ಎರಡನೆಯ ರಾಚಮಲ್ಲ

ಇವನ ಅತ್ಯಂತ ಪ್ರಾಚೀನ ಉಲ್ಲೇಖ ಕ್ರಿ.ಶ. ೧೧೪೮ರ ಓರುವಾಯಿ ಶಾಸನವಾಗಿದೆ.

[1] ಈ ಅವಧಿಯಲ್ಲಿ ಇವನು ಬಲ್ಲಿಕುಂದೆ ನಾನ್ನು ಆಳುತ್ತಿದ್ದನೆಂಬಂತೆ ಉಲ್ಲೇಖಿಸಲಾಗಿದೆ. ಆದರೆ ಹಿಂದೆಯೇ ಸ್ಪಷ್ಟಪಡಿಸಿದಂತೆ, ಅವನು ಆಳ್ವಿಕೆಯನ್ನು ನಡೆಸುತ್ತಿರದೆ ಅಜ್ಜನಿಗೆ ಆಡಳಿತದಲ್ಲಿ ನೆರವಾಗುತ್ತಿದ್ದನು. ಕುರುಗೋಡು ಶಾಸನವು[2] ಇವನನ್ನು

ದೃತಮಹಿಮಂ ಮಹೀಸುತ ಸುಖಾಭಿನವಾತಿಸಯಂ ಯಶಪ್ರಕಾ
ಸಿತ ಭುವನಂ ನವಾಬ್ಜನಯನಂ ನಯನಂದನಂ ಸಂನುತಂ ತನು
ಕೃತ ಕಳಿಕಾಳಿಮಂಮಳಿನ ದೂರಿತನಿರ್ಮ್ಮಿಡಿ ರಾಚಮಲ್ಲಭೂ
ಪತಿತಿಳಕಂ ಕಳಾಕುಶಳನಾಹವ ಚಕ್ರದೊಳಾ ತ್ರಿವಿಕ್ರಮಂ ||

ಎಂದು ಬಣ್ಣಿಸಿದರೆ, ಅಲ್ಲಿಯ ಮತ್ತೊಂದು ಶಾಸನ[3]
ಪುಲಿಮೊಲೆವಾಲನೂಡೆ ಫಣಿಪಂ ಪೆಡೆಯಂ ಕೊಡೆಯೆತ್ತಿ ಸಿಂಧೂರಂ
ಸುಲಲಿತ ಭದ್ರವಿಷ್ಟರಮದಾಗೆ ಚಂಚ ಚಮರಿಗಾಳಿ ಕೋಮಳ
ಚಳಚಾಳು ಚಾಮರಮನಿಕ್ಕೆ x ದಿನ್ತಂಕಲಿದೇವನಾವಗಂ
ಕುಲದಧಿದೈವವಾಗದೆ ಗೆಲಲಾರ್ದೊರೆಯಿರ್ಮ್ಮಡಿ ರಾಚಮಲ್ಲನೊಳ್ ||

ಎಂದು ಹೊಗಳಿದೆ. ಇದು ಅವನ ಶೌರ್ಯ – ಸಾಹಸ, ಶಕ್ತಿ ಸಾಮರ್ಥ್ಯಗಳಿಗೆ ಹಿಡಿದ ಕನ್ನಡಿಯಾಗಿದೆ.

ಇಮ್ಮಡಿ ರಾಚಮಲ್ಲನು ಸಿಂದಕುಳಕಮಳಮಾರ್ತಂಡ, ಸಿತಗರಗಂಡ, ಸಮುದ್ದಣ ಮಂಡಳಿಕ ಭಯಂಕರ, ಚತುರಂಗಾನೀಕ, ದಶದಿಶಾವರ್ತಿತ ಧವಳ ಕೀರ್ತಿ, ಪಾತಾಳ ಚಕ್ರವರ್ತಿ ಮೊದಲಾದ ಬಿರುದುಗಳನ್ನು ಧರಿಸಿದ್ದನು. ಅವನು ‘ಸಂಗಡದ ಮಂಡಳೀಕರ ತಲೆಯಂಕಾವ’ ಎಂಬ ಬಿರುದನ್ನು ಧರಿಸಿರುವುದನ್ನು ನೋಡಿದರೆ, ಇತರ ಸಾಮಂತರಿಗಿಂತ ಪ್ರಭಾವ ಶಾಲಿಯೂ ಬಲಿಷ್ಟನೂ ಆಗಿದ್ದನೆಂಬುದು ಸ್ಪಷ್ಟವಾಗುತ್ತದೆ. ಇಮ್ಮಡಿ ರಾಚಮಲ್ಲನ ಕೊನೆಯ ಉಲ್ಲೇಖ ಕ್ರಿ.ಶ. ೧೧೯೫ರ ಓರುವಾಯಿ ಶಾಸನವಾಗಿದೆ.[4] ಮುಂದೆ ಇವನ ಮಗ ವೀರಕಲಿದೇವರಸನು ಪಟ್ಟಕ್ಕೆ ಬಂದನು.

ವೀರಕಲಿದೇವರಸ

ಹಂಪೆಯ ಕ್ರಿ.ಶ. ೧೧೯೯ರ ಶಾಸನ ಇವನ ಆಳ್ವಿಕೆಯನ್ನು ಉಲ್ಲೇಖಿಸಿದೆ.[5] ಆದರೆ ಕೇವಲ ೪ – ೫ ವರ್ಷಗಳ ಅವಧಿಯಲ್ಲಿ ಇವನ ಆಳ್ವಿಕೆ ಕೊನೆಗೊಂಡ, ಹೊಯ್ಸಳರು ಈ ಪ್ರದೇಶದ ಮೇಲೆ ಪ್ರಭುತ್ವವನ್ನು ಸಾಧಿಸಿಕೊಂಡದ್ದಕ್ಕೆ ಸಾಕಷ್ಟು ಆಧಾರಗಳು ದೊರೆಯುತ್ತವೆ. ಒಂದನೆಯ ರಾಚಮಲ್ಲನ ಕಾಲದಿಂದ ಸುಭದ್ರವಾದ ಕೋಟೆ, ಬಲಿಷ್ಠವಾದ ನಾಡು ಎಂದು ಖ್ಯಾತಿ ಪಡೆದಿದ್ದ ಕುರುಗೋಡು ಪಟ್ಟಣವನ್ನು ರಕ್ಷಿಸಿಕೊಂಡು ಬರಲು ವೀರಕಲಿದೇವರಸನು ವಿಫಲನಾದನು.

ಹೊಯ್ಸಳ ಎರಡನೆಯ ವೀರಬಲ್ಲಾಳನು ಸೇವುಣ ಬಿಲ್ಲಮನ ಸೈನ್ಯವನ್ನು ಸೊರಟೂರಿನಿಂದ ಕೃಷ್ಣವೇಣಿ ನದಿ ತೀರದವರೆಗೆ ಬೆನ್ನಟ್ಟಿ ಅವನನ್ನು ಸೋಲಿಸಿ ಎರಂಬರಗೆ, ಮಾನ್ವಿ, ವಿರಾಟನ ಕೋಟೆ, ಗುತ್ತಿ, ಬೆಳ್ಳಟ್ಟಿಗೆ, ರಟ್ಟಪಳ್ಳಿ, ಸೊಟೂರು ಮತ್ತು ಕುರುಗೋಡು ಕೋಟೆಗಳನ್ನು ಗೆದ್ದುಕೊಂಡನೆಂದು ಹರಿಹರದ ಕ್ರಿ.ಶ. ೧೨೨೪ರ ಶಾಸನ ಹೇಳಿದೆ.[6] ಬಲ್ಲಕುಂದೆ ನಾಡಿನ ಶಾಸನಗಳು ಕ್ರಿ.ಶ. ೧೨೦೭ ರಿಂದ ವೀರಬಲ್ಲಾಳನ ಆಳ್ವಿಕೆಯನ್ನು ಉಲ್ಲೇಖಿಸುತ್ತವೆ.[7] ಆದ್ದರಿಂದ ವೀರಕಲಿದೇವರಸನು ಕ್ರಿ.ಶ. ೧೨೦೦ ವೇಳೆಗೆ ಹೊಯ್ಸಳರಿಗೆ ಸೋತಿರಬೇಕು. ಇಲ್ಲವೆ ಯುದ್ಧದಲ್ಲಿ ಮಡಿದಿರಬೇಕು. ಹೊಯ್ಸಳ ವೀರಬಲ್ಲಾಳನ ಸಾಮಂತ ವೀರಗೋಮರಸನು ಸಿಂದ ಸಿಗುಣಾನ್ವಯ ಎಂಬ ಬಿರುದನ್ನು ಧರಿಸಿದ್ದನೆಂದು ಕುರುವತ್ತಿ ಶಾಸನ ಹೇಳಿದೆ.[8] ಬಹುಶಃ ಇವನು ಹೊಯ್ಸಳರ ಪ್ರತಿನಿಧಿಯಾಗಿ ಕುರುಗೋಡು ಕೋಟೆಯನ್ನು ಮುತ್ತಿ ನಾಶಮಾಡಿ, ಅದರ ಅಧಿಪತಿಯಾದ ವೀರಕಲಿದೇವರಸನನ್ನು ಯುದ್ಧದಲ್ಲಿ ಸೋಲಿಸಿಯೋ, ಬಹುಶಃ ಕೊಂದೋ ಆ ಬಿರುದನ್ನು ಧರಿಸಿರಬೇಕು. ಈ ಕಲಿದೇವರಸನ ಮರಣದೊಂದಿಗೆ ಕುರುಗೋಡು ಸಿಂದಮನೆತನವೂ ಇತಿಹಾಸದಿಂದ ಕಣ್ಮರೆಯಾಯಿತು.

ರಾಜಕೀಯ ವ್ಯವಸ್ಥೆ

ಚಕ್ರವರ್ತಿಗಳ ಸಾಮ್ರಾಜ್ಯವು ಆಡಳಿತದ ಅನುಕೂಲಕ್ಕಾಗಿ ವಿಷಯ, ನಾಡು, ಕಂಪಣಗಳಾಗಿ ವಿಭಜಿಸಲ್ಪಟ್ಟಿತು. ಇಂತಹ ಬೇರೆ ಬೇರೆ ವಿಭಾಗಗಳನ್ನು ತಮಗೆ ನಿಷ್ಠರಾಗಿದ್ದ ಸಾಮಂತರಿಗೆ ವಂಶಪರಂಪರೆಯಾಗಿ ಆಳಿಕೊಂಡಿರಲು ಅವರು ನೀಡಿದ್ದರು. ಕುರುಗೋಡು ಸಿಂದರು ಇಂದಿನ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ, ಬಳ್ಳಾರಿ, ಸಂಡೂರು ಮತ್ತು ಹೊಸಪೇಟೆ ತಾಲ್ಲೂಕುಗಳ ವ್ಯಾಪ್ತಿಯ ಪ್ರಾಚೀನ ಬಲ್ಲಿಕುಂದೆ – ೩೦೦ ವಿಭಾಗಗಳನ್ನು ಆಳುತ್ತಿದ್ದರು.

ಭೌಗೋಳಿಕವಾಗಿ ಬಲ್ಲಿಕುಂದೆ ನಾಡು ಪಶ್ಚಿಮೋತ್ತರಗಳಲ್ಲಿ ತುಂಗಭದ್ರೆ, ಪೂರ್ವದಲ್ಲಿ ಅದರ ಉಪನದಿಯಾದ ವೇದಾವತಿ ನದಿಗಳ ಮೇಲಿರುವ ಸಿರುಗುಪ್ಪೆ,[9] ಹಂಪೆಗಳು[10] ಬಲ್ಲಿಕುಂದೆ ನಾಡಿನಲ್ಲಿದ್ದವೆಂದು ಅಲ್ಲಿನ ಶಾಸನಗಳು ಸ್ಪಷ್ಟಪಡಿಸಿವೆ. ಸಂಡೂರು ಪಕ್ಕದ ಕುಮಾರಸ್ವಾಮಿ ಬೆಟ್ಟವು ಈ ನಾಡಿನ ಪ್ರಮುಖ ಕಾರ್ತಿಕೇಯ ಸ್ವಾಮಿಯ ತಪೋವನವಾಗಿದೆ. ಕುಡುತಿನಿ, ಕೊಳಗಲ್ಲುಗಳೂ ಕಾರ್ತಿಕೇಯ ಸ್ವಾಮಿಯ ತಪೋವನಗಳಾಗಿದ್ದವು. ಅದರಲ್ಲಿ ಕುಡತಿನಿಯು ಈ ಎಲ್ಲ ತಪೋವನಗಳ ರಾಜಧಾನಿ[11] ಪಟ್ಟಣ[12]ವೆನಿಸಿತ್ತು.

ಬಲ್ಲಿಕುಂದೆ ನಾಡಿನ ಹೊರಗೆ ಪಶ್ಚಿಮದಲ್ಲಿ ಉತ್ತರಕ್ಕೆ ಕೆಳವಾಡಿ – ೩೦೦, ದಕ್ಷಿಣದಲ್ಲಿ ಕೋಗಳಿ – ೫೦೦, ದಕ್ಷಿಣಕ್ಕೆ ಕದಂಬಳಿಗೆ – ೧೦೦೦ ಮತ್ತು ಹಡವಗೆರೆ – ೫೦೦, ಪೂರ್ವಕ್ಕೆ ಆದವಾನಿ – ೫೦೦ ಮತ್ತು ಉತ್ತರಕ್ಕೆ ಸಾಲಗುಂದೆ – ೭೦ ಉಪವಿಭಾಗಗಳಿದ್ದವು.

ಆಡಳಿತ ಉಪವಿಭಾಗಗಳು ಮೂರು ನೂರು ಹಳ್ಳಿಗಳ ಆಡಳಿತವನ್ನೊಳಗೊಂಡ ಬಲ್ಲಿಕುಂದೆ ನಾಡಿನ ವ್ಯಾಪ್ತಿಯಲ್ಲಿ ಐದು ಉಪವಿಭಾಗಗಳಿದ್ದುದು ಶಾಸನಗಳಿಂದ ತಿಳಿದುಬಂದಿದೆ. ಇವುಗಳಲ್ಲಿ ಆರು ಹಳ್ಳಿಯದು ಅತಿಸಣ್ಣದು, ಎಪ್ಪತ್ತು ಹಳ್ಳಿಯದು ಅತಿ ದೊಡ್ಡದು.

ದೊರವಡಿ೭೦

ಇಂದಿನ ಸಂಡೂರು ತಾಲೂಕಿನ ಚಿಕ್ಕಹಳ್ಳಿಯಾದ ದರೋಜಿಯೇ ಪ್ರಾಚೀನ ದೊರವಡಿ – ೭೦ರ ಮುಖ್ಯಪಟ್ಟಣವಾಗಿತ್ತು. ಓರುವಾಯಿ[13] ಮತ್ತು ಹಂಪೆ[14] ಶಾಸನಗಳು ಈ ಉಪವಿಭಾಗವನ್ನು ಉಲ್ಲೇಖಿಸಿದೆ. ಅದು “ಘಳಿತ ಸುರಕುಜದ ಚೆಲ್ವಂ ತಳೆದಿರ್ದ ಬಲ್ಲಕುಂದೆ ನಾಡೋಳ್ತಳ್ತೊಂದೊಳ್ಗೊಂಬತೆ ರಂಜಿಸುತ್ತಿತ್ತೆಂದು” ಹಂಪೆ ಶಾಸನ ಬಣ್ಣಿಸಿದೆ. ಇಂದಿನ ಸಂಡೂರು ಬಳ್ಳಾರಿ ಮತ್ತು ಹೊಸಪೇಟೆ ತಾಲ್ಲೂಕಿನ ಹಳ್ಳಿಗಳು ಇದರ ವ್ಯಾಪ್ತಿಯಲ್ಲಿ ಸೇರಿರಬೇಕು.

ಆರುಬಂಡ

ದೊರವಡಿ – ೭೦ ರ ಉಪವಿಭಾಗವಾದ ಇದರ ಉಲ್ಲೇಖ ಕುರಿಕುಪ್ಪೆ ಶಾಸನದಲ್ಲಿದೆ.[15] ಕುರಿಕುಪ್ಪೆಯು ಈ ಆರುಂಬಾಡದಲ್ಲಿಯ ಒಂದು ಅಗ್ರಹಾರವಾಗಿತ್ತು.

ಸಬಾಲ x x ಎಪ್ಪತ್ತು

ಕುಡತಿನಿ ಶಾಸನದಲ್ಲಿ ಈ ಉಪವಿಭಾಗದ ಉಲ್ಲೇಖಿದೆ.[16] ಆದರೆ ಇದರ ಮುಖ್ಯ ಪಟ್ಟಣ ಯಾವುದೆಂದು ಸ್ಪಷ್ಟವಾಗುವುದಿಲ್ಲ.

ನಲ್ವಿಡಿ೧೨

ಇಂದಿನ ಬಳ್ಳಾರಿ ತಾಲೂಕಿನ ನೆಲ್ಲುಡಿಯೇ ಇದರ ಮುಖ್ಯ ಪಟ್ಟಣವಾಗಿತ್ತು. ಓರುವಾಯಿಯು ಇದರಲ್ಲಿಯ ಒಂದು ಕಂಪಣವಾಗಿತ್ತು.[17]

ತೆಕ್ಕಕಲ್ಲು೧೨

ಇಂದಿನ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆಯ ತೆಕ್ಕಕಲ್ಲು – ೧೨ರ ಮುಖ್ಯ ಪಟ್ಟಣವಾಗಿತ್ತು ಸಿರುಗುಪ್ಪೆ[18] ಮತ್ತು ಸಾಲುಗುಂದೆ ಶಾಸನ[19]ಗಳಲ್ಲಿ ಈ ಉಪವಿಭಾಗದ ಉಲ್ಲೇಖವಿದೆ.

ಒಟ್ಟಿನಲ್ಲಿ ಬಲ್ಲಕುಂದೆ ನಾಡಿನ ಮೂರುನೂರು ಹಳ್ಳಿಗಳಲ್ಲಿ ದೊರವಡಿ ೭೦+ ಸಬಾಲ..೭೦ + ನಲ್ವಿಡಿ ೧೨+ ತೆಕ್ಕೆಕಲ್ಲು ೧೨ = ೧೬೪ ಹಳ್ಳಿಗಳ ಲೆಕ್ಕ ದೊರೆಯುತ್ತದೆ. ಉಳಿದ ೧೩೬ ಹಳ್ಳಿಗಳನ್ನು ಹುಡುಕಬೇಕಾಗಿದೆ.

ಹಿಂದೆಯೇ ನೋಡಿದಂತೆ ಕುರುಗೋಡು ಸಿಂದರು ಆರಂಭದಲ್ಲಿ ಮಹಾಸಾಮಂತರಾಗಿ ಬಲ್ಲಕುಂದೆ ನಾಡಿನ ಆಳ್ವಿಕೆ ನಡೆಸುತ್ತಿದ್ದು, ಮುಂದೆ ಸೋವಿದೇವನ ಕಾಲಕ್ಕೆ ಮಹಾ ಮಂಡಳೇಶ್ವರರಾಗಿ ಪದೋನ್ನತಿಯನ್ನು ಪಡೆದವರು. ಬಲ್ಲಕುಂದೆ – ೩೦೦ ವಿಭಾಗವು ನೊಳಂಬವಾಡಿ – ೩೨೦೦೦ ನಾಡಿನ ಉಪವಿಭಾಗವಾಗಿದ್ದರಿಂದ ಕುರುಗೋಡು ಸಿಂದರು ನೊಳಂಬ ಪಲ್ಲವರ ಸಾಮಂತರಾಗಿದ್ದರು. ಇವರು ಚಕ್ರವರ್ತಿಗಳೊಂದಿಗೆ ತಮ್ಮ ಸಂಬಂಧ, ನಿಷ್ಠೆ ಬಲಪಡಿಸಿಕೊಂಡ ಮೇಲೆ ಮಹಾಮಂಡಳೇಶ್ವರರಾಗಿ ಪದೋನ್ನತಿ ಪಡೆದರು. ಇದರಿಂದ ನೊಳಂಬ ಪಲ್ಲವರ ಮೇಲಾಳಿಕೆ ಕಳಚಿಕೊಂಡು, ಚಕ್ರವರ್ತಿಗಳ ನೇರ ಸಂಪರ್ಕಕ್ಕೆ ಬಂದರು. ಊರಾಡಳಿತದಲ್ಲಿ ಪ್ರಭು ಗಾವುಂಡರು; ಪಟ್ಟಣಗಳಲ್ಲಿ ಪಟ್ಟಣ ಸ್ವಾಮಿಗಳು ಸಹಾಯಕ ರಾಗಿದ್ದರು. ಆಡಳಿತದ ಸಮರ್ಥ ನಿರ್ವಹಣೆಗೆ ಕೇಂದ್ರ ಸರಕಾರದಂತೆ ಪ್ರಾಂತೀಯ ಸರಕಾರದಲ್ಲೂ ವಿಧ್ಯೆ, ಸುಂಕ, ರಕ್ಷಣೆ, ರಕ್ಷಪಾಳಕ, ಸಾಮಂತ, ಪೆರ್ಗಡೆಗಳು ಕಾರ್ಯ ನಿರ್ವಹಿಸುತ್ತಿದ್ದರು. ಇದಲ್ಲದೇ ಹಡಪವಳ, ಮಂತ್ರಿ, ಕುಳಕರಣಿ, ತಾಳಾರ ಮೊದಲಾದವರನ್ನು ಇಲ್ಲಿಯ ಶಾಸನಗಳು ಉಲ್ಲೇಖಿಸಿವೆ.[20] ಹೀಗೆ ಗ್ರಾಮ ಮಟ್ಟದಿಂದ ವಿಭಾಗ ಮಟ್ಟದವರೆಗೆ ಬಲ್ಲಕುಂದೆ ನಾಡಿನ ಆಡಳಿತ ಸುಸೂತ್ರವಾಗಿ ನಡೆಯುತ್ತಿದ್ದುದಕ್ಕೆ ಆಧಾರಗಳು ದೊರೆಯುತ್ತವೆ.

ಸಾಮಾಜಿಕ ವ್ಯವಸ್ಥೆ

ಅಂದಿನ ಸಮಾಜದಲ್ಲಿ ಪ್ರಭುವರ್ಗದವರನ್ನು ಹೊರತುಪಡಿಸಿ ಬ್ರಾಹ್ಮಣರು ಮತ್ತು ಶೈವಗುರುಗಳು ಅಗ್ರಸ್ಥಾನದಲ್ಲಿದ್ದರು. ಷಟ್ಕರ್ಮದಲ್ಲಿ ನಿರತರಾಗಿದ್ದ ಮಹಾಜನಗಳ ಓಣಿಗಳು ವೇದಮಂತ್ರಗಳ ಶಬ್ದದಿಂದ ಹೋಮಾದಿಧೂಮದಿಂದ ಶೋಭಿಸುತ್ತಿದ್ದವು.[21] ವಿವಿಧ ವೃತ್ತಿಗಳನ್ನಾಶ್ರಯಿಸಿದ ಶ್ರಮಿಕ ವರ್ಗದ ಅಕ್ಕಸಾಲಿಗ, ಕಲ್ಲುಕುಟಿಗ, ಕುಡಿವಕ್ಕಲ ಮಕ್ಕಳು, ತಂಬುಲಿಗ, ಗಾಣಿಗ, ಬಣಂಜಿಗ, ಸ್ಥಳಕದ ಹನ್ನವಣಿದ, ಎಂಟು ಹಿಟ್ಟು ಮೊದಲಾದವರ ಉಲ್ಲೇಖಗಳು ಇಲ್ಲಿನ ಶಾಸನಗಳಲ್ಲಿವೆ.[22] ಈ ಎಲ್ಲ ಜಾತಿಯವರು ತಮ್ಮ ತಮ್ಮ ಓಣಿಗಳಲ್ಲಿ ವಾಸಿಸುತ್ತಿದ್ದರ. ಕುರುಗೋಡು ಶಾಸನವು ಅಲ್ಲಿನ ವಿಪ್ರೇಂದ್ರವಾಟಿ, ವಣಿಗ್ವಾಟಿ ಮತ್ತು ಸೂಳೆಗೇರಿಗಳನ್ನು ಉಲ್ಲೇಖಿಸಿದೆ.[23]

ಸ್ತ್ರೀಯರಲ್ಲಿ ರಾಜವರ್ಗದವರು ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಪುರುಷನೊಂದಿಗೆ ಭಾಗವಹಿಸುತ್ತಿದ್ದರು. ಆರನೆಯ ವಿಕ್ರಮಾದಿತ್ಯನ ರಾಣಿ ಬಲ್ಲಕುಂದೆ ನಾಡಿನ ಸಿರುಗುಪ್ಪೆ ಮತ್ತು ಇತರ ಊರುಗಳನ್ನು ಆಳುತ್ತಿದ್ದರೆ,[24] ಒಂದನೆಯ ರಾಚಮಲ್ಲನ ಪಿರಿಯರಸಿ ಮಾಕಲದೇವಿ ಗಂಡನೊಂದಿಗೆ ಆಡಳಿತದಲ್ಲಿ ತೊಡಗಿದ್ದಳು.[25] ರಾಜವರ್ಗದವರು ಸಾಮಾನ್ಯವಾಗಿ ಬಹುಪತ್ನಿಯರಾಗಿದ್ರು. ಸತಿಪದ್ಧತಿಯು ಅಂದಿನ ಸ್ತ್ರೀಯರಲ್ಲಿ ಸಹಜವಾಗಿತ್ತು. ಎರಡನೆಯ ರಾಚಮಲ್ಲನ ಮಂತ್ರಿ ಬೇಚರಸನು ಶಿವನಸನ್ನಿಧಿಯನ್ನು ಪಡೆದು ಕೈಲಾಸಕ್ಕೆ ಹೋದಾಗ ಆತನ ಪತ್ನಿಯರಾದ ಬೈಳಿಯಕ್ಕೆ ಮತ್ತು ಮಲ್ಪಾಣಿಯಕ್ಕರು ಅಗ್ನಿಪ್ರವೇಶ ಮಾಡುತ್ತಾರೆ.[26]

ಧಾರ್ಮಿಕ ವ್ಯವಸ್ಥೆ

ಕುರುಗೋಡು ಸಿಂದರು ಆರಂಭದಿಂದಲೂ ಶೈವ ಧರ್ಮಾನುಯಾಯಿಗಳಾಗಿದ್ದರು. ಶೈವ ದೇವಾಲಯಗಳ ಪೂಜೆ, ಪುರಸ್ಕಾರ, ದೇವರ ಅಂಗಭೋಗ, ರಂಗಭೋಗ, ಖಂಡ ಸ್ಫುಟಿತ ಜೀರ್ಣೋದ್ಧಾರ, ತಪೋಧನ, ವಿದ್ಯಾರ್ಥಿಗಳ ಆಹಾರ ಮೊದಲಾದವುಗಳಿಗೆ ದಾನ ನೀಡುವ ಸುಮಾರು ೩೩ ಶಾಸನಗಳು ಬಲ್ಲಕುಂದೆ ನಾಡಿನಲ್ಲಿವೆ. ಅವುಗಳಲ್ಲಿ ೧೫ ಕುರುಗೋಡು ಸಿಂದರಸರಿಗೆ ಸಂಬಂಧಿಸಿದ್ದರೆ, ೧೨ ಶಾಸನಗಳು ಮಹಾಜನರು, ವರ್ತಕರು, ಅಧಿಕಾರಿಗಳು, ಗಾವುಂಡರು ಮತ್ತು ಜನಸಾಮಾನ್ಯರಿಗೆ ಸೇರಿವೆ, ಜೈನ, ವೈಷ್ಣವ ದತ್ತಿಗಳೊಂದಿಗೆ ಹೋಲಿಸಿದರೆ ಶೈವಪರವಾಗಿರುವ ಶಾಸನಗಳ ಸಂಖ್ಯೆ ನಾಲ್ಮಡಿಗೊಂಡಿವೆ. ಆಳುವ ದೊರೆ ಧರ್ಮಸಮನ್ವಯ ಗುಣ ಅಳವಡಿಸಿಕೊಂಡಿರುತ್ತಿದ್ದರು. ಸಾಮಾನ್ಯವಾಗಿ ಆತ ಅನುಸರಿಸಿರುವ ಧರ್ಮ ಜನಸಾಮಾನ್ಯರ ಧರ್ಮವೆನಿಸುತ್ತಿತ್ತು.

ಕಾಳಾಮುಖ ಸಮಯವನ್ನು ‘ಎಕ್ಕೋಟಿ ಸಮಯ’ವೆಂದೂ, ಕಾಳಾಮುಖ ಮಠವನ್ನು ‘ಎಕ್ಕೋಟಿ ಮಠ’ವೆಂದೂ, ಅಲ್ಲಿಯ ಸ್ಥಾನಾಚಾರ್ಯರನ್ನು ‘ಎಕ್ಕೋಟಿ ಚಕ್ರವರ್ತಿಗಳೆಂದೂ’ ಶಾಸನಗಳೂ ಕರೆದಿವೆ.[27] ಈ ಮಠಗಳ ಸ್ಥಾನಾಚಾರ್ಯರು ವಿದ್ಯಾಪ್ರೇಮಿಗಳಾಗಿದ್ದು, ವಿದ್ಯಾರ್ಥಿಗಳ ಅಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟಿದ್ದರು. ಕೆಲವರು ರಾಜಮನ್ನಣೆ ಪಡೆದು ರಾಜಪೂಜಿತರಾಗಿದ್ದರು. ಬಲ್ಲಿಕುಂದೆ ನಾಡಿನ ಸಿಂದಿಗೆರೆ, ಓರುವಾಯಿ, ಕುಡತಿನಿ, ಕೊಳಗಲ್ಲು ಮೊದಲಾದವು ಪ್ರಮುಖ ಶೈವ ಕೇಂದ್ರಗಳಾಗಿವೆ. ಈ ಪಾಶುಪತ ಕಾಳಾಮುಖರ ಶಿಷ್ಯ ಪರಂಪರೆ ಶಾಖೋಪಶಾಖೆಗಳಾಗಿ ವ್ಯಾಪಿಸಿದಂತೆ ಅದರಲ್ಲಿ ಪಕ್ಷಿ, ಅವಳಿ, ಸಂತತಿಗಳೆಂದು ಒಳಭೇದಗಳು ಉಂಟಾದವು. ಪಾಶುಪತ ಕಾಳಾಮುಖದ ಒಂದು ಪಂಗಡ ಅಭಿನವೀಕರಣದ ಕಡೆ ಹೊರಳಿ, ಲಿಂಗವಂತ ಧರ್ಮವಾಗಿ ರೂಪ ಪಡೆಯಿತು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಹೊಸ ಧೋರಣೆಯನ್ನು ತಾಳಿದ ಅಭಿನವ ಪಾಶುಪತ ಅಥವಾ ವೀರಶೈವ ಹಿಂದಿನ ಕಾಳಾಮುಖ ಪಾಶುಪತ ಪಂಥದೊಂದಿಗೆ ಬೆರೆತು ಮುಂದುವರೆಯಿತು.

ಈ ವೀರಶೈವವನ್ನು ರೂಪಿಸಿದ ಕಲ್ಯಾಣ ಶರಣರ ಹೊಸವಿಚಾರಗಳು ಒಬ್ಬರಿಂದೊಬ್ಬರಿಗೆ ಹರಡಿ, ನಾಡಿನ ಬೇರೆ ಬೇರೆ ಭಾಗದ ರಾಜಮನೆತನಗಳು ಶರಣರ ಪ್ರಭಾವಕ್ಕೆ ಒಳಗಾಗಿ ವೀರಶೈವವಾಗಿವೆ. ಆದರೆ ಇವರ ಸಂಖ್ಯೆ ವಿರಳ ಇಂಥ ವಿರಳವರ್ಗಕ್ಕೆ ಸೇರಿದವರು ಕುರುಗೋಡು ಸಿಂದರು.

ಶರಣರು ಮಠ ದೇವಾಲಯಗಳನ್ನು ವಿರೋಧಿಸಿದ ಕಾಲದಲ್ಲಿಯೇ ಕೆಲವು ಮಚನ ಕಾರರು ಅವುಗಳನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಅವರಲ್ಲಿ ಉಳಿಯಮೇಶ್ವರ ಚಿಕ್ಕಯ್ಯನೂ ಒಬ್ಬ. ವಚನಕಾರನಾದ ಈತನು ಉಳಿಯಮೇಶ್ವರ ದೇವಾಲಯದ ಸ್ಥಾನ ಪತಿಯೂ ಆಗಿದ್ದಾನೆ. ಈ ಚಿಕ್ಕಯ್ಯನಿಗೆ ಒಂದನೆಯ ರಾಚಮಲ್ಲನು ಕೆಲವು ದಾನಗಳನ್ನು ಬಿಟ್ಟುಕೊಟ್ಟಿದ್ದಾನೆ.[28] ವಚನಗಳನ್ನು ರಚಿಸುತ್ತ ಸ್ಥಾವರ ಲಿಮಗವನ್ನು ಒಪ್ಪಿಕೊಂಡು ಬಂದಿರುವ ಉಳಿಯಮೇಶ್ವರ ಚಿಕ್ಕಯ್ಯನು ಕೊನೆಯವರೆಗೂ ಲಕುಲೀಶಪಾಶುಪತನಾಗಿ ಉಳಿದಿರುವುದರತ್ತ ಡಾ. ಕಲಬುರ್ಗಿಯವರು ಗಮನ ಸೆಳೆದಿದ್ದಾರೆ.[29] ವಚನರೂಪವೂ ನಕುಲೀಶ ಪಾಶುಪತರ ಕೊಡುಗೆಯಾಗಿದ್ದು, ಅದು ಲಿಂಗಾಯತ ಧರ್ಮವಾಗಿ ಬೆಳೆದಂತೆ, ಅವರ ಮತ್ತು ಇವರ ಕೈಯಲ್ಲಿ ಹುಟ್ಟುತ್ತಾ ಬೆಳೆಯುತ್ತಾ ನಡೆಯಿತು. ಮುಂದೆ ನಕುಲೀಶ ಪಾಶುಪತವು ಲಿಂಗಾಯತವಾಗುತ್ತಾ ನಡೆಯಿತು. ಹೋದಂತೆ ಸಮಗ್ರ ವಚನಸೃಷ್ಟಿಯು ಲಿಂಗಾಯತದ ಹೆಸರಿನಲ್ಲಿಯೆ ಪ್ರಚಾರಪಡೆಯಿತು.[30]

ಕುರುಗೋಡು ಸಿಂದರು ವೀರಶೈವರೆಂಬಲ್ಲಿ ಯಾವ ಸಂಶಯವೂ ಇಲ್ಲ. ಅವರ ರಾಜಧಾನಿಯನ್ನು ಒಂದು ಶಾಸನವು ಹೀಗೆ ಬಣ್ಣಿಸಿದೆ.[31]

ಭಕ್ತಿಯ ಮನೆ ಭಕ್ತಿಯ ನೆಲೆ
ಭಕ್ತಿಯವತಿಭಕ್ತಿಯೇಳ್ಗೆ ಭಕ್ತಿಯ ರಾಜ್ಯಂ
ಭಕ್ತಿಯ ಭಂಡಾರಂ ಶಿವ
ಭಕ್ತಿಯ ಸಿರಿ ಬಂದು ನೆಲೆಸಿತ್ತೀ ಕುಱುಗೋಡದೊಳ್ ||

ಈ ವಂಶದ ಒಂದನೆಯ ರಾಚಮಲ್ಲನು ಶಿವಪಾದಶಿಖಾಮಿ,[32] ಶಿವೈಕ ಚೂಡಾಮಣಿ,[33] ಅರ್ಚಿತಶಿವಪಾದ[34] ಎಂದು ಕೀರ್ತಿತನಾಗಿದ್ದರೆ, ಎರಡನೆಯ ರಾಚಮಲ್ಲನು

ಪೊಡವಿಯ ಸಮಸ್ತ ಭಕ್ತರ
ನಡುವೆ ಮೃಡಂ ನಿಚ್ಚ ವರಂಕುಡಲಿ
ರ್ಮಡಿ ರಾಚಮಲ್ಲದೇವಂ
ಪಡೆದಂ ನಿತ್ಯ ಪ್ರಸಾದ ರಾಜ್ಯಂಶ್ರೀಯಂ ||

ಎನ್ನಲಾಗಿದೆ.[35] ಹಿಂದೆಯೇ ನೋಡಿದಂತೆ ಒಂದನೆಯ ರಾಚಮಲ್ಲನು “ಶಿವಲಿಂಗಾರ್ಚನಂ ಮಾಡುತ್ತ” ಲಿಂಗೈಕ್ಯನಾದನೆಂಬ ಶಾಸನೋಕ್ತಿ ಸಿಂದರು ವೀರಶೈವರೆಂಬುದನ್ನು ಖಚಿತಪಡಿಸುತ್ತದೆ. ಮುಂದೆ ಎರಡನೆಯ ರಾಚಮಲ್ಲನೂ ಲಿಂಗೈಕ್ಯನಾದಾಗ ಹಂಪೆಯಲ್ಲಿ ಹೆಗ್ಗಡೆ ರೇಚಯ್ಯನು ಆತನ ದೇವಾಲಯವನ್ನು ಮಾಡಿಸುತ್ತಾನೆ.[36] ಈಗಲೂ ಕುರುಗೋಡದಲ್ಲಿ ಒಂದನೆಯ ರಾಚಮಲ್ಲನ ಹಾಗೂ ಹಂಪೆಯಲ್ಲಿ ಇಮ್ಮಡಿ ರಾಚಮಲ್ಲರ ದೇವಾಲಯಗಳಿರುವುದನ್ನು ಕಾಣಬಹುದು.

ಹೀಗೆ ಕುರುಗೋಡು ಸಿಂದರು ಬಸವಾದಿ ಶರಣರ ಪ್ರಭಾವಕ್ಕೆ ಸಿಕ್ಕು ವೀರಶೈವರಾಗಿದ್ದಾರೆ. ಆದ್ದರಿಂದಲೆ ಸಾನಂದ ಚರಿತೆ, ವೀರಶೈವಾಮೃತ ಮಹಾಪುರಾಣ ಮತ್ತು ಭೈರವೇಶ್ವರ ಕಾವ್ಯದ ಕಥಾಮಣಿಸೂತ್ರ ರತ್ನಾಕರ ಮೊದಲಾದ ವೀರಶೈವ ಕೃತಿಗಳು ರಾಮಚಮಲ್ಲರನ್ನು ಬಸವಾದಿಗಳ ಸಾಲಿನಲ್ಲಿ ಸೇರಿಸಿವೆ. ಸಿಂದರು ಶರಣ ಧರ್ಮವನ್ನು ಸ್ವೀಕರಿಸಿದ್ದರೂ ದೇವಾಲಯ ನಿರ್ಮಾಣದಂಥ ರಾಜಕಾರ್ಯಗಳನ್ನು ತ್ಯಜಿಸಲು ಸಾಧ್ಯವಾಗಲಿಲ್ಲ. ಕಲ್ಯಾಣ ಕ್ರಾಂತಿಯ ನಂತರ ಅನೇಕ ಶರಣರು ಕಲಚುರಿ ಸಾಮ್ರಾಜ್ಯವನ್ನು ಬಿಟ್ಟು ದೂರದ ಉಳವಿ, ಶ್ರೀಶೈಲಕ್ಕೆ ತೆರಳಿದಂತೆ, ಅವರಲ್ಲಿ ಕೆಲವರು ಕುರುಗೋಡು ಸಿಂದರ ಆಶ್ರಯವನ್ನು ಬಯಸಿ ಹಂಪೆಯಲ್ಲಿ ಬಂದು ನೆಲೆಸಿರಬೇಕು. ಆ ಶರಣರೊಂದಿಗೆ ವಚನ ಸಾಹಿತ್ಯವೂ ಹಂಪೆಗೆ ಬಂದುದರಿಂದ ಹರಿಹರ – ರಾಘವಾಂಕರಿಗೆ ಶರಣರ ಚರಿತ್ರೆ ಬಹು ಸುಲಭವಾಗಿ ಕೈಗೆಟುಕಲು ಸಾಧ್ಯವಾಯಿತು. ಆದರೆ ದುರ್ದೈವವಶಾತ್ ಕಲ್ಯಾಣ ಪಟ್ಟಣದಂತೆ ಕುರುಗೋಡು ಪಟ್ಟಣವೂ ವೈರಿಗಳದಾಳಿಗೆ ಸಿಲುಕಿ ನಾಮಾವಶೇಷವಾಯಿತು. ಮೊದಲಿನಿಂದಲೂ ಹಂಪೆಯ ರಕ್ಷಣೆಗೆ ವಿಶೇಷ ಗಮನಕೊಡದ ಸಿಂದರು ಕ್ರಿ.ಶ. ೧೧೯೯ ರಿಂದ ವಿಶೇಷ ಆಸಕ್ತಿವಹಿಸಿದ್ದಾರೆ. ಸಿಂದರ ಸಾಮಂತನಾಗಿದ್ದ ಲಖ್ಖೆಯನಾಯಕನು ಬಲ್ಲಕುಂದೆ ನಾಡಿನ ರಕ್ಷಣೆಯಲ್ಲಿ ವಿಶೇಷ ಕಾಳಜಿವಹಿಸಿದ್ದನು. ಈತನ ತಮ್ಮ ಮೊದೆಯನಾಯಕನು ಹಂಪೆಯ ವಿಶೇಷ ರಕ್ಷಣಾಧಿಕಾರಿಯಾಗಿದ್ದನು.[37] ಇದು ಶರಣರನ್ನು ಮತ್ತು ಅವರ ಸಾಹಿತ್ಯವನ್ನು ಕಾಪಾಡಿಕೊಂಡು ಬರಲು ಸಿಂದರು ಮಾಡಿದ ಪ್ರಯತ್ನವೆಂಬುದರಲ್ಲಿ ಎರಡು ಮಾತಿಲ್ಲ.

ಕುರುಗೋಡು ಸಿಂದರು ಬಲ್ಲಕುಂದೆ ನಾಡಿನಲ್ಲಿ ಹಲವು ಶೈವದೇವಾಲಯಗಳಿಗೆ ದಾನ ನೀಡಿರುವುದನ್ನು ಇಲ್ಲಿನ ಶಾಸನಗಳು ಉಲ್ಲೇಖಿಸಿವೆ. ಅವುಗಳಲ್ಲಿ ಕೆಲವು ದೇವಾಲಯಗಳು ಇಂದಿನವರೆಗೂ ಉಳಿದು ಬಂದಿವೆ. ಅವೆಂದರೆ, ಕೊಂಚಗೆರೆಯಲ್ಲಿ ಸೋವಿದೇವನು ಸ್ವಯಂಭೂಕಲಿದೇವರಿಗೆ, ಚೋಕರಸನು ಸಿರುಗುಪ್ಪದ ಸ್ವಯಂಭೂಕೇತಲದೇವಾಲಯಕ್ಕೆ, ಇಮ್ಮಡಿ ಭೀಮನು ಕೋಳೂರಿನ ಶಿವಾಲಯಕ್ಕೆ, ಒಂದನೆಯ ರಾಚಮಲ್ಲನು ಕುರುಗೋಡದ ಕಲ್ಲೇಶ್ವರ, ತ್ರಿಕುಟದೇವಾಲಯ, ಓರುವಾಯಿ ವಿಘ್ನೇಶ್ವರ ಮತ್ತು ರಾಮಲಿಂಗೇಶ್ವರ ದೇವಾಲಯಗಳಿಗೆ ದಾನ ಬಿಟ್ಟಿರುವುದನ್ನು ಅಲ್ಲಿಯ ಶಾಸನಗಳು ಸ್ಪಷ್ಟಪಡಿಸಿವೆ.

ಒಟ್ಟಿನಲ್ಲಿ ಕುರುಗೋಡು ಸಿಂದವಂಶವು ವೀರಶೈವ ಅರಸುಮನೆತನಗಳಲ್ಲಿ ತುಂಬ ಮಹತ್ವವನ್ನು ಪಡೆದಿವೆ. ಈ ವಂಶದ ಇಬ್ಬರೂ ರಾಚಮಲ್ಲರು ಶಿವಭಕ್ತರು, ಶರಣಾಭಿಮಾನಿಗಳು ಆಗಿದ್ದರು. ವಚನಕಾರರ ಕಾಲದಲ್ಲಿಯೇ ಅವರಿಗೆ ಬೆಂಗಾವಲಾಗಿ, ಕಲ್ಯಾಣಕ್ರಾಂತಿಯ ನಂತರ ಅವರಿಗೆ ಆಶ್ರಯವನ್ನೊದಗಿಸಿ, ತಮ್ಮ ಹಿರಿಮೆಯನ್ನು ಮೆರೆದಿದ್ದಾರೆ. ಈ ಅಭಿಮಾನದಲ್ಲಿ ತಮ್ಮ ಪ್ರಾಣಕ್ಕೆ, ಸ್ಥಾನಕ್ಕೆ ಸಂಚಕಾರ ಬಂದರೂ ಲೆಕ್ಕಿಸದೆ ಧೈರ್ಯದಿಂದ ಹೋರಾಡಿ, ಕೀರ್ತಿ ಶೇಷರಾಗಿದ್ದಾರೆ. ಆದ್ದರಿಂದ ಕುರುಗೋಡು ಸಿಂದರ ಅಧ್ಯಯನವು ಕಲ್ಯಾಣಕ್ರಾಂತಿಯ ಕೊನೆಯ ಹಂತವನ್ನು ಅರಿತುಕೊಳ್ಳಲು ತುಂಬಾ ನೆರವಾಗಿದೆ ಎಂದು ಹೇಳಬಹುದು.

ಇದುವರೆಗೆ ನೋಡಿದಂತೆ, ಈ ಮನೆತನದ ವಂಶಾವಳಿಯನ್ನು ಕೆಳಗಿನಂತೆ ಕಟ್ಟಿಕೊಡಬಹುದು.

 01_79_KKAM-KUH

( ಲಖ್ಯೆಯ ನಾಯಕನ ವಂಶಾವಳಿ, ಸಾಹಸ ಮತ್ತು ದಾನಗುಣಗಳನ್ನು ಶಾಸನವು ಸುದೀರ್ಘವಾಗಿ ಬಣ್ಣಿಸಿದೆ.)


[1] ಸೌ.ಇ.ಇ. ix (i) ೩೫೩, ೧೧೪೮, ಡಿಸೆಂಬರ್ ೨೨, ಒರುವಾಯಿ, ಬಳ್ಳಾರಿ (ತಾ).

[2] ಎ.ಇ. xiv ೧೯ (i) ೧೧೭೩/೧೧೮೨, ಕುರುಗೋಡು.

[3] ಅದೇ (ii)

[4] ಸೌ.ಇ.ಇ. ix (i) ೩೫೩, ೧೧೪೮, ಡಿಸೆಂಬರ್‌೨೨, ಒರುವಾಯಿ, ಬಳ್ಳಾರಿ (ತಾ).

[5] ಅದೇ iv ೨೬೦, ೧೧೯೯, ಹಂಪೆ, ಹೊಸಪೇಟೆ (ತಾ)

[6] ಎ.ಕ. xi ೫೮ ix (i) ದಾವಣಗೆರೆ ೨೫, ೧೨೨೪ ಹರಿಹರ, (i) ೩೨೭, ೧೨೦೭ ಜುಲೈ ೨೬, ಕುಡತಿನಿ, ಬಳ್ಳಾರಿ (ತಾ).

[7] ಅದೇ ೩೩೭ ಹೊ ವೀರಬಲ್ಲಾಳ, ಕುರುವತ್ತಿ, ಹರಪನಹಳ್ಳಿ.

[8] ಅದೇ ix (i) ೧೫೯, ೧೦೯೨, ಸಿರುಗುಪ್ಪ (ತಾ)

[9] ಅದೇ iv ೨೬೦, ೧೧೯೯, ಹಂಪೆ.

[10] ಅದೇ ix (i) ೭೩, ೯೭೬, ಫೆಬ್ರವರಿ ೧೮, ಕುಡುತಿನಿ, ಬಳ್ಳಾರಿ (ತಾ).

[11] ಅದೇ ೧೬೬, ೧೦೯೯, ಜುಲೈ ೨೪, ಕುಡತಿನಿ.

[12] ಅದೇ ೨೫೩, ೧೧೪೮, ಡಿಸೆಂಬರ್ ೨೨, ಓರುವಾಯಿ.

[13] ಅದೇ iv ೨೬೦, ೧೧೯೯, ಹಂಪಿ.

[14] ಅದೇ ix (i) ೫೧೪, ೧೫೨೩, ಏಪ್ರಿಲ್ ೨೦, ಕುರಿಕುಪ್ಪೆ, ಸಂಡೂರು (ತಾ).

[15] ಅದೇ ೭೮, ೯೯೬, ಜುಲೈ ೨೩, ಕುಡತಿನಿ.

[16] ಅದೇ ೯೨, ೧೦೩೬, ಡಿಸೆಂಬರ್ ೨೪, ಓರುವಾಯಿ.

[17] ಅದೇ ೧೫೯, ೧೦೯೨, ಸಿರುಗುಪ್ಪ.

[18] ಬಿ.ನಂ. ೧೦೫/೮೫-೮೬, ೧೦೬೩, ಸಾಲಗುಂದೆ, ಸಿಂಧನೂರು (ತಾ).

[19] ವಿವರಗಳಿಗೆ ನೋಡಿ: ಕುರುಗೋಡು ಸಿಂದರು ಒಂದು ಅಧ್ಯಯನ ಚನ್ನಬಸವಯ್ಯ, ಪಿಎಚ್.ಡಿ. ಪ್ರಬಂಧ, ಕ.ವಿ.ವಿ. ಧಾರವಾಡ ಪು ೨೦೦-೨೭೩.

[20] ಸೌ.ಇ.ಇ. ix (i) ೩೯೭, ೧೧೭೭, ಜೂನ್ ೨೬, ಕುರುಗೋಡು.

[21] ನೋಡಿ ಕುರುಗೋಡು ಸಿಂದರು ಒಂದು ಅಧ್ಯಯನ ಪು. ೨೭೯-೮೧.

[22] ಸೌ.ಇ.ಇ. ix (i)  ೩೯೭, ೧೧೭೭, ಸಿರುಗುಪ್ಪ.

[23] ಅದೇ ೧೫೯, ೧೦೯೨, ಸಿರುಗುಪ್ಪ.

[24] ಬಿ.ನಂ. ೧೦೧/೭೭-೭೮, ೧೧೪೪, ಕೊಂಚಗೆರೆ.

[25] ಎ.ಇ. xi ೧೯ (i) ೧೧೭೩-೧೧೮೧ ಕುರುಗೋಡು.

[26] ಸೌ.ಇ.ಇ. ix (i) ೨೩೫, ೧೧೪೧, ಆಗಸ್ಟ್‌೯, ಸಿಂದಿಗೆರೆ.

[27] ಬಿ.ನಂ. ೯೮-೯೯/೮೫-೮೬, ೧೧೦೧-೧೧೫೫, ದೇವರಗುಡಿ, ಸಿಂಧನೂರು (ತಾ).

[28] ಮಾರ್ಗ ಸಂ.೧ ಪು. ೧೯೨-೯೩.

[29] ಅದೇ ಸಂ. ೨, ಪು. ೧೯೮.

[30] ಎ.ಇ. xiv ೧೯ (i) ೧೧೭೩-೧೧೮೧, ಕುರುಗೋಡು.

[31] ಅದೇ.

[32] ಸೌ.ಇ.ಇ. ix (i) ೨೯೬, ೧೧೭೬, ಜನವರಿ ೧೩, ಕುರುಗೋಡು

[33] ಅದೇ ೨೯೭

[34] ಎ.ಇ. xiv ೧೯ (i) ೧೧೭೩-೧೧೮೧ ಕುರುಗೋಡು.

[35] ಸೌ.ಇ.ಇ. iv ೨೬೦, ೧೧೯೯, ಹಂಪೆ.

[36] ಎ.ಇ. xiv ೧೯ (i) ೧೧೭೩-೧೧೮೧, ಕುರುಗೋಡು.

[37] ಸೌ.ಇ.ಇ. ೨೬೦, ೧೧೯೯, ಹಂಪೆ.