ಪ್ರಾಚೀನ ಮತ್ತು ಮದ್ಯಕಾಲೀನ ಕರ್ನಾಟಕದ ವಿವಿಧ ಸಾಮಂತ ಅರಸು ಮನೆತನಗಳಲ್ಲಿ ಸಿಂದವಂಶವೂ ಒಂದು. ಕ್ರಿ.ಶ. ಏಳನೆಯ ಶತಮಾನದಿಂದ[1] ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಕಾಣಿಸಿಕೊಳ್ಳುವ ಇವರು, ಹತ್ತನೆಯ ಶತಮಾನದಿಂದೀಚೆಗೆ ವಿವಿಧ ಶಾಖೆಗಳಾಗಿ ರಾಜ್ಯಭಾರ ನಡೆಸಿದ್ದಾರೆ. ಈ ಶಾಖೆಗಳಲ್ಲಿ ಕುರುಗೋಡು ಸಿಂದಮನೆತನವೂ ಒಂದು

ಸಿಂದರ ಮೂಲ

ಸಿಂದರು ಮೂಲತಃ ನಾಗಜನಾಂಗಕ್ಕೆ ಸೇರಿದ ದ್ರಾವಿಡ ಮೂಲದವರು. ಅವರು ತಮ್ಮನ್ನು ನಾಗವಂಶೋದ್ಭವ[2], ಫಣೀಂದ್ರ ವಂಶೋದ್ಭವ[3], ಫಣೀಂದ್ರ ಕುಳಸಂಭವ[4], ಭೋಗೀಂದ್ರ ವಂಶೋದ್ಭವ[5], ಫಣೀವಂಶ[6], ನಾಗರಾಜ ವಂಶೋದ್ಭವ[7]ರೆಂದು ಕರೆದುಕೊಂಡಿದ್ದಾರೆ. ಕರ್ನಾಟಕದ ಪ್ರಾಚೀನ ಅರಸು ಮನೆತನಗಳಾದ ಸೇಂದ್ರಕರು, ಅಳುಪರು, ಚುಟುಕುಲದವರೂ ನಾಗವಂಶಕ್ಕೆ ಸೇರಿದ್ದಾರೆ. ಆದ್ದರಿಂದ ನಾಗಜನಾಂಗಕ್ಕೆ ಸೇರಿದ ಸಿಂದರೂ ಕರ್ನಾಟಕ ಮೂಲದವರೆಂಬುದು ಸ್ಪಷ್ಟ.[8]

ನಾಗರಾಧನೆ ಬಹಳ ಪ್ರಾಚೀನ ಕಾಲದಿಂದಲೇ ಕರ್ನಾಟಕದಲ್ಲಿ ಆಚರಣೆಯಲ್ಲಿತ್ತು. ಇದು ಆರ್ಯರಿಗಿಂತ ಹಿಂದೆಯೇ ಭಾರತಕ್ಕೆ ಬಂದ ಸಿಧಿಯನ್ ಗುಂಪಿನ ಜನರ ಧರ್ಮವಾಗಿರಬೇಕೆಂದು ಊಹಿಸಲಾಗಿದೆ. ಕ್ರಿ.ಶ. ಎರಡನೆಯ ಶತಮಾನದ ಬನವಾಸಿ ಶಾಸನದಲ್ಲಿ ನಾಗಶ್ರೀ ಎನ್ನುವವಳು ನಾಗಪ್ರತಿಮೆಗೆ ದತ್ತಿ ಬಿಟ್ಟಿದುದನ್ನು ಹೇಳಿದೆ. ಸಿಂದರು ತಮ್ಮನ್ನು ನಾಗವಂಶದವರೆಂದು ಹೇಳಿಕೊಂಡಿರುವುದರಿಂದ ಇವರ ಮೂಲ ಕರ್ನಾಟಕವೇ ಆಗಿರಬೇಕು.

ನಾಗ – ನಾಗರು – ನಾಗರಖಂಡಗಳು ಕ್ರಮವಾಗಿ ಜನ – ವಂಶ – ಪ್ರದೇಶವನ್ನು ಸೂಚಿಸುವಂತೆ ಸಿಂದ – ಸಿಂದರು ಸಿಂದವಾಡಿಗಳು ಅದೇ ಅರ್ಥವನ್ನು ಹೊಂದಿವೆ. ನಾಗವಂಶದ ಸೇಂದ್ರಕರು ನಾಗರ ಖಂಡದಲ್ಲಿ ಅಧಿಕಾರಕ್ಕೆ ಬಂದಂತೆ ಸಿಂದವಂಶದ ಅರಸರು ಸಿಂದವಾಡಿಯಲ್ಲಿ ರಾಜ್ಯಭಾರ ನಡೆಸಿವೆ. ಕರ್ನಾಟಕದಲ್ಲಿ ಕಾಣಸಿಗುವ ಸಿಂದ ಹೆಸರಿನ ಊರುಗಳು ಇವರ ನೆಲೆಗಳಾಗಿರಬೇಕು. ಉದಾಹರಣೆಗೆ ಸಿಂಧನೂರು, ಸಿಂದಗಿ, ಸಿಂದವಾಳ, ಸಿಂದಿಗೇರಿ ಮುಂತಾದವುಗಳನ್ನು ಇಲ್ಲಿ ಹೆಸರಿಸಬಹುದು.

ಸಿಂದ ಪದದ ಅರ್ಥ

ಸಿಂದ ಪದದ ಮೂಲವು ಚಿಂದ ಆಗಿರಬೇಕು ಇಂದಿನ ಆಂಧ್ರಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಚಿಂದ ಹೆಸರಿನ ಅರಸರು ಆಳಿರುವ ವಿವರಗಳು ಸಿಗುತ್ತವೆ. ದ್ರಾವಿಡ ಭಾಷೆಯಲ್ಲಿ ಚ>ಸ ಬದಲಾವಣೆ ಸಹಜವಾಗಿರುವುದನ್ನು ಕಾಣುತ್ತೇವೆ. ಈಗಲೂ ಹಳ್ಳಿಗಳಲ್ಲಿ ಸಿಂಧನೂರನ್ನು ಚಿನ್ನೂರು ಎಂದು ಕರೆಯುವುದನ್ನು ಕಾಣುತ್ತೇವೆ. ಆದ್ದರಿಂದ ಚಿಂದ ಪದವೆ ಮುಂದೆ ಸಿಂದ ಎಂದು ಬದಲಾಗಿರಬೇಕು.

ಕನ್ನಡ ನಿಘಂಟುಗಳಲ್ಲಿ ‘ಸಿಂದ’ ಪದಕ್ಕೆ ‘ಪತಾಕೆ’, ‘ಧ್ವಜ’, ‘ಭಾವುಟ’, ಇವುಗಳನ್ನು ಹೊಂದಿದ ಅರಸ ಎಂಬ ಅರ್ಥಗಳನ್ನು ನೀಡಲಾಗಿದೆ. ಇವು ರಾಜ ಚಿಹ್ನೆಗಳನ್ನು ಸೂಚಿಸುತ್ತ ವಾದರೂ ಆ ಪದದ ಮೂಲ ಅರ್ಥವನ್ನು ಹೇಳಲಾರವು. ಸಿಂಧಿಯ, ಸಿಂಧ್ಯ ಮೊದಲಾದ ಅಡ್ಡ ಹೆಸರಿನ (Surname) ಜನರು ಕರ್ನಾಟಕ, ಮಹಾರಾಷ್ಟ್ರ, ಮತ್ತು ಮಧ್ಯಪ್ರದೇಶಗಳಲ್ಲಿ ಕಾಣಸಿಗುತ್ತಾರೆ. ಬಹುಶಃ ಇವರೆಲ್ಲ ಸಿಂದ ಜನಾಂಗದವರಾಗಿರಬೇಕು. ಈ ಎಲ್ಲ ಮನೆತನಗಳ ಸಮಾಜಿಕ ಅಧ್ಯಯನ ನಡೆದರೆ ಉತ್ತಮ ಫಲಿತಗಳು ಸಿಗಬಹುದು.

ಸಿಂದವಂಶದ ಮೂಲಪುರುಷ

ಪ್ರಾಚೀನ ಕರ್ನಾಟಕದ ರಾಜರು ತಾವು ಮೂಲತಃ ದೈವೀಪುರಷನೊಬ್ಬನಿಂದ ಇಳಿದು ಬಂದವರೆಂದು ಹೇಳಿಕೊಳ್ಳುತ್ತಾರೆ. ಸಿಂದರು ಇದಕ್ಕೆ ಹೊರತಾಗಿಲ್ಲ. ಇವರು ತಮ್ಮ ವಂಶದ ಮೂಲಪುರುಷ ನಿಡುದೋಳ ಸಿಂದನೆಂದು ಹೇಳುತ್ತಿದ್ದರು. ಆತನ ಅವತಾರದ ಬಗ್ಗೆ ಈ ವಂಶದ ವಿವಿಧ ಶಾಖೆಯವರಲ್ಲಿ ಒಮ್ಮತವಿಲ್ಲ ನಿಡುದೋಳಸಿಂದನ ಮಕ್ಕಳ ಬಗೆಗೂ ಶಾಸನಗಳಲ್ಲಿ ಒಮ್ಮತವಿಲ್ಲ. ಭೈರವಮಟ್ಟಿ ಶಾಸನ[9]ದಲ್ಲಿ ಮೂವರು ಮಕ್ಕಳ ಉಲ್ಲೇಖವಿದ್ದರೆ, ರಂಜೋಲ ಶಾಸನ[10]ದಲ್ಲಿ ನಾಲ್ಕು ಜನರು ಕಾಣಿಸಿಕೊಂಡಿದ್ದಾರೆ. ಈ ಶಾಸನದ ಮತ್ತೊಂದು ವಿಶೇಷವೆಂದರೆ ಪ್ರಭುಸೇವ್ಯ, ಸತ್ಯಸೇವ್ಯ, ಜಗತ್‌ಸೇವ್ಯ ಮತ್ತು ಬುಧಸೇವ್ಯರೆಂದು ಅವರ ಹೆಸರನ್ನು ಉಲ್ಲೇಖಿಸಿರುವುದು. ‘ಶಸ್ತ್ರಶಾಸ್ತ್ರಗಳೊಳತಿಪ್ರವೀಣರಾಗಿದ್ದ’ ಇವರು ಕ್ರಮವಾಗಿ ಬಾಗಡೆಗೆ, ಫಳಿಯಂಡ ಕ್ಷಿತಿಮಂಡಲ, ಅಟ್ಟಳೆ ನಾಡು ಮತ್ತು ಬಳ್ಳರೆನಾಡುಗಳಲ್ಲಿ ಆಳತೊಡಗಿದರಂತೆ[11] ಮೂಲ ಸಿಂದ ಮನೆತನವು ವಿವಿಧ ಶಾಖೆಗಳಾಗಿ ಕವಲೊಡೆಯಲು ಏನು ಕಾರಣವೊ ತಿಳಿಯದು. ನಿಡುದೋಳ ಸಿಂದನು ತನ್ನ ಆಳ್ವಿಕೆಗೆ ಒಳಪಟ್ಟು ವಿಶಾಲವಾದ ಪ್ರದೇಶದ ಆಡಳಿತವನ್ನು ನೋಡಿಕೊಳ್ಳಲು ತನ್ನ ಮಕ್ಕಳನ್ನು ಬೇರೆ ಬೇರೆ ಸ್ಥಳಗಳಿಗೆ (ಪ್ರಾಂತ) ಕಳಿಸಿಕೊಟ್ಟನು. ಬಹುಶಃ ಇವರು ಅಲ್ಲಿಯೇ ಸ್ಥಿರವಾಗಿ ನೆಲೆ ನಿಂತಾಗ ಸಿಂದವಂಶವು ವಿವಿಧ ಶಾಖೆಗಳಾಗಿ ಕವಲೊಡೆದಿರಬೇಕು.

ಕುರುಗೋಡು ಸಿಂದರು

ನಿಡುದೋಳ ಸಿಂದನ ಮಗ ಬುಧಸೇವ್ಯನು ಬಳ್ಳರೆ ನಾಡನ್ನು ಆಳುತ್ತಿದ್ದನೆಂದು ರಂಜೋಲ ಶಾಸನ ಹೇಳಿರುವುದರಿಂದ, ಇವನೇ ಈ ಶಾಖೆಯ ಮೂಲಪುರುಷನೆಂದು ಹೇಳಬೇಕಾಗುತ್ತದೆ. ಆದರೆ ಇವನ ಆಳ್ವಿಕೆಯ ವಿವರಗಳು ಮಾತ್ರ ಸ್ಪಷ್ಟವಾಗುವುದಿಲ್ಲ.

ಅರಿಬಲ್ಲಿ ದಾಗ್ರ

ಕ್ರಿ.ಶ. ೯೮೭ ಕುಡತಿನಿ ಶಾಸನ “ಶ್ರೀಮದರಿಬಲ್ಲದಾಗ್ರನುಂ ಕುರುಂಗೋಡ ಮುನೂರ್ವ್ವಮ್ಮ ಹಾಜನರು ವೊಡತಿವ್ದಿ” ರೆಂದು ಹೇಳಿದೆ.[12] ಆದ್ದರಿಂದ ಕುರುಗೋಡು ಸಿಂದಮನೆತನವು ಇವನ ಆಳ್ವಿಕೆಯೊಂದಿಗೆ ಪುನರಾಂಭಗೊಂಡಿತೆಂದು ಹೇಳಬಹುದು. ಕ್ರಿ.ಶ,. ೯೪೭ರ ಬಲ್ಲಕುಂದೆಯ ಅಪ್ರಕಟಿತ ಶಾಸನ [ದೇಮ] ಪಯ್ಯ ತನ್ನ ನೊವಿ [ಂ] ಬ ಮಾತ ಕೇಳ್ದು ಪೆರ್ಗ್ಗಡೆ [ಜಿ]ನಮಯ್ಯ ಸಿನ್ದರ x x x x ನ ತಾಗಿ ಕೊನ್ದು ಸ್ವರ್ಗಸ್ತನಾದನೆಂದು ಹೇಳಿದೆ.[13] ಇಲ್ಲಿನ ತ್ರುಟಿತ ಭಾಗವನ್ನು ಕಾಲದ ದೃಷ್ಟಿಯಿಂದ ಹತ್ತಿರವಿರುವ ಮೆಲಿನ ಕುಡತಿನಿ ಶಾಸನದ ಸಹಾಯದಿಂದ “ಸಿನ್ದರಿಬಲ್ಲಿದಾಗ್ರ” ಎಂದು ಕಟ್ಟಿಕೊಡಲವಕಾಶವಿದೆ. ಇದು ನಿಜವಾದರೆ ಸುಮಾರು ೨೦ ವರ್ಷಗಳವರೆಗೆ ರಾಜ್ಯಭಾರ ನಡೆಸಿದ ಅರಿಬಲ್ಲಿದಾಗ್ರನು ನೊಳಂಬರ ಆಕ್ರಮಣಕ್ಕೆ ತುತ್ತಾಗಿ ಮಡಿದನೆಂದು ಹೇಳಬೇಕಾಗುತ್ತದೆ.

ದೇಮಪಯ್ಯ ನನ್ನಿ ನೊಳಂಬನಿಗೆ ಸಿನ್ದ ಅರಿಬಲ್ಲಿದಾಗ್ರನ ಮೇಲೆ ಯುದ್ಧ ಸಾರಲು ಏನು ಕಾರಣವೋ ತಿಳಿಯದು. ಬಹುಶಃ ರಾಷ್ಟ್ರಕೂಟರಿಗೂ ಕಲ್ಯಾಣ ಚಾಲುಕ್ಯರಿಗೂ ನಡೆದ ರಾಜಕೀಯ ಹೋರಾಟದಲ್ಲಿ ರಾಷ್ಟ್ರಕೂಟರ ನಿಷ್ಠರಾಗಿದ್ದ ಕುರುಗೋಡು ಸಿಂದರು, ಸಿಂದರಸರ ಮೇಲೆ ಚಾಲುಕ್ಯರ ಪರವಾಗಿದ್ದ ನೊಳಂಬರು ಯುದ್ಧ ನಡೆಸಿರಬೇಕು. ಮುಂದೆ ಕ್ರಿ.ಶ. ೯೩೩ ಚಾಲುಕ್ಯರು ಅಧಿಕಾರಕ್ಕೆ ಬಂದಾಗ, ತಮಗೆ ರಾಜ್ಯ ಸಂಪಾದೆಯಲ್ಲಿ ನೆರವು ನೀಡಿದ್ದು ನೊಳಂಬರಿಗೆ ನೊಳಂಬವಾಡಿ ಪ್ರಾಂತದ ಒಡೆತನವನ್ನು ನೀಡಿರುವುದು, ಇದನ್ನು ಸಮರ್ಥಿಸುವಂತಿದೆ. ಆದರೆ ರಾಷ್ಟ್ರಕೂಟರ ಸಾಮಂತರಾಗಿದ್ದ ಕುರುಗೋಡು ಸಿಂದರು ಕೆಲಕಾಲ ಅಜ್ಞಾತವನ್ನು ಅನುಭವಿಸಬೇಕಾಯಿತು.

ಮಹಾಸಾಮಂತ ಅರಿಬಲ್ಲದಾಗ್ರನು ‘ವಿಜಯ ಪಟಹ ವಿಶೇಷ, ಫಣೀಂದ್ರ ಕುಲಸಂಭವ, ಅಹೀಂದ್ರ ಮಕರಧ್ವಜ, ವ್ಯಾಘ್ರ ಮೃಗ ಲಾಂಛನ’ ಮೊದಲಾದ ಬಿರುದುಗಳನ್ನು ಧರಿಸಿದ್ದನು. ಆದರೆ ಇವನ ಆಳ್ವಿಕೆಯ ಹೆಚ್ಚಿನ ವಿವರಗಳು ದೊರಕುವುದಿಲ್ಲ.

ಉದಯಾದಿತ್ಯ

ಅರಿಬಲ್ಲದಾಗ್ರನ ಆಳ್ವಿಕೆಯ ನಂತರ ಸುಮಾರು ೭೮ ವರ್ಷಗಳ ವರೆಗೆ ಈ ಮನೆತನದ ಇತಿಹಾಸ ಅಸ್ಪಷ್ಟವಾಗಿದೆ. ಮುಂದೆ ಕ್ರಿ.ಶ. ೧೦೪೫ರ ಹಾವಿನಹಾಳ ಶಾಸನದಲ್ಲಿ ಉದಯಾದಿತ್ಯನ ಉಲ್ಲೇಖವಿದೆ.[14] ಅವನು ಕಲಿಯುಗ ರೇವಂತ, ನನ್ನಿಗಾಶ್ರಯ, ಸಮರಮಹೇಶ್ವರ, ಮತ್ತಗಜಮ xxxx, ಬಿರುದರ ಜವ, ಬಿರುದ ಮನ್ನೆಯವೇಶ್ಯಾಭುಜಂಗ ಮೊದಲಾದ ಬಿರುದುಗಳನ್ನು ಧರಿಸಿದ್ದನು. ಆದರೆ ಇವನ ಆಳ್ವಿಕೆಯ ಹೆಚ್ಚಿನ ವಿವರಗಳೂ ಲಭ್ಯವಾಗಿಲ್ಲ. ಮುಂದೆ ಈತನ ಮಗನಾಗಿರಬಹುದಾದ ಚೋಕರಸನು ಪಟ್ಟಕ್ಕೆ ಬಂದನು.

ಚೋಕರಸ

ಸಿರುಗುಪ್ಪದ ಕ್ರಿ.ಶ. ೧೦೯೨ರ ಶಾಸನದಲ್ಲಿ ಇವನ ಉಲ್ಲೇಖವಿದೆ.[15] ಆರನೆಯ ವಿಕ್ರಮಾದಿತ್ಯನ ಸಾಮಂತನಾಗಿದ್ದ ಚೋಕರಸನು ವಿಜಯಲಕ್ಷ್ಮೀಕಾಂತ, ವೀರಮಹೇಶ್ವರ, ಶೌಚಾಂಜನೇಯ, ನುಡಿದಂತೆ ಗಂಡ, ತೊಡ xxx ಲುಗಂಡ, ವಿದಗ್ದಗಣಿಕಾಜನ ಹೃದಯ ಸೂಱೆಕಾರ, ಅಯ್ಯನಂಕಕಾರ, ಅಯ್ಯನಸಿಂಗ ಸತ್ಯಕಾನೀನ ಮೊದಲಾದ ಬಿರುದುಗಳನ್ನು ಧರಿಸಿದ್ದನು. ಚೋಕರಸನ ನಂತರ ಅವನ ಮಗನಾಗಿರಬಹುದಾದ ಒಂದನೆಯ ಭೀಮನು ಪಟ್ಟಕ್ಕೆ ಬಂದನು.

ಒಂದನೆಯ ಭೀಮ : ಕುರುಗೋಡು ಸಿಂದರಸರ ಚರಿತ್ರೆಯನ್ನು ಮೊದಲ ಬಾರಿಗೆ ಕಟ್ಟಿಕೊಟ್ಟ ಡಾ. ದಿನಕರ ದೇಸಾಯಿ ಅವರು ಕ್ರಿ.ಶ. ೧೧೪೨ರ ಕೋಳೂರ ಶಾಸನದಲ್ಲಿ ಬರುವ ಇಮ್ಮಡಿ ಭೀಮನ ಉಲ್ಲೇಖದ ಮೇಲಿಂದ ಈ ವಂಶದಲ್ಲಿ ಇವನಿಗಿಂತ ಮೊದಲು ಒಂದನೆಯ ಭೀಮನು ಆಳಿರಬೇಕೆಂದು ಊಹಿಸಿದ್ದರು.[16] ಈಚೆಗೆ ದೊರೆತ ಕೊಂಚಗೆರೆ ಶಾಸನ[17] ಡಾ. ದೇಸಾಯಿಯವರ ಊಹೆಗೆ ಆಧಾರ ಒದಗಿಸಿಕೊಟ್ಟಿದೆ.

ಶಾಸನಗಳಲ್ಲಿ ಭೀಮ, ಬೀವರಸ ಎಂದು ಕಾಣಿಸಿಕೊಳ್ಳುವ ಇವನ ಮೊದಲ ಉಲ್ಲೇಖ ಕ್ರಿ.ಶ.೧೧೦೨ರ ಸಿರುಗುಪ್ಪ ಶಾಸನ[18]ದಲ್ಲಿದೆ. ಈತನ ರಾಣಿ ಮೂಕಾಣಾಂಬಿಕೆ ಇವರಿಗೆ ಸೋವಿದೇವನೆಂಬ ಮಗನು ಜನಿಸಿದನು.[19] ಒಂದನೆಯ ಭೀಮನ ಯಾವ ಬಿರುದುಗಳೂ ಶಾಸನಗಳಲ್ಲಿ ಉಲ್ಲೇಖವಾಗಿಲ್ಲ. ಬಹುಶಃ ಇವನು ಪ್ರಬಲ ಅರಸನಾಗಿರದೆ ಪಿತ್ರಾರ್ಜಿತವಾಗಿ ಬಂದ ಪ್ರಾಂತವನ್ನು ಮುನ್ನಡೆಸಿಕೊಂಡು ಹೋಗುವಷ್ಟಕ್ಕೇ ಸೀಮಿತನಾಗಿರಬೇಕು.

ಸೋವಿದೇವ ಕುರುಗೋಡು ಸಿಂದವಂಶದ ಕೀರ್ತಿ ಪ್ರತಿಷ್ಠೆ, ಸ್ಥಾನ, ಮಾನಗಳನ್ನು ಉನ್ನತಿಗೇರಿಸಿ ಪ್ರಾಂತೀಯ ಅರಸರ ಬಂಧನದಿಂದ ಮುಕ್ತರನ್ನಾಗಿ ಮಾಡಿ, ಈ ಮನೆತನಕ್ಕೆ ಸುಭದ್ರವಾದ ತಳಪಾಯವನ್ನು ಹಾಕಿದ ಕೀರ್ತಿ ಸೋವಿದೇವನಿಗೆ ಸಲ್ಲುತ್ತದೆ. ಇದುವರೆಗೆ ಕೇವಲ ಮನ್ನೆಯ ಮಹಾಸಾಮಂತರಾಗಿದ್ದ ಕುರುಗೋಡು ಸಿಂದರು, ಸೋವಿದೇವನ ಕಾಲದಿಂದ ಮಹಾಮಂಡಳೇಶ್ವರರಾಗಿ ಪದೋನ್ನತಿಯನ್ನು ಹೊಂದಿದರು. ಇದರಿಂದ ನೊಳಂಬ ಪಲ್ಲವರ ಹಿಡಿತದಿಂದ ಕಳಚಿಕೊಂಡು, ನೇರವಾಗಿ ಚಕ್ರವತಿಗಳ ಸಂಪರ್ಕಕ್ಕೆ ಬಂದರು.

ಕ್ರಿ.ಶ. ೧೧೨೨ ರಲ್ಲಿ ಅಧಿಕಾರಕ್ಕೆ ಬಂದ ಸೋವಿದೇವನು ಕೇವಲ ಹತ್ತು ವರ್ಷ ಆಳ್ವಿಕೆಯನ್ನು ನಡೆಸಿದ್ದಾನೆ.[20] ಇವನಿಗೆ ಇಮ್ಮಡಿ ಭೀಮ, ಒಂದನೆಯ ರಾಚಮಲ್ಲ, ದೇವ, ಫಣಿರಾಜ ಮತ್ತು ಅಸ್ಪಷ್ಟ ವ್ಯಕ್ತಿಯೂ ಸೇರಿದಂತೆ ಐದು ಜನ ಪುತ್ರರು ಜನಿಸಿದರು.[21] ಆದರೆ ಇವರಲ್ಲಿ ಇಮ್ಮಡಿ ಭೀಮ ಮತ್ತು ರಾಚಮಲ್ಲರು ಪ್ರಸಿದ್ಧರಾಗಿದ್ದಾರೆ.

ಸೋವಿದೇವನು ಸಿಂದಕುಳಕಮಲ ಮಾರ್ತಂಡ, ಸಮರ ಪ್ರಚಂಡ, ವಿಮಳ ಯಶೋದ್ಭವ, ವಿಜಯಪಟು, ಪಟಹಘೋಷಣ, ಗುಣರತ್ನಭೂಷಣ, ನುಡಿದಂತೆ ಗಂಡ, ಸಾಹಸೋತ್ತುಂಗ ಗಾಶಲ ರಾಯಿಗ ಮೃಗಬೇಟೆಕಾರ, ಸತ್ಯವಿಖ್ಯಾತ, ಅಹಮ್‌ವೀರ, ವೈರಿಮದಾಮೋದ, ಉದ್ವೃತ್ತಾರಾತಿ ಮಂಡಳಿಕ ತಾರಕ ಷಡಾನನ ಸಾಹಸ ಪಂಚಾನನ ಮನುಜ ಮನೋಜ ಮೂರ್ತಿ, ಪಾತಾಳ ಚಕ್ರವರ್ತಿ, ಪರನಾರಿದೂರ ಮೊದಲಾದ ಬಿರುದುಗಳನ್ನು ಧರಿಸಿದ್ದನು.

ಇಮ್ಮಡಿ ಭೀಮ ಇವನ ಮೊದಲ ಉಲ್ಲೇಖ ಕ್ರಿ.ಶ. ೧೧೩೧ರ ಬೈಲೂರು ಶಾಸನದಲ್ಲಿದೆ.[22] ಅಲ್ಲಿ ಅವನನ್ನು ಸಿಂದ ಇಲ್ಲವೆ, ಸಿಂದರ ಸಾಮಾನ್ಯ ಪ್ರಶಸ್ತಿಗಳೊಂದಿಗೆ ಉಲ್ಲೇಖಿಸಿದೆ. ಕೇವಲ ‘ಬಳ್ಳಾರಿಯ ಬೀವರಸ’ ಎಂದು ಕರೆದಿರುವುದರಿಂದ ಡಾ. ದಿನಕರ ದೇಸಾಯಿ ಅವರು ಅವನನ್ನು ಕುರುಗೋಡು ಸಿಂದವಂಶದಿಂದ ಕೈಬಿಟ್ಟಿದ್ದಾರೆ. ಬಳ್ಳಾರೆಯು ಬಲ್ಲಿಕುಂದೆ ನಾಡಿನ ಒಂದು ಗ್ರಾಮ. ದಾನಬಿಡುವಾಗ ಬಹುಶಃ ಅವನು ಬಳ್ಳಾರಿ ನೆಲೆವೀಡಿನಲ್ಲಿದ್ದುದರಿಂದ ಶಾಸನವು ‘ಬಳ್ಳಾರೆಯ ಬೀವರಸ’ ಎಂದು ಕರೆದಿರಬೇಕು. ಇದಲ್ಲದೆ ಸಿಂದರ ಎಲ್ಲ ಪ್ರಶಸ್ತಿಗಳನ್ನು ಧರಿಸಿದ್ದ ಒಂದನೆಯ ರಾಚಮಲ್ಲನನ್ನು ‘ಬಳ್ಳಾರೆಯ ರಾಚಮಲ್ಲ’ ಎಂದು ಕರೆದಿರುವುದನ್ನೂ ಇಲ್ಲಿ ಸ್ಮರಿಸಬೇಕು.[23] ಈ ಬೀವರಸನು ಸೋವಿ ದೇವನ ಮಗನೆಂದು ಕೊಂಚಗೆರೆ ಶಾಸನ ಸ್ಪಷ್ಟವಾಗಿ ಹೇಳಿದೆ.[24] ಕೋಳೂರು ಶಾಸನ “ಆ ನಾಡಿಂಗಧಿನಾಥ ಶ್ರೀನಾರೀಕಾಂತನಮಳಗುಣಗಣನಿಳಯಂ ಭಾನುರುಚಿಸದೃಶತೇಜಂ ತಾನೆನೆ ಸಿಂದಕುಳತಿಳಕ ನಿರ್ಮಡಿಭೀಮಂ” ಎಂದು ಸ್ಪಷ್ಟವಾಗಿ ಹೇಳಿದ್ದರೂ[25] ಡಾ. ದೇಸಾಯಿ ಅವರು ಊಹಿಸಿರುವಂತೆ ಅವನು ಹೆಸರಿಗೆ ಮಾತ್ರ ಅರಸನಾಗಿದ್ದು,[26] ಆ ನಾಡಿನ ನಿಜವಾದ ದೊರೆ ಒಂದನೆಯ ರಾಚಮಲ್ಲನಾಗಿದ್ದನು. ಕ್ರಿ.ಶ. ೧೧೪೨ರ ಕೊಂಚಗೆರೆ ಶಾಸನ “ಆ ರಾಮಲ್ಲದೇವ ಶ್ರೀಮತ್ತಂನ ಪಿರಿಯರಸಿ ಮಾಕಲದೇವಿಯುಂ ತಾನುಂ ರಾಜ್ಯಂಗೆಯುತ್ತ ಮಿರೆ” ಎಂದು ಹೇಳಿರುವುದು ಇದನ್ನು ಸಮರ್ಥಿಸುತ್ತದೆ.[27]

ಇಮ್ಮಡಿ ಭೀಮನು ‘ಫಣಿವಂಶ ಕಮಳದಿನಪ, ಫಣಿವಂಸಾಭೋದಿವರ್ಧಮಾನ ಶಶಾಂಕ, ಫಣಿವಂಶ ಕುಮುದಚಂದ್ರ, ಫಣಿವಂಶ, ಲಲಾಟತಿಲಕ, ಅಮಳಗುಣನಿಲಯ, ಬಾನುರುಚಿಸದೃಶತೇಜ’ ಮೊದಲಾದ ಬಿರುದುಗಳನ್ನು ಧರಿಸಿದ್ದನು. ಸೋವಿದೇವನಿಗೆ ಬಹುಶಃ ಮಕ್ಕಳಿಲ್ಲದ್ದರಿಂದ ಮುಂದೆ ಆತನ ತಮ್ಮ ಒಂದನೆಯ ರಾಚಮಲ್ಲನು ಉತ್ತರಾಧಿಕಾರಿಯಾದನು.

ವೀರಶೈವ ಪ್ರಭಾವ

ಈವರೆಗಿನ ಅರಸರಿಗಿಂತ ಇನ್ನು ಮುಂದಿನ ಅರಸರಲ್ಲಿ ವೀರಶೈವ ಒಲವು ಸ್ಪಷ್ಟವಾಗಿ ಗೋಚರಿಸುತ್ತದೆ. ವೀರಶೈವ ಕಾವ್ಯಗಳಂತೂ ಈ ಅರಸರನ್ನು ಅಲ್ಲಲ್ಲಿ ಉಲ್ಲೇಖಿಸಿ, ಅವರ ಶರಣ ಪರಂಪರೆಯನ್ನು ಸಾರುತ್ತ ಹೋಗಿವೆ. ಇವುಗಳಲ್ಲಿ ಮೊದಲು ಎದ್ದು ಕಾಣುವನು ಒಂದನೆಯ ರಾಚಮಲ್ಲ.

ಒಂದನೆಯ ರಾಚಮಲ್ಲ ಕುರುಗೋಡು ಸಿಂದ ಮನೆತನದ ಅತ್ಯಂತ ಪ್ರಸಿದ್ಧಿ ಅರಸರಲ್ಲಿ ಒಬ್ಬ, ಶಾಸನಗಳು ಅವನನ್ನು ಬಳ್ಳಾರೆಯ ರಾಚಮಲ್ಲ,[28] ರಾಜಮಲ್ಲ,[29] ಪಿರಿಯರಾಚ ಮಲ್ಲ[30] ಎಂದು ಕರೆದಿವೆ. ಅಣ್ಣ ಇಮ್ಮಡಿ ಭೀಮನ ಕಾಲದಲ್ಲಿಯೇ ಆಡಳಿತದ ಅನುಭವ ಪಡೆದಿದ್ದ ರಾಚಮಲ್ಲನು ಜನತೆಗೆ ಸುಭದ್ರ ಸರಕಾರವನ್ನು ನೀಡಲು ಸಮರ್ಥನಾದವನು. ಕುರುಗೋಡು ಸಿಂದರಸರಲ್ಲಿಯೇ ಅತಿ ಹೆಚ್ಚಿನ ಅಂದರೆ ಸುಮಾರು ಹತ್ತು ಶಾಸನಗಳು ಇವನನ್ನು ಉಲ್ಲೇಖಿಸಿವೆ. ಇದರಿಂದ ಅವನ ಸ್ಥಾನಮಾನ, ಶಕ್ತಿ – ಸಾಮರ್ಥ್ಯಗಳು ವೇದ್ಯವಾಗುತ್ತವೆ.

ರಾಚಮಲ್ಲನಿಗೆ ಮಾಕಲದೇವಿ[31] ಮತ್ತು ಸೋವಲದೇವಿ[32]ಯರೆಂಬ ಇಬ್ಬರು ರಾಣಿಯರಿದ್ದರು. ಮಾಕಲದೇವಿಯನ್ನು ಶಾಸನವು ‘ಪಿರಿಯರಸಿ’ ಎಂದು ಕರೆದಿದೆ.[33] ಆದರೆ ಇವಳಿಗೆ ಮಕ್ಕಳಿಲ್ಲದ್ದರಿಂದ ಕೇವಲ ಪಿರಿಯರಸಿಯಾಗಿಯೇ ಉಳಿದಳು. ಸೋವಲದೇವಿಗೆ ಇರುಂಗೋಳ ಎಂಬ ಮಗನು ಜನಿಸಿದನು.[34] ಆದರೆ ಇವನು ಬಹುಶಃ ಅಕಾಲಮರಣಕ್ಕೆ ತುತ್ತಾಗಿದ್ದರಿಂದ ಇವನ ಮಗ ಎರಡನೆಯ ರಾಚಮಲ್ಲನು ಅಜ್ಜನಿಗೆ ಆಡಳಿತದಲ್ಲಿ ನೆರವಾಗತೊಡಗಿದನು.

ಈ ರಾಚಮಲ್ಲನು ಕ್ರಿ.ಶ. ೧೧೪೧ ರಿಂದ ಕ್ರಿ.ಶ. ೧೧೭೩ರವರೆಗೆ ಬದುಕಿದ್ದುದನ್ನು ಇಲ್ಲಿಯ ಶಾಸನಗಳು ಸ್ಪಷ್ಟಪಡಿಸಿವೆ. ಇವನ ಅಧಿಕಾರಾವಧಿಯಲ್ಲಿಯೇ ಅವನ ಮೊಮ್ಮ ಇಮ್ಮಡಿ ರಾಚಮಲ್ಲನು ಬಲ್ಲಿಕುಂದೆಯ ನಾಡಿನ ಆಡಳಿತದಲ್ಲಿ ತೊಡಗಿದ್ದನು. ಈ ಅಜ್ಜ – ಮೊಮ್ಮಗರಿಬ್ಬರೂ ಜೊತೆ ಜೊತೆಯಲ್ಲಿಯೇ ಆಳ್ವಿಕೆ ನಡೆಸುತ್ತ, ಆ ಕಾಲದ್ಲಿ ನಡೆದ ವಚನಕಾರರ ಚಳುವಳಿಯಿಂದ ಪ್ರಭಾವಿತರಾಗಿಬೇಕು. ಆದ್ದರಿಂದಲೇ ಶಾಂತಲಿಂಗ ದೇಶಿಕನು ತನ್ನ ಭೈರವೇಶ್ವರ ಕಾವ್ಯದ ಕಥಾಮಣಿಸೂತ್ರ ರತ್ನಾಕರದಲ್ಲಿ ಗಂಡುಗತ್ತರಿ ನಾಚಯ್ಯ, ಚಿಕ್ಕ ರಾಚಮಲ್ಲಯ್ಯ, ಮತ್ತು ರಾಚಮಲ್ಲಯ್ಯಗಳು ಕೂಡಿಕೊಂಡು ‘ಪ್ರಚುರಾನಂದಾಬ್ಧಿವೀಚಿ’ಯಿಂದ ಗಂಡುತ್ತರಿಯ ಕಾಯಕಕ್ಕೆ ಹೋಗುತ್ತಿದ್ದದನ್ನು ಪ್ರಸ್ತಾಪಿಸಿದ್ದಾನೆ.[35] ‘ಭಕ್ತರಂ ಪಿರಿದು ಮನ್ನಿ’ ಸುತ್ತ, ಅನೇಕ ದಾನ – ದತ್ತಿಗಳಿಂದ ಅವರನ್ನು ಸಂತೃಪ್ತಪಡಿಸುತ್ತಿದ್ದ ರಾಚಮಲ್ಲಮನ ಭಕ್ತಿಗೆ ಮೆಚ್ಚಿ, ಶಿವನು ತನ್ನ ಪರಿವಾರದೊಂದಿಗೆ ಪ್ರತ್ಯಕ್ಷನಾದಾಗ “ಮಹಾವಿಭೂತಿಯಿಂಗಣಾಂಬರವ ಮಾಡಿ ಶಿವಾರ್ಚನೆಯ ಮಾಡಿ” ಕುದುರೆಯೇರಿ ಕೈಲಾಸಕ್ಕೆ ಹೋದನೆಂದು ಕುರುಗೋಡು ಶಾಸನವು ತಿಳಿಸುತ್ತದೆ.[36] ಹೀಗೆ ದಾನವ್ರತ – ವೀರವ್ರತಗಳೆರಲ್ಲೂ ಅಪ್ರತಿಮನೆನಿಸಿದ್ದ ರಾಚಮಲ್ಲನ ಗುಣಗಾನವನ್ನು ಇಲ್ಲಿಯ ಅನೇಕ ಶಾಸನಗಳು ಮಾಡಿವೆ. ಓರುವಾಯಿ ಶಾಸನ[37]

ವರಗಾಂಭೀರ್ಯ್ಯದೊಳ್ ದಾನಗಣದೊಳು ಸೌಂದರ್ಯದೊಳ್ದೈರ್ಯ್ಯದೊ
ಳ್ವರ ಸತ್ಯವ್ರತದೊಳ್ ಪರಾಕ್ರಮದೊಳ್ ಐಶ್ವರ್ಯದೊಳ್ ತೇಜದೊಳ್ ತಿವಿದ್ಯಾಪ್ರ
ಕರಂಗಳೊಳು ದಯೆಯೊಳಂ ಶ್ರೀ ಪಾರ್ವ್ಬತೀಶಾಂಘ್ರಿನಿ
ರ್ಭರ ಭಕ್ತರ ವಿಭು ರಾಚಮಲ್ಲನಿಸಿದಂ ಶ್ರೀಸಿಂದವಂಶೋದ್ಬವಂ||

ಎಂದು ಬಣ್ಣಿಸಿದರೆ, ಕುರುಗೋಡು ಶಾಸನ[38]

ಉದೃತ ಮಂಡಳಿಕ ತರಾರಕ ಷಡಾನನಂ
ವಿದ್ವಿಡ್ಬವಿದ್ವಂಸ ಫಬಳ ಪಂಚಾನನಂ
ಅರದಳಕಾರಾನ್ಯನಾರೀ ವಿದೂರಂ
ಅಸದೃಶ ಮಹಾಘೋರ ಸಂಗ್ರಾಮಧಿರಂ
ವಿಪಲ ವಿದ್ವದ್ವಿನುತ ಸಾಹಸೋತ್ತುಂಗಂ
ನೃಪತಿಳಕ ಸಾಯಿದೆವನ ವೀರಸಿಂಗ
ಕಲಿದೇವ ದಿಬ್ಯಪದ ಪಂಕಜಾರಾಧಕಂ
ಬಲವದರಿ ಭೂಪಾಳಕುಳ ಸೈನ್ಯಸಾಧಕಂ

ಎಂದು ಹೊಗಳಿದೆ.

ರಾಚಮಲ್ಲನು ಅನೇಕ ನಾಗಕುಳಸಂಸ್ತುತ್ಯ, ಗೋತ್ರಪಾತ್ರೈಕಗಾತ್ರ, ವಿಶುದ್ಧ ಸಿಂದಕುಳಕೈರವವನದಿವಾಕರ, ಪ್ರಚಂಡ ಮಂಡಳಿಕ ಮನೋಗರ್ವಪರ್ವಭ್ಯೇದನ ವಜ್ರದಂಡ, ವಿದ್ವಿಷ್ಟ ವೀರರಾತಿ ಮಂಡಳಿಕ ಸುಂಡಾಳಪಂಚಾನನ, ಮಹೇಶ್ವರಪದ ಪದ್ಮಿನೀ ರಾಜಹಂಸ, ಕದನತ್ರಿಣೇತ್ರ, ವೈರಿಕೃತಾಂತ, ಸಿಂದಗೋವಿಂದ, ಸಿತಗರಗಂಡ, ಪಾತಾಳ ಚಕ್ರವರ್ತಿ, ಕಲಿಕಾಲನಂದಿಕೇಶ್ವರ, ಸಿಂದಕುಲದಿನಕರ, ಶತೃಭೂಭ್ರಿಜ್ಜಯ ಪಟುಪಟಹಾ ಘೋಷಣ, ವಿಸ್ತೀರ್ಣೋರ್ವೀತಳೇಶ, ನೃಪಕುಳತಿಳಕ, ಉತ್ಸವಕರಂಡ, ಕದನ ಪ್ರಚಂಡ, ಆಶ್ರಿತಸುರಭೂಜ, ಉಜ್ಜಳತೇ, ಅನೂನ ಸುಖ್ಯಖಭಾಜನ, ಆಹವವಿನೋದ, ಅಶೇಷಜನ ಪ್ರಮೋದ, ಆನತರಿಮಂಡಳೇಶ್ವರ ನಿಳೇಶ್ವರ, ಮದವದ್ವೈರಿಕರೀಂದ್ರ ಕೇಸರಿ ಮೊದಲಾದ ಬಿರುದುಗಳನ್ನು ಧರಿಸಿದ್ದನು. ಇಲ್ಲಿಯ “ಮಹೇಶ್ವರಪದ ಪದ್ಮಿನೀರಾಜಹಂಸ ಕಲಿಕಾಲ ನಂದಿಕೇಶ” ಬಿರುದುಗಳು ಈ ಅರಸನ ಶಿವಭಕ್ತಿ ಭಾವವನ್ನು ವ್ಯಕ್ತಿ ಪಡಿಸುತ್ತವೆ.

ಇರುಂಗೋಳ

ಇವನ ಮೊದಲ ಉಲ್ಲೇಖ ಕ್ರಿ.ಶ. ೧೧೭೩ರ ಕುರುಗೋಡು ಶಾಸನ[39]ದಲ್ಲಿದೆ. ಹಿಂದೆಯೇ ನೋಡಿದಂತೆ ಇವರು ರಾಚಮಲ್ಲ ಮತ್ತು ಸೋವಲದೇವಿಯರ ಮಗನಾಗಿದ್ದಾನೆ. ಆದರೆ ಇವನು ಪಟ್ಟಕ್ಕೆ ಬಂದುದನ್ನೇ ಇಲ್ಲಿಯ ಶಾಸನಗಳು ಉಲ್ಲೇಖಿಸದಿರುವುದರಿಂದ ತಂದೆಯ ಸುದೀರ್ಘ ಆಳ್ವಿಕೆಯಲ್ಲಿ ಅಕಾಲ ಮರಣಕ್ಕೆ ತುತ್ತಾಗಿರಬೇಕು. ಇರುಂಗೋಳನಿಗೆ ಬಲದೇವಿಯೆಂಬ ರಾಣಿಯಿದ್ದು ಅವರಿಗೆ “ಭೀಮನುಂ ಪಾರ್ಥನುಂ ತೋಡಲಿಲ್ಲೆಂಬಿನಗಂ ಕ್ರಮೋನ್ನತಿಯೊಳು” ಸತ್ಕೀರ್ತಿಸಂಪದರಾದ ರಾಚಮಲ್ಲ ಮತ್ತು ಸೋಮಭೂಪಾಲರೆಂಬ ಇಬ್ಬರು ಮಕ್ಕಳು ಜನಿಸಿದರು.[40] ಕುರುಗೋಡದ ಮತ್ತೊಂದು ಶಾಸನ ಅವನಿಗೆ ಏಚಲದೇವಿಯಲ್ಲಿ ಇಮ್ಮಡಿ ರಾಚಮಲ್ಲನು ಜನಿಸಿದನೆಂದು ಹೇಳಿದೆ.[41] ಬಹುಶಃ ಈ ಎರಡು ಹೆಸರುಗಳು ಒಬ್ಬಳಿಗೇ ಇದ್ದಿರಬೇಕು.

[1] ಬಿ.ನಂ. ೨೧೨/೫೫-೫೬ ಕುಕನೂರು, ಯಲಬುರ್ಗಿ (ತಾ) ರಾಯಚೂರು (ಜಿ).

[2] ಎ.ಇ. III ೯೯೧, ಭೈರನಮಟ್ಟಿ, ಬಾಗಲಕೋಟೆ(ತಾ).

[3] ರಂಜೋಲ ಗ್ರಾಮದ ಶಾಸನ, ಕ.ಭಾ.ಸಂ.೧., ಸಂ.೧, ಪುಟ-೧೫೨.

[4] ಬಿ.ನಂ. ೯೯/೭೭-೭೮, ೧೧೨೧, ಕೊಂಚಗೆರೆ, ಸಿರುಗುಪ್ಪ(ತಾ) ಬಳ್ಳಾರಿ (ಜಿ).

[5] ಎ,ಇ. xiv ೧೯[೧] ೧೧೭೩ ಮತ್ತು ೧೧೮೨, ಕಗುರುಗೋಡು ಬಳ್ಳಾರಿ(ತಾ)

[6] ಸೌ.ಇ.ಇ iv ೨೬೦, ೧೧೯೯, ಹಂಪೆ, ಹೊಸಪೇಟೆ (ತಾ).

[7] ಬಿ.ನಂ. ೧೦೫/೮೫-೮೬, ೧೦೬೩, ಸಾಲಗುಂದೆ, ಸಿಂಧನೂರು(ತಾ)

[8] ನೋಡಿ Desai, Dinakar, Maha Mandalesvaras under the Chalukyas of Kalyani, Bombay, ೧೯೫೫ P-೧-೨.

[9] ಎ.ಇ. III ೯೯೧, ಭೈರನಮಟ್ಟಿ, ಬಾಲಗಲಕೋಟೆ (ತಾ).

[10] ಕ.ಬಾ.ಸಂ. ೧, ಸಂ. ೧, ಪು-೧೫೨

[11] ಸಿಂದವಂಶದ ಆಯಾ ಶಾಖೆಯವರು ಇವರನ್ನು ಉಲ್ಲೇಖಿಸದಿರುವುದರಿಂದ ಬಾ.ರಾ. ಗೋಪಾಲರು “ಅವು ನಿಜವಾದ ಹೆಸರುಗಳೇ ಅಥವಾ ಕೇವಲ ಸಾಂಕೇತಿಕವೇ” ಎಂದು ಸಂಶಯ ವ್ಯಕ್ತಪಡಿಸಿದ್ದಾರೆ. ನೋಡಿ, ಕ.ಭಾ. ಸಂ. ೧, ಸಂ. ೧, ಪು-೧೫೩.

[12] ಸೌ.ಇ.ಇ. ix (i) ೬೫, ೯೪೭ ಜುಲೈ ೨೫, ಕುಡತಿನಿ, ಬಳ್ಳಾರಿ (ತಾ).

[13] ಬಿ.ನಂ. ೮೪/೭೭-೭೮, ೯೬೭, ಬಲ್ಲಕುಂದೆ, ಸಿರುಗುಪ್ಪ(ತಾ).

[14] ಸೌ.ಇ.ಇ. ix (i) ೧೦೦, ೧೦೪೫ ಆಗಸ್ಟ್ ೫, ಹಾವಿನಹಾಳು, ಬಳ್ಳಾರಿ(ತಾ).

[15] ಅದೇ ೧೫೯, ೧೦೯೨, ಸಿರುಗುಪ್ಪ.

[16] Desai, Dinakar. Maha Mandalesvaras under the Chalukyas of Kalyani, Bombay, P-೧೨೦

[17] ಬಿ.ನಂ. ೧೦೧/೭೭-೭೮, ೧೧೪೨, ಕೊಂಚಗೆರೆ, ಸಿರುಗುಪ್ಪ(ತಾ) ಅದೇ ೯೯-೧೦೦/೭೭-೭೮, ೧೧೨೧, ಕೊಂಚಗೆರೆ.

[18] ಸೌ.ಇ.ಇ.ix (i) ೧೦೦, ೧೦೪೫ ಆಗಸ್ಟ್ ೫, ಹಾವಿನಹಾಳು, ಬಳ್ಳಾರಿ(ತಾ).

[19] “ಸಿಂಹಕುಳಾಂಬರದ್ಯುಮಣಿ ಭೀಮನೃಪಾಳನಾತ್ಮಸೂನು ಸಂಕ್ರಂದನು ಕೀರ್ತಿಮೂರ್ತಿಮಕರ ಧ್ವಜನಾಗಿರೆ ಸವಿದೇವ” ಬಿ.ನಂ. ೧೦೧/೭೭-೭೮, ೧೪೨ ಕೊಂಚಗೆರೆ “ವರಲಕ್ಷ್ಮೀನಿಭೆ ಮೂಕಾಣಾಂಬಿಕೆಯ ತನ್ನ ಪತ್ತೆ ತಾಯಿ ತತ್ಪತಿಯವರ ವೀರಾಗ್ರಣಿ ಭೀಮದೇವ ಮಹಿಪತಾ ತಂದೆ” (ಬಿ.ನಂ. ೧೦೧/೭೭-೭೮, ೧೧೪೨ಮ, ಕೊಂಚಗೆರೆ).

[20] ಬಿ.ನಂ ೧೦೧/೭೭-೭೮, ೧೧೪೨, ಕೊಂಚಗೆರೆ, ಇವನ ಮಗ ಇಮ್ಮಡಿ ಭೀಮನು ಕ್ರಿ.ಶ. ೧೧೨೧ರಲ್ಲಿ ಆಳುತ್ತಿದ್ದನು.

[21] ಬಿ.ನಂ. ೧೦೧/೭೭-೭೮, ೧೧೪೨, ಕೊಂಚಗೆರೆ.

[22] ಸೌ.ಇ.ಇ. ix (i) ೨೨೫, ೧೧೩೧ ಜನವರಿ ೨೫, ಬೈಲೂರು, ಬಳ್ಳಾರಿ (ತಾ).

[23] ಅದೇ ೨೩೫, ೧೧೪೧ ಆಗಸ್ಟ್ ೯, ಸಿಂದಿಗೆರೆ, ಬಳ್ಳಾರಿ (ತಾ).

[24] ಬಿ.ನಂ. ೯೯-೧೦೦/೭೭-೭೮, ೧೧೪೨, ಕೊಂಚಗೆರೆ.

[25] ಸೌ.ಇ.ಇ. ix (i) ೨೪೯, ೧೧೪೭, ಡಿಸೆಂಬರ್ ೨೫, ಕೋಳೋರು, ಬಳ್ಳಾರಿ (ತಾ).

[26] Desai, Dinakar. Maha Mandalesvaras under the Chalukyas of Kalyani, Bombay, P-೧೨೦ “Immadi Bhima, the elder brother, seens to have been a naminal raler, while the younger brother Rachamalla I was the real head of the state.”

[27] ಬಿ.ನಂ. ೧೦೧/೭೭-೭೮, ೧೧೪೨, ಕೊಂಚಗೆರೆ.

[28] ಸೌ.ಇ.ಇ. ix (i) ೨೩೫, ೧೧೪೧, ಆಗಸ್ಟ್ ೯, ಸಿಂದಿಗೆರೆ.

[29] ಬಿ.ನಂ. ೧೦೧/೭೭-೭೮, ೧೧೪೨, ಕೊಂಚಗೆರೆ.

[30] ಎ.ಇ. xiv (i) ೧೧೭೩-೧೧೮೨, ಕುರುಗೋಡು.

[31] ಬಿ.ನಂ.೧೦೧/೭೭-೭೮, ೧೧೪೨, ಕೊಂಚಗೆರೆ.

[32] ಇ.ಐ. xiv ೧೯ (i) ೧೧೭೩-೧೧೮೨, ಕುರುಗೋಡು.

[33] ಬಿ.ನಂ. ೧೦೧/೭೭-೭೮, ೧೧೪೨, ಕೊಂಚಗೆರೆ.

[34] ಎ.ಇ. xiv ೧೯ (i) ೧೧೭೩-೧೧೮೨, ಕುರುಗೋಡು.

[35] ಭೈರವೇಶ್ವರ ಕಾವ್ಯದ ಕಥಾಮಣಿಸೂತ್ರ ರತ್ನಾಕರ ಭಾಗ-೧ (ಸಂ) ಹಿರೇಮಠ್ ಆರ್.ಸಿ. ಧಾರವಾಡ, ಪು. ೨೪೭-೨೪೯.

[36] ಎ.ಇ. xiv ೧೯ (ii) iv ಸೋಮೇಶ್ವರ, ಕುರುಗೋಡು.

[37] ಸೌ.ಇ.ಇ. ix (i) ೩೨೨, ೧೧೯೫, ಫ್ರಬವರಿ ೨೬, ಒರುವಾಯಿ, ಬಳ್ಳಾರಿ (ತಾ).

[38] ಅದೇ ೨೯೭, ೧೧೭. ಜೂನ್ ೨೬, ಕುರುಗೆ.

[39] ಎ.ಇ. xiv ೧೯ (i) ೧೧೭೩-೧೧೮೨, ಕುರುಗೋಡು.

[40] ಅದೇ.

[41] ಅದೇ (ii) iv ಸೋಮೇಶ್ವರ, ಕುರುಗೋಡು.