ಪ್ರವೇಶಿಕೆ

ವಿಜಯನಗರ ಸಾಮ್ರಾಜ್ಯ ಪತನವಾದ ನಂತರ ಕರ್ನಾಟಕದಲ್ಲಿ ಒಂದು ಕೇಂದ್ರ ಸರಕಾರವಿಲ್ಲದೆ ಭಾರತೀಯರ ಧರ್ಮ, ಭಾಷೆ ಮತ್ತು ಸಂಸ್ಕೃತಿಗಳು ನಾಶವಾಗುತ್ತಿರುವ ಕಠಿಣ ಪರಿಸ್ಥಿತಿಯಲ್ಲಿ ಅವುಗಳನ್ನು ರಕ್ಷಿಸಲೆಂದೇ ಅನೇಕ ಸಣ್ಣಪುಟ್ಟ ದೇಸಗತಿ, ನಾಡಗೌಡಕಿ ಮೊದಲಾದ ದೇಶಿಯ ಸಂಸ್ಥಾನಗಳು ಹುಟ್ಟಿಕೊಂಡವು. ಈ ಸಂಸ್ಥಾನಗಳು ಬಿಜಾಪುರದ ಆದಿಲ್‌ಶಾಹಿ, ಹೈದರಾಬಾದಿನ ನಿಜಾಮ್ ಮತ್ತು ಬ್ರಿಟೀಷರ ಅಂಕಿತದಲ್ಲಿದ್ದು ಕೊಂಡು ಹಿಂದೂ ಧರ್ಮ – ಸಾಹಿತ್ಯ – ಸಂಸ್ಕೃತಿಗಳನ್ನು ಕಾಪಾಡಿಕೊಂಡುಬಂದವು. ಕನ್ನಡ ಭಾಷೆ, ಸಂಸ್ಕೃತಿಗಳೂ ಇವರ ಆಶ್ರಯದಲ್ಲಿ ಬೆಳೆದು ಪ್ರಬುದ್ಧಮಾನಕ್ಕೆ ಬಂದವು. ದೇಸಗತಿಯ ದರ್ಬಾರ್‌ದೌಲತ್ತು – ಯುದ್ಧ – ವಿಲಾಸಗಳ ಪರಿಭ್ರಮಣದಲ್ಲಿ ಜೀವನದಲ್ಲಿಯೂ ಸಂಸ್ಥಾನಗಳು ನಾಡಿನ ಸಂಸ್ಕೃತಿಯನ್ನು ಪೋಷಿಸಿಕೊಂಡು ಬರುವಲ್ಲಿ ಬಹುಮುಖ್ಯಪಾತ್ರವನ್ನು ವಹಿಸಿರುವವು.

ಸಂಸ್ಥಾನದ ಕೆಲವು ರಾಜರು ಪ್ರಜಾರಂಜಕರಾಗಿ ಪ್ರಜೆಗಳ ಪ್ರೀತಿಗೆ ಪಾತ್ರರಾದರೆ, ಇನ್ನೂ ಕೆಲವರು ಪ್ರಜಾಪೀಡಕರಾಗಿ ಪ್ರಜೆಗಳಿಂದ ಪ್ರತಿಭಟನೆ, ಬಂಡಾಯಗಳಂಥ ವಿರೋಧವನ್ನು ಅನುಭವಿಸಿದರು. ಸಂಸ್ಥಾನದ ರಾಜರಜ ಪತ್ನಿಯರ ನಡವಳಿಕೆಗಳು ಪತಿಗಳ ಜೀವನ ಶೈಲಿಗಿಂತ ಭಿನ್ನವಾಗಿರುತ್ತಿರಲಿಲ್ಲ. ಅಧಿಕಾರದ ದರ್ಪ, ಭೋಗವಿಲಾಸದ ಸುಖ, ಸಂಪ್ತಿನ ವೈಭವದ ಮೋಜಗಳನ್ನು ರಾಣಿಯರೂ ಅನುಭವಿಸುತ್ತಿದ್ದರು. ಸಾಮಾನ್ಯವಾಗಿ ಸಂಸ್ಥಾನದ ದೇಸಾಯಿಗಳು ಒಬ್ಬರಿಗಿಂತ ಹೆಚ್ಚು ಪತ್ನಿಯರನ್ನು ಹೊಂದಿರುತ್ತಿದ್ದರು. ತಮ್ಮ ರಾಣಿಯರು ಸುಖವಾಗಿರಲೆಂದು ಅವರು ರಾಣಿಯರಿಗೆ ಅಂತಃಪುರದಲ್ಲಿ ಸಕಲ ಸೌಕರ್ಯಗಳನ್ನು ಒದಗಿಸುತ್ತಿದ್ದರು. ಹತ್ತು ವರ್ಷದ ಬಾಲಕರನ್ನು ಬಿಟ್ಟರೆ ಮತ್ತಾರು ರಾಣಿಯರನ್ನು ನೋಡುವುದಕ್ಕೆ ಅವಕಾಶವಿರುತ್ತಿರಲಿಲ್ಲ. ರಾಣಿವಾಸದಲ್ಲಿಯೂ ಅವರ ಪೋಷಾಪದ್ಧತಿಯಲ್ಲಿರುತ್ತಿದ್ದರು.

ರಾಣಿಯರು ತಮ್ಮ ಪತಿಗಳ ಮೇಲೆ ವಿಶಿಷ್ಟ ಪ್ರಭಾವವನ್ನು ಬೀರಿ, ರಾಜ್ಯಾಡಳಿತದಲ್ಲಿ ಪತಿಗಿಂತ ತಮ್ಮ ಅಧಿಕಾರವನ್ನು ಉಪಯೋಗಿಸಿ ದರ್ಪಿಷ್ಠರಾಗಿ ಮೆರೆದವರಿದ್ದಾರೆ. ಕೆಲವರು ಆಡಳಿತ ಸೂತ್ರವನ್ನು ತಾವು ವಹಿಸಿ, ರಾಜ್ಯದ ಆಡಳಿತದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಇದಕ್ಕೆ ಭಿನ್ನವಾಗಿ ಕೆಲವು ರಾಣಿಯರು ಅಧಿಕಾರದ ಬದುಕಿಗೆ ವಿಮುಖರಾಗಿ, ಸಮಾಜಮುಖಿಗಳಾಗಿ ಜೀವನವನ್ನು ಸವಿಸಿ ಧರ್ಮ, ಸಾಹಿತ್ಯ, ಸಂಸ್ಕೃತಿಗಳ ಬಲವರ್ಧನೆಗಾಗಿ ಪರಿಶ್ರಮಿಸಿದ ಧರ್ಮಿಷ್ಠ ರಾಣಿಯರೂ ಇದ್ದಾರೆ. ಗುರುಗಳಿಂದ ದೀಕ್ಷೆಪಡೆದು ಯಾವಜ್ಜೀವನ ಸದಾ ದಾಸೋಹ, ವಿದ್ಯಾಭಿವೃದ್ಧಿ, ಜನಪರ ಕಲ್ಯಾಣಕಾರ್ಯಗಳಲ್ಲಿ ಅರ್ಪಿಸಿಕೊಂಡು ಸಾತ್ವಿಕ ಜೀವನಗೈದ ರಾಣಿಯರೂ ಆಗಿಹೋಗಿ ನಾಡಿಗೆ ಆದರ್ಶಪ್ರಾಯರಾಗಿದ್ದಾರೆ. ಹೀಗೆ ಕನ್ನಡ ನಾಡಿನಲ್ಲಿ ಹುಟ್ಟಿಕೊಂಡು ಪ್ರವರ್ಧನಮಾನವಾದ ದೇಸಗತಿ ಮೆತನಗಳು ನಮ್ಮ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಳ ಜೋಪಾಸನರಾಗಿ ವಹಿಸಿದ ಕಾರ್ಯ ಅನನ್ಯ.

ರಾಯಚೂರು ಜಿಲ್ಲೆಯಲ್ಲಿ ಅನೇಕ, ದೇಸಗತಿ, ನಾಡಗೌಡಕಿ ಮನೆತನಗಳು ತಮ್ಮ ಪರಾಕ್ರಮ, ಪೌರುಷಗಳಿಗೆ ಹಾಗೂ ಸಂಸ್ಕೃತಿಯ ಸಂವರ್ಧನೆಗೆ ಪ್ರಸಿದ್ಧವಾಗಿವೆ. ಅವುಗಳಲ್ಲಿ ವೀರಶೈವ ದೇಸಾಯಿ ನಾಡಗೌಡಕಿ ಮನೆತನಗಳು ತಮ್ಮ ಆಡಳಿತ ಅಧಿಕಾರ ನಡೆಸುವುದರೊಂದಿಗೆ ವೀರಶೈವ ಧರ್ಮ, ಸಾಹಿತ್ಯ, ಸಂಸ್ಕೃತಿ ಮತ್ತು ಶಿಕ್ಷಣದ ಪ್ರಸಾರಗಳಿಗಾಗಿ ಅವು ಅನುಪಮ ಕೊಡುಗೆಯನ್ನು ನೀಡಿವೆ. ಅವುಗಳಲ್ಲಿ ಗೆಜ್ಜಲಗಟ್ಟಿ ದೇಸಾಯಿ ಮನೆತನ ಗೈದಕಾರ್ಯ ಅಪರೂಪದ ಮತ್ತು ಮಾದರಿಯವಾಗಿದೆ.

ಗೆಜ್ಜಲಗಟ್ಟಿ ದೇಸಾಯಿಗಳ ಊರು ಲಿಂಗಸೂಗೂರು ತಾಲೂಕಿನಲ್ಲಿದೆ. ಈ ಸ್ಥಳ ಲಿಂಗಸೂಗೂರಿನಿಂದ ಆಗ್ನೇಯಕ್ಕೆ ೩೦. ಕಿ.ಮೀ. ಮತ್ತು ರಾಯಚೂರಿನಿಂದ ನೈರೂತ್ಯ ದಿಕ್ಕಿಗೆ ೪೫ ಕಿ.ಮೀ. ದೂರದಲ್ಲಿದೆ. ಬಂಗಾರದ ಹಟ್ಟಿಗೆ ಸನಿಹದಲ್ಲಿರುವ ಗೆಜ್ಜಲಗಟ್ಟಿ ಹಿಂದಿನ ದೇಸಾಯಿಗಳ ರಾಜವಾಡಿ, ದೇವಾಲಯಗಳು, ಪಾಠಶಾಲೆ, ಮಠ, ಮಂದಿರ, ವ್ಯಾಯಾಮ ಶಾಲೆಗಳ ಪಳೆಯುಳಕೆಗಳನ್ನು ನೋಡಬಹುದು. ಈಗಿನ ದೇಸಾಯಿಗಳು ತಮ್ಮ ದೇಸಗತಿಯ ಪೂರ್ವದವರು ನಿರ್ಮಿಸಿದ ಇಮಾರತಿಗಳನ್ನು ಸುಸ್ಥಿತಿಯಲ್ಲಿರಲು ಪ್ರಯತ್ನಿಸುತ್ತಿದ್ದಾರೆ. ದೇಸಗತಿಯ ಹಿಂದಿನ ವೈಭವನ, ಭವ್ಯತೆಗಳ ನೆನಪುಗಳು ಗೆಜ್ಜಲಗಟ್ಟಿ ದೇಸಾಯಿಗಳಲ್ಲಿ ನಾವು ಕಾಣಬಹುದು. ಇಂದಿಗೂ ಅದು ಒಂದು ಮಾದರಿಯಾಗಿ ಇತಿಹಾಸವನ್ನು ಹೇಳುತ್ತಿದೆ.

ದೇಸಗತಿಯ ಇತಿಹಾಸ

ಈ ಮನೆತನ ಇತಿಹಾಸ ಕ್ರಿ.ಶ. ೧೨೦೬ ರಿಂದ ಆರಂಭವಾಗುತ್ತಿದೆ. ಕನ್ನಡ ನಾಡಿನ ಇತಿಹಾಸಗಳಿಗೆ ಸಂಪನ್ಮೂಲಗಳಲ್ಲಿ ಒಂದಾದ ಹೆಳವರ ಇತಿಹಾಸ ಹೇಳುವವರ ಕಂಚಿನ ಪತ್ರದಲ್ಲಿ ಈ ಮನೆತನದ ಎಂಟುನೂರು ವರ್ಷಗಳ ಇತಿಹಾಸ ಹೇಳುತ್ತದೆ. ಈ ಮನೆತನದ ಮೂಲಪುರುಷ, ಆತನು ಲಿಮಗಸೂಗೂರಿನ ನಿಲೋಗಲ್ಲಿಗೆ ಬಂದುನಿಂತು, ಸಂಸ್ಥಾನವನ್ನು ಕಟ್ಟಿದ್ದು, ದಿಲ್ಲಿಯ ಬಾದುಷಾಹ ಅಲಂಗೀರ್ ಔರಂಗಜೇಬಿನ ಕೃಪೆಗೆ ಪಾತ್ರನಾಗಿ ಗೆಜ್ಜಲಗಟ್ಟಿ ಮತ್ತು ಸುತ್ತಮುತ್ತಲ ಪರದೇಶಗಳ ನಾಡಗೌಡಕಿ ಪಡೆದ ವಿಚಾರಗಳು ಕಂಚಿನಪತ್ರದಲ್ಲಿ ದಾಖಲಿಸಿದ. ೧೬೮೦ರಿಂದ ದೇಸಾಯಿಗಳು ನಿರ್ವಹಿಸಿರುವ ಫಾರ್ಷಿ, ಉರ್ದು ಭಾಷೆಗಳಲ್ಲಿಯ ಫರ್ಮಾನುಗಳು, ಖಿಲ್ಲತ್ತುಗಳು, ತಾಮ್ರಪಟಗಳು, ಕನ್ನಡ ಭಾಷೆಯ ಪತ್ರಗಳು ಮತ್ತು ಸಮಕಾಲೀನ ದೇಸಗತಿ ಮನೆತನಗಳ ಕಾಗದ ಪತ್ರದಲ್ಲಿ ಉಲ್ಲೇಖವಾಗಿರುವ ದಾಖಲೆಗಳಿಂದ ಗೆಜ್ಜಲಗಟ್ಟಿ ದೇಸಾಯಿಗಳ ಇತಿಹಾಸ ತಿಳಿದುಕೊಳ್ಳಲು ಸಾಧ್ಯವಾಗಿದೆ. ಇವುಗಳನ್ನು ಆಧಾರವಾಗಿಟ್ಟುಕೊಂಡು ಈ ಮನೆತನ ಇತಿಹಾಸವನ್ನು ಕಟ್ಟಿಕೊಡಲು ಇಲ್ಲಿ ಪ್ರಾಮಾಣಿಕ ಪ್ರಯತ್ನಮಾಡಲಾಗಿದೆ.

ಮನೆತನದ ಮೂಲ ಪುರುಷ

ಸಂಗಾರೆಡ್ಡಿ ಎಂಬುವನು ಈ ಮನೆತನದ ಮೂಲಪುರುಷ. ಆಂಧ್ರಪ್ರದೇಶದ ಈಗಿನ ಆದವಾನಿ ಪಟ್ಟದಲ್ಲಿರುವ ಕಲ್‌ಬಾವಿ ಇವರ ಮೂಲ ಸ್ಥಳ. ಕಲ್‌ಬಾವಿ ಆದವಾನಿಯ ರೈಲ್ವೆ ನಿಲ್ದಾಣದ ಸ್ಥಳ. ಈಗ ಅದು ಆದವಾನಿ ಪಟ್ಟಣದ ಸೀಮೆಯನ್ನು ಸೇರಿಕೊಂಡಿದೆ. ಗೌಡಕಿಯನ್ನು ಪಡೆದ ಸಂಗಾರೆಡ್ಡಿ ಮತ್ತು ತಾತರೆಡ್ಡಿಯವರು ಕಲ್‌ಬಾವಿಯನ್ನು ಬಿಟ್ಟು ಅಲ್ಲಿಂದ ಹೊರಟು ಈಗಿನ ಚಿನ್ನದ ಹಟ್ಟಿಯ ಹತ್ತಿರವಿರುವ ನಿಲೋಗ್‌ಗ್ರಾಮಕ್ಕೆ ಬಂದು ನೆಲೆನಿಲ್ಲುತ್ತಾರೆ. ಈ ನಿಲೋಗಲ್‌ಗೆಜ್ಜಲಗಟ್ಟಿಯ ಪಕ್ಕದ ಗ್ರಾಮ. ಸಂಗಾರೆಡ್ಡಿ ಮತ್ತು ತಾತರೆಡ್ಡಿಯವರು ನೆರವಲರೆಡ್ಡಿ ಪಂಗಡಕ್ಕೆ ಸೇರಿದವರು. ರೆಡ್ಡಿ ಜನಾಂಗದಲ್ಲಿ ‘ನರವಲರೆಡ್ಡಿ’ ಒಂದು ಪಂಗಡ ಇವರದು ‘ಚುಂಚಲಿ’ ಬೆಡಗು (ಗೋತ್ರ)ರೆಡ್ಡಿ ಜನಾಂಗ ದವರಾದ ಇವರು ನಿಲೋಗಲ್ಲಿನ ವೀರಶೈವ ಮಠಪತಿಗಳಿಂದ ಲಿಂದ ದೀಕ್ಷೆಯನ್ನು ಪಡೆದು ವೀರಶೈವ ಧರ್ಮದ ಅನುಯಾಯಿಗಳಾದರು.

ನಿಲೋಗಲ್‌ನಲ್ಲಿ ನಾಡಗೌಡಕಿ ಮಾಡಿಕೊಂಡು ಆಡಳಿತ ನಡೆಸುತ್ತಿರುವಾಗ ದಿಲ್ಲಿಯ ಬಾದುಷಾಹ ಔರಂಗಜೇಬನು ದಖನ್ನಿನ ಮುಸ್ಲಿಂ ರಾಜ್ಯಗಳ ಮೇಲೆ ದಂಡಯಾತ್ರೆ ಕೈಕೊಂಡು ಬರುವ ಮಾರ್ಗದಲ್ಲಿ ನಿಲೋಗಲ್ ಗ್ರಾಮದ ಹತ್ತಿರ ವಿಶ್ರಾಂತಿ ಪಡೆದನು. ಆಗ ಈ ದೇಸಾಯಿಗಳು ಮೊಘಲರ ದಂಡಿಗೆ ರುಚಿಯಾದ ಅಮೃತದಂಥ ಊಟ ಮಾಡಿಸಿದರು. ಮತ್ತು ಸೈನ್ಯದ ಆನೆ – ಕುದುರೆಗಳಿಗೆ ಹುಲ್ಲು, ಕಾಳುಗಳನ್ನು ಪೂರೈಸಿದರು. ಇದರಿಂದ ಸಂತುಷ್ಠನಾದ ಬಾದಷಾಹನು ಅವರಿಗೆ ಖೋಟಾ ಸೀಮೆ ನಾಡಗೌಡಕಿ ಮತ್ತು ದೇಸಾಯಿ ಬಿರುದನ್ನು ನೀಡಿದ್ದಲ್ಲದೆ ಪಲ್ಕನ್‌ಮೊರಡಿ (ದೇವದುರ್ಗ ತಾಲೂಕು)ಯನ್ನು ಉಂಬಳಿಯಾಗಿ ಬಿಟ್ಟುಕೊಟ್ಟನು. ಮೊಘಲರು ಆನೆಗಳು ಬೀಡುಬಿಟ್ಟ ಪ್ರದೇಶವನ್ನು ಆನೆಹೊಸೂರು ಎಂದು ಈಗಲೂ ಕರೆಯುತ್ತಾರೆ. ಕಲ್‌ಬಾವಿಯಲ್ಲಿದ್ದ ಸಂಗಾರೆಡ್ಡಿ ಮರಣಹೊಂದಿದನು. ಆತನ ಮಗ ತಿಮ್ಮರೆಡ್ಡಿ ಪಲ್ಕಲ್‌ಮೊರಡಿ ಬಿಟ್ಟು ಸನಿಹದ ಚುಕ್ಕನಟ್ಟಿ ಗ್ರಾಮವನ್ನು ಉಂಬಳಿಯಾಗಿ ಮಾಡಿಕೊಂಡು ನಿಂತನು. ತರುವಾಯ ಗೆಜ್ಜಲಗಟ್ಟಿಯನ್ನು ಉಂಬಳಿಯಾಗಿ ಪಿಡ್ಡನಗೌಡ ಪಡೆದುಕೊಂಡನು. ಪಿಡ್ಡನಗೌಡ ತಿಮ್ಮರೆಡ್ಡಿಯ ಮಗ. ಈ ವಿಚಾರ ಹೆಳವರ ಕಂಚಿನ ಪತ್ರದಲ್ಲಿ ಉಲ್ಲೇಖವಾಗಿದೆ.

ಗೆಜ್ಜಲಗಟ್ಟಿಯ ಮೂಲ ಹೆಸರು ‘ಗೆದ್ದಲಗಟ್ಟಿ’ ಎಂದು ಆಗ ಅದು ಗುರುಗುಂಟ ದೊರೆಗಳ ಸಂಸ್ಥಾನದ ಸೀಮೆಯಲ್ಲಿತ್ತು. ದೊರೆ ಬಹರಿ ಲಿಂಗನಾಯಕ್‌ಇಸ್ವಿ ೧೬೫೮ (೧೦೭೫ ಹಿಜರಿ)ರಲ್ಲಿ ಗೆಜ್ಜಲಗಟ್ಟಿ ಗ್ರಾಮವನ್ನು ಗೌಡಪ್ಪ ಗೌಡರ ಮಗ ಆದಪ್ಪಗೌಡರಿಗೆ ಬಿಲ್‌ಮುಕ್ತಾಯಿ ಆಗಿ ಕೊಟ್ಟನು. ಬಿಲ್‌ಮುಕ್ತಾಯಿ ಎಂದರೆ ಗ್ರಾಮದ ಉತ್ಪನ್ನ ಕಂದಾಯದ ಹಣವನ್ನು ಸಂಸ್ಥಾನಕ್ಕೆ ಕೊಡದೆ ತಾವೇ ಇಟ್ಟುಕೊಳ್ಳುವುದು. ತರುವಾಯ ಇಸ್ವಿ ೧೭೪೦ (೧೧೩೮ ಹಿಜರಿ)ರಲ್ಲಿ ರಾಜಾಸೋಮಲಿಂಗ ನಾಯಕ ಅವರು ತಿಮ್ಮಪ್ಪನಾ ಗೌಡರ ಮಕ್ಕಳು ಆದಪ್ಪ ಗೌಡರಿಗೆ ನಾಡಗೌಡಕಿ ಅದಿಕಾರವನ್ನು ಕೊಟ್ಟನು.

ಗೆಜ್ಜಲಗಟ್ಟಿ ನಾಡಗೌಡರು ಕುರುಗಂಡಿ ದೊರೆಗಳ ಸಂಸ್ಥಾನದ ಅಧೀನದಲ್ಲಿದ್ದುಕೊಂಡು ಅವರಿಗೆ ನಿಷ್ಠರಾಗಿ ನಡೆದುಕೊಂಡರು. ದೊರೆಗಳು ಆಚರಿಸುತ್ತಿದ್ದ ಸಮಾರಂಭಗಳಲ್ಲಿ ಮಹಾನವಮಿಯ ನಾಡ ಹಬ್ಬಗಳಲ್ಲಿ, ಅರಮನೆಯ ವಿಶೇಷ ಸಂಭ್ರಮಗಳಲ್ಲಿ, ರಾಜಧಾನಿ ಯಲ್ಲಿ ನಡೆಯುವ ಉತ್ಸವಗಳಲ್ಲಿ ನಾಡಗೌಡರು ಭಾಗವಹಿಸಿ, ತಮ್ಮ ಭಕ್ತಿ ಮತ್ತು ನಿಷ್ಠೆಯನ್ನು ತೋರಿಸುತ್ತಿದ್ದರು. ದೊರೆಗಳು ಕೈಕೊಂಡ ಯುದ್ಧ ಮತ್ತು ದಂಡಯಾತ್ರೆಗಳಲ್ಲಿ ನಾಡಗೌಡರು ಸೈನ್ಯವನ್ನು ಒದಗಿಸುವುದಲ್ಲದೆ ಅವರು ಅದರಲ್ಲಿ ಸ್ವತಃ ಭಾಗವಹಿಸುತ್ತಿದ್ದರು. ಗುರಗುಂಟ ಸಂಸ್ಥಾನಕ್ಕೆ ಗೆಜ್ಜಲಗಟ್ಟಿಯ ನಾಡಗೌಡರು ತೋರಿಸುವ ನಿಷ್ಠೆ ಹಾಗೂ ಬಲಗಳಿಗೆ ಮೆಚ್ಚಿ ದೊರೆಗಳು ಗ್ರಾಮಗಳನ್ನು ಉಂಬಳಿಯಾಗಿ ನೀಡಿ, ಹಂತಹಂತವಾಗಿ ಅವರಿಗೆ ಮೇಲ್ದರ್ಜೆಯ ಅಧಿಕಾರವನ್ನು ಕೊಟ್ಟು ಗೌರವಿಸುತ್ತಿದ್ದರು.

ರಾಜಾ ಸೋಮಸರ್ಜನಾಯಕನು ಇಸ್ವಿ ೧೭೪೯ (೧೧೬೯ ಹಿಜರಿ)ರಲ್ಲಿ ಆದಪ್ಪ ನಾಡಗೌಡರ ಮಗ ತಿಮ್ಮಪ್ಪ ನಾಡಗೌಡರಿಗೆ ಹೂವಿನಬಾವಿ ಮತ್ತು ನಗನೂರು ಗ್ರಾಮಗಳನ್ನು ಉಂಬಳಿಯಾಗಿ ಕೊಟ್ಟನು. ಇದಾದ ೫೦ ವರ್ಷಗಳ ನಂತರ ರಾಜಾ ಸೋಮಲಿಂಗ ನಾಯಕರು ಇಸ್ವಿ ೧೭೯೯ (೧೨೧೯ ಹಿಜರಿ)ರಲ್ಲಿ ತಿಮ್ಮಪ್ಪ ನಾಡಗೌಡರ ಮಗ ವಾಸಪ್ಪ ಗೌಡರಿಗೆ ನಿಲೋಗಲ್ ಗ್ರಾಮವನ್ನು ಬಿಲ್‌ಮುಕತಾಯಿ ಆಗಿ ಕೊಟ್ಟರು. ೭ ವರ್ಷಗಳು ಕಳೆದ ಆನಂತರ ರಾಜಾ ಪಿಡ್ಡನಾಯಕ ಬಹರಿ ಬಿಲ್ಟಾನ್ ಅವರು ಇಸ್ವಿ ೧೮೦೮ (೧೭೯೭ ಜಿಹರಿ) ರಲ್ಲಿ ವೆಂಕಟರಾವ್ ನಾಡಗೌಡರ ಮಗ ಅಮರಪ್ಪನಾಡಗೌಡ ಅವರಿಗೆ ಚಿಕ್ಕಲ್‌ದೊಡ್ಡಿ ಗ್ರಾಮ (ಈಗ ಬೇಚರಾಕ್ – ನಿರ್ಜನ ಗ್ರಾಮ) ವನ್ನು ಉಂಬಳಿಯಾಗಿ ನೀಡಿದನು.

ನಾಡಗೌಡಕಿಗೆ ಸೇರಿದ ಗ್ರಾಮಗಳ ವಿವರ

ವೆಂಕಟರಾವ್ ನಾಡಗೌಡರು ಇಸ್ವಿ ೧೮೦೮ರವರೆಗೆ ಪಡೆದ ಗೆಜ್ಜಲಗಟ್ಟಿ ಸಂಸ್ಥಾನಕ್ಕೆ ಸೇರಿದ ಗ್ರಾಮಗಳು, ಅವುಗಳು ಹೊಂದಿದ ಭೂಮಿ, ಅವುಗಳ ಉತ್ಪನ್ನ ಕಂದಾಯ ಮಾಲ್ಗುಜಾರಿ, ಬೆಳ್ಳಿ, ಬಂಗಾರ, ನಗನಾಣ್ಯಗಳು ಹಾಗೂ ಗುರುಗಂಟ ಸಂಸ್ಥಾನಕ್ಕೆ ಗೆಜ್ಜಲಗಟ್ಟಿ ನಾಡಗೌಡರು ಸಲ್ಲಿಸುತ್ತಿದ್ದ ವಾರ್ಷಿಕ ಕಂದಾಯ ಮೊತ್ತದ ವಿವರ ಹೀಗಿವೆ.

ಗೆಜ್ಜಲಗಟ್ಟಿ ೧೫೪೩ ಎಕರೆ, ಹಿರೇನಾಗನೂರು ೪೧೯೯ ಎಕರೆ, ಹೂವಿನಬಾವಿ ೧೦೦೮ ಎಕರೆ, ನಾಗನೂರು ೨೦೦೦ ಎಕರೆ, ಚಿಕ್ಕಲ್‌ದೊಡ್ಡಿ ೮೦೩ ಎಕರೆ, ಬಿಲ್ಮುಕ್ತಾಯಿ ಇನಾಮ್‌ಭೂವಿಗಳು ಖೋಟಾ ೧೮೭೧ ಎಕರೆ, ಗುಡದನಾಳ ೪೬ ಎಕರೆ, ಮೇದನಾಪುರ ೨೬ ಎಕರೆ, ಗೋಸವಾದ ೨೯೯ ಎಕರೆ, ಹೆಸರೂರು ೧೫೭ ಎಕರೆ, ಆನ್ವರಿ ೨೦೯ ಎಕರೆ, ತವಗ ೩೮ ಎಕರೆ, ಮಾಚನೂರು ೪೦ ಎಕರೆ, ಜಂಗಮರಹಳ್ಳಿ ೨೧ ಎಕರೆ, ಮತ್ತು ಹೀರಾಪುರ ೧೪೩ ಎಕರೆ

ಗೆಜ್ಜಲಗಟ್ಟಿ ಸಂಸ್ಥಾನದಲ್ಲಿ ೧೫ ಗ್ರಾಮಗಳು ಸಮಾವೇಶಗೊಂಡಿವೆ. ಅವುಗಳಲ್ಲಿ ೧೦ ಗ್ರಾಮಗಳು ಬಿಲ್‌ಮುಕ್ತಾಯಿಗಳು. ಈ ಗ್ರಾಮಗಳ ಆದಾಯ ಸಂಸ್ಥಾನಕ್ಕೆ ಸೇರುತ್ತದೆ. ಸಂಸ್ಥಾನದ ಒಟ್ಟು ಭೂಮಿಯ ವಿಸ್ತೀರ್ಣ ೧೨,೩೧೩ ಎಕರೆ, ನಾಡಗೌಡರು ಗುರುಗುಂಟದಲ್ಲಿ ಸಲ್ಲಿಸುತ್ತಿದ್ದರು. ಬಿಲ್‌ಮುಕ್ತಾಯಿ ಇನಾಮ್‌ಭೂಮಿಯಿಂದ ಎಕರೆಗೆ ೧ ರೂ.ಯಂತೆ ಅಂದರೆ ೨,೮೬೦ ರೂ.ಗಳು ಗುರುಗುಂಟಿ ಸಂಸ್ಥಾನಕ್ಕೆ ಸಂದಾಯವಾಗುತ್ತಿತ್ತು.

ಧರ್ಮಿಷ್ಠೆ ರಾಣಿ ಲಕ್ಷ್ಮಿದೇವಿ

ಗೆಜ್ಜಲಗಟ್ಟಿ ನಾಡಗೌಡರ ಮನೆತನದಲ್ಲಿ ಆಗಿಹೋದ ರಾಣಿಯರಲ್ಲಿ ರಾಣಿ ಲಕ್ಷ್ಮೀದೇವಿಯ ಹೆಸರು ಪ್ರಸಿದ್ಧ ಧರ್ಮಿಷ್ಠಳೂ, ಸತಿಪರಾಯಿಣಿಯೂ, ಗುರುಲಿಂಗ ಜಂಗಮರಲ್ಲಿ, ನಿಷ್ಠಳೂ, ದಾಸೋಹದಲ್ಲಿ ನಿರತಳೂ, ಆಗಿದ್ದ ರಾಣಿ ಲಕ್ಷ್ಮೀದೇವಿ ತನ್ನ ಸದ್ಗುಣಗಳಿಂದ ಸಂಸ್ಥಾನದ ಕೀರ್ತಿಗೆ ಭಾಜನಳಾದಳು. ಧರ್ಮದಲ್ಲಿ ತೋರಿಸುವ ಶ್ರದ್ಧೆ ಆಕೆಯ ಒಂದು ಮುಖವಾದರೆ, ರಾಜ್ಯದ ಆಡಳಿತದಲ್ಲಿ ತೋರಿಸುವ ಕೌಶಲ, ಧೀರತನ, ಧೈರ್ಯ ಸ್ಥೈರ್ಯ ಗುಣಗಳು ಮತ್ತೊಂದು ಮುಖ ವಜಾದಪಿ ಕಠೊರಾಣಿ ಮಲದೂನಿ ಕುಸುಮಾದಪಿ ಎಂದು ಸ್ತ್ರೀಯರನ್ನು ವರ್ಣಿಸುತ್ತಾರೆ. ಈ ಉಕ್ತಿಗೆ ರಾಣಿ ಲಕ್ಷ್ಮೀದೇವಿ ನಿತ್ಯನಿದರ್ಶಕಳಾಗಿದ್ದಾಳೆ. ರಾಣಿ ಕತ್ತಿವರಸೆಯಲ್ಲಿ ಮತ್ತು ಕುದುರೆ ಸವಾರಿಯಲ್ಲಿ ನಿಷ್ಣಾತಳು. ಆಕೆ ಗಂಡಸರಂತೆ ದರ್ಬಾರವನ್ನು ನಡೆಸುತ್ತಿದ್ದಳು. ಆಕೆಯು ತೆಗೆದುಕೊಳ್ಳುತ್ತಿದ್ದ ತೀರ್ಮಾನ, ನೀಡುತ್ತಿದ್ದ ನ್ಯಾಯಗಳು ಯೋಗ್ಯವಾಗಿರುತ್ತಿದ್ದವು. ಆಕೆ ಆಡಳಿತ ಸೂತ್ರವನ್ನು ಕೈಯಲ್ಲಿ ಹಿಡಿದುಕೊಂಡು ಸಂಸ್ಥಾನದ ಸರ್ವೋತೋಮುಖದ ಅಭಿವೃದ್ಧಿಗೆ ಶ್ರಮಿಸಿದರು. ಧಾರ್ಮಿಕ, ಸಾಮಾಜಿಕ, ಸಾಹಿತ್ಯಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಅನುಪಮ ಅಭಿವೃದ್ಧಿಯನ್ನು ಸಾಧಿಸಿದಳು. ಶೌರ್ಯ, ಸಾಹಸ ಮತ್ತು ಮುತ್ಸದ್ಧಿಗಳಿಂದ ಸಂಸ್ಥಾನವನ್ನು ವಿಸ್ತರಿಸಿ, ಶಾಂತಿ ಸಮೃದ್ಧಿಯನ್ನು ತಂದು, ಗೆಜ್ಜಲಗಟ್ಟಿ ನಾಡಗೌಡಕಿ ಮನೆತನದ ಕೀರ್ತಿಯನ್ನು ಹೆಚ್ಚಿಸಿದಳು.

ಸುಮಾರು ಇಸ್ವಿ ೧೮೭೪ ರಲ್ಲಿ ಅಂದಿನ ಮಾನಪ್ಪಗೌಡರ ಮಡದಿಯಾಗಿ ಗೆಜ್ಜಲಗಟ್ಟಿ ಮನೆತನಕ್ಕೆ ಬಂದ ಲಕ್ಷ್ಮೀದೇವಿ ಆ ಮನೆತನದ ಕೀರ್ತಿಯನ್ನು ಬೆಳಗುವ ಸೊಸೆಯಾದಳು. ಈಕೆ ಗದುಗಿನ ಹತ್ತಿರದ ಹಡಗಲಿ ಗ್ರಾಮದ ಶಂಕರಗೌಡರ ಮಗಳು ರಾಣಿ ಲಕ್ಷ್ಮೀದೇವಿ ಮಾನಪ್ಪನಾಡಗೌಡರು ವಿಧಿವಶರಾದ ಮೇಲೆ ರಾಣಿಲಕ್ಷ್ಮೀದೇವಿ ನಾಡಗೌಡಿಕೆಯ ಆಡಳಿತ ಸೂತ್ರವನ್ನು ಹಿಡಿದಳು.

ದೇಸಗತಿ ಗಂಡಾಂತರದಿಂದ ಪಾರು

ನಾಡಗೌಡ ಮನೆತನಕ್ಕೆ ಗಂಡಾಂತರ ಸಂಭವಿಸಿತು. ಅದನ್ನು ರಾಣಿ ಬಹುಜಾಣ್ಮೆಯಿಂದ ಪಾರು ಮಾಡಿದ ಘಟನೆ ಆಕೆಯ ಧೈರ್ಯಕ್ಕೆ ನಿದರ್ಶನವಾಗಿದೆ.

ನಾಡುಗೌಡ ಮನೆತನಕ್ಕೆ ಗಂಡು ಸಂತಾನವಿಲ್ಲವೆಂಬ ನೆಪವೊಡ್ಡಿ ಗುರುಗುಂಟಯ ದೊರೆಗಳು ಗೆಜ್ಜಲಗಟ್ಟ ಮನೆತನವನ್ನು ತಮ್ಮ ಸ್ವಾಧೀನಪಡಿಸಿಕೊಳ್ಳಲು ತಂತ್ರಹೂಡಿದರು. ತಮ್ಮ ಸೈನ್ಯವನ್ನು ಗೆಜ್ಜಲಗಟ್ಟಿಗೆ ಕಳುಹಿಸಿದರು. ದಂಡು ಹಟ್ಟಿಯ ಸಮೀಪದ ಬರುವದನ್ನು ತಿಳಿದು ರಾಣಿ ಲಕ್ಷ್ಮೀದೇವಿ ಧೈರ್ಯಗೆಡದೆ ಪ್ರತಿತಂತರವನ್ನು ರೂಪಿಸಿದಳು. ಕತ್ತಲಾಗುತ್ತಿದ್ದಂತೆ ಅಲ್ಲಲ್ಲೆ ಸಾವಿರಾರು ಪಂಜುಗಳನ್ನು ಹೊತ್ತಿಸಿದಳು. ಅವುಗಳನ್ನು ದೂರದಿಂದ ನೋಡಿದ ಗುಡುಗುಂಟಯ ಸೈನಿಕರು ವೈರಿಗಳ ಸೈನ್ಯ ತಮಗಿಂತ ದೊಡ್ಡದಿದೆಯೆಂದು ತಿಳಿದು ಅಲ್ಲಿಂದಲೇ ಹೆದರಿ ಹಿಂತಿರುಗಿದರು. ಗಜ್ಜಲಗಟ್ಟಿಗೆ ಅಪ್ಪಳಿಸಿದ ಗಂಡಾಂತರ ರಾಣಿಯ ಸಮಯಪ್ರಜ್ಞೆಯಿಂದ ನಿವಾರಣೆಯಾಯಿತು. ಪರಿಸ್ಥಿತಿಯನ್ನು ಅರಿತಕೊಂಡ ರಾಣಿ ಲಕ್ಷ್ಮಿಬಾಯಿ ತನ್ನ ತವರುಮನೆಯ ಸಂಬಂಧಿಗಳಾದ ಪಿಡ್ಡನಗೌಡ ನಾಡಗೌಡರ ಮನೆತನದ ವೆಂಕಟರಾವ್ ಅವರ ಮಗ ದೊಡ್ಡ ಬಸವಂತರಾವ್ ಅವರನ್ನು ದತ್ತು ತೆಗೆದುಕೊಂಡು ಪಟ್ಟಕ್ಕೆ ಕೂಡಿಸಿದಳು. ಗುಡುಗುಂಟಯ ದಂಡು ಬಂದದಾರಿಗೆ ಸುಂಕವಿಲ್ಲವೆಂದು ಹಿಂತಿರುಗಿ ಹೋಯಿತು. ರಾಣಿಯ ಬುದ್ಧಿಚಾತುರ್ಯದಿಂದಾಗಿ ಗೆಜ್ಜಲಗಟ್ಟಿ ಸಂಸ್ಥಾನ ಅಪಾಯದಿಂದ ಪಾರಾಯಿತು.

ದೊಡ್ಡ ಬಸವಂತರಾವ್ ಇನ್ನೂ ಬಾಲಕನಾಗಿದ್ದರಿಂದ ವಿಧವೆ ರಾಣಿ ಲಕ್ಷ್ಮೀದೇವಿ ಸಂಸ್ಥಾನದ ಆಡಳಿತದ ಸೂತ್ರವನ್ನು ವಹಿಸಿಕೊಂಡಳು. ಪುರುಷರಂತೆ ಒಡ್ಡೋಲಗವನ್ನು ನಡೆಸಿದಳು. ಸಂಸ್ಥಾನಕ್ಕೆ ಆದಾಯ ಹೆಚ್ಚಿಸಲು ಅನೇಕ ಜನಪರ ಕಾರ್ಯಗಳನ್ನು ಜಾರಿಗೆ ತಂದಳು. ಕೆರೆ ಬಾವಿಗಳಿಂದ ನೀರಾವರಿಗೆ ಉತ್ತೇಜನ ನೀಡಿದಳು. ಪ್ರಜೆಗಳ ಕ್ಷೇಮಕ್ಕಾಗಿ ಹಣವನ್ನು ವಿನಿಯೋಗಿಸಿದಳು. ಶಿಕ್ಷಣಕ್ಕೆ ಒತ್ತುಕೊಟ್ಟು ಪಾಠಶಾಲೆಗಳನ್ನು ತೆರೆದಳು. ರಾಣಿ ಕುದುರೆ ಸವಾರಿ ಮಾಡಿ, ಸಂಸ್ಥಾನದ ಗ್ರಾಮಗಳಲ್ಲಿ ಸಂಚರಿಸಿ, ಪ್ರಜೆಗಳ ಸುಖ – ದುಃಖಗಳನ್ನು ವಿಚಾರಿಸುತ್ತಿದ್ದಳು. ಆಡಳಿತದಲ್ಲಿ ಬಿಗುವು ಮತ್ತು ಶಿಸ್ತನ್ನು ತಂದಳು. ರಾಣಿ ವಿದ್ಯಾವಂತೆಯಾಗಿದ್ದು ಸಂಸ್ಥಾನದ ಪತ್ರವ್ಯವಹಾರಗಳನ್ನು ತಾನೇ ಮಾಡುತ್ತಿದ್ದಳು. ಗುರುಹಿರಿಯರಲ್ಲಿ ಗೌರವನ್ನಿಟ್ಟುಕೊಂಡಿದ್ದ ಆಜಿ ಎಲ್ಲರ ಅಭಿಮಾನಕ್ಕೆ ಪಾತ್ರಳಾದಳು.

ರಾಣಿ ಲಕ್ಷ್ಮಿದೇವಿ ಅತಿ ಸೌಂದರ್ಯವತಿ ಆಕೆಯ ವ್ಯಕ್ತಿತ್ವ ಆಕರ್ಷಕ ಆಕೆಯ ಬಣ್ಣ ಗೋಧಿಯನ್ನು ಕುಟ್ಟಿದ ಕಣಕದಂತೆ ಬಂಗಾರದ ವರ್ಣದೇಹ ಸುಕೋಮಲ ರಾಣಿ ಎಷ್ಟು ರೂಪವತಿಯಾಗಿದ್ದಳೆಂದರೆ ಆಕೆ ಹಾಕಿಕೊಂಡ ತಾಂಬೂಲದ ಕೆಂಪು ಬಣ್ಣ ಕಂಠದಲ್ಲಿ ಕಾಣುತ್ತಿತ್ತೆಂದು ಹೇಳುತ್ತಾರೆ. ರಾಣಿಯ ಸೌಕುಮಾರ್ಯವು ಸಂಸ್ಥಾನದ ಆಡಳಿತದ ಕಾಠಿಣ್ಯವನ್ನು ಸಹಿಸಿಕೊಳ್ಳುತ್ತಿತ್ತು. ಕುದುರೆ ಸವಾರಿ ಮತ್ತು ಸಂಸ್ಥಾನದಲ್ಲಿ ಸಂಚಾರ ಕೈಕೊಳ್ಳಲು ಈ ಕೋಮಲತೆ ಬಾಧಕವಾಗುತ್ತಿದ್ದಿಲ್ಲ.

ಭೋಗದಿಂದ ಪ್ರಣವಕ್ಕೆ

ರಾಣಿ ಲಕ್ಷ್ಮಿದೇವಿಯ ನಾಡಗೌಡಕಿ ಆಡಳಿತದ ವೈಭವಗಳನ್ನು ಅನುಭವಿಸುತ್ತಿರುವಾಗಲೆ ಆಕೆಯನ್ನು ಆಧ್ಯಾಥ್ಮದ ಮುಖದತ್ತ ತಿರುಗುವ ಒಂದು ಘಟನೆ ಜರುಗಿತು. ಈ ಘಟನೆ ರಾಣಿಯ ಜೀವನದಲ್ಲಿ ಪರಿವರ್ತನೆಗೆ ಆಯಾಮವಾಗಿ ಪರಿಣಮಿಸಿತು. ಆ ಘಟನೆ ನಡೆದದ್ದು ಹೀಗೆ

ರಾಣಿ ಲಕ್ಷ್ಮಿದೇವಿ ಜಮಾಬಂದಿಗೆ (ಕಂದಾಯ ವಸೂಲಿಗೆ) ಎಂದು ಅಂಕುಶದೊಡ್ಡಿ ಗ್ರಾಮಕ್ಕೆ ಬಂದಾಗ ದಿವ್ಯತಪಸ್ಸಿಗಳಾದ ಸಂತೆಕೆಲೂರಿನ ಘನಮಠದಾರ್ಯರು ಅಲ್ಲಿಯ ಮಾವಿನ ತೋಟದಲ್ಲಿ ತಂಗಿದ್ದ ವಿಚಾರ ತಿಳಿಯಿತು. ಅವರ ದರ್ಶನ ಪಡೆಯಲು ರಾಣಿ ಬಯಸಿ ಸ್ವಾಮಿಗಳಿಗೆ ಹೇಳಿಕಳಿಸಿದಳು. ತಾವು ಅಲ್ಲಿಗೆ ಬರುವಾಗ ಹತ್ತುವರ್ಷದ ಹುಡುಗರನ್ನು ಬಿಟ್ಟು ಬೇರೆ ಗಂಡಸು ಇರಬಾರದೆಂದು ತಿಳಿಸಿದಳು. ಘನಮಠದಾರ್ಯರು ರಾಣಿಗೆ ಬರುವಂತೆ ಒಪ್ಪಿಗೆ ನೀಡಿದರು. ದರ್ಶನದ ಸಮಯದಲ್ಲಿ ರಾಣಿ ಘನಮಠದಾರ್ಯರ ಪೂಜೆಗೆಂದು ಬೆಳ್ಳಿಯ ಸಾಮಾನುಗಳನ್ನು ಕೊಂಡೊಯ್ದಿದ್ದಳು. ಅವುಗಳನ್ನು ರಾಣಿ ಪೂಜ್ಯರ ಪಾದಕ್ಕೆ ಸಲ್ಲಿಸಿ ಸ್ವೀಕರಿಸಲು ವಿನಂತಿಸಿದಳು. ಆಗ ಘನಮಠದಾರ್ಯರು ಹೇಳಿದ ಮಾತು ರಾಣಿಯ ಜೀವನ ಮಾರ್ಗವನ್ನು ಬದಲಾಯಿಸಿತು. “ಏನಮ್ಮ ತಾಯಿ ನಿನ್ನನ್ನು ನನ್ನ ತಲೆಯ ಮೇಲೆ ಹೊತ್ತುಕೊಂಡು ಹೋಗಲೇ” ಆ ಬೆಳ್ಳಿಯ ಪೂಜಾಪಾತ್ರೆಯ ಮೇಲೆ ರಾಣಿ ವಿಳಾಸವಿದ್ದುದು ಘನಮಠಾಧೀಶ್ವರರ ಮಾತಿಗೆ ಕಾರಣವಾಯಿತು. ಅಂದಿನಿಂದ ರಾಣಿಯಲ್ಲಿ ಸದ್ವಿವೇಕಯುಂಟಾಯಿತು. ಅಧಿಕಾರದ ಅಹಂಕಾರ ಇಳಿಯಿತು. ತಪ್ಪಿನ ಅರಿವಾಯಿತು. ಜ್ಞಾನೋದಯವಾಗಿ ರಾಣಿ ಎಚ್ಚೆತ್ತುಕೊಂಡಳು. ಅಧಿಕಾರ, ರಾಜಸಭೆಯ ವಿಲಾಸಗಳು ನಶ್ವರ ಪರತರವಸ್ತುವೊಂದೇ ನಿತ್ಯ, ಸತ್ಯ ಶಾಶ್ವತವೆಂಬ ವಿವೇಕ ರಾಣಿಯಲ್ಲಿ ಮೊಳೆಯಿತು. ಅಂದೇ ರಾಣಿ ಲಕ್ಷ್ಮಿದೇವಿ ನಾಡಗೌಡಕಿಯ ಬಿರುದು ಬಾವುಲಿಗಳನ್ನು ಗುರುಗಳ ಪಾದಕ್ಕೆ ಸಮರ್ಪಿಸಿ, ಸಾಮಾನ್ಯ ಹೆಣ್ಣುಮಗಳಂತೆ ಆದಳು.

ರಾಣಿಯಲ್ಲಾದ ಪರಿವರ್ತನೆಯನ್ನು ಕಂಡು, ಆಕೆಯನ್ನು ದಿವ್ಯದೃಷ್ಟಿಯಿಂದ ನೋಡಿ, ಘನಮಠದಾರ್ಯರು ರಾಣಿಗೆ ಗುರುಬೋಧೆ ನೀಡಿ, ಇನ್ನು ಮುಂದೆ ಆಕೆಯನ್ನು ಸಮಾಜ ಸೇವೆಗೆ ಅರ್ಪಿಸಿಕೊಳ್ಳುವಂತೆ ಗುರೂಪದೇಶ ಮಾಡಿದರು. ಅಂದಿನಿಂದ ರಾಣಿಲಕ್ಷ್ಮಿದೇವಿ ನಾಡಗೌಡರ ಮನೆತನದ ಹೆಣ್ಣುಮಕ್ಕಳಿಗಿರುವ ಘೋಷಾಪದ್ಧತಿಯನ್ನು ತ್ಯಜಿಸಿದಳು. ಪ್ರಣವದ ಓಂಕಾರಕ್ಕೆ ಕಿವಿಯನ್ನು ಆಲಿಸಿದಳು. ಭೋಗಜೀವನದಿಂದ ವಿಮುಕ್ತಳಾಗಿ ಯೋಗಿ, ಶರಣ ಜೀವನಕ್ಕೆ ಅಭಿಮುಖಳಾದಳು. ಗುರುವಿನ ಅನುಗ್ರಹವನ್ನು ಪಡೆದು ರಾಣಿ ಶರಣಿಯಂತೆ ಜೀವನಸಾಗಿಸಿದಳು. ಗುರುಲಿಂಗಜಂಗಮರಲ್ಲಿ ಶ್ರದ್ಧೆಯುಳ್ಳವಳಾಗಿ ದಾಸೋಹ ಕಾಯಕದಲ್ಲಿ ನಿರತಳಾದಳು. ಧಾರ್ಮಿಕ ಕಾರ್ಯದಲ್ಲಿ ಹೆಚ್ಚು ಒಲಿದಳು. ಪಾಠಶಾಲೆ, ಮಠ, ಮಂದಿರಗಳನ್ನು ನಿರ್ಮಿಸಿದಳು. ನಿತ್ಯ ಅನ್ನದಾಸೋಹವನ್ನು ಏರ್ಪಡಿಸಿದರು. ಶರಣ, ಜಂಗಮರ ಸೇವೆಯಲ್ಲಿ ತತ್ವರಳಾದಳು. ರಾಣಿ ವೀರಶೈವ ಧರ್ಮಾವಲಂಬಿಯಾಗಿದ್ದರೂ ಎಲ್ಲ ಮತ ಧರ್ಮದವರನ್ನು ಸಮಾನವಾಗಿ ಕಾಣುತ್ತಿದ್ದಳು.

ಗೆಜ್ಜಲಗಟ್ಟ ಮರಿ ಕಲ್ಯಾಣ

ರಾಣಿ ಲಕ್ಷ್ಮಿದೇವಿಯ ಧಾರ್ಮಿಕಾಚರಣೆ ಮತ್ತು ಗುರುಲಿಂಗಜಂಗಮರ ಸೇವೆಗಳಿಂದ ಗೆಜ್ಜಲಗಟ್ಟ ಶಿವಭಕ್ತರ ಮತ್ತು ಶರಣರಿಗೆ ಆಶ್ರಯದ ಪುಣ್ಯಸ್ಥಾನವಾಯಿತು. ಕೂಡಲ ಸಂಗಮದಿಂದ ಕಲ್ಯಾಣದತ್ತ ಪ್ರಯಾಣಿಸುತ್ತಿದ್ದ ನೂರಾರು ಭಕ್ತರು ಗೆಜ್ಜಲಗಟ್ಟಯ ಮಾರ್ಗವಾಗಿ ಹೋಗುತ್ತಿದ್ದರು. ರಾಣಿ ಅವರಿಗಾಗಿ ನಿತ್ಯ ದಾಸೋಹವನ್ನು ಮಾಡಿದಳು. ದಿನ ನಿತ್ಯ ನೂರಾರು ಭಕ್ತರು ದಾಸೋಹದಲ್ಲಿ ಪ್ರಸಾದ ತೆಗೆದುಕೊಳ್ಳುತ್ತಿದ್ದರು. ಇವರ ಸಂಖ್ಯೆ ದಿನದಿನಕ್ಕೆ ಅಧಿಕವಾಗಿ ಬೆಳೆಯಿತು. ಬಂದ ಭಕ್ತರಿಗೆ ಪ್ರಸಾದ ವ್ಯವಸ್ಥೆಯಾದುದಮೇಲೆ ರಾಣಿ ಪ್ರಸಾದ ಸ್ವೀಕರಿಸುತ್ತಿದ್ದಳು. ಆಕೆ ಪ್ರಸಾದ ತೆಗೆದುಕೊಳ್ಳುವಾಗ ರಾತ್ರಿಯಾಗುತ್ತಿತ್ತು. ರಾಣಿಯ ಈ ದಾಸೋಹದ ಮಹಿಮೆಯಿಂದ ಗೆಜ್ಜಲಗಟ್ಟಿ “ಮರಿಕಲ್ಯಾಣ”ನೆಂದು ಪ್ರಸಿದ್ಧವಾಯಿತು. ರಾಣಿ ಲಕ್ಷ್ಮಿದೇವಿ ಶಿವಶರಣೆಯ ಪದವಿಗೆ ಅರ್ಹಳಾದಳು.

ಸಂಸ್ಕೃತ ಪಾಠ ಶಾಲೆ

ರಾಣಿ ಧರ್ಮಪರಾಯಣೆಯಾಗಿರುವುದರೊಂದಿಗೆ ಸಂಸ್ಕೃತ ಮತ್ತು ಕನ್ನಡ ಭಾಷೆ, ಸಂಸ್ಕೃತಿಗಳನ್ನು ಪೋಷಿಸಿ, ಸಂರಕ್ಷಿಸಿದ ಮಹತ್ವದ ಕಾಯಗೈದಳು. ಅದಕ್ಕಾಗಿ ಒಂದು ಪಾಠ ಶಾಲೆಯನ್ನು ಗೆಜ್ಜಲಗಟ್ಟಿಯಲ್ಲಿ ಆರಂಭಿಸಿದಳು. ಈ ಪಾಠಶಾಲೆಯಲ್ಲಿ ಸಂಸ್ಕೃತಿ ಮತ್ತು ಕನ್ನಡ ಭಾಷೆಗೆ ಸಂಬಂಧಿಸಿದ ಸಾವಿರಾರು ಅಮೂಲ್ಯ ಗ್ರಂಥಗಳು ಸಂಗ್ರಹಿಸಲಾಯಿತು. ತಾಡವೋಲೆ, ಕಡತ, ಹಸ್ತಪ್ರತಿಗಳನ್ನು ದೂರದಿಂದ ತರಿಸಿ ಇಡಲಾಯಿತು. ಪಾಠಶಾಲೆಯಲ್ಲಿ ವ್ಯಾಕರಣ, ವೇದಾಂತ ಮುಂತಾದ ವಿಷಯಗಳನ್ನು ಬೋಧಿಸಲಾಗುತ್ತಿತ್ತು. ಈ ಪಾಠಶಾಲೆಯಲ್ಲಿ ಕಲಿಯಲು ಕರ್ನಟಕದ ಭಾಗದಿಂದ ವಿಶೇಷವಾಗಿ ಉತ್ತರ ಕರ್ನಾಟಕದಿಂದ ವಿದ್ಯಾರ್ಥಿಗಳು ಬರುತ್ತಿದ್ದರು. ಹುಬ್ಬಳ್ಳಿಯ ಸಿದ್ಧರೂಢಮಠದ ಶಿವಪುತ್ರಪ್ಪ ನವರು ಮತ್ತು ಅವರ ಸಮಕಾಲೀನ ಸ್ವಾಮಿಗಳು ಈ ಪಾಠಶಾಲೆಯ ವಿದ್ಯಾರ್ಥಿಗಳಾಗಿ ವ್ಯಾಸಂಗಮಾಡಿದ ಘನತೆ ಈ ಶಾಲೆಗಿದೆ.

ಕಂದಗಲ್ ಪರ್ವತ ಶಾಸ್ತ್ರಿಗಳು ಸಂಸ್ಕೃತ ಭಾಷೆಯಲ್ಲಿ ಘನವಿದ್ವಾಂಸರು. ಇವರ ವಿದ್ವತ್‌ನಿಂದ ಸಂಸ್ಕೃತ ಪಾಠಶಾಲೆ ಅಭಿವೃದ್ಧಿ ಪಡೆಯಿತು. ವೇದ – ಶಾಸ್ತ್ರ – ಪುರಾಣಗಳೂ, ಜ್ಯೋತಿಷ್ಯ – ವ್ಯಾಕರಣಗಳು, ಕಾವ್ಯ – ನಾಟಕಗಳೂ ಹಾಗೂ ಧರ್ಮ ಸಿದ್ಧಾಂತದ ಗ್ರಂಥಗಳೂ ಪಾಠಶಾಲೆಯಲ್ಲೂ ಸಂಗ್ರಹಿಸಲಾಗಿತ್ತು. ಇದೊಂದು ಸಾಂದರ್ಭಿಕ ಗ್ರಂಥಭಂಡಾರದಂತಿತ್ತು. ವೀರಶೈವ ಧರ್ಮಕ್ಕೆ ಘನತೆಯನ್ನು ತಂದುಕೊಟ್ಟ ೧೯೦೨ ರಲ್ಲಿ “ಪರಳಿವ್ಯಾಜ್ಯ” ನ್ಯಾಯಾಲಯದಲ್ಲಿ ನಡೆದು ಅದಕ್ಕೆ ದೊರೆತ ವಿಜಯಕ್ಕೆ ಉಪಯೋಗಿಸಿದ ಸಂಸ್ಕೃತ ಗ್ರಂಥಗಳು ಗೆಜ್ಜಲಗಟ್ಟಿಯ ಸಂಸ್ಕೃತ ಪಾಠಶಾಲೆಯಿಂದ ಪಡೆದವುಗಳು. ಶಿವಯೋಗಮಂದಿರ ಸ್ಥಾಪನೆಗೆ ಮುಂದೆ ಈ ಸಂಸ್ಕೃತ ಪಾಠಶಾಲೆ ಸ್ಥಾಪನೆಗೊಂಡಿದ್ದು ಅದರ ಶ್ರೇಷ್ಠತೆಯಾಗಿದೆ.

ಮಠಮಂದಿರಗಳಿಗೆ ಇನಾಮ್

ರಾಣಿ ಲಕ್ಷ್ಮೀದೇವಿಯ ತನ್ನ ಜಹಗೀರ್ ಗ್ರಾಮಗಳಲ್ಲಿರುವ ೧೪ – ೧೫ ಮಠ, ದೇವಾಲಯಗಳಲ್ಲಿ ನಿತ್ಯ ಆರಾಧನೆ ಮತ್ತು ಪೂಜಾಕೈಂಕರ್ಯಗಳು ನಡೆಯಲು ಅವುಗಳಿಗೆ ಭೂಮಿಯನ್ನು ಇನಾಮ್ ಆಗಿ ನೀಡಿದರು. ಸಾವಿರಾರು ಎಕರೆ ಭೂಮಿಯನ್ನು ರಾಣಿ ಇನಾಮ್‌ನೀಡಿ ಪೂಜಾಪ್ರಸಾದಗಳು ಜರುಗಲು ಪ್ರೋತ್ಸಾಹಿಸಿದಳು. ತಮ್ಮ ಮನೆತನದ ಕುಲದೈವನಾದ ಕೊಳ್ಳದ ಅಮರೇಶ್ವರ ದೇವಸ್ಥಾನಕ್ಕೆ ೨೦೦ ಎಕರೆ ಭೂಮಿಯನ್ನು ನೀಡಿ ತನ್ನ ದೈವಭಕ್ತಿಯನ್ನು ಮೆರೆದಳು ಶ್ರೀರಾಘವೇಂದ್ರಸ್ವಾಮಿ ಮಠಕ್ಕೆ ೧೪ ಎಕರೆ ಭೂಮಿ ಇನಾಮ್‌ನೀಡಿ ಪರಧಮ್ ಸಮಾನತೆಯನ್ನು ತೋರಿಸಿಕೊಟ್ಟಳು. ಅದರಂತೆ ಜಡಿಸ್ವಾಮಿ ಮಠ, ರುದ್ರಸ್ವಾಮಿ ಮಠ, ಕೋಡಿಮಠ, ಸಾಲಿಮಠ, ಉದ್ದಾನಮಠ, ಪಟ್ಟದ ಕಾಂತಿಮಠ ಗಳಿಗೆ ಸಾಕಷ್ಟು ಇನಾಮ್ ಹಾಕಿಕೊಟ್ಟಿರುವಳು. ಇವುಗಳಲ್ಲದೆ ನಂದವಾಡಿಗೆ ಸ್ವಾಮಿಗಳು, ಹಲದಿಮಾನ್ ಸ್ವಾಮಿಗಳು, ಪರ್ವತಶಾಸ್ತ್ರಿಗಳು ಮೊದಲಾದ ಮಠದ ಸ್ವಾಮಿಗಳಿಗೆ ಭೂಮಿ ನೀಡಿ ಸತ್ಕರಿಸಿದಳು ಬಳ್ಳಾರಿಯ ಸಕ್ರಿ ಕರಡೆಪ್ಪ ಪಾಠಶಾಲೆ ಮತ್ತು ಜೆಂಗಮ ದಾಸೋಹ ಮೂರ್ತಿಗಳಿಗೆ ಭೂಮಿಯನ್ನು ಇನಾಮ್‌ನೀಡಿ ಅವರನ್ನು ಪೋಷಿಸಿದ ಗೌರವ ರಾಣಿಗೆ ಸಲ್ಲುತ್ತದೆ.

ಮುಗಿದ ರಾಣಿಯ ಇಹಲೋಕದ ಮಣಿಹ

ರಾಣಿ ಲಕ್ಷ್ಮಿದೇವಿ ಗೆಜ್ಜಲಗಟ್ಟ ನಾಡಗೌಡರು ಮನೆತನದ ರಾಣಿಯಾಗಿ ಭೋಗಜೀವನ ಹಾಗೂ ಅಧಿಕಾರದ ಅಂತಸ್ತಿನ ಸುಖವನ್ನು ಅನುಭವಿಸಿ, ಮಹಾತ್ಮದ ದಶಗಿನ ಭಾಗ್ಯದಿಂದ ಭೋಗಜೀವನದಿಂದ ವೈರಾಗ್ಯಕ್ಕೆ ತಿರುಗಿ ಶರಣರ ಜೀವನವನ್ನು ಬಾಳಿದ ಅದ್ವಿತೀಯ, ಅಸಾಮಾನ್ಯ ವ್ಯಕ್ತಿತ್ವವನ್ನು ಪಡೆದು ಲಕ್ಷ್ಮಿದೇವಮ್ಮನವರು ಇಹ ಮತ್ತು ಪದಗಳೆರಡಕ್ಕೂ ಒಪ್ಪುವರೀತಿ ಕಾರ್ಯಗೈದು ಇಸ್ವಿ ೧೯೦೬ ೧೩೧೫ ಫಸಲಿ ರಲ್ಲಿ ಇಹಲೋಕ ಮಣಿಹವನ್ನು ಮುಗಿಸಿದಳು. ರಾಣಿಯ ಸಮಾಧಿ ತಾನು ಗುರುವಾಗಿ ಸ್ವೀಕರಿಸಿದ್ದ ಕೋಡಿಹಾಳಮಠದ ಬಸವಲಿಂಗಸ್ವಾಮಿಗಳು ಗದ್ದುಗೆಯ ಪಕ್ಕದಲ್ಲಿ ರಾರಾಜಿಸುತ್ತದೆ. ಅವುಗಳನ್ನು ಗಜ್ಜಲಗಟ್ಟಿಯಲ್ಲಿ ಇಂದಿಗೂ ನೋಡಬಹುದು.

ಇಂದಿನ ನಾಡಗೌಡರು ಮತ್ತು ಅಮೂಲ್ಯ ಪ್ರಾಚೀನ ವಸ್ತುಗಳು

ಗೆಜ್ಜಲಗಟ್ಟಿ ದೇಸಾಯಿ ಮನೆತನದ ವಂಶಜರು ಗೆಜ್ಜಲಗಟ್ಟಿಯಲ್ಲಿ ವಾಸವಾಗಿದ್ದಾರೆ. ದೊಡ್ಡಬಸವಂತರಾವ್ ನಾಡಗೌಡರಿಗೆ ನಾಲ್ಕನೆಯ ಹೆಂಡತಿಯಿಂದ ವೆಂಕಟರಾವ್ ನಾಡಗೌಡರು ಜನಿಸಿದರು. ಇವರ ಕಾಲದಲ್ಲಿ ನಾಡಗೌಡ ಮನೆತನದ ಅಭಿವೃದ್ಧಿ ಹೊಂದಿ ಪ್ರಸಿದ್ಧವಾಯಿತು. ಈ ವೆಂಕಟರಾವ್ ನಾಡಗೌಡರಿಗೆ ಕೌಲೂರು ನಾಡಗೌಡ ಮನೆತನದ ಸಿದ್ಧಮ್ಮ ಪತ್ನಿಯಿಂದ ರಾಜಾ ಶರಣಬಸವರಾಜ ಜನಿಸಿದರು. ಅವರ ಧರ್ಮಪತ್ನಿ ಬಸವರಾಜೇಶ್ವರಿಯವರು ಇವರು ಕರ್ನಾಟಕ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರಗಳಲ್ಲಿ ಸಚಿವರಾಗಿ ಸೇವೆಸಲ್ಲಿಸಿದ್ದಾರೆ. ರಾಯಚೂರು ಮತ್ತು ಬಳ್ಳಾರಿ ಉಭಯ ಜಿಲ್ಲೆಗಳ ರಾಜಕೀಯರಂಗದಲ್ಲಿ ಹಿರಿಯರಾಜಕಾರಣಿಯಾಗಿ ಪ್ರಭಾವ ಬೀರಿದ್ದಾರೆ. ಇವರ ಮಕ್ಕಳು, ಗೆಜ್ಜಲಗಟ್ಟ, ಧಡೇಸೂಗೂರು ಮತ್ತು ಬಳ್ಳಾರಿಗಳಲ್ಲಿ ವಾಸವಾಗಿ ಮನೆತನದ ಆಸ್ತಿ ಅಂತಸ್ತನ್ನು ಕಾಪಾಡಿಕೊಂಡು ಬಂದಿದ್ದಾರೆ.

ನಾಡಗೌಡ ಮನೆತನದ ಅಮೂಲ್ಯ ವಸ್ತುಗಳು ಈಗಲೂ ಇವೆ. ವಿಜಯನಗರದ ಅರಸರಕಾಲದಲ್ಲಿ ಈ ಮನೆತನದವರು ಯುದ್ಧವೊಂದರಲ್ಲಿ ತೋರಿಸಿದ ಶೌರ್ಯ ಸಾಹಸಕ್ಕೆ ಮೆಚ್ಚಿ ವಿಜಯನಗರದ ಅರಸರು ಅವರಿಗೆ ಕೊಟ್ಟ ಕೊರಳ ಚಂದ್ರಹಾರ, ಛತ್ರಿ ಚಾಮರ, ಡಂಕ, ನಗಾರಿ, ನೌಬತ್ತು ಮತ್ತು ಪಲ್ಲಕ್ಕಿಗಳನ್ನು ಇಂದಿಗೂ ಸುರಕ್ಷಿತವಾಗಿ ಕಾಪಾಡಿಕೊಂಡು ಬಂದಿದ್ದಾರೆ. ಅಂದು ಯೋಗಾಸನ ಮಾಡುತ್ತಿದ್ದ ಪಾಠಶಾಲೆಯ ಮುದ್ರೆ ಇರುವ ದೊಡ್ಡ ದೊಡ್ಡ ತಾಮ್ರದ ಹಂಡೆಗಳು ಇಂದಿಗೂ ನೋಡಿದಾಗ ನಮಗೆ ಸೋಜಿಗವೆನಿಸುತ್ತಿದೆ.

ಗೆಜ್ಜಲಗಟ್ಟಿ ದೇಸಾಯಿಗಳ ಇತಿಹಾಸ ರೋಚಕ ಹಾಗೂ ಅದ್ಭುತ ಸಾಧನೆಗಳಿಂದ ಇತಿಹಾಸಪ್ರಿಯರಿಗೆ ಕುತೂಹಲಕಾರಿಯಾಗಿದೆ.