತಾಯದಂತೆ ಕನಕಾಚಲಪತಿ ದೇವಸ್ಥಾನಕ್ಕೆ ಒಂದು ಆಡಳಿತ ಸಮಿತಿಯನ್ನು ನೇಮಿಸಲಾಯಿತು. ಆ ಸಮಿತಿಗೆ ಅರಸನೆ ಅಧ್ಯಕ್ಷನಾಗಿರಬೇಕೆಂದು ನಿರ್ಣಯಿಸಲಾಯಿತು.

ಉಡಸಿನಾಯಕನ ನಿಧನ ನಂತರ ಇವನ ಮಗ ರಾಜಾ ರಂಗಪ್ಪನ ನಾಯಕನು ಚಿಕ್ಕವನಿದ್ದರಿಂದ ರಾಣಿ ಗೌರಮ್ಮ ತಾನೇ ಉತ್ತಮ ಆಡಳಿತ ನಡೆಸಿದಳು. ಕನಕಾಚಲಪತಿ ದೇವಾಲಯದ ಜಾತ್ರೆ, ಉತಸವಗಳನ್ನು ವಿಜೃಂಭಣೆಯಿಂದ ನಡೆಸಿದಳು, ರಥಶಾಲವನ್ನು ನಿರ್ಮಿಸಿದಳು. ಆದರೆ ರಾಜಾ ರಂಗಪ್ಪನಾಯಕ ಚಿಕ್ಕವಯಸ್ಸಿನಲ್ಲೆ ನಿಧನನಾದನು. ಇದರಿಂದ ರಾಣಿಗೆ ಆಘಾತವಾಗಿ ಸಂಸ್ಥಾನದ ವ್ಯವಹಾರಗಳು ಸ್ಥಗಿತಗೊಂಡವು. ರಾಣಿಯ ಆಪ್ತರೆಲ್ಲ ಸೇರಿ ದತ್ತು ಪುತ್ರನನ್ನು ತೆಗೆದುಕೊಳ್ಳಲು ಬಿನ್ಹವಿಸಿದರು. ಅದರಂತೆ ರಾಣಿ ತನ್ನ ಮೈದುನ ಸೋಮ ಸಾಗರದ ರಂಗನಾಥಪ್ಪನ ಮಗ ರಂಗಪ್ಪನಾಯಕನ್ನು[14] ದತ್ತು ತೆಗೆದುಕೊಂಡಳು. ಆದರೆ ರಂಗಪ್ಪನಾಯಕ ಅಲ್ಪ ವಯಸ್ಕನಾಗಿರುವುದರಿಂದ ಸಂಸ್ಥಾನದಲ್ಲಿ ಸರಿಯಾಗಿ ಆಡಳಿತ ನಡೆಯುತ್ತಿಲ್ಲವೆಂದು ಹೈದರಾಬಾದ್ ನಿಜಾಮನು ಹುಲಿಹೈದರ್ ಸಂಸ್ಥಾನವನ್ನು ಸ್ವಾಧೀನಪಡಿಸಿಕೊಂಡನು. ರಾಣಿ ಗೌರಮ್ಮ ಹಾಗೂ ಆಕೆಯ ದತ್ತುಪುತ್ರ ರಾಜಾ ರಂಗಪ್ಪ ನಾಯಕರಿಗೆ ವರ್ಷಾಸನ ಗೊತ್ತು ಪಡಿಸಿ ಹೈದ್ರಾಬಾದಿನಲ್ಲಿ ಇಡಲಾಯಿತು.[15] ಕೆಲಕಾಲನಂತರ ನಿಜಾಮ ರಾಜಾರಂಗಪ್ಪ ನಾಯಕನ ದತ್ತು ಕ್ರಮವನ್ನು, ಸಂಸ್ಥಾನದ ಮೇಲಿನ ಹಕ್ಕನ್ನು ಮಾನ್ಯಮಾಡಿ ಅವನೆ ಸಂಸ್ಥಾನದ ವಾರಸುದಾರನೆಂದು ಸ್ಥಿರಪಡಿಸಲಾಯಿತು. ಆದರೆ ಅಷ್ಟರಲ್ಲಿ ಭಾರತವು ಸ್ವತಂತ್ರಗೊಂಡು ಮುಂದೆ ೧೯೪೮ರಲ್ಲಿ ಪೊಲೀಸ್ ಕಾರ್ಯಾಚರಣೆಯೊಂದಿಗೆ ಹೈದರಾಬಾದ್‌ ರಾಜ್ಯ ಮತ್ತು ಅದರ ಅಧೀನದ ಹುಲಿಹೈದರ್ ಸಂಸ್ಥಾನ ಕೂಡ ಸ್ವತಂತ್ರ ಭಾರತದ ಒಕ್ಕೂಟದಲ್ಲಿ ವಿಲೀನವಾಯ್ತು. ೧೯೫೦ರಲ್ಲಿ ಜಹಗೀರುಗಳು ರದ್ದಾಗಿ ನಾಯಕ ಮನೆತನದವರು ಸಂಪೂರ್ಣ ಅಧಿಕಾರ ಕಳೆದುಕೊಂಡರು.

ನಾಯಕ ಕಾಲದ ಸಮೀಕ್ಷೆ

ಕ್ರಿ.ಶ. ೧೪೩೬ರಿಂದ ಕ್ರಿ.ಶ ೧೮೩೩ರವರೆಗೆ ಕನಕಗಿರಿಯಿಂದಲೂ ಮತ್ತು ಅಲ್ಲಿಂದ ಮುಂದೆ ಕ್ರಿ.ಶ. ೧೯೫೦ರವರೆಗೆ ಹುಲಿಹೈದರದಿಂದಲೂ ಕನಕಗಿರಿ ಪ್ರದೇಶವನ್ನು ಆಳಿದ ಗುಜ್ಜಲ ವಂಶದ ನಾಯಕರು ಕರ್ನಾಟಕದ ಇತಿಹಾಸಕ್ಕೆ ಆಡಳಿತ, ಸಮಾಜ, ಧರ್ಮ, ಸಾಹಿತ್ಯ, ಕಲೆ ಮತ್ತು ವಾಸ್ತುಶಿಲ್ಪ ಮುಂತಾದ ಸಾಂಸ್ಕೃತಿಕ ಕ್ಷೇತ್ರಗಳಿಗೆ ತಮ್ಮದೆ ಆದ ಕೊಡುಗೆಗಳನ್ನು ನೀಡಿದ್ದಾರೆ.

ಆಡಳಿತ

ಕನಕಗಿರಿ ಪಾಳೆಯಗಾರರು ಮೂಲತಃ ವಿಜಯನಗರದ ಆಧೀನ ಮಾಂಡಲಿಕರಾಗಿದ್ದರಿಂದ ವಿಜಯನಗರದ ಆಡಳಿತ ಪದ್ಧತಿಯನ್ನು ಅನುಸರಿದರು. ಅರಸನನ್ನು ನಾಯಕ, ದೊರೆ ಎಂದು ಕರೆಯಲಾಗುತ್ತಿತ್ತು. ಅರಸನು ರಾಜ್ಯದ ಸರ್ವೋಚ್ಚ ವ್ಯಕ್ತಿಯಾಗಿದ್ದನು. ನಾಯಕರು ಪಾಳೆಯಗಾರರಾದರೂ ಅವರ ಪ್ರಭುತ್ವ ಪ್ರಬಲವಾಗಿದ್ದಿತು. ಅವರು ತಮ್ಮನ್ನು ಶ್ರೀಮನ್ ಮಹಾನಾಯಕಾಚಾರ್ಯ, ನಾಯಕ ಶಿರೋಮಣಿ ಎಂದು ಕರೆದುಕೊಂಡಿದ್ದಾರೆ. ಅರಸನಿಗೆ ಉತ್ಸವ, ಬಾಹ್ಯಸಂಚಾರದ ಸಮಯುದಲ್ಲಿ ಗೌರವ, ಅಧಿಕಾರ ಸೂಚಕವಾದ ಛತ್ರ, ಚಾಮರ, ಫತಾಕೆಗಳನ್ನು ಹಿಡಿಯಲಾಗುತ್ತಿತ್ತು. ಹಿಂದೂ ಆಡಳಿತ ಪದ್ಧತಿಯಂತೆ ಅರಸೋತ್ತಿಗೆಯು ತಂದೆಯಿಂದ ಹಿರಿಯ ಮಗನಿಗೆ ವರ್ಗಾವಣೆಗೊಳ್ಳುತ್ತಿತ್ತು.

ರಾಜ್ಯವನ್ನು ಆಡಳಿತದ ಅನುಕೂಲಕ್ಕಾಗಿ ಸೀಮೆ, ಸಮ್ಮತಿ, ಗ್ರಾಮಗಳೆಂದು ವಿಂಗಡಿಸಲಾಗಿತ್ತು. ಸೀಮೆಯನ್ನು ಸರದೇಸಾಯಿಗಳಿಗೆ ಉಮ್ಮಳಿ ಹಾಕಿಕೊಡುತ್ತಿದ್ದರಿಂದ ಇಡೀ ಸೀಮೆಯ ಆಡಳಿತವನ್ನು ಸರದೇಸಾಯಿಗಳು ನೋಡಿಕೊಳ್ಳುತ್ತಿದ್ದರು.

ನಾಯಕರು ಬಲಿಷ್ಠವಾದ ಸೈನ್ಯವನ್ನು ಸಂಘಟಿಸಿದ್ದರು. ಸೈನ್ಯದಲ್ಲಿ ಕಾಲ್ದಳ, ಅಶ್ವದಳ ಎಂಬ ಎರಡು ಪಡೆಗಳಿದ್ದವು. ಕೋವಿ, ಈಟಿ, ಬಿಲ್ಲು, ಬಾಣ ಮತ್ತು ಖಡ್ಗ ಪ್ರಮುಖವಾದ ಶಸ್ತ್ರಾಸ್ತ್ರಗಳಾಗಿದ್ದವು. ಇಮ್ಮಡಿ ಉಡಚನಾಯಕ ಬಿಜಾಪುರ ಸೈನ್ಯವನ್ನು ಸೋಲಿಸಿದ್ದು, ಮತ್ತು ಅವನು ಔರಂಗಜೇಬನ ವಿರುದ್ಧ ಸುರಪುರದ ಪಿಡ್ಡನಾಯಕನಿಗೆ ಆಶ್ರಯ ನೀಡಿದ ಸಂಗತಿಗಳು ಕನಕಗಿರಿ ಸೈನ್ಯದ ಬಲಾಡ್ಯತೆಯನ್ನು ಸೂಚಿಸುತ್ತವೆ. ನಾಯಕರು ಆಯಕಟ್ಟಿನ ಜಾಗಗಳಲ್ಲಿ ಸುಭದ್ರವಾದ ಕೋಟೆಗಳನ್ನು ನಿರ್ಮಿಸಿದ್ದರು. ಸೈನ್ಯ ಶಸ್ತ್ರಾಸ್ತ್ರಗಳಿಂದ ಸುಸಜ್ಜಿತವಾಗಿದ್ದ ಇಂಥ ಕೋಟೆಗಳನ್ನು ಯುದ್ಧ ಕಾಲದಲ್ಲಿ ಬಳಸುತ್ತಿದ್ದರು. ರಾಜಧಾನಿ ಕನಕಗಿರಿಯ ಸುತ್ತಲೂ ಬಲಿಷ್ಠವಾದ ಕೋಟೆ ಇತ್ತು. ಹಂಪಸದುರ್ಗ ಮತ್ತು ಎಮ್ಮಿಗುಡ್ಡ ಕೋಟೆಗಳು ನಾಯಕರ ಸೇನಾಚಾತುರ್ಯಕ್ಕೆ ಸಾಕ್ಷಿಯಾಗಿವೆ. ನಿಜಾಮನ ಪರವಾಗಿ ಅಪಾರ ಸೈನ್ಯದೊಂದಿಗೆ ಬಂದಿದ್ದ ಸುರಪುರದ ಪಾಮನಾಯಕನು ಎಮ್ಮಿಗುಡ್ಡ ಕೋಟೆಯನ್ನು ಆಶ್ರಯಿಸಿದ್ದ ಕನಕಗಿರಿ ಹಿರೇನಾಯಕನನ್ನು ನೇರವಾಗಿ ಜಯಿಸಲಾಗಲಿಲ್ಲ. ಇದು ಎಮ್ಮಿಗುಡ್ಡ ಕೋಟೆಯ ಬಲಿಷ್ಠತೆಗೆ ಸಾಕ್ಷಿಯಾಗಿದೆ.

ಸಾಮಾಜಿಕ ಸ್ಥಿತಿ

ಸಮಾಜದಲ್ಲಿ ಹಿಂದೂ ಸಾಮಾಜಿಕ ವ್ಯವಸ್ಥೆಯನ್ವಯ ಬ್ರಾಹ್ಮಣ, ವೈಶ್ಯ, ಕ್ಷತ್ರಿಯ, ಶೂದ್ರರು, ವೀರಶೈವ, ನಾಯಕ ಬೇಡಜನಾಂಗ, ಕುರುಬ, ಗೊಲ್ಲ, ಅಕ್ಕಸಾಲಿಗ, ಬಡಿಗ, ಕಮ್ಮಾರ, ಕುಂಬಾರ ಮುಂತಾದ ಜನವರ್ಗಗಳಿದ್ದವು. ಬ್ರಾಹ್ಮಣರು ತಮ್ಮ ಷಟ್ಕರ್ಮಗಳ ನಾಯಕ ಜನಾಂಗದವೇ ಅರಸರಾಗಿದ್ದರಿಂದ ಆ ಜನಾಂಗಕ್ಕೆ ವಿಶೇಷ ಗೌರವವಿತ್ತು. ವೀರಶೈವರು ಉತ್ತಮ ಸ್ಥಾನಮಾನ ಹೊಂದಿದ್ದರು. ವೈರ್ಶಯರು ವ್ಯಾಪಾರ ವಹಿವಾಟು ನಡೆಸುತ್ತಿದ್ದರು. ತಿರುಪತಿ ವೆಂಕಟೇಶ್ವರನು ಅಸ್ಪೃಶ್ಯರಿಗಾಗಿಯೇ ಕನಕಗಿರಿಯಲ್ಲಿ ನೆಲಸಿದನೆಂಬ ನಂಬಿಕೆ ಇದ್ದರಿಂದ ಆ ದೇವಾಲಯದಲ್ಲಿ ಅಸ್ಪೃಶ್ಯರಿಗೆ ಪ್ರವೇಶವಿತ್ತು.

ಸಾಮಾನ್ಯವಾಗಿ ಅವಿಭಕ್ತ ಕುಟುಂಬ ಪದ್ಧತಿ ಅಸ್ತಿತ್ವದಲ್ಲಿತ್ತು. ಕುಟುಂಬದಲ್ಲಿ ಸ್ತ್ರೀಗೌರದ ಸ್ಥಾನಮಾನ ಹೊಂದಿದ್ದಳು. ವಿಶೇಷವಾಗಿ ಅರಮನೆಯ ಸ್ತ್ರೀಯರಿಗೆ ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಸ್ವಾತಂತ್ರ‍್ಯವಿತ್ತು. ಇಮ್ಮಡಿ ಉಡಚನಾಯಕನ ರಾಣಿಯರಾದ ಅಚ್ಚಮ್ಮ, ಚಿನ್ನಮ್ಮ, ಕನಕಮ್ಮನವರು ದೇವಾಲಯ, ಭಾವಿ, ಕೆರೆಗಳನ್ನು ನಿರ್ಮಿಸಿದ್ದಾರೆ. ರಾಣಿ ಕಾಟಮ್ಮಳು ಮೌನೇಶ್ವರ ಮಠವನ್ನು, ರಾಣಿ ಗೌರಮ್ಮನು ರಥಕಾಲವನ್ನು ನಿರ್ಮಿಸಿದ್ದಾರೆ. ರಾಜ್ಯದಲ್ಲಿ ದೇವದಾಸಿ ಪದ್ಧತಿ ರೂಡಿಯಲ್ಲಿತ್ತು. ಬಸವಿಯರು ಜಾತ್ರೆಯ ಸಂದರ್ಭದಲ್ಲಿ ನೃತ್ಯ ಸೇವೆಯನ್ನು ಸಲ್ಲಿಸುತ್ತಿದ್ದರು.

ನಾಯಕರ ಕಾಲದ ಉಡುಗೆ ತೊಡಗೆಗಳ ಬಗ್ಗೆ ತಿಳಿಯಲು ಅವರ ಕಾಲದ ಲೌಕಿಕ ಶಿಲ್ಪಪಟ್ಟಿಕೆಗಳು, ಅರಸರ ಪ್ರತಿಮೆಗಳು ಸಹಾಯಕವಾಗಿವೆ. ಸಮಾಜದಲ್ಲಿ ಅವರವರ ಸ್ಥಾನಮಾನಕ್ಕೆ ತಕ್ಕಂತೆ ವೇಷಭೂಷಣಗಳು ಬೇರೆ ಬೇರೆಯಾಗಿದ್ದವು. ಪುರುಷರು ತಲಗೆ ಪೆಟ, ಬಗಲ ಕಿಸೆ ಅಂಗಿ ಮತ್ತು ಧೋತಿಯನ್ನು ಉಡುತ್ತಿದ್ದರು. ಅರಸರು ಕೂಡ ತಲೆಗೆ ಮುಂಡಾಸು, ಉದ್ದವಾದ ನಿಲುವಂಗಿ ಧೋತಿಯನ್ನು ಧರಿಸಿ ಸೊಂಟಕ್ಕೆ ವಸ್ತ್ರ ಸುತ್ತಿಕೊಳ್ಳುತ್ತಿದ್ದರು. ಮತ್ತು ಕಿವಿಯಲ್ಲಿ ಪುಷ್ಪಕುಂಡಲ, ಬೆರಳಿಗೆ ಉಂಗುರಗಳನ್ನು, ಕೊರಳಲ್ಲಿ ಪದಕಹಾರ, ಮಣಿಸರ, ಕಾಲ್ಗಡಗಗಳನ್ನು ಧರಿಸುತ್ತಿದ್ದರು.

ಸ್ತ್ರೀಯರು ಕುಬಸ ಮತ್ತು ಸೀರೆಯನ್ನು ಉಡುತ್ತಿದ್ದರು. ರಾಜಮಾತಿ ತಲೆಗೆ ಮುಂಡಾಸು (ಪೇಟ)ವನ್ನು ಸುತ್ತಿಕೊಳ್ಳುತ್ತಿದ್ದರು. ರಾಣಿಯರು ಮತ್ತು ಇತರ ಸ್ತ್ರೀಯರು ತಮ್ಮ ಕೇಶವನ್ನು ಹಿಂದಕ್ಕೆ ಬಾಚಿ, ಬೈತಲೆ ತೆಗೆದು ವಿವಿಧ ಬಗೆಯ ತುರುಬುಗಳನ್ನು ಕಟ್ಟಿಕೊಳ್ಳುತ್ತಿದ್ದರು. ಕೊರಳಲ್ಲಿ ವಿವಿಧ ಬಗೆಯ ಸರಗಳು, ಕಿವಿಯೊಲೆ, ತೊಳ್ಬಂದಿ ಸೊಂಟಪಟ್ಟಿ, ಪಾದರಸ, ಉಂಗುರ ಮುಂತಾದ ಆಭರಣಗಳನ್ನು ಅಲಂಕಾರಕ್ಕಾಗಿ ಬಳಸುತ್ತಿದ್ದರು.

ಆರ್ಥಿಕ ಸ್ಥಿತಿ

ಕೃಷಿಯು ಬಹುಜನರ ಪ್ರಧಾನ ಉದ್ಯೋಗವಾಗಿತ್ತು. ಅರಸರು ರಾಜ್ಯದಲ್ಲೇಲ್ಲಾ ಕೆರೆ, ಭಾವಿಗಳನ್ನು ತೋಡಿಸಿ ಕೃಷಿ ನೀರಾವರಿಗೆ ಅನುಕೂಲ ಮಾಡಿಕೊಟ್ಟಿದ್ದರು. ಈಗಲೂ ಏತವ್ಯವಸ್ಥೆಯ ಅನೇಕ ಭಾವಿಗಳನ್ನು ಅಲ್ಲಲ್ಲಿ ಕಾಣಬಹುದು. ಜೋಳ, ನವಣೆ, ಸಜ್ಜೆ, ನೆಲಗಡಲೆ ಇತರ ದ್ವಿದಳ ಧಾನ್ಯಗಳು ಪ್ರಮುಖ ಬೆಳಗಳಾಗಿದ್ದವು.ಅತಿ ಹೆಚ್ಚಿಗೆ ಬೆಳೆ ಬೆಳೆದ ರೈತರನ್ನು ರಾಜಾಸ್ಥಾನಕ್ಕೆ ಕರೆಸಿ ತನ್ನ ಸಿಂಹಾಸನ ಪಕ್ಕದಲ್ಲಿ ಆಸನ ಹಾಕಿಸ ಕೂಡಿಸಿ ರಾಣಿ ಗೌರಮ್ಮ ಸತ್ಕರಿಸುತ್ತಿದ್ದಳು. ಭೂಕಂದಾಯವು ರಾಜ್ಯದ ಪ್ರಮುಖ ವರಮಾನವಾಗಿತ್ತು. ಸರಿಯಾಗಿ ಬೆಳೆಬಾರದ ಸಂದರ್ಭದಲ್ಲಿ ಕಡ್ಡಾಯವಾಗಿ ತೆರಿಗೆಯನ್ನು ವಸೂಲಿ ಮಾಡುತ್ತಿರಲಿಲ್ಲ.

ಧಾರ್ಮಿಕ ಸ್ಥಿತಿ

ರಾಜ್ಯದಲ್ಲಿ ಹಿಂದೂ ಧರ್ಮಿಯರೇ ಬಹುಸಂಖ್ಯೆಯಲ್ಲಿದ್ದರು. ವೈಷ್ಣವ, ಶೈವ, ಮತೀಯರು ಪ್ರಧಾನವಾಗಿದ್ದರು. ವೈಷ್ಣವ ಮತವು ತುಂಬಾ ಜನಪ್ರಿಯವಾಗಿತ್ತು. ಅರಸರು ಸ್ವತಃ ವಿಷ್ಣುವಿನ ಪರಮಭಕ್ತರಾಗಿದ್ದರು. ಪ್ರಾಯಶಃ ಇದೇ ಸಂದರ್ಭದಲ್ಲಿ ವಿಜಯನಗರದ ತುಳು ವಂಶದವರು ವಿಶೇಷವಾಗಿ ವೈಷ್ಣವ ಧರ್ಮವನ್ನು ಅನುಸರಿಸಿ ಪ್ರೋತ್ಸಾಹ ನೀಡಿದ್ದು, ನಾಯಕರ ಮೇಲೂ ಪ್ರಭಾವ ಬೀರಿರಬೇಕು. ಅಲ್ಲದೇ ಕನಕಗಿರಿ ಪ್ರದೇಶದ ಪ್ರಧಾನ ದೇವಾಲಯ ವೈಷ್ಣವ ಸಂಪ್ರದಾಯದ ಶ್ರೀ ಕನಕಾಚಲ ಲಕ್ಷ್ಮೀನರಸಿಂಹ ದೇವಾಲಯ ತಿರುಪತಿ ವೆಂಕಟೇಶ್ವರನೇ ಇಲ್ಲಿ ಕನಕಗಿರಿನಾಥನಾಗಿ ನೆಲೆಗೊಂಡನೆಂದು ಸ್ಥಳೀಯ ನಂಬಿಕೆ. ವಿಷ್ಣು ಸರ್ವೋತ್ತಮತೆಯನ್ನು ಹೇಳುವ ಶಾಸನವೊಂದನ್ನು ಇಮ್ಮಡಿ ಉಡಚನಾಯಕ ಕನಕಾಚಲಪತಿ ದೇವಾಲಯದಲ್ಲಿ ನಿರ್ಮಿಸಿದ್ದಾನೆ. ಇದರಿಂದ ನಾಯಕರು ವಿಷ್ಣುವಿನ ಶ್ರೇಷ್ಠ ಭಕ್ತರಾಗಿದ್ದರೆಂದು ತಿಳಿಯುತ್ತದೆ. ರಾಜ್ಯದಲ್ಲಿ ವೈಷ್ಣವ ಸಂಪ್ರದಾಯದ ಕೇಶವ, ರಂಗನಾಥ, ಅನಂತಶಯನ, ಅಷ್ಟಮಹಿಷಿ ಕೃಷ್ಣ ಮುಂತಾದ ದೇವಾಲಯಗಳನ್ನು ನಿರ್ಮಿಸಿರುವರು.

ಶೈವರು, ವೀರಶೈವರು ಅಧಿಕ ಸಂಖ್ಯೆಯಲ್ಲಿದ್ದರು. ಅರಸರು ವೈಷ್ಣವ ಮತಾನುಯಾಯಿಗಳಾಗಿದ್ದರು ಕೂಡ ಶೈವ ಮತವನ್ನು ಸಮಾನ ದೃಷ್ಟಿಯಿಂದ ಕಾಣುತ್ತಿದ್ದರು. ಶಂಕರಲಿಂಗ ಮತ್ತು ಅಷ್ಟಮಹಿಷಿಕೃಷ್ಣ ದೇವಾಲಯಗಳನ್ನು ಪರಸ್ಪರ ಹೊಂದಿಕೊಂಡಂತೆ ನಿರ್ಮಿಸಿರುವುದನ್ನು ಕಾಣಬಹುದು. ರಾಜ್ಯದಲ್ಲಿ ಪಂಪಾಪತಿ, ವೀರಭದ್ರ, ಮಲ್ಲಿಕಾರ್ಜುನ, ನಗರೇಶ್ವರ ಮುಂತಾದ ಶೈವ ದೇವಾಲಯಗಳನ್ನು ನಿರ್ಮಿಸಿದ್ದಾರೆ.

ವಿಷ್ಣು, ಶಿವನ ಆರಾಧನೆಯ ಜೊತೆಗೆ ಆಂಜನೇಯ ಮತ್ತು ಶಕ್ತಿದೇವತೆಗಳ ಆರಾಧನೆಯು ಜನಪ್ರಿಯವಾಗಿತ್ತೆಂದು ತೋರುತ್ತದೆ. ರಾಜ್ಯದಲ್ಲಿ ಸಂಜೀವಮೂರ್ತಿ, ತೊಂಡೆತೆವರಪ್ಪ, ತೇರಿನಹನುಮಪ್ಪ, ಭೋಗಾಪುರೇಶ ಇತ್ಯಾದಿ ಹೆಸರಿನ ಅನೇಕ ಆಂಜನೇಯ ದೇವಾಲಯಗಳಿವೆ. ಮತ್ತು ಲಕ್ಷ್ಮೀ, ಗಜಲಕ್ಷ್ಮೀ, ಮಹಿಷಾಸುರ ಮರ್ದನಿ, ರೇಣುಕಾ ಎಲ್ಲಮ್ಮ, ದುರ್ಗೆ, ಕಾಳಿಕಾದೇವಿ ಮುಂತಾದ ಅನೇಕ ಶಕ್ತಿ ದೇವತೆಯ ದೇವಾಲಯಗಳಿವೆ.

ಅರಸರು ಸಾಧು – ಸಂತರಲ್ಲಿ ಗೌರವ ಭಕ್ತಿಯನ್ನು ಹೊಂದಿದರು. ಇಮ್ಮಡಿ ಕನಕಪ್ಪ ಗ್ರಾಮಗಳನ್ನು ದಾನ ನೀಡಿದ್ದರು. ಮತ್ತು ಚಿದಾನಂದಾವಧೂತರನ್ನು ರಾಜಧಾನಿಗೆ ಕರೆಸಿಕೊಂಡು ಅವರು ಅಲ್ಲಿಯೇ ನೆಲಸುವಂತೆ ಸಕಲ ಸೌಕರ್ಯಗಳನ್ನು ಮಾಡಿಕೊಟ್ಟರು. ರಾಣಿ ಕಾಟಮ್ಮಳು ತಿಂಥಣಿ ಮೊನಪ್ಪಯ್ಯನವರನ್ನು ಆಧರಿಸಿ ಮಠವನ್ನು ಕಟ್ಟಿಸಿಕೊಟ್ಟಳು. ನಾಯಕರು ಸಾರ್ವಜನಿಕ ಭಾವಿ, ಕೊಳಗಳಲ್ಲಿ ಸಹ ಶಿವ, ವಿಷ್ಣುವಿನ ಪ್ರತಿಮೆಗಳನ್ನು ಸ್ಥಾಪಿಸಿ ಧರ್ಮಸಮನ್ವಯತೆಯನ್ನು ಸಾಧಿಸಿದ್ದರು. ವೆಂಕಟಪತಿ ಕೊಳ, ಅಚ್ಚಮ್ಮ ಭಾವಿಗಳಲ್ಲಿ ಶಿವ, ಅನಂತಶಯನ ಹಾಗೂ ಬ್ರಹ್ಮದೇವರ ದೇವತಾಗೃಹಗಳನ್ನು ಕಾಣಬಹುದು. ಹೀಗಾಗಿ ಸಮಾಜದಲ್ಲಿ ಮತಸಂಘರ್ಷವಿರದೆ ಸಾಮರಸ್ಯವಿತ್ತು.

ಸಾಹಿತ್ಯ

ನಾಯಕರು ಸಾಹಿತ್ಯ ಪ್ರೇಮಿಗಳಾಗಿದ್ದರು. ವಿಶೇಷವಾಗಿ ಹಿರೇರಂಗಪ್ಪನಾಯಕನ ಕಾಲವು ಸಾಹಿತ್ಯದ ಬೆಳವಣಿಗೆಯ ಕಾಲವಾಗಿದೆ. ಇತನ ಆಸ್ಥಾನದಲ್ಲಿ ಚಿದಾನಂದಾವಧೂತರು, ಜಯವೆಂಕಟಾಚಾರ್ಯರು. ಕವಿ ಶಿರಗುಪ್ಪಿ ಸದಾಶಿವಯ್ಯ ಮುಂತಾದವರಿದ್ದರು. ಯತಿಗಳಾದ ಚಿದಾನಂದಾವಧೂತರು ಚಿದಾನಂದ ವಚನ, ಚಿದಾನಂದ ಕೀರ್ತಿನೆ, ಕಾಮವಿಡಂಬನೆ, ದೇವಿ ಪುರಾಣ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಇವರ ದೇವಿ ಪುರಾಣ ನಾಡಿನಲ್ಲೆಡೆ ಜನಪ್ರಿಯವಾಗಿದ್ದು. ದಸರೆಯ ಸಂದರ್ಭದಲ್ಲಿ (ನವರಾತ್ರಿ) ಮನೆಮನೆಯಲ್ಲಿ ಪಠಣವಾಗುತ್ತದೆ.

ಕನಕಗಿರಿಯವರೇ ಆದ ಜಯವೆಂಕಟಾಚಾರ್ಯರು ಸಂಸ್ಕೃತ, ಕನ್ನಡದಲ್ಲಿ ಉತ್ತಮ ಪಂಡಿತರಾಗಿದ್ದರು. ಇವರು ಕನ್ನಡದಲ್ಲಿ ವಿರಳವಾಗಿರುವ ಭಟ್ಟಂಗಿಗಳನ್ನು ಮತ್ತು ದಂಡಕಗಳನ್ನು ರಚಿಸಿದ್ದಾರೆ. ಇವರ ೨೭ ಭಟ್ಟಂಗಿಗಳು ಲಭ್ಯವಿದ್ದು ಅವುಗಳಲ್ಲಿ ಅವರ ಜೀವನ ವೃತ್ತಾಂತದ ಕೆಲವು ಸಂಗತಿಗಳು, ಕನಕಗಿರಿನಾಯಕರ ಕುರಿತ ಕೆಲವು ವಿಚಾರಗಳು ತಿಳಿಯುತ್ತವೆ. ಹನುಮಾವತಾರ, ಭೀಮಾವತಾರ ಮತ್ತು ಮಧ್ವಾವತಾರಗಳನ್ನು ವಿವರಿಸುವ ಒಂದು ದಂಡಕ ದೊರೆತಿವೆ.

ಕುಲಗೋಡು ಅಥವಾ ಅಪರಾಳ ತಮ್ಮಣ್ಣನು ಅರ್ಧಕ್ಕೆ ನಿಲ್ಲಿಸಿದ ನಾಡಿನ ಜನಪ್ರಿಯ ನಾಟಕ ಶ್ರೀಕೃಷ್ಣಪಾರಿಜಾತವನ್ನು ಪೂರ್ತಿಗೊಳಿಸಿದ ಕೀರ್ತಿ ಕವಿ ಶಿರಗುಪ್ಪಿ (ಹುರುಳಿಕೊಪ್ಪ) ಸದಾಶಿವಯ್ಯನಿಗೆ ಸಲ್ಲುತ್ತದೆ. ತನ್ನ ಜೀವಕ್ಕೆ ಬೆದರಿಕೆ ಬಂದಿದ್ದರಿಂದ ಕೇವಲ ಹತ್ತು ಅಂಕಗಳನ್ನು ಬರೆದು ನಿಲ್ಲಿಸಿದ್ದ ಅಪರಾಳ ತಮ್ಮಣ್ಣನ ಈ ನಾಟಕವನ್ನು ಪೂರ್ತಿಗೊಳಿಸುವಂತೆ ಹಿರೇರಂಗಪ್ಪ ನಾಯಕನು ಸೂಚಿಸಲು ಸದಾಶಿವಯ್ಯ ಆ ಕಾರ್ಯಗೈದನು. ಹೀಗೆ ನಾಡಿನ ಸಾಹಿತ್ಯಲೋಕಕ್ಕೆ ಕೆಲವು ಮಹತ್ವದ ಕೃತಿಗಳನ್ನು ನೀಡಿದ ಕನಕಗಿರಿ ನಾಯಕರಿಗೆ ಸಲ್ಲುತ್ತದೆ.

ಕಲೆ, ವಾಸ್ತು, ಶಿಲ್ಪಗಳಿಗೆ ಕನಕಗಿರಿ ನಾಯಕರು ಕಲಾಪ್ರೇಮಿಗಳಾಗಿದ್ದರು. ತಮ್ಮ ಸಾರ್ವಭೌಮ ದೊರೆಗಳಾದ ವಿಜಯನಗರದ ಅರಸರಿಂದ ಪ್ರೇರಣೆಗೊಂಡ ನಾಯಕರು ರಾಜಧಾನಿ ಕನಕಗಿರಿ ಮತ್ತು ರಾಜ್ಯದ ಹನುಮನಾಳ, ಬಸರಿಹಾಳ, ಕರಡಿಗುಡ್ಡ, ನವಲಿ, ವೆಂಕಟಗಿರಿ, ಎಮ್ಮಿಗುಡ್ಡ, ಹಂಪನದುರ್ಗ ಮುಂತಾದೆಡೆಗಳಲ್ಲಿ ದೇವಾಲಯ, ಮಂಟಪ, ಪ್ರತಿಮಾಮಂದಿರ, ಭಾವಿ, ಪುಷ್ಕರಣಿ, ಕೋಟೆ ಮುಂತಾದ ಕಟ್ಟಡಗಳನ್ನು ಅಧಿಕ ಸಂಖ್ಯೆಯಲ್ಲಿ ನಿರ್ಮಿಸಿದ್ದಾರೆ. ವಿಶೇಷವಾಗಿ ರಾಜಧಾನಿ ವೈವಿಧ್ಯಮಯವಾದ ಕಲಾಸ್ಮಾರಕಗಳನ್ನು ಅಪಾರಸಂಖ್ಯೆಯಲ್ಲಿ ನಿರ್ಮಿಸಿ ಅದನ್ನು ಪ್ರಾದೇಶಿಕ ಕಲಾಕೇಂದ್ರವನ್ನಾಗಿರಸಿದ್ದಾರೆ. ಹಾಗಾಗಿಯೇ ಈ ಭಾಗದಲ್ಲಿ “ಕಾಲಿದ್ದವರು ಹಂಪಿ ನೋಡಬೇಕು, ಕಣ್ಣಿದ್ದವರು ಕನಕಗಿರಿ ನೋಡಬೇಕು” ಎನ್ನುವ ಜನವಾಣಿ ಹುಟ್ಟಿಕೊಂಡಿರುವುದು. ಇದು ಕನಕಗಿರಿಯ ಪ್ರೇಕ್ಷಣೀಯತೆಯನ್ನು ಸೂಚಿಸುತ್ತದೆ.

ವಿಜಯನಗರ ವಾಸ್ತುಶೈಲಿಯನ್ನು ಅನುಸರಿದ ನಾಯಕರು ಹಂಪೆಯ ದೇವಾಲಯಗಳಿಗೆ ಸರಿಸಮಾನವಾಗಿ ಕನಕಗಿರಿಯಲ್ಲಿ ಕನಕಾಚಲ ಲಕ್ಷ್ಮೀನರಸಿಂಹ ದೇವಾಲಯವನ್ನು ನಿರ್ಮಿಸಿದ್ದಾರೆ. ವಾಸ್ತುವೈಭವ ಮತ್ತು ಬೃಹತ್ ಗಾತ್ರದಿಂದ ಈ ದೇವಾಲಯ ಗಮನ ಸೆಳೆಯುತ್ತದೆ. ಇದು ವಾಸ್ತು ಕಲೆಯ ಜೊತೆಗೆ ಶಿಲ್ಪಕಲೆ, ವರ್ಣಚಿತ್ರಕಲೆಯ ಆಗರವಾಗಿದ್ದು. ನಾಡಿನ ಪ್ರಮುಖ ಸ್ಮಾರಕಗಳಲ್ಲಿ ಒಂದೆನಿಸಿದೆ. ಜೊತೆಗೆ ಅನೇಕ ಶೈವ, ವೈಷ್ಣವ, ಶಾಕ್ತ ಮತ್ತು ಆಂಜನೇಯರ ಸುಮಾರು ೩೦ಕ್ಕೂ ಅಧಿಕ ದೇವಾಲಯಗಳು ಕನಕಗಿರಿ ಪ್ರದೇಶದಲ್ಲಿವೆ.

ಲೌಕಿಕ ಕಟ್ಟಡಗಳಲ್ಲಿ ವೆಂಕಟಪತಿಭಾವಿ, ಅಚ್ಚಮ್ಮಭಾವಿ, ವೆಂಕಟಪತಿಗುಡಿ (ಪ್ರತಿಮಾಮಂದಿರ) ಚಿಕ್ಕಕನಕಪ್ಪನ (ಪ್ರತಿಮಾ) ಗುಡಿ ವಾಸ್ತುದೃಷ್ಟಿಯಿಂದ ಗಮನಾರ್ಹವಾದ ನಿರ್ಮಿತಿಗಳಾಗಿವೆ. ನರಸಿಂಹ ತೀರ್ಥ, ರಂಗನಾಥ ತೀರ್ಥ (ಪುಷ್ಕರಣಿಗಳು) ಬೃಹತ್ ಪ್ರಮಾಣದಿಂದ ಗಮನ ಸೆಳೆಯುತ್ತವೆ.

ಮೂರ್ತಿಶಿಲ್ಪಗಳು ಅಧಿಕ ಸಂಖ್ಯೆಯಲ್ಲಿವೆ. ಶಿಷ್ಠ ಮತ್ತು ಜಾನಪದ ಶೈಲಿಯ ನೂರಾರು ದೇವತೆಗಳ ಮತ್ತು ಅರಸರ ಪ್ರತಿಮಾಶಿಲ್ಪಗಳು ಇಲ್ಲಿಯ ವಿಶೇಷ. ಅರಸರ ಜೀವನ ಘಟನಾವಳಿಗಳನ್ನು ಬಿಂಬಿಸುವ ದೃಶ್ಯಪಟ್ಟಿಕೆಗಳು ನಾಯಕರ ಅಪರೂಪದ ಕೊಡುಗೆ ಎಂದೆ ಹೇಳಬಹುದು. ಲಕ್ಷ್ಮೀನರಸಿಂಹ ದೇವಾಲಯದಲ್ಲಿರುವ ವರ್ಣಚಿತ್ರಕಲೆಯಿಂದ ವಿಜಯನಗರ ಚಿತ್ರಕಲೆಯ ಅಧ್ಯಯನಕ್ಕೆ ಸಹಾಯಕವಾಗುವುದು.

ಸಮಾರೋಪ

ಕನಕಗಿರಿಯ ಗುಜ್ಜಲ ವಂಶದ ನಾಯಕರು ವಿಜಯನಗರ ಸ್ಥಾಪನೆಯ ಒಂದು ಶತಮಾನದ ತರುವಾಯ ರಾಜ್ಯ ಸ್ಥಾಪಿಸಿ, ವಿಜಯನಗರದ ರಾಜಾಸ್ಥಾನದಲ್ಲಿ ಬಲಪಾರ್ಶ್ವದ ಮರ್ಯಾದೆಗಳನ್ನು ಹೊಂದಿ ತಮ್ಮ ರಾಜಕೀಯ ಪ್ರಾಮುಖ್ಯತೆಯನ್ನು ಬಿಂಬಿಸಿದರು. ವಿಜಯನಗರಕ್ಕೆ ನಿಷ್ಠರಾಗಿ ಅದರ ಜೊತಗೇನೆ ಸಾಗಿ ಮುನ್ನಡೆದರು. ಕ್ರಿ.ಶ. ೧೫೬೫ರಲ್ಲಿ ವಿಜಯನಗರ ಪತನಗೊಂಡಾಗ್ಯೂ ಕನಕಗಿರಿ ನಾಯಕರು ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡದ್ದು ವಿಶೇಷ. ಅದರಲ್ಲೂ ಭೌಗೋಳಿಕವಾಗಿ ವಿಜಯನಗರ ಮಹಮದ್ ಆದಿಲ್‌ಷಾಯಿ ರಾಜ್ಯಗಳ ನಡುವಿನ ಕೃಷ್ಣ – ತುಂಗಭದ್ರಾ ನದಿಗಳ ‘ದೋಆಬ್’ ಪ್ರದೇಶದಲ್ಲಿಯ ಅಪಾಯಕರ ನೆಲೆಯಲ್ಲಿದ್ದಾಗ್ಯೂ ಸುಮಾರು ಐದು ಶತಮಾನಗಳ ಕಾಲ ಉಳಿದು ಬಂದದ್ದು ಕನಕಗಿರಿ ನಾಯಕರ ರಾಜಕೀಯ ಮತ್ತು ಸೈನಿಕ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಇಮ್ಮಡಿ ಉಡಚನಾಯಕ, ಹಿರೇನಾಯಕರು ಬಿಜಾಪುರದ, ಹೈದರಾಬಾದ್ ನಿಜಾಮನ ಸೈನ್ಯವನ್ನೇ ಹಿಮ್ಮೆಟ್ಟಿಸಿದ ಸಂಗತಿಗಳು ಕರ್ನಾಟಕದ ಚರಿತ್ರೆಯಲ್ಲಿ ಬೆರಗುಗೊಳಿಸುವ ಸಂಗತಿಗಳೇ ಸರಿ.

ಸಾಂಸ್ಕೃತಿಕವಾಗಿಯೂ ನಾಯಕರ ಪಾತ್ರ ಸ್ಮರಣೀಯವಾಗಿದೆ. ಕಲೆ ವಾಸ್ತು ಶಿಲ್ಪ, ಚಿತ್ರಕಲೆ, ಸಾಹಿತ್ಯ, ಸಂಸ್ಕೃತಿ ಧರ್ಮಸಮನ್ವಯ ಸಂಗತಿಗಳು ಕನಕಗಿರಿ ರಾಜ್ಯವನ್ನು ಆದರ್ಶದ ನೆಲೆಯನ್ನಾಗಿಸಿದ್ದವೆಂದೇ ಹೇಳಬಹುದು. ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಕರ್ನಾಟಕದ ಚರಿತ್ರೆಯಲ್ಲಿ ಕನಕಗಿರಿನಾಯಕರ ಪಾತ್ರ ಸ್ಮರಣೀಯವೆಂದೇ ಹೇಳಬಹುದು.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

[1] ಅದೇ ಪುಟ. ೭೨ – ೭೩

[2] ಶರಣಬಸಪ್ಪ ಕೋಲ್ಕಾರ ೧೯೯೬ ಮತ್ತು ೧೯೯೭, ಪೂರ್ವೋಕ್ತ

[3] ಶರಣಬಸಪ್ಪ ಕೋಲ್ಕಾರ ೧೯೯೬ ಮತ್ತು ೧೯೯೭, ಪೂರ್ವೋಕ್ತ

[4] ಶರಣಬಸಪ್ಪ ಕೋಲ್ಕಾರ ೧೯೯೬ ಮತ್ತು ೧೯೯೭, ಪೂರ್ವೋಕ್ತ

[5] ಶರಣಬಸಪ್ಪ ಕೋಲ್ಕಾರ ೧೯೯೬ ಮತ್ತು ೧೯೯೭, ಪೂರ್ವೋಕ್ತ

[6] ಶರಣಬಸಪ್ಪ ಕೋಲ್ಕಾರ ೧೯೯೬ ಮತ್ತು ೧೯೯೭, ಪೂರ್ವೋಕ್ತ

[7] ಶ್ರೀಮಜ್ಜಗದ್ಗುರು ಶ್ರೀ ಕೂಡ್ಲೀ ಶೃಂಗೇರಿ ಸಂಸ್ಥಾನದ ಪ್ರಾಚೀನ ಲೇಖನ ಸಂಗ್ರಹ. (ಭಾಗ – ೧) ೧೯೬೫, ಕೂಡಲಿ ಕ್ಷೇತ್ರ

[8] ಶ್ರೀಮಜ್ಜಗದ್ಗುರು ಶ್ರೀ ಕೂಡ್ಲೀ ಶೃಂಗೇರಿ ಸಂಸ್ಥಾನದ ಪ್ರಾಚೀನ ಲೇಖನ ಸಂಗ್ರಹ. (ಭಾಗ – ೧) ೧೯೬೫, ಕೂಡಲಿ ಕ್ಷೇತ್ರ

[9] ಶ್ರೀಮಜ್ಜಗದ್ಗುರು ಶ್ರೀ ಕೂಡ್ಲೀ ಶೃಂಗೇರಿ ಸಂಸ್ಥಾನದ ಪ್ರಾಚೀನ ಲೇಖನ ಸಂಗ್ರಹ. (ಭಾಗ – ೧) ೧೯೬೫, ಕೂಡಲಿ ಕ್ಷೇತ್ರ

[10] ಕಪಟರಾಳ್ ಕೃಷ್ಣರಾವ್, ಮತ್ತು ಇಟ್ಟಣ್ಣನವರ್ ಆರ್.ಬಿ. ಪೂರ್ವೋಕ್ತ

[11] ಇಟ್ಟಣ್ಣನವರ, ಆರ್.ಬಿ.ಪೂರ್ವೋಕ್ತ

[12] ಶ್ರೀ. ಕೂ.ಶೃಂ. ಪ್ರಾ.ಲೇ. ಸಂ. ಪೂರ್ವೋಕ್ತ.

[13] ಇಟ್ಟಣ್ಣನವರ ಆರ್.ಬಿ. ಪೂವೋಕ್ತ ಪುಟ. ೪೬

[14] ಈ ರಾಜಾರಂಗಪ್ಪ ನಾಯಕರು ಸದ್ಯ ಹುಲಿಹೈದರ್ ಗ್ರಾಮದಲ್ಲಿ ಇದ್ದಾರೆ. ವಯಸ್ಸು ಸು.೮೦

[15] ರಾಣಿ ಗೌರಮ್ಮನವರು ೧೯೫೩ರಲ್ಲಿ ಹೈದ್ರಾಬಾದಿನಲ್ಲೇ ನಿಧನಳಾದಳು.